X
    Categories: ಕಥೆ

ಹಾಯಿ ದೋಣಿ

ಎಲ್ಲರ ಮನೆಯಲ್ಲೂ ಮಗು ಹುಟ್ಟಿತೆಂದರೆ ಸಂಭ್ರಮ ಸಡಗರ. ಆದರೆ ಈ ಮನೆಯಲ್ಲಿ ಮಾತ್ರ ಕತ್ತಲನ್ನು ಕಿತ್ತು ತಿನ್ನುವಂತ ಮೌನ ಆವರಿಸಿತ್ತು. ಅಪ್ಪ ಅನಿಸಿಕೊಂಡವನು ಎಂದಿನಂತೆ ಕಂಠಪೂರ್ತಿ ಹೀರಿ ಬಂದಿದ್ದ. ಹೆತ್ತವಳಿಗೆ ತಾನೇಕೆ ಹೆತ್ತೆ ಅನ್ನುವುದೇ ಅರ್ಥವಾಗದ ಪರಿಸ್ಥಿತಿ.
ಅದೊಂದು ಕಡು ಬಡ ಕುಟುಂಬ. ಹೆಸರಿಗೆ ಬಡ ಕುಟುಂಬವಾದರೂ ಮನೆ ಯಜಮಾನ ಅನಿಸಿಕೊಂಡವನು ತನ್ನ ಹೊಟ್ಟೆಗೆ ಮಾತ್ರ ಏನು ಕಮ್ಮಿ ಮಾಡಿಕೊಳ್ಳುತ್ತಿರಲಿಲ್ಲ. ಚೆನ್ನಾಗೆ ದುಡಿಯುತ್ತಿದ್ದ . ದುಡಿದದ್ದೆಲ್ಲವನ್ನು ಎಣ್ಣೆ ಅಂಗಡಿಗೆ ಸುರಿಯುತ್ತಿದ್ದ. ಯಾರೋ ಸಂಬಂಧಿಕರು ಇವನಿಗೆ ಮದುವೆ ವಯಸ್ಸು ಆಯಿತೆಂದು ದೂರದ ನೆಂಟರ ಮನೆಯಿಂದ ಒಂದು ಹುಡುಗಿಯನ್ನ ಗೊತ್ತು ಮಾಡಿ ಮದುವೆ ಮಾಡಿದರು. ಮದುವೆಯೂ ಆಯಿತು. ಅದನ್ನು ಆತ ಬಯಸಿ ಆಗಿದ್ದಲ್ಲ. ಯಾರೋ ಒತ್ತಾಯಕ್ಕೆ ಆಗಿದ್ದು. ಆಕೆಯದು ಬಡ ಕುಟುಂಬ. ಮನೆಯವರ ಭಾರ ಕಡಿಮೆ ಮಾಡಿಕೊಳ್ಳಲು ಇವಳನ್ನು ಸಾಗಹಾಕಬೇಕಿತ್ತು. ಬಡತನದಲ್ಲೇ ಬೆಂದುಂಡ ಅವಳು ಸುಮ್ಮನೆ ಮನೆಯವರ ಮಾತಿಗೆ ಗೋಣಾಡಿಸಿದಳು.
ಬದುಕಿನ ಬಗ್ಗೆ ಅಲ್ಪ ಸ್ವಲ್ಪ ಕನಸನ್ನು ಕಂಡವಳಾದರೂ ಅದ್ಯಾವುದು ತನ್ನ ಜೀವನದಲ್ಲಿ ನಡೆಯದು ಎಂಬ ಸತ್ಯವನ್ನು ಅರಿತಿದ್ದಳು. ಗಂಡನೆಂಬ ಪ್ರಾಣಿ ತನ್ನ ದೇಹಭಾದೆ ತೀರಿಸಿಕೊಳ್ಳಲಷ್ಟೇ ಅವಳ ಬಳಿ ಬರುತ್ತಿದ್ದ. ಅವಳು ಯಾಂತ್ರಿಕವಾಗಿ ಸ್ಪಂದಿಸುತ್ತಿದ್ದಳೆ ವಿನಃ ಯಾವತ್ತೂ ಸಂಪೂರ್ಣವಾಗಿ ತನ್ನನ್ನ ತಾನು ಅರ್ಪಿಸಿಕೊಂಡವಳಲ್ಲ. ಹಾಗಂತ ತಪ್ಪು ಹಾದಿ ಹಿಡಿದವಳೂ ಅಲ್ಲ.
