X

ಮೊಳಗಬೇಕಿದೆ ಐಕ್ಯಗಾನ

ಹಾಳೂರಿಗೆ ಉಳಿದವನೇ ಅರಸ ಎಂಬಂತೆ ಲೋಕಸಭಾ ಚುನಾವಣೆಯಲ್ಲಿ ಇತಿಹಾಸದಲ್ಲೇ ಕಂಡು ಕೇಳರಿಯದಂತೆ ಸೋಲನ್ನುಂಡಿದ್ದ ಕಾಂಗ್ರೆಸ್ ಪಕ್ಷ ಲೋಕಸಭಾ ವಿಪಕ್ಷ ನಾಯಕನ ಸ್ಥಾನದಲ್ಲಿ ಕನ್ನಡಿಗ, ಹಿರಿಯ ರಾಜಕಾರಣಿ ಖರ್ಗೆಯವರನ್ನು ಕೂರಿಸುತ್ತದೆ. ಒಂದು ವೇಳೆ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಚುನಾವಣೆಯಲ್ಲಿ ಸೋತಿದ್ದರೆ ಪ್ರಧಾನಿ ಸ್ಥಾನದಲ್ಲಿ ರಾಗಾರನ್ನು ಪ್ರತಿಷ್ಟಾಪಿಸಲು ಎಲ್ಲಾ ಸಿದ್ಧತೆ ನಡೆಸಿದ್ದರು ಅಧಿನಾಯಕಿ ಸೋನಿಯಾ. ಇಲ್ಲಿ ಕನ್ನಡಿಗರಾದ ಖರ್ಗೆ ಲೋಕಸಭಾ ವಿಪಕ್ಷ ಸ್ಥಾನದಂತಹ ಉನ್ನತ ಸ್ಥರದ ಹುದ್ದೆಗೆ ಏರಿದ್ದು ಸಂತಸದ ವಿಷಯವೇ ಹಾಗೂ ಆ ಸ್ಥಾನಕ್ಕೆ ರಾಹುಲ್’ಗಿಂತ ಸಾವಿರ ಪಟ್ಟು ಅರ್ಹತೆ ಖರ್ಗೆಯವರಿಗಿದೆ. ಆದರೆ ಸೋತಾಗ ಗತಿಯಿಲ್ಲದೇ ಹಾಳೂರಿಗೆ ಅರಸರಾಗಿ ನಮ್ಮ ಕನ್ನಡಿಗರೊಬ್ಬರು ಆಯ್ಕೆಯಾದರಲ್ಲವೇ ಎಂಬುದು ಖೇದಕರ ವಿಷಯ.

ಬುಲೆಟ್ ರೈಲು ಕಾರ್ಯಸೂಚಿಯಲ್ಲಿ ಯಾವುದೇ ದೂರದೃಷ್ಟಿಯಿಲ್ಲ ಹಾಗೂ ಯಾವುದೇ ನಿಖರತೆಯಿಲ್ಲ ಎಂದು ಕನ್ನಡಿಗರಾದ ಸದಾನಂದ ಗೌಡರಿಗೆ ರೈಲ್ವೆ ಸಚಿವ ಸ್ಥಾನದಿಂದ ಕೊಕ್ ಕೊಡಲಾಗುತ್ತದೆ. ಆದರೆ ಆ ಬಳಿಕ ರೈಲ್ವೆ ಸಚಿವರಾದ ಸುರೇಶ್ ಪ್ರಭು ಕೂಡಾ ಬಹಳ ತ್ವರಿತಗತಿಯಿಂದೇನೂ ರೈಲ್ವೆ ಇಲಾಖೆಗೆ ಪುನಶ್ಚೇತನ ನೀಡಿದ್ದಂತೂ ಕಾಣುತ್ತಿಲ್ಲ. ಬಹುಷಃ ಸದಾನಂದ ಗೌಡರೇ ರೈಲ್ವೇ ಸಚಿವರಾಗಿ ಮುಂದುವರಿದಿದ್ದರೆ ಮತ್ತೊಂದಿಷ್ಟು ರೈಲುಗಳು ಕರ್ನಾಟಕಕ್ಕೆ ಬರುತ್ತಿದ್ದವೇನೋ??? ದಕ್ಷಿಣ ಭಾರತದ ಬಿಜೆಪಿಯ ಏಕೈಕ ನೆಲೆ ಕರ್ನಾಟಕ ಎಂಬ ಸತ್ಯ ಎಲ್ಲರಿಗೂ ತಿಳಿದದ್ದೇ. ೧೯ ಜನ ಸಂಸದರನ್ನು ಆರಿಸಿ ಕಳುಹಿಸಿದ್ದಕ್ಕಾದರೂ ಕರ್ನಾಟಕದ ಹಿತಾಸಕ್ತಿ ಕಾಯುವಲ್ಲಿ ಕೇಂದ್ರ ಸರಕಾರದ ರೂಪುರೇಷೆಗಳೇನೂ ಕಾಣುತ್ತಿಲ್ಲ. ಇದರಲ್ಲಿ ಕೇಂದ್ರ ಸರಕಾರವನ್ನು ದೂರಿದರೆ  ನಮ್ಮಷ್ಟು ದಡ್ಡರಾರೂ ಇಲ್ಲ. ರಾಜ್ಯದ ಹಿತಾಸಕ್ತಿ ಕಾಪಾಡಲು ನಮ್ಮ ಸಂಸದರಿಗೆ ಆಸಕ್ತಿಯಿರಬೇಕು. ಇಂತಹಾ ವಿಷಯಗಳಲ್ಲಿ ಪಕ್ಕದ ತಮಿಳುನಾಡು, ಕೇರಳದ ಸಂಸದರನ್ನು ನೋಡಿ ಕಲಿಯಬೇಕು. ಕೆಲವೇ ಕೆಲವು ಸಂಸದರು ಆಯ್ಕೆಯಾಗಿ ಬಂದರೂ ತಮ್ಮ ರಾಜ್ಯಕ್ಕೆ ಯೋಜನೆಗಳ ಮಹಾಪೂರಗಳನ್ನೇ ಹೊತ್ತೋಯ್ತಾರೆ. ಕೇಂದ್ರ ಸರಕಾರವನ್ನು ಒತ್ತಡಕ್ಕೆ ಸಿಲುಕಿಸಿ ತಮಗೆ ಬೇಕಾದ ಕೆಲಸಗಳನ್ನು ಮಾಡಿಕೊಳ್ಳುವ ಕಲೆ ಅವರಿಗೆ ಕರತಲಾಮಲಕ.!!

