X
    Categories: ಅಂಕಣ

ಅನಂತಮೂರ್ತಿ ಸಂದರ್ಶನ

ಅನಂತಮೂರ್ತಿ ಸಂದರ್ಶನ

ಹುಟ್ಟಿದ್ದು: ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಮೇಳಿಗೆಯಲ್ಲಿ. 1932ರ ಡಿಸೆಂಬರ್ 21. ಅಪ್ಪ ಊರಿನ ಶಾನುಭೋಗ ರಾಜಗೋಪಾಲಾಚಾರ್ಯರು. ಜನಿವಾರವನ್ನೇ ಚಾದರವೆಂದು ಹೊದ್ದುಕೊಳ್ಳುತ್ತಿದ್ದ ಮಡಿವಂತ ಮಾಧ್ವ ಬ್ರಾಹ್ಮಣ ಮನೆತನ. ಮಾಣಿ ಅನಂತಮೂರ್ತಿಯ ವಿದ್ಯಾಭ್ಯಾಸ ಹತ್ತಿರದ ದೂರ್ವಾಸಪುರದಲ್ಲಿ. ತಲೆಯಲ್ಲಿ ಶಿಖೆ ಬಿಟ್ಟು ಸೊಂಟಕ್ಕೆ ಕಚ್ಚೆ ಕಟ್ಟಿ ಹೆಗಲಿಗೆ ಪಾಣಿಪಂಚೆ ಸುತ್ತಿಕೊಂಡು ಹಗಲಿರುಳು ವೇದ, ಸಂಸ್ಕೃತ ಅಧ್ಯಯನ ಮಾಡಿದ ಮೇಲೆ ಪ್ರಾಥಮಿಕ ವಿದ್ಯಾಭ್ಯಾಸ ನಡೆದದ್ದು ಹತ್ತಿರದ (ಅಂದರೆ ಹತ್ತೇ ಕಿಲೋಮೀಟರ್ ದೂರದ!) ತೀರ್ಥಹಳ್ಳಿಯಲ್ಲಿ.

ಮಲೆನಾಡಿನ ಹಚ್ಚಹಸುರಿನ ಹೊದಿಕೆಯಡಿ ಅಸೀಮ ಕುತೂಹಲಿಯಾಗಿ ಜೀವನದ ಪ್ರಥಮ ಪಾಠಗಳನ್ನು ಕಲಿತ ಅನಂತಮೂರ್ತಿಗೆ ಮೊದಲ ಹದಿನಾರು ವರ್ಷ – ಮಲೆನಾಡ ಆ ತಾಯ ಸೆರಗೇ ಭೂಮಂಡಲ. ಅಲ್ಲಿ ಕಾಡಲ್ಲಿ ಗುಟುರು ಗುಟ್ಟುವ ಕಪ್ಪೆ, ಜೀರುಂಡೆಗಳೇ ಸಂಗಾತಿಗಳು. ಇರುಳಿಳಿದ ಮೇಲೆ ಹುಲಿಚಿರತೆಗಳ ಓಡಾಟಕ್ಕೆ ಬೆದರಿ ಕೊರಳಗಂಟೆ ಆಡಿಸಿ ಮನೆಯ ಬಾಗಿಲ ಅಗುಳಿ ಹಾಕಲು ಹಾತೊರೆದು ಹೇಳುತ್ತಿದ್ದ ದನಕರುಗಳ ಜಂಗುಳಿಯ ಮಧ್ಯೆ, ದೇವರೆದುರು ದೀಪ ಹಚ್ಚಿ ಕೂತು ಮಂತ್ರ ಹೇಳಿ ಹುಲಿಯನ್ನು ಓಡಿಸುತ್ತೇನೆಂಬ ಅಜ್ಜನ ಆತ್ಮಛಲದ ಮಧ್ಯೆ – ಬೆಳೆದ ಅನಂತಮೂರ್ತಿಗೆ ಮುಂದೊಂದು ದಿನ ಇವೇ ತನ್ನ ಸಾಹಿತ್ಯದ ಪರಿಕರಗಳಾಗುವ ಸಂಗತಿ ಹೊಳೆದಿತ್ತೋ ಇಲ್ಲವೊ!

ಮುಂದೆ ಅವರು ಮೈಸೂರಿಗೆ ಬಂದರು. ಮಾನಸ ಗಂಗೋತ್ರಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಬಳಿಕ  ಕಾಮನ್’ವೆಲ್ತ್ ಸ್ಕಾಲರ್’ಶಿಪ್ ಪಡೆದು ಇಂಗ್ಲೆಂಡಿಗೆ ಪಯಣ. ಬರ್ಮಿ೦ಗ್’ಹ್ಯಾ೦ ವಿವಿಯಲ್ಲಿ ಡಾಕ್ಟರೇಟ್ ಪದವಿ. ಅದರ ಮಧ್ಯೆಯೇ ಬರೆದ ಸಂಸ್ಕಾರ ಕಾದಂಬರಿ. ಚಲನಚಿತ್ರವಾಗಿ ಕ್ರಾಂತಿ ಎಬ್ಬಿಸಿದ, ಪ್ರಶಸ್ತಿಗಳ ಮೇಲೆ ಪ್ರಶಸ್ತಿಗಳನ್ನು ಬಾಚಿಕೊಂಡ ಕತೆ – ಸಿನೆಮಾ.

1970ರಲ್ಲಿ ಮೈಸೂರು ವಿವಿಯಲ್ಲಿ ಪ್ರಾಧ್ಯಾಪನ.  ಬಳಿಕ 80ರ ದಶಕದಲ್ಲಿ ಕೇರಳದ ಮಹಾತ್ಮಾಗಾಂಧಿ ವಿವಿಯ ಉಪಕುಲಪತಿಯಾಗಿ ಆಯ್ಕೆ. ಪುಣೆಯ ಫಿಲ್ಮ್ ಮತ್ತು ಟೆಲಿವಿಶನ್ ಸಂಸ್ಥೆಯ ನಿರ್ದೇಶನದ ಹೊಣೆ. “ಎಂದೆಂದೂ ಮುಗಿಯದ”, “ಕತೆ”, “ಮೌನಿ”, “ಪ್ರಶ್ನೆ”, “ಕಾರ್ತೀಕ” – ಹೀಗೆ ಕತೆಗಳ ತೋರಣ ಕಟ್ಟಿ ಕನ್ನಡ ತಾಯ ಮನೆಯನ್ನು ಸಿಂಗರಿಸಿದ ಕತೆಗಾರ. ಸಂಸ್ಕಾರದ ಬಳಿಕ ಬಂದದ್ದು “ಭವ”, “ಭಾರತೀಪುರ”, “ಅವಸ್ಥೆ”, “ದಿವ್ಯ” ಕಾದಂಬರಿಗಳು. ಇಳಿವಯಸ್ಸಿನಲ್ಲಿದ್ದಾಗ ಅವರು ತಮ್ಮ ಮೊದಲ (ಅಪ್ರಕಟಿತವಾಗಿದ್ದ) ಕಾದಂಬರಿ “ಪ್ರೀತಿ ಮೃತ್ಯು ಭಯ”ವನ್ನು ಪ್ರಕಟಿಸಿದರು.

84ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, 94ರಲ್ಲಿ ದೇಶದ ಅತ್ಯುನ್ನತ ಸಾರಸ್ವತ ಗೌರವ – ಜ್ಞಾನಪೀಠ ಪ್ರಶಸ್ತಿ (ಕನ್ನಡಕ್ಕೆ ಆರನೆಯದು. ಕನ್ನಡ ಭಾಷೆಗೆ ಅತಿಹೆಚ್ಚು ಜ್ಞಾನಪೀಠಗಳನ್ನು ಪಡೆದ ಭಾಷೆಯ ಹೆಮ್ಮೆಯ ಕಿರೀಟ ತೊಡಿಸಿದ ಲೇಖಕ!), 95ರಲ್ಲಿ ಅವರು ಬಹುವಾಗಿ ಪ್ರೀತಿಸಿದ ಕತೆಗಾರ ಮಾಸ್ತಿಯ ಹೆಸರಿನ ಪುರಸ್ಕಾರದ ಗೌರವ, 98ರಲ್ಲಿ ಭಾರತ ಸರಕಾರ ಕೊಡಮಾಡಿದ ಪದ್ಮ ಭೂಷಣ, 2008ರಲ್ಲಿ ನಾಡೋಜ, ಮತ್ತು 2012ರಲ್ಲಿ ಕೇರಳ ಸರಕಾರ ನೀಡಿದ ಬಷೀರ್ ಪುರಸ್ಕಾರ.

ಅನಂತಮೂರ್ತಿಯವರದು ತೆರೆದ ಪುಸ್ತಕದಂತಹ ವ್ಯಕ್ತಿತ್ವ. ಅವರು ಹೇಳಿದ್ದನ್ನು ತಪ್ಪಾಗಿ (ಅಥವಾ ಸರಿಯಾಗಿಯೇ?) ಗ್ರಹಿಸಿಕೊಂಡು ಅವರ ಮೇಲೆ ವಾಗ್ಯುದ್ಧಕ್ಕೆ ಏರಿ ಹೋದವರಿದ್ದಾರೆ. ದ್ವಂದ್ವದಂತೆ ಕಾಣುವ ಅವರ ವ್ಯಕ್ತಿತ್ವದ ಹಲವು ಮುಖಗಳು ಕೆಲವರಿಗೆ ಒಗಟು, ಕೆಲವರಿಗೆ ಹಗೆ, ಚಪಲ ತೀರಿಸಿಕೊಳ್ಳಲು ಸರಕು. ಮಾತಾಡಲು ನಿಂತರೆ, ಎಂಥವರ ತಲೆಯನ್ನೂ ಪುಂಗಿಗೆ ಬಾಗಿದ ಹಾವಿನಂತೆ ಆಡಿಸುವ ಮೋಹಕ ಮಾತುಗಾರಿಕೆ, ಬರೆದರೆ ಕಣ್ಮುಂದೆಯೇ ಚಿತ್ರಪಟ ಓಡಿಸಿದಂತೆ ಶಬ್ದಗಳನ್ನು ಜೋಡಿಸಿ ಆಡಿಸುವ ಕತೆಗಾರಿಕೆ, ಕಣ್ಣುಗಳಲ್ಲಿ ಜಿನುಗುವ ಕಿಶೋರ ಮುಗ್ಧತೆ – ಕನ್ನಡಕ್ಕೊಬ್ಬರೇ ಅನಂತಮೂರ್ತಿ ಎಂದು ಧಾರಾಳವಾಗಿ ಹೇಳಬಹುದು! ಅನಂತಮೂರ್ತಿಯವರು ಯಾಕೋ ತನ್ನ ಕೊನೆಯ 2-3 ವರ್ಷಗಳಲ್ಲಿ ಆಡುವವರ ಹಲ್ಲಿಗೆ ಕಡಲೆಯಂತೆ ಸಿಕ್ಕಿಕೊಂಡರು. ಮಾತುಮಾತಿಗೆ ಒಂದು ನಿರ್ದಿಷ್ಟ ಧರ್ಮವನ್ನು ಹಂಗಿಸುತ್ತ, ಕೆರಳಿಸುತ್ತ ಆಡುವ ನಾಲಿಗೆಗೆ ಆಹಾರವಾದರು. ವಿಶ್ವವಿದ್ಯಾಲಯದ ಉಪಕುಲಪತಿ ಹುದ್ದೆಯನ್ನು ಜಾತಿಯಾಧಾರದ ಮೇಲೆ ನಿರ್ಧರಿಸಬೇಕೆಂದು ಅವರು ಹೇಳಿದ್ದು ದೊಡ್ಡವಿವಾದವನ್ನೇ ಸೃಷ್ಟಿಸಿತು. ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಯ ಹುದ್ದೆಯಲ್ಲಿರುವಾಗ ಚುನಾವಣಾ ಪ್ರಚಾರಕ್ಕಿಳಿದರು. ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ತೊಲಗುತ್ತೇನೆಂದರು. ಮೋದಿಯನ್ನು ಹಿಟ್ಲರ್ ಎಂದೂ, ಆತ ಪ್ರಧಾನಿಯಾದರೆ ಈ ದೇಶದಲ್ಲಿ ರಕ್ತಪಾತವಾಗುತ್ತದೆಂದೂ ಹೇಳಿಕೆ ಕೊಟ್ಟರು. ಕೊನೆಕೊನೆಗೆ ಕರ್ನಾಟಕದಲ್ಲೇ ಅರ್ಧಕ್ಕರ್ಧ ಜನರ ದ್ವೇಷವನ್ನು ವಿನಾಕಾರಣ ಕಟ್ಟಿಕೊಂಡರು. ಕೊನೆಗೂ ಅನಂತಮೂರ್ತಿಗಳು ತಾವು ನಂಬಿದ ತತ್ವಗಳಿಗಾಗಿ, ಅವು ಸರಿಯೋ ತಪ್ಪೋ, ಬದುಕಿದರು; ಕೊನೆಯವರೆಗೂ ಹೋರಾಡಿದರು ಎಂದು ಹೇಳಬಹುದು.

