X

ಆತ್ಮ ಸಂವೇದನಾ ಅಧ್ಯಾಯ ೧೧

ವಿಜ್ಞಾನ ಲೋಕಕ್ಕೆ ಏಕಾಧಿಪತಿ ಸೈಂಟಿಸ್ಟ್ ವೇದವರ್ಷಿ, ತನ್ನ ಕೆಲಸಗಳಲ್ಲೇ ಕಳೆದು ಹೋಗಿದ್ದ. ಇದು ಸಣ್ಣ ಕೆಲಸವಲ್ಲ. ಕ್ರಿಯೆ-ಪ್ರತಿಕ್ರಿಯೆಗಳು ಕ್ಲಿಷ್ಟಕರ, ಅಷ್ಟೆ ಆಕಸ್ಮಿಕ ಕೂಡಾ. ಎರಡನೇ ಸೂರ್ಯನನ್ನು ಸೃಷ್ಟಿಸುವುದು, ಭೂಮಿಯನ್ನು ಎಂದಿಗೂ ಕತ್ತಲೆ ಆವರಿಸದಂತೆ ಮಾಡುವುದು, ಶಾಶ್ವತ ಬೆಳಕಿನೆಡೆಗೆ..

ವರ್ಷಿ ಎಲ್ಲ ಉಪಕರಣಗಳನ್ನು ಮತ್ತೆ ಮತ್ತೆ ಪರೀಕ್ಷಿಸಿದ, ಪರಿವೀಕ್ಷಿಸಿದ. ಎಲ್ಲವೂ ನಿರ್ಧರಿಸಿದ ಪ್ರಮಾಣದಲ್ಲಿಯೇ ಇವೆ. ಈ ಪ್ರಯೋಗವನ್ನು ಹಿಂದೆ ಯಾರೂ ಮಾಡಿಲ್ಲ; ವರ್ಷಿಗೂ ಮೊದಲ ಸಲವೇ. ಒಮ್ಮೆ ಪೂರ್ತಿಯಾದರೆ ಮುಂದೆ ಯಾರೂ ಮಾಡುವ ಪ್ರಮೇಯವೂ ಇಲ್ಲ.

ಒಂದು ಚಿಕ್ಕ ಎಲಿಮೆಂಟ್, ಸೂರ್ಯನ ಕೋಟಿಯ ಒಂದು ಭಾಗದಷ್ಟು ಚಿಕ್ಕದು; ಮರಳಿನ ಒಂದು ಚಿಕ್ಕ ಕಣದಷ್ಟು ದೊಡ್ಡದು…!!

ಒಂದೇ ಒಂದು ಎಲಿಮೆಂಟ್ ಕೋಟಿ ಕೋಟಿಯಾಗಿ ಒಡೆದುಕೊಂಡು ಸೂರ್ಯನಷ್ಟು ದೊಡ್ಡದಾಗಿ ಬೆಳೆಯುವುದು ಸಾಮಾನ್ಯ ಪ್ರತಿಕ್ರಿಯೆಯಲ್ಲ.

ವಿಜ್ಞಾನಕ್ಕೂ ನಿಲುಕದ ಊಹೆ; ಊಹೆಗಳಲ್ಲೂ ಸಿಲುಕದ ವಿಜ್ಞಾನ.

ಅದಲ್ಲದೇ ಆಟ ಎಲಿಮೆಂಟ್ ನ ವರ್ಚುವಾಲಿಟಿಯನ್ನು ಮಾತ್ರ ಭೂಮಿಯ ಗುರುತ್ವಕ್ಕೆ ವಿರುದ್ಧವಾಗಿ ಮೇಲಕ್ಕೆ ಕಳಿಸುತ್ತಿದ್ದ.

