ಒದ್ದೆ ಕಣ್ಣುಗಳಿಂದ ಯೋಚ್ನೆ ಮಾಡ್ತಾ ಕುಳಿತಿದ್ದ ಮುರುಳಿ ಹತ್ರ ಒಬ್ಬ ಪರಿಚಯಸ್ತ ಬಂದು, ನೂರು ಪಾಂಪ್ಲೆಟ್ ಇರುವ ಕಟ್ಟನ್ನು ಕೊಟ್ಟು “ನನ್ನ ಯೋಗ್ಯತೆ ಇಷ್ಟೆ ಪಾ. ಏನು ಮಾಡೋದು? ನಮ್ಮಂಥ ಬಡವರ ಮಕ್ಕಳಿಗೆ ಇಂಥಾ ಖಾಯಿಲೆ ಬರಬಾರ್ದು, ಎಲ್ಲಾ ದೇವರಾಟ ಇದನ್ನ ಈಸಬೇಕು ಅಷ್ಟೇ” ಎಂದು ಹೋದ. ಮುರಳಿ ಮನೆಗೆ ಹೋಗಿ ಈ ವಿಚಾರವಾಗಿ ಗಂಗಮ್ಮನ ಹತ್ತಿರ ವಿವರಿಸುವಾಗ ಪಾಂಪ್ಲೆಟ್ ತೆರೆದು ಓದಿದ, ‘ಸಾರ್ / ಮೇಡಂ, ನಾವು ಮುರಳಿ ಮತ್ತು ಗಂಗಮ್ಮ ಎಂಬ ಬಡ ದಂಪತಿಗಳು. ಕಳೆದ ವರ್ಷ ನಮ್ಮ ಮದುವೆಯಾಯ್ತು. ನಮಗೆ ತಂದೆ-ತಾಯಿ ಯಾರೂ ದಿಕ್ಕಿಲ್ಲ. ನಮಗೆ ಐದು ತಿಂಗಳ ಮಗು ಇದೆ. ಮಗು ಹುಟ್ಟುವಾಗ ಗರ್ಭಚೀಲಕ್ಕೆ ತೊಂದರೆಯಾದ್ದರಿಂದ ನಮಗೆ ಮತ್ತೆ ಮಕ್ಕಳಾಗುವುದಿಲ್ಲ. ಆದರೆ ಎರಡು ತಿಂಗಳಿಂದ ನಮ್ಮ ಮಗು ಬ್ಲಡ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದೆ. ಚಿಕಿತ್ಸೆಗೆ ಹೆಚ್ಚು ಹಣ ಖರ್ಚಾಗುತ್ತದೆ. ನಮ್ಮ ದುಡಿಮೆ ಎಲ್ಲಿಯೂ ಸಾಲದು ಮತ್ತು ಗುರುತು ಪರಿಚಯ ಇಲ್ಲದ ನಮಗೆ ಯಾರೂ ಸಾಲವನ್ನು ನೀಡುತ್ತಿಲ್ಲ. ಆದ್ದರಿಂದ ಈ ಪತ್ರದ ಮೂಲಕ ನಾವು ತಮ್ಮಲ್ಲಿ ಸಹಾಯವನ್ನು ಮಾಡಿ ಎಂದು ಕೇಳಿಕೊಳ್ಳುತ್ತಿದ್ದೇನೆ. ತಾವು ದಯವಿಟ್ಟು ದೊಡ್ಡ ಮನಸ್ಸು ಮಾಡಿ ನಮಗೆ ತಮ್ಮ ಕೈಲಾದ ಸಹಾಯ ಮಾಡಬೇಕೆಂದು ಪ್ರಾರ್ಥಿಸುತ್ತಿದ್ದೇವೆ. ಓದಿದ ಬಳಿಕ ಚೀಟಿಯನ್ನುದಯವಿಟ್ಟು ಹಿಂದಕ್ಕೆಕೊಡಿ’