***

ಮಾತುಕತೆ ನಡೆದದ್ದು ಅವರ ಮನೆ ಸುರಗಿಯಲ್ಲಿ. ನಾನು ಅವರ ಮನೆಗೆ ಹೋದಾಗ, ಮೇಷ್ಟ್ರು ತುಸು ಜ್ವರದಿಂದ ಬಳಲುತ್ತಿದ್ದರು. ಮೈಮೇಲೆ ಶಾಲು ಹೊದ್ದುಕೊಂಡಿದ್ದರು. ಕೈಯಲ್ಲೊಂದು ಪುಸ್ತಕ. ಮೇಷ್ಟ್ರೇ, ಸಂದರ್ಶನ ಇನ್ನೊಂದು ದಿನ ಇಟ್ಟುಕೊಳ್ಳೋಣ. ಮಾತಾಡಿ ಆಯಾಸ ಮಾಡಿಕೊಳ್ಳಬೇಡಿ ಅಂದರೆ, ಹರಟೆ ಹೊಡೆಯುವುದಕ್ಕಿಂತ ಸಂತೋಷದ ಕೆಲಸ ಬೇರೆ ಯಾವುದಿದೆ! ಬಾ ಕೂತುಕೊ, ಮಾತಾಡೋಣ! ಅಂದುಬಿಟ್ಟರು. ಮಾತ್ರವಲ್ಲ, ನಿರರ್ಗಳವಾಗಿ ತಮ್ಮ ಎಂದಿನ ಆಪ್ತ ಮೆಲುದನಿಯಲ್ಲಿ ಎರಡು ಗಂಟೆ ಮಾತಾಡಿದರು.

***

ನಿಮ್ಮ ಹೆಸರಿಂದಾನೇ ಶುರುಮಾಡೋಣ. ನಿಮ್ಮ ಹೆಸರಲ್ಲಿ ಉಡುಪಿ ಇದೆ ಅಲ್ವ. ಇದು ಹೇಗೆ ಸೇರಿಕೊಂಡಿತು? ಉಡುಪಿಯ ಜೊತೆ ನಿಮ್ಮ ಸಂಬಂಧ ಯಾವ ಬಗೆಯದು?

ನನ್ನ ಪೂರ್ವಜರು ಉಡುಪಿಯವರು. ನನ್ನ ಅಜ್ಜ ಹುಟ್ಟಿದ್ದು ಉಡುಪಿಯಲ್ಲಿ. ಆಮೇಲೆ ಅವರು ಕೇರಳಕ್ಕೆ ಹೋದರು. ಅಲ್ಲಿ ಪೂಜೆಗೀಜೆ ಮಾಡ್ಕೊಂಡಿದ್ರು. ಆಯುರ್ವೇದ ಕಲಿತ್ರು. ನನ್ನಪ್ಪ ಕೇರಳದಲ್ಲಿ ಹುಟ್ಟಿದ್ರು. ಆಮೇಲೆ ಅವರೆಲ್ಲ ತಿರುಗಿ ಮಲೆನಾಡಿಗೆ ಬಂದ್ರು.

ನನ್ನ ತಾಯಿ ತುಳು ಮಾತಾಡ್ತಿದ್ರು. ನನ್ನಜ್ಜಾನೂ ತುಳು ಮಾತಾಡ್ತಿದ್ರು. ನನ್ನಪ್ಪ ಲೋಕಸಂಚಾರಿಯಾದ್ದರಿಂದ ಅಷ್ಟು ತುಳು ಮಾತಾಡ್ತಿರಲಿಲ್ಲ. ಹಾಗಾಗಿ ನನಗೊಂದು ಕ್ವಚಿತ್ತಾದ ಭಾಷೆಯ, ಉಡುಪಿಯ ಊಟ-ರುಚಿಯ ಸಂಬಂಧ ಇದೆ. ಉಡುಪಿಯ ಕಡೆಯ ಆಚರಣೆಗಳೆಲ್ಲ ನಮ್ಮ ಮನೆಯಲ್ಲಿತ್ತು. ಯಕ್ಷಗಾನದ ಜೊತೆಗೂ ಸಂಬಂಧವಿತ್ತು. ತಾಯಿಯ ತಂದೆ ತಾಳ ಮದ್ದಲೆಯಲ್ಲಿ ಭಾಗವಹಿಸ್ತಿದ್ರು. ನಾನೂ ಸ್ವಲ್ಪ ಕಾಲ ಉಡುಪಿಯಲ್ಲಿ ವಾಸವಿದ್ದೆ.

ನೀವು ಬಹಳ ಮಡಿವಂತ ಬ್ರಾಹ್ಮಣನಾಗಿ ಬಾಲ್ಯವನ್ನು ಕಳೆದವರು. ಆದರೆ ತಿರುಪತಿಯಲ್ಲಿ ಉಪನಯನ ಆದ ಮೇಲೆ ದೇವರನ್ನು ನೋಡಿದಾಗ ಇವನು ದೇವರಲ್ಲ ಅನ್ಸೋದಕ್ಕೆ ಶುರುವಾಯಿತು ಅಂತ ಹೇಳಕೊಂಡಿದೀರಿ. ಯಾಕೆ ಈ ಥರ ಆಯಿತು?

ಬಹಳ ಮುಖ್ಯವಾಗಿ ಗಾಂಧಿಯ ಹರಿಜನ ಪತ್ರಿಕೆಯನ್ನು ಮನೆಗೆ ತರಿಸ್ತಾ ಇದ್ರು. ನನ್ನಪ್ಪ ಅದನ್ನು ಓದ್ತಾ ಇದ್ರು. ಗಾಂಧೀಜಿಯವರಲ್ಲಿ ತೀವ್ರವಾದ ದೇವರ ಹುಡುಕಾಟ ಇದೆ. ಸತ್ಯವೇ ದೇವರು ಅಂತಾರೆ ಅವರು. ನಮ್ಮ ಆಚರಣೆಯಲ್ಲಿ ಇದ್ದದ್ದೆಲ್ಲ ಮೂಢನಂಬಿಕೆಯಲ್ಲಿ ಉಂಟಾಗುವ ದೇವರು. ಆದರೆ, ಸತ್ಯವೇ ದೇವರು ಅಂತಾದಾಗ ದೇವರ ಬಗ್ಗೆ ನಮ್ಮ ಆಸಕ್ತಿ ಇನ್ನಷ್ಟು ಗಂಭೀರವಾಗುತ್ತೆ. ಹಾಗಾಗಿ, ಅಷ್ಟೆಲ್ಲ ಬಂಗಾರ-ವಜ್ರ-ವೈಢೂರ್ಯಗಳನ್ನು ಹೇರಿಕೊಂಡ ವಿಗ್ರಹವನ್ನು ನನಗೆ ದೇವರು ಅಂತ ಒಪ್ಪಿಕೊಳ್ಳಲಿಕ್ಕೆ ಆಗಲಿಲ್ಲ.

ನಮ್ಮೂರಲ್ಲೇ ಒಂದು ಸಣ್ಣ ದೇವಾಲಯ ಇತ್ತು. ಪ್ರಕೃತಿಯ ಮಧ್ಯೆ. ಅಲ್ಲಿ ನನಗೆ ದೇವತಾ ಭಾವ ಮೂಡ್ತಿತ್ತು. ದೈವತ್ವದ ನಿರಾಕರಣೆ ನನ್ನಲ್ಲಿಲ್ಲ, ಹುಡುಕಾಟ ಇದೆ.

ಹಾಗಾದ್ರೆ ಇವತ್ತೂ ನೀವು ನಾಸ್ತಿಕರು ಅಂತ ಹೇಳ್ಕೊಳ್ಳಲ್ವ?

ಇಲ್ಲ. ನಾನು ನಾಸ್ತಿಕ ಅಲ್ಲ. ಆದರೆ, ಸುಲಭವಾಗಿ ನಂಬುವ ಆಸ್ತಿಕನೂ ಅಲ್ಲ.

ನಿಮ್ಮ ಮೈಸೂರಿನ ದಿನಗಳು ಹೇಗಿದ್ದವು?

ನನ್ನ ಊರು ಬಿಟ್ರೆ, ಇನ್ನೊಂದು ನನ್ನ ಊರು ಅಂತ ಅನ್ನಿಸೋದು ನನಗೆ – ಮೈಸೂರು. ಅಲ್ಲೇ ನನ್ನ ಸಾಹಿತ್ಯಲೋಕ ನಿರ್ಮಾಣವಾಯ್ತು. ಶಿವಮೊಗ್ಗದಲ್ಲಿ ನನ್ನ ರಾಜಕೀಯ ಲೋಕ ನಿರ್ಮಾಣವಾಯ್ತು. ಇವೆರಡೂ ಮುಖ್ಯವೇ.

ಅಲ್ಲಿ ಬಹಳ ಒಳ್ಳೇ ಸ್ನೇಹಿತರಿದ್ರು. ಹಲವು ಗುದ್ದಾಟಗಳ ನಡುವೆ ನಾನಲ್ಲಿ ಬದುಕಿದೆ, ಬೆಳೆದೆ. ಅಡಿಗರ ಸಂಪರ್ಕ ಆಯಿತು. ಮೈಸೂರಿನ ಕಾಫಿಹೌಸಿನಲ್ಲಿ ನನ್ನ ಬರವಣಿಗೆ ಶುರುವಾದದ್ದು.

ನೀವು ಮದುವೆಯಾದ ಸಂದರ್ಭ ಹೇಗಿತ್ತು? ಆಗ ನಿಮ್ಮ ಕಡೆಯಿಂದ ಅಥವಾ ಅವರ ಕಡೆಯಿಂದ ವಿರೋಧ ಬರಲಿಲ್ಲವಾ?

ನಾನು ಮೈಸೂರಿನಲ್ಲಿದ್ದಾಗಲೇ ಮದುವೆಯಾದದ್ದು. ಆದರೆ ನನ್ನ ಹೆಂಡತಿಯನ್ನು ನೋಡಿದ್ದು ಹಾಸನದಲ್ಲಿ. ಆಕೆ ಅಲ್ಲಿ ನನ್ನ ವಿದ್ಯಾರ್ಥಿನಿಯಾಗಿದ್ಲು. ಬಹಳ ವರ್ಷ ನಾನು ಕಾದೆ. ಯಾಕೇಂದ್ರೆ ನನ್ನ ತಂಗಿಗೆ ಮದುವೆ ಆಗ್ಬೇಕಾಗಿತ್ತು. ತಮ್ಮಂದಿರನ್ನು ಓದಿಸಬೇಕಾಗಿತ್ತು. ನಾನು ತುಂಬಾ ಮಡಿವಂತ ಕುಟುಂಬದಿಂದ ಬಂದಿದ್ದರಿಂದ, ನನ್ನ ಹಕ್ಕಿಗಿಂತ ಹೆಚ್ಚಾಗಿ ನನ್ನ ಕರ್ತವ್ಯಪ್ರಜ್ಞೆ ನನಗಿತ್ತು. ಹಾಗಾಗಿ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸಿದ ಮೇಲೆ ಮದುವೆಯಾದೆ.

