X

ಅನುಭವವೇದಾಂತಯ ಅಕ್ಷರವ ಅರಸಿ…….

ಸಾಧನೆಯ ಪಥ ಸ್ಪಷ್ಟವಾಗಿದ್ದರೆ ಬದುಕಿನಲ್ಲಿ ಏನುಬೇಕಾದರೂ ಸಾಧಿಸಬಹುದು ಅಲ್ಲವೇ? ಹೌದು,ಇದಕ್ಕೆ ಅದೆಷ್ಟೋ  ನಿದರ್ಶನಗಳು ನಮ್ಮಲ್ಲಿವೆ. ಸಮಸ್ಯೆ ಯಾರಿಗಿರುವುದಿಲ್ಲ ಹೇಳಿ? ಆದರೆ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಿ ತಾನು ಕಂಡ ಕನಸುಗಳನ್ನು ಈಡೇರಿಸಿಕೊಳ್ಳುವವನು ನಿಜವಾದ ಸಾಧಕ.ಬದಲಾವಣೆಯ ಉತ್ತುಂಗದಲ್ಲಿ ನಾವಿರುವಾಗ ಹೊಸ ಹೊಸ ವಿಚಾರಗಳನ್ನು ಮಾಡಬೇಕು ಅಥವಾ ಹೊಸ ವಿಚಾರಗಳಿಗೆ ಒಗ್ಗಿಕೊಳ್ಳಬೇಕು. ಇವೆರಡೂ ಮಾಡದೇ ಸುಮ್ಮನಿದ್ದರೆ ಸಮಯ ಸರಿದುಹೋಗುತ್ತದೆ. ಅಂದು ನಾ ಕಂಡ ಕನಸಿಗೂ ಇಂದು ನಾ ಇರುವ ಜಾಗಕ್ಕೂ ಸಂಬಂಧವೆ ಇಲ್ಲವಲ್ಲ ಎಂದುಕೊರಗುತ್ತಿರುವವರು ಅದೆಷ್ಟೋ ಜನ. ಮುಖದ ಮೇಲಿನ ನಗುವಿಗೂ ಮನದೊಳಗೆ ಸುಳಿಯುತ್ತಿರುವ ಯೋಚನೆಗಳಿಗೂ ಒಂದಕ್ಕೊಂದು ಸಂಬಂಧವೇ ಇಲ್ಲ. ‘ನಾನು’ ಎನ್ನುವುದನ್ನು ಮೀರಿ ನಿಲ್ಲುವ ಯೋಚನೆಮಾಡುವ ಪುರುಸೊತ್ತು ನಮಗಿಲ್ಲ. ಒಂದಷ್ಟು ಪದವಿಗಳು, ಮೊಗೆದಷ್ಟು ಮುಗಿಯದ ಹಣ, ಕಂಡಕಂಡವರೆಲ್ಲ ‘ಓಹ್, ನೀವು ಅವರಲ್ಲವೇ’ ಎಂದು ಗುರುತಿಸಬೇಕೆಂಬ ಹಂಬಲ ಇನ್ನೂ ಏನೇನೋ ಆಸೆಯ ಮಧ್ಯೆ ನಮ್ಮನ್ನು ನಾವು ಒಂದು ಯೋಚನೆಗೆ ತೆರೆದುಕೊಳ್ಳುವ ಹಂಬಲವೇ ಇಲ್ಲ. ಇದೇ ನಮ್ಮ ಸೋ ಕಾಲ್ಡ್ ಜೀವನ.