ಎರಡು ವರ್ಷದ ಹಿಂದೆ ಯಾವುದೋ ಹಳ್ಳಿನಲ್ಲಿ ಟೊಕ್ಕುಜಾತಿ ಗಲಭೆಗೆ ಕಾರಣವಾದ ಇವರಿಬ್ಬರ ಅಂತರ್ಜಾತಿಯ ವಿವಾಹ, ಸಿಟಿ ಹೊರಗಿನ ಕೊಳಗೇರಿಯ ಗುಡಿಸಲೊ೦ದರಲ್ಲಿ ವಾಸ ಮಾಡೋಹಾಗಾಯ್ತು. ಮಗು ಹುಟ್ಟಿದ ಮೇಲೆ ಖುಶಿ ಪಡಬಹುದು ಎಂದು ಊಹಿಸಿ ಇಬ್ಬರೂ ತವರಿಗೆ ಹೋದ್ರೆ, ‘ನಮ್ ಯಣಕ್ಕೂ ಬರಬ್ಯಾಡ್ರಿ, ಜಾತಿಕೆಟ್ ಮದುವ್ಯಾಗಿ ಊರಿಗೆ ಊರು ಗುದ್ಯಾಡಂಗ ಮಾಡಿದ್ರಿ, ನಮ್ ಪಾಲಿಗೆ ನೀವು ಅವತ್ತೇ ಸತ್ತೋದ್ರಿ, ಎಲ್ಲಾನಾ ಹಾಳಾಗೋಗ್ರಿ, ನಮಗೆ ಮಕ ತೋರುಸ್ಬ್ಯಾಡ್ರಿ’ ಅನ್ನೋ ತಂದೆ-ತಾಯಿಗಳ ಛೀಮಾರಿ, ಬಹಿಷ್ಕಾರ ಈ ಸಿಟಿ ಗುಡಿಸಲಿಗೆ ಮತ್ತೆ ತಳ್ಳಿದ್ವು. ಮಗನ ಸಂಭ್ರಮದಲ್ಲಿ ಅವೆಲ್ಲಾ ನೋವುಗಳು ಮನಸ್ಸಿಗೆ ತಾಗಲಿಲ್ಲ. ಮಗನಿಗೆ ತಂದೆಯ ಹೆಸರು ಇಡಲೂ ಮನಸಾಗದ ರೀತಿಯಲ್ಲಿ ಮುರಳಿ-ಗಂಗಮ್ಮರ ಮಾವಂದಿರು ಇವರ ಮನಸ್ಸನ್ನು ಕೊಂದಿದ್ರು. ಮಗು ಹುಟ್ಟಿ ಮೂರು ತಿ೦ಗಳಲ್ಲಿ ಮಗುವಿನ ಆರೋಗ್ಯದಲ್ಲಿ ಏನೋ ಏರುಪೇರು ಆಗ್ತಿದೆ ಅಂತ ಆ ಟೆಸ್ಟು ಈ ಟೆಸ್ಟು ಬರ್ದು, ಇವರು ಕೂಡಿಟ್ಟ ಹಣ, ಸಿಕ್ಕಿದ್ ಸಾಲನೆಲ್ಲಾ ಕಬಳಿಸಿದ ಆಸ್ಪತ್ರೆ, ಕೂಸಿಗೆ ಬ್ಲಡ್ ಕ್ಯಾನ್ಸರ್ ಇದೆ ಆದಷ್ಟು ಬೇಗ ಚಿಕಿತ್ಸೆ ಕೊಡಬೇಕು ಹಣ ಜಾಸ್ತಿ ಖರ್ಚಾಗುತ್ತೆ ಅನ್ನೋ ಭೀತಿಯನ್ನು ಒಡ್ಡಿತು. ಚಿಕಿತ್ಸೆಗೆ ಹಣಜೋಡಿಸಲು ಎಲ್ಲರ ಬಳಿ ಸಾಲಕ್ಕೆ ಕೈ ಒಡ್ಡಿದರೂ, ಗುರುತು ಪರಿಚಯ ಕಡಿಮೆ ಇರುವ ಇಂತಹ ಜೋಡಿಗೆ ಆ ಸಿಟಿಯಲ್ಲಿ ಯಾರು ಸಹಾಯ ಮಾಡ್ತಾರೆ?
