X

ಬಣ್ಣ ಮಾಸದ ಕೆಂಪಡಿಕೆ..

ಅಂಗಳದಿ ಅಮ್ಮ ಹಾಕಿದ್ದ ರಂಗೋಲಿಯ ಮೇಲೆ ಇಬ್ಬನಿಯ ಸಿಂಚನವಾಗುತ್ತಿತ್ತು. ತಣ್ಣನೆಯ ಗಾಳಿ ಮನೆಯ ಜಗುಲಿಯನ್ನು ಅದ್ಯಾವುದೋ ಸಂದಿಯಿಂದ ಒಳ ಸೇರಿತ್ತು. ಕನಸುಗಳು ಕ್ಲೈಮಾಕ್ಸ್’ಗೆ ಬಂದಾಗ ನನ್ನ ನೆಚ್ಚಿನ ನಾಯಿ ಪ್ರಸ್ತುತದಲಿ ನನ್ನನ್ನು ಎಬ್ಬಿಸಿತ್ತು. ನಿನ್ನೆ ಬರಿಯ ನೆನಪಲ್ಲ ಅದು ಕನಸಾಗಿಯೂ ಆವರಿಸಿತ್ತು. ಅಮ್ಮ ಬಾಗಿಲ ಒರೆಸುತ್ತ ಹಾಡುತ್ತಿದ್ದ ಹಾಡು ಆ ಬೆಳಗಿಗೆ ಇನ್ನಷ್ಟು ಕಲರ್ ತುಂಬಿತ್ತು. ಚಿಲಿಪಿಲಿಯ ಹಕ್ಕಿಗಳು ಅದ್ಯಾವುದೋ ಭಾಷೆಯಲ್ಲಿ ಮಾತಾಡುತ್ತಿದ್ದವು. ಕಣ್ಮುಚ್ಚಿಯೂ ಆಸ್ವಾದಿಸಬಹುದಲ್ಲ ನನ್ನೂರಿನ ಆ ಪರಿಸರವನ್ನು. ಬರೆದಷ್ಟು ಮುಗಿಯದ್ದು ಅಂದು ಅನುಭವಿಸಿದ್ದ ಆ ಕ್ಷಣ ಮಾತ್ರ. ಮೈ ಸೋಕಿದ ಇಬ್ಬನಿ ಮನಸ್ಸನ್ನೂ ಸೋಕಿತ್ತು. ಹೌದು ಅಲ್ಲೊಂದು ಚಂದದ ಬದುಕಿದೆ. ಸಂಬಂಧಗಳಿಗೆ ಸುಂದರವಾದ ಮೌಲ್ಯವಿದೆ. ಸಂಬಂಧಗಳನ್ನು ಮೀರಿದ ಮಾನವೀಯತೆಯ ನೆಲೆಯಿದೆ. ಹೌದು ಅದು ಚಳಿಯಲ್ಲಿ ಮಿಂದೇಳುತ್ತಿರುವ ಚಂದದ ನನ್ನೂರು.