ಇನ್ನು ನಮ್ಮ ಕರ್ನಾಟಕದಲ್ಲಿ ಹಾದಿ ಬೀದಿಗೊಂದು ಕನ್ನಡ ಪರ ಸಂಘಟನೆಗಳಿವೆ. ನೂರೆಂಟು ಬಣಗಳು. ಅವರನ್ನು ಕಂಡರೆ ಇವರಿಗೆ ಆಗಲ್ಲ. ಹೋರಾಟಕ್ಕೆ ಧುಮುಕತ್ತವೆಯಾದರೂ ಸ್ಪಷ್ಟ ಸಂದೇಶವನ್ನು ಸರಕಾರಗಳಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಕನ್ನಡಿಗರಾದ ನಮ್ಮಲ್ಲೇ ಒಗ್ಗಟ್ಟಿಲ್ಲದಿರುವುದು ನಮ್ಮ ಹಿನ್ನಡೆಗೆ ಮತ್ತೊಂದು ಪ್ರಬಲ ಕಾರಣ. ಕಾವೇರಿ ವಿಷಯ ಬಂದಾಗ ಹಳೇ ಮೈಸೂರು ಮಂಡ್ಯ ಭಾಗಳಲ್ಲಿ ಮಾತ್ರ ಹೋರಾಟದ ಕಿಚ್ಚು ಎದ್ದು ಕಾಣುತ್ತದೆ. ಕರಾವಳಿ ಭಾಗಗಳಲ್ಲಿ ಜನರ ಬೆಂಬಲ ಕಾವೇರಿ ವಿಷಯಕ್ಕೆ ಸಿಗುವುದು ಬಹಳ ಅಪರೂಪ. ಎತ್ತಿನಹೊಳೆ ಯೋಜನೆಗೆ ವಿರೋಧವಾಗಿ ಕೇವಲ ಕರಾವಳಿ ಜನತೆ ಹೋರಾಡುತ್ತಿದ್ದರೆ, ಕಳಸಾ ಬಂಡೂರಿಗಾಗಿ ಹುಬ್ಬಳ್ಳಿ, ಧಾರವಾಡ, ಗದಗಳಲ್ಲಿ ಮಾತ್ರ ಹೋರಾಟ ಕಂಡುಬರುತ್ತಿದೆ.! ಅಖಂಡ ಕರ್ನಾಟಕ ಹೋರಾಟಕ್ಕೆ ಧುಮುಕಿದರೆ ಈ ಎಲ್ಲಾ ಜ್ವಲಂತ ಸಮಸ್ಯೆಗಳಿಗೆ ಉತ್ತರ ಹುಡುಕುವುದೇನೂ ಕಷ್ಟವಲ್ಲ.