‘ನಾನು ಯಾವ್ ಪಾಪ ಮಾಡಿದ್ದೆ, ಯಾರಿಗೆ ಏನ್ ಮೋಸ ಮಾಡಿದ್ದೆ, ಒಂದಿನಾ ಬಿಡ್ದಂಗೆ ಪೋಜೆ ಮಾಡೀನೀ. ತಾಯಿ ಎದೆ ಹಾಲು ಬಿಟ್ರೆ ಏನೂ ಕುಡಿಲಾರದ ಕ೦ದಮ್ಮನಿಗೆ ಯಾಕ್ ಇಂತಾರೋಗ ಕೊಟ್ಟೆ, ನನಿಗ್ಕೊಡು ಆ ರೋಗಾನ, ಸಿಟ್ಟಿದ್ರೆ ನನ್ತಗಂಡೋಗ್, ಈ ಕೂಸಿನ್ ಮ್ಯಾಲ್ಯಾಕ್ ತೋರುಸ್ತೀ ನಿನ್ ರೋಸಾನಾ’. ಬಹುಶಃ ಯಮಧರ್ಮನು ಪ್ರತ್ಯಕ್ಷವಾದ ಮೊದಲ ಭೇಟಿಯಲ್ಲಿ ಮುರಳಿ ಕೇಳಬೇಕಾದ ಮಾತಿರಬಹುದು. ಮನದಲ್ಲಿ ಬೆಂದು ಉಕ್ಕಿದ ನೀರು ತುಟಿಯ ವರೆಗೆ ಹರಿಯುತ್ತಿದ್ದಂಗೆ, ದವಡೆಯ ಸಿಟ್ಟು ಮಾಡಿದ ಕಟಕಟ ಸದ್ದು ಗಂಗಮ್ಮನ ಮನಸ್ಸಿಗೆ ತಟ್ಟಿ, ಮುರಳಿಯ ಕಣ್ಣು ವರೆಸಲು ಮುಂದಾದವು.ಗಂಗೆಯ ಕೈ ಬಳೆ ಸದ್ದು ಮುರಳಿ ಕಿವಿಗೆ ತಾಕುತ್ತಿದ್ದಂತೆ. ತಾನೇ ಕಣ್ಣು ವರೆಸಿಕೊಂಡು, ಸರಿ ನಡಿ ಹೋಗಾನ ಎಂದು ಪಕ್ಕದಲ್ಲಿದ್ದ ಪಾಂಪ್ಲಟ್ ಕಟ್ಟನ್ನು ಕೈಗೆತ್ತಿಕೊಂಡು ಮುರಳಿ ಗುಡಿಸಲಿಂದ ಹೊರಬಂದ. ಕೂಸನ್ನೆತ್ತಿಕೊಂಡು ಗಂಗಮ್ಮ ಹೊರಬಂದಳು. ಸಿಟಿಹೊರಗಿನ ತಿಪ್ಪೆ ರಾಶಿಯ ಬದಿ ಇದ್ದ ಗುಡಿಸಲನ್ನು ನೆರಿಕೆ ಬಾಗಿಲಿಂದ ಮುಚ್ಚಿ ಸೀದಾ ಬಸ್ಸ್ಟಾಂಡಿಗೆ ನಡೆದರು. ಬಂದ ಬಸ್ಸುಗಳನ್ನೆಲ್ಲಾ ಏರಿ ಇಳಿದು ಬೇಡಲಾರಂಭಿಸಿದರು. ಕೆಲವರು ಪಾಂಪ್ಲೆಂಟ್’ನ್ನು ಕೂಲಂಕುಶವಾಗಿ ಓದಿ ಇವರ ಮುಖಗಳನ್ನು ನೋಡಿ ಸಹಾಯ ಮಾಡಿದರು. ಓದದೇ ಕೆಲವರು ಸಹಾಯ ಮಾಡಿದರು. ಕೆಲವರು ಓದಿಯೂ ಸುಮ್ಮನಿದ್ದು ಬರಿ ಚೀಟಿಯನ್ನು ಹಿಂದಕ್ಕೆಕೊಟ್ಟರು. ಉಳಿದವರು ಚೀಟಿಕೊಡಲು ಹೋದಾಗ ಬೇಡ ಎಂದು ನಿರ್ಲಕ್ಷಿಸಿದರು.
