X

ಮತ್ತೆ ಮತ್ತೆ ಹೆಮ್ಮಿಂಗ್ವೆ…

ಹತ್ತಾರು ಎತ್ತಿನಬಂಡಿಗಳು,ಲಾರಿಗಳು ಓಡಾಡುತ್ತಿದ್ದ ಸೇತುವೆಯ ತುದಿಯಲ್ಲಿ ಆ ವೃದ್ಧ ಕುಳಿತಿದ್ದ. ತೀರ ಕೊಳಕಾದ ಉಡುಪುಗಳನ್ನು ತೊಟ್ಟಿದ್ದ ಆತ ಸಾಧಾರಣ ಗುಣಮಟ್ಟದ ಚಾಳೀಸೊಂದನ್ನು ಧರಿಸಿದ್ದ. ಸೇತುವೆಯ ಒಂದು ತುದಿಯಲ್ಲಿ ಮಣಭಾರದ ಮೂಟೆಗಳನ್ನು ಹೊತ್ತು ನಡೆಯಲಾಗದೇ ನಿಂತಿದ್ದ ಹೇಸರಗತ್ತೆಗಳನ್ನು ಸೈನಿಕರು ಕಷ್ಟಪಟ್ಟು ಮುಂದೆ ತಳ್ಳುತ್ತಿದ್ದರು. ಹೆಂಗಸರು ತಮ್ಮ ಮಕ್ಕಳೊಂದಿಗೆ ಸಂಕವನ್ನು ಅವಸರದಲ್ಲಿ ದಾಟಿಕೊಂಡು ಮತ್ತೊಂದು ತುದಿಯನ್ನು ತಲುಪಿಕೊಳ್ಳುವ ಧಾವಂತದಲ್ಲಿದ್ದರೂ ಮುದುಕ ಮಾತ್ರ ಸುಮ್ಮನೇ ಕುಳಿತುಕೊಂಡಿದ್ದ. ಮೈಲುಗಟ್ಟಲೆ ನಡೆದು ಬಂದ ಆತನ ಮುಖದಲ್ಲಿ ಸುಸ್ತು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆತ ಅದಾಗಲೇ ಸೇತುವೆಯನ್ನು ದಾಟಿ ಬಂದಿದ್ದರಿಂದಲೋ ಏನೋ, ಮುಂದೆ ನಡೆಯಲಾರೆನೆನ್ನುವ ಭಾವ ಆತನ ನಿತ್ರಾಣಗೊಂಡ ಮೊಗದಲ್ಲಿ ಕಾಣಿಸುತ್ತಿತ್ತು. ಸೇತುವೆಯ ಮತ್ತೊಂದು ತುದಿಯನ್ನು ದಾಟಿ ಶತ್ರುಗಳ ಚಲನವಲನವನ್ನು ಗಮನಿಸುವ ಜವಾಬ್ದಾರಿ ನನ್ನ ಮೇಲಿತ್ತು. ನಾನು ಸೇತುವೆಯನ್ನೊಮ್ಮೆ ದಾಟಿ ಎಚ್ಚರಿಕೆಯಿಂದ ಅಲ್ಲಿನ ಪರಿಸರವನ್ನು ಗಮನಿಸಿದೆ. ಶತ್ರುಗಳ ಭಯದಿಂದ ಸೇತುವೆಯನ್ನು ದಾಟಿ ಸುರಕ್ಷಿತ ತಾಣವನ್ನು ಸೇರಿಕೊಳ್ಳಲು ನಡೆದುಬರುತ್ತಿದ್ದ ಜನರ ಸಂಖ್ಯೆಯೂ ವಿರಳವಾಗತೊಡಗಿತ್ತು. ಹೆಚ್ಚಿನವರು ಸೇತುವೆಯ ಸುರಕ್ಷಿತ ಪಕ್ಕವನ್ನು ಸೇರಿಕೊಂಡಾಗಿತ್ತು. ಶತ್ರುಗಳು ತೀರ ಸೇತುವೆಯನ್ನು ಸಮೀಪಿಸಿಲ್ಲವೆನ್ನುವದು ಖಚಿತಪಡಿಸಿಕೊಂಡು ನಾನು ಹಿಂತಿರುಗಿ ಬಂದ ನಂತರವೂ ವೃದ್ಧ ಸೇತುವೆಯ ಪಕ್ಕದಲ್ಲಿಯೇ ಕುಳಿತಿದ್ದ.