ಬೆಳಿಗ್ಗೆ ಪೇಪರ್ ಎಸೆದ ಹುಡುಗ ಪೇಪರ್ ಅನ್ನು ದಿನ ಎಸೆಯುವ ಕಡೆ ಎಸೆಯದೇ ಚೂರು ಆಚೀಚೆ ಎಸೆದರೂ ಮಾರನೇ ದಿನ “ನಾವೇನು ದುಡ್ಡು ಕೊಡೋದಿಲ್ವ ನಿಂಗೆ ಸರಿಯಾಗಿ ಪೇಪರ್ ಹಾಕೋ” ಎನ್ನುವ ಈ ನಗರವಾಸಿಗಳನ್ನು ನೋಡಿದರೆ ಅದೇನೋ ಕೋಪ ಜೊತೆಗೆ ಇವರೊಡನೆ ಸೇರಿ ನಾನೂ ನಾಳೆ ಹೀಗೆಯೇ ಆಗಿ ಹೋಗುತ್ತೇನೆಯೇ ಎಂಬ ಭಯ. ಇಲ್ಲಿ ಹಣಕ್ಕೆ ಮೊದಲ ಪ್ರಾಮುಖ್ಯತೆ. ಕನಸುಗಳ ಮೂಟೆಗೆ ಗೆದ್ದಲು ಹಿಡಿದರು ತೊಂದರೆಯಿಲ್ಲ ಹಣದ ಮೂಟೆ ಭರ್ತಿಯಾಗಬೇಕೆಂಬ ಮನಸ್ಥಿತಿಯೆದುರು ಭಾವನೆಯ ಬದುಕು ನಗಣ್ಯವಾಗಿ ಸಾಗುತ್ತಿದೆ. ಅಲ್ಲಿರುವ ಬಡ ಜೀವವೊಂದು ಒಂದೊತ್ತಿನ ಊಟಕ್ಕೆ ಕೈ ಚಾಚುತ್ತಿದ್ದರೆ ಐಶಾರಾಮಿ ಕಾರಿನಲ್ಲಿ ಕೂತ ಹೆಣ್ಣೊಬ್ಬಳು ಕೈಚಾಚಿದ ತಾಯಿಗೆ ಬಾಯಿಗೆ ಬಂದಂತೆ ಬೈಯುತ್ತಿದ್ದಳು. ದೂರದಿಂದೆಲ್ಲೋ ಅಕ್ಕ ಊಟಕ್ಕೆ ಹಣವಿಲ್ಲ ದಯವಿಟ್ಟು ಈ ಹೂವು ತಗೊಳ್ಳಿ ಎಂದು ಓಡಿ ಬಂದು ಕೈಚಾಚಿದ ಹುಡುಗನಿಗೆ ಎರಡು ರೂಪಾಯಿ ಕೊಡಲು ಹಿಂಜರಿಯುವ ನಮ್ಮ ಮನಸ್ಸು ಮಾಲ್ ಗಳಿಗೆ ಹೋದಾಗ ಧಾರಾಳವಾಗಿಬಿಡುತ್ತದೆ. ಇವೆಲ್ಲದರ ನಡುವೆ ಅಮ್ಮ ನೆನಪಾದಳು. ನಮ್ಮ ಪಕ್ಕದ ಮನೆಯ ಗೌಡನ ಹೆಂಡತಿ ಅವ್ವ ಹಾಲು ಬೇಕಿತ್ತು ಒಂದು ಲೋಟ ಕೊಡಿ ಎಂದು ಕೇಳಿಕೊಂಡು ಬಂದಾಗ ಒಂದು ಲೋಟ ಹಾಲಿನ ಜೊತೆ ಒಂದು ಬಾಸ್ಕೆಟ್ ಮಜ್ಜಿಗೆಯನ್ನು ಕೊಡುವ ಅಮ್ಮ ನೆನಪಾದಳು. ಅಲ್ಲೊಂದು ಮಾನವೀಯ ಸಂಬಂಧವಿದೆ.

