ರಾಹುಲ್ ಪಶುಪಾಲನ್, ರಶ್ಮಿ ನಾಯರ್!
ಕಳೆದ ಒಂದು ವರ್ಷದ ಕೆಳಗೆ ಏಕಾಏಕಿ ರಾರಾಜಿಸಿ ಹೀರೋಗಳಾದ ಜೋಡಿ ಹೆಸರುಗಳಿವು. ಮಾಡಿದ್ದ ಘನಂದಾರಿ ಕೆಲಸವೇನೆಂದರೆ ಅಂದು ಸಾರ್ವಜನಿಕವಾಗಿ ‘ಕಿಸ್’ ಕೊಡುವ ಕಾರ್ಯಕ್ರಮವನ್ನು ಆಯೋಜಿಸಿ ‘ಕಿಸ್ಆಫ್ ಲವ್’ ಎಂಬ ವಿಭಿನ್ನ ಪ್ರತಿಭಟನೆಯನ್ನು ಆಯೋಜಿಸಿದ್ದರು! ಅಂದಹಾಗೆ ಇವರಿಬ್ಬರು ದಂಪತಿಗಳು ಬೇರೆ. ಹಿಂದೂ ಪ್ರಣೀತ ಸಂಘಟನೆಗಳು ಕೇರಳದಲ್ಲಿ ನಡೆಯುತ್ತಿದ್ದ ಅಕ್ರಮ, ಅನೈತಿಕ ಚಟುವಟಿಕೆಗಳನ್ನೆಲ್ಲಾ ಪತ್ತೆ ಹಚ್ಚುತ್ತಾ ಬಿಸಿಮುಟ್ಟಿಸಲು ಪ್ರಾರಂಭಿಸಿದ್ದನ್ನು ವಿರೋಧಿಸಿ ಈ ಕಿಸ್ಆಫ್ ಲವ್ ಎಂಬ ವಿಭಿನ್ನ ಪ್ರತಿಭಟನೆಯನ್ನು ಸಂಘಟಿಸಲಾಗಿತ್ತು.ನೈತಿಕವೋ ಅನೈತಿಕವೋ ಒಟ್ಟಿನಲ್ಲಿ ಬಲಪಂಥೀಯ ಸಂಘಟನೆಗಳಿಗೆ ವಿರುದ್ಧವಾಗಿ ಈ ಪ್ರತಿಭಟನೆಯಾದ್ದರಿಂದ ನಮ್ಮ ವಿಚಾರವಾದಿಗಳು ಎಂದು ಕರೆಸಿಕೊಂಡ ಬಹುತೇಕ ಎಲ್ಲಾ ತಲೆಗಳು ಕೂಡ ಒಂದಲ್ಲ ಒಂದು ವಿಧದಲ್ಲಿ ಸಾಥ್ ನೀಡಿದ್ದವು! ತಮಿಳುನಾಡು, ಹೈದರಾಬಾದ್, ಮಹಾರಾಷ್ಟ್ರ, ದೆಹಲಿ ಸೇರಿದಂತೆ ದೇಶಾದ್ಯಂತ ಇದರ ಅಲೆಯೆದ್ದಿತ್ತು. ನಮ್ಮದಲ್ಲದ ಸಂಸ್ಕಾರವನ್ನು ಈ ಪರಿ ವೈಭವೀಕರಸುವುದು ಬೇಡ ಎಂಬ ಸಾಮಾನ್ಯ ಸಂಗತಿಯನ್ನೂ ಕೂಡ ಬದಿಗಿರಿಸಿ ಅಂದು ‘ಕಿಸ್ಆಫ್ ಲವ್’ನ ಯಶಸ್ವಿಗೆ ವರ್ಗವೊಂದು ಭರಪೂರ ಪ್ರಯತ್ನಿಸಿತ್ತು. ಈ ಕಿಸ್ ಆಫ್ ಲವ್’ನ ಪ್ರವರ್ತಕರು ಯಾರು? ಅವರ ಹಿನ್ನೆಲೆ, ಆಶಯಗಳೇನು ಎಂಬುದನ್ನು ಕೂಡ ಯೋಚಿಸದೆ ಅವರನ್ನು ಹೀರೋಗಳಾಗಿಸಿದ್ದು ಅಂದಿನ ವಾಸ್ತವ. ಕಡೇ ಪಕ್ಷ ಇಂತಹ ಪ್ರತಿಭಟನೆಗಳಿಂದ ಸಮಾಜಕ್ಕೆ ದಕ್ಕುವ ಲಾಭವಾದರೂ ಏನು ಎಂಬುದನ್ನೂ ಯೋಚಿಸುವ ಗೋಜಿಗೂ ಹೋಗಿಲ್ಲ. ಒಟ್ಟಿನಲ್ಲಿ ಅಂದು ರಾಹಲ್ ಪಶುಪಾಲನ್-ರೆಶ್ಮಿ ನಾಯರ್ ಬದಲಾವಣೆಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಲುದೊಡ್ಡ ಹರಿಕಾರರಾಗಿ ಕಂಡುಬಂದದ್ದು ಮಾತ್ರ ಸುಳ್ಳಲ್ಲ.