ಜೀವನ,ಆಧ್ಯಾತ್ಮ, ಕನಸು ಹೀಗೆ ಇನ್ನೂ ಅನೇಕ ವಿಚಾರಗಳನ್ನು ಕಗ್ಗದಲಿ ಕಟ್ಟಿಕೊಟ್ಟ ಡಿ.ವಿ.ಗುಂಡಪ್ಪನವರ ಕಗ್ಗಗಳ ಮೇಲೆ ಒಂದು ಸಮೀಕ್ಷೆ ಮಾಡೋಣ. ಭಗವದ್ಗೀತೆಯ ನಂತರ ಜೀವನದ ಸರ್ವ ಸಾರವ ಸಾರಿ ಸಾರಿ ಹೇಳಿದ್ದು ಗುಂಡಪ್ಪನವರ ಕಗ್ಗ ಮಾತ್ರ. ತಾನು ಬರೆದ ಕಗ್ಗಗಳನ್ನು ಕೇವಲ ಪುಸ್ತಕಕ್ಕೆ ಮಾತ್ರಸೀಮಿತಗೊಳಿಸದೇ ಅದರಂತೆಯೇ ಬದುಕಿದವರು ಗುಂಡಪ್ಪನವರು. ಅವರು ಬರೆದ ಪ್ರತಿಯೊಂದು ಕಗ್ಗವೂ ಅವರ ಅಪಾರ ಅನುಭವದಿಂದ ಬಂದಿದ್ದು. ಈಗ ಕೆಲವೊಂದು ಕಗ್ಗಗಳ ಮೇಲೆ ಕಣ್ಣು ಹಾಯಿಸೋಣ.(ನನ್ನ ಕೈಲಾದಷ್ಟು ಗುಂಡಪ್ಪನವರ ಕಗ್ಗವನ್ನು ಸಮೀಕ್ಷಿಸಿದ್ದೇನೆ. ಇದೊಂದು ದುಸ್ಸಾಹಸ ಎನ್ನುವುದನ್ನುನಾನೂ ಬಲ್ಲೆ, ಆದರೂ ಒಂದು ಪ್ರಯತ್ನವನ್ನು ಮಾಡಿದ್ದೇನೆ. ಐದು ಕಗ್ಗಗಳ ಭಾವಾರ್ಥ ತಿಳಿಸುವ ಪ್ರಯತ್ನ)

1)ಏನು ಜೀವನದರ್ಥ?  ಏನು ಪ್ರಪಂಚಾರ್ಥ? |

ಏನು ಜೀವ ಪ್ರಪಂಚಗಳ ಸಂಬಂಧ? ||

ಕಾಣದಿಲ್ಲಿರ್ಪುದೇನಾನುಮುಂಟೆ?  ಅದೇನು? |

ಜ್ಞಾನ ಪ್ರಮಾಣವೇಂ ಮಂಕುತಿಮ್ಮ ||

ಪ್ರಪಂಚದ ಅರಿವು, ಪರಮಾತ್ಮನ ಅರಿವು ಆಗಬೇಕಾದರೆ ಜ್ಞಾನ ಸಾಧನೆಯನ್ನು ಮಾಡಬೇಕು. ಶಾಸ್ತ್ರಗಳನ್ನು ಚೆನ್ನಾಗಿ ಅರಿತುಕೊಳ್ಳಬೇಕು. ಇಲ್ಲವೇ ಗುರುಗಳಿಗೆ ಶರಣಾಗಬೇಕು. ಹೇಳಿ ನಾವು ಎಲ್ಲವನ್ನು ಅರಿತವರೇ? ಹೋಗಲಿ ಈ ಪ್ರಕೃತಿಯನ್ನು ಅರಿತವರೇ? ಇಲ್ಲ ಈ ಪ್ರಕೃತಿಯ ಅರಿಯುವ ನಿರಂತರ ಪ್ರಯತ್ನವೇವಿಜ್ಞಾನ…

ಕನಸೊಂದು ವಿಪರೀತ ಕಾಡುತ್ತದೆ. ಆದರೆ ಅದನ್ನು ನನಸಾಗಿಸಲು ಎಷ್ಟು ಪ್ರಯತ್ನಿಸುತ್ತೇವೆ? ಕೊನೆಗೆ ಸೃಷ್ಟಿಸಿದ ದೇವರನ್ನೇ ಪ್ರತಿಕ್ಷಣವೂ ಬೈಯುತ್ತ ನಮ್ಮ ಬದುಕು ಸಾಗುತ್ತದೆ. ಜೀವನವನ್ನು ಅರಿಯುವ ಪ್ರಯತ್ನವನ್ನೇ ಮಾಡದೇ ಸಾಗುತ್ತಿರುವ ನಮಗೆ ನಾಳೆಯ ಬಗ್ಗೆ ಮುಗಿಯದ ಯೋಚನೆ. ಆದರೆ ಈಯೋಚನೆಯ ನಡುವೆ ಚಂದದ ಪ್ರಸ್ತುತ ಕಳೆದು ಹೋಗುತ್ತಿದೆ. ಈ ಕ್ಷಣ ಮಾತ್ರ ಸತ್ಯ..

