X

“ಬರಗಾಲವಿದೆ,ವಿಶ್ವ ಕನ್ನಡ ಸಮ್ಮೇಳನ ಮಾಡಬೇಡಿ ಅಂತ ಕೂಗುವವರು ಮಸಾಲೆ ದೋಸೆ ತಿನ್ನುವುದನ್ನು ಬಿಟ್ಟಿದ್ದಾರೋ?”

ಅಸಹಿಷ್ಣುತೆ ಎಂದರೆ ಏನು?
ದೇಶದಲ್ಲಿ ಅದು ಇದೆ ಎಂದು ಎಂದು ಹೇಳುವವರು ಅದು ತನಗೆ ಮಾಡಿದ ಅನುಭವವೇನು ಎಂಬುದನ್ನೂ ಹೇಳಬೇಕು. ಹಾದಿಬೀದಿಯಲ್ಲಿ ಹೋಗುವವರು ಮಾತನಾಡಿದರೆ ಅದಕ್ಕೆ ಉತ್ತರದಾಯಿತ್ವ ಬೇಕಿಲ್ಲ. ಆದರೆ ಅಮೀರ್ ಖಾನ್, ಶಾರೂಖ್ ಖಾನ್, ಎ.ಆರ್.ರೆಹಮಾನ ಅಂಥವರು ಮಾತನಾಡಿದರೆ ಕೇಳಿ ಸುಮ್ಮನಿರಲಾಗುವುದಿಲ್ಲ. ಏಕೆಂದರೆ ಇವರೆಲ್ಲಾ ಜನಸಮೂಹದಿಂದ ವಸ್ತುಶಃ ಆರಾಧಿಸಲ್ಪಡುತ್ತಿರುವವರು. ತಮಗೆ ಅಸಹಿಷ್ಣುತೆಯ ಅನುಭವವಾಗಿದೆ ಎಂದು ಹೇಳುವ ಇವರೆಲ್ಲಾ ಏನಾಯಿತು, ಯಾವಾಗ ಆಯಿತು, ಹೇಗಾಯಿತು, ಯಾರಿಂದಲಾಯಿತು ಎಂಬುದನ್ನೂ ಹೇಳಬೇಕು. ದೊಡ್ಡವರ ಮಾತು ಎಂದರೆ ಅದೇನು ಜಗಲಿಕಟ್ಟೆ ಪಂಚಾಯಿತಿಕೆಯಾ? ಪ್ರತೀ ಮಾತಿಗೂ ಅವರು ದಾಯಿತ್ವವೇನೆಂಬುದನ್ನು ಹೇಳಲೇಬೇಕಾಗುತ್ತದೆ. ಆದರೆ ಇವರು ಯಾರೂ ಅದನ್ನು ಹೇಳುತ್ತಿಲ್ಲ. ಈ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿ ಸುದ್ದಿ ಮಾಡುತ್ತಾರೆ.

ಇವರು ಹೇಳುವ ಅಸಹಿಷ್ಣುತೆ ಎಂದರೆ ಏನದು? ಅದನ್ನಾದರೂ ಹೇಳಬಹುದಲ್ಲ. ಗಲಭೆಯಾ? ಕೊಲೆ ಸುಲಿಗೆಯಾ? ಅತ್ಯಾಚಾರವಾ? ಯುದ್ಧವಾ? ಭ್ರಷ್ಠಾಚಾರವಾ? ಮುರಿಯುವ ಮದುವೆಗಳಾ? ಅನೈತಿಕ ಸಂಬಂಧಗಳಾ? ಒಬ್ಬನ ಹೆಂಡತಿಯನ್ನು ಇನ್ನೊಬ್ಬ ಹಾರಿಸುವುದಾ? ಟೆರರಿಸ್ಟ್ ಗಳ ಕಾಟವಾ? ಅಕಾಲಿಕ ಮಳೆಯಾ? ಬರಗಾಲವಾ? ಸಿನಿಮಾಕ್ಕೆ ಜನ ಬಾರದಿರುವುದಾ? ರಸ್ತೆ ಅಪಘಾತಗಳಾಗುದಾ? ಅಥವಾ ಕಿಡ್ನಿ ಸ್ಟೋನ್’ನಿಂದ ಹೊಟ್ಟೆ ತೊಳಸುವುದಾ? ಯಾವುದು? ಅಮೀರ್ ಖಾನ್ ನ ಹೆಂಡತಿಗೆ ಭಾರತವನ್ನೇ ಬಿಟ್ಟು ಹೋಗುವಾ ಅಂತ ಆದದ್ದು ಏನು? ಇದನ್ನು ಹೇಳಬೇಕಲ್ಲ.

ಪ್ರತಿಯೊಂದು ಮಾತಿಗೂ ಒಂದು ಕಾರ್ಯಕಾರಣ ಸಂಬಂಧ ಅಂತ ಇರುತ್ತದೆ. ಬುದ್ಧಿಸ್ಥಿಮಿತ ಉಳ್ಳ ಎಲ್ಲರೂ ಆಡುವ ಪ್ರತೀ ನುಡಿಗೂ ಮೌಲ್ಯ ಕಟ್ಟೇ ಕಟ್ಟುತ್ತಾರೆ. ಮಾತು ಬಿದ್ದರೆ ಹೋಯಿತು ಎಂಬುದು ಇದಕ್ಕೆ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬುದನ್ನು ಮುಕ್ತ ಮಾತಿಗೆ ಅವಕಾಶವೇ ಇಲ್ಲದ ಕಾಲದ ಅರಸೊತ್ತಿಗೆಯಲ್ಲಿ ವಚನಕಾರರು ಹೇಳಿಹೋಗಿದ್ದಾರೆ. ಈಗ ಪ್ರಜಾಸತ್ತೆಯ ಕಾಲ. ಯಾರು ಬೇಕಾದರೂ ಮಾತನಾಡಬಹುದು. ಏನು ಬೇಕಾದರೂ ಮಾತನಾಡಬಹುದು. ಹಾಗಂತ ಅವರು ಮಾತನಾಡುತ್ತಿದ್ದಾರೆಯೇ? ಗೊತ್ತಿಲ್ಲ