ಇನ್ನು ನಮ್ಮ ಚಿತ್ರರಂಗದ ವಿಷಯ. ಕನ್ನಡಕ್ಕಾಗಿ ಪ್ರಾಣವನ್ನೇ ನೀಡಲು ಸಿದ್ಧ ಎಂಬ ಹಲವಾರು ಪಂಚಿಂಗ್ ಡೈಲಾಗ್ ಸಿಡಿಸಿ ಚಪ್ಪಾಳೆ ಗಿಟ್ಟಿಕೊಳ್ಳುವ ನಮ್ಮ ನಾಯಕರಗಳು ಕನ್ನಡಕ್ಕಾಗಿ ನಿಜವಾಗಿಯೂ ಹೋರಾಡುವ ಸಂದರ್ಭ ಬಂದಾಗ ಮೀನ ಮೇಷ  ಎಣಿಸುತ್ತಾರೆ. ಡಬ್ಬಿಂಗ್, ರಿಮೇಕ್ ವಿಷಯಕ್ಕಾಗಿಯೇ ವರ್ಷ ಪೂರ್ತಿ ಹೋರಾಡಿ ಸುಸ್ತಾಗಿ ಬಿಡುತ್ತಾರೆ. ಕನ್ನಡ ಚಿತ್ರಗಳ ಹಾಡುಗಳ ಸಾಹಿತ್ಯವನ್ನು ಕೇಳಿದ್ರೆ ಖುದ್ದು ತಾಯಿ ಭುವನೇಶ್ವರಿಯೇ ಬೆಚ್ಚಿ ಬಿದ್ದರೆ ಆಶ್ಚರ್ಯವೇನಿಲ್ಲ.

ನಮ್ಮ ಸುದ್ಧಿ ಮಾಧ್ಯಮಗಳೂ ಬೇರೆ ಭಾಷೆಯ ಚಿತ್ರಗಳನ್ನು ಹೆಚ್ಚಾಗಿ ಜನರಿಗೆ ಪ್ರಚಾರ ಮಾಡುತ್ತವೆ. ರಿಯಾಲಿಟಿ ಶೋಗಳೂ ಕನ್ನಡವನ್ನು ಬಿಟ್ಟು ಅನ್ಯ ಭಾಷೆಗಳನ್ನೇ ಜಾಸ್ತಿಯಾಗಿ ಬಳಸಿಕೊಳ್ಳುತ್ತಿದೆ.

ಒಂದು ಕಾಲದಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಅರ್ಧದಷ್ಟು ಜನ ಕನ್ನಡಿಗರಿರುತ್ತಿದ್ದರು. ಆದರೀಗ ಭಾರತ ತಂಡಕ್ಕೆ ಕನ್ನಡಿಗರು ಆಯ್ಕೆಯಾಗುವುದೇ ದೊಡ್ಡ ವಿಷಯ. ಆಯ್ಕೆಯಾದರೂ ಬೆಂಚ್ ಪಕ್ಕಾ. ಐಪಿಲ್ ನಲ್ಲಿ ಆರ್ಸಿಬಿ ತಂಡದಲ್ಲಿ ಎಷ್ಟು ಜನ ಕನ್ನಡಿಗರಿದ್ದಾರೆ ಎಂದು ದುರ್ಬೀನು ಹಾಕಿ ಹುಡುಕಬೇಕಾಗಿದೆ. ಪ್ರೊ ಕಬಡ್ಡಿ ಬೆಂಗಳೂರು ತಂಡದಲ್ಲೂ ಕನ್ನಡಿಗರಿಲ್ಲದಿರುವುದು ಆಶ್ಚರ್ಯವಾದರೂ ಸತ್ಯ. ರೈಲ್ವೆ ಇಲಾಖೆ ನೇಮಕಾತಿಯಲ್ಲೂ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ.

ನಮ್ಮ ರಾಜಕೀಯ ಪಕ್ಷಗಳಿಗೂ ಕನ್ನಡಿಗರು ಬೇಡ. ಹೊರಗಿನವರಾದ ವೆಂಕಯ್ಯ ನಾಯ್ಡು, ಪಿ.ಸಿ.ಮೋಹನ್, ಶರವಣ ರಂತವರು ರಾಜ್ಯಸಭೆ, ವಿಧಾನ ಪರಿಷತ್, ಲೋಕಸಭೆ ಸದಸ್ಯರಾಗುತ್ತಾರೆ. ಕನ್ನಡವೇ ಮಾತನಾಡಲು ಬರದ ಖಮರುಲ್ ಇಸ್ಲಾಂ ನಮ್ಮ ರಾಜ್ಯದ ಮಂತ್ರಿ. ಇದಕ್ಕಿಂತ ದೊಡ್ಡ ದುರಂತವೇನು ಬೇಕು??? ಅಲ್ಲಾ ನಮ್ಮ ಕರ್ನಾಟಕದಲ್ಲಿ ಸಮರ್ಥರು ಯಾರೂ ಇಲ್ಲವೇ?? ದೇಶಕ್ಕೆ ಪ್ರಧಾನಿ, ಉಪ ರಾಷ್ಟ್ರಪತಿ ಆದವರು ನಮ್ಮ ಕನ್ನಡಿಗರು. ಆದರೂ ಬೆಂಗಳೂರಿನಲ್ಲಿ ಬಹುಸಂಖ್ಯಾತರಾಗಿರುವ ಅನ್ಯ ರಾಜ್ಯಗಳ ಜನರನ್ನು ಓಲೈಸಲು ರಾಜಕೀಯ ಪಕ್ಷಗಳು ಕನ್ನಡಿಗರನ್ನು ಕಡೆಗಣಿಸುತ್ತಿದೆ.