ವರ್ಷಿ ಒಬ್ಬನೇ, ಯಾರೂ ಜೊತೆಯಿಲ್ಲ; ಯಾರ ದೆಸೆಯೂ ಇಲ್ಲ. ಹತ್ತು ಜನರ ಕೆಲಸಗಳನ್ನು ಒಬ್ಬನೇ ಮಾಡಿಕೊಳ್ಳಬಲ್ಲ.

ಎಲ್ಲವೂ ಪರಿಪೂರ್ಣವಾಗಿತ್ತು. ನಿಗದಿತ ಸಮಯಕ್ಕೆ ಕಾಯುತ್ತಾ ಒಂದು ಕಡೆ ಬಂದು ಕುಳಿತ ವರ್ಷಿ. ತಾನು ಮಾಡುತ್ತಿರುವುದು ಸರಿ ಅಥವಾ ತಪ್ಪು ಎಂದು ಯೋಚಿಸಲೂ ಹೋಗಿರಲಿಲ್ಲ. ಸರಿ ಮತ್ತು ತಪ್ಪು ಅವರವರ ಯೋಚನೆಯ ಮಟ್ಟ. ಬದುಕಿದ ವರ್ಷಗಳಲ್ಲಿ ಮೊದಲ ಮೂವತ್ತು ವರ್ಷಗಳನ್ನು ಮಾತ್ರ ತನ್ನಿಚ್ಛೆಯಂತೆ ಬದುಕಿದ್ದ, ಅವನ ಪಾಲಿಗೆ ಬಂದದ್ದು ಅಷ್ಟೆ.

ವಿಶ್ವಾತ್ಮನ ಭೇಟಿಯ ನಂತರ ಬದುಕಿನ ಬಹುತೇಕ ಎಲ್ಲ ಭಾಗಗಳೂ ಅವನ ಹತೋಟಿಯಲ್ಲಿಯೇ ನಡೆಯಿತು. ವಿಶ್ವಾತ್ಮ ಆತನನ್ನು ಕೂಲಿಯಂತೆ ನಡೆಸಿಕೊಂಡ, ಆದರೆ ಎಂದೂ ತೋರಿಸಿಕೊಂಡಿಲ್ಲ. ಬದಲಾಗಿ ವರ್ಶಿಯದೇ ಸರಿಯೆಂಬಂತೆ ಚಿತ್ರಿಸಿದ, ಅರ್ಥೈಸಿದ.

ವಿಶ್ವದ ಅತಿ ದೊಡ್ದ ಶಕ್ತಿ ಒಬ್ಬ ಸಾಮಾನ್ಯ ಮನುಷ್ಯನನ್ನು ಕೈಗೊಂಬೆಯಾಗಿ ಆಡಿಸುವುದು ಸರಿಯೇ? ವರ್ಷಿಯು ಇಂಥದ್ದೊಂದು ಪ್ರಶ್ನೆಯನ್ನು ವಿಶ್ವಾತ್ಮನೆದುರು ಇಡಲಿಲ್ಲ. ಇಟ್ಟರೂ ವಿಶ್ವಾತ್ಮನ ಪ್ರತಿಕ್ರಿಯೆ ಗೋಡೆಯ ಮೇಲಿನ ದೀಪವೇ.

ವರ್ಷಿ ಕಣ್ಣು ಮುಚ್ಚಿ ಕುಳಿತಿದ್ದ. ಆತ್ಮನೋಬ್ಬನಿಗೆ ವರ್ಷಿಯ ಪ್ರಯೋಗಾಲಯದ ಒಳಗಡೆ ಬರುವುದು ಸುಲಭವಾಗಿ ತಿಳಿದಿತ್ತು, ಬಂದ ಅವನು. ಆತ್ಮ ಬಂದಿರುವುದು ತಿಳಿದೂ ವರ್ಷಿ ಮುಚ್ಚಿದ ಕಣ್ಣು ತೆರೆಯದೆ ಹಾಗೆಯೇ ಕುಳಿತಿದ್ದ. ಆತ್ಮನ ಮುಖ ಪೇವಲವಾಗಿತ್ತು. ತಾನು ಸೃಷ್ಟಿಸಿದ ಮೊದಲ ಜೀವ ಉಸಿರು ಬೆರೆಯುವ ಮುನ್ನವೇ ಕಳೆದುಕೊಂಡಿದ್ದು ಅವನಿಗೆ ನಿರಾಸೆಯನ್ನುಂಟು ಮಾಡಿತ್ತು. ಒಮ್ಮೆ ಸಂವೇದನಾಳ ಮುಗ್ಧ ಮುಖ ಕಣ್ಣಮುಂದೆ ಹಾದು ಹೋಯಿತು.

