ಅದೇ ಸಮಯದಲ್ಲಿ ಸಂವೇದನಾ ರೆಕ್ಕೆ ಬಲಿತ ಹಕ್ಕಿಯಂತೆ ಹಾರುತ್ತಿದ್ದಳು. ಈಜಲು ಕಲಿತ ಪುಟ್ಟ ಮೀನಿನಮರಿಯ ಹಿಗ್ಗು ಅವಳದ್ದು. ಈಗಷ್ಟೆ ಕಣ್ತೆರೆದ ಚಿಕ್ಕ ಮಗುವಿನ ಕುತೂಹಲ ಅವಳಿಗೆ ಪ್ರಪಂಚದ ಬಗ್ಗೆ. ಹೊಸ ಜಗತ್ತಿಗೆ ಬಂದ ಅವಳಿಗೆ ಏನಿದೆ ಹೇಗಿದೆ ಎಂದು ನೋಡುವ ಮಾತನಾಡುವ ಹಂಬಲ. ಇಡೀ ಜಗತ್ತನ್ನೇ ಓಡಾಡಿಬಿಡುವಷ್ಟು ಆತುರ. ಅಪರೂಪಕ್ಕೆಂಬಂತೆ ಒಬ್ಬಿಬ್ಬರು ಮನುಷ್ಯರು ಓಡಾಡುತ್ತಿದ್ದರು. ರೆಕ್ಕೆ ಕಟ್ಟಿದಂತೆ ಹಾರುವ ಕಾರ್ ಗಳು, ಕಣ್ಣೆತ್ತಿದಷ್ಟೂ ಎತ್ತರಕ್ಕೆ ಕಟ್ಟಡಗಳು. ಜನರ ಗುಂಪು ಕಾಣಸಿಗುತ್ತಿಲ್ಲ, ಗಲಾಟೆ ಕೇಳಿಸುತ್ತಿಲ್ಲ. ಜನರು ಇರುವರೋ ಇಲ್ಲವೋ ಎಂಬುದೂ ತಿಳಿಯುತ್ತಿಲ್ಲ.
ಮುಂದೇನು ಮಾಡಬೇಕೆಂದು ಸಂವೇದನಾಳಿಗೆ ಅರ್ಥವಾಗಲಿಲ್ಲ. ಮಾಡಲೇನು ಕೆಲಸವಿಲ್ಲ, ಮಾಡದಿದ್ದರೆ ಸಮಯ ಕಳೆಯುವುದಿಲ್ಲ. ನೋಡಬೇಕೆಂದರೆ ಎಲ್ಲ ಕಡೆ ಇದಕ್ಕೆ ಹೊರತಾಗಿ ಹೊಸತೇನೂ ಸಿಗುವುದಿಲ್ಲ.
ಒಬ್ಬಳೇ ಎಲಿ ಹೋಗಬೇಕು? ಏಕೆ ಹೋಗಬೇಕು? ಎಂಬ ಯೋಚನೆ ಕಾಡಿತು. ಈ ಭೂಮಿಯ ಮೇಲೆ ಅದೆಷ್ಟೋ ವರ್ಷಗಳಿಂದ ಬದುಕುತ್ತಲೇ ಇರುವವರು ಏನು ಮಾಡಿಕೊಂಡು ದಿನ ಕಳೆಯುತ್ತಾರೆ. ಸಾವಿಲ್ಲದವರಿಗೆ ದಿನಗಳು ಕಳೆಯುವುದೇ ಇಲ್ಲ; ಕಳೆದ ದಿನಗಳು ಮತ್ತೆ ಕೂಡುತ್ತಲೇ ಹೋಗುತ್ತವೆ. ಸಮಯ ಕೊಳ್ಳಲು ಅವರೆಲ್ಲ ಏನು ಮಾಡುತ್ತಾರೆ? ಸಾಯದೇ ಇರುವುದು ಸತ್ಯವಾದರೂ ಅವರೆಲ್ಲರೂ ಮನುಷ್ಯರೇ. ಅವರ್ಯಾರೂ ರೋಬೊಗಳಲ್ಲ, ಆದರೂ ಅತೀ ಬುದ್ಧಿವಂತ ಜೀವಿಗಳೇ. ಹೀಗಾದ ಮೇಲೆ ಹೇಗೆ ದಿನ ಕಳೆಯುತ್ತಾರೆ? ಏನು ಮಾಡುವುದಿಲ್ಲವೆಂದರೂ ಏನು ಮಾಡಿ ದಿನ ಕೊಲ್ಲುತ್ತಾರೆ? ಇಂತಹ ಬದುಕು ಸಾಧ್ಯವಾಗುವುದಾದರೂ ಹೇಗೆ?