ಮೂರು ಕಂಬಳಿಯನ್ನು ಹೊದ್ದರೂ ನಡುಗಿಸುವ ಚಳಿ. ಆ ಚಳಿಯಲ್ಲೂ ಮುಂಜಾನೆ ತಣ್ಣೀರಿನಲ್ಲಿ ಮುಖ ತೊಳೆದು ದೋಸೆ ಎರೆಯಲು ತಯಾರಿ ಮಾಡುತ್ತಿರುವ ಅಮ್ಮ. ಡೈರಿಗೆ ಹಾಲು ಕೊಡಲು ಹೋಗಬೇಕೆಂದು ಹಾಲು ಕರೆಯಲು ತಯಾರಿ ನಡೆಸುತ್ತಿರುವ ಅಪ್ಪ. ಇವಕ್ಕೆಲ್ಲ ಪೂರಕ ಎಂಬಂತೆ ಹಾಲು ಕುಡಿಯಬೇಕೆಂಬ ಹಂಬಲದಿಂದ ಬಿಡದೇ ಅಮ್ಮನ ಕಾಲು ಸುತ್ತುತ್ತಿರುವ ಬೆಕ್ಕು. ನಿನ್ನೆ ಸುಲಿದ ಅಡಿಕೆಯನ್ನು ಬೇಯಿಸಲು ಹಾಕಿರುವುದು. ಅಂಗಳದ ತುಂಬ ರಾಶಿ ಬಿದ್ದಿರುವ ಅಡಿಕೆ ಸಿಪ್ಪೆ. ಆ ಅಡಿಕೆ ಸಿಪ್ಪೆಯ ರಾಶಿಯಿಂದ ಹೊಮ್ಮುತ್ತಿರುವ ಹೊಗೆ. ಅದರ ಮೇಲೆ ಬಿಡದೇ ಸುತ್ತುತ್ತಿರುವ ಕೌಳಿಗಳು. ಅಪ್ಪ ಹಾಕಿದ್ದ ಹೊಡತ್ಲಿನ ಬಿಸಿಯ ಬೆಂಕಿಯನ್ನು ಹಾಸಿಗೆಯ ಚಾದರದಿಂದ ಹೊರಬಿದ್ದ ನನ್ನ ಕೈ ಬಯಸುತ್ತಿತ್ತು. ಸೂರ್ಯಂಗೂ ಮತ್ತು ಇಬ್ಬನಿಗೂ ಬಿಡದೇ ನಡೆಯುತ್ತಿರುವ ಕಾದಾಟ. ಸೂರ್ಯನ ಕಣ್ಣು ಬಿಡಲು ಇಬ್ಬನಿಯ ಅಡೆತಡೆ. ಮನೆಯ ಎದುರಿನ ಆಲದ ಮರಕ್ಕೆ ಬಿಟ್ಟ ಹಣ್ಣನ್ನು ತಿನ್ನಲು ಪೈಪೋಟಿಯ ಮೇಲೆ ಗುದ್ದಾಡುತ್ತಿರುವ ತರಹೇವಾರಿ ಪಕ್ಷಿಗಳು. ಮನುಷ್ಯನ ಗಾಳಿ ಬೀಸಿದರೂ ಸಾಕು ಬರ್ರನೇ ಹಾರಿ ಹೋಗುವ ಮಂಗಟ್ಟೆಗಳು ಕದ್ದು ಕದ್ದು ಆಲದ ಹಣ್ಣನ್ನು ತಿನ್ನುತ್ತಿದ್ದ ಆ ಕ್ಷಣವನ್ನು ನೋಡಲು ಅದೇನೋ ಖುಷಿ. ಕೇವಲ ಬೆಳಗೊಂದೇ ಸುಂದರವಲ್ಲ ಬದಲಾಗಿ ನನ್ನೂರಿನ ಬದುಕೇ ಸುಂದರ. ನೆನಪಿದೆ ಬೆಳಿಗ್ಗೆ ಎದ್ದು ದೋಸೆ ತಿನ್ನಲು ಕೂತಾಗ ಮೊದಲು ಕೇಳುತ್ತಿದ್ದುದು ಅಪ್ಪನ ರೇಡಿಯೋದಿಂದ ಹೊರಹೊಮ್ಮುತ್ತಿದ್ದ “ಸಂಪ್ರತಿ ವಾರ್ತಾ: ಶ್ರೂಯಂತಾಂ ಇತಿ ಬಲದೇವಾನಂದ ಸಾಗರ ” ಎಂಬ ಐದು ನಿಮಿಷದ ಸಂಸ್ಕೃತ ವಾರ್ತೆ. ಖುಷಿಯಿಂದ ಕೆಲದಿನಗಳ ಹಿಂದೆ ಮತ್ತೆ ಸಂಸ್ಕೃತ ವಾರ್ತೆ ಕೇಳಿದಾಗ ಅದೇ ಬಲದೇವಾನಂದ ಸಾಗರರೇ ವಾರ್ತೆ ಓದುತ್ತಿದ್ದರು. ಅಬ್ವಾ! ಆ ಮನುಷ್ಯನಿಗೆ ಅದೆಷ್ಟು ವರ್ಷ ವಯಸ್ಸಾಗಿರಬಹುದು ಇನ್ನೂ ಹಾಗೆ ಇದೆಯಲ್ಲ ಅವರ ಧ್ವನಿ. ಆದರೀಗ ಅಪ್ಪನ ರೇಡಿಯೋ ಹಾಳಾಗಿದೆ.