ವಿರೋಧಗಳು – ಕಡಿಮೆಯಿತ್ತು. ನಾನು ಯಾವತ್ತೂ ಕುಟುಂಬದ ಸಂಬಂಧವನ್ನು ಕತ್ತರಿಸಿ ಕಳಕೊಳ್ಳಲಿಲ್ಲ. ಕಳಿತ ಹಣ್ಣು ಮರದಿಂದ ತೊಟ್ಟು ಕಳಚಿಕೊಂಡು ಉದುರಿದ ಹಾಗೆ ನಾನು ನನ್ನ ಸಂಪ್ರದಾಯದ ಕುಟುಂಬದಿಂದ ಬೇರೆಯಾದೆ, ಅಷ್ಟೆ.

ನಿಮ್ಮ ಎಲ್ಲ ಬರಹಗಳು ಧರ್ಮದ ವಿಷಯವಾಗಿ ಮಾತಾಡ್ತವೆ. ಸಂಸ್ಕಾರದಿಂದ ಹಿಡಿದು ಇತ್ತೀಚಿನ ಬರಹಗಳವರೆಗೆ.

ನೀವೂ ಅಂತಲ್ಲ, ನಗರ ಜೀವನಕ್ಕೆ ಒಗ್ಗಿ ಹೋದ – ಆಧುನಿಕ ಜೀವನ ನಡೆಸ್ತ ಇರುವ ಲೇಖಕರು ಕೆಲವರು ಕೂಡಾ ಧರ್ಮವನ್ನು ಬಿಡೋದಿಲ್ಲ.

ಇದು ನಮ್ಮ ಮಿತಿಯೋ ಶಕ್ತಿಯೋ?

ಶಕ್ತಿಯೇ. ಯಾಕೆಂದ್ರೆ ನಾವಿವತ್ತು ಎರಡು ವಿಷಯಗಳ ಬಗ್ಗೆ ವಿಮರ್ಶಾತ್ಮಕವಾದ ಧೋರಣೆ ತಳೆಯಬೇಕು. ಮೊದಲನೆಯದು – ಧರ್ಮ. ನಮ್ಮ ಜೀವನದ ಎಲ್ಲ ಮುಖ್ಯ ಘಟನೆಗಳನ್ನು ನಿರ್ಧರಿಸೋದು ಧರ್ಮ. ಬೆಳವಣಿಗೆ, ಸಾವು, ಇಷ್ಟಾನಿಷ್ಟಗಳು, ರುಚಿ,ಸಂಸ್ಕೃತಿ, ಶೌಚಕರ್ಮವನ್ನು ಕೂಡ ನಿರ್ಧರಿಸೋದು ಧರ್ಮ. ಹಾಗಾಗಿ ಅದನ್ನು ಗಂಭೀರವಾಗಿ ತಗೋಬೇಕು. ಅಂದರೆ ಕೇವಲ ಒಪ್ಪೋದೂ ಅಲ್ಲ, ನಿರಾಕರಿಸೋದೂ ಅಲ್ಲ. ಅದನ್ನು ವಿಶ್ಲೇಷಣೆಗೊಳಪಡಿಸಬೇಕು. ಇದರ ಜೊತೆಗೆ, ಆಧುನಿಕತೆ ಮತ್ತು ಪ್ರಗತಿಯನ್ನು ಕೂಡಾ ಗಂಭೀರವಾಗಿ ಚಿಂತಿಸಬೇಕಾಗ್ತದೆ.

ನಮ್ಮ ಮತಧರ್ಮಗಳು ಸಮಾಜವನ್ನು ನಿಂತ ನೀರಾಗಿ ಮಾಡಿದವು, ನಿಜ. ಅದು ಕೊಳೀತಾ ಇತ್ತು. ಈಗ ನಾವು ಹರೀಲಿಕ್ಕೆ ಶುರು ಮಾಡಿದೀವಿ. ಆದರೆ, ಎಲ್ಲಿಗೆ ಹರೀತಿದ್ದೀವಿ ಅಂತ ಗೊತ್ತಿಲ್ಲ.

ನಮ್ಮ ಜೀವನಕ್ರಮವನ್ನು ಒಂದು ಕಾಲದಲ್ಲಿ ನಿರ್ಧರಿಸ್ತಿದ್ದ ಧರ್ಮ ಮತ್ತು ಈ ಭೂಮಿಯನ್ನು ನಾಶ ಮಾಡ್ತಾ ನಮ್ಮ ಆಸೆ-ಆಕಾಂಕ್ಷೆಗಳನ್ನು ಬೆಳೆಸ್ತ ನಮ್ಮ ಮನಸ್ಸನ್ನು ಕೆಡಿಸ್ತ ಇರುವ ಆಧುನಿಕತೆ – ಈ ಎರಡೂ ನಮ್ಮ ವಿಮರ್ಶೆಯಡಿ ಬರಬೇಕು.

ಬಹುಶಃ ನಿಮ್ಮ ಈ ಮಾತುಗಳು ನಮ್ಮ ಕನ್ನಡ ಸಾಹಿತಿಗಳಿಗೆ ದಿಕ್ಸೂಚಿಯಾಗಬಹುದೇನೋ.

ನಾನು ಈಗ ಬರೀತಾ ಇರೋ ಕ್ರಮ ಹಾಗಿದೆ. ಸೂರ್ಯನ ಕುದುರೆಯ ನಂತರ ಆಧುನಿಕತೆಯನ್ನು ಪ್ರಶ್ನೆ ಮಾಡ್ತಾ ಬರೀತಾ ಇದೇನೆ.

ನಿಮ್ಮ ಮೇಲೆ ಬಹಳ ಪ್ರಭಾವ ಬೀರಿದವರು, ಕಾಡಿದವರು ಯಾರು?

ಕನ್ನಡದಲ್ಲಿ ಕಾರಂತರು, ಅಡಿಗರು, ಕುವೆಂಪು, ಬೇಂದ್ರೆ – ಇವರೆಲ್ಲ ಬಹಳ ಕಾಡಿದ್ದಾರೆ. ಇಂಗ್ಲೀಷಿನಲ್ಲಿ ಲಾರೆನ್ಸ್, ಯೇಟ್ಸ್, ಎಲಿಯೆಟ್. ಈ ಪೂರ್ವ-ಪಶ್ಚಿಮ ಎರಡೂ ಹತ್ತಿರವಾಗಿ ನನ್ನೊಳಗೆ ಸೇರಿಬಿಟ್ಟಿದಾವೆ. ಅವಷ್ಟನ್ನೂ ನಾನು ಸ್ವೀಕರಿಸಿದ್ದೇನೆ. ಮೂರನೇ ಜಗತ್ತಿನ ಲೇಖಕನ ವಿಶೇಷವೇ ಅದು. ಮೊದಲ ಜಗತ್ತಿನ ಲೇಖಕನಿಗೆ ಅವನ ಜಗತ್ತು ಗೊತ್ತು, ನಮ್ಮದು ಗೊತ್ತಿಲ್ಲ. ನಮಗೆ – ನಮ್ಮದೂ ಅವರದೂ – ಎರಡೂ ಜಗತ್ತುಗಳೂ ಗೊತ್ತು. ಹಾಗಾಗಿ ನಾವು ಅವರಿಗಿಂತ ಹೆಚ್ಚು ಹೊರೆಯನ್ನು ಹೊತ್ತವರು, ಮತ್ತು ಹೆಚ್ಚು ಆಸ್ತಿಯನ್ನು ಪಡೆದವರು ಕೂಡ.

ನೀವು ಸಾಹಿತಿ ಆಗ್ತೀನಿ ಅಂತ ಅಂದ್ಕೊಂಡಿದ್ರ? ಇಲ್ದೇ ಇದ್ರೆ ಬೇರೆ ಏನು ಆಗಬೇಕು ಅಂತ ಆಸೆ ಇತ್ತು?

ನನ್ನಪ್ಪನಿಗೆ ನಾನು ಗಣಿತ ಶಾಸ್ತ್ರಜ್ಞ ಆಗಬೇಕು ಅಂತ ಆಸೆಯಿತ್ತು. ನನಗದರ ಕಡೆಗೆ ಆಸಕ್ತಿಯೂ ಇತ್ತು, ಚಿಕ್ಕವಯಸ್ಸಿನಲ್ಲಿ. ಆದರೆ ಜೀವನದಲ್ಲಿ ಆದ ಅನೇಕ ಪಲ್ಲಟಗಳಿಂದ ಮತ್ತು ಅವನ್ನು ನಾನು ಸ್ವೀಕರಿಸ್ತಾ ಹೋದದ್ದರಿಂದ ಸಾಹಿತಿ ಆದೆ.

ಯಾವ ರೀತಿಯ ಪಲ್ಲಟಗಳು ಆಯ್ತು?

ಜೀವನಕ್ರಮದಲ್ಲಿ, ಮಡಿವಂತಿಕೆಯಲ್ಲಿ. ಭೂತಕಾಲದ ಸಂಗತಿಗಳಲ್ಲಿ ಎಷ್ಟನ್ನು ಒಪ್ಪಬಹುದು, ಎಷ್ಟನ್ನು ನಿರಾಕರಿಸಬಹುದು ಎಂಬುದರಲ್ಲಿ ನನ್ನ ಆಸಕ್ತಿ ಇತ್ತು. ನಮ್ಮಲ್ಲಿ ಬಹಳ ಜನರಿಗೆ ಹಳೆಯ ಕಾಲದ ಪ್ರೀತಿ ಇದೆಯಲ್ಲ, ಅದು ನಿಜ ಅಲ್ಲ. ಯಾವುದನ್ನು ನಿರಾಕರಿಸಬೇಕೋ ಅದನ್ನು ನಿರಾಕರಿಸದೇ ಇರೋದ್ರಿಂದ, ಯಾವುದನ್ನು ಪ್ರೀತಿಸಬೇಕೋ ಅದನ್ನು ಪ್ರೀತಿಸಲಾಗದ ಕುರುಡುತನ ಬರುತ್ತೆ. ಹೀಗೆ – ಯಾವುದು ಬೇಕಾದ್ದು, ಯಾವುದು ಬೇಡವಾದ್ದು – ಅನ್ನೋ ಚಿಂತನೆ ಇವತ್ತಿಗೂ ನನ್ನೊಳಗೆ ನಡೀತಾ ಇರುತ್ತೆ. ಇವತ್ತಿಗೂ ಅದೇ ಹುಡುಕಾಟದಲ್ಲಿ ಶಂಕರಾಚಾರ್ಯರನ್ನು ಮಧ್ವಾಚಾರ್ಯರನ್ನು ನಾನು ಓದ್ತೇನೆ.

ನಿಮ್ಮ ಕೃತಿಗಳ ವಿಷಯಕ್ಕೆ ಬರೋಣ. ನೀವು ದಲಿತರ ವಿಚಾರವಾಗಿ, ಹರಿಜನರ ವಿಚಾರವಾಗಿ, ಸಮಾಜದ ಕೆಳಸ್ತರದ ಜನರ ಬಗ್ಗೆ ಗದ್ಯ ಬರೀತೀರಿ, ಮಾತಾಡತೀರಿ, ಎಲ್ಲ ಸರಿ. ಆದರೆ, ನಿಮ್ಮ ಕತೆಗಳಲ್ಲಿ ಬ್ರಾಹ್ಮಣರ ಕುಟುಂಬಗಳ ಒಳಗಿನ ವಿಷಯಗಳೇ ಬರ್ತವಲ್ಲ? ಉದಾಹರಣೆಗೆ ಸಂಸ್ಕಾರದಲ್ಲಿ ಚಂದ್ರಿ ಹೊರಗಿನವಳೇ ಆಗಿ ಉಳೀತಾಳೆ. . .