ಇದನ್ನು ಒಂದು ನಿದರ್ಶನದ ಮೂಲಕ ಓದೋಣ. ಒಬ್ಬ  ಬಿಸಿಲಿನಲ್ಲಿ ನಡೆದು ದಣಿದು ಬೆಂಡಾಗಿ ಆಲದ ಮರದ ನೆರಳಲ್ಲಿ ವಿಶ್ರಮಿಸಿದ. ಆತ ಸ್ವಲ್ಪ ಸಮಯದ ನಂತರ ಮೇಲೆ ನೋಡುತ್ತಾನೆ. ಆತನಿಗೆ ಆಗ ಆಲದ ಮರದ ಮೇಲಿನ ಚಿಕ್ಕ ಚಿಕ್ಕ ಕಾಯಿಗಳು ಕಾಣಿಸುತ್ತದೆ. ಆ ಚಿಕ್ಕ ಚಿಕ್ಕ ಕಾಯಿಗಳನ್ನು ನೋಡಿ ಆತನಿಗೆವಿಚಿತ್ರ ಅನ್ನಿಸುತ್ತದೆ. ಅಷ್ಟು ದೊಡ್ಡ ಆಲದ ಮರಕ್ಕೆ ಅಷ್ಟು ಚಿಕ್ಕ ಕಾಯಿ ಒಂದಕ್ಕೊಂದು ಸಂಬಂಧವೇ ಇಲ್ಲವಲ್ಲ ಎಂದುಕೊಳ್ಳುತ್ತಾನೆ. ಥಟ್ಟನೆ ಅವನಿಗೆ ಕುಂಬಳ ಬಳ್ಳಿ ನೆನಪಿಗೆ ಬಂತು. ಕುಂಬಳ ಬಳ್ಳಿ ಅತೀ ಕೋಮಲ ಆದರೆ ಕಾಯಿ ಮಾತ್ರ ಯಮ ಗಾತ್ರ,ಏನಿದು ಸೃಷ್ಟಿ?  ಎಂದು ವಿಚಾರಮಗ್ನನಾದ. ಅದೇ ವೇಳೆಅವನ ತಲೆಯ ಮೇಲೆ ನಾಲ್ಕಾರು ಆಲದ ಕಾಯಿಗಳು ಉದುರಿದವು. ತಕ್ಷಣ ಅವನಿಗೆ ಜ್ಞಾನೋದಯವಾಯಿತು. ಭಗವಂತ ದಯಾಮಯ ದಣಿದು ಬಂದವರ ಆಶ್ರಯಕ್ಕಾಗಿಯೇ ಆಲದ ಮರ ಸೃಷ್ಟಿಸಿದ್ದಾನೆ. ಒಂದು ವೇಳೆ ಯಮ ಗಾತ್ರದ ಕಾಯಿಗಳು ತಲೆ ಮೇಲೆ ಬಿದ್ದಿದ್ದರೆ ಏನಾಗುತ್ತಿತ್ತು? ಎಂದು ಯೋಚಿಸತೊಡಗಿದ.

ಇದರಿಂದ ಅರಿಯುವುದೇನೆಂದರೆ ಭಗವಂತನ ಮತ್ತು ಸೃಷ್ಟಿಯ ಅರಿವು ಮೂಡಬೇಕಾದರೆ ಜ್ಞಾನಸಾಧನೆಯನ್ನು ಮಾಡಬೇಕು ಎಂಬುದು.

2) ಏನು ಪ್ರಪಂಚವಿದು! ಏನು ಧಾಳಾಧಾಳಿ!

ಏನದ್ಭುತಾಪಾರ ಶಕ್ತಿ ನಿರ್ಘಾತ!

