X

ಆತ್ಮ ಸಂವೇದನಾ. ಅಧ್ಯಾಯ 8

ಆತ್ಮ ಸಂವೇದನಾ. ಅಧ್ಯಾಯ 7

ವರ್ಷಿ ತನ್ನ ಪ್ರಯೋಗಾಲಯದಲ್ಲಿ ಕಾರ್ಯನಿರತನಾಗಿದ್ದ. ಅದೊಂದೇ ಅವನ ಪ್ರಪಂಚ. ಆತನ ಮಹಾಕಲ್ಪನೆ ಅದು, ಕನಸುಗಳಲ್ಲಿನ ನಿರಂತರ ಕನವರಿಕೆ ಅದು; ನಿರಂತರ ಬೆಳಕಿನ ಹಾದಿಯ ಕನಸು ಅವನದು. ಬೆಲಕೆಂಬುದು ಎಲ್ಲದಕ್ಕೂ ಬೇಕು. ರಾತ್ರಿಯಾದರೆ ಕರಾಳ ಕತ್ತಲೆ. ಹಗಲುಗಳೇ ಚಿಕ್ಕವು; ರಾತ್ರಿಯ ಕತ್ತಲೆ ದೀರ್ಘ. ವರ್ಷಿಗೆ ಕತ್ತಲೆಂದರೆ ಜಿಗುಪ್ಸೆ, ಕತ್ತಲು ಆತನಿಗೆ ಹುಟ್ಟಿದ ರಾತ್ರಿಯನ್ನು ನೆನಪಿಸುತ್ತದೆ. ಕತ್ತಲು ಆತನಿಗೆ ಕ್ರೂರತೆಯನ್ನು ನೆನಪಿಸುತ್ತದೆ. ತನ್ನೆದುರು ನಿಂತು ಈಗಲೋ ಆಗಲೋ ಅಷ್ಟೇ ತುಂಡಾದ ಕರುಳ ಬಳ್ಳಿಯ ಕಿತ್ತು ಹಾಕಲು ಹವಣಿಸುತ್ತಿದ್ದ ನಾಯಿಯನ್ನು, ಅದರ ಮೊನಚು ಹಲ್ಲುಗಳ ತೀಕ್ಷ್ಣತೆಯನ್ನು ನೆನಪಿಸುತ್ತದೆ ಕತ್ತಲು.

ಹೆಸರನಿತ್ತ ತಂದೆ ಬಿಟ್ಟು ಹೋದ ರೌರವ ಒಂಟಿತನವನ್ನು ನೆನಪಿಸುತ್ತದೆ ಕತ್ತಲು ವರ್ಷಿಗೆ. ಸೂರ್ಯನ ಬೆಳಕಿನೆದುರು ಕ್ರೌರ್ಯ ಕಡಿಮೆ. ಬೆಳಕಿನಲ್ಲಿ ಪಾಪಿಗಳೂ ಪುಣ್ಯವಂತರೇ. ರೋಗಗಳೂ ಕತ್ತಲ ಕಳ್ಳಸಂಧಿಯಿಂದಲೇ ಹೆಚ್ಚಾಗುವುದು. ಅವೆಷ್ಟೋ ಬ್ಯಾಕ್ಟೀರಿಯ ವೈರಸ್ ಗಳು ಸೂರ್ಯನ ಬೆಳಕು ಮರೆಯಾದ ಸಮಯದಲ್ಲಿಯೇ ಉಸಿರಾಡುವುದು ಎಂದು ವಿಜ್ಞಾನವೇ ಹೇಳುತ್ತದೆ. ವರ್ಷಿ ಕತ್ತಲನ್ನೇ ನಾಶಪಡಿಸಬೇಕೆಂದುಕೊಂಡ ಅಥವಾ ವಿಶ್ವಾತ್ಮನೇ ವರ್ಷಿಯನ್ನು ಪ್ರೇರೆಪಿಸಿದನೇನೋ..?

ಒಬ್ಬರಿಗೊಬ್ಬರು ಸಂಬಂಧವೇ ಇರದಂತೆ ಬದುಕುತ್ತಿದ್ದ ಪ್ರಪಂಚದಲ್ಲಿ ವರ್ಷಿಯನ್ನು ತಡೆಯುವವರು ಯಾರೂ ಇರಲಿಲ್ಲ. ತಡೆಯುವವರೇಕೆ ಇಂಥದ್ದೊಂದು ಆವಿಷ್ಕಾರ ನಡೆಯುತ್ತಿದೆ ಎಂದು ಯಾರಿಗೂ ತಿಳಿದಿರಲಿಲ್ಲ; ತಿಳಿದಿದ್ದರೂ ತಡೆಯುತ್ತಿರಲಿಲ್ಲ. ವೃತ್ತದೊಳಗಿನ ಪರಿಧಿ ಬದುಕು, ಎಲ್ಲರೂ ಅವರವರ ಪರಿಧಿಯೊಳಗೆ ಬದುಕುತ್ತಿದ್ದರು. ವಿಜ್ಞಾನಿಗಳು ವಿಜ್ಞಾನವನ್ನೇ ಸೃಷ್ಟಿಸಲು ಬಯಸುತ್ತಾರೆ; ಸಾಮಾನ್ಯರು ಜ್ಞಾನವನ್ನು ಪಡೆಯಲೂ ಒದ್ದಾಡುತ್ತಾರೆ. ಅವೆಷ್ಟೊ ವಿಜ್ಞಾನಗಳು ಸಾಮಾನ್ಯರಿಗೆ ತಿಳಿಯುವುದೇ ಇಲ್ಲ. ವಿಜ್ಞಾನದ ಸೃಷ್ಟಿಯಿಂದ ಒಳ್ಳೆಯದಾದರೆ? ಹೊಸ ಸೃಷ್ಟಿಗಳಿಂದ ಜಗತ್ತಿಗೆ ಹಾನಿಯಾದರೆ? ಇಂಥದನ್ನು ಯಾರು ಯೋಚಿಸುವುದೇ ಇಲ್ಲ, ಕೇಳುವಷ್ಟು ಸಮಯವೂ ಇಲ್ಲ. ಎಲ್ಲರೂ ತಮ್ಮದೇ ಸಂಕೋಲೆಗಳಲ್ಲಿ ಬದುಕುತ್ತಾರೆ, ಸ್ವತಂತ್ರವೆಂದುಕೊಂಡು ಬಂಧಿಸಿಕೊಳ್ಳುತ್ತಾರೆ.