ಒಂದರ ಹಿಂದೆ ಒಂದರಂತೆ ಪ್ರಶ್ನೆಗಳ ಸರಪಳಿ ಮುಗಿಯುತ್ತಲೇ ಇಲ್ಲ. ಅತಿಯಾದ ತಂತ್ರಜ್ಞಾನ, ವಿಪರೀತವೆಂಬಂತೆ ವೈಭವೀಕರಣ, ಸ್ವಲ್ಪ ಹೆಚ್ಚೆಂಬ ಯಂತ್ರೀಕರಣ…. ಭೂಮಿಯ ಬಗ್ಗೆ ಇಂಥದ್ದೊಂದು ಅನಿಸಿಕೆ ಬೆಳೆಸಿಕೊಂಡಿರಲೇ ಇಲ್ಲ ಸಂವೇದನಾ. ಅದೇಕೋ ಅಸಹ್ಯವೆನಿಸಿದಂತಾಯಿತು ಸಾಯದೆ ಬದುಕುವವರ ಬದುಕಿನ ಬಗ್ಗೆ, ಬರಡಾಗಿ ಹೋಗುತ್ತಿರುವ ಭೂಮಿಯ ಬಗ್ಗೆ. ಎಲ್ಲವನ್ನು ಮಷಿನ್ ಗಳೇ ಮಾಡುತ್ತಿವೆ ಎಂದಾದ ಮೇಲೆ ಭೂಮಿಯ ಮೇಲೆ ಮನುಷ್ಯನ ಚಿತ್ರಣವಾದರೂ ಏನು? ಅವನ ಅಸ್ತಿತ್ವವಾದರೂ ಏಕೆ?
ಅನಿವಾರ್ಯತೆಯೇ ಇಲ್ಲದ ನಿರಂತರ ಬದುಕಿನ ಬಗ್ಗೆ ಹೇಸಿಗೆಯೆನಿಸಿತು. ಮನದಲ್ಲಿಯೇ ಆತ್ಮನ ಮೇಲೆ ಸಿಡುಕಿಕೊಂಡಳು. ಈ ಭೂಮಿಯ ಮೇಲೆ ನನ್ನನ್ನೇಕೆ ಸೃಷ್ಟಿಸಿದೆ ಆತ್ಮ? ನಾನೀಗ ಏನು ಮಾಡಬೇಕು? ಅವಳ ಗೊಂದಲಗಳ ಗೂಡಿಗೆ ಹೊರಬರಲು ಬಾಗಿಲೇ ಇಲ್ಲ. ಉಸಿರು ಕಟ್ಟುತ್ತಿದೆಯೆಂದೆನಿಸಿತು.
