ಅದು 2002ರ ಹಿಟ್ ಆ್ಯಂಡ್ ರನ್ ಪ್ರಕರಣ! ಆರೋಪಿ ಸಲ್ಮಾನ್’ಖಾನ್ ವಿರುದ್ಧ ಸಾಕ್ಷಿ ಹೇಳಲು ಕಟಕಟೆಗೆ ನಾಲ್ಕು ಸಾಕ್ಷಿದಾರರನ್ನು ಕರೆತರಲಾಗಿತ್ತು. ಮತ್ತು ಅವರೆಲ್ಲರೂ ಅಂದಿನ ದುರ್ಘಟನೆಯಲ್ಲಿ ಗಾಯಗೊಂಡು ಬದುಕುಳಿದವರು. ಅಂದರೆ ಪ್ರತ್ಯಕ್ಷ ಸಾಕ್ಷಿಗಳು. ಅವರಲ್ಲಿ ಒಬ್ಬ ಸಾಕ್ಷೀದಾರನ ಪ್ರಕಾರ ಘಟನೆ ನಡೆದಾಗ ಆರೋಪಿಯು ಅಂದರೆ ಸಲ್ಮಾನ್ ಕಾರಿನ ಬಲಗಡೆಯಿಂದೆದ್ದು ಬಂದಿದ್ದ ಹಾಗೂ ಆತನ ಅಂಗರಕ್ಷಕ ಕಾರಿನ ಎಡಗಡೆಯಲ್ಲಿದ್ದ. ಇನ್ನು ಎರಡನೇ ಸಾಕ್ಷೀದಾರನ ಪ್ರಕಾರ ಆರೋಪಿ ಸಲ್ಮಾನ್’ಖಾನ್ ಕುಡಿತದ ಮತ್ತಿನಲ್ಲಿದ್ದ ಮತ್ತು ಎರಡೆರಡು ಬಾರಿ ಮುಗ್ಗರಿಸಿಕೊಂಡು ಬೀಳುತ್ತಾ ಘಟನಾ ಸ್ಥಳದಿಂದ ಕಾಲ್ಕಿತ್ತಿದ್ದ. ಮತ್ತೋರ್ವ ಸಾಕ್ಷೀದಾರನ ಪ್ರಕಾರವೂ ಆರೋಪಿಯು ಡ್ರೈವರ್ ಸೀಟಿನಲ್ಲಿ ಕೂತಿದ್ದನಂತೆ. ಆದರೆ ಡ್ರೈವರ್ ಸೀಟ್ ಆ ಕಾರಿನ ಎಡಗಡೆಗಿತ್ತೋ ಅಥವಾ ಬಲಗಡೆಯಲ್ಲಿತ್ತೋ ಎಂಬ ನ್ಯಾಯಾಲಯದ ಪ್ರಶ್ನೆಗೆ (ಇದೂ ಒಂದು ಪ್ರಶ್ನೆಯೇ!?) ಎಡ ಬಲಗಳನ್ನು ಕನ್ಫ್ಯೂಸ್ ಮಾಡಿಕೊಂಡ ಆತ ಸರಿಯಾಗಿ ನೆನಪಿಲ್ಲವೆಂಬ ಉತ್ತರ ನೀಡಿಬಿಟ್ಟ! ಇನ್ನು ನಾಲ್ಕನೇ ಪ್ರತ್ಯಕ್ಷ ದರ್ಶಿಯ ಪ್ರಕಾರವೂ ಆರೋಪಿಯು ಅದೇ ಸ್ಥಳದಲ್ಲಿ ಇದ್ದನಂತೆ. ಆದರೆ ನಿಖರವಾಗಿ ಯಾವ ಸ್ಥಳದಲಿದ್ದ, ಅದೇನು ಮಾಡುತ್ತಿದ್ದನೆಂದು ಹೇಳುವುದಕ್ಕೆ ಕೊಂಚ ತಡಕಾಡಿದ. ಇವಿಷ್ಟು ಮುಂಬೈ ಹೈಕೋರ್ಟಿನಲ್ಲಿ ನಡೆದ 2002ರ ‘ಗುದ್ದೋಡು’ ಪ್ರಕರಣದ ವಿಚಾರಣೆಯ ಪ್ರಮುಖ ಅಂಶಗಳು. ನಿನ್ನೆ ಮೊನ್ನೆ ನಡೆದ ಘಟನೆಯನ್ನೇ ಇಂಚು ಇಂಚಾಗಿ ವಿವರಿಸಿ ಎಂದರೆ ಕಷ್ಟವಾಗಬಹುದು ಹಾಗಿರುವಾಗ ಬರೋಬ್ಬರಿ 13 ವರ್ಷಗಳ ಹಿಂದಿನ ಘಟನೆಯ ಬಗ್ಗೆ ನ್ಯಾಯಾಲಯ ಈ ಪರಿಯಲ್ಲಿ ಸಾಕ್ಷಿಗಳನ್ನು ಪ್ರಶ್ನಿಸಿದರೆ ಅವರೆಷ್ಟು ನಿಖರವಾಗಿ ಉತ್ತರಿಸಿಯಾರು!? ಅಷ್ಟಿದ್ದರೂ ಸಾಕ್ಷಿಗಳು ತಾವು ನೆನಪಿನಲ್ಲಿಟ್ಟುಕೊಂಡದನ್ನುಸಾಧ್ಯವಾದ ಮಟ್ಟಿಗೆ ಹೇಳಿದರು. ಎಲ್ಲಾ ಸಾಕ್ಷಿಗಳ ಒಟ್ಟು ಸಾರಂಶವನ್ನು ಕ್ರೋಢೀಕರಿಸಿದರೆ ಸಲ್ಮಾನ್’ಖಾನ್ ಪ್ರಕರಣದ ರೂವಾರಿ ಎಂಬುದು ಮನದಟ್ಟಾಗುವುದರಲ್ಲಿ ಸಂಶಯವೇ ಇಲ್ಲ. ಆದರೆ ನಮ್ಮ ಮುಂಬೈ ಹೈಕೋರ್ಟ್ ಜಡ್ಜ್ ಎ.ಆರ್.ಜೋಷಿರವರಿಗೆ ಅದೇನನ್ನಿಸಿತೋ ಏನೋ!? ಎಲ್ಲಾ ಸಾಕ್ಷೀದಾರರ ಉತ್ತರ ಒಂದೇ ರೀತಿಯಲ್ಲಿ ಇಲ್ಲ ಎಂದೆನ್ನುತ್ತಾ ಸಲ್ಮಾನ್ ಪರ ಬ್ಯಾಟ್ ಬೀಸಿಯೇ ಬಿಟ್ಟರು!
ಇದನ್ನು ನಮ್ಮ ನ್ಯಾಯಿಕ ವ್ಯವಸ್ಥೆಯ ದೌರ್ಬಲ್ಯವೆನ್ನಬೇಕಷ್ಟೇ!