ಕನಸುಗಳು ನೂರೆಂಟಿರಬಹುದು ಆದರೆ ಬದುಕು ಕಲಿಸಿದ ಆ ನನ್ನೂರನ್ನು ತೊರೆದು ಹೊರಡುವುದು ತುಂಬಾ ಕಷ್ಟ. ಚಳಿಗಾಲ ಕೇವಲ ಚಳಿಗಾಲವಲ್ಲ ಇಷ್ಟು ದಿನ ರಕ್ಷಿಸಿದ್ದ ಬೆಳೆಗಳನ್ನು ತಮ್ಮದಾಗಿಸಿಕೊಂಡು ಬದುಕು ಅರಳಿಸಿಕೊಳ್ಳೋ ಕಾಲ. ಬಲಿತ ಅಡಿಕೆಯ ಕೊಯ್ಯಲು ಕೊನೆಗೌಡನ ಹುಡುಕಾಟ,ಕೊಯ್ದ ಅಡಿಕೆಯನ್ನು ತೋಟದಿಂದ ಮನೆಗೆ ಹೊರಲು ಆಳುಗಳ ಹುಡುಕಾಟ, ಹೊತ್ತ ಅಡಿಕೆಯನ್ನು ಸುಲಿಯಲು ಹೆಣ್ಣಾಳುಗಳ ಹುಡುಕಾಟ. ಸುಲಿದ ಅಡಿಕೆಯನ್ನು ಬೇಯಿಸಬೇಕು..ಬೇಯಿಸಿದ ಅಡಕೆಯನ್ನು ಬಿಸಿಲಿನಲ್ಲಿ ಒಣಗಿಸಬೇಕು..ಇಷ್ಟೆಲ್ಲದರ ನಡುವೆ ಅಡಿಕೆಗೆ ರೇಟು ಸಿಗುತ್ತದೋ ಇಲ್ಲವೋ ಎಂಬ ದುಗುಡ ಬೇರೆ..ಬಣ್ಣ ಹಾಕಿದ ಕೆಂಪಡಿಕೆಯ ಬಣ್ಣ ಮಾಸುವವರೆಗೂ ಮನೆಯಲ್ಲಿಯೇ ಇಡಲು ನಾಳೆಯೂ ಬದುಕಬೇಕಲ್ಲ. ಇವೆಲ್ಲದರ ನಡುವೆ ದಿನಾ ರಾತ್ರಿ ಗದ್ದೆಕಾಯಲು ಹೋಗುವ ಅವಶ್ಯಕತೆ. ಅಬ್ಬಾ! ಅದೆಷ್ಟು ಗುದ್ದಾಟ..ಅನ್ನ ನೀಡುವ ರೈತನ ಬಾಳಿನ ಕಥೆ ಆಲಿಸಲು ರೈತನ ಮಕ್ಕಳಿಗೆ ಬಿಡುವಿಲ್ಲ. ಭರದಿಂದ ಕೊಯ್ದ ಅಡಿಕೆಗೆ ರೇಟು ಸಿಕ್ಕರೆ ರೈತ ಬದುಕಿಕೊಂಡ, ಇಲ್ಲದಿದ್ದರೆ? ಮತ್ತದೇ ಹೋರಾಟ..