ಈ ವಿಶ್ವವನ್ನೇ ಸೃಷ್ಟಿಸಿದ ವಿಶ್ವಾತ್ಮ ಎಂದಿಗೂ ಯಾರಿಗೂ ಯಾವ ಬೇಲಿಗಳನ್ನು ಹಾಕಲಿಲ್ಲ. ಇವಿಷ್ಟೇ ಬದುಕು, ಇಷ್ಟರಲ್ಲೇ ಬದುಕು ಎಂದು ಯಾವತ್ತೂ ಒತ್ತಾಯಿಸಲಿಲ್ಲ. ಮನುಷ್ಯನೇ ಬೇಲಿಗಳನ್ನು ಸೃಷ್ಟಿಸಿಕೊಂಡ. ಇದು ನನ್ನ ಭೂಮಿ, ನನ್ನ ದೇಶ, ನನ್ನ ರಾಜ್ಯ, ಊರು ನನ್ನದು, ಮನೆ ಅದೂ ನನ್ನದೇ, ಕೊನೆಯಲ್ಲಿ ನಾನು ನನ್ನವರು ಎಂಬ ಪರಿಕಲ್ಪನೆಯ ಬೇಲಿಗಳನ್ನು ಹಾಕಿಕೊಂಡು ಅದು ಇದ್ದ ಸ್ಥಿತಿಯಲ್ಲಿಯೇ ಬದುಕತೊಡಗಿದ.

ಮನುಷ್ಯ ತಾನಾಗಿಯೇ ಸೃಷ್ಟಿಸಿಕೊಂಡ ಪರಿಧಿಯ ಜೊತೆ ಇತರರೊಂದಿಗೆ ಮನಸ್ತಾಪಗಳನ್ನು ಸೃಷ್ಟಿಸಿಕೊಂಡ. ಅಂಥ ಮನಸ್ತಾಪಗಳು ಜಗಳ ಕಲಹಗಳಾಗಿ ಯುದ್ಧವಾಗಿ ಬದಲಾಗಲು ಯುಗಾಂತರಗಳ ಅವಶ್ಯಕತೆಯಿಲ್ಲ; ಬದಲಾವಣೆ ಒಳ್ಳೆಯದಾದರೆ  ಸಮಯ ಹಿಡಿಯುವುದು. ಎಲ್ಲರೂ ಒಂದೇ, ಇದು ನಮ್ಮ ಭೂಮಿ, ಎಲ್ಲರೂ ನನ್ನವರೇ ಎಂದು ಬದುಕಿದ್ದರೆ ಮಹಾಯುದ್ಧಗಳು ನಡೆಯುತ್ತಿರಲಿಲ್ಲ. ವಿಶ್ವಾತ್ಮನಿಗೆ ಹಾನಿಯಾಗುತ್ತಿರಲಿಲ್ಲ. ತನ್ನದೇ ಜೀವಗಳು ಒಬ್ಬರಿಗೊಬ್ಬರು ಗುದ್ದಾಡಿ ಸಾಯುವುದನ್ನು ವಿಶ್ವಾತ್ಮ ಬಯಸಲಾರ….

 ಅನಂತ ಆನಂದದ ಮಹತ್ವವನ್ನು ಮರೆಯಬೇಡ. .

 ಪ್ರಪಂಚದ ಚರ ವಸ್ತುಗಳಲ್ಲಿರುವ ಸೌಂದರ್ಯವನ್ನು ಅಲಕ್ಷಿಸಬೇಡ. .

             ಈ ಬದುಕು, ಈ ದಿನ ಒಂದು ಉಡುಗೊರೆ. .

             ಜೀವನದ ಉದ್ಧೇಶದ ಕಡೆ ಏಕಾಗ್ರ ದೃಷ್ಟಿ ಇರಲಿ. .

             ಉಳಿದೆಲ್ಲವನ್ನೂ ವಿಶ್ವಾತ್ಮ ನೋಡಿಕೊಳ್ಳುತ್ತದೆ. .

             ಪ್ರೀತಿಸುವುದೇ ಜೀವನ. .

             ಸರಳತೆಯೇ ಆನಂದ. .

             ಬದುಕುವುದನ್ನು ಕಲಿ. .

             ನಗುವುದನ್ನು ತಿಳಿ. .