ನೀವು ಹೇಳೋದು ನಿಜ. ಯಾಕೆಂದ್ರೆ ನನಗೆ ಯಾವುದನ್ನು ಒಳಗಿನಿಂದ ಕಾಣೋದಕ್ಕೆ ಸಾಧ್ಯವೋ ಅದನ್ನು ಒಳಗಿನಿಂದ ಕಂಡು ಬರೀಬಹುದು. ಯಾವುದನ್ನು ನನಗೆ ಕಾಣಲಿಕ್ಕೆ ಸಾಧ್ಯವಿಲ್ಲವೋ ಅದನ್ನು ಕಂಡಿದೇನೆ ಅನ್ನುವ ಸುಳ್ಳನ್ನು ಹೇಳಬಾರದು. ಅದೊಂದು ಕಾರಣ. ಇನ್ನೊಂದು – ನಾವು ಕಾಣುವ ರೀತಿಯಲ್ಲೇ ನಿಜವಾಗಿಯೂ ನಮ್ಮ ಪಾಲಿಗೆ ಅವರಿರೋದು. ನಾವು  ಮುಟ್ಟುವ, ನಮ್ಮ ಜೊತೆ ಊಟ ಮಾಡುವ ಜನ ಅಲ್ಲ ಅವರು. ನಮಗೆಲ್ಲ ಪ್ರಾಯ ಆದ ಮೇಲೆ ಅವರ ಜೊತೆ ಬೆರೆತೆವು ಅಷ್ಟೆ. ನನ್ನ ಬಾಲ್ಯದಲ್ಲಿ ಅವರು ಹೊರಗಿನವರು. ಇದು ನಮ್ಮ ಒಳಗೆ ಇರುವ ಟೊಳ್ಳನ್ನು ತೋರಿಸುತ್ತೆ ಅಂತ ನನಗೆ ಅನ್ನಿಸಕ್ಕೆ ಶುರುವಾಯ್ತು.

ದೇವಸ್ಥಾನಕ್ಕೆ ಆ ಜನರ ಪ್ರವೇಶ ಇಲ್ಲ, ದೇವರು ಅವರಿಂದ ದೂರ ನಿಲ್ತಾನೆ ಅನ್ನೋ ಕಾರಣಕ್ಕೇನೇ ದೇವರು ಅಪೂರ್ಣ ಅನ್ನುವ ಭಾವನೆ ನನ್ನಲ್ಲಿ ಬೆಳೀತು.

ನಿಮ್ಮ ಭಾರತೀಪುರದಲ್ಲಿ ಈ ಪ್ರಶ್ನೆ ಬರುತ್ತೆ.

ಹೌದು. ಅಲ್ಲಿ ಎಲ್ಲ ಹಂತಗಳಲ್ಲೂ ಅವರು ಬರ್ತಾರೆ. ಮೊದಲು ಬರೀ ದೂರದಲ್ಲಿರೋರು, ಆಮೇಲೆ ಕೇವಲ ಪಾಠ ಹೇಳಿಸ್ಕೊಳ್ಳೋರು, ಸ್ವಲ್ಪ ಹತ್ರ ಬರೋರು, ಮುಟ್ಟಕ್ಕೆ ಹೋದರೆ ಮುಟ್ಟಿಸ್ಕೊಳ್ಳದೇ ಇರೋರು, . . ಹೀಗೆ, ಹತ್ತಿರ ಆಗ್ತಾ ಹೋಗ್ತಾರೆ, ಆದರೂ ದೂರವಾಗೇ ಉಳೀತಾರೆ. ಇದೆಲ್ಲ ಹೇಗೆ ಅಂದ್ರೆ, ಈಗಿನ ಒಬ್ಬ ಅಮೆರಿಕದ ಬಿಳಿಯನಿಗೆ ಒಬ್ಬ ಕರಿಯನನ್ನು ತನ್ನ ಕತೆಯ ಪಾತ್ರ ಮಾಡೋದು ಬಹಳ ಕಷ್ಟ. ಇಂಥ ಕಷ್ಟವನ್ನು ಮೀರಿ ಬರೆದವರು – ಕಾರಂತರು ಚೋಮನ ದುಡಿಯಲ್ಲಿ, ಕುವೆಂಪು ಮಲೆಗಳಲ್ಲಿ ಮದುಮಗಳುನಲ್ಲಿ. ಒಬ್ಬ ಬ್ರಾಹ್ಮಣ ಹುಡುಗನಿಗೆ ಇಲ್ಲದೇ ಇರುವ ಸ್ವಾತಂತ್ರ್ಯ ಕುವೆಂಪು ಅವರಿಗಿತ್ತು.

ನಿಮಗೆ ಅದರ ಬಗ್ಗೆ ಏನಾದ್ರೂ ಬೇಸರ ಇದೆಯ?

ಖಂಡಿತ ಇದೆ. ಅದೊಂದು ಸಮಸ್ಯೆಯಾಗಿದೆ ನನಗೆ. ನನ್ನ ಒಳಬಾಳಿನ, ಲೇಖಕ ಪ್ರಪಂಚದ ವ್ಯವಸಾಯದ ಸಮಸ್ಯೆಯಾಗಿ.

ಅಪೂರ್ಣತೆಯ ಭಾವ ಈಗಲೂ ಇದೆ. ದಲಿತರ ಬಗ್ಗೆ ಅಂತಲ್ಲ, ಮುಸ್ಲಿಮರ ಜಗತ್ತಿಗೂ ನಾನು ಹೊರಗಿನವನೇ.

ನಿಮ್ಮ ಆವಾಹನೆ ನಾಟಕದ ಬಗ್ಗೆ ಒಂದು ಪ್ರಶ್ನೆ: ಇದು ನಿಜವಾಗಿ ಏನನ್ನು ಚರ್ಚಿಸುತ್ತೆ? ಇದನ್ನು ಬರೆದ ಸಂದರ್ಭದ ಬಗ್ಗೆ ಹೇಳಿ.

ನನ್ನೊಬ್ಬ ಸ್ನೇಹಿತ ತನ್ನ ಜಾತಿಯನ್ನು ಮುಚ್ಚಿಟ್ಟುಕೊಂಡಿದ್ದ. ಅದರಿಂದಾಗಿ ಅವನ ಇಡೀ ಜೀವನದಲ್ಲೇ ಅನೇಕ ಬದಲಾವಣೆಗಳಾಯ್ತು. ಇದನ್ನು ನಾಟಕೀಯವಾಗಿ ವೇದಿಕೆ ಮೇಲೆ ತರಬೇಕು ಅನ್ನಿಸಿತು. ಆದರೆ, ಆವಾಹನೆಯಲ್ಲಿ ಅದು ಸಂಪೂರ್ಣ ಯಶಸ್ವಿಯಾಯಿತು ಅಂತ ಹೇಳಲಾರೆ.

ಮತ್ತೆ ನೀವು ನಾಟಕಗಳನ್ನು ಬರೀಲಿಲ್ಲ.

ನನ್ನ ಕತೆಗಳೇ ನಾಟಕಗಳಾದವು.

ಆದರೆ ಇಲ್ಲಿನ ಅನೇಕ ಅಭಿನಯಗಳು ನಿಮ್ಮ ಕತೆಗಳಲ್ಲಿ ಕಾದಂಬರಿಗಳಲ್ಲಿ ಕೂಡ ಬಂದಿತ್ತು. ಘಟವಾಣಿ ಹೆಂಗಸರು, ಕರಟ ತುರಿಯೋದು, ಪಾತ್ರೆಗಳನ್ನು ಎತ್ತಿ ಒಗೆಯೋದು, ಸಣ್ಣಪ್ಪಯ್ಯನಂತಹ ಪಾತ್ರಗಳು. . .

ಇರಬಹುದು. ಅದೇ ವಿಚಾರಗಳು ಮತ್ತೆ ಬಂತು. ಆನಂತರ ನಾನು ಭಾರತೀಪುರವನ್ನು ಬರೆದೆ. ಅದೊಂದು ಬೇರೆ ರೀತಿಯ ಬರವಣಿಗೆಗೆ ನಾಂದಿಯಾಯಿತು.

ನಿಮ್ಮ ಮೊದಲ ಕಥಾಸಂಕಲನ ಎಂದೆಂದೂ ಮುಗಿಯದ ಕಥೆಯಿಂದ “ಪ್ರಶ್ನೆ”ಗೆ ಬರೋ ಹೊತ್ತಿಗೆ ನಿಮ್ಮಲ್ಲಿ ಬಹಳ ಬದಲಾವಣೆಗಳಾಗಿತ್ತು ಅಂತ ಅನ್ನಿಸ್ತದೆ.

ಖಂಡಿತ. ಒಂದು ‘leap’ ತಗೊಂಡೆ. ನಾನು ನನ್ನ ಆಲೋಚನಾ ಕ್ರಮ, ಗಾಢವಾಗಿ ಒಂದು ರೂಪಕ ಆಗೋದಕ್ಕೆ ಕಾಯ್ತಾ ಇರ್ತೀನಿ. ನನ್ನ ಹೊಸ ಚಿಂತನೆಗಳ ದೃಷ್ಟಿಯನ್ನು, ದರ್ಶನಗಳನ್ನು ನುಡಿಯೋ ತರಹ ನನ್ನ ಬರಹ ಇರಬೇಕು ಅಂತ ಬಯಸ್ತೇನೆ.

ಇನ್ನು “ಪ್ರಶ್ನೆ”ಗೆ ಬರುವ ಹೊತ್ತಿಗೆ ಕನ್ನಡದಲ್ಲಿ ಅನೇಕರು ಹೊಸಬಗೆಯಲ್ಲಿ ಬರೆಯೋದಕ್ಕೆ ಶುರು ಮಾಡಿದ್ದರು. ನವ್ಯ ಚಳುವಳಿ ಶುರುವಾಗಿತ್ತು. ಆ ಕಾಲಘಟ್ಟದಲ್ಲೇ ನಾನು ಹಲವು ಕತೆಗಳನ್ನು ಬರೆದೆ. ನಮ್ಮ ನವ್ಯದಲ್ಲಿ ಬಹಳ ಬಂಡಾಯ ಇದೆ. ನನ್ನ ಘಟಶ್ರಾದ್ಧ, ಅಡಿಗರ ಎಲ್ಲಾ ಪದ್ಯಗಳೂ ಬಂಡಾಯದ ಕೃತಿಗಳೇ. ಅವು ಯಾವುವೂ ಆತ್ಮರತವಲ್ಲ. ಒಂಟಿಯಾಗಿರುವುದಕ್ಕೂ ಆತ್ಮರತವಲ್ಲದಕ್ಕೂ ವ್ಯತ್ಯಾಸ ಇದೆ. ಈ ಛಾಯೆಯನ್ನು “ಪ್ರಶ್ನೆ”ಯಲ್ಲಿ ಬಂದ ಕತೆಗಳಲ್ಲಿ ನೋಡಬಹುದು.

ಪ್ರಶ್ನೆಯನ್ನು ಬರೆಯೋ ಕಾಲಕ್ಕೆ ನಿಮ್ಮ ಮನಸ್ಥಿತಿ ಹೇಗಿತ್ತು?