ಅದರೆ ಅನಿವಾರ್ಯತೆಯಿಂದ ನಾ ಸೇರಿರುವ ಈ ನಗರದ ಕಥೆ ಏನು? ಬಿಸಿಲ ಬೇಗೆಯಲಿ ನೆರಳ ಹುಡುಕುತ್ತಿರುವ ಹಣ್ಣು ಹಣ್ಣಾದ ಮುದುಕ. ಮಗನೇ ಮನೆಯಿಂದ ಹೊರದಬ್ಬಿದ ನಂತರ ಸಿಟಿ ಬಸ್ ಸ್ಟಾಂಡ್ ಅನ್ನೇ ಮನೆಯಾಗಿಸಿಕೊಂಡಿರುವ ತಾಯಿ. ಯಾರದೋ ಆಸೆಗೆ ಅನ್ಯಾಯವಾಗಿ ಹುಟ್ಟಿ ಕಸದ ತೊಟ್ಟಿಯಲ್ಲಿ ಬಿದ್ದಿರುವ ಹಸುಳೆ…ಮಳೆಬರಲಿ ಎಂದು ಆಕಾಶವನ್ನ ನೋಡುತ್ತ ಕಾಯುತ್ತಿರುವ ಗೂನು ಬೆನ್ನಿನ ರೈತ…ನಿನ್ನೆ ಜೀವಂತವಾಗಿದ್ದ ಆದರೆ ಇವತ್ತು ನೆಲಸಮವಾದ ದೊಡ್ಡ ಆಲದ ಮರ…ಎಲ್ಲವೂ ವಾಸ್ತವದ ಸುಳಿಗೆ ಸಿಲುಕಿ ನಲುಗುತ್ತಿರುವ, ಮನುಷ್ಯನೇ ಸೃಷ್ಟಿಸಿಕೊಂಡಿರುವ ಲೋಕವಿದು…ಮುಖವಾಡದ ಮೇಲೆ ಬಣ್ಣಗಳ ಅಲಂಕಾರ…ನಗುವಿನ ಹಿಂದೆ ಅಡಗಿರುವ ಅಸಹ್ಯವಾದ ಆಸೆಬುರುಕುತನ…ಹೊಗಳಿಕೆಯ ತೇರೆಳೆಯಲು ಭರದ ತಯಾರಿ…ಹಣದ ಎದುರು ಹೆಣವಾದ ನಿಷ್ಕಲ್ಮಷ ಸಂಬಂಧ…ಅಪ್ಪ ಕಟ್ಟಿರುವ ಮನೆಯಲ್ಲಿ ಮಕ್ಕಳ ಅಹಂಕಾರದ ನಗು…ಕಾಂಕ್ರಿಟ್ ಕಾಡಿನಲಿ ಮಕಾಡೆ ಮಲಗಿರುವ ಮಾನವೀಯತೆ..ಹೋಲಿಕೆಗೂ ಸಲ್ಲದ ಈ ಸ್ಥಳವೇ ನಮಗೆ ಬದುಕು..