ದಿನಗಳು ಕಳೆಯುತ್ತಿದ್ದವು. ಜನರ ಮನಸ್ಥಿತಿಯೂ ಬದಲಾಗುತ್ತಲೇ ಹೋಯಿತು. ಯುದ್ಧದ ಫಲಿಂತಾಶವನ್ನು ಯಾರೂ ತಿಳಿದಿರುವುದಿಲ್ಲ. ಆದರೂ ಎಲ್ಲರಿಗೂ ಯುದ್ಧ ಬೇಕು. ಯುದ್ಧಗಳು ಪ್ರಾರಂಭವಾಗಿದ್ದೇ ಮನುಷ್ಯನ ಅಂತರಂಗದಿಂದ. ಮನುಷ್ಯ ಬದುಕುವ ನೀತಿಯಿಂದ ದೂರಾದ. ಮನಸ್ಸಿನೊಳಗೆ ಯುದ್ಧ ಪ್ರಾರಂಭ. ತಾನು ಬದುಕುತ್ತಿರುವುದು ಏತಕ್ಕೆ? ಬದುಕುವ ರೀತಿ ಹೇಗೆ? ಎಂಬ ವಿಚಾರಗಳೇ ಅರ್ಥವಾಗದೆ ಯೋಚನೆಗಳ ಯುದ್ಧ ಪ್ರಾರಂಭ. ಮನಸ್ಸು ಮತ್ತು ಬುದ್ಧಿ; ಒಂದು ಭಾವುಕ ಮತ್ತೊಂದು ಭೌತಿಕ. ಒಂದರಂತೆ ಮತ್ತೊಂದು ಸಾಧ್ಯವೇ ಇಲ್ಲ. ಮನಸ್ಸಿನದು ಒಂದು ದಾರಿಯಾದರೆ ಬುದ್ಧಿಯದು ಬೇರೆಯದೇ ದಾರಿ. ಮನಸ್ಸು ಮತ್ತು ಬುದ್ಧಿಯ ಮಧ್ಯ ಯುದ್ಧ, ಯಾರು ಗೆಲ್ಲುವರು? ಸೋಲುವವರು ಯಾರು? ಸಿಗದ ಉತ್ತರಗಳು, ಬರದ ಫಲಿತಾಂಶಗಳು. ಆದರೂ ತನ್ನೊಳಗೆ ಯುದ್ಧ.

ತನ್ನ ಜೀವನದ ಉದ್ಧೇಶ ಮತ್ತು ಗುರಿಯೊಂದಿಗೆ ಕೂಡ ಯುದ್ಧ ಪ್ರಾರಂಭ. ಕೊನೆಯಲ್ಲಿ ಮನುಷ್ಯ ಎಲ್ಲವನ್ನೂ ಕಳೆದುಕೊಂಡು ತಾನು ಸೃಷ್ಟಿಸಿಕೊಂಡ ಬೇಲಿಯೊಳಗೆ  ಬದುಕಿದರೂ ತನ್ನ ಜೀವನವೂ ಯುದ್ಧದಲ್ಲೇ ಕಳೆಯುವಂತೆ ಮಾಡಿಕೊಂಡ. ವಿಶ್ವಾತ್ಮ ಹೇಳಿದ್ದ, ಮತ್ತೆ ಮತ್ತೆ ಹೇಳುತ್ತಿದ್ದ ಒಂದು ದಿನ ಎಲ್ಲರೂ ಗೆಲ್ಲುತ್ತೀರಿ, ನೀವು ವಿಶ್ವಾತ್ಮನಿಂದ ಪಡೆದಿರುವುದನ್ನೆಲ್ಲ ಶಾಶ್ವತವಾಗಿ ಅವನಿಗೆ ಅರ್ಪಿಸಿದಾಗ ನೀವೆಲ್ಲರೂ ಗೆಲ್ಲುತ್ತೀರಿ. ಯುದ್ಧಗಳು ಬೇಡ ಎಂದು ಹೇಳುತ್ತಲೇ ಇದ್ದ. ಮನುಷ್ಯ ಜಾಣ ಕಿವುಡ, ಬುದ್ಧಿಯಿರುವ ಪ್ರಾಣಿಯಲ್ಲವೇ?

ಕೊನೆಯಲ್ಲಿ ಸಹಿಸಲಾರದ ವಿಶ್ವಾತ್ಮನೇ ಯುದ್ಧ ಸಾರಿದ. ಅದರ ಪ್ರತಿಫಲವೇ ಮತ್ತೊಂದು ಕತ್ತಲಿಲ್ಲದ ಭೂಮಿ.

ವರ್ಷಿ ತನ್ನ ಕೆಲಸಗಳಲ್ಲಿ ಕಳೆದು ಹೋಗಿದ್ದ. ಅವನ ಎಲ್ಲ ಆವಿಷ್ಕಾರಗಳು ನಡೆದದ್ದು ಅಲ್ಲಿಯೇ. ಅವುಗಳಲ್ಲಿ ಯಾವುದೇ ಒಂದೂ ವಿಫಲವಾಗಿರಲಿಲ್ಲ.ವರ್ಷಿಯ ಹೊಸ ಪ್ರಯೊಗವೊಂದು ಕೆಲವೇ ದಿನಗಳ ಹಿಂದೆ ಯಶಸ್ವಿಯಾಗಿತ್ತು. ಆದರೆ ಇದು ಕಷ್ಟ. ವರ್ಷಿ ಯಾವುದೋ ರಾಕೆಟ್ ಉಡಾವಣೆ ಮಾಡಿ ಎಲಿಮೆಂಟ್ ಗಳನ್ನು ಮೇಲಕ್ಕೆ ಚಿಮ್ಮಿಸುತ್ತಿರಲಿಲ್ಲ.