ಇಷ್ಟಕ್ಕೂ ನಿಮಗೆ ಅಸಹಿಷ್ಣುತೆಯ ಏನು ಅನುಭವವಾಗಿದೆ ಎಂದು ಯಾರೂ ಯಾಕೆ ಕೇಳುತ್ತಿಲ್ಲ ಎಂಬುದೇ ಈ ಭಾರತದ ಜನರ ಸಹಿಷ್ಣುತೆಗೆ ಸಾಕ್ಷಿಯೋ ಅಥವಾ ಪೆದ್ದುತನದ ಪರಮಾವಧಿಯೋ? ಇಷ್ಟಕ್ಕೂ ಈ ಅಸಹಿಷ್ಣುತೆ ಕುರಿತು ಈಗ ಬಾಯಿ ಬಾಯಿ ಬಡಿದುಕೊಳ್ಳುತ್ತಿರುವುವರೆಲ್ಲಾ ದೇಶದಲ್ಲಿ ಸಹಿಷ್ಣುತೆಗಾಗಿ ಏನು ಕೊಡುಗೆ ನೀಡಿದ್ದಾರೆ? ಅದನ್ನು ಈಗ ಜನತೆ ಪರಿಶೀಲಿಸಲು ಸೂಕ್ತ ಕಾಲ. ಇವರು ತಮ್ಮ ಅರಮನೆ ಪಕ್ಕದ ಗಲ್ಲಿಯೊಂದರಲ್ಲಿ ರೇಶನ್ ಕಾರ್ಡು ಪಡೆಯಲಾರದೇ ಒದ್ದಾಡುತ್ತಿರುವ ಬಡ ಕೂಲಿಕಾರ್ಮಿಕನನ್ನು ಕರೆದುಕೊಂಡು ತಾಲೂಕು ಕಚೇರಿಗೆ ಹೋಗಿ ರೇಶನ್ನು ಕಾರ್ಡು ತೆಗೆಸಿಕೊಟ್ಟ ಒಂದು ಉದಾಹರಣೆ ಸಿಕ್ಕರೆ ಸಾಕು. ಇಂಥ ಹಿರಿಯ ತಾರಾ ಮೌಲ್ಯವುಳ್ಳ ಮಂದಿ ತಾಲೂಕು ಕಚೇರಿಗೆ ಹೋಗಲೇ ಬೇಕಿಲ್ಲ. ತಮ್ಮ ಗುಮಾಸ್ತನನ್ನು ಕಳುಹಿಸಿಕೊಟ್ಟರೂ ರೇಶನ್ ಕಾರ್ಡು ಬಡವನಿಗೆ ಒಡನೇ ಸಿಗುವುದು ಖಚಿತವೇ.ಇವರು ಕಾರಿನಲ್ಲಿ ಹೋಗುತ್ತಿರುವಾಗ ರಸ್ತೆ ಮಧ್ಯೆ ಯಾವುದೋ ಅಪಘಾತ ಕಂಡಾಗ ಓಡಿ ಹೋಗಿ ಗಾಯಾಳುಗಳನ್ನೆತ್ತಿ ಆಸ್ಪತ್ರೆಗೆ ಇವರ ಕಾರಲ್ಲೇ ಬೇಕಾಗಿಲ್ಲ, ಇನ್ಯಾವುದೋ ವಾಹನದಲ್ಲಿ ಆದರೂ ಸಾಗಿಸಿದ ಉದಾಹರಣೆ ಇದ್ದರೆ ಬೇಕಾಗಿತ್ತು.
ಇವರ ಗುರುತು ಪರಿಚಯದ ಅಮಾಯಕ ಬಡವನೊಬ್ಬನನ್ನು ಯಾವುದೋ ಪ್ರಕರಣದಲ್ಲಿ ಪೊಲೀಸರು ಸಿಲುಕಿಸಿ ಠಾಣೆಯ ಸೆಲ್ ನಲ್ಲಿ ಕೂಡಿಹಾಕಿದಾಗ, ಇಲ್ಲ, ಇಲ್ಲ,ಆತ ತಪ್ಪು ಮಾಡಿಲ್ಲ ಎಂದು ಪೊಲೀಸರಿಗೆ ಸಮಜಾಯಿಸಿ ನೀಡಿ ಆ ಬಡ ಅಮಾಯಕನನ್ನು ಇವರು ಬಿಡಿಸಿ ತಂದ ಮಾಹಿತಿ ಎಲ್ಲಾದರೂ ಇದೆಯಾ? ಇವರು ಮಾಡಿದ ಮಹಾಸಂಪಾದನೆಯಲ್ಲಿ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ಕೊಡಿಸಿದ್ದಾರೋ? ಎಷ್ಟು ಬಡಮಕ್ಕಳು ಇವರ ಸಂಪಾದನೆಯ ಭಾಗದಲ್ಲಿ ಒಂದು ಮೊತ್ತ ಪಡೆದು ಓದಿ ವಿದ್ಯಾವಂತರಾಗಿದ್ದಾರೋ? ಎಷ್ಟು ಬರಗಾಲ ಪೀಡಿತ ಪ್ರದೇಶಗಳಲ್ಲಿ ಇವರ ಸಂಪಾದನೆಯಿಂದಲೇ ಜನ ಜೀವಿಸುತ್ತಿದ್ದಾರೋ? ನೆರೆ ಪೀಡಿತ ಎಷ್ಟು ಊರುಗಳಲ್ಲಿ ಇವರು ಕಟ್ಟಿಸಿಕೊಟ್ಟ ಮನೆಗಳಿವೆಯೋ? ಭೀಕರ ಕಾಯಿಲೆಗಳಿಂದ ನರಳಾಡುತ್ತಾ, ಚಿಕಿತ್ಸೆ ಮಾಡಿಸಿಕೊಳ್ಳಲು ದುಡ್ಡಿಲ್ಲದೇ ಪತ್ರಿಕೆಗಳ ಮೊರೆ ಹೋಗಿ ಧನಸಹಾಯ ಅಪೇಕ್ಷಿಸುವ ಬಡವರ ಬ್ಯಾಂಕು ಅಕೌಂಟುಗಳಿಗೆ ಇವರು ಯಾವತ್ತಾದರೂ ಹಣ ತುಂಬಿಸಿದ ವಿವರಗಳು ಇವೆಯೇ? ಹೋಗಲಿ, ಇವರ ಮನೆಗೆ ಬರುವ ದಾರಿಯಲ್ಲಿ ಒಂದಾದರೂ ರಸ್ತೆ ಹೊಂಡವನ್ನು ಇವರು ಮುಚ್ಚಿಸಿದ ದಾಖಲೆ ಸಿಗಬಹುದೇ? ಅದೆಷ್ಟು ಊರುಗಳಲ್ಲಿ ಜನ ಬಡಿದಾಡಿಕೊಂಡು ಊರಿಗೇ ಊರು ಬೆಂಕಿ ಹತ್ತಿಸಿಕೊಂಡು ಉರಿಯುತ್ತಿದ್ದಾಗ ಇವರು ಯಾರಾದರೂ ಅಲ್ಲಿಗೆ ಬಂದಿಳಿದು ಸಹಿಷ್ಣುಗಳಾಗಿ ಎಂದು ಜನರನ್ನು ಸಮಾಧಾನಿಸಿದ ರಿಯಲ್ ಸ್ಟೋರಿ ಸಿಗಬಹುದೋ?