ಕನ್ನಡ ರಾಜ್ಯೋತ್ಸವ ಬಂತೆಂದರೆ ಎಲ್ಲೆಲ್ಲೂ ಕರ್ನಾಟಕದ ಧ್ವಜವನ್ನೇರಿಸಿ ಸಿಹಿ ಹಂಚಿ ಕುಣಿದು ಕುಪ್ಪಳಿಸಿ ಕನ್ನಡ ಡಿಂಡಿಮ ಭಾರಿಸಿ ಸಂಭ್ರಮಿಸುತ್ತೇವೆ ನಾವು ಕನ್ನಡಿಗರು. ಆದರೆ ನಿಜವಾಗಿಯೂ ಕರ್ನಾಟಕದಲ್ಲಿ ಕನ್ನಡಿಗರಿಗೆ ಎಷ್ಟೆಲ್ಲಾ ಅನ್ಯಾಯವಾಗುತ್ತಿದೆ?? ಕರ್ನಾಟಕದ ಹೆಸರನ್ನೇಳಿ ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಅನ್ನುವುದು ನಮಗಿನ್ನೂ ಅರ್ಥವಾಗುತ್ತಿಲ್ಲ ಅನ್ನುವುದೇ ಖೇದಕರ. ಹಾಗಾದರೆ ಕರ್ನಾಟಕದಲ್ಲಿ ಬರೀ ಕನ್ನಡಿಗರೇ ಇರಬೇಕೆನ್ನುವುದು ನನ್ನ ತರ್ಕವಲ್ಲ. ಮನುಷ್ಯ ಸಂಘ ಜೀವಿಯಾಗಿರುವುದರಿಂದ ಎಲ್ಲಾರ ಜೊತೆ ಬೆರೆತರೇನೆ ಬದುಕು ಸುಲಲಿತ. ಆದರೆ ಕರ್ನಾಟಕದಲ್ಲಿ ಕನ್ನಡಿಗರಿಗೆ ಎಲ್ಲಾ ವಿಷಯಗಳಲ್ಲಿ ಪ್ರಾಶಸ್ತ್ಯ ಕಮ್ಮಿಯಾಗುತ್ತಿರುವುದು ಮತ್ತು ಅನ್ಯಾಯವಾಗುತ್ತಿರುವುದು ಬೇಸರದ ಸಂಗತಿ. ಟೌನ್ ಹಾಲ್ ಮುಂದೆ ರಾಜ್ಯದ ಜ್ವಲಂತ ಸಮಸೈಗಳ ಬಗ್ಗೆ ಹೋರಡುವುದು ಬಿಟ್ಟು ಬುಜೀಗಳು ಬೀಫ್, ಕಾಣೆ ಮೀನಿನ ಮಾಂಸ ತಿನ್ನುತ್ತಿದ್ದಾರೆ ಮತ್ತು ಸಮಾಜ ಒಡೆಯುವ ಹೋರಾಟ ನಡೆಸುತ್ತಾರೆ. ಮತ್ತೆಲ್ಲಿಗೆ ನಾವು ಉದ್ಧಾರವಾಗುವುದು??? ಮುಖ್ಯವಾಗಿ ನಾವು ಕನ್ನಡಿಗರೆಲ್ಲರೂ ಒಗ್ಗಟ್ಟಾಗಬೇಕು. ಹಾಗಾದಲ್ಲಿ ಮಾತ್ರ ಕನ್ನಡವನ್ನು ಉಳಿಸಬಹುದು ಬೆಳೆಸಬಹುದು. ಕವಿ ಕಯ್ಯಾರರು ಬಹಳ ಹಿಂದೆ ಹೇಳಿದಂತೆ ಐಕ್ಯಗಾನದ ಕಹಳೆ ಮೊಳಗಲೇಬೇಕು.

Facebook ಕಾಮೆಂಟ್ಸ್

Sudeep Bannur: Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.
Related Post