ಆಗಾಗ ವರ್ಷಿಗೊಂದು ಕನಸು ಬೀಳುತ್ತಿತ್ತು. ಕನಸನ್ನೂ ಮೀರಿ ವಿಚಿತ್ರ ಅನುಭೂತಿಯೆನ್ನುವುದೇ ಸರಿ. ಮಲಗಿದ್ದ ವರ್ಷಿ ತನ್ನ ದೇಹದ ತೂಕವನ್ನು ಕಳೆದುಕೊಳ್ಳುತ್ತಿದ್ದ. ಮೊದಮೊದಲು ಸ್ವಲ್ಪಸ್ವಲ್ಪವಾಗಿ, ನಂತರದಲ್ಲಿ ಪೂರ್ತಿಯಾಗಿ ದೇಹದ ತೂಕ ಕಳೆದುಕೊಂಡು ವರ್ಷಿಯ ದೇಹ ಗಾಳಿಯಲ್ಲಿ ಹಾರತೊಡಗುತ್ತಿತ್ತು. ಅದೊಂದು ಅದ್ಭುತ ಅನುಭವ. ದೇಹಕ್ಕೆ ತೂಕವೇ ಇಲ್ಲ, ದೇಹದ ತೂಕ ತಿಳಿಯುತ್ತಿಲ್ಲ. ಅಲ್ಲಿಗೆ? ಭೂಮಿಯ ಗುರುತ್ವದ ಶಕ್ತಿಯನ್ನು ಪೂರ್ತಿಯಾಗಿ ನಿಲ್ಲಿಸಿದಂತೆ. ಗುರುತ್ವ ಶಕ್ತಿ ವರ್ಷಿಯ ಮೇಲೆ ಯಾವುದೇ ಬೀರುತ್ತಿರಲಿಲ್ಲ, ವರ್ಷಿ ಗಾಳಿಯಲ್ಲಿ ತೇಲುತ್ತಿದ್ದ.

ಇದೇ ಕನಸು ಮತ್ತೆ ಮತ್ತೆ ಕಾಡಿದಾಗ ವರ್ಷಿ ತಡಮಾಡಲಿಲ್ಲ. ಅದರ ಒಳಗುಟ್ಟನ್ನು ಅರಿಯುವ ಹಠ. ಆಟ ಹೇಗಾದರೂ ಸರಿ ತನ್ನ ಮೇಲೆ ಪ್ರಭಾವ ಬೀರುತ್ತಿರುವ ಗುರುತ್ವದ ಶಕ್ತಿಯನ್ನು ತಡೆಯಬೇಕೆಂದು ಪ್ರಯತ್ನಿಸಿದ. ಅದು ಸಾಧ್ಯವಾಗದೇ ಹೋಯಿತು. ಪುಟ್ಟ ಹಕ್ಕಿಯು ಹಾರಬಲ್ಲದು, ಗುರುತ್ವವನ್ನೂ ಮೀರಬಲ್ಲದು ಎಂದಾದರೆ ಮನುಷ್ಯನಿಗೆ ಏಕೆ ಸಾಧ್ಯವಿಲ್ಲ?

ವರ್ಷಿ ಅವನು, ಮತ್ತೆ ಮತ್ತೆ ಪ್ರಯತ್ನಿಸಿದ. ಶಾಂತಿಯಲ್ಲಿ ಗೌತಮನಾದರೆ, ಹಟದಲ್ಲಿ, ಸೊಕ್ಕಿನಲ್ಲಿ ವಿಶ್ವಾಮಿತ್ರ ಅವನು, ಛಲ ಬಿಡದ ತ್ರಿವಿಕ್ರಮ. ಏನು ಮಾಡಬೇಕು? ಭೂಮಿಯ ಗುರುತ್ವವನ್ನು ಮೀರಲು ಏನು ಮಾಡಬೇಕು? ವರ್ಷಿಯ ಸೂತ್ರಗಳು, ತಾಳೆಗಳು ಎಲ್ಲವೂ ವಿಫಲವಾಯಿತು. ವರ್ಷಿ ಕೈಲಾಗದ್ದು ಎಂದು ಬಿಟ್ಟು ನಿಂತಿದ್ದ ಮೊದಲ ಬಾರಿ…

” ಮನುಷ್ಯ ಹಾರಲು ವಿಫಲನಾದ, ಮನುಷ್ಯ ಗುರುತ್ವವನ್ನು ಮೀರದಿರಲು ಕಾರಣ ಅವನ ದೇಹ. ಶರೀರವೇ ಬೇಲಿ ಅವನಿಗೆ ” ಎಂದ ವಿಶ್ವಾತ್ಮ. ವರ್ಷಿ ವಿಫಲನಾದಾಗಲೆಲ್ಲ ಜೊತೆಗೆ ನಿಂತಿದ್ದು ವಿಶ್ವಾತ್ಮನೇ, ಅವನ ಹೆಮ್ಮೆಯ ತಂದೆಯೇ.

“ನನಗರ್ಥವಾಗಲಿಲ್ಲ” ಎಂದ ವರ್ಷಿ. ಅವನಿಗೂ ಸೋಲಿನ ಭಯ. ಅಂತರಂಗದೆದುರು ಸೋತು ನಿಲ್ಲುವ ಭಯ.

