ಇಲ್ಲಿದೆ ನತ್ತಿಂಗ, ಹುಡುಕಿ, ಇಲ್ಲೇನಿಲ್ಲ nothing ಅನ್ನಬೇಡಿ ಮತ್ತೆ!
ಈ ಮೇಲಿನ ಚಿತ್ರವನ್ನು ಗಮನಿಸಿ . ಏನಾದರೂ ಕಾಣಿಸುತ್ತಿದೆಯೇ? ಇನ್ನೂ ಸ್ಪಷ್ಟವಾಗಿ ಕೇಳುತ್ತೇನೆ Do you see something? ಕಲ್ಲುಗಳ ರಾಶಿ, ಕಾಟು ಕಮ್ಯುನಿಷ್ಟ್ ಗಿಡ ಎಂದಿರೇ? ಊಹೂ…… ಅದು ಬಿಟ್ಟು ಇನ್ನೇನಾದರೂ ಕಾಣಿಸುತ್ತಿದೆಯೇ? ಯಾವುದಾದರೂ ಹಕ್ಕಿ ನಿಮ್ಮ ಕಣ್ಣಿಗೆ ಬಿತ್ತೆ? ಊಹೂ….. ಇಲ್ಲ ! ಸರಿಯಾಗಿ ಗಮನಿಸಿ . ಬೇಕಿದ್ದರೆ ಭೂತ ಕನ್ನಡಿ ಬಳಸಿ . ಕೂಲಂಕುಷವಾಗಿ ನೋಡಿ. ಊಹೂ….. !!! ಏನಪ್ಪ ತಲೆತಿನ್ನುತ್ತಿಯಾ?
ಈ ಚಿತ್ರದಲ್ಲಿ ಕಲ್ಲು, ಗಿಡ ಬಿಟ್ಟರೆ ಏನೂ ಇಲ್ಲ, “nothing in this picture” ಎಂದು ಹೇಳುತ್ತಿರುವಿರಾ ? ಹೌದು ನಿಮ್ಮ ಉತ್ತರ ಸರಿ – ಅಲ್ಲಿರುವುದು “Nothing”, ಅಲ್ಲಲ್ಲ ಅದು ನತ್ತಿಂಗ !!
ನತ್ತಿಂಗ ಪಕ್ಷಿ ಪ್ರಪಂಚದಲ್ಲೇ ಅತ್ಯಂತ ಹೆಚ್ಚು ವರ್ಣತದ್ರೂಪಿ (camouflage) ಎಂದರೆ ಅತಿಶಯೋಕ್ತಿ ಅಲ್ಲ . ನಿಮ್ಮ ಕಾಲ ಬುಡದಲ್ಲಿದ್ದರೂ ಅದರ ಇರುವಿಕೆ ಗೊತ್ತಾಗುವುದಿಲ್ಲ. ಇನ್ನೇನು ನೀವು ಅದನ್ನು ತುಳಿಯುತ್ತೀರಿ ಎನ್ನುವಾಗ ಅದು ಹಾರಿ ಬಿಡುತ್ತದೆ. ಅಲ್ಲಿದ್ದ ಕಲ್ಲರಾಶಿಯಲ್ಲಿ ಒಂದು ಕಲ್ಲೇ ಹಾರಿ ಬಿಟ್ಟಿತಾ ಎನ್ನುವಂತೆ ಭಾಸವಾಗುತ್ತದೆ. ಆ ಕ್ಷಣದಲ್ಲಿ ನೀವು ಖಂಡಿತವಾಗಿ ಒಮ್ಮೆ ಬೆಚ್ಚಿಬೀಳುತ್ತೀರಿ. ಇಂಥಾ ವೈಶಿಷ್ಟ್ಯದ ಹಕ್ಕಿಗೆ, ಕಾಣದೇ ಕಾಣುವ ಹಕ್ಕಿಗೆ ಹೆಸರೇ “ನತ್ತಿಂಗ”.