“ನಿನ್ನ ಊರಾವುದು ತಾತ..”? ಎಂದು ನಾನು ಆ ವೃದ್ಧನನ್ನು ಕೇಳಿದೆ.”ಸಾನ್ ಕಾರ್ಲೋಸ್” ಎಂದ ವೃದ್ಧನ ಮುಖದಲ್ಲಿ ಸಣ್ಣದೊಂದು ಔಪಚಾರಿಕ ಮಂದಹಾಸ. ನಾನು ಕೇಳದಿದ್ದರೂ”ಅಲ್ಲಿ ನಾನು ಕೆಲವು ಸಾಕುಪ್ರಾಣಿಗಳ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದೆ”ಎಂದು ನುಡಿದನಾತ.”ಹೌದಾ..”ಎನ್ನುವ ಉದ್ಗಾರವೊಂದು ನನ್ನ ಬಾಯಿಂದ ಹೊರಬಿದ್ದದ್ದೇನೋ ನಿಜ. ಆದರೆ ಪ್ರಾಣಿಗಳ ಮೇಲ್ವಿಚಾರಣೆ ಎನ್ನುವ ಆತನ ಮಾತುಗಳು ನನಗೆ ಅರ್ಥವಾಗಲಿಲ್ಲ.”ಮ್ಮ್,ನಾನು ಕೆಲವು ಪ್ರಾಣಿಗಳನ್ನು ಸಾಕಿಕೊಂಡು ಜೀವನವನ್ನು ನಡೆಸುತ್ತಿದ್ದೆ. ಯುದ್ಧ ಭೀತಿಗೆ ನನ್ನೂರಿನ ಹೆಚ್ಚಿನ ಜನ ಊರನ್ನು ತೊರೆದು ಸೇತುವೆಯನ್ನು ದಾಟಿ ಬಂದುಬಿಟ್ಟರು ,ಕದನಭಯದ ನಡುವೆಯೂ ಹುಟ್ಟೂರಿನೆಡೆಗಿನ ನನ್ನ ಭಾವುಕತೆ ನನ್ನನ್ನು ಇಷ್ಟು ದಿನ ಅಲ್ಲಿಯೇ ಉಳಿದುಕೊಳ್ಳುವಂತೆ ಮಾಡಿತ್ತು, ಸಾನ್ ಕಾರ್ಲೋಸ್ ಬಿಟ್ಟ ಕೊನೆಯ ಕೆಲವು ನಾಗರಿಕರಲ್ಲಿ ನಾನೂ ಒಬ್ಬ”ಎನ್ನುತ್ತ ಮಾತು ಮುಂದುವರೆಸಿದ ವೃದ್ಧ.

ಆತನನ್ನೊಮ್ಮೆ ಕೂಲಂಕುಶವಾಗಿ ನೋಡಿದ ನನಗೆ ಆತನಲ್ಲಿ ಸ್ಥಳೀಯ ಗೋಪಾಲಕರಲ್ಲಿ ಕಾಣಸಿಗುವ ಯಾವ ಲಕ್ಷಣಗಳೂ ಕಾಣಲಿಲ್ಲ. ಕನಿಷ್ಟಪಕ್ಷ ಆತ ಕುರಿಕಾಯುವನಂತೆಯೂ ಕಾಣುತ್ತಿರಲಿಲ್ಲ. ಹಾಗಾಗಿ,”ಯಾವೆಲ್ಲ ಪ್ರಾಣಿಗಳನ್ನು ಸಾಕಿಕೊಂಡಿದ್ದೆ ತಾತ”ಎಂದು ಅಜ್ಜನನ್ನು ಪುನ: ಪ್ರಶ್ನಿಸಿದೆ. “ಬಗೆಬಗೆಯ ಪ್ರಾಣಿಗಳಿದ್ದವು ನನ್ನ ಬಳಿ ಮಗು,ಛೇ, ಅವುಗಳನ್ನೆಲ್ಲ ಬಿಟ್ಟು ಬರಬೇಕಾದ ಪರಿಸ್ಥಿತಿ ಈಗ” ಎಂದುತ್ತರಿಸಿದ ಮುದುಕ ಬೇಸರದ ನಿಟ್ಟುಸಿರೊಂದನ್ನು ಹೊರಹಾಕಿದ. ನಾನು ವೃದ್ಧನೊಂದಿಗೆ ಮಾತನಾಡುತ್ತಿದ್ದರೂ ನನ್ನ ಗಮನವೆಲ್ಲ ಸೇತುವೆಯ ಇನ್ನೊಂದು ತುದಿಯಲ್ಲಿ ನಡೆಯಬಹುದಾದ ಚಲನವಲನಗಳ ಕಡೆಗಿತ್ತು. ಯಾವುದೇ ಕ್ಷಣದಲ್ಲಾದರೂ ಶತ್ರುವಿನ ದಾಳಿಯ ನಿರೀಕ್ಷೆ ನಮ್ಮಪಡೆಗಿತ್ತು. ಚಿಕ್ಕದೊಂದು ಚಲನೆಯೂ ಗುಂಡಿನ ಸುರಿಮಳೆಗೆ ನಾಂದಿಯಾಗುವ ಸನ್ನಿವೇಶದಲ್ಲಿ ನಾವಿದ್ದರೂ ಮುದುಕನಿಗೆ ಮಾತ್ರ ಅದ್ಯಾವುದರ ಪರಿವೆಯೇ ಇರಲಿಲ್ಲ. ಸುಮ್ಮನೇ ಬೇಸರ ಕಳೆಯಲೆಂದು “ಯಾವ್ಯಾವ ಪ್ರಾಣಿಗಳನ್ನು ಸಾಕಿಕೊಂಡಿದ್ದೆ ಅಂತ ಹೇಳಲೇ ಇಲ್ಲವಲ್ಲ ಅಜ್ಜ” ಎಂದು ಮರುಪ್ರಶ್ನಿಸಿದೆ ತಾತನನ್ನು.

“ಒಟ್ಟು ಮೂರು ಬಗೆಯ ಪ್ರಾಣಿಗಳಿದ್ದವು ಮಗು”ಎನ್ನುತ್ತ ಬೆವರೊರಿಸಿಕೊಂಡ ವೃದ್ಧ,”ಎರಡು ಕುರಿಗಳು,ನಾಲ್ಕು ಜೊತೆ ಪಾರಿವಾಳಗಳು ಮತ್ತೊಂದು ಬೆಕ್ಕು ಇತ್ತು” ಎಂದು ನುಡಿದ. “ಎಲ್ಲವನ್ನೂ ಬಿಟ್ಟುಬಂದೆಯಾ”ಎಂಬ ಪ್ರಶ್ನೆ ನನ್ನದು.”ಹೌದಪ್ಪ,ಎಲ್ಲವನ್ನೂ ಬಿಟ್ಟು ಬರಬೇಕಾಯಿತು. ನಮ್ಮೂರಿನ ಮೇಲೆ ಶತ್ರುಗಳ ಫಿರಂಗಿದಾಳಿಯಾಗುವುದಾಗಿ ಖಚಿತ ಮಾಹಿತಿಯೊಂದು ನಮ್ಮ ಸೈನ್ಯಕ್ಕೆ ಸಿಕ್ಕಿದೆಯಂತಲ್ಲ. ಹಾಗಾಗಿ ಊರಿಗೆ ಊರೇ ಖಾಲಿ ಮಾಡುವಂತೆ ಸೈನ್ಯಾಧಿಕಾರಿಗಳು ಕಟ್ಟಪ್ಪಣೆ ಹೊರಡಿಸಿದರಲ್ಲ, ಹಾಗಾಗಿ ಬಿಟ್ಟುಬರಬೇಕಾಯಿತು”ಎಂದ ಮುದಿಯನ ಮುಖದಲ್ಲೇನೋ ತಪ್ಪಿತಸ್ಥ ಭಾವ. ಸೇತುವೆಯನ್ನು ದಾಟಲು ಅವಸರವಸರವಾಗಿ ಬರುತ್ತಿದ್ದ ಬಂಡಿಯೊಂದನ್ನು ಗಮನಿಸುತ್ತ “ನಿನಗೆ ಹೆಂಡತಿ ಮಕ್ಕಳ್ಯಾರೂ ಇಲ್ಲವಾ..”? ಎಂದು ಕೇಳಿದೆ.”