ವಿಶ್ವಾತ್ಮನ ಮುಖದಲ್ಲಿ ನಗು ಹಾದು ಹೋಯಿತು; ಹಾದು ಹೋದದ್ದಲ್ಲ, ಹಸನ್ಮುಖ ವಿಶ್ವಾತ್ಮ. ಮುದ್ದು ಕಂದಮ್ಮನ ನಗುವಿನ ಮುಗ್ಧತೆ. ಆ ನಗುವಿನಲ್ಲಿ ಮತ್ತೆ ಮತ್ತೆ ನೋಡಬೇಕು, ಕಣ್ತುಂಬಿಕೊಳ್ಳಬೇಕೆಂದು ಬಯಸುವ ಭಾವ.

” ಮರಳಿನ ಕಣಗಳು ನೀರಿನಲ್ಲಿ ಮುಳುಗುತ್ತವೆ. ಚಿಕ್ಕ ಪುಟ್ಟ ಕಲ್ಲುಗಳು ನೀರಿನಲ್ಲಿ ಮುಳುಗುತ್ತವೆ. ಅದೇಕೆ ದೊಡ್ದ ಬಂಡೆಯೂ ಸೇರುವುದು ನೀರಿನ ಆಳವನ್ನೇ. ದೊಡ್ದ ಹಡಗು ನೀರಿನಲ್ಲಿ ಮುಳುಗುವುದಿಲ್ಲ ಹೇಗೆ ಸಾಧ್ಯ?” ಎಂದ ವಿಶ್ವಾತ್ಮ.

ವಿಶ್ವಾತ್ಮ ವರ್ಷಿಗೆ ತಂದೆ. ವರ್ಷಿ ವಿಜ್ಞಾನಕ್ಕೇ ತಂದೆ. ಅದು ಗೊತ್ತವನಿಗೆ ಹಡಗು ನೀರಿನ ಮೇಲೆ ತೇಲುವಂತೆ ಅದಕ್ಕೆ ಹೇಗೆ ರೂಪವನ್ನು ನೀಡುತ್ತಾರೆ ಎಂದು. ಸಣ್ಣ ಕಬ್ಬಿಣದ ತುಂಡು ನೀರಿನಲ್ಲಿ ಮುಳುಗುತ್ತದೆ. ಆದರೆ ಕಬ್ಬಿಣವೇ ತುಂಬಿರುವ ಹಡಗು ತೇಲುತ್ತದೆ. ವಿಚಿತ್ರವೆನಿಸಿದರೂ ಸತ್ಯ. ವರ್ಷಿ ಅದರ ಬಗ್ಗೆಯೇ ಯೋಚಿಸಿದ. ಆದರೂ ಗುರುತ್ವವನ್ನು ಮೀರುವುದು ಹೇಗೆಂದು ತಿಳಿಯಲಿಲ್ಲ. ಗುರುತ್ವದ 9.8m/s2 ದಾಟಬೇಕೆಂದರೆ ಅದಕ್ಕಿಂತಲೂ ಬಲವಾದ ಶಕ್ತಿಯನ್ನು ಪ್ರಯೋಗಿಸಬೇಕು. ಅದಕ್ಕೆ ಮತ್ತೆ ಹೊರಗಿನ ಶಕ್ತಿ ಬೇಕು ಎಂದು ಮನಸ್ಸಿನಲ್ಲಿಯೇ ಲೆಕ್ಕ ಹಾಕುತ್ತಿದ ವರ್ಷಿ.

” ಯಾವಾಗಲೂ ವಿಜ್ಞಾನಿಯಂತೆ ಯೋಚಿಸಬೇಡ. ಅದರಿಂದ ದೂರ ನಿಂತು ನೋಡು ವರ್ಷಿ, ವಿಜ್ಞಾನವನ್ನು ಮೀರಿದ್ದು ಇದೆ. ವಿಜ್ಞಾನ ಏನನ್ನೇ ಸೃಷ್ಟಿಸಿದ್ದರೂ ಎಲ್ಲದಕ್ಕೂ ಮೂಲ ಈ ವಿಶ್ವವೇ. ಮನುಷ್ಯ ಮತ್ತು ಇನ್ನುಳಿದ ಯಾವುದೇ ಜೀವಿಗಳು ಕೂಡ ಬರುವಾಗ ಏನು ಹೊತ್ತು ಬಂದಿಲ್ಲ, ಉಸಿರು ನಿಂತ ಮೇಲೆ ಬೆತ್ತಲೆಯೇ ಸತ್ಯ ಎಂದ ಮೇಲೆ ಈ ವಿಜ್ಞಾನಕ್ಕೆ ದೊರೆತ ಪ್ರತಿಯೊಂದೂ ಅಂಶವೂ ವಿಶ್ವದ ಚೇತನವೇ ತಾನೆ?” ಕೇಳಿದ ವಿಶ್ವಾತ್ಮ.

ವರ್ಷಿ ಹೌದೆಂಬಂತೆ ತಲೆಯಾಡಿಸಿದ. ಅವನ ಮೆದುಳು ತುಂಬ ವೇಗವಾಗಿ ಕೆಲಸ ಮಾಡುತ್ತಿತ್ತು, ವಿಶ್ವಾತ್ಮ ಏನು ಹೇಳುತ್ತಿದ್ದಾನೆ? ತನಗೆ ಯಾವ ದಿಕ್ಕಿನಲ್ಲಿ ಯೋಚಿಸಲು ಹೇಳುತ್ತಿದ್ದಾನೆ ಎಂದು.