ಕನ್ನಡದ ನತ್ತಿಂಗವನ್ನು ಆಂಗ್ಲ ಭಾಷೆಯಲ್ಲಿ “Nightjar“ ಎಂದು ಕರೆಯುವರು. ಹೌದು ಇದು ಇರುಳಲ್ಲಿ ಎಚ್ಚರವಾಗಿರುವ ಹಕ್ಕಿ (ನಮ್ಮ ಗೂಬೆಯ ತರಹ). ನಾವು ನಿದ್ರಿಸುವಾಗ ಅವು ಎಚ್ಚರವಿರುವ ಕಾರಣ ನಮ್ಮಲ್ಲಿ ಅನೇಕರು ಇದನ್ನು ನೋಡಿರುವುದಿಲ್ಲ. ಮಲೆನಾಡಿನ ತೋಟದ ಮನೆಯವರಿಗೆ, ಬಯಲು ಸೀಮೆಯ ಹೊಲದಲ್ಲಿ ಆಶ್ರಯಿಸಿದವರಿಗೆ ಈ ಹಕ್ಕಿಯ ಕೂಗಿನ ಅನುಭವವಿದ್ದರೂ ಇರಬಹುದು. ಇದರ ಸ್ವರ ಕೇಳಿದ್ದರೂ ಅದು ನತ್ತಿಂಗದ ಗಾನ ಎಂದು ಗೊತ್ತಾಗಿರಲಿಕ್ಕಿಲ್ಲ. ಕಾರಣ, ಎಂದೂ ನತ್ತಿಂಗಗಳು ಮನುಷ್ಯನ ಎದುರು ಬಂದು ಹಾಡುವುದಿಲ್ಲ. ಸದಾ ಅಡಗಿಕೊಂಡಿರುತ್ತದೆ. ಹಾಗಾಗಿ ಇದಕ್ಕೆ ಇನ್ನೊಂದು ಹೆಸರು “ಅಡಪನ ಹಕ್ಕಿ“. ಅಡಪನಹಕ್ಕಿ ಎಂಬ ಹೆಸರು ನನಗಂತೂ ಇತ್ತೀಚಿನವರೆಗೆ ಗೊತ್ತಿರಲಿಲ್ಲ.
ಒಂದು ತಿಂಗಳ ಹಿಂದೆ ನಮ್ಮ ತೋಟದ ಪಕ್ಕದ ಕೆರೆಯ ತೀರದಲ್ಲಿ ಗೆಳೆಯರೊಂದಿಗೆ ಪಕ್ಷಿ ವೀಕ್ಷಣೆ ಮಾಡಿ ಮುಸ್ಸಂಜೆ ಮನೆಗೆ ವಾಪಾಸಾಗುತ್ತಿರುವಾಗ ದಾರಿ ಮಧ್ಯೆ ನಮ್ಮ ವಾಹನದ ಬೆಳಕಿನಲ್ಲಿ ಹೊಳೆಯುವ ಕಣ್ಣು ಕಾಣಿಸಿತು. ಆ ಹೊತ್ತಿಗೆ ದಾರಿ ಮಧ್ಯೆ ನತ್ತಿಂಗ ಬಿಟ್ಟರೆ ಇನ್ನೇನು ಸಿಗಲಾರದು ಎಂಬ ಖಾತ್ರಿಯಿಂದ ನಾವು ಕಾರಿನಿಂದ ಇಳಿದು ಮಣ್ಣಲ್ಲಿ ತೆವಲಿಕೊಂಡು ಮುಂದೆ ಸಾಗಿ ಆ ನತ್ತಿಂಗಕ್ಕೆ ಹತ್ತಿರವಾದೆವು. ಮನಸ್ಸಿಗೆ ತೃಪ್ತಿಯಾಗುವಷ್ಟು ಫೋಟೋಗಳನ್ನು ಕಾರಿನ ಬೆಳಕಿನ ಬೆಂಬಲದಲ್ಲಿ ತೆಗೆದೆವು . ತೆವಳಿ ತೆವಳಿ ಮೈ ಪರಚಿದ್ದರಿಂದ ಎದ್ದು ಕುಳಿತಾಕ್ಷಣ ನತ್ತಿಂಗ ಹಾರಿಹೋಯಿತು.