ಬಹಳ ಉದ್ವಿಘ್ನವಾಗಿತ್ತು. ನನಗೊಮ್ಮೆ ಬೇಂದ್ರೆ ಹೇಳಿದ್ರು – ನೀವು ಸ್ವಲ್ಪ ಅಸ್ವಸ್ಥರಿದ್ದೀರಿ ಅಂತ. ನಾನು ಹೇಳಿದೆ – ನೀವೂ ಸ್ವಲ್ಪ ಅಸ್ವಸ್ಥರೇ ಸಾರ್ ಅಂತ. ಅವರು ನಕ್ಕಿದ್ರು.

ಅಸ್ವಸ್ಥನಲ್ಲದವನು ಸಾಹಿತಿಯಾಗಲಾರ. ಹಾಗಂತ ಬರೇ ಅಸ್ವಸ್ಥನಾದವನೂ ಲೇಖಕನಾಗಲ್ಲ, ಅವನು ಆಸ್ಪತ್ರೆ ಸೇರ್ತಾನೆ!

ಸಂಸ್ಕಾರದ ಹುಟ್ಟಿನ ಬಗ್ಗೆ ಒಂದು ಕಡೆ ಹೇಳ್ಕೊಂಡಿದೀರಿ. ಲಚ್ಚ ನಾರಣಪ್ಪನಾಗಿದ್ದು, ಜಿಪ್ಸಿ ಪುಟ್ಟನಾದದ್ದು, ಅಸ್ಪೃಶ್ಯ ಹೆಣ್ಣು ಮಗಳು ಬೆಳ್ಳಿಯಾದದ್ದು, “ಸೆವೆಂತ್ ಸೀಲ್” ಅನ್ನೋ ಸಿನೆಮ – ಹೀಗೆ ಎಷ್ಟೆಷ್ಟೋ ಅಂಶಗಳು ಸೇರಿಕೊಂಡು ಈ ಕೃತಿ ಬಂತು ಅಂತ.

ಒಂದು ಕೃತಿ ಹುಟ್ಟಲು ಬೇಕಾದ ಮೂಲದ್ರವ್ಯ ಏನು?

ಹರಳು ಬೆಳೆಯುವುದು ಹೇಗೆ ಅಂತ ವಿಜ್ಞಾನದಲ್ಲಿ ಒಂದು ಪ್ರಯೋಗ ಮಾಡ್ತಾರೆ. ಒಂದು ಪರ್ಯಾಪ್ತ ದ್ರಾವಣದಲ್ಲಿ ಒಂದು ನೂಲಿನಿಂದ ಹರಳನ್ನು ಇಳಿಬಿಟ್ರೆ ಅದು ದ್ರಾವಣದ ಸಂಯೋಗದಿಂದ ತನ್ನ ಸುತ್ತ ಹರಳುಗಟ್ಟಿಕೊಂಡು ಹೋಗುತ್ತಲ್ವ – ಕ್ರಿಸ್ಟಲೈಸೇಶನ್ ಅಂತ ಹೇಳ್ತಾರೆ; ಲೇಖಕನ ಮನಸ್ಸೂ ಹಾಗೆ, ಒಂದು ಪರ್ಯಾಪ್ತ ದ್ರಾವಣ. ಯಾವುದೋ ಒಂದು ಸಣ್ಣ ವಿಷಯ – ಮೂಲಭೂತವಾದ ಹರಳಿನ ಗುಣ ಇರುವ ಒಂದು ವಿಷಯ – ಅಲ್ಲಿ ಇಳಿಬಿದ್ರೆ, ಅದು ತನ್ನ ಪಾಡಿಗೆ ತಾನೇ ರೂಪುಗೊಳ್ಳುತ್ತೆ ಮನಸ್ಸಿನಲ್ಲಿ.

ಇಂಗ್ಲಿಷಿನಲ್ಲಿ ಒಂದು ಮಹತ್ವದ ಮಾತಿದೆ – “ಓನ್ಲಿ ಕನೆಕ್ಟ್” ಅಂತ. ಒಂದನ್ನು ಇನ್ನೊಂದಕ್ಕೆ ಕನೆಕ್ಟ್ ಮಾಡ್ಬೇಕು. ಪರಿಚಿತವಾದದ್ದರ ಕನೆಕ್ಷನ್ ದೊಡ್ಡದಲ್ಲ. ಅದು ಗೊತ್ತಿರುವಂಥಾದ್ದೇ. ಅಪರಿಚಿತವಾದದ್ದರ ಕನೆಕ್ಷನ್ ಮಾಡೋದು ಮುಖ್ಯ.

ನನ್ನ ಮನಸ್ಸಿನಲ್ಲಿ ಬೇರೆಬೇರೆಯಾಗಿ ಇರುವಂಥವು, ಯಾವುದೋ ಒಂದು ಘಟ್ಟದಲ್ಲಿ, ಒಂದು ಭಾವತೀವ್ರತೆಯಲ್ಲಿ ಹೊಂದಿಕೊಳ್ತಾವೆ. ಮೂಲದ್ರವ್ಯ ಎಲ್ಲೆಲ್ಲಿಂದ ಬಂತು ಅಂತ ಹೇಳೋದು ಸುಮ್ನೆ ಒಂದು ಕುತೂಹಲಕ್ಕಾಗಿ, ಅಷ್ಟೆ.

ಒಬ್ಬ ಬ್ರಾಹ್ಮಣ ಘಟಶ್ರಾದ್ಧವನ್ನು ಓದೋದಕ್ಕೂ ಒಬ್ಬ ದಲಿತ ಓದೋದಕ್ಕೂ ವ್ಯತ್ಯಾಸ ಇರಬಹುದು, ಅಲ್ವೆ? ಈ ನಿಟ್ಟಿನಲ್ಲಿ ನೋಡಿದಾಗ, ನಮ್ಮ ಹಳ್ಳಿಗಳ, ಜಾತಿ, ಧರ್ಮಗಳ ಒಳಗಿನ ಕತೆಗಳನ್ನು ಬರೀತಾ ಇರೋ ಲೇಖಕರನ್ನು ಹೊರಗಿನ ಜಗತ್ತು ಹೇಗೆ ಸ್ವೀಕರಿಸಿದೆ?

ಒಂದು ಸಾಹಿತ್ಯ ಕೃತಿಗೆ ಸಾರ್ವತ್ರಿಕ ಆಗಿರುವಂತಹ ಗುಣ ಇದೆ ಅಂದ್ರೆ ಅದು ಬೇರೆಯವರ ಗುಣ-ಜಾಯಮಾನಕ್ಕೆ ತಕ್ಕ ಹಾಗೆ ಬೇರೆಬೇರೆ ಆಯಾಮಗಳನ್ನು ಪಡಕೊಳ್ಳುತ್ತೆ. ನನ್ನ ಘಟಶ್ರಾದ್ಧ ಕತೇನ ಅಮೆರಿಕದಲ್ಲಿ ಪಾಠ ಮಾಡುವಾಗ ತೋರಿಸಿದ್ರು. ಅಲ್ಲಿ ಸೇರಿದ್ದ ಯಹೂದ್ಯ ಹೆಂಗಸರು, ಇದು ನಮ್ಮಲ್ಲಿ ಯಾರದ್ದು ಬೇಕಾದ್ರೂ ಕತೆ ಆಗಿರಬಹುದು ಅಂದ್ರು! ಈ ಗುಣ ಸಾಹಿತ್ಯಕೃತಿಗೆ ಇರೋದು ಬಹಳ ಮುಖ್ಯ. ನೀವು ಎಲ್ಲರಿಗೂ ಸಲ್ಲುವ ಹಾಗೆ ಬರೀಬೇಕು ಅಂದಾಗ ಅದು ಬಹಳ ನೀರುನೀರಾಗಿ ಬಿಡುತ್ತೆ. ಯಾವುದೋ ಒಂದು ಸ್ಥಳದಲ್ಲಿ ನಿಜವಾಗಿ ನಡೆದದ್ದು ಅನ್ನೋ ರೀತಿಯಲ್ಲಿ ಬರೆದಾಗ, ಅದು ಎಲ್ಲ ವರ್ಗಗಳಿಗೂ ಸಲ್ಲುವ ಗುಣಗಳನ್ನು ಪಡೆದುಕೊಳ್ಳಬಹುದು.

ಇನ್ನು, ಸಾರ್ವತ್ರಿಕತೆಯ ಜೊತೆ ಉತ್ತಮ ಕೃತಿಗಳಿಗೆ ಇನ್ನೊಂದು ಆಯಾಮ ಇದೆ. ಅದು “ಸಾರ್ವಕಾಲಿಕತೆ”. ವರ್ತಮಾನದಲ್ಲಿ ಕೂತು ಬರೆದವನ ಪುಸ್ತಕ ಔಟ್ಡೇಟೆಡ್ ಆಗಬಹುದು. ಯಾರೋ ಹಿಂದೆ ಬರೆದ ಪುಸ್ತಕ ಕೂಡ ನನಗೆ ಇವತ್ತಿಗೆ ಪ್ರಸ್ತುತ ಅನ್ನಿಸಬಹುದು. ಯಾವ ಕೃತಿ ನಮ್ಮ ಇವತ್ತಿನ ಆಗುಹೋಗುಗಳಿಗೆ ಸ್ಪಂದಿಸುತ್ತೋ ಅದು ಸಮಕಾಲೀನ ಕೃತಿ. ಆ ಕಾರಣಕ್ಕಾಗೀನೇ ನಾನು ವೇದವ್ಯಾಸರನ್ನು ಸಮಕಾಲೀನ ಅಂತ ತಗೋತೀನಿ.

ನಿಮ್ಮ ಕತೆಗಳ ಮೂಲಕ ನೀವು ಮತ್ತೆ ಮತ್ತೆ ನಿಮ್ಮ ಹುಟ್ಟೂರಿಗೆ ಹೋಗ್ತೀರಿ. ನಮ್ಮ ಅನೇಕ ಲೇಖಕರು ಕೂಡ ಹೀಗೇನೆ. ಮೂಡಿಗೆರೆ, ಹನೇಹಳ್ಳಿ, ಬಳ್ಳಾರಿ, ಸಾಗರ, ಮೈಸೂರು – ಹೀಗೆ ಹತ್ತು ಹಲವು ಊರುಗಳು ಕತೆಗಳಲ್ಲಿ ಅಚ್ಚೊತ್ತಿವೆ. ಮುಂಬೈಯಂತೂ ಬಹಳ ಸಲ ನಮ್ಮ ಸಾಹಿತ್ಯದಲ್ಲಿ ಬಂದಿದೆ. ಆದರೆ, ನಾವು ಈಗ ಬದುಕ್ತಾ ಇರುವ, ನಮ್ಮ ನಗರ ಬೆಂಗಳೂರು ಯಾಕೆ ಬಂದಿಲ್ಲ?

ನಂಗೂ ಈ ಪ್ರಶ್ನೆ ಕಾಡಿದೆ. ಬಹಳ ಸಲ ಅನ್ನಿಸಿದೆ – ಯಾಕೆ ಬೆಂಗಳೂರು ಜೀವಂತವಾಗಿ ನಮ್ಮ ಕೃತಿಗಳಲ್ಲಿ ಬರಲ್ಲ ಅಂತ. ಬಹುಶಃ ಈಗ ಇದೊಂದು ನಗರ ಅಂತಾನೇ ಅನ್ನಿಸ್ತಿಲ್ಲ ಅಂತಲೋ?

ಭಾರತದಾದ್ಯಂತ ಓಡಾಡುವ ಲೇಖಕರು ನೀವು. ಹೇಳಿ, ಈಗ ನಮ್ಮ ದೇಶದಲ್ಲಿ ನಡೀತಾ ಇರುವ ಸಾಹಿತ್ಯಕೃಷಿ ಹೇಗಿದೆ? ಪ್ರಮುಖ ಲೇಖಕರು ಯಾರು?