ವಿಶ್ವಾತ್ಮ ಮಾತನಾಡುತ್ತಲೇ ಇದ್ದ ” ಮನುಷ್ಯ ಹುಟ್ಟಿಸಿದ ವಿಜ್ಞಾನ ಏನೂ ಅಲ್ಲ, ಮನುಷ್ಯ ಈ ವಿಶ್ವದ ಕೋಟಿಯ ಒಂದು ಭಾಗಕ್ಕೂ ಸಮವಲ್ಲ, ಆತ ತೃಣ ಮಾತ್ರ. ಮಹಾಸಮುದ್ರದಲ್ಲಿ ಬೊಗಸೆಯಿಂದ ಬಿದ್ದ ನೀರಿನ ಹನಿಯಂತೆ. ಅನಂತ ಆಗಸದಲ್ಲಿ ಬೆಳಕಾಗ ಬಯಸುವ ಮಿಣುಕು ನಕ್ಷತ್ರದಂತೆ. ಮನುಷ್ಯನಿಗೆ, ಭೂಮಿಯ ಮೇಲಿನ ಜೀವಿಗಳಿಗೆ ತಿಳಿಯದ ಅದೆಷ್ಟೋ ವಿಜ್ಞಾನ ಈ ಭೂಮಿಯಲ್ಲಿದೆ ವರ್ಷಿ, ಯೋಚಿಸು ಒಮ್ಮೆ” ಎಂದ.

ವರ್ಷಿ ಅರ್ಥವಾಗದ ಭಾಷೆ ಕೇಳಿದವಂತೆ ಕಣ್ಮುಚ್ಚದೆ ವಿಶ್ವಾತ್ಮನನ್ನೇ ನೋಡುತ್ತಿದ್ದ. ವಿಶ್ವಾತ್ಮನೆದುರು ತಾನು ಸೋಲುತ್ತಿದ್ದೇನೆ ಎಂಬ ಭಾವ ಒಮ್ಮೆ ಮಿಂಚಾಗಿ ಹೋಯಿತು ವರ್ಷಿಯ ಮನದಲ್ಲಿ. ಎಷ್ಟೆಂದರೂ ಗಂಡಸಿನ ಅಹಂ. ವಿಶ್ವಾತ್ಮ ಮತ್ತದೇ ನಗು ನಕ್ಕ.                                                                                           

“ಇದು ಸಾಧ್ಯವೇ ಇಲ್ಲ, ಒಂದು ಹೊರಗಿನ ಶಕ್ತಿ ವಸ್ತುವಿನ ಮೇಲೆ ಪ್ರಯೋಗವಾಗದಿದ್ದರೆ ವಸ್ತು ಹಾರಲು ಸಾಧ್ಯವೇ ಇಲ್ಲ.” ಮಾತು ನಿಲ್ಲಿಸಿದ ವರ್ಷಿ.

ವಿಶ್ವಾತ್ಮ ನಗುತ್ತಲೇ ಹೇಳಿದ ” ಆ ಗೋಡೆಯನ್ನೊಮ್ಮೆ ನೋಡು ” ಕತ್ತು ತಿರುಗಿಸಿದ ವಿಶ್ವಾತ್ಮ.

” ಸರಿಯಾಗಿ ನೋಡಿ ಹೇಳು” ಎಂದು ನಸುನಕ್ಕ.

ಅಲ್ಲಿ ಹೊಸದೇನಿದೆಯೆಂಬಂತೆ ವರ್ಷಿ ಮತ್ತೊಮ್ಮೆ ದಿಟ್ಟಿಸಿದ. ವರ್ಷಿ ಬೆಳಕಿಗೆ ಎದುರಾಗಿ ನಿಂತಿದ್ದರಿಂದ ಆತನದೇ ನೆರಳು ಗೋಡೆಯ ಮೇಲೆ ಬೀಳುತ್ತಿತ್ತು.

” ನೆರಳು, ತನ್ನದೇ ನೆರಳು ಅಷ್ಟೆ” ಎಂದು ಮೌನವಾದ ವರ್ಷಿ.

ತನ್ನ ಪ್ರಶ್ನೆಗೆ ಉತ್ತರವಲ್ಲದ ವಿಷಯಗಳು, ವಿಶ್ವಾತ್ಮನ ವಿಷಯಾಂತರಗಳು ಎಂದು ಮೌನವಾದ ನೆರಳಿಗೂ ಗುರುತ್ವಕ್ಕೂ ತಾಳಮೇಳವಿಲ್ಲವೆಂಬಂತೆ.

” ವರ್ಷಿ ನೀನು ಹೇಗಿಷ್ಟು ಮೂರ್ಖನಾಗಲು ಸಾಧ್ಯ? ಇದನ್ನೂ ನಾನೇ ಹೇಳಬೇಕೆಂದರೆ ಹೇಗೆ? ಆದರೂ ಹೇಳುತ್ತೇನೆ ಕೇಳು, ನಿನಗೆ ದೇಹವಿದೆ, ದೇಹಕ್ಕೆ ತೂಕವಿದೆ ಸರಿ. ಆದರೆ ನಿನ್ನ ನೆರಳಿಗೆ ತೂಕವಿದೆಯೇ? ಕನ್ನಡಿಯ ಎದುರಿನಲ್ಲಿ ನಿಂತ ನಿನಗೆ ತೂಕವಿದೆ, ಒಳಗೆ ಕಾಣುವ ನಿನ್ನ ಪ್ರತಿಬಿಂಬಕ್ಕೆ ತೂಕವಿದೆಯೇ? ನೀರಿನಲ್ಲಿ ನಿಂತ ನಿನಗೆ ತೂಕವಿದೆ, ನಿನ್ನ ಅಣಕಿಸುವ ಬಿಂಬಕ್ಕೆ ತೂಕವಿದೆಯೇ? “