ಇದನ್ನೆಲ್ಲ ಆ ರಸ್ತೆಯ ಬದಿಯಲ್ಲಿದ್ದ ಹೊಲದೊಡೆಯ ಗಮನಿಸುತ್ತಿದ್ದ . ನಮ್ಮ ಅವತಾರವನ್ನು ನೋಡಿ ಏನು ಮಾಡುತ್ತಿರುವಿರಿ ಎಂದು ಗದರಿದ. ಆತ ಎಂಬತ್ತು ವರ್ಷ ಮೀರಿದ ಹಿರಿಯ. ಆ ಹೊಲದ ಮನೆಯಲ್ಲಿ ಒಬ್ಬಂಟಿಯಾಗಿ ಇದ್ದುದರಿಂದ ಸಹಜವಾಗಿ ಅವರಲ್ಲಿ ಆತಂಕ ಕಾಣಿಸುತ್ತಿತ್ತು. (ಗಮನಿಸಿ: ಹಳ್ಳಿ ಮನೆಗಳಲ್ಲಿ ಹಿರಿಯ ನಾಗರೀಕರು ಮಾತ್ರ ಪ್ರಸ್ತುತ ವಾಸವಾಗಿದ್ದಾರೆ!). ನಾವು ಅವರಿಗೆ ನತ್ತಿಂಗ ಹಕ್ಕಿಯ ಚಿತ್ರ ತೆಗೆದುದಾಗಿ ವಿವರಿಸಿದಾಗ ಅವರ ಆತಂಕ ದೂರವಾಯಿತು ಮತ್ತು ನಾವು ಅವರಿಗೆ ಹತ್ತಿರವಾದೆವು, ಆಗ ಅವರು ಹೇಳಿದ ಹೆಸರೇ `ಅಡಪನ ಹಕ್ಕಿ`. ನಮ್ಮ ಬೇಲಿಗಳಲ್ಲಿ ಕಲ್ಲು ಮಧ್ಯೆ ಅವಿತುಕೊಂಡಿರುತ್ತೆ, ರಾತ್ರಿ ಅವಿತುಕೊಂಡೇ ಕೂಗುತ್ತೆ. ಹಾಗಾಗಿ ಇದು “ಅಡಪನಕ್ಕಿ”.
ಪ್ರಪಂಚದಾದ್ಯಂತ ಸುಮಾರು ಎಪ್ಪತ್ತು ಪ್ರಭೇದದ ನತ್ತಿಂಗಗಳು ಲಭ್ಯ . ನತ್ತಿಂಗಗಳನ್ನು ಮೊದಲು “Goat suckers” ಎಂದು ಕರೆಯುತ್ತಿದ್ದರು. ವಾಸ್ತವದಲ್ಲಿ ಇವು ರಾತ್ರಿಹೊತ್ತಿನಲ್ಲಿ ಕುರಿ , ಆಡುಗಳ ಕೊಟ್ಟಿಗೆಗೆ ಲಗ್ಗೆ ಇಟ್ಟು ಅಲ್ಲಿರುವ ಉಣ್ಣೆ, ಕೀಟಗಳನ್ನು ತಿನ್ನುತ್ತವೆ, ಆದರೆ ಅದನ್ನು ಗ್ರಹಿಸದ ಜನ, ಈ ನತ್ತಿಂಗಗಳು ಆಡಿನ ಹಾಲು ಕುಡಿಯಲು ಬರುತ್ತವೆ ಎಂದು ಭಾವಿಸಿದ್ದರು, ಹಾಗಾಗಿ ಈ ಹೆಸರು . ಪ್ರಪಂಚದ ಯಾವ ಹಕ್ಕಿಗಳಿಗೂ ಇಲ್ಲದಷ್ಟು ಸಣ್ಣ ಕೊಕ್ಕು ಈ ನತ್ತಿಂಗಗಳಿಗೆ , ಕೇವಲ 8-10 mmನಷ್ಟು ಸಣ್ಣ ಕೊಕ್ಕು,
ಈ ನತ್ತಿಂಗಗಳು ಎಂದೂ ಗೂಡುಮಾಡುವುದಿಲ್ಲ. ತಾವಿರುವಲ್ಲೇ ಮೊಟ್ಟೆ ಇಟ್ಟುಬಿಡುತ್ತವೆ.