ತನ್ನ ಕೆಲಸಗಳನ್ನೆಲ್ಲ ಮಷಿನ್ ಗಳಿಗೆ ವರ್ಗಾಯಿಸಿ ಜವಾಬ್ದಾರಿಯಿಲ್ಲದ ಅಸಭ್ಯ ವರ್ತನೆಗಳಿಂದ ತುಂಬಿಕೊಂಡು ಮನುಷ್ಯ ತನ್ನತನವನ್ನೇ ಕಳೆದುಕೊಂಡ. ತನ್ನ ಹಿಡಿತದಲ್ಲಿದ್ದ ಎಲ್ಲವನ್ನೂ ಮತ್ಯಾವುದೋ ನಿಯಂತ್ರಿತ ವಸ್ತುವಿನ ಕೈವಶವಾಗಿಸಿದ ಮನುಷ್ಯ. ಇದೇ ಅಲ್ಲವೇ ಮನುಕುಲದ ಸಾವು? ಇಲ್ಲೇನು ಉಳಿದಿದೆ, ಎಲ್ಲವೂ ಯಾವಾಗಲೋ ಸತ್ತು ಹೋಗಿವೆ. ಜೀವವಿದ್ದರೂ ನಿರ್ಜೀವಿ, ಭಾವವಿದ್ದರೂ ನಿಸ್ತೇಜ.. ವರ್ಷಿಯ ಆಲೋಚನೆಗಳು ಸರಿಯಾಗಿಯೇ ಇವೆ, ಒಂದರ್ಥದಲ್ಲಿ ಒಳ್ಳೆಯ ಕೆಲಸವನ್ನೇ ಮಾಡುತ್ತಿದ್ದಾನೆ. ಒಮ್ಮೆ ಎಲ್ಲವೂ ನಾಶವಾಗಿ ಮತ್ತೆ ಹೊಸ ಸೃಷ್ಟಿಯಾಗಬೇಕು. ನಿತ್ಯನೂತನವಾಗಬೇಕು. ಸತ್ತು ಹೋದವರು ಭೂಮಿಯ ಮೇಲೆ ಬದುಕಿಯೇ ಇರುವ ಆಟ ಸರಿಯಿಲ್ಲ, ಬದಲಾವಣೆ ಬೇಕು ಎನ್ನಿಸಿತು ಸಂವೇದನಾಳಿಗೆ.
ತಟ್ಟನೆ ಆತ್ಮ ನೆನಪಾದ ಅವಳಿಗೆ, ತನ್ನ ಹಣೆಯ ಮೇಲೆ ನವಿರಾಗಿ ಕೈ ಆಡಿಸುತ್ತ ಕುಳಿತಿದ್ದ ಆತ್ಮ ನೆನಪಾದ.”ನಿನಗೆ ಭಾವನೆಗಳಿಲ್ಲವೇ?” ಎಂದು ತನಗರಿವಿಲ್ಲದೆಯೇ ಪ್ರೀತಿಯ ಯಾಚಿಸಿದ ಮುಗ್ಧ ಆತ್ಮ ನೆನಪಾದ. ಆ ಸ್ಪರ್ಶದಲ್ಲಿದ್ದ ಸಂವೇದನೆ ಎದೆಯ ಕದವ ತಟ್ಟಿತು. ಮಾತಿನೊಳಗಿನ ಮುಗ್ಧತೆ ಮನದ ಮುಗಿಲು ಮುಟ್ಟಿತು. ಆ ಸ್ಪರ್ಶ ನನಗೆ ಹಿತವೆನಿಸಿತ್ತೆ? ಅವನ ಮಾತುಗಳನ್ನು ಇಷ್ಟಪಟ್ಟೆನಾ? ನಾನೇಕೆ ಆತನ ಮೇಲೆ ರೇಗಿ ಬಂದೆ? ಬೇಸರವೆನಿಸಿತು ದುಡುಕಿದ ಬುದ್ಧಿಯ ಬಗ್ಗೆ. ಈ ಭೂಮಿಯನ್ನು ಇಲ್ಲಿರುವ ನಿರಂತರ ಬದುಕುವಿಕೆಯನ್ನು ಸಹಿಸಲಸಾಧ್ಯನಾದ ಆತ್ಮ ಹೊಸತನ್ನು ಸೃಷ್ಟಿಸಲು ಹೊರಟಿದ್ದ. ಆತ ಅಬಯಸುತ್ತಿರುವುದಾದರೂ ಏನನ್ನು? ಎಲ್ಲವೂ ತಿಳಿಯತೊಡಗಿತು ಅವಳಿಗೆ. ಮೊದಲಬಾರಿಗೆ ನಾನು ಭಾವ ಜೀವಿಯಾಗುತ್ತಿರುವೇನಾ? ಎನ್ನಿಸಿತು.
ಇಲ್ಲ ನಾನು ಭಾವನೆಗಳಿಗೆ ಅತೀತ ಎಂದು ತನ್ನನ್ನೇ ಸಮರ್ಥಿಸಿಕೊಂಡಳು. ಬದಲಾವಣೆಯೇ ಬದುಕಿನ ನಿಯಮ. ಬಹುಶಃ ಅವಳಿಗರಿವಿರದೆ ಭಾವ ಜೀವಿಯೆ ಆಗುತ್ತಿದ್ದಳು ಇಂಚಿಂಚಾಗಿ.
ಈ ಭಾವನೆಗಳು ಸಂಬಂಧಗಳು ಎಂದರೇನು? ಇವುಗಳೆಲ್ಲ ಅಗತ್ಯವೇ ಬದುಕಿಗೆ? ಕೂಡಿ ಬಾಳು, ಸಹಾಯ ಮಾಡು… ಬಂಧನಗಳಲ್ಲಿ ಸಿಲುಕಿಕೊಂಡಂತಲ್ಲವೇ? ಬಂಧನಗಳಿಲ್ಲದ ಬದುಕೇ ಹಿತ; ಆದರೂ ಒಂಟಿತನವೆಂಬುದು ಕಾಡುವ ನರಕದಂತೆ. ಯಾವ ಬದುಕು ಸಹ್ಯ ಹಾಗಾದರೆ? ಬದುಕು ಪೂರ್ತಿ ಉತ್ತರವಿಲ್ಲದ ಪ್ರಶ್ನೆಗಳ ಕಾಲಿ ಕಾಗದ. ಕಣ್ಮುಚ್ಚಿ ಕುಳಿತಳು ಅವಳಷ್ಟಕ್ಕೆ.
ಮಾಡಲು ಕೆಲಸಗಳಿಲ್ಲದಿದ್ದರೆ ಹುಚ್ಚು ಯೋಚನೆಗಳು ಹೆಚ್ಚು ಕಾಡುತ್ತವೆ ಸುಮ್ಮನೆ ಮಲಗಿಬಿಡಬೇಕು ಎಂಬ ದಾರಿ ಹೊಳೆಯಿತು. ಎಲ್ಲಿ ಮಲಗಬೇಕು? ಇಲ್ಲಿ ನನ್ನ ಮನೆ ಯಾವುದು? ಇಷ್ಟಕ್ಕೂ ಮನೆಯೆಂದರೆ ಏನು? ನಾಲ್ಕು ಗೋಡೆಗಳ ಮೇಲೊಂದು ಸೂರು ಅಥವಾ ಬಟಾ ಬಯಲು?
ಸೂರಿನಡಿ ಬಂಧನಗಳು, ಇಷ್ಟವಿಲ್ಲದ್ದು. ಬಯಲಿನಲ್ಲಿ ಪೂರ್ತಿ ಸ್ವಾತಂತ್ರ್ಯ ಅಷ್ಟೇ ಏಕತಾನತೆ.. ಮನೆಯನ್ನು ಹುಡುಕುವುದು ಹೇಗೆ? ಕಿರುಚಬೇಕೆನ್ನಿಸುವಷ್ಟು ಗೊಂದಲಗಳು. ನಾನು ಹುಟ್ಟಿದ ಜಾಗವೇ ನನ್ನ ಮನೆ. ಅಲ್ಲಿರುವುದೇ ಸೂಕ್ತ. ಸರಿ ತಪ್ಪುಗಳ ಯೋಚನೆಗೆ ಸಮಯವಿಲ್ಲ ಹೋಗಿ ಸೇರಬೇಕು ಅಲ್ಲಿಗೆ, ಹೋಗುತ್ತೇನೆ ಅಷ್ಟೆ ಎಂದು ಸುಸ್ತಾದ ಹೆಜ್ಜೆಯನೆತ್ತಿ ಇಡತೊಡಗಿದಳು ಮುಂದೆ.. ಹುಟ್ಟಿದ ಜಾಗದೆಡೆಗೆ.. ಆತ್ಮನ ಪ್ರಪಂಚಕ್ಕೆ ಸನಿಹವಾಗುತ್ತ.. ಒಂದೊಂದೇ ಹೆಜ್ಜೆ.. ಒಂದರ ಹಿಂದೆ ಇನ್ನೊಂದು…
ಉತ್ತರ ಸಿಗದೇ ಕಾಡಿಸಿದ ಪ್ರಶ್ನೆಗಳೂ ಅವಳನ್ನು ಹಿಂಬಾಲಿಸಿದವು; ನೆರಳಂತೆ ಕಾಲ ಬುಡ ಸೇರಿದವು. ಒಂದರ ಹಿಂದೆ ಇನ್ನೊಂದು…
Facebook ಕಾಮೆಂಟ್ಸ್