ವಿಶ್ವಾತ್ಮ ಮಾತಿನ ಮಹಾಪೂರ ” ಮರದ ಮೇಲಿನ ಸೇಬು ಯಾವಾಗಲೂ ನೆಲಕ್ಕೆ ಬೀಳುತ್ತಿತ್ತು. ಅದೇ ಏಕೆ? ಮೇಲಕ್ಕೆ ಹಾರಿದ ಪ್ರತಿಯೊಂದು ವಸ್ತುವೂ ನೆಲಕ್ಕೆ ಬರುತ್ತಿತ್ತು. ಇಷ್ಟಾದರೂ ಮನುಷ್ಯನಿಗೆ ಭೂಮಿ ತನ್ನನ್ನು ಸೆಳೆಯುತ್ತಿದೆ ಎಂದು ತಿಳಿದಿರಲಿಲ್ಲ. ಸೇಬು ತಲೆಯ ಮೇಲೆ ಬಿದ್ದವನಿಗೆ ತಿಳುವಳಿಕೆಯಿತ್ತೇನೋ…!? ವಿಶ್ವವು ಯಾವಾಗಲೂ ಸೂಚನೆ ಅಥವಾ ವಿಜ್ಞಾನವನ್ನು ಕಣ್ಣಮುಂದೆ ತರುತ್ತಲೇ ಇರುತ್ತದೆ. ಅದನ್ನು ಗ್ರಹಿಸುವ ಶಕ್ತಿ ಎಲ್ಲರಿಗೂ ಇರುವುದಿಲ್ಲ ಅಷ್ಟೆ.”

“ಗ್ರಹಿಸುವ ಶಕ್ತಿ ಎಂಬುದು ಬದುಕುವ ನೀತಿಯಿಂದ ಬರುತ್ತದೆ. ವಿಶ್ವವು ಪ್ರತಿಬಿಂಬವನ್ನು ನೆರಳಿನಲ್ಲಿ, ಕನ್ನಡಿಯಲ್ಲಿ, ನೀರಿನಲ್ಲಿ ತೋರಿಸಿತ್ತು. ಯಾರೂ ಗ್ರಹಿಸಲಿಲ್ಲ. ಯಾರಾದರೂ ನಿನಗೆ ಹೊಡೆಯಬಹುದು. ನಿನ್ನ ನೆರಳಿಗೆ ಹೊಡೆಯಲು ಸಾಧ್ಯವಿಲ್ಲ. ನಿನ್ನ ಬಿಂಬವನ್ನು ಯಾರೂ ಹಿಡಿಯಲಾರರು. ಯಾರಿಗೂ ಅದನ್ನು ಕೊಲ್ಲುವ ಸಾಮರ್ಥ್ಯವಿಲ್ಲ. ನೀನು ಹಾರುವುದು ಸಾಧ್ಯವೇ ಇಲ್ಲ ಎಂದು ಹೇಳುತ್ತಿರುವೆ, ಹಾರುತ್ತಿರುವ ಜೀವಿ ನಾನು ಸ್ವತಃ ನಿನ್ನ ಮುಂದೆಯೇ ಇದ್ದೇನೆ. ಕೇವಲ ಭೂಮಿಯ ಗುರುತ್ವವಲ್ಲ, ಇಡೀ ವಿಶ್ವದಲ್ಲಿರುವ ಎಲ್ಲ ಗುರುತ್ವವನ್ನು ಮೀರಿ ನಾನು ಹಾರುತ್ತಿದ್ದೇನೆ. ನನಗೆ ಯಾವುದೇ ಹೊರಗಿನ ಶಕ್ತಿ ಸಹಾಯ ಮಾಡುತ್ತಿಲ್ಲ, ಆದರೂ ಹಾರುತ್ತಿದ್ದೇನೆ. ನಾನೀಗ ನಿನ್ನ ಜೊತೆಯಲ್ಲಿದ್ದೇನೆ ಎಂದರೆ ನಿನ್ನ ಜೊತೆಯಲ್ಲಿ ಮಾತ್ರವಲ್ಲ ನಾನು ವಿಶ್ವದ ಪ್ರತಿಯೊಂದು ಜೀವಿಗೂ ಬದುಕುವ ನೀತಿ ಹೇಳುತ್ತಿರುತ್ತೇನೆ. ಅವರಿಗೆ ಅರಿವಾಗದಂತೆ ಬದುಕುವ ರೀತಿ ತೋರಿಸುತ್ತಿರುತ್ತೇನೆ. ಒಮ್ಮೊಮ್ಮೆ ನೇರವಾಗಿ, ಇನ್ನೊಮ್ಮೆ ಕನಸುಗಳಾಗಿ.ಮತ್ತೊಮ್ಮೆ ಸೂಚನೆಗಳಾಗಿ, ಕೆಲವೊಮ್ಮೆ ಭಯ ಹುಟ್ಟಿಸಿ, ನಗಿಸಿ, ಅಳಿಸಿ…. ಕಲಿಸುತ್ತಲೇ ಇರುತ್ತೇನೆ. ಹೇಗೆ ಸಾಧ್ಯ..? ನಾನು ಭೂಮಿಯ ಅದನ್ನೂ ಮೀರಿದ ಗುರುತ್ವವನ್ನು ಮೀರುತ್ತೇನೆಂದಾದರೆ ನೀನು ಈ ಭೂಮಿಯ ಗುರುತ್ವವನ್ನು ಮೀರಲಾರೆಯಾ?”