ಊಹುಂ,ಇಲ್ಲ,ನನಗೆ ಬಿಟ್ಟು ಬಂದ ಬೆಕ್ಕಿನ ಬಗ್ಗೆ ಚಿಂತೆಯಿಲ್ಲ,ಬೆಕ್ಕುಗಳು ಹೇಗಾದರೂ ಬದುಕಿಕೊಳ್ಳುತ್ತವೆ. ಆದರೆ ಉಳಿದ ಪ್ರಾಣಿಗಳ ಬಗ್ಗೆಯೇ ಕೊಂಚ ಚಿಂತೆ ನನಗೆ”ಎಂದ ವೃದ್ಧ. ಆತನಿಗೆ ಕುಟುಂಬದ ವಿಷಯದಲ್ಲಿ ಆಸಕ್ತಿಯಿದ್ದಂತೆ ತೋರಲಿಲ್ಲ.”ಹೋಗಲಿ ಬಿಡು,ನಿನ್ನ ರಾಜಕೀಯ ಧೋರಣೆಗಳೇನು” ಎಂದಾತನನ್ನು ಕೇಳಿದೆ. “ಎಪ್ಪತ್ತಾರನೆಯ ವಯಸ್ಸಿನಲ್ಲಿ ನನಗ್ಯಾವ ರಾಜಕೀಯ ಧೋರಣೆಯಪ್ಪ. ಆರು ಮೈಲು ದೂರದಿಂದ ನಡೆದುಕೊಂಡು ಬಂದಿದ್ದೇನೆ. ಇನ್ನು ನಡೆಯಲಾಗದೇ ಸುಸ್ತಾಗಿ ಇಲ್ಲಿ ಸುಮ್ಮನೇ ಕುಳಿತಿದ್ದೇನೆ ನೋಡು”ಎಂದ ಮುದಿಯನ ಮುಖದಲ್ಲಿ ಬಳಲಿಕೆಯಂತೂ ಕಾಣುತ್ತಿತ್ತು

“ನೀನಿಲ್ಲಿ ತುಂಬ ಹೊತ್ತು ಕುಳಿತುಕೊಳ್ಳುವಂತಿಲ್ಲ ತಾತ. ಇದು ಅಪಾಯಕಾರಿ ಪ್ರದೇಶ. ಅಲ್ಲಿ ಕಾಣುತ್ತಿರುವ ಲಾರಿಯೊಂದರಲ್ಲಿ ಕುಳಿತು ಬಾರ್ಸಿಲೋನಾಕ್ಕೆ ಪಯಣಿಸು”ಎನ್ನುತ್ತ ಸಮೀಪದಲ್ಲಿಯೇ ನಿಂತಿದ್ದ ಲಾರಿಯೊಂದರತ್ತ ಬೆರಳು ತೋರಿದೆ. “ಧನ್ಯವಾದಗಳು ಮಗು,ಆದರೆ ನನಗೆ ಬಾರ್ಸಿಲೋನಾದಲ್ಲಿ ಯಾರ ಪರಿಚಯವೂ ಇಲ್ಲ.ಇನ್ನೂ ಸ್ವಲ್ಪ ಹೊತ್ತು ಕುಳಿತು ಇಲ್ಲಿಂದೆದ್ದು ಹೊರಡುತ್ತೇನೆ ಬಿಡು”ಎಂದ ವೃದ್ಧನ ಕಂಗಳಲ್ಲೊಂದು ಅವ್ಯಕ್ತ ಆತಂಕವಿತ್ತು. ತನ್ನ ದುಗುಡವನ್ನು ಯಾರಿಗಾದರೂ ಹೇಳಿಕೊಳ್ಳುವ ಅನಿವಾರ್ಯತೆಯಿದೆಯೆಂಬಂತೆ ,”ನನಗೆ ಬೆಕ್ಕಿನ ಬಗ್ಗೆ ಚಿಂತೆಯಿಲ್ಲ,ಬೆಕ್ಕು ತನ್ನ ಕಾಳಜಿಯನ್ನು ತಾನೇ ವಹಿಸಿಕೊಳ್ಳುತ್ತದೆ ,ಆದರೆ ಉಳಿದ ಪ್ರಾಣಿಗಳ ಬಗ್ಗೆಯೇ ನನಗೆ ಭಯ. ಅವುಗಳು ಸುರಕ್ಷಿತವಾಗಿರಬಲ್ಲವು ಎಂದೆನಿಸುತ್ತದೆಯಾ ನಿನಗೆ..”