ಅದು 2002ರ ಸೆ.28.ಅಂದು ನಸುಬೆಳಕಿಗೆ ಕಂಠ ಪೂರ್ತಿ ಕುಡಿದಿದ್ದ ಸಲ್ಮಾನ್’ಖಾನ್’ ತನ್ನ ಲ್ಯಾಂಡ್’ಟೋಯೋಟಾಕ್ರೂಸರ್ ಕಾರನ್ನು ಮುಂಬೈನ ಬಾಂದ್ರ ಹಿಲ್ ರಸ್ತೆಯಲ್ಲಿರುವ ಅಮೇರಿಕನ್ ಎಕ್ಸ್’ಪ್ರೆಸ್ ಬೇಕರಿಯ ಮುಂಭಾಗದ ಪುಟ್ಪಾತ್ ಮೇಲೆ ಮಲಗಿದ್ದ ಐವರು ಅಮಾಯಕರ ಮೇಲೆ ಹತ್ತಿಸಿ ಪರಾರಿಯಾಗಿದ್ದ. ಅಪಘಾತದಲ್ಲಿ ಓರ್ವ ಮರಣವನ್ನಪ್ಪಿದ್ದರೆ ಉಳಿದ ನಾಲ್ಕು ಮಂದಿ ತೀವ್ರಗಾಯಗೊಂಡಿದ್ದರು. ದೇಶಾದ್ಯಂತ ಸುದ್ದಿಯಾದ ಈ ಪ್ರಕರಣ ಸಲ್ಮಾನ್ ಇಮೇಜ್’ಗೆ ಮಸಿ ಬಳಿದಿತ್ತು. ‘ಬ್ಯಾಡ್ ಬಾಯ್’ ಎಂಬ ಅಡ್ಡ ನಾಮವನ್ನೂ ನೀಡಿತ್ತು. ಅಂದಿನ ದುರ್ಘಟನೆಯಲ್ಲಿ ಸಲ್ಮಾನ್ ಆರೋಪಿ ಎಂದು ಸಾರುವುದಕ್ಕೆಅದ್ಯಾವ ನ್ಯಾಯಾಲವೂ ಬೇಕಾಗಿರಲಿಲ್ಲ ಯಾಕೆಂದರೆ ಅಷ್ಟೊಂದು ಏಕಮುಖವಾಗಿತ್ತು ಈ ಪ್ರಕರಣ. ಎಲ್ಲಕ್ಕಿಂತ ಮುಖ್ಯವಾಗಿ ಅಂದು ಸಲ್ಮಾನ್ ಜತೆಗಿದ್ದ ಆತನ ಅಂಗರಕ್ಷಕ ರವೀಂದ್ರ ಪಾಟೀಲ್ ಕೂಡ ಸಲ್ಮಾನ್ ಕುಡಿದು ವಾಹನ ಚಲಾಯಿಸುತ್ತಿದ್ದ ಎಂದು ನ್ಯಾಯಾಲಯದ ಮುಂದೆ ಸಾಕ್ಷೀ ಬೇರೆ ನುಡಿದಿದ್ದ! ನಡೆದದ್ದು ಸಣ್ಣ ಪ್ರಕರಣವೇನಲ್ಲ. ಕಂಠ ಪೂರ್ತಿ ಕುಡಿದು ವಾಹನ ಚಲಾಯಿಸಿದ್ದು ಒಂದೆಡೆಯಾದರೆ ಅಪಘಾತ ನಡೆಸಿ ಅಮಾಯಕನೋರ್ವನ ಸಾವಿಗೂ ಕಾರಣನಾಗಿರುವುದು ಇನ್ನೊಂದೆಡೆ. ಪ್ರಕರಣವನ್ನು ಕೈಗೆತ್ತಿಕೊಂಡ ಸ್ಥಳೀಯ ನ್ಯಾಯಾಲಯ ಮೂರು ವರ್ಷಗಳ ಬಳಿಕ ಅಂದರೆ 2005ರಲ್ಲಿ ಸಲ್ಮಾನ್’ನ್ನನ್ನು ಅಪರಾಧಿ ಎಂದು ಗುರುತಿಸಿ ಐದು