ನನ್ನ ಕಾಲದ ಲೇಖಕರು – ಓ.ವಿ.ವಿಜಯನ್, ನಿರ್ಮಲ ವರ್ಮ, ದಿಲೀಪ್ ಚಿತ್ರೆ, ವೃಂದಾ ಕಾರಂದಿಕರ್, ಅಶೋಕ ವಾಜಪೇಯಿ – ಮುಂತಾದವರು ಬಹಳ ಇಷ್ಟ. ಹೊಸಪೀಳಿಗೆಯ ಲೇಖಕರೂ ಒಳ್ಳೇ ಹುಮ್ಮಸ್ಸಿನಿಂದ ಚೆನ್ನಾಗಿ ಬರೀತಾ ಇದ್ದಾರೆ. ಕನ್ನಡದಲ್ಲೂ ಕೂಡ.

ನಮ್ಮ ಭಾರತೀಯ ಭಾಷೆಗಳಲ್ಲಿ ಬರೀತಾ ಇರುವ ಲೇಖಕರು ಹೊರಗಡೆ ಪ್ರಸಿದ್ಧರಾಗದೇ ಇರೋದಕ್ಕೆ ಏನು ಕಾರಣ ಇರಬಹುದು? ಅವರ ಕೃತಿಗಳು ಸಮರ್ಥ ಇಂಗ್ಲೀಷ್ ಅನುವಾದಕ್ಕೆ ದಕ್ಕಿಲ್ಲ ಎಂದೇ? ಅಥವಾ ಹೊರಗಡೆಯಿಂದ ಭಾರತದ ಮೇಲೆ ಏನಾದ್ರೂ block ಇದೆಯ?

ಪ್ರಸಿದ್ಧರಾಗಬೇಕು ಅಂತ ಬಯಸಿದರೆ ಚೀಪಾಗಿಬಿಡುತ್ತೆ. ಅದು ಬಯಸಿ ಆಗುವಂಥಾದ್ದಲ್ಲ. ಪ್ರಸಿದ್ಧರಾಗದೇ ಇರೋದಕ್ಕೆ ಬಹಳ ಮುಖ್ಯ ಕಾರಣ ಅಂದ್ರೆ ಬೇರೆ ದೇಶದವರು ಮಾರ್ಕೆಟಿ೦ಗ್ ಮಾಡ್ತಾರೆ, ನಮಗೆ ಮಾಡಕ್ಕೆ ಬರಲ್ಲ. ಕುವೆಂಪು, ಕಾರಂತರಿಗೆಲ್ಲ ನೊಬೆಲ್ ಬರಬೇಕಾಗಿತ್ತು. ಗಾಂಧೀಜಿಗೆ ಬರಬೇಕಾಗಿತ್ತು. ಆದ್ರೆ ಬರಲಿಲ್ಲ. ಆದ್ದರಿಂದ ನಾನು ಯಾವ ಪುರಸ್ಕಾರದಿಂದಾನೂ ಯಾವುದನ್ನೂ ಅಳೆಯಲ್ಲ. ನನಗೆ ಇವತ್ತು ಯಾವುದು ಪ್ರಸ್ತುತ ಅಂತ ನೋಡ್ತೀನಿ. ಭಾರತೀಯ ಸಾಹಿತ್ಯ ಭಾರತೀಯರಿಗೆ ಪ್ರಸ್ತುತ. ಅದಕ್ಕಿರುವಂತಹ ಬಿಗಿ, ಆಳ – ಇತ್ಯಾದಿಗಳು ವಿಶಿಷ್ಟವಾದವು. ಜಾಗತಿಕವಾಗಿಯೂ ಅಷ್ಟೇ – ಇಂಗ್ಲೀಷ್, ಫ್ರೆಂಚ್ ಇತ್ಯಾದಿ ಭಾಷೆಗಳಲ್ಲಿ ಬರೋದಕ್ಕಿಂತ ಸ್ಪಾನಿಷ್ನಲ್ಲಿ, ಹಿಂದುಳಿದ ದೇಶಗಳಲ್ಲಿ ಒಳ್ಳೆಯ, ಜೀವಂತಿಕೆ ಪಡೆದ ಸಾಹಿತ್ಯ ಬರ್ತಾ ಇದೆ.

ನಮ್ಮವರ ಕೃತಿಗಳು ಸಮರ್ಥ ಅನುವಾದಕ್ಕೆ ದಕ್ಕದೇ ಇರುವುದು ನಮ್ಮ ಬೆಳವಣಿಗೆಗೆ ತೊಡಕಾಗಿರಬಹುದು. ಸಂಸ್ಕಾರವನ್ನು ಇವತ್ತು ಅನೇಕ ಯೂನಿವರ್ಸಿಟಿಗಳಲ್ಲಿ ಪಠ್ಯವಾಗಿ ಓದ್ತಾರೆ. ಕಾರಣ – ರಾಮಾನುಜನ್ ಟ್ರಾನ್ಸ್’ಲೇಟ್ ಮಾಡಿದ್ರು ಅನ್ನೋದು ಇರಬಹುದು. ಹಾಗಾಗಿ, ಒಂದು ಒಳ್ಳೆಯ ಅನುವಾದ ಕೂಡ ಒಬ್ಬ ಲೇಖಕನನ್ನು ಜಗತ್ತು ಅರ್ಥ ಮಾಡಿಕೊಳ್ಳಿಕ್ಕೆ ಸಹಾಯ ಮಾಡುತ್ತೆ ಅನ್ನೋದು ನಿಜ.

ನಮ್ಮ ಸಂಸ್ಕೃತಿಯ ಒಳಗಿನ ಭಿನ್ನತೆಗಳನ್ನು, ವೈಶಿಷ್ಟ್ಯಗಳನ್ನು ಇಂಗ್ಲೀಷಿನಲ್ಲಿ ಹೇಳೋದಕ್ಕೆ ಆಗದೇ ಇರೋದು ಕೂಡ ಕಾರಣವಿರಬಹುದು.

ಹೌದು. ಈಗ ನೋಡಿ, ನಾನು ಅವನು ಬೆಳಗ್ಗೆ ಎದ್ದು ಮಸಾಲೆದೋಸೆ ತಿಂದ ಅಂದ್ರೆ ನಿಮಗರ್ಥವಾಗುತ್ತೆ  – ಅವನೇನು ತುಂಬಾ ಹೆವಿಯಾದ್ದನ್ನು ತಿಂದ, ಅಂತ. ಆದರೆ, ವಿದೇಶೀಯರಿಗೆ ಅದನ್ನು ನಾವು ಬ್ರಾಕೆಟ್ನಲ್ಲಿ ಬರೆದು ಹೇಳ್ಬೇಕಾಗುತ್ತೆ!

ಅದೇ – ನಾವು ಇಂಗ್ಲೀಷ್ ಸಾಹಿತಿಗಳು ಬರೆದದ್ದನ್ನು ಅರ್ಥ ಮಾಡ್ಕೋತೀವಿ. ಯಾಕೆಂದರೆ ಅವರ ಬಗ್ಗೆ ನಮಗೆ ಹೆಚ್ಚು ಗೊತ್ತಿದೆ ನೋಡಿ. ಅವರು ನಮ್ಮನ್ನು ಆಳಿದವರು. ಅವರನ್ನು ನಾವು ಹತ್ತಿರದಿಂದ – ಭಯ ಮತ್ತು ಆಸಕ್ತಿಯಿಂದ ನೋಡಿದವರು. ಆದರೆ ನಮ್ಮ ಬಗ್ಗೆ ಅವರು ತಿಳ್ಕೊಂಡದ್ದು ಕಡಿಮೆ.

ನಮ್ಮ ಸಂಸ್ಕೃತಿಗಳು ಎಷ್ಟು ಭಿನ್ನವೋ ನಮ್ಮ ಅನುಭವಗಳ ಸಾಂದ್ರತೆಯಲ್ಲಿಯೂ ಅಷ್ಟೇ ದೊಡ್ಡ ವ್ಯತ್ಯಾಸಗಳಿವೆ. ಉದಾಹರಣೆಗೆ, ನನ್ನ ಕ್ಲಿಪ್ ಜಾಯಿಂಟ್ ಕತೆಯನ್ನು ಓದಿ ಕೀರ್ತಿನಾಥ ಕುರ್ತಕೋಟಿ, ಇಲ್ಲಿ ಅನುಭವದ ಸಾಧ್ಯತೆ ಇರೋದು ಭಾರತೀಯನಿಗೆ ಹೊರತು ಇಂಗ್ಲೆಂಡಿನವನಿಗೆ ಅಲ್ಲ ಅಂದ್ರು. ಬಿಳಿಯ ಹೆಚ್ಚು ಬಿಡುಗಡೆಯಾದವನ ಹಾಗೆ ಕಾಣ್ತಾನೆ. ಆದರೆ ಹೊಸ ಅನುಭವಗಳ ಸಾಧ್ಯತೆ ಇರೋದು ಭಾರತೀಯನಿಗೆ ಅಂತ ಹೇಳಿದ್ರು. ಇದು ಯೋಚಿಸಬೇಕಾದ ವಿಚಾರ.

ನಿಮ್ಮ ಕನ್ನಡ ಬಹಳ ವಿಶಿಷ್ಟವಾದದ್ದು. ನಿಮ್ಮ ಗದ್ಯವನ್ನು ಓದೋದಕ್ಕೂ ಒಂದು ವಿಶೇಷ ಸಿದ್ಧತೆ ಬೇಕಾಗುತ್ತೆ. ಇಂತಹ ಭಾಷಾಕೌಶಲವನ್ನು ಸಿದ್ಧಿಸಿಕೊಳ್ಳಲು ನೀವು ಏನು ಕಸರತ್ತು ಮಾಡಿದಿರಿ?

ನನಗೆ ಎಷ್ಟು ಕ್ಲಿಷ್ಟವಾದ್ದನ್ನೂ ಸರಳವಾಗಿ ಹೇಳಬೇಕು ಅಂತ ಆಸೆ. ಹಾಗೇ ಹೇಳ್ತೀನಿ. ಆದ್ರೂ ಅದು ಸ್ವಲ್ಪ ಕ್ಲಿಷ್ಟವಾಗಿಬಿಡುತ್ತೆ. ಕ್ಲಿಷ್ಟತೆಗೆ ನಾನು ಹೆದರಲ್ಲ. ಎಲ್ಲರಿಗೂ ತಲುಪಬೇಕು ಅನ್ನೋದೇ ನನ್ನ ಬರವಣಿಗೆಯ ಮುಖ್ಯ ಉದ್ಧೇಶ ಆಗಿರೋದಿಲ್ಲ.

ಅಂದ್ರೆ, ನಿಮ್ಮ ಬರಹ ಓದುಗನಿಂದ ಕೂಡ ಸಿದ್ಧತೆಯನ್ನು ಅಪೇಕ್ಷಿಸುತ್ತೆ.

ಹೌದು, ಹೌದು. ನಾನು ಸ್ವಲ್ಪ ಮುಂದೆ ಹೋಗ್ತೀನಿ, ಆ ಕಡೆಯಿಂದ ಓದುಗನೂ ಎರಡು ಹೆಜ್ಜೆ ಮುಂದೆ ಬರಬೇಕು ಅಂತ ಬಯಸ್ತೇನೆ. ಮತ್ತು ಈಗ, ನನ್ನ ಗದ್ಯವನ್ನು ಬಹಳ ಜನ ಓದ್ತಾ ಇದಾರೆ. ಅದೇನೂ ಕಷ್ಟವಾಗಿ ಉಳಿದಿಲ್ಲ.

ಇತ್ತೀಚೆಗೆ – ಕಾವ್ಯದಲ್ಲಿ ಪ್ರವೇಶ ಪಡೆಯಲು ವಿಮರ್ಶೆಯ ಸಹಾಯ ಬೇಕೆ ಬೇಡವೆ ಅನ್ನೋ ಚರ್ಚೆ ಶುರುವಾಗಿದೆ. ಪದ್ಯಗಳನ್ನು ಬಗೆವ ಬಗೆಯನ್ನು ತುಂಬ ವರ್ಷಗಳ ಕಾಲ “ರುಜುವಾತಿ”ನಲ್ಲಿ ಹೇಳಿಕೊಟ್ಟವರು ನೀವು. ಏನು ಹೇಳ್ತೀರಿ ಇದಕ್ಕೆ?

ವಿಮರ್ಶೆ ಅಂದ್ರೆ ಏನು? ನಾನು ಏನೋ ಓದಿದಾಗ ಅಸ್ಪಷ್ಟವಾಗಿ ಗ್ರಹಿಸಿದ್ದನ್ನು ಇನ್ನೊಬ್ಬ ಸ್ನೇಹಿತನ ಜೊತೆ ಸ್ಪಷ್ಟಪಡಿಸಿಕೊಳ್ಳೋದು. ಅದೇ ವಿಮರ್ಶೆ. ಇನ್ನೊಬ್ಬ ಸಹ ಓದುಗನ ಓದಿನಲ್ಲಿ ನನ್ನ ಓದು ಪೂರ್ಣವಾಗುತ್ತೆ. ಆದರೆ ನನ್ನ ಓದಿನಲ್ಲೇ ಆ ಅಂಶ ಇಲ್ಲದೇ ಹೋದರೆ ಅವನದನ್ನು ಕೊಡಲಾರ. ಕಾವ್ಯದ ವಿಮರ್ಶೆ ಓದೋದಕ್ಕಿಂತ ಮುಂಚೆ, ಆ ಕಾವ್ಯ ನಿಮ್ಮಲ್ಲಿ ಕೆಲವು ಭಾವನೆಗಳನ್ನು ಹುಟ್ಟಿಸಿದ್ರೆ ಅಥವಾ ಅಸ್ಪಷ್ಟವಾಗಿದ್ರೆ ನೀವು ಒಂದು ಸಹಾಯವನ್ನು ತಗೋತೀರಿ. ಕವನ ಅನ್ನೋದು – ಕವಿಯಿಂದ ಹೇಗೋ – ಹತ್ತು ಜನರ ಓದಿನಿಂದಲೂ ತಯಾರಾಗುವಂಥಾದ್ದು.

ನಾನು ಅಡಿಗರ ಪದ್ಯ ವಿಮರ್ಶೆ ಮಾಡಿದಾಗ, ಅಷ್ಟೂ ವಿವರಗಳನ್ನು ಪದ್ಯದ ಒಳಗಿನಿಂದಲೇ ತಗೊಂಡೆ. ಅದನ್ನು ಓದಿದಾಗ ಒಬ್ಬ ಓದುಗನಿಗೆ – ಹೌದಲ್ವೇ, ನನಗೂ ಈ ರೀತಿ ಅನ್ನಿಸಬಹುದಿತ್ತಲ್ವೆ? ಅಂತ ಅನ್ನಿಸಬೇಕು. ವಿಮರ್ಶೆ ಅನ್ನೋದು – ನಮಗೆ ಕವಿದಿರಬಹುದಾದ ಮಂಕನ್ನು ಹರಿದು ಕಾವ್ಯವನ್ನು ಹೆಚ್ಚುಹೆಚ್ಚು ಕಾಣಿಸುವ ಹಾಗಿರಬೇಕು.

ಪದ್ಯಗಳ ವಿಷಯದಲ್ಲಿ, ಅಡಿಗರಿಗೆ ಸಿಕ್ಕಿದ ವಿಮರ್ಶೆಯ ಬಲ ಅನಂತಮೂರ್ತಿಗಳಿಗೆ ಸಿಕ್ಕಿಲ್ಲ ಅಂತ ನನಗನ್ನಿಸುತ್ತೆ.

ಮುಂದೆ ಸಿಗುತ್ತೆ! ಯಾಕೇಂದ್ರೆ ನಾನು ಬೇರೆ ರೀತಿಯಲ್ಲಿ ಬರೆದೆ. ನಾನೊಬ್ಬನೇ ಅಲ್ಲ, ತಿರುಮಲೇಶ್ ಬರೆದ್ರು, ರಾಮಾನುಜನ್ ಬರೆದ್ರು. ಆ ನಿಟ್ಟಿನಲ್ಲಿ ನಾನು ಕೆಲವು ಒಳ್ಳೇ ಕೆಲಸ ಮಾಡಿರಬಹುದು. ನನಗೆ ಬಹಳ ಪ್ರಿಯಾವದದ್ದು – ಪದ್ಯ ಬರೆಯೋದು.

ನಾನು ಹೊಸಹೊಸ ಪ್ರಯೋಗಗಳನ್ನು ಮಾಡ್ತಾ ಇದೇನೆ. ನನ್ನ ಕವಿತೆಗಳು ವಿಮರ್ಶೆಗೆ ಹೆಚ್ಚು ಒಳಪಡದೇ ಇರೋದಕ್ಕೆ ಒಂದು ಕಾರಣ – ನನ್ನ ಕತೆಗಳು ಹೆಚ್ಚು ಗಾಢವಾಗಿದ್ದಾವೆ ಅಂತ ಕಾಣುತ್ತೆ. ನನ್ನ ಕತೆಗಳೇ ಪದ್ಯಗಳು ಇದ್ದ ಹಾಗಿವೆ. ನಾನು ಕಾವ್ಯರೂಪೀ ಕತೆಗಳನ್ನು ಬರೆದೆ. ಹಾಗೆ ನೋಡಿದರೆ, ಭಾರತೀಯ ಕಾವ್ಯಚಿಂತನೆಯಲ್ಲೇ ಪದ್ಯಕ್ಕೂ ಗದ್ಯಕ್ಕೂ ವ್ಯತ್ಯಾಸವಿಲ್ಲ ಎನ್ನಬಹುದು. ಈಗ ಲಲಿತ ಪ್ರಬಂಧಗಳನ್ನು ಬರೀತಿದೀನಿ. ಪ್ರಬಂಧ ಪ್ರಕಾರಕ್ಕೂ ಒಂದು ಕಾವ್ಯಗಂಧೀ ಗುಣ ಇದೆ, ಅಲ್ವೆ.

ಮತ್ತು ಇತ್ತೀಚೆಗೆ ನೀವು ಹೆಚ್ಚುಹೆಚ್ಚು ಅನುವಾದದಲ್ಲಿ ತೊಡಗಿಸಿಕೊಂಡಿದೀರಿ.

ಹೌದು. ನನಗೆ ಸ್ವಂತ ಬರೆಯಕ್ಕೆ ಆಗದೇ ಇದ್ದಾಗ ಅದನ್ನು ಮಾಡ್ತೀನಿ. ಒಂದು ರೀತಿ ಅದು ನನ್ನ ಮನಸ್ಸನ್ನು ಹರಿತವಾಗಿಡುತ್ತೆ. ಅನುವಾದದಲ್ಲಿ ನಾನು ಇನ್ನೊಬ್ಬರ ಮುಖಾಂತರ ಬದುಕೋದಕ್ಕೆ ನೋಡ್ತೀನಿ. ಒಬ್ಬ ಚಿತ್ರಕಾರ ತನ್ನ ಕೈಗಳನ್ನು ಚುರುಕಾಗಿಟ್ಟುಕೊಳ್ಳೋದಕ್ಕೆ ಕೆಲವು ಸಲ ಕಾಪಿ ಮಾಡ್ತಾನಂತೆ. ನಾನು ಅನುವಾದ ಮಾಡ್ತೇನೆ. ನನ್ನ ಕೈ ಕುದುರುತ್ತೆ ಅದರಿಂದ. ಇನ್ನೊಂದು ಮನಸ್ಸಿನ ಜೊತೆ ವ್ಯವಹಾರ ಮಾಡೋದು ಖುಷಿಯ ವಿಚಾರ.

ಮೇಷ್ಟ್ರೇ, ರಾಜಕೀಯ ವಿವಾದಗಳೆದ್ದಾಗ ಅಲ್ಲಿ ಮೊದಲು ಕಾಣಿಸಿಕೊಳ್ಳುವ ಸಾಹಿತಿ ನೀವು. ನಿಮ್ಮ ರಾಜಕೀಯ ನಿಲುವುಗಳೇನು?

ನಾನು ಬಲಪಂಥೀಯ ಅಲ್ಲ. ಆದರೆ ಎಡಪಂಥೀಯವಾದ ಚೀನಾ, ಸೋವಿಯಟ್ ರಷ್ಯಗಳನ್ನು ನಿರಾಕರಿಸುವವನು. ಚೀನಾ, ಟಿಬೆಟ್ನಲ್ಲಿ ಮಾಡಿರುವ ಅತ್ಯಾಚಾರವನ್ನು ಯಾವ ಕಾರಣಕ್ಕೂ ಕ್ಷಮಿಸುವುದಕ್ಕೆ ಸಾಧ್ಯವಿಲ್ಲ. ಹಾಗೇನೇ ತಿಯನ್ಮಾನ್ ಚೌಕದಲ್ಲಿ ವಿದ್ಯಾರ್ಥಿಗಳ ಹತ್ಯೆ ಆದಾಗ ನಾನು ಚೀನಾದಲ್ಲಿದ್ದರೂ ಪ್ರತಿಭಟನೆ ಮಾಡಿದೆ. ಇದರಿಂದ ಎಷ್ಟೋ ಕಮ್ಯುನಿಷ್ಟ್ ಗೆಳೆಯರು ದೂರ ಆದ್ರು. ನಾನು ಚೀನಾವನ್ನು ವಿರೋಧಿಸಿದೆ ಅಂತ ನಾನು ವೈಸ್ ಚಾನ್ಸಲರ್ ಆಗಿದ್ದ ಕೇರಳದ ಯೂನಿವರ್ಸಿಟಿಯಲ್ಲಿ ಕಮ್ಯುನಿಷ್ಟ್ ವಿದ್ಯಾರ್ಥಿಗಳು ಬಂಡೆದ್ದರು. ಆಗ ಹೇಳಿದೆ – ಸತ್ಯ ಹೇಳೋದಕ್ಕೆ ಭಯ ಯಾಕೆ, ಅಂತ. ಸತ್ಯ ಅನ್ನಿಸಿದನ್ನು ಹೇಳಬೇಕು. ನನ್ನನ್ನು ನಾನು ಕಾಪಾಡಿಕೋಬಾರದು. ಈ ಕಾಲದ ಸಾಕ್ಷಿ ಆಗಿರಬೇಕು.

ನನ್ನ ಈಗಿನ ರಾಜಕೀಯ ನಿಲುವು ಇದು – ಹಿಂಸೆ ನಿಲ್ಲಬೇಕು. ಅದು ಮತೀಯ ಹಿಂಸೇನೋ ನಕ್ಸಲ್’ವಾದಿಗಳದ್ದೋ ಮಾವೋಗಳದ್ದೋ – ಯಾವುದೇ ಇರಲಿ, ಹಿಂಸೆಯಿಂದ ನಾವು, ನಮ್ಮ ಜಗತ್ತು ಮುಂದೆ ಹೋಗೋದಿಕ್ಕೆ ಸಾಧ್ಯವಿಲ್ಲ.

ಈ ಮಾತು ನಿಮ್ಮ ಗಾಂಧೀವಾದಕ್ಕೆ ಬಹಳ ಹತ್ತಿರದ್ದು. ನೀವು ಗಾಂಧೀಜಿಯ ತತ್ವ, ಆದರ್ಶಗಳ ಬಗ್ಗೆ ಬಹಳ ತನ್ಮಯರಾಗಿ ಮಾತಾಡ್ತೀರಿ, ಬರೀತೀರಿ. ಆದರೆ, ಈಗಿನ ಯುಗಕ್ಕೆ ಇದು ಪ್ರಸ್ತುತ ಅಂತ ಅನ್ನಿಸುತ್ತ?