” ವರ್ಷಿ” ಎಂದ ಆತ್ಮ. ವರ್ಷಿಗೆ ಮನಸ್ಸಿನ ಅಳದಲ್ಲೊಮ್ಮೆ ಹಿಗ್ಗು, ತನ್ನ ಹೊಸ ಆವಿಷ್ಕಾರ, ಅದರಲ್ಲೂ ವರ್ಚುವಾಲಿಟಿಯ ಬಗ್ಗೆ ಆತ್ಮನಿಗೆ ತೋರಿಸಬೇಕೆಂಬ ಬಯಕೆ ಇತ್ತು. ಬಯಕೆಯನ್ನು ಮೀರಿದ ತೀವ್ರ ಹಂಬಲ ಅದು. ಸ್ವತಃ ಆತ್ಮನೇ ಕೇಳಲಿ ಎಂದು ಮೌನದಿಂದಿದ್ದ. ಇದು ಸರಿಯಾದ ಸಮಯ. ಆತ್ಮ ಕರೆಯದೆ ಬಂದು ಕೇಳುತ್ತಿದ್ದಾನೆ.

ಮುಚ್ಚಿದ ಕಣ್ಣು ತೆರೆಯದೆಲೆ ಏನೆಂಬಂತೆ ತಲೆಯಾಡಿಸಿದ.

” ಎಲ್ಲ ಸಿದ್ಧತೆಗಳು ಮುಗಿದವಾ!? ಈ ಭೂಮಿಗೆ ಎರಡನೇ ಸೂರ್ಯ ಅನಿವಾರ್ಯವೇ??” ಸಂದಿಗ್ಧತೆಯಲ್ಲಿ ಪ್ರಶ್ನಿಸಿದ ಆತ್ಮ.

ಸೂಜಿ ಬಿದ್ದರೂ ಕೇಳುವಷ್ಟು ನಿಶ್ಯಬ್ಧ. ಉಸಿರು ಪ್ರತಿಧ್ವನಿಯ ಅಲೆಯೇನೋ ಎನ್ನಿಸುವಷ್ಟು ಗಾಢ ಮೌನ. ಗೋಡೆಯ ಮೇಲಿನ ದೊಡ್ದ ಗಡಿಯಾರದ ಕಡ್ಡಿಗಳು ಓಡುವ ಸದ್ದು ಎಣಿಸುವಷ್ಟು ಸ್ಪಷ್ಟವಾಗಿ ಕಿವಿಗೆ ಸೇರುತ್ತಿತ್ತು.

ಭಾರವಾದ ನಿಟ್ಟುಸಿರು ಬಿಟ್ಟ ವರ್ಷಿ. ಎಂದೂ ಕಂಡಿರದ ವಿಷಾದದ ಛಾಯೆ ಮುಖದಲ್ಲಿ. ನೋವಿನ ಗೆರೆಗಳು ನೊಸಲ ಮೇಲೆ. ಮಾತಿನಲೆಗಳ ಮೇಲೆ ತೇಲಲಾರಂಭಿಸಿದ.

” ಆತ್ಮ ಅದೊಂದಿಷ್ಟು ದಿನಗಳು, ನಾನು ಏನನ್ನೂ ಯೋಚಿಸುತ್ತಲೇ ಇರಲಿಲ್ಲ. ಯೋಚಿಸುವುದು ಎಂದರೆ ಏನು ಗೊತ್ತಾ? ನಿನ್ನನ್ನು ನೀನು ಇಲ್ಲದ ಸ್ಥಿತಿಯಲ್ಲಿ, ನೀನಲ್ಲದ ಸ್ಥಿತಿಯಲ್ಲಿ ಊಹಿಸಿಕೊಳ್ಳುವುದು. ಯೋಚನೆಗಳೇ ಎಲ್ಲ ವಿಜ್ಞಾನ, ಪ್ರತಿಯೊಂದು ತಂತ್ರಜ್ಞಾನಗಳಿಗೆ ಮೂಲ ಕಾರಣ; ಕಾರಣಗಳಿಲ್ಲದ ಕೆಲಸವೆಲ್ಲಿದೆ?

ನಾನು ಯೋಚಿಸದ ದಿನಗಳಲ್ಲಿ ಹಣ ಈ ಪ್ರಪಂಚವನ್ನು ಆಳುತ್ತಿತ್ತು. ದುಡ್ಡು ಮಾತ್ರ ಎಲ್ಲವನ್ನೂ ಬದಲಾಯಿಸಿಬಿಡುತ್ತಿತ್ತೆಂದು ಒಮ್ಮೆ ಹೇಳಿದ್ದು ನೆನಪಿರಬಹುದಲ್ಲವೇ? ಎಂದು ನಾನು ಯೋಚಿಸಲು ಕಲಿತೆನೋ, ತಂತ್ರಜ್ಞಾನ ಎಲ್ಲವನ್ನೂ ಬದಲಾಯಿಸಬಲ್ಲದು ಎಂದು ತೀವ್ರವಾಗಿ ಅನ್ನಿಸಿಕೊಂಡೆನೋ ಅಂದಿನಿಂದ ನಾನು ಎರಡನೇ ಬಾರಿ ಬೇಕು ಬೇಡಗಳ ಬಗ್ಗೆ ಯೋಚಿಸಿಯೇ ಇಲ್ಲ. ಯೋಚನೆಗಳು ಕಲಿಕೆಯಿಂದ ಬರುವಂಥದ್ದಲ್ಲ. ತೀವ್ರವಾಗಿ ಅಂದುಕೊಳ್ಳುವುದು.

ವಿಜ್ಞಾನದಿಂದ ಮನುಷ್ಯ ಹೊಸದೊಂದು ಸೃಷ್ಟಿಸಿದರೆ ಅದರಿಂದ ಲಾಭ ಹಾನಿಗಳೆರಡು ಸಾಮಾನ್ಯ. ಆಳವಾಗಿ ಗಮನಿಸಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ತಂತ್ರಜ್ಞಾನಗಳು ನೀಡಿದ್ದು ಐಷಾರಾಮಿಯನ್ನು ಮಾತ್ರ. ಅದನ್ನೂ ಮೀರಿ ಯೋಚಿಸಿದರೆ ಶುದ್ಧ ಗಾಳಿ, ನೀರಿನ ಕೊರತೆಯೇ ಕಣ್ಣೆದುರು. ಸುತ್ತಲಿನ ಪರಿಸರ ನಾಶವಾಯಿತು.

ಶುದ್ಧ ಗಾಳಿ, ನೀರು ದುಡ್ಡಿನಿಂದ ಅಸಾಧ್ಯ. ತಂತ್ರಜ್ಞಾನಗಳಿಂದ ಸೃಷ್ಟಿಸಲು ಸಾಧ್ಯವಿಲ್ಲ. ನಾವು ಮಾಡಿದ್ದು ಇಷ್ಟೇ. ಶುದ್ಧ ನೀರಿಗೆ ಹಾನಿ, ಶುದ್ಧ ಗಾಳಿಗೆ ಕೊರತೆ. ಅವೆಷ್ಟೋ ಕಾರ್ಖಾನೆಗಳ ನಿಸ್ಸಾರಗಳು ಸೇರಿದ್ದು ಸ್ವಚ್ಛ ಸರೋವರಗಳನ್ನು, ನಿರ್ಮಲ ನದಿ ಕಿನಾರೆಗಳನ್ನು. ವಿಷದ ಹೊಗೆ ಭುಗಿಲೆದ್ದು ಸೇರಿದ್ದು ಸುತ್ತಲಿನ ವಾತಾವರಣವನ್ನು. ಇವೆಲ್ಲವನ್ನೂ ಸರಿಪಡಿಸಲು ಬಳಸಿದ್ದು ತಂತ್ರಜ್ಞಾನವನ್ನೇ. ಇಲ್ಲಿ ನಾವೆಲ್ಲರೂ ಸಾಯದಂತೆ ಬದುಕುತ್ತಿದ್ದೇವೆ ಎಂದು ಎಲ್ಲರೂ ಭ್ರಮಿಸಿದ್ದಾರೆ; ಬದುಕುತ್ತಲೂ ಇದ್ದೇವೆ ಎಂದು ಅವರಂದುಕೊಂಡಿದ್ದಾರೆ ಅಷ್ಟೆ. ಇಲ್ಲಿ ಯಾರೂ ಬದುಕುತ್ತಿಲ್ಲ ಆತ್ಮ.

ಬದುಕೆಂದರೆ ಏನು??

ಬದುಕು ಮಹಾ ಸಮುದ್ರ, ತೀರ ಸೇರುವ ಬಯಕೆಯಲ್ಲಿ ಸದ್ದಾಗುವ ಅಲೆಗಳು ಕೊನೆಯಾಗದ ಕನಸುಗಳಂತೆ ಕಾಡುತ್ತವೆ, ಕನವರಿಸುತ್ತವೆ. ತೀರ ಸೇರಲು ಕಾಯುತ್ತವೆ.

ಬದುಕು ದಿವ್ಯ ತಪಸ್ಸು, ಪೂರ್ತಿ ಮುಗಿಸಿ ಎದ್ದವರು ಕಮ್ಮಿ.

ಬದುಕು ಸುಪ್ತ ಸನ್ಯಾಸ, ಅಂತರಾಳವೆಂದೂ ಏಕಾಂತದಲ್ಲೇ ಮುಕ್ತವಾದದ್ದು.

ಬದುಕು ಮಹಾ ಕಾವ್ಯ, ದುರಂತ ಭಾಗದ ನಂತರವೇ ಖುಷಿಯ ಕೊನೆಯ ಪರ್ವ.

ಬದುಕು ಬರಡು ಭೂಮಿ, ನೀರಿಗೆ ಹಾತೊರೆವ ಮಣ್ಣ ಹೆಂಟೆ, ಆದರೂ ಚಂದದ ಕಳ್ಳಿ ಹೂಗಳ ಮೋಹ.

ಬದುಕು ಭ್ರಮರ, ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ಅಲೆಯುವುದೇ ಕೆಲಸ, ಕಂಡು ಕೇಳರಿಯದ ಸುಖದ ಹಿಂದೆ.

ಬದುಕು ಕಣ್ಣಾಮುಚ್ಚಾಲೆ, ಹುಡುಕಾಟವೊಂದೇ ಶಾಶ್ವತ; ಇರಿವುದೆಲ್ಲವ ಬಿಟ್ಟು ಇರದುದನ್ನು ಹುಡುಕುವ ಆಟ.

ಬದುಕು ಅಗ್ರ ಸಂಗೀತ, ಲಯ ತಾಳ ಮೇಳೈಸಿದ ಕ್ಷಣಗಳ ಅದ್ಭುತ ಸಂಗಮ.

ಬದುಕು ಬರೀ ಬದುಕಲ್ಲ; ದಿನ ಬೆಳಗು ಹೊಸ ಉಸಿರಾಗುವ ತವಕ ಬದುಕು.

ನಿತ್ಯ