ಮದುವೆಯೇನೋ ಆಯ್ತು ಆದರೆ ಜೀವನ ನಡಿಬೇಕಲ್ಲ. ಗಂಡನಾದವನು ಒಂದು ನಯಾ ಪೈಸೇನು ಮನೆ ಖರ್ಚಿಗೆ ಕೊಡುವವನಲ್ಲ. ಬೇರೆ ಕೆಲಸ ಮಾಡಲು ಇವಳಿಗೆ ಓದು ಬರಹ ಒಂದು ಗೊತ್ತಿಲ್ಲ. ಆದರೂ ಜೀವನ ಸಾಗಬೇಕಲ್ಲ .ಬದುಕಲು ತಾನು ಕಂಡುಕೊಂಡ ದಾರಿ ಪೇಪರ್ ಆಯುವ ಕೆಲಸ. ಬೆಳಿಗ್ಗೆಯಿಂದ ಬೀದಿ ಬೀದಿ ಅಲೆದು ಪೇಪರ್ ಸಂಗ್ರಹಿಸಿ ಗುಜುರಿ ಅಂಗಡಿಗೆ ತೂಕಕ್ಕೆ ಹಾಕಿ ಬಂದ ಹಣದಿಂದ ಹೇಗೋ ಕಾಲ ಕಳೆಯುತಿದ್ದಳು. ಗಂಡ ಎಷ್ಟೇ ಕುಡುಕನಾದರೂ ಒಮ್ಮೆಯೂ ಇವಳ ದುಡಿಮೆಯ ಹಣಕ್ಕೆ ಕೈ ಹಾಕಿದವನಲ್ಲ.
ಈಗ ಮಗು ಬೆಳೆದು ನಡೆಯಲು ಶುರು ಮಾಡಿದೆ , ಅದರ ಹೊರೆಯನ್ನು ತಾನೆ ಹೊತ್ತಿದ್ದಾಳೆ. ಆ ಮಗು ಕೂಡ ಎಂದೂ ಹಠ ಹಿಡಿದು ತನಗೆ ಇದು ಬೇಕು ಅದು ಬೇಕು ಎಂದು ಕೂತಿರಲಿಲ್ಲ. ತನ್ನ ಪಾಡಿಗೆ ಬೀದಿ ಬದಿಯಲ್ಲಿ ಆಡಿಕೊಂಡು ಬೆಳೆಯುತ್ತಿತ್ತು. ನೀರಸ ಬದುಕಿನ ನೀರವತೆ ಅವಳ ಬದುಕಲ್ಲಿ ನೆಲೆ ನಿಂತಿತ್ತು.
ಒಮ್ಮೆ ಹೊರಗಡೆ ಜೋರಾಗಿ ಮಳೆ ಬೀಳುತ್ತಿತ್ತು. ಇರುವ ಗುಡಿಸಲೂ ಗಾಳಿಗೆ ಹಾರಿಹೋಗುತ್ತೇನೋ ಅನ್ನುವ ಹಾಗೆ. ಮಗು ಮಾತ್ರ ಯಾವುದೋ ಪೇಪರಿನ ಆಟಿಕೆಯನ್ನ ಹಿಡಿದು ಬಾಗಿಲಲ್ಲಿ ಆಡುತ್ತಿತ್ತು. ಯಾವುದೋ ಆಲೋಚನೆಯಲ್ಲಿದ್ದವಳು ವಾಸ್ತವಕ್ಕೆ ಮರಳಿ ಕುತೂಹಲದಿಂದ ಅದನ್ನೇ ನೋಡುತ್ತಾ ಕುಳಿತುಕೊಂಡಳು. ಮಗು ಕೈಯಲ್ಲಿ ದೋಣಿ ಮಾಡಿ ಮಳೆ ನೀರಿನಲ್ಲಿ ತೇಲಿ ಬಿಡುತ್ತಿತ್ತು. ಅದು ಹರಿವ ನೀರಿನ ಜೊತೆ ಸೇರಿ ದೂರದ ತನಕ ತೇಲಿಕೊಂಡು ಹೋಗಿ ಕಣ್ಮರೆಯಾಗುತ್ತಿತ್ತು. ಇದುವರೆಗೂ ಬದುಕೆಂದರೆ ಕತ್ತಲೆ ಎಂದು ತಿಳಿದಿದ್ದವಳ ಮನಸಲ್ಲಿ ಏನೋ ಒಂದು ಸಂಚಾರವಾದಂತಾಯಿತು. ಕುಳಿತ್ತಿದ್ದವಳಿಗೆ ಏನೋ ಹೊಳೆದಂತಾಗಿ ಮಗುವನ್ನು ಎತ್ತಿಕೊಂಡು ಮಳೆಯಲ್ಲೇ ನಡೆಯತೊಡಗಿದಳು

Sathya Narayana Yc

sathyanarayanayc@gmail.com

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post