ಈಗಿನ ಯುಗಕ್ಕೆ ಮಾತ್ರವಲ್ಲ, ಮುಂದಿನ ಯುಗಕ್ಕೂ ಬೇಕಾಗುತ್ತೆ. ಯಾಕೆಂದ್ರೆ ನೀರು ಕಡಿಮೆಯಾಗ್ತಾ ಇದೆ. ನೀರಿನ ಮೇಲೇನೇ ಒಂದು ಯುದ್ಧ ಆಗ್ಬಹುದು ಅಂತಾರೆ. ಭೂಮಿಯ ಶಾಖ ಹೆಚ್ಚಾಗ್ತಾ ಇದೆ. ಆದ್ರಿಂದ ನಮ್ಮ ಬಳಕೆಯ ಮಟ್ಟದಲ್ಲಿ, ಶೈಲಿಯಲ್ಲಿ ಬಹಳ ದೊಡ್ಡ ಬದಲಾವಣೆ ಆಗ್ಬೇಕು. ಆಗ ಗಾಂಧಿ ಹೇಳಿದ ರೀತಿಯ ಸರ್ವೋದಯದ ಕಲ್ಪನೆ ಎಲ್ಲರಿಗೂ ಬೇಕಾಗುತ್ತೆ. ಈಗ ನಾವು ಅಮೆರಿಕಕ್ಕೆ ಹೇಳಬೇಕಾಗಿರೋದೂ ಅದೇ. ಕೂಡಲೇ ಅಲ್ದೆ ಇದ್ದರೂ ಕೈಸುಟ್ಟುಕೊಂಡ ನಂತರ ಇದರ ಬಗ್ಗೆ ನಮಗೆ ಅರಿವು ಮೂಡಬಹುದು. ಕಾರುಗಳು, ಅಗಲವಾದ ರಸ್ತೆಗಳು, ಮರಗಳನ್ನು ಕಡಿಯೋದು – ಇಂಥ ರೀತಿಯ ಡೆವಲಪ್ಮೆಂಟಿಗೆ ಮದ್ದು-ಪರಿಹಾರ ನಮಗೆ ಸಿಗೋದು ಗಾಂಧೀಜಿ ತತ್ವಗಳಲ್ಲೇ.

ಅವರೊಂದು ಅತಿರೇಕದಲ್ಲಿ ಅದನ್ನು ಹೇಳ್ತಾರೆ. ಅತಿರೇಕವನ್ನು ನಾವು ಒಪ್ಪಬೇಕಾಗಿಲ್ಲ. ಗಾಂಧಿ ಜೊತೆ ಜಗಳ ಇರ್ಬೇಕು ನಮಗೆ. ನನಗೇ ಬೇಕಾದಷ್ಟು ಇದ್ದಾವೆ. ಆದರೆ ಮೂಲಭೂತವಾಗಿ, ಮಾರ್ಕ್ಸ್ ಹೇಳಿದ ರೀತಿಗಿಂತ ಗಾಂಧಿ ಹೇಳಿದ ರೀತಿಯಲ್ಲಿ ಮುಂದಿನ ಪ್ರಪಂಚ ನಡೆಯುತ್ತೆ ಅಂತ ಕಾಣುತ್ತೆ. ಮಾರ್ಕ್ಸ್’ನದು ಸತತವಾಗಿ ಸುಖ ಬೆಳೀತಾ ಹೋಗುವ ಪ್ರಪಂಚ. ಅದು ಸಾಧ್ಯವಿಲ್ಲ ಅಂತ ಗೊತ್ತಾಗ್ತಾ ಇದೆ ನಮಗೆ. ಆದರೆ ಗಾಂಧಿಯದು – ಸತತವಾಗಿ ನಮ್ಮ ಅಗತ್ಯತೆಗಳನ್ನು ಕಡಿಮೆ ಮಾಡಿಕೊಂಡು ನೆಮ್ಮದಿಯನ್ನು ಹೆಚ್ಚು ಮಾಡಿಕೊಳ್ಳುವ ಪ್ರಪಂಚ. ನೆಮ್ಮದಿಯ ಕಡೆಯ ಚಲನೆಯಲ್ಲಿ ಗಾಂಧಿ ಬೇಕಾಗ್ತಾರೆ.

ನಮ್ಮ ಮಾತುಕತೆ ಭಾಷೆ, ಮಾತೃಭಾಷೆ ಇತ್ಯಾದಿ ವಿಷಯಗಳಿಂದ ಶುರುವಾಯ್ತು. ಈಗ ಮತ್ತೆ ಅಲ್ಲಿಗೇ ಬರ್ತಿದ್ದೇನೆ. ಶಾಸ್ತ್ರೀಯ ಭಾಷೆಯ ಸ್ಥಾನಮಾನ ಕೊಡುವ ವಿಷಯದಲ್ಲಿ ಈಗ ಜಗಳ ಎದ್ದಿದೆ. ಭಾಷೆಗಳ ಸ್ಥಾನ ಮತ್ತು ಮೌಲ್ಯವನ್ನು ಪ್ರಭುತ್ವ ಅಳೆದು ನಿರ್ಧರಿಸುವ ಪರಿಸ್ಥಿತಿಯಲ್ಲಿದ್ದೇವೆ. ಕನ್ನಡದಲ್ಲಿ ಬರೆಯುತ್ತಿರುವ ಲೇಖಕನಾಗಿ ನಿಮಗೆ ಈ ಎಲ್ಲ ವಾದವಿವಾದಗಳನ್ನು ನೋಡಿ ಏನನ್ನಿಸುತ್ತದೆ?

ನಾನು ಕನ್ನಡದಲ್ಲಿ ಬರೀತೇನೆ ಅಂತ ನಿರ್ಧರಿಸಿದ ಆ ಗಳಿಗೆ ಇದೆಯಲ್ಲ, ಅದು ಬಹಳ ಮಹತ್ವದ್ದು ಅಂತ ನನ್ನ ಅಭಿಪ್ರಾಯ. ಪ್ರತಿಯೊಬ್ಬ ಲೇಖಕನೂ ತನ್ನ ಮಾತೃಭಾಷೆಯನ್ನು ರಕ್ಷಿಸುವುದಕ್ಕೆ ಕಂಕಣಬದ್ಧನಾಗಬೇಕು. ಆಗ ಮಾತ್ರ ನಾವು ನಮ್ಮ ಸಂಸ್ಕೃತಿಯನ್ನು ಉಳಿಸೋದಕ್ಕೆ, ಅದನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದಕ್ಕೆ ಸಾಧ್ಯ.

ಭಾಷೆಗಳ ಅಳಿವು-ಉಳಿವಿನ ಪ್ರಶ್ನೆಯನ್ನು ನಾವು ಪ್ರಭುತ್ವದ ಕೈಗಳಿಗೆ ಹಾಕಿ ಬಹಳ ಕಾಲ ಆಯ್ತು. ಹಾಗಾಗಿ ನನ್ನಂಥ ಲೇಖಕ ಕೂಡ ಭಾಷೆಯ ಉಳಿವಿಗಾಗಿ ಸರಕಾರದ ಜೊತೆ ಮಾತಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕುವೆಂಪು ಮಾದರಿ ಶಾಲೆಗಳ ಬಗ್ಗೆ ಈಗ್ಲೂ ಸರಕಾರದ ಜೊತೆ ಮಾತಾಡ್ತೇನೆ. ಏಕರೂಪೀ ಶಾಲೆಗಳು ಬರಬೇಕು ಅನ್ನುವುದು ನನ್ನ ಕನಸು. ಏಕರೀತಿಯ ಶಿಕ್ಷಣ ಎಲ್ಲ ಮಕ್ಕಳಿಗೂ ಸಿಗುವ ಹಾಗೆ ಆಗಬೇಕು. ಮಗುವಿಗೆ ಮಾತೃಭಾಷೆಯಲ್ಲೇ ಶಿಕ್ಷಣ ಕೊಡುವುದು ಬಹಳ ಮುಖ್ಯ. ಈ ಜಾಗೃತಿ ಮೊದಲು ತಂದೆತಾಯಿಯರಲ್ಲಿ ಬರಬೇಕಾಗಿದೆ.

ಇನ್ನು, ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ಕೊಡುವ ವಿಚಾರ. ಭಾರತೀಯ ಭಾಷೆಗಳಲ್ಲಿ – ಇದು ಎತ್ತರದ್ದು, ಇದು ಅಲ್ಲ – ಅನ್ನುವ ಬೇಧಭಾವವನ್ನು ಕಲ್ಪಿಸಬಾರದು. ಮೊದಲಿಗೆ ತಮಿಳಿಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ಕೊಟ್ಟಿದ್ದೇ ತಪ್ಪು. ನನ್ನ ಪ್ರಕಾರ, ಎಲ್ಲ ಭಾಷೆಗಳೂ ಸಮಾನ. ಒಂದು ಬುಡಕಟ್ಟು ಭಾಷೆಯಲ್ಲಿ ಕೂಡ ಒಬ್ಬ ಹೋಮರ್ ಹುಟ್ಟಿ ಬರಬಹುದು. ಪ್ರಪಂಚದಲ್ಲಿ ಯಾರಿಗೂ ಗೊತ್ತಿಲ್ಲದೇ ಇದ್ದ ಭಾಷೆಯಾಗಿ ಕೇವಲ ಇಂಗ್ಲೆಂಡಿಗೆ ಮಾತ್ರ ಸೀಮಿತವಾಗಿದ್ದ ಇಂಗ್ಲಿಷಿನಲ್ಲಿ ಶೇಕ್ಸ್’ಪಿಯರ್ ಬರೆದ. ಹಾಗಾಗಿ, ಯಾವ ಭಾಷೆ ದೊಡ್ಡದು, ಯಾವುದು ಸಣ್ಣದು ಅಂತ ಹೇಳೋದೇ ಬಾಲಿಶವಾದ ವಾಗ್ವಾದ.

***

ಮೇಷ್ಟ್ರು ಇನ್ನೂ ಮಾತಾಡುವ ತವಕದಲ್ಲಿದ್ದರು. ಆದರೆ, ಗಂಟೆಗಟ್ಟಲೆ ನಡೆಸಿದ ಮಾತು-ಮಥನ, ಅವರಿಗೆ ಸ್ವಲ್ಪ ಸುಸ್ತು ತಂದಿತ್ತು. ಮಾತುಕತೆ ನಿಲ್ಲಿಸೋಣ ಎಂದು ನಾನೇ ಸೂಚಿಸಿದೆ. ನನ್ನ ಜೊತೆ ಬಂದಿದ್ದ ಗೆಳೆಯ ಅವನ ಮೊಬೈಲಿನಲ್ಲಿ ಮೇಷ್ಟ್ರ ಫೋಟೋ ತೆಗೆದ. ಅರೆ! ಇಷ್ಟು ಚಿಕ್ಕ ಮೊಬೈಲಿನಲ್ಲಿ ಫೋಟೋ ಹೊಡೆಯಬಹುದೆ! ಅಂತ ಮಗುವಿನ ಮುಖ ಮಾಡಿಕೊಂಡು ನಮ್ಮತ್ತ ಬಂದು, ತನ್ನ ಮುಖವನ್ನು ಫೋಟೋದಲ್ಲಿ ನೋಡಿಕೊಂಡು ಖುಷಿ ಪಟ್ಟರು! ಹೋಗಿ ಬರಲೇ, ಮೇಷ್ಟ್ರೇ? ಎಂದು ಎದ್ದೆ.

Facebook ಕಾಮೆಂಟ್ಸ್

Rohith Chakratheertha: ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.
Related Post