ವರ್ಷಗಳ ಜೈಲು ಶಿಕ್ಷೆಯನ್ನು ಘೋಷಿಸಿತ್ತು. ಶಿಕ್ಷೆಯೇನೋ ಸರಿಯಾಗೇ ಇತ್ತು. ಆದರೆ ಸಲ್ಮಾನ್ ಸೆಲೆಬ್ರಿಟಿಯಲ್ಲವೇ? ಬಿಸಾಕುವುದಕ್ಕೆ ಬೇಕಾದಷ್ಟುದುಡ್ಡಿರುವಾಗ ಸುಮ್ಮನೆ ಶಿಕ್ಷೆಯನ್ನು ಸ್ವೀಕರಿಸಿದರೆ ತಪ್ಪಾದೀತು ಎಂದು ಹೈಕೋರ್ಟ್ ಮೆಟ್ಟಿಲೇರಿದ! ಈ ಮಧ್ಯೆ ಒಂದಷ್ಟು ಸಾಕ್ಷ್ಯ ನಾಶ ಪಡಿಸುವ ಕೆಲಸವೂ ಸದ್ದಿಲ್ಲದೆ ನಡೆದು ಹೋಯಿತು! ಪ್ರಮುಖ ಸಾಕ್ಷಿಯೆಂಬಂತಿದ್ದ ರವೀಂದ್ರ ಪಾಟೀಲನನ್ನು ಮುಂಬೈ ಸರಕಾರ ಕೆಲಸದಿಂದಲೇ ಕಿತ್ತಾಕಿ ಬೀದಿಗೆ ಅಟ್ಟಿತ್ತು! ಬಳಿಕ ಒಂದೆರಡು ವರ್ಷಗಳಲ್ಲಿ ಅನುಮಾನಾಸ್ಪದವಾಗಿ ರವೀಂದ್ರ ಪಾಟೀಲನ ಅಂತ್ಯವೂ ಆಯಿತು!! ಇನ್ನು ಮಾನವೀಯ ಅನುಕಂಪವನ್ನು ಗಳಿಸುವ ಸಲುವಾಗಿ ಒಂದಷ್ಟು ಸಾಮಾಜಿಕ ನೆರವುಗಳು ಕೂಡ ಸಲ್ಮಾನ್’ನಿ೦ದ ಹೊರಬರಲಾರ೦ಭಿಸಿದವು! ಜನರ ಮನಸಿನಲ್ಲಿದ್ದ ಆಕ್ರೋಶವೂ ಕಡಿಮೆಯಾದವು. ಇದೀಗ ಪ್ರಕರಣವನ್ನುಕೈಗೆತ್ತಿಕೊಂಡ ಮುಂಬೈ ಹೈಕೋರ್ಟ್ ಸಲ್ಮಾನ್ ನಿರ್ದೋಷಿ ಎಂದು ತೀರ್ಪಿತ್ತಿದೆ! ಸ್ವತಃ ಸಲ್ಮಾನ್ ಖಾನೇ ಆಶ್ಚರ್ಯ ಪಟ್ಟಿರಬಹುದೇನೋ!! ಬಚಾವಾಗುವುದು ಸಾಧ್ಯನೇ ಇಲ್ಲ ಎಂದರಿವಾಗಿ ಗಳಗಳನೆ ಅತ್ತಿದ್ದ ಸಲ್ಮಾನ್ ಅಂದು ಒಂದಷ್ಟು ಶಿಕ್ಷೆಯಾದರೂ ಕಡಿಮೆಯಾಗಲಿ ಎಂದು ಆಶಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರೆ ಅಲ್ಲಿ ಇಂದು ಸಂಪೂರ್ಣ ಖುಲಾಸೆಯೇ ದೊರಕಿದೆ ನೋಡಿ!
ನ್ಯಾಯಾಲಯಗಳು ಕೂಡ ಗಾಳಿ ಬಂದೆಡೆ ವಾಲುತ್ತವೆಯೇ!?