ಫುಟ್ಪಾತ್ನಲ್ಲಿ ನಾಲ್ಕು ಇಡ್ಲಿ ಕಟ್ಟಿಸಕೊಂಡು ಮನೆಸೇರಿದಾಗ ಸುಮಾರು ರಾತ್ರಿ ಎಂಟಾಗಿರಬಹುದು. ಬಂದ ಚಿಲ್ಲರೆಎಲ್ಲಾ ಎಣಿಸಿದ ಮುರಳಿ ಒಂದು ಇಡ್ಲಿ ಕಮ್ಮಿ ತಂದಿದ್ರೆ ಎರಡ್ನೋರ್ ಆಗ್ತಿತ್ತು ಅಂದು ಪಕ್ಕದಲ್ಲಿದ್ದ ಬಾರಿಗೆ ಹೋಗಿ ಚಿಲ್ಲರೆಗಳನ್ನ ಗಟ್ಟಿ ಮಾಡಿಸಿಕೊಂಡು ಬಂದ. ಕಣ್ಣಿರಿನೊಂದಿಗೆ ಇಡ್ಲಿಯನ್ನು ನಂಚಿಕೊಂಡು ತಿಂದ ಗಂಗೆ ಮುರಳಿ ಮಗುವಿಗೆ ಹಾಲುಣಿಸಿ ಸಗಣಿ ಸಾರಿಸಿದ ನೆಲದಮೇಲೆ ಅಡ್ಡಾದರು. ಮೈಯಲ್ಲಿ ವಿಷ ಇದ್ರೂ, ಹಾಲಿನಂತೆ ನಗೋ ಮಗುವಿನ ಮುಖ ಗಂಗಮ್ಮ ಮತ್ತು ಮುರುಳಿಗೆ ಸ್ಪೂರ್ತಿ ತಂದಿದ್ರೆ, ಎರಡು ತಿಂಗಳಲ್ಲಿ ಚಿಕಿತ್ಸೆ ಆಗಿಲ್ಲಾ ಅಂದ್ರೆ ಮಗು ಉಳಿಯೋದಿಲ್ಲ ಅಂದ ಡಾಕ್ಟರ್ ಮಾತು ಅವರ ಆಯಾಸ, ದಣಿವನ್ನು ಮೆದುಳಿನ ಗಮನಕ್ಕೆ ತರದೇ ಅಲೆದಾಡುವ ಅವರ ಕಾಲುತುಳಿತಕ್ಕೆ ಸಿಲುಕುವಂತೆ ಮಾಡಿತ್ತು.
ಗುಡಿಸಲ ಮೂಲೆಯಲ್ಲಿ ಇಟ್ಟಿದ್ದ ಸಣ್ಣಗಾತ್ರದ ವಿಷದ ಬಾಟಲಿಯನ್ನು ನೋಡುತ್ತಾ ಮುರಳಿ “ಇದನ್ನ ತಗಾಳ ದಿನ ಬರಬಾರ್ದು ಗಂಗಾ” ಎಂದ. “ಬರಲ್ಲಾ ಬಿಡು, ಇಬ್ಬರಿಗೆ ಒಂದೇ ಮಗು ಇರೋದು, ನಾವು ಮಾಡಿಲ್ಲದ ತಪ್ಪಿಗೆ ದೇವ್ರು ಎಲ್ಲಾ ಕಸ್ಕಂಡು ಮಗೂಗೆ ಇಂಥ ಕಾಯಿಲೆ ಕೊಟ್ಟು ಪರೀಕ್ಷೆ ಮಾಡ್ತದಾನ ಅಷ್ಟೆ. ಎಲ್ಲಾ ಸರಿ ಆಗ್ತತೆ ಬಿಡು. ಮುಂದಿನ ವಾರ ಡಾಕ್ಟ್ರು ಬರಾಕೇಳ್ಯಾರಲಾ ನಾನು ಹೋದಾಗ ಹಣ ಹೊಂದಿಕೆ ಮಾಡ್ತಿದೀವಿ, ಯಾವಾಗ ಅಡ್ಮಿಟ್ ಮಾಡ್ಕೊಂತೀರಿ ಅಂತ ಕೇಳಿ ಬರ್ತೀನಿ. ನೀ ಚಿಂತೆ ಬಿಡು ಮುರುಳಿ, ಎಲ್ಲಾ ಸರಿಹೋಗ್ತತೆ.” ಎಂದು ಮುರಳಿಗೆ ದುಃಖ ತುಂಬಿದ ಧ್ವನಿಯಿಂದ ಸಮಾಧಾನ ಮಾಡಿದಳು.