ಇರಲಿ, ಇವತ್ತು ಅಂದರೆ ಸರಿಯಾಗಿ ಒಂದು ವರ್ಷದ ಬಳಿಕ ಮತ್ತೆ ಇದೇ ಜೋಡಿ ಏಕಾಏಕಿ ಬೆಳಕಿಗೆ ಬಂದಿದೆ. ಆದರೆ ವಿಷಯ ಮಾತ್ರ ಬೇರೆನೇ! ಅಂದು ನಾವೆಲ್ಲಾ ಯುವ ಜನರು, ವಿದ್ಯಾವಂತರು ನಾವೇನು ಬೇಕಾದರು ಮಾಡುವೆವು, ಇದು ನಮ್ಮ ವೈಚಾರಿಕತೆ, ಎಂದು ಲಾಗಾಯಿತ್ತಿನಿಂದ ವಾದಿಸುತ್ತಾ ಒಂದಷ್ಟು ವಿಚಾರವಾದಿಗಳ ಬೆಂಬಲದೊಂದಿಗೆ ರಾರಾಜಿಸಿದ್ದ ಇವರುಇಂದು ಸಿಕ್ಕಿ ಬಿದ್ದದ್ದು ಲಾಡ್ಜ್ ಒಂದರಲ್ಲಿ ಮೈಮಾರಾಟದ ದಂಧೆ ನಡೆಸುತ್ತಿದ್ದಾಗ!! ಅಷ್ಟೇ ಅಲ್ಲ ಈ ದಂಧೆಯ ಬೆನ್ನತ್ತಿದ್ದಾಗ ಹೊರಬಿದ್ದ ಭಯಾನಕ ಸತ್ಯವೇನೆಂದರೆ ಕಾರ್ಯನಿರತವಾಗಿರುವ ಅಂತರರಾಜ್ಯ ಮಟ್ಟದ ವೇಶ್ಯಾವೃತ್ತಿಯ ಬೃಹತ್ ಜಾಲಕ್ಕೂ ಈ ಜೋಡಿಯೇ ಪ್ರಮುಖ ಸೂತ್ರಧಾರಿ ಎಂದು! ಕಿಸ್ಆಫ್ ಲವ್ ಪ್ರತಿಭಟನೆಯಿಂದ ದೊರೆತ ಯುವ ಪೀಳಿಗೆಯ ಬೆಂಬಲವನ್ನುಎನ್ಕ್ಯಾಶ್ ಮಾಡುತ್ತಾ ಫೇಸ್ಬುಕ್, ವಾಟ್ಸ್ಆಪ್’ಗಳೆಂಬ ಆಧುನಿಕ ಜಾಲತಾಣಗಳ ಮೂಲಕ ತರುಣ ತರುಣಿಯರನ್ನು ಸೆಳೆಯುವ ಕಾಯಕಕ್ಕೆ ಕೈ ಹಾಕಿದ್ದು ಎಂತವರನ್ನೂ ಬೆಚ್ಚಿ ಬೀಳಿಸುವಂತಹುದೇ. ಅಂದು ಈ ಜೋಡಿಯನ್ನು ಹಿಡಿದೆತ್ತಿ ಮೆರೆಸಿದವರು ಇಂದು ಅದೇನನ್ನುತ್ತಾರೋ ಗೊತ್ತಿಲ್ಲ. ಕಿಸ್ಆಫ್ ಲವ್ ಎನ್ನುತ್ತಾ ಸಾರ್ವಜನಿಕವಾಗಿ ರಮಿಸುವುದು ಸ್ವೇಚ್ಚಾಚಾರದ ಪ್ರಥಮ ಹಂತ ಎಂಬುದು ನಮಗೆ ಅರ್ಥವಾಗಬೇಕಿತ್ತು. ಸದ್ಯಕ್ಕಂತೂ ಯಾವ ವಿಚಾರವಾದಿಯೂ ಬಾಯಿ ಬಿಡುತ್ತಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ತನಗಿಷ್ಟ ಬಂದುದನ್ನು ಮಾಡಬಹುದು ಎನ್ನುವವರು ಇದೀಗ ಹೈಟೆಕ್ ವೇಶ್ಯಾವೃತ್ತಿಯನ್ನು ಕೂಡ ಒಪ್ಪುತ್ತಾರೋ ಏನೋ!?
