X

ಅಭಿಗೆ ಅಭಿನಂದನೆಗಳು

ಕ್ಯಾಮೆರಾ ಇದ್ದವರೆಲ್ಲಾ ಫೋಟೋಗ್ರಾಫರ್’ಗಳಾಗಲು ಸಾಧ್ಯವಿಲ್ಲ ಎಂದಂತೆ, ಪಕ್ಷಿಯ ಫೋಟೋ ತೆಗೆಯುವವರೆಲ್ಲಾ ಪಕ್ಷಿಗರಾಗಲು ಸಾಧ್ಯವಿಲ್ಲ. ಪಕ್ಷಿಗಳ ಮೇಲೆ ಪ್ರೀತಿಯಿದ್ದರಷ್ಟೇ ನಿಜವಾದ ಬರ್ಡರ್ ಒಬ್ಬ ಉದಯಿಸಲು ಸಾಧ್ಯ. ಆತನ ಬಳಿ ಇರುವುದು ಸಾಮಾನ್ಯ ಡಿಜಿಟಲ್ ಕ್ಯಾಮೆರಾವೇ ಆಗಿರಬಹುದು ಅಥವ ಅತ್ಯಾಧುನಿಕ ಎಸ್’ಎಲ್’ಆರ್ ಕ್ಯಾಮೆರಾವೇ ಆಗಿರಬಹುದು ಪರಿಸರ ಪ್ರೀತಿ – ಪಕ್ಷಿಗಳನ್ನು ನೋಡುವ ಪ್ರೀತಿಯ ರೀತಿ ಇದ್ದರಷ್ಟೇ ಫೋಟೋ ತೆಗೆದಿದಕ್ಕೂ ಸಾರ್ಥಕ! ಸಾಮಾನ್ಯ ಡಿಜಿಟಲ್ ಕ್ಯಾಮರಾ ಹೊಂದಿದವನೂ ಹಕ್ಕಿಗಳ ಬಗ್ಗೆ ಡಾಕ್ಯುಮೆಂಟರಿ ಮಾಡುವಷ್ಟು ದಾಖಲೆಗಳನ್ನು ಸಂಗ್ರಹಿಸಬಲ್ಲ , ಮೊದಲೇ ಹೇಳಿದಂತೆ ಎಲ್ಲದಕ್ಕೂ ಬೇಕಿರುವುದು ಪ್ರೀತಿಯಷ್ಟೇ ಹೊರತು ಫೋಟೋಗ್ರಾಫರ್ ಎಂಬ ಪಟ್ಟ ಪಡೆಯುವ ಹಂಬಲವಲ್ಲ.

ಫೋಟೋಗ್ರಫಿ ಎನ್ನುವುದು ‘ಕ್ಲಿಕ್’ ಎಂದು ಕ್ಲಿಕ್ಕಿಸಿದಷ್ಟು ಸುಲಭದ ಕೆಲಸವಲ್ಲ. ಎಲ್ಲರೂ ಆ ಹವ್ಯಾಸದಲ್ಲಿ ಕ್ಲಿಕ್ ಆಗುವುದಿಲ್ಲ.  ಒಳ್ಳೆಯ ಫೋಟೋಗ್ರಾಫರ್ ಆಗಬೇಕೆಂದರೆ ಬಹಳಷ್ಟು ಶ್ರಮ, ಆಸಕ್ತಿ ಮತ್ತು ತಾಳ್ಮೆ ಬೇಕು. ಅಂತಹಾ ಫೋಟೋಗ್ರಾಫರುಗಳಲ್ಲಿ ಒಬ್ಬರು ನಮ್ಮ ಅಭಿಜಿತ್. ವೃತ್ತಿಯಲ್ಲಿ ಹೋಮಿಯೋಪತಿ ಡಾಕ್ಟರ್ ಆಗಿ, ಪ್ರವೃತ್ತಿಯಲ್ಲಿ ಬರ್ಡರ್ ಆಗಿರುವ ಅಭಿಜಿತ್ ನಮ್ಮ ರೀಡೂ ಕನ್ನಡದಲ್ಲಿ ಪ್ರತೀ ವಾರ “ಪರಿಸರದ ನಾಡಿ-ಬಾನಾಡಿ” ಎನ್ನುವ ಅಂಕಣ ಬರೆಯುತ್ತಿದ್ದಾರೆ.

ಬರ್ಡರ್’ಗಳು ತುಂಬಾ ಜನ ಇರುತ್ತಾರೆ. ಕೆಲವರು ಫೋಟೊ ಕ್ಲಿಕ್ಕಿಸಿ ಫೇಸ್’ಬುಕ್ಕಿನಲ್ಲಿ ಟ್ಯಾಗ್ ಮಾಡುವುದರಲ್ಲೇ ತೃಪ್ತಿ ಪಡುತ್ತಾರೆ. ಅವರಲ್ಲಿ ಕೆಲವರು ಮಾತ್ರ ಆ ಪಕ್ಷಿಯ ಕುರಿತ ಸಂಕ್ಷಿಪ್ತ ವಿವರವನ್ನು ಹಾಕುತ್ತಾರೆ. ಆದರೆ ತಾವು ಕ್ಲಿಕ್ಕಿಸಿದ ಹಕ್ಕಿಯ ಬಗೆಗಿನ ವಿವರಗಳನ್ನು, ಅದರ ಗುಣ ವಿಶೇಷತೆಗಳನ್ನು, ಅದು ಗೂಡು ಕಟ್ಟಿ ಮರಿ ಹಾಕುವ ವಿಧಾನವನ್ನು, ಅದರ ಒಟ್ಟಾರೆ ಜೀವನ ಕ್ರಮವನ್ನೆಲ್ಲಾ ಹುಡುಕಾಡಿ ನೆಟ್ಟಿನಿಂದ ಅಗೆದು ತೆಗೆದು, ಹಿರಿಯ ಪಕ್ಷಿಗರ (ಪಕ್ಷಿಗಳ ಫೋಟೋ ತೆಗೆದು ಅದರ ವಿವರಗಳನ್ನು ಹಾಕುವವರಿಗೆ ನಾನಿಟ್ಟ ಹೆಸರು)  ಬಳಿ ಕೇಳಿ ತಿಳಿದು ಅದನ್ನು ದಾಖಲಿಸಿಕೊಳ್ಳುವ ಕೆಲಸವನ್ನು ಕೆಲವೇ ಕೆಲವರಷ್ಟೇ ಮಾಡುತ್ತಾರೆ.