ಹಾಗಂತ ಸಂಶಯಕಾಡುತ್ತಿವೆ! ಹೌದು, ಮುಂಬೈನ ಸೆಷನ್ಸ್ ನ್ಯಾಯಾಲಯದ ತೀರ್ಪಿನಿಂದ ನಮ್ಮ ನ್ಯಾಯಿಕ ವ್ಯವಸ್ಥೆಯ ಮೇಲೆ ಗೌರವ ಹುಟ್ಟುವಂತೆ ಮಾಡಿದ್ದರೆ ಇಂದು ಅದೇ ಮುಂಬೈನ ಹೈಕೋರ್ಟ್ ನೀಡಿದ ತೀರ್ಪಿನಿ೦ದ ಎಲ್ಲರೂ ತಲೆತಗ್ಗಿಸುವಂತಾಗಿದೆ! ಕಣ್ಣ ಮುಂದೆಯೇ ನಡೆದ ಘಟನೆಯನ್ನು ಅಷ್ಟೊಂದು ದೀರ್ಘವಾಗಿ ಎಳೆದು ಇದೀಗ ಸಾಕ್ಷಿಗಳ ಕೊರತೆ ಎಂದೆನ್ನುತ್ತಾ ಅಪರಾಧಿಯನ್ನು ಖುಲಾಸೆಗೊಳಿಸುತ್ತದೆಯೆಂದಾದರೆ ಎಲ್ಲಿ ಉಳಿದಿದೆ ನಮ್ಮಲ್ಲಿ ನ್ಯಾಯ!? ನಿಜಕ್ಕೂ ಸಲ್ಮಾನ್ ಪ್ರಕರಣ ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿವೆ, ನ್ಯಾಯಾಲಯದ ಮೇಲಣ ಭರವಸೆಯನ್ನೇ ಕುಂಠಿತಗೊಳಿಸಿವೆ. ನಿರಪರಾಧಿಗೆ ಶಿಕ್ಷೆಯಾಗಬಾರದು ಎಂಬ ಮಾತು ನಿಜವೇ ಬಿಡಿ. ಆದರೆ ಇಂತಹ ಕಣ್ಣಿಗೆ ಕಟ್ಟುವಂತ ಪ್ರಕರಣದಲ್ಲೂ ನಮ್ಮ ನ್ಯಾಯಿಕ ವ್ಯವಸ್ಥೆ ಆರೋಪಿಯನ್ನು ಅಪರಾಧಿ ಎಂದು ಗುರುತಿಸುವಲ್ಲಿ ಎಡವುತ್ತದೆಯೆಂದಾದರೆ ಏನರ್ಥ!? ಒಂದು ವೇಳೆ ಸಲ್ಮಾನ್ ಖಾನ್’ನ ಜಾಗದಲ್ಲಿ ಅದ್ಯಾರೋ ದುಡಿದು ತಿನ್ನುವ ಬಡವನಿರುತ್ತಿದ್ದರು ಕೂಡ ಇದೇ ರೀತಿಯ ನ್ಯಾಯ ಹೊರಬರುತ್ತಿತ್ತೇ!?ನಿಜಕ್ಕೂ ಹೈಕೋರ್ಟ್ ತೀರ್ಪು ತಲೆತಗ್ಗಿಸುವಂತಹುದು. ಕೋರ್ಟ್ ಹೇಳಿದ ಹಾಗೆ ಅಂದಿನ ಘಟನೆಗೆ ಸಲ್ಮಾನ್ ಖಾನ್ ಕಾರಣವಲ್ಲವೆಂದಾದರೆ ಮತ್ಯಾರು ಕಾರಣ ಎಂಬುದಕ್ಕೆ ಉತ್ತರವೆಲ್ಲಿ!? ಸಲ್ಮಾನ್ ಖಾನ್ ಕುಡಿದಿರುವುದಕ್ಕೆ ಪುರಾವೆಯಿಲ್ಲ ಎಂಬುದನ್ನು ಬೇಕಾದರೆ ಒಪ್ಪೋಣ ಆದರೆ ನಡೆದಿರುವ ಘಟನೆ ಮಾತ್ರ ನೂರಕ್ಕೆ ನೂರರಷ್ಟು ನಿಜ ತಾನೆ? ಖುಲಾಸೆಗೊಳಿಸುವ ಮೊದಲು ನಿನ್ನ ಕಾರಿನಲ್ಲಿ ಅದೆಷ್ಟು ಮಂದಿ ಇದ್ದರು, ಅದ್ಯಾರು ವಾಹನ ಚಲಾಯಿಸುತ್ತಿದ್ದರು ಎಂಬೆಲ್ಲಾ ಪ್ರಶ್ನೆಗಳನ್ನಾದರೂ ಸ್ವತಃ ಸಲ್ಮಾನ್ ಖಾನ್’ನಲ್ಲಿ ಕೇಳಬಹುದಿತ್ತಲ್ಲಾ!? ನಸುಬೆಳಕಲ್ಲಿ ನಿದ್ದೆಗೆ ಜಾರಿದ್ದ ಐವರಲ್ಲಿ ನಾಲ್ಕು ಮಂದಿ ಗಾಯಗೊಂಡು ಒಬ್ಬ ಮೃತಪಟ್ಟಿರುತ್ತಾನಲ್ಲ ಹಾಗಾದರೆ ಅದೆಲ್ಲಾ ಹೇಗೆ ತನ್ನಿಂತಾನೆ ನಡೆದು ಹೋದದ್ದೇ!? ವಿಪರ್ಯಾಸವೆನ್ನಬೇಕಷ್ಟೆ ಇದನ್ನು! ಇಲ್ಲವೆಂದಾದಲ್ಲಿ ಹತ್ತು ಹದಿಮೂರು ವರ್ಷಗಳ ಬಳಿಕ ಸಾಕ್ಷಿಗಳನ್ನು ಅದೂ ದುರಂತದಲ್ಲಿ ವಿಲಿವಿಲಿ ಒದ್ದಾಡಿಕೊಂಡು ಬದುಕುಳಿದ ಜೀವಗಳನ್ನು ಕರೆತಂದು ಆರೋಪಿ ಎಲ್ಲಿದ್ದ? ಯಾವ ಆಂಗಲ್’ನಲ್ಲಿ ನಿಂತಿದ್ದ, ಅದೇಗೆ ಎದ್ದು ಬಂದ? ಕುಡಿದಿದ್ದನೆ? ಡ್ರೈವ್ ಮಾಡುತ್ತಿದ್ದನೆ? ಎಂದೆಲ್ಲಾ ಅಸಂಬದ್ದ ಪ್ರಶ್ನೆಗಳನ್ನು ಕೇಳಿದರೆ ಅವರೆಷ್ಟು ಉತ್ತರಿಸಿಯಾರು!? ಅಷ್ಟಕ್ಕೂ ಹದಿಮೂರು ವರ್ಷಗಳಿಂದ ತನಿಖೆ ನಡೆಸಿದ ಪೋಲೀಸರು ಸಲ್ಮಾನ್ ಕುಡಿದಿದ್ದ ಎಂಬುದಕ್ಕೆ ಅದ್ಯಾವುದೇ ದಾಖಲೆಯನ್ನುಇಟ್ಟುಕೊಂಡಿಲ್ಲವೇ ಹಾಗಾದರೆ!? ಇನ್ನು ಪ್ರಕರಣಕ್ಕೆ ಸಂಬಂಧ ಪಟ್ಟ 55 ದಾಖಲೆಗಳು ಕಳೆದು ಹೋಗಿವೆ ಎಂದು ನ್ಯಾಯಾಲಯದ ಮುಂದೆ ಸಲೀಸಾಗಿ ಉತ್ತರಿಸಿಬಿಟ್ಟ ನಮ್ಮ ಪಬ್ಲಿಕ್ ಪ್ರಾಸಿಕ್ಯೂಷನ್’ರ ನಡೆಯ ಬಗ್ಗೆ ಸಂಶಯಗಳು ಹುಟ್ಟಲ್ಲವೇ? ಇಷ್ಟೊಂದು ದೊಡ್ಡ ಪ್ರಕರಣದ ಸಾಕ್ಷ್ಯಗಳನ್ನೇ ಜೋಪಾನವಾಗಿಟ್ಟುಕೊಳ್ಳುವಲ್ಲಿ ನಮ್ಮ ಪ್ರಾಸಿಕ್ಯೂಷನ್ ಎಡವುತ್ತಾರೆಂದಾದರೆ ಇನ್ನು ಇವರ ಕೈಯಲ್ಲಿರುವ ಉಳಿದ ಪ್ರಕರಣಗಳ ಗತಿ ಏನು!? ಒಂದು ಕೋರ್ಟ್ ಶಿಕ್ಷೆ ನೀಡುವುದು, ಇನ್ನೊಂದು ಕೋರ್ಟ್ ಸಲೀಸಾಗಿ ಅದನ್ನು ವಜಾಗೊಳಿಸಿ ಅಪರಾಧಿಯನ್ನು ನಿರಪರಾಧಿ ಎನ್ನುವುದು ಇದೊಂಥರಾ ಮಕ್ಕಳಾಟವೆಂಬಂತಾಗಿದೆ ಇಲ್ಲಿ. ಕರ್ನಾಟಕದ ದಂಡೂ ಪಾಳ್ಯ ಗ್ಯಾ೦ಗ್ ಕೂಡ ಇದೀಗ ಸುಪ್ರೀಮ್ ಕೋರ್ಟ್ ತೀರ್ಪಿನಿಂದಾಗಿ ಗಲ್ಲು ಶಿಕ್ಷೆಯಿಂದ ಪಾರಾಗಿ ಹೊರಪ್ರಪಂಚಕ್ಕೆ ಕಾಲಿರಿಸಿರುವುದು ಮತ್ತೊಂದು ಉದಾಹರಣೆ!
ಹೌದು, ಸಲ್ಮಾನ್ ವಿಚಾರಣೆಯಲ್ಲಿ ನಡೆದಿರುವುದು ಎಲ್ಲವೂ ನಾಟಕೀಯ ಎಂದೇ ಎನ್ನಿಸುತ್ತಿದೆ. ಸೆಲೆಬ್ರಿಟಿಗೆ ಶಿಕ್ಷೆಯಿಂದ ಖುಲಾಸೆಯಾಗಿರುವುದು ಹಲವಾರು ಅಭಿಮಾನಿಗಳಿಗೆ ಸಂತಸತಂದಿರಬಹುದು. ಕೋಟಿ ಕೋಟಿ ಹೂಡಿಕೆದಾರರ ಮನಸ್ಸು ಹಗುರಗೊಳಿಸಿರಬಹುದು. ಹಾಗೇನೆ ಅನೀರೀಕ್ಷಿತವಾಗಿ ನಡೆದಿರುವ ಘಟನೆಯಲ್ಲವೇ ಇದು ಕ್ಷಮಿಸಿಬಿಡೋಣ ಎಂಬ ಮಾತುಗಳೂ ಕೂಡ ಮನಸಿನಲ್ಲಿ ತೇಲುತ್ತಿರಬಹುದು. ಆದರೆ ಒಂದರೆಕ್ಷಣ ಅಂದು ಮಡಿದ ನೂರುಲ್ಲ ಷರೀಫ್’ನ ಕುಟುಂಬವನ್ನೊಮ್ಮೆ ನೆನಪಿಸಿಕೊಳ್ಳಿ! ಆ ಕುಟುಂಬ ಅನ್ಯಾಯವಾಗಿ ಬೀದಿಗೆ ಬಿದ್ದಿದೆಯಲ್ಲಾ ಇಂದು ಅದಕ್ಕೆ ಹೊಣೆಯಾರು? ನ್ಯಾಯ ಒದಗಿಸುವವರು ಯಾರು? ಹೇಳಿ ತಪ್ಪಿತಸ್ಥರಿಗೆ ಇದೇ ರೀತಿ ಶಿಕ್ಷೆಯಾಗದೇ ಹೋದರೆ ನ್ಯಾಯದ ಮೇಲಣ ಭರವಸೆ ಉಳಿಯುವುದಾದರೂ ಹೇಗೆ? ಮೇಲಾಗಿ ನ್ಯಾಯಾಲಗಳು ಕೂಡ ಗಾಳಿ ಬಂದೆಡೆಗೆ ವಾಲುತ್ತಿವೆ ಎಂಬ ಅಪವಾದ ಬರಬಾರದಲ್ಲವೇ!.
Facebook ಕಾಮೆಂಟ್ಸ್