ಅಕ್ರಮ ದಂಧೆಗಳು ನಡೆಯದ ಸ್ಥಳಗಳಿಲ್ಲ. ವೇಶ್ಯಾವೃತ್ತಿಯಂತಹ ನೀಚ ವೃತ್ತಿಗಳು, ಅನೈತಿಕ ವ್ಯವಹಾರಗಳು ಕಾನೂನು ಅದೆಷ್ಟು ಗಟ್ಟಿಗೊಳಿಸಿದರೂ ಒಂದಲ್ಲ ಒಂದು ರೀತಿಯಲ್ಲಿ ನಡೆಯುತ್ತಲೇ ಸಾಗಿವೆ. ಸಾಮಾಜಿಕ ಜಾಲತಾಣಗಳು ಅತಿಯಾದ ಬಳಿಕವಂತೂ ಎಲ್ಲವೂ ಲೀಲಾಜಾಲವಾಗಿಯೇ ನಡೆಯುತ್ತಿದೆ ಎಂಬುದು ನಗ್ನ ಸತ್ಯ. ಆದರೆ ಇದರ ಪರವಾದ ನಿಲುವು ತಾಳಬೇಕೆ ಇಲ್ಲ ವಿರುದ್ಧವಾಗಿ ನಿಲ್ಲಬೇಕೆ ಎಂದಾಗ ಇಲ್ಲಿ ‘ವೈಚಾರಿಕತೆ’ ಹಾಗೂ ‘ನೈತಿಕ ಪೋಲೀಸಗಿರಿ’ ಎಂಬ ತಾಕಲಾಟ ಎದುರಾಗುತ್ತೆ! ವಿದೇಶಿ ನೆಲವಾದರೆ ಬೇರೆ ಮಾತು ಆದರೆ ಅನೈತಿಕ ಸಂಬಂಧಗಳನ್ನು, ವೇಶ್ಯಾವೃತ್ತಿಗಳನ್ನು ನಮ್ಮ ಮಡಿವಂತಿಕೆಯ ಸಮಾಜ ಮಾತ್ರ ಎಳ್ಳಷ್ಟು ಒಪ್ಪದು ಎಂಬುದು ಸಾರ್ವಕಾಲಿಕ ಸತ್ಯವೇ. ಸಾರ್ವಜನಿಕವಾಗಿ ಹೆಣ್ಣು ಗಂಡಿನ ಸಂಬಂಧ ಅದು ಹೇಗಿರಬೇಕು ಎಂಬುದನ್ನು ಭಾರತೀಯ ಸಮಾಜವು ತನ್ನ ಕಟ್ಟು ಕಟ್ಟಳೆಯೊಳಗೆ ಜತನವಾಗಿ ಕಾಪಾಡಿಕೊಂಡು ಬಂದಿದೆಯಾದ್ದರಿಂದ ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೂ ಸ್ವೇಚ್ಚಾಚಾರಕ್ಕೂ ವ್ಯತ್ಯಾಸ ಕಾಣಲೇಬೇಕು. ಆದರೆ ವಿಪರ್ಯಾಸವೆಂದರೆ ಸ್ವೇಚ್ಛಾಚಾರವನ್ನೇ ‘ವ್ಯಕ್ತಿ ಸ್ವಾತಂತ್ರ್ಯ’ ಎಂದು ಭ್ರಮಿಸಿ ಎತ್ತಿ ಹಿಡಿಯಲಾಗುತ್ತಿದೆ ಇಲ್ಲಿ! ಹಾಗೇನೆ ವಿರೋಧಿಸಿದವರ ನಿಲುವುಗಳನ್ನು, ಹೋರಾಟಗಳನ್ನು ವೈಚಾರಿಕತೆಯ ಹೆಸರಲ್ಲಿ ಪ್ರತಿವಿರೋಧಿಸಲಾಗುತ್ತಿದೆ! ಯಾವುದು ತಪ್ಪು ಯಾವುದು ಸರಿ ಎಂಬುದನ್ನುಎಲ್ಲಾ ಸಂದರ್ಭದಲ್ಲೂ ಅದು ಒಂದು ವೈಯಕ್ತಿಕ ವಿಚಾರವೆಂದು