? ಎಂದು ನನ್ನನ್ನೇ ಕೇಳಿದ ತಾತ. ಆತನ ಮನಸ್ಸಿನ ಸಮಾಧಾನಕ್ಕೆ”ಖಂಡಿತವಾಗಿಯೂ ಅವು ಸುರಕ್ಷಿತವಾಗಿರುತ್ತವೆ ,ನೀನು ಚಿಂತಿಸಬೇಡ ತಾತ”ಎಂದೆ. ಸೇತುವೆಯತ್ತ ಬರುತ್ತಿರುವ ಜನರ ಸಂಖ್ಯೆ ತೀರ ವಿರಳವಾಗತೊಡಗಿತು.”ಏನೋಪ್ಪ,ನನಗೇಕೋ ಹಾಗನ್ನಿಸದು,ಫಿರಂಗಿಗಳ ದಾಳಿಯೆದುರು ಅವು ಏನು ತಾನೇ ಮಾಡಿಯಾವು”?ಎಂದುಲಿದ ಮುದುಕನ ಮಾತಿನಲ್ಲಿ ಬೇಸರ ಎದ್ದು ಕಾಣುತ್ತಿತ್ತು. ನನಗಾತನ ಬಗ್ಗೆ ಮರುಕವುಂಟಾದರೂ ತೋರ್ಪಡಿಸದೆ ,”ಇಲ್ಲಿಗೆ ಬರುವಾಗ ಪಾರಿವಾಳಗಳ ಪಂಜರದ ಬಾಗಿಲನ್ನು ತೆರೆದಿಟ್ಟು ಬಂದಿರುವೆಯಾ”?ಎಂದು ಪ್ರಶ್ನಿಸಿದೆ. ಆತ ಹೌದೆನ್ನುವಂತೆ ತಲೆಯಾಡಿಸಿದ. “ಹಾಗಿದ್ದರೇ ಅವು ಹಾರಿ ಹೋಗಿರುತ್ತವೆ ಬಿಡು”ಎಂದೆ.”ನಿಜ ಅವುಗಳೇನೋ ಹಾರಿ ಹೋಗಿಬಿಡುತ್ತವೆ.ಆದರೆ ಕುರಿಗಳು..?? ನನ್ನದಲ್ಲದ ಇನ್ನೂ ಅನೇಕ ಪ್ರಾಣಿಗಳು ಊರಿನಲ್ಲಿವೆ. ನನಗೆ ಅವುಗಳ ಬಗ್ಗೆಯೂ ಚಿಂತೆ ನೋಡು” ಎನ್ನುವಾಗ ವೃದ್ಧನ ಮೊಗದ ತುಂಬೆಲ್ಲ ವಿಷಾದಭಾವ.”ಸರಿ ತಾತ,ನಿನ್ನ ವಿಶ್ರಾಂತಿ ಮುಗಿದಿದ್ದರೆ ನೀನಿನ್ನು ಇಲ್ಲಿಂದ ಎದ್ದೇಳು”ಎಂದು ನಾನು ಅವಸರಿಸತೊಡಗಿದೆ.”ಸರಿ ಮಗು ,ಮತ್ತೆ ಸಿಗೋಣ”ಎನ್ನುತ್ತ ಎದ್ದು ನಿಂತ ವೃದ್ಧ,”ಛೇ,ನಾನು ಪ್ರಾಣಿಗಳನ್ನು ಬಿಟ್ಟು ಬಂದೆ,ಹಾಗೆ ಬರಬಾರದಿತ್ತು” ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತ ನಿಧಾನವಾಗಿ ಭಾರವಾದ ಹೆಜ್ಜೆಗಳಿಡಲಾರಂಭಿಸಿದ. ಆತನಂಥವರಿಗಾಗಿ ಸಹಾಯ ಮಾಡುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಈಸ್ಟರ್ ಭಾನುವಾರದ ದಿನದಂದು ಮೋಡ ಕವಿದ ವಾತಾವರಣವೆನ್ನುವ ಕಾರಣಕ್ಕೆ ಶತ್ರುಗಳ ಯುದ್ಧ ವಿಮಾನಗಳು ಆಗಸದಲ್ಲಿರಲಿಲ್ಲವೆನ್ನುವುದು ನಮ್ಮ ಪಡೆಯ ಗಮನಕ್ಕೆ ಬಂದಿತ್ತು. ಎಂಥದ್ದೇ ವಿಪರಿತ ಪರಿಸ್ಥಿತಿಯಲ್ಲಿಯೂ ಬೆಕ್ಕುಗಳು ತಮ್ಮ ತಾವು ನಿಭಾಯಿಸಿಕೊಳ್ಳಬಲ್ಲವು ಎನ್ನುವುದೊಂದೇ ಮುದಿಯನಿಗಿರಬಹುದಾದ ಆಶಾಕಿರಣವೆನ್ನಬಹುದಾಗಿತ್ತು.

ಯುದ್ಧಕಾಲದ ಸಂತ್ರಸ್ತರ ಅಸಹಾಯಕತೆ, ಯುದ್ಧದ ಹಿಂದಿನ ರಾಜಕೀಯವನೂ ಸಹ ಅರಿಯದ ಸಮರಭೂಮಿಯ ಸುತ್ತಮುತ್ತಲಿನ ಜನರ ಅನಿವಾರ್ಯತೆ ಮತ್ತು ನೋವುಗಳ ವಿವರಣೆಯನ್ನು ಒಂದೂವರೆ ಪುಟದ ಚಿಕ್ಕ ಕತೆಯಲ್ಲಿ ವಿವರಿಸಬಹುದೆಂದು ಹೇಳಿಕೊಟ್ಟ ಲೇಖಕ ಅರ್ನೆಸ್ಟ್ ಹೆಮ್ಮಿಂಗ್ವೆಯಲ್ಲದೆ ಬೇರಾರೂ ಆಗಿರಲು ಸಾಧ್ಯವಿಲ್ಲವೆಂದರೆ ಅತಿಶಯೋಕ್ತಿಯಾಗಲಾರದು.1936ರಲ್ಲಿ ನಡೆದ ಸ್ಪೇನ್ ದೇಶದ ಆಂತರಿಕ ಕದನಗಳ ವರದಿಗಾರಿಕೆಯನ್ನು ನಡೆಸುತ್ತಿದ್ದ ಹೆಮ್ಮಿಂಗ್ವೆ, ಯುದ್ಧ ವರದಿಯ ಸಮಯದಲ್ಲಿ ನಡೆದ ಚಿಕ್ಕದೊಂದು ಘಟನೆಯನ್ನೇ ಕಥಾವಸ್ತುವನ್ನಾಗಿಸಿಕೊಂಡು ಇಂಥದ್ದೊಂದು ಕತೆಯನ್ನು ಹೆಣೆದರು. ಯುದ್ಧಕಾಲದ ಕತೆಗಳೆಂದರೆ ,ಯುದ್ಧಭಾಗಿ ಸೈನಿಕನ ನೋವುಗಳ ಚಿತ್ರಣ

ಅಥವಾ ಯೋಧನ ಕುಟುಂಬವೊಂದರ ಕರುಣಾಜನಕ ಗೋಳಿನ ಕತೆಗಳೇ ಪ್ರಾಧಾನ್ಯತೆಯನ್ನು ಪಡೆದುಕೊಂಡು ಬಿಡುವುದು ಸರ್ವೇ ಸಾಮಾನ್ಯ. ಕದನ ಭೀಕರತೆಯ ಕಥಾವಸ್ತುವುಳ್ಳ ಬಹುಪಾಲು ಕತೆಗಳಲ್ಲಿ ಸೈನಿಕನೇ ಕತೆಯ ಕೇಂದ್ರಬಿಂದು. ಆದರೆ ಸೈನಿಕನಲ್ಲದ ಸಾಮಾನ್ಯ ಮುದುಕನೊಬ್ಬನನ್ನು