ಪಕ್ಷಿಯ ಫೋಟೋ ತೆಗೆಯುವುದೆಂದರೆ ಅದು ವ್ಯಕ್ತಿಯೊಬ್ಬನ ತಾಳ್ಮೆಯನ್ನೇ ಪರೀಕ್ಷಿಸಿದಂತೆ. ಅದಕ್ಕೆ ಮಹಾವಿಷ್ಣುವಿನ ತಾಳ್ಮೆಯೇ ಬೇಕು. ಒಳ್ಳೆಯ ಪೋಸು ಕೊಡುತ್ತಿರುವ ಹಕ್ಕಿ ನಾವು ಕ್ಲಿಕ್ಕಿಸುವ ಹೊತ್ತಿಗೆ ಮತ್ತೆಲ್ಲೋ ನೋಡಿರುತ್ತದೆ. ಇಲ್ಲವೇ ನಮ್ಮದು “ಔಟ್ ಓಫ್ ಫೋಕಸ್” ಆಗಿರುತ್ತದೆ, ಎರಡೂ ಸರಿಯಾಗುವ ಹೊತ್ತಿಗೆ ಹಕ್ಕಿ ಹಾರಿ ಹೋಗಿರುತ್ತದೆ. ಅಂತಾದ್ದರಲ್ಲಿ ಹಕ್ಕಿಯ ಫೋಟೋ ತೆಗೆಯುವುದು ಮಾತ್ರವಲ್ಲದೆ ಅದರ ವಿವರಗಳನ್ನು ಸಂಶೋಧಿಸಿ ಅಚ್ಚಕನ್ನಡದಲ್ಲಿ ಬರೆಯುತ್ತಾರಲ್ಲಾ, ಅವರನ್ನು ಮೆಚ್ಚಲೇಬೇಕು. ನಿಜ ಹೇಳಬೇಕೆಂದರೆ ಫೋಟೋ ತೆಗೆಯುವಾಗ ಎಷ್ಟು ತಾಳ್ಮೆ ಬೇಕೋ ಅಷ್ಟೇ ತಾಳ್ಮೆ ಅದರ ವಿವರಗಳನ್ನು ಕಲೆ ಹಾಕಿ ಬರೆಯುವುದಕ್ಕೂ ಬೇಕು. ಅಂತಹ ಪ್ರತಿಭೆ, ಆಸಕ್ತಿ ಮತ್ತು ತಾಳ್ಮೆಯುಳ್ಳ ನಮ್ಮ ಅಭಿಜಿತ್, ಹಕ್ಕಿಗಳ ಕುರಿತ ತಮ್ಮ ಮೊದಲ ಪುಸ್ತಕವನ್ನು ಬಿಡುಗಡೆಗೆ ಸಿದ್ಧಪಡಿಸಿಕೊಂಡಿದ್ದಾರೆ.

ಹೌದು.. ಅವರ ಮೊದಲ ಪುಸ್ತಕ “ಅಂಬರದೊಳಾಡುವ ಕೀಚುಗನ ಗುಟ್ಟು” ನಾಳೆ ಬಿಡುಗಡೆಯಾಗುತ್ತಿದೆ. ಪಕ್ಷಿಗಳ ಲೋಕದಲ್ಲಿ ಈಗಾಗಲೇ ನೂರಾರು ಪುಸ್ತಕಗಳಿವೆ. ಆದರೆ ಪಕ್ಷಿಗಳ ಫೋಟೋ ತೆಗೆದು ಅದರ ವಿವರಗಳನ್ನು “ರುಚಿಗೆ ತಕ್ಕಷ್ಟು ಉಪ್ಪು” ಎನ್ನುವಷ್ಟೇ ಓದುಗ ಸ್ನೇಹಿಯಾಗಿ ನಮಗೆ ಉಣಬಯಸುವ ಅಭಿಜಿತ್ ಅವರ ಪುಸ್ತಕ ತನ್ನದೇ ಆದ ವಿಶಿಷ್ಠತೆಯನ್ನು ಪ್ರದರ್ಶಿಸಲಿದೆ ಎನ್ನುವ ವಿಶ್ವಾಸ ನಮ್ಮದು.

ಅಭಿಜಿತ್ ಅವರು  ಯಶಸ್ವೀ ಪಕ್ಷಿಗನಾಗುವತ್ತ  ಇದ ಮುನ್ನುಡಿ ಬರೆಯಲಿ ಎನ್ನುವ  ಹಾರೈಕೆಯೊಂದಿಗೆ…

Facebook ಕಾಮೆಂಟ್ಸ್

Sumana Mullunja: Trying hard to be myself on this Earth. Born and brought up at Puttur, Dakshina Kannada. Completed my B.Sc and pursuing M.Sc Physics from Kuvempu University – Distance Education, Shivamogga.
Related Post