ಭಾವಿಸಿದರೆ ಆವಾಗ ಬೇಕು ಬೇಕಾದನ್ನು ಮಾಡಲು ಆ ವ್ಯಕ್ತಿಗೆ ಅನುಮತಿ ನೀಡಬೇಕು ಎಂಬ ಅರ್ಥದೊಳಗೆ ತುರುಕಿಸಿದಂತಾದೀತು! ಇದು ಖ೦ಡಿತಾ ಅಪಾಯಕಾರಿ ನಡೆ. ಸಾಮಾಜಿಕ ವ್ಯವಸ್ಥೆಯೊಳಗೆ ಬದುಕುವ ಮಾನವ ಸ್ವಸ್ಥ ಸಮಾಜದ ಪಾಲುದಾರರಾಗಲು ಕೆಲವೊಮ್ಮೆ ತಮ್ಮ ವೈಯಕ್ತಿಕ ತೆವಲುಗಳನ್ನು ಬದಿಗೆ ಸರಿಸಿ ‘ಸಮಷ್ಠಿ ತತ್ವದ ಕಡೆಗೂ ಗಮನ ಕೊಡಬೇಕಾಗುತ್ತದೆ. ಮುಖ್ಯವಾಗಿ ನಾವು ಅದೆಂತ ಸಮಾಜದೊಳಗೆ ಜೀವಿಸುತ್ತಿದ್ದೇವೆ ಎಂಬುದು ಇಲ್ಲಿ ಮುಖ್ಯವಾದ ವಿಚಾರ. ಹಾಗೇನೆ ಈ ನಿಟ್ಟಿನಲ್ಲಿ ಎಡವುವವರನ್ನು ಮಟ್ಟಹಾಕಲು ಕಾನೂನು ವ್ಯವಸ್ಥೆಯನ್ನು ಸಿದ್ಧಗೊಳಿಸಬೇಕು. ಆದರೆ ಈ ವಿಚಾರದಲ್ಲಿ ನಮ್ಮ ಕಾನೂನುಗಳು ಮೌನವಾಗಿರುವುದೇ ಇಷ್ಟೆಲ್ಲಾ ಆವಾಂತರಕ್ಕೆ ಕಾರಣ!
ಇರಲಿ ಇನ್ನು ನಮ್ಮಲ್ಲಿ ಬೇರೂರಿರುವ ನೈತಿಕ ಪೋಲೀಸ್’ಗಿರಿ. ಸಂಸ್ಕೃತಿ ಸಂಸ್ಕಾರವೆಂದು ಕಾನೂನನ್ನು ಕೈಗೆತ್ತಿಕೊಳ್ಳುವುದು, ಶಾಂತಿ ಕದಡುವುದು ಸುತರಾಂ ಒಪ್ಪಿಕೊಳ್ಳುವ ವಿಚಾರವಲ್ಲ ಬಿಡಿ. ಆದರೆ ಯಾವುದನ್ನು ಸಮಾಜವು ಒಪ್ಪಲಾರದೋ, ಯಾವುದನ್ನು ಸಮಾಜವು ವಿರೋಧಿಸುತ್ತದೆಯೋ ಅಂತವುಗಳನ್ನು ತಡೆಯಬೇಕಾದ ಜವಾಬ್ದಾರಿಯಾರದ್ದು? ನಮ್ಮ ಕಾನೂನಿದ್ದಲ್ಲವೇ? ಕಣ್ಣೆದುರಲ್ಲೇ ದಂಧೆಗಳು, ಸಾಮಾಜಿಕ ಅವ್ಯವಹಾರಗಳು ನಡೆಯುತ್ತಿದ್ದರೆ ಮತ್ತದಕ್ಕೆ ನಮ್ಮ ‘ಒರಿಜಿನಲ್’ ಪೋಲೀಸರಿಂದ ಅದ್ಯಾವುದೇ ಪ್ರತಿರೋಧ ಬಾರದೇ ಹೋದರೆ ಜನ ‘ನೈತಿಕ’ ಪೋಲೀಸಗಿರಿಯನ್ನಲ್ಲದೆ ಇನ್ನೇನು ಮಾಡಿಯಾರು!?