ಕಥಾಕೇಂದ್ರವಾಗಿಸಿ, ಆತನ ಅಸಹಾಯಕತೆಯ ಚಿತ್ರಣವನ್ನೇ ಕತೆಯ ಭಾವವನ್ನಾಗಿಸಿಕೊಂಡು ಬರೆಯಲ್ಪಟ್ಟಿರುವ ಕತೆಗಳು ತೀರ ವಿರಳ. ಇಂಥದ್ದೊಂದು ಕತೆ ಸಣ್ಣಕತೆಗಳ ಬರಹಗಾರನ ಸೃಜನಶೀಲತೆಯ ಸಾಕ್ಷಿಯಾಗಿ ನಿಂತುಬಿಡುತ್ತೆವುನ್ನುದು ಸುಳ್ಳಲ್ಲ. ಕತೆಯಲ್ಲಿ ಒಸರುವ ವಿಷಾದಭಾವ,ಯುದ್ಧದ ಭಯಾನಕತೆ ಕೆಲಕಾಲ ಓದುಗನನ್ನು ಆವರಿಸಿಕೊಂಡುಬಿಡುತ್ತದೆ. “ಕತೆಗಳು ಸಮಾಜಕ್ಕೆ ಹಿಡಿದ ಕನ್ನಡಿಯಂತಿರಬೇಕು, ಸಮಸ್ಯೆಗಳ ಕುರಿತು ತೀರ್ಪು ನೀಡುವ ನ್ಯಾಯಾಧೀಶನಂತಾಗಬಾರದು”ಎನ್ನುವ ಭೈರಪ್ಪನವರ ಮಾತುಗಳಂತೆ, ಹೆಮ್ಮಿಂಗ್ವೆ ಕೂಡ ಕತೆಗೊಂದು ತಾರ್ಕಿಕ ಅಂತ್ಯವನ್ನೊದಗಿಸುವ ಪ್ರಯತ್ನವನ್ನು ಮಾಡದಿರುವುದು ಗಮನಾರ್ಹ. ಬೆಂಗಳೂರಿನಲ್ಲಿ ನಡೆಯುತ್ತಿರುವ ;ಅಂತರಾಷ್ಟ್ರೀಯ ಸಾಹಿತ್ಯ ಹಬ್ಬದಲ್ಲಿ ನೆಚ್ಚಿನ ಕತೆಗಾರ ಹೆಮ್ಮಿಂಗ್ವೆಯ “ವಿನ್ನರ್ ಟೇಕ್ಸ್ ನಥಿಂಗ್”ಎನ್ನುವ ಕಥಾಸಂಕಲನವೊಂದನ್ನು ಖರೀದಿಸಿದೆ. ಅದರೊಳಗಿದ್ದ,”ಓಲ್ಡ್ ಮ್ಯಾನ್ ಅಟ್ ದ ಬ್ರಿಡ್ಜ್”ಎನ್ನುವ ಈ ಕತೆ ಓದಿ ಮುಗಿಸುತ್ತಲೇ ಕತೆಯ ಭಾವುಕತೆ ನನ್ನನ್ನು ಆವರಿಸಿಕೊಂಡುಬಿಟ್ಟಿತು. ಯಾವುದಾದರೊಂದು ಅದ್ಭುತ ಕತೆಯನ್ನೋದುತ್ತಲೇ ಅದನ್ನು ಕೆಲವು ಸ್ನೇಹಿತರಿಗೆ ಓದಿಸುವ ಹುಕಿ ನನ್ನೊಳಗೆ ಶುರುವಾಗಿಬಿಡುತ್ತದೆ. ಹಾಗಾಗಿ ನಿಮಗಾಗಿ ಇದನ್ನಿಲ್ಲಿ ಅನುವಾದಿಸಿಟ್ಟಿದ್ದೇನೆ. ದಯಮಾಡಿ ಒಪ್ಪಿಸಿಕೊಳ್ಳಿ.

ಗುರುರಾಜ ಕೊಡ್ಕಣಿ

gururaj_kodkani@rediffmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post