ಮಾನವನ ಗುರಿಯೇನು?ಬೆಲೆಯೇನು?ಮುಗಿವೆನು?

ಏನರ್ಥವಿದಕೆಲ್ಲ ಮಂಕುತಿಮ್ಮ.||

ಕಣ್ಣಿಗೆ ಕಾಣುವ ಪರಮಾತ್ಮನ ಅದ್ಭುತವಾದ ಸೃಷ್ಟಿ ಎಲ್ಲರಿಗೂ ಅರ್ಥವಾಗುತ್ತದೆ. ಇದನ್ನು ಏತಕ್ಕಾಗಿ ಸೃಷ್ಟಿಸಿದ? ಎಂಬುದರ ಗೂಡಾರ್ಥ ಅಷ್ಟು ಸುಲಭವಾಗಿ ತಿಳಿಯಲಾರದು. ಅದರಂತೆಯೇ ಮಾನವನು ಜನ್ಮತಾಳಿದ್ದು ಏತಕ್ಕೆ? ಅವನು ಗಳಿಸಬೆಕಾದ ಮುಖ್ಯ ಧ್ಯೇಯ ಯಾವುದು? ಇವೆಲ್ಲವನ್ನುಅರಿತುಕೊಳ್ಳಬೇಕಾದರೆ ಶಾಸ್ತ್ರಗಳನ್ನು, ಗ್ರಂಥಗಳನ್ನು ಅಧ್ಯಯನ ಮಾಡಬೇಕು. ಇಲ್ಲವೇ ಸತ್ಸಂಗದಲ್ಲಿರಬೇಕು. ಸತ್ಸಂಗ ಸಿಗುವುದು ಬಹಳ ದುರ್ಲಭ.

ಸತ್ಸಂಗತ್ವೇ,ನಿಸ್ಸಂಗತ್ವಮ್,ನಿಸ್ಸಂಗತ್ವೇ,ಜೀವನ್ಮುಕ್ತಿ:

3) ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದು |

ಬೇಕೆನುತ ಬೊಬ್ಬಿಡುತಲಿಹ ಘಟವಿನದನು||

ಏಕೆಂದು ರಚಿಸಿದನೊ ಬೊಮ್ಮನೀ ಬೇಕು ಜಪ|

ಸಾಕೆನಿಪುದೆಂದಿಗೆಲೊ ಮಂಕುತಿಮ್ಮ||

ಮನುಷ್ಯನು ಬೆಳೆದ ಹಾಗೆ ಅವನ ಜೊತೆಗೆ ಅವನ ಬುದ್ಧಿ ಹಾಗೂ ಮನಸ್ಸೂ ಬೆಳೆಯುತ್ತದೆ. ಇವು ಬೆಳೆದಂತೆ ಇದರ ಜೊತೆಗೆ ಇಚ್ಛೆಗಳೂ ಬೆಳೆಯುತ್ತದೆ. ಇಚ್ಛೆಗಳನ್ನು ಪೂರೈಸಲು ಅವನು ಹಗಲೂ ಇರುಳು ಪರಿಶ್ರಮ ಪಡುತ್ತಾನೆ. ಸಾಕಷ್ಟು ಸಂಪಾದನೆಯನ್ನು ಮಾಡಿ ಕೂಡಿಡುತ್ತಾನೆ. ಇನ್ನೇನು ಹಾಯಾಗಿಸುಖಿಯಾಗಿರೋಣ ಎನ್ನುವ ವೇಳೆಗೆ ಪ್ರಕೃತಿ ನಾಜುಕಾಗುತ್ತದೆ. ಆಗ ವೈದ್ಯರು ಸಕ್ಕರೆ ತಿನ್ನಕೂಡದು ಹಾಗೂ ಅನ್ನ ಮುಟ್ಟಕೂಡದೆಂದು ಕಟ್ಟಪ್ಪಣೆ ಮಾಡುತ್ತಾರೆ. ಅವನು ಪರಿಶ್ರಮ ಪಟ್ಟು ದುಡಿದದ್ದು ಏಕೆ? ಒಂದಿಲ್ಲ ಒಂದು ದಿನ ತನಗೆ ಸುಖ ಸಿಕ್ಕೇ ಸಿಗುತ್ತದೆಂಬ ಆಸೆಯಿಂದ. ಆದರೆ ಡಿವಿಜಿ ಅವರು ಹೇಳುತ್ತಾರೆ, ಸುಖಶಾಂತಿ ಸಮಾಧಾನ ಹೊರಗಡೆ ಸಿಗುವಂಥ ವಸ್ತು ಅಲ್ಲ ಎಂದು.