ಅಷ್ಟಕ್ಕೂ ಕೇರಳ, ಮಂಗಳೂರುಗಳಲ್ಲಿ ನಡೆದ ‘ನೈತಿಕ ಪೋಲೀಸರ’ ದಾಳಿಗಳೆಲ್ಲವನ್ನೂ ಗಮನಿಸಿ. ಅವೆಲ್ಲವುಗಳೂ ಅನೈತಿಕ ವ್ಯವಹಾರಗಳ ಅಡ್ಡೆಗಳ ಮೇಲೆಯೇ ನಡೆದಿರುವಂತಹುದು! ಇಲ್ಲಿ ನಿಜವಾಗಿಯೂ ನಾವು ವಿರೋಧಿಸಬೇಕಾಗಿರುವುದು ಏನ್ನನ್ನು? ಅನೈತಿಕ ವ್ಯವಹಾರಗಳನ್ನೋ ಇಲ್ಲ ಅದನ್ನು ಪ್ರತಿರೋಧಿಸಿ ತಡೆ ಒಡ್ಡುತ್ತಿರುವ ವರ್ಗವನ್ನೋ!? ನಮ್ಮ ನಿಲುವುಗಳ ಹೆಜ್ಜೆ ಜಾರಿರುವುದರಿಂದಲೇ ಇಂದು ಕಿಸ್ಆಫ್ ಲವ್’ನಿ೦ದ ಮುಂದುರವರೆದ ಮತ್ತೊಂದು ಅನೈತಿಕ ಅಡ್ಡೆಯು ಗಡದ್ದಾಗಿ ಬೆಳೆದಿರುವುದು! ಇನ್ನೂ ಒಂದು ಪ್ರಶ್ನೆಯಿದೆ, ಅದೇನೆಂದರೆ, ನಮ್ಮಲ್ಲಿನ ನೈತಿಕ ಪೋಲೀಸರು ಪತ್ತೆ ಹಚ್ಚಿ ಮಾಡುತ್ತಿರುವ ಕೆಲಸವನ್ನು ನಮ್ಮಪೋಲೀಸರು ಅದೇಕೆ ಮಾಡುತ್ತಿಲ್ಲ? ನಿಜವಾಗಿಯೂ ನೈತಿಕ ಪೋಲೀಸರಿಗೆ ಸಿಗುವ ಸುಳಿವು ನಮ್ಮ ಪೋಲೀಸರಿಗೆ ಸಿಗುತ್ತಿಲ್ಲವೇ? ಕೇರಳದ ಕಿಸ್ಆಫ್ ಲವ್ ಎಂಬ ಪ್ರತಿಭಟನೆಯನ್ನೇ ತೆಗೆದುಕೊಳ್ಳೋಣ. ಈ ಪ್ರತಿಭಟನೆ ನಡೆದದ್ದು ಬಲಪಂಥೀಯ ಸಂಘಟನೆಗಳ ವಿರುದ್ಧ. ತಮ್ಮಅಕ್ರಮ, ಅವ್ಯವಹಾರಗಳ ಮೇಲೆ ದಾಳಿಯಾಗುತ್ತಿದೆ ಎಂದರಿವಾದಾಗ ಅದರಿಂದಲೇ ಮಜಾ ಉಡಾಯಿಸುತ್ತಿದ್ದ ವರ್ಗವೊಂದು ಆ ಕೂಡಲೇ ಎಚ್ಚೆತ್ತುಕೊಂಡು ಪ್ರತಿಭಟನೆಗೆ ಇಳಿಯಿತು. ಅಂದು ಸಂಘಟನೆಗಳು ದಾಳಿ ಮಾಡಿ ತದುಕಿದ್ದು ಲಾಡ್ಜ್’ಗಳಲ್ಲಿ, ಪಾರ್ಕ್’ಗಳಲ್ಲಿ ನಡೆಯುತ್ತಿದ್ದ ‘ಅನೈತಿಕತೆಯ’ ಮೇಲೆಯಷ್ಟೇ ಎಂಬುದನ್ನು ನಾವು ಅಂದೇ ಅರಿತುಕೊಳ್ಳಬೇಕಿತ್ತು ಮತ್ತು ಅದಕ್ಕೆ ವಿರುದ್ಧವಾಗಿ ನಡೆದ ಪ್ರತಿಭಟನೆಯನ್ನು ಬಲವಾಗಿ ವಿರೋಧಿಸಬೇಕಿತ್ತು. ಹೀಗಾಗಿರುತ್ತಿದ್ದರೆ ಅದ್ಯಾವ ಹುಚ್ಚು ಪ್ರತಿಭಟನಕಾರರಿಗೂ ಬೆಳೆಯಲು ಅವಕಾಶ ಸಿಗುತ್ತಿರಲಿಲ್ಲ. ನೆನಪಿಡಿ ಒಂದು ವೇಳೆ ಕೇರಳದಲ್ಲಿ ನಡೆಯುತ್ತಿದ್ದ (ದೇಶಾದ್ಯಂತ ನಡೆಯುತ್ತಿರುವ ) ವ್ಯಭಿಚಾರ, ಅನೈತಿಕತೆಗಳನ್ನು ಪೋಲೀಸರೇ ಹಿಡಿದು ರುಬ್ಬುತ್ತಿದ್ದರೆ ಇಂದು ಅದ್ಯಾವ ಕಿಸ್ಆಫ್ ಲವ್ ಬೆಳೆಯುತ್ತಿರಲಿಲ್ಲ! ರಾಹುಲ್ ಪಶುಪಾಲನ್’ನ೦ತಹ ನೀಚನಿಗೆ ಬೆಳೆಯಲು ಅವಕಾಶನೂ ದೊರೆಯುತ್ತಿರಲಿಲ್ಲ. ಒಟ್ಟಿನಲ್ಲಿ ನೈತಿಕ ಪೋಲಿಸಗಿರಿ ಎಂದು ಸಂಘಟನೆಗಳು ಕಾರ್ಯಕ್ಕೆ ಇಳಿಯಿತ್ತಾದರಿಂದ ವಿರೋಧಿಗಳಿಗೆ ಒಂದು ಅವಕಾಶ ಕಲ್ಪಿಸಿಕೊಟ್ಟಂತಾಯಿತು. ಅನೈತಿಕತೆಯೇ ದೊಡ್ಡ ಮಟ್ಟದಲ್ಲಿ ರಾರಾಜಿಸುವಂತಾಯಿತು!
ಒಟ್ಟಿನಲ್ಲಿ ಹೋರಾಟದ ನೇತಾರನ ಬಣ್ಣ ಇದೀಗ ಬಯಲಾಗಿ ಬಿಟ್ಟಿದೆ. ಹುಡುಗಿಯೊಬ್ಬಳನ್ನು ಪಾರು ಮಾಡಲು ತನ್ನ ತಂದೆಯಿಂದಲೇ ಹಣಕದ್ದಿದ್ದಾನೆ ಎಂದು ಪಶುಪಾಲನ್ ವಿರುದ್ಧ ಆತನ ತಂದೆಯೂ ತಿರುಗಿಬಿದ್ದಿದ್ದಾರೆ. ಇನ್ನೊಂದೆಡೆಯಲ್ಲಿ ‘ನನ್ನನ್ನು ವೇಶ್ಯಾವೃತ್ತಿಗೆ ನೂಕಿದ್ದೇ ನನ್ನ ಗಂಡ’ ಎಂದು ರೆಶ್ಮಿ ಕೂಡ ತನ್ನ ಗಂಡನ ವಿರುದ್ಧ ಕೇಸು ಜಡಿದಿದ್ದಾಳೆ! ಅನೈತಿಕತೆಯನ್ನೇ ಸರಿ ಎಂದು ಬೊಬ್ಬಿರಿದು ಪ್ರತಿಭಟಿಸುವಾಗ ತಾವು ಅದೆಂತಹ ನಾಯಕನ ಬೆನ್ನ ಹಿಂದೆ ನಿಂತಿದ್ದೇವೆ, ಅವನ ಹಿನ್ನೆಲೆಯಾದರೂ ಏನು ಎಂಬುದನ್ನು ಯೋಚಿಸಿರುತ್ತಿದ್ದರೆ ಇಂದು ವಿಚಾರವಾದದ ಹಿಂದೆ ನಿಂತು ಹೋರಾಟಕ್ಕಿಳಿದವರು ಮುಜುಗರಕ್ಕೀಡಾಗುವ ಪ್ರಮೇಯ ತಪ್ಪುತ್ತಿತ್ತು! ಪಶುಪಾಲನ್’ನನ್ನು ವಿರೋಧಿಸಲು ಕನಿಷ್ಠ ನೈತಿಕತೆಯಾದರೂ ಉಳಿದಿರುತ್ತಿತ್ತು!
Facebook ಕಾಮೆಂಟ್ಸ್