ಇಷ್ಟೆಲ್ಲದರ ನಡುವೆ ಮತ್ತೆ ಮತ್ತೆ ಮನಸ್ಸಿನ ಪಯಣ ನನ್ನೂರಿನ ಕಡೆಗೆ ಪಯಣ ಬೆಳೆಸಿತ್ತು. ಅಮ್ಮ ಬೆಳೆಸಿದ ಆ ರಾತ್ರಿ ರಾಣಿ ಅರಳಿ ತನ್ನ ಸುಮವನ್ನು ಮನೆ ತುಂಬಾ ಆವರಿಸಿತ್ತು. ಸುದ್ದಿಗೂ ಮೀರಿದ ಕಷ್ಟ ಸುಖಗಳ ಹಂಚಿಕೆ ಅಡಿಕೆ ಸುಲಿಯುವಾಗ ಅನಾವರಣಗೊಂಡಿತ್ತು. ಮರಗಟ್ಟಿದ ಕೈಗೆ ಅಪ್ಪ ಅಡಿಕೆ ಬೇಯಿಸಲು ಹಾಕಿದ್ದ ಬೆಂಕಿ ಆಸರೆಯಾಗಿತ್ತು. ದೂರದಲ್ಲೆಲ್ಲೋ ಯಾವುದೋ ಪ್ರಾಣಿ ಬಂದಿದೆ ಎಂಬ ಸಂಜ್ಞೆ ನಮ್ಮನೆ ನಾಯಿಯ ಮೂಲಕ ಅಪ್ಪನಿಗೆ ತಿಳಿದಿತ್ತು. ತಾ ಗದ್ದೆ ಕಾಯಲು ಕಟ್ಟಿದ್ದ ಮೋಳದ ಕಡೆಗೆ ಬಿರುಸಿನ ಹೆಜ್ಜೆ ಇಟ್ಟು ಸಾಗಿದ್ದ ಅಪ್ಪನ ಜೊತೆಯಾಗಿದ್ದು ಆತನ ಪ್ರೀತಿಯ ಯಕ್ಷಗಾನ ಪದ್ಯ. ಅಲ್ಲೆಲ್ಲೋ ಬೊಗಳುತ್ತಿದ್ದ ನಾಯಿ ಅಪ್ಪನ ಅರಸಿ ಅವನ ಬೆನ್ನುಹಿಡಿದಿತ್ತು. ಅಡಿಕೆ ಸುಲಿಯುತ್ತಿದ್ದವರ ಮಾತು ಬದುಕಿನ ಇನ್ನೊಂದು ಮಗ್ಗಲಿನ ವರ್ಣನೆಗೆ ಹೊರಳಿತ್ತು. ಹಂಡೆಯೊಳಗೆ ಹಾಕಿದ್ದ ಅಡಕೆ ಕೊತಕೊತನೆ ಕುದಿಯುತ್ತಿತ್ತು. ಕಳೆದ ವರ್ಷ ಅಡಿಕೆಗೆ ಅಪ್ಪ ಹಾಕಿದ್ದ ಬಣ್ಣ ಸ್ವಲ್ಪವೂ ಮಾಸಿರಲಿಲ್ಲ. ಸಂಜೆ ಅಪ್ಪ ಕಡಿದು ತಂದಿದ್ದ ಕುಂಟೆ ಅರ್ಧದಷ್ಟು ಸುಟ್ಟು ಕಾಲಿಯಾಗಿತ್ತು. ಆದರೂ ಆವರಿಸಿದ್ದ ಆ ಚಳಿ ನನ್ನನ್ನು ಇನ್ನೂ ಆವರಿಸಿತ್ತು..

ಅರೇ ಆದರೆ ಇದೆಲ್ಲ ಕೇವಲ ನೆನಪಲ್ಲವೇ? ಇಲ್ಲಿ ಎಲ್ಲಿ ನೋಡಿದರು ಜನವೇ ಜನ,ಆದರೆ ಒಬ್ಬರಿಗೂ ಮಾತನಾಡಲು ಪುರುಸೊತ್ತಿಲ್ಲ..ಬಸ್’ನಲ್ಲಿ ಆಕಸ್ಮಿಕವಾಗಿ ಯಾರಾದರು ಕಾಲು ತುಳಿದರೂ ಜಗಳ..ಮನೆ ಎದುರು ತರಕಾರಿ ಮಾರುತ್ತಾ ಬಂದ ತಳ್ಳುಗಾಡಿಯ ಮುದುಕನ ಜೊತೆಯೂ ಜಗಳ..ತನ್ನ ಮನೆಯೆದುರಿಗೆ ಬಿದ್ದುಹುಟ್ಟಿರುವ ದರ್ಬೆಯನ್ನು ಪಕ್ಕದಮನೆಯವಳು ಕೊಯ್ದರೂ ಜಗಳ..ಮೂರು ದಿನ ಒಬ್ಬ ಹುಡುಗನ ಬೈಕು ಅದೇ ರೋಡಿನಲ್ಲಿ ಓಡಾಡಿದರೆ ನಾಲ್ಕನೇ ದಿನ ‘ಏನಪ್ಪ ಬೇರೆ ದಾರಿ ಇಲ್ವಾ ನಿಂಗೆ’ ಎಂದು ಜಗಳ..ಇಲ್ಲಿ ಭಾವನೆಗಳಿಗೂ ಬೆಲೆಕಟ್ಟಲಾಗುತ್ತದೆ..ಇದು ಎಲ್ಲ ಇದೆ ಅಂದುಕೊಂಡಿರುವ ನಗರವಾಸಿಗಳ ಜೀವನ…ಕೊನೆಯದಾಗಿ