ನಮ್ಮ ಮನಸ್ಸಿನ ಅಶಾಂತಿಗೆ ಬೇಕು ಬೇಕು ಎಂಬ ಇಚ್ಛೆಗಳೇ ಕಾರಣ. ನಮಗೇ ಅರಿವಿಲ್ಲದಂತೆ ಚಿಕ್ಕಂದಿನಿಂದ ಒಂದು ಜಪವನ್ನು ಕಲಿತಿರುತ್ತೇವೆ. ಯಾವುದೇ ಸುಂದರವಾದ  ವಸ್ತು ಕಣ್ಣಿಗೆ ಬಿದ್ದರೆ ಅದು ತನಗೆ ಬೇಕು ಎನ್ನುವ ಜಪ. ಈ ಜಪವನ್ನು ನಮಗೆ ಯಾರೂ ಕಲಿಸಿದ್ದಲ್ಲ.

ಈಗ ಒಂದು ಚಿಕ್ಕ ಕಥೆಯನ್ನು ಗಮನಿಸೋಣ. ಒಬ್ಬನು ಕಠೋರವಾದ ತಪಸ್ಸು ಮಾಡಿದ ಅವನ ತಪಸ್ಸಿಗೆ ದೇವರು ಮೆಚ್ಚಿ “ನಿನಗೆ ಇಷ್ಟವಾದ ಮೂರು ವರಗಳನ್ನು ಕೇಳಿಕೋ” ಎಂದ. ಅವನಿಗೆ ಬಹಳ ಸಂತೋಷವಾಯಿತು. ಮೊದಲನೆಯ ವರ – ತನ್ನ ಹೆಂಡತಿ ಅಪ್ರತಿಮ ಸುಂದರಿಯಾಗಬೇಕೆಂದು ಕೇಳಿಕೊಂಡ.ತಕ್ಷಣ ಅವನ ಹೆಂಡತಿ ರೂಪವತಿಯಾದಳು. ಅವಳು ಎಂದಿನಂತೆ ಊರ ಹೊರಗಿನ ಬಾವಿಯಿಂದ ನೀರು ತರಲು ಹೊರಟಳು. ಅದೇ ಸಮಯಕ್ಕೆ ರಾಜನೂ ತನ್ನ ಪರಿವಾರದೊಂದಿಗೆ ಹೊರಟ. ಬೀದಿಯಲ್ಲಿ ಅವಳನ್ನು ನೋಡಿ ಆಕರ್ಷಿತನಾದ. ಇವಳು ಅಪ್ಸರೆಯೋ,ಮೇನಕೆಯೋ

ಎಂದು ರಾಜನಿಗೆ ತಿಳಿಯದಾಯಿತು. ಅವಳನ್ನು ತನ್ನ ಅರಮನೆಗೆ ಕರೆತರಲು ತನ್ನ ಸೇವಕರಿಗೆ ಆಜ್ಞೆ ಇತ್ತ. ರಾಜನ ಆಜ್ಞೆಯಂತೆ ಸೇವಕರು ಅವಳನ್ನು ಅರಮನೆಗೆ ಕೊಂಡೊಯ್ದರು. ಇತ್ತ ತಪಸ್ವಿ ನೀರಿಗಾಗಿ ಕಾಯ್ದು ಬೇಸತ್ತು ಮನೆಯಿಂದ ಹೊರಟ. ಅಷ್ಟರಲ್ಲಿ ರಾಜದೂತರು ಅವನ ಹೆಂಡತಿಯನ್ನು ಅರಮನೆಗೆಕೊಂಡೊಯ್ದ ಸಮಾಚಾರ ಅವನಿಗೆ ತಿಳಿಯಿತು. ತಕ್ಷಣ ಅವನು ಎರಡನೆಯ ವರ – ತನ್ನ ಹೆಂಡತಿ ಎಲ್ಲಿ ಇದ್ದಾಳೋ ಅಲ್ಲೇ ಕೋತಿಯಾಗಲಿ ಎಂದು ಕೇಳಿಕೊಂಡ. ಅದರಂತೆಯೇ ಅವಳು ಕೋತಿಯಾದಳು. ರಾಜ ಬಂದು ನೋಡುತ್ತಾನೆ ರೂಪಸಿ ಕೋತಿಯಾಗಿದ್ದಳು. ಆಶ್ಚರ್ಯಚಕಿತನಾದ ರಾಜ ಇವಳು ಯಕ್ಷಿಣಿಯೇಇರಬೇಕೆಂದು ಆ ಕೋತಿಯನ್ನು ಬಾವಿಯ ಸಮೀಪ ಬಿಟ್ಟು ಬರಲು ಹೇಳಿದ. ಅದರಂತೆಯೇ ರಾಜದೂತರು ಅವಳನ್ನು ಬಾವಿಯ ಸಮೀಪ ಬಿಟ್ಟುಬಂದರು. ಅಲ್ಲಿಂದ ಆ ಕೋತಿ ತನ್ನ ಮನೆಯ ಹತ್ತಿರ ಬಂತು, ಕೋತಿಯನ್ನು ಗುರುತಿಸಿದ ತಪಸ್ವಿ ತಕ್ಷಣ ಮೂರನೆಯ ವರ- ತನ್ನ ಹೆಂಡತಿ ಮೊದಲು ಹೇಗಿದ್ದಳೋ ಹಾಗೆಆಗಲಿ ಎಂದು ಕೇಳಿಕೊಂಡ.

ಪರಮಾತ್ಮ ಎಲ್ಲರಿಗೂ ಒಳ್ಳೆಯದನ್ನೇ ಕರುಣಿಸಿದರೂ ನಮಗೆ ಅದರ ಅರಿವಾಗುವುದಿಲ್ಲ. ನಮಗೆ ಸರಿಯಾಗಿ ಏನು ಬೇಕು ಎಂಬುದರ ಅರಿವೇ ಇಲ್ಲ. ಒಟ್ಟಿನಲ್ಲಿ ನಮ್ಮದು ಬೇಕು ಎಂಬ ಜಪ ಅಷ್ಟೇ.

4) ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿ|

ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್||

ಹೊಟ್ಟೆ ತುಂಬಿದ ತೋಳ ಮಲಗೀತು; ನೀಂ ಪೆರರ|

ದಿಟ್ಟಿಸುತ್ತ ಕರಬುವೆಯೊ ಮಂಕುತಿಮ್ಮ||

ಪ್ರಪಂಚದಲ್ಲಿರುವ ಪಶುಪಕ್ಷಿಗಳಿಗೆಲ್ಲ ಹಸಿವೆಯ ಚಿಂತೆ ಮಾತ್ರ. ಎಮ್ಮೆ,ಆಕಳಿಗೆ ಮೇವು ಹಾಕಿ ಸಾಕಬಹುದು. ನಾಯಿಗೆ ಆಹಾರ ಕೊಟ್ಟು ಸಾಕಬಹುದು. ಅವು ತಮ್ಮ ಋಣವನ್ನು ತೀರಿಸುತ್ತದೆ. ಆದರೆ ಹೊಟ್ಟೆಗೆ ಇಲ್ಲದ ಮನುಷ್ಯನನ್ನು ಕರೆತಂದು ಅನ್ನಹಾಕಿ ಸಾಕಿ ಸಲಹಿದರೆ ಅವನು ಸುಮ್ಮನೆ ಬಿಡುತ್ತಾನೆಯೇ?ಅನ್ನವಿಕ್ಕಿದ ಮನೆಗೆ ಕನ್ನವಿಕ್ಕುತ್ತಾನೆ,ಯಾಕೆ? ಅವನಲ್ಲಿಯೂ ಹೊಸ ಹೊಸ ಆಸೆಗಳು ಉದ್ಭವಿಸುತ್ತದೆ. ತನಗೆ ಇಲ್ಲ ಅವರಿಗಿದೆ ಎಂಬ ಮತ್ಸರ ಕೆಟ್ಟ ವಿಚಾರಗಳನ್ನು ಅವನಲ್ಲಿ ಮೂಡಿಸುತ್ತದೆ. ಈ ಮತ್ಸರ ಯಾರಿಗಿಲ್ಲ.?