ಸುಮಾರು ಒಂದು ಇಪ್ಪತ್ತು ಒಪ್ಪತ್ತೈದ್ ಸಾವಿರ ಆಗಿರಬಹುದು. ಇನ್ನೂ ಇಪ್ಪತ್ತು ಸಾವಿರ ನಾವು ಗೆದ್ದಿ, ನಮ್ ಮಗ ನಮಗೆ ಉಳಿತಾನ. ನಾಳೆಯಿಂದ ಸ್ವಲ್ಪ ಬೇಗ ಹೋಗಿ ಕೇಳಬೇಕು, ರಾತ್ರಿ ಹೊತ್ತಾಗಿ ಬರಬೇಕು ಹಂಗಾದ್ರೆ ಜಲ್ದಿ ರೊಕ್ಕ ಹೊಂದ್ಸುಬೋದು ಎಂದು ಮನದಲ್ಲಿ ಲೆಕ್ಕಾಚಾರ ಮಾಡಿ ಮಲಗಿದ್ದ ಮುರಳಿ, ಬೆಳಿಗ್ಗೆ ತಿಪ್ಪೆಯಲ್ಲಿ ಒದ್ದಾಡಿ ಚಿನ್ನಾಟವಾಡುತ್ತಿದ್ದ ಹಂದಿಗಳ ಸುಪ್ರಭಾತದಿಂದ ಎಚ್ಚೆತ್ತು. ಗಂಗೆಯನ್ನು ಎಬ್ಬಿಸಿ ರಾತ್ರಿಯ ಯೋಜನೆಯನ್ನು ವಿವರಿಸಿದ. ಗಂಗೆಗೆ ಮುರಳಿಯ ಭರವಸೆಯೇ ಆನಂದವನ್ನು ತಂದುಕೊಟ್ಟು ಹುರುಪಿನಿಂದ ನಡೆದಳು. ಪ್ರತಿರಾತ್ರಿ ಎಣಿಸಿ ಗಟ್ಟಿಮಾಡಿಸಿದರೂ ಹಣ ಮೂರಂಕಿಯಿಂದ ನಾಲ್ಕಂಕಿಗೆ ಜಿಗಿಯಲೇಇಲ್ಲ.
ನಾಲ್ಕುದಿನದ ಬಳಿಕ ಗುಡಿಸಲಿನ ಹೊರಗೆಕೂತು ಬೆನ್ನ ಹಿಂದೆ ಎರಡೂ ಕೈಯೂರಿ ಆಕಾಶದ ಚುಕ್ಕಿಗಳನ್ನು ನೋಡುತ್ತಾ “ಡಾಕ್ಟ್ರುಏನಂದ್ರು?” ಎಂದ ಮುರಳಿ ಮಾತಿಗೆ “ಡಾಕ್ಟ್ರು ಊರಿಗೋಗ್ತಿದಾರಂತೆ, ಸೋಮವಾರ ಬೆಳಿಗ್ಗೆ ಬರ್ತಾರಂತೆ, ಸೋಮವಾರ ಬಂದು ಮಗೂನಾ ಅಡ್ಮಿಟ್ ಮಾಡು ಅಂದ್ರು” ಎಂದು ತುಸು ಉತ್ಸಾಹದ ಧ್ವನಿಯಿಂದ ಹೇಳಿದಳು. “ನಾವು ಕಳ್ಕಂಡ್ವಿ ಅನ್ಕಂಡೆ, ನೀನೇಳಿದ್ದೇ ಸರಿ. ಎಲ್ಲಾ ಸರಿಗಾಗ್ತತೆ. ನಮ್ ಮಗ ನಮ್ಗೆ ಸಿಕ್ತಾನ” ಎಂದು ಮುರುಳಿ ಹೇಳಿತ್ತಿದ್ದಂತೆ ಆಕಾಶದ ಚುಕ್ಕಿಯೊಂದು ಚಿಮ್ಮಿ ಪಕ್ಕದ ತಿಪ್ಪೆಯ ಹಿಂದೆ ಮಾಯವಾಯ್ತು. ಇಬ್ಬರೂ ಒಬ್ಬರ ಮುಖ ಒಬ್ಬರು ನೋಡಿಕೊಂಡು ಮುಗುಳ್ನಕ್ಕು ಕೂಸನ್ನೆತ್ತಿ ಮುದ್ದಿಸಿದರು.
ಮುಂದುವರಿಯುವುದು…
Gautham Rati
Facebook ಕಾಮೆಂಟ್ಸ್