ಮತ್ತೇನೂ ಇಲ್ಲ ನನ್ನದು ಎನ್ನುವುದರ ಉಳಿವಿಗಾಗಿ ನಮ್ಮ ನಮ್ಮಲ್ಲೇ ಹೋರಾಟ,ಹೊಡೆದಾಟ…ಕಾಲವಾಡುವ ಆಟದೆದುರು ಎಲ್ಲವೂ ಶೂನ್ಯ ಎಂಬುದು ತಿಳಿದಿದ್ದರೂ ಯಾವುದನ್ನೋ ಹುಡುಕಾಡುತ್ತಿದ್ದೇವೆ.

ಹಾಗಾಗಿಯೇ ಗುಂಡಪ್ಪನವರು ಒಂದು ಕಗ್ಗವನ್ನು ಬರೆದಿದ್ದಾರೆ

ಒಂದೇ ಗಗನವ ಕಾಣುತೊಂದೆ ನೆಲವನು ತುಳಿಯು |

ತೊಂದೆ ಧಾನ್ಯವನುಣ್ಣುತೊಂದೆ ನೀರ್ಗುಡಿದು ||

ಒಂದೇ ಗಾಳಿಯನುಸಿರ್ವ ನರಜಾತಿಯೊಳಗಿಂತು |

ಬಂದದೀ ವೈಷಮ್ಯ ಮಂಕುತಿಮ್ಮ ||

(ಪ್ರಪಂಚದಲ್ಲಿರುವ ಎಲ್ಲ ಮಾನವರಿಗೂ ಆಕಾಶವು ಒಂದೇ ರೀತಿಯಾಗಿ ಕಾಣಿಸುತ್ತದೆ. ಭೂಮಿ ತಾಯಿ ಎಲ್ಲರಿಗೂ ಆಹಾರವನ್ನು ಒದಗಿಸುತ್ತಾಳೆ,ವಾಯುವು ಒಂದೇ ಸಮಾನಾಗಿ ಬೀಸುತ್ತಾನೆ,ಗಂಗಾ ಮಾತೆಯು ಎಲ್ಲರಿಗೂ ನೀರನ್ನು ಹರಿಸುತ್ತಾಳೆ.ಇವೆಲ್ಲವೂ ಒಂದೇ ತೆರನಾಗಿದ್ದರೂ ಇದೇ ಪ್ರಪಂಚದಲ್ಲಿರುವ ಮಾನವ ಕುಲವನ್ನು ನೋಡಿದರೆ ಒಬ್ಬರಂತೊಬ್ಬರಿಲ್ಲ ಇದೊಂದು ಅಘಾದ ಸೃಷ್ಟಿ.)