ರಾಶಿ ರಾಶಿ ಪುಸ್ತಕ ಬರೆದು ಸಾಹಿತಿಯಾಗುವುದು, ಬೇರೆ ಬೇರೆ ಬಣ್ಣ ಹಾಕಿ ಸಿನಿಮಾ ಮಾಡುವುದೇ ನಾಯಕತ್ವದ ಲಕ್ಷಣವಲ್ಲ. ಮಾರ್ಕೆಟಿಂಗ್ ಗೊತ್ತಿದ್ದರೆ ಮೈದಾ ಹುಡಿಗೆ ಸಕ್ಕರೆ ಬೆರೆಸಿ ಇಟ್ಟರೂ ಅದು ಮಾರಾಟವಾಗುತ್ತದೆ. ಆದರೆ ಮನುಷ್ಯನಾಗುವುದು ಇದೆಯಲ್ಲಾ ಅದಕ್ಕೆ ತುಂಬಾ ಶ್ರಮ ಬೇಕು. ಇಷ್ಟೊಂದು ಸುಂದರ ದೇಶದಲ್ಲಿ ನಿರುಮ್ಮಳವಾಗಿ ಬದುಕುವುದನ್ನು ತಾನೂ ಕಲಿತು,ಇತರರಿಗೂ ಕಲಿಸುತ್ತಾ, ದೇಶವನ್ನು ನಡೆಸುತ್ತಾ ಸಾಗುವುದು ಇವರಿಗೂ ಕರ್ತವ್ಯ ಆಗಲೊಲ್ಲದೇ? ಅಲ್ಲೊಂದು ಅಸಹಿಷ್ಣುತೆಯ ಕಂಡೆ ಮತ್ತು ಅದನ್ನು ನಾನೇ ನಂದಿಸಿ ಬಂದೆ ಎಂದು ಹೇಳುವ ಸಾಹಿತಿ, ಸಿನಿಮಾ ನಟ ಈ ಕಾಲಕ್ಕೆ ನಿಜಕ್ಕೂ ಆದರ್ಶ.

ಮೊದಲನೆಯ ವಿಶ್ವ ಕನ್ನಡ ಸಮ್ಮೇಳನವನ್ನು ಗುಂಡೂರಾಯರ ಸರಕಾರ ನಡೆಸಲು ಮುಂದಾದಾಗ ಅದನ್ನು ನಡೆಸಬಾರದು. ಏಕೆಂದರೆ ಬರಗಾಲವಿದೆ ಎಂದು ಅಸಹಿಷ್ಣುತೆಯ ಬೊಬ್ಬೆ ಎಂಭತ್ತರ ದಶಕದಲ್ಲಿ ಕೇಳಿತ್ತು. ಕೊನೆಗೂ ಸಮ್ಮೇಳನ ನಡೆದೇ ನಡೆಯಿತು. ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ರಾಷ್ಟ್ರಕವಿ ಕುವೆಂಪು ಈ ಸಮ್ಮೇಳನವನ್ನು ಉದ್ಘಾಟಿಸಿದರು. ಶಿವರಾಮ ಕಾರಂತರು ಅಧ್ಯಕ್ಷ ಭಾಷಣದಲ್ಲಿ ಆ ಕಾಲದ ಅಸಹಿಷ್ಣುಗಳಿಗೆ ಕೇಳಿದ ಮಾತು, “ಬರಗಾಲವಿದೆ,ವಿಶ್ವ ಕನ್ನಡ ಸಮ್ಮೇಳನ ಮಾಡಬೇಡಿ ಅಂತ ಕೂಗುವವರು ಮಸಾಲೆ ದೋಸೆ ತಿನ್ನುವುದನ್ನು ಬಿಟ್ಟಿದ್ದಾರೋ?”

  • Gopala Krishna Kuntini

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post