“ಗುರುತ್ವ ಎಂದರೇನು? ಕೇಳು, ಅದನ್ನೂ ತಿಳಿಸುತ್ತೇನೆ, ಪ್ರೀತಿ, ಅದಮ್ಯ ಪ್ರೀತಿ. ಗುರುತ್ವ ಎಂದರೆ ಅದೊಂದು ಸ್ವಾರ್ಥ. ತನ್ನ ಸ್ವಂತದ ಯಾವುದೇ ವಸ್ತುವೂ ತನ್ನಿಂದ ದೂರ ಹೋಗಬಾರದು ಎಂಬ ಭಾವ. ಕೆಲವೊಮ್ಮೆ ಬದುಕುವ ನೀತಿ ಕಲಿತ ಜೀವಿಗಳು ನನ್ನ ಸೂಚನೆ ಗ್ರಹಿಸಿ ಗುರುತ್ವ ಮೀರಿ ಹಾರುತ್ತವೆ. ಆಗ ಭೂಮಿಯ ಪ್ರೀತಿಗೂ ಆ ಜೀವಿಗಳ ಮನಸ್ಸಿಗೂ ನಡುವೆ ಯುದ್ಧ ನಡೆಯುತ್ತದೆ. ಯ್ಯರು ಗೆಲ್ಲುತ್ತಾರೆ ಎಂಬುದು ಅವುಗಳ ಮನಸ್ಸಿನ ಮೇಲೆ ನಿರ್ಧಾರವಾಗುತ್ತದೆ. ಮೋಡವು ಗುರುತ್ವವನ್ನು ಮೀರುತ್ತದೆ. ಬಿಸಿಲಿಗೆ ಆವಿಯಾಗುವ ನೀರು ಕೂಡ ಗುರುತ್ವವನ್ನು ಮೀರುತ್ತದೆ. ಬೀಸುವ ಗಾಳಿಯೂ ಗುರುತ್ವವನ್ನು ಮೀರುತ್ತದೆ. ಅವುಗಳಿಗೆಲ್ಲ ಯಾವ ಹೊರಗಿನ ಶಕ್ತಿ ಸಹಾಯ ಮಾಡುತ್ತದೆ? ಅವುಗಳ ಒಳಗಿನ ಶಕ್ತಿ ಮಾತ್ರ. ನಾನು ಹೇಗೆ ಎಲ್ಲ ಕಡೆ ಇರಬಲ್ಲೆ? ಯೋಚಿಸು ವರ್ಷಿ, ಯೋಚಿಸಿ ನೋಡು. ” ವಿಶ್ವಾತ್ಮ ಮರೆಯಾಗಿ ಹೋದ. ಅಲ್ಲಿಯೇ ಇದ್ದರೂ ಕಾಣಿಸದಂತೆ; ಕಾಣಿಸಿದರೂ ಅಲ್ಲಿರದಂತೆ.

ಈ ಬಾರಿ ವರ್ಷಿಯ ಮುಖದ ಮೇಲೂ ನಗು ಮೂಡಿತ್ತು. Virtuality ಎಂದು ನಕ್ಕ ವರ್ಷಿ. ” ಪ್ರತಿಬಿಂಬ” “ನೆರಳು” ಶಬ್ದಗಳು ನೆನಪಾಗುತ್ತಲೇ ಇದ್ದವು. ವಿಶ್ವಾತ್ಮ ನಕ್ಕಂತೆ ಕೇಳಿತು. ಸುತ್ತಲೂ ಅವರಿಬ್ಬರ ನಗುವಿನ ಪಡಸಾಲೆ. ವರ್ಷಿಯು ಹೊರಗಿನ ಯಾವುದೇ ಶಕ್ತಿಯ ಸಹಾಯವಿಲ್ಲದೆ ಹಾರಿದ ಅಂದು. ಯಾವುದೇ ವಸ್ತುವನ್ನಾದರೂ ಗುರುತ್ವ ಮೀರಿಸಿ ತೇಲಾಡಿಸುವುದು ಹೇಗೆಂದು ಕಲಿತ. ಅಂದು ಕಲಿತ ವಿದ್ಯೆ ವರ್ಷಿಯ ಎರಡನೇ ಸೂರ್ಯನ ಉಗಮಕ್ಕೆ ಇಂದು ಸಹಾಯ ಮಾಡಿತು.

“ಎಂದಿಗೂ ವಿಶ್ವದ ಸೂಚನೆಯನ್ನು ಗ್ರಹಿಸು, ಗ್ರಹಿಸುವ ಕಲೆಯೇ ಬದುಕಿನ ನೀತಿ. ಒಮ್ಮೆ ನೀನದನ್ನು ಕಲಿತರೆ ಉಳಿದೆಲ್ಲವನ್ನೂ ಕಲಿತಂತೆ.” ವಿಶ್ವಾತ್ಮನ ಧ್ವನಿ ಪ್ರತಿಧ್ವನಿಸಿತು.

Facebook ಕಾಮೆಂಟ್ಸ್

Gautam Hegde: ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..
Related Post