ಗೋವಿಂದ ಮತ್ತು ಗೋಪಾಲ ಇಬ್ಬರು ಗೆಳೆಯರು. ಅವರು ತಪಸ್ಸು ಮಾಡಲು ನಿರ್ಧರಿಸಿ ಬೇರೆ ಬೇರೆ ಸ್ಥಳವನ್ನು ಆಯ್ದುಕೊಂಡು ತಪಸ್ಸಿಗೆ ಕುಳಿತರು. ಇವರ ತಪಸ್ಸಿಗೆ ಮೆಚ್ಚಿ ದೇವರು ಪ್ರತ್ಯಕ್ಷನಾದ. ಮೊದಲು ಗೋಪಾಲನಿಗೆ ” ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ, ನಿನಗೆ ಏನು ವರ ಬೇಕು ಕೇಳು ” ಅಂದ. ತಕ್ಷಣ ಅವನುತನ್ನ ಗೆಳೆಯ ಏನು ವರ ಕೇಳಿದ ಎಂದು ಪ್ರಶ್ನಿಸಿದ.ದೇವರು “ಅವನ ಬಳಿ ಇನ್ನೂ ಹೋಗಿಲ್ಲ” ಎಂದ. ಆಗ ಗೋಪಾಲ “ಗೋವಿಂದನು ಏನು ವರ ಕೇಳುತ್ತಾನೆ ಅದರ ಎರಡು ಪಟ್ಟು ನನಗೆ ಕೊಡು”ಎಂದು ವರ ಕೇಳಿಕೊಂಡ. ಆಗಲಿ ಎಂದು ಹರಸಿ ದೇವರು ಗೋವಿಂದನ ಬಳಿಗೆ ಬಂದು “ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆಏನು ವರ ಬೇಕು ಕೇಳು” ಎಂದ. ಗೋವಿಂದನೂ ತಕ್ಷಣ ಕುತೂಹಲದಿಂದ ತನ್ನ ಗೆಳೆಯ ಗೋಪಾಲ ಏನು ವರ ಕೇಳಿದ ಎಂದು ಪ್ರಶ್ನಿಸಿದ. ಅದಕ್ಕೆ ದೇವರು ” ನೀನು ಏನು ವರ ಕೇಳುತ್ತೀಯೋ ಅದರ ಎರಡು ಪಟ್ಟು ಅವನಿಗೆ ಬೇಕಂತೆ ” ಎಂದ. ಗೋವಿಂದನಿಗೆ ಇದು ಗೂಢವಾದ ಪ್ರಶ್ನೆಯಾಯಿತು. ಅವನು ತನ್ನಗೆಳೆಯನಿಗೆ ಒಳ್ಳೇ ಪಾಠ ಕಲಿಸಬೇಕೆಂದು ತನ್ನ ಒಂದು ಕಣ್ಣು ಹೋಗಲಿ ಎಂದು ಕೇಳಿಕೊಂಡ. ಇದರಿಂದ ಏನಾಯಿತು? ಗೋಪಾಲನ ಎರಡೂ ಕಣ್ಣುಗಳು ಹೋದವು.

ಪಶು-ಪಕ್ಷಿ,ಪ್ರಾಣಿಗಳಿಗೆ ಈ ಬುದ್ಧಿ ಇರುವುದಿಲ್ಲ. ಹೊಟ್ಟೆ ತುಂಬಿದ ತೋಳ ಮಲಗೀತು. ಅದಕ್ಕೆ ನಾಳೆಯ ಚಿಂತೆಯಿಲ್ಲ,ನಿನ್ನೆಯ ವಿಚಾರವಿಲ್ಲ. ಹೊಟ್ಟೆ ತುಂಬಿದರೆ ಆನಂದದಿಂದ ಮಲಗುತ್ತದೆ. ಮಾನವನ ಮನಸ್ಸೇ ಬೇರೆ.

ಮನಸ್ಸನ್ನು ಅಧೀನದಲ್ಲಿಟ್ಟುಕೊಳ್ಳುವುದು ಮಹತ್ತರ ಸಾಧನೆ. ಅದು ಸುಲಭವಾಗಿ ಸಾಧಿಸುವುದಲ್ಲ.

5) ಮನೆಯ ಮಠವೆಂದು ತಿಳಿ,ಬಂಧುಬಳಗವೆ ಗುರುವು|

ಅನವರತಪರಿಚರ್ಯೆಯವರೊರೆವ ಪಾಠ||

ನಿನಗುಳಿದ ಜಗವ ಮುಟ್ಟಿಪ ಸೇತು ಸಂಸಾರ|

ಮನಕೆ ಪುಟ ಸಂಸ್ಕಾರ ಮಂಕುತಿಮ್ಮ||

ಕಣ್ಣು,ಕಿವಿ,ಮೂಗು,ಕೈ,ಕಾಲು,ಹೃದಯ ಇವು ಶರೀರದ ಅಂಗಗಳು. ಮನಸ್ಸು ಇವುಗಳ ಹಾಗೆ ಶರೀರದ ಅಂಗವಲ್ಲ. ಮನಸ್ಸು ನಮ್ಮಲ್ಲಿರುವ ವಾಸನಗಳ,ಇಚ್ಛೆಗಳ ರಾಶಿ. ಈ ರಾಶಿ ಅಹಂಕಾರ,ಪ್ರತಿಷ್ಠೆ,ಅಸೂಯೆ,ದುರಾಸೆ,ದ್ವೇಷ ಹಾಗೂ ಉದ್ವೇಗದಿಂದ ಕೂಡಿರುತ್ತದೆ. ಶರೀರದ ಹೊರಭಾಗದ ಕೊಳೆಯನ್ನುಸೋಪಿನಿಂದ ಸ್ವಚ್ಛವಾಗಿ ತೊಳೆಯಲು ಬರುತ್ತದೆ. ಶರೀರದ ಒಳಗೆ ಹೃದಯದಲ್ಲಿ ಗುಪ್ತವಾಗಿರುವ ಮನಸ್ಸು ಕೊಳೆಯಾದರೆ ಅದನ್ನು ತೊಳೆಯುವುದಕ್ಕೆ ಸಂಸ್ಕಾರಬೇಕು. ಮನಸ್ಸನ್ನು ತಿದ್ದುವುದೇ ಸಂಸ್ಕಾರ. ನಮ್ಮ ಮನಸ್ಸನ್ನು ನಾವೇ ತಿದ್ದಿಕೊಳ್ಳಬೇಕು.

ಎಂಥ ವಿಷಮ ಪರಿಸ್ಥಿತಿಯಲ್ಲಿಯೂ ಪ್ರಶಾಂತವಾಗಿರು. ಅದೇ ನಿನ್ನ ಸಂಸ್ಕಾರ.

ಗೆಳೆಯರೇ ಡಿವಿಜಿ ಅವರ ಕಗ್ಗವನ್ನು ಸಮೀಕ್ಷಿಸುವ ಒಂದು ಪ್ರಯತ್ನ ಇದು ಅಷ್ಟೇ. ಅವರ ಕಗ್ಗಗಳು ನಮ್ಮ ಜೀವನಕ್ಕೆ ಪಾಠವಾಗುವುದರಲ್ಲಿ ಅನುಮಾನವಿಲ್ಲ. ಕಗ್ಗಗಳನ್ನು ಓದುತ್ತಾ ಅರಿಯುತ್ತ ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡೋಣ.

Facebook ಕಾಮೆಂಟ್ಸ್

Prasanna Hegde: ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ
Related Post