ಮೊದಲೇ ತಿಳಿಸಿದಂತೆ ಇವು ನಿಶಾಚರಿ. ಇವುಗಳ ಹಾರಾಟವನ್ನು ಛಾಯಾಚಿತ್ರದಲ್ಲಿ ದಾಖಲಿಸುವುದು ಬಲು ಕಷ್ಟ ಕೆಳಗಿಂದ ಮೇಲಕ್ಕೆ ಅಡ್ಡಾದಿಡ್ಡಿಯಾಗೆ ಬಲು ವೇಗದಲ್ಲಿ ಹಾರುತ್ತವೆ.
ನಮ್ಮ ಪ್ರಾಂತ್ಯದಲ್ಲಿ ಲಭ್ಯವಿರುವ ನತ್ತಿಂಗಗಳು
1. Indian nightjar (Caprimulgus asiaticus) – ನತ್ತಿಂಗ
24 ಸೆ.ಮೀ ಉದ್ದದ ಈ ನತ್ತಿಂಗ ಬಲು ಸಾಮಾನ್ಯವಾಗಿ ಸಿಗುವ ಪ್ರಭೇದ. ಕುರುಚಲು ಕಾಡುಗಳಲ್ಲಿ, ಬಂಡೆ ಪ್ರದೇಶಗಳಲ್ಲಿ ಇದರ ವಾ , ಬೂದುಗಂದು ದೇಹದ ಈ ನತ್ತಿಂಗಕ್ಕೆ ಬಿಳಿ, ಕಪ್ಪು ಚುಕ್ಕೆಯಿಂದ ವಿನ್ಯಾಸ. ಗಂಟಲ ಎರಡೂ ಬದಿಗಳಲ್ಲಿ ಎದ್ದು ಕಾಣುವ ಬಿಳೀ ಪಟ್ಟಿ. ಮುಸ್ಸಂಜೆ ನಂತರ ಮೆಲುದನಿಯ ಚ್ಪ್.ಚ್ಪ್..ಚ್ಪ್ರ್ರ್ರ್ ಕೂಗಿನಿಂದ ಇದರ ಚಟುವಟಿಕೆ ಆರಂಭ. ಹಾರುತ್ತಲೇ ಪತಂಗಗಳನ್ನು ಹಿಡಿಯುವ ಚತುರ.
2. Jerdon’s nightjar (Caprimulgus atripennis) – ಜೆರ್ಡನ್ಸ್ ನತ್ತಿಂಗ
ಈ ನತ್ತಿಂಗವು ಬಯಲು ಸೀಮೆಯವರಿಗೆ ಬಲು ಅಪರೂಪ. ಮಲೆನಾಡಿನವರಿಗೆ ಪ್ರತಿ ರಾತ್ರಿ ಇದರ ಕೂಗು ನಿಶ್ಚಿತ. ತಡೆ ರಹಿತ ಚ್ಕೂ ..ಚ್ಕೂ . . . . ಸಿಳ್ಳುಕೂಗು. ಈ ನತ್ತಿಂಗವು ಹಗಲು ವಿಶ್ರಮಿಸಲು ಮರದ ಬೊಡ್ಡೆ, ದಿಬ್ಬಗಳನ್ನು ಆಯ್ಕೆ ಮಾಡುತ್ತವೆ.
3. Savanna nightjar (Caprimulgus affinis) -ಸವನ್ನಾ ನತ್ತಿಂಗ
ಕಲ್ಲುಗಳ ನಡುವೆ ಕೂರುವ ಇನ್ನೊಂದು ನತ್ತಿಂಗದ ಪ್ರಭೇದವಿದು . ಬೂದುಗಂದು ಬಣ್ಣದ ಈ ನತ್ತಿಂಗ ಹಾರುವಾಗ ಕೂಗುತ್ತದೆ . ಇತರೆ ನತ್ತಿಂಗಕ್ಕೆ ಹೋಲಿಸಿದರೆ ಇದರ ಬಾಲ ತುಸು ಉದ್ದ . (long-tailed nightjar ಎಂಬ ಪ್ರಭೇದಕ್ಕೆ ಅತಿ ಉದ್ದದ ಬಾಲವಿದೆ )
4. Jungle nightjar (Caprimulgus indicus) – ಅಡವಿ ನತ್ತಿಂಗ
ಹೆಸರೇ ಸೂಚಿಸುವಂತೆ ಇದನ್ನು ನೋಡಲು ನಾವು ಬಂಡೀಪುರ, ನಾಗರ ಹೊಳೆಯಂಥ ಕಾಡಿಗೆ ಹೋಗಬೇಕು. ಸಂಪೂರ್ಣ ಬೂದು ಬಣ್ಣದಿಂದ ಕೂಡಿರುವ ಇದು ಮರದ ಬೊಡ್ಡೆ ಅಥವಾ ಬಂಡೆ ಕಲ್ಲಿನಲ್ಲಿ ಹಗಲು ಆಶ್ರಯಿಸಿರುತ್ತದೆ .
ಹೆಚ್ಚಿನ ನತ್ತಿಂಗಗಳು ಅದರಲ್ಲೂ Indian nightjar ನಮಗೆ ಯಾವುದು ಬರಡು ಭೂಮಿಯಂತೆ ಕಾಣುವುದೋ ಅಲ್ಲಿ ವಾಸ ಮಾಡುವುದು. ಕೃಷಿ ಭೂಮಿ, ಬರಡು ಭೂಮಿ ಎಂದು ಎರಡು ವಿಭಜನೆ ಮಾಡುವಾಗ ನಾವು ಕೇವಲ ನಮ್ಮ ನೇರಕ್ಕೆ ಯೋಚನೆ ಮಾಡುತ್ತೇವೆ. ನತ್ತಿಂಗದಂಥ ಅನೇಕ ಜೀವಿಗಳಿಗೆ ನಮ್ಮ ಬರಡು ಭೂಮಿಯೇ ಹಸನು ಭೂಮಿ. ಯಾಕೂ ಬೇಡದ ಬರಡು ಭೂಮಿ, ಕೃಷಿಗೆ ಯೋಗ್ಯವಲ್ಲದ ಬರಡು ಭೂಮಿ, ಕೈಗಾರಿಕೆಗೆ ಯೋಗ್ಯ ಎಂದು ವಿಶ್ಲೇಷಿಸುವಾಗ ಅಲ್ಲಿ ಕೃಷಿಗೆ ಪೂರಕವಾಗುವ, ಕೃಷಿಗೆ ಕಾಡುವ ಕೀಟಗಳನ್ನು ನಿಯಂತ್ರಿಸುವ ನತ್ತಿಂಗ, ಟಿಟ್ಟಿಭ, ಕಲ್ಲುಗೊರವದಂಥ ಅನೇಕ ಹಕ್ಕಿಗಳು, ನಾವು ಹೆಸರಿಡದ ಅನೇಕ ಜೀವಿಗಳು ಅಲ್ಲಿ ನೆಲೆಸಿವೆ ಎಂಬ ಸಣ್ಣ ಯೋಚನೆ ಬಂದರೆ, ಸರಳ ಸತ್ಯ ಕಂಡರೆ, ಕೈಗಾರಿಕಾ ಕ್ರಾಂತಿಗೆ ಸಣ್ಣ ಹೊಡೆತ ಬೀಳಬಹುದಾ ಎಂಬ ದೊಡ್ಡ ಆಸೆ ನನ್ನದು.
ಚಿತ್ರಗಳು : ಡಾ ಅಭಿಜಿತ್ ಎ.ಪಿ.ಸಿ ., ವಿಜಯಲಕ್ಷ್ಮಿ ರಾವ್, ಪವನ್ ರಾಮಚಂದ್ರ, ಶಿವಶಂಕರ್ ಕಾರ್ಕಳ .