ನಮಗೆಲ್ಲ ಯಾವುದನ್ನೋ ಕಳೆದುಕೊಳ್ಳುವ ಭಯ..ಯಾವುದನ್ನೋ ಪಡೆದುಕೊಳ್ಳುವ ಆಸೆ..ಎಲ್ಲವನ್ನೂ ಮೀರಿ ನನ್ನದು ಎನ್ನುವುದರ ಸೃಷ್ಟಿಯ ಕಡೆಗಿನ ನಮ್ಮ ಪಯಣ..ಹುಡುಕಾಟ ನಮ್ಮೊಳಗೆ ಶುರುವಾಗಲೇ ಇಲ್ಲ..Be – don’t try to become..ನಮಗೆ ಅನ್ವಯವೇ ಅಲ್ಲ…ಹುಡುಕಾಟ ನಿರಂತರ….ಅದು ನಮ್ಮೊಳಗಿನಿಂದಲೇ ಶುರುವಾದಾಗ ಒಂದು ಧನಾತ್ಮಕ ಬದಲಾವಣೆ ನನ್ನೊಳಗೆ ಬರಬಹುದೇನೋ…ನಮ್ಮದೆನ್ನುವ ನಿರ್ಧಾರದಿಂದ ಇನ್ಯಾರಿಗೋ ನೋವಾಗುತ್ತದೆ ಎಂಬ ಭಯ…ಎಲ್ಲವನ್ನೂ ಮೀರಿ ನಿಲ್ಲಲು ಹೊರಟರೆ ನಂಬಿದವರಿಗೆ ಮೋಸವಾಗಿಬಿಡುತ್ತದೆ ಎಂಬ ಭಯ…ಭವದ ಕೊಂಡಿಯ ಕಳಚಿಕೊಳ್ಳುವುದಂತೂ ಅಸಾಧ್ಯ…ಒಂದಿಷ್ಟು ಅಹಂಕಾರ,ಮತ್ತೊಂದಿಷ್ಟು ಮೋಸ ನಮ್ಮ ಜೊತೆ ಇರಲೇಬೇಕು…ಕನಸಿನ ಮೂಟೆಗೆ ಗೆದ್ದಲು ಹಿಡಿದಾಗ ಕೊಡವಿ ಪ್ರಯೋಜನವಿಲ್ಲ…ನಮ್ಮದಲ್ಲದ ಬದುಕನ್ನೂ ಇದೂ ನನ್ನದೇ ಎಂದುಕೊಂಡು ಜೀವಿಸಬೇಕು….ಹುಟ್ಟು ಸಾವು ಇವೆರಡರ ನಡುವೆ ಒಂದಿಷ್ಟು ಹೆಸರು,ಒಂದಿಷ್ಟು ಹಣ ಮುಖ್ಯವಾಗಿ ನಮ್ಮದಲ್ಲದ ಬದುಕು….

ಅಲ್ಲಿ ಅಪ್ಪ ಹಾಕಿದ ಅಡಿಕೆಯ ಬಣ್ಣ ಯಾವತ್ತೂ ಮಾಸುವುದಿಲ್ಲ. ನಿರಂತರ ಬದುಕಿನ ಚಂದದ ನೆನಪಾಗಿರುವ ನನ್ನೂರಿನ ಚಳಿಗಾಲ ಯಾವತ್ತೂ ಚಂದವೇ ಸರಿ. ಅಪ್ಪ ಹಾಕಿದ್ದ ಅಟ್ಟದ ಕಂಬ ಬದಲಾಗಿದೆ ಆದರೆ ಅಪ್ಪನ ಅಡಿಕೆ ಆರಿಸುವ ಶೈಲಿ ಬದಲಾಗಲಿಲ್ಲ, ಬೆತ್ತದ ಬುಟ್ಟಿಯ ತುಂಬ ಅಡಿಕೆ ಹಾಕಿ ಅದಕ್ಕೆ ಬಣ್ಣ ಹಾಕುವ ಶೈಲಿ ಬದಲಾಗಲಿಲ್ಲ.ಇದನ್ನೆಲ್ಲ ಕಳೆದುಕೊಂಡುಬಿಡುತ್ತೇವಲ್ಲ ಎನ್ನುವ ಭಯ..ಸಾಗಬೇಕು ಅದ್ಯಾವುದೋ ಸಾಧನೆ ಎಂಬ ಪಥದಲಿ..

ತೊರೆಯೊಂದು ಸಾಗುತಿದೆ ತನ್ನ ಮೀರಿದ ಕಡಲ ಸೇರಲು…ಮನಸ್ಸು ಬಯಸುತಿದೆ ನನ್ನದಲ್ಲದ ಬದುಕ ಮೀರಿ ನಿಲ್ಲಲು….

Facebook ಕಾಮೆಂಟ್ಸ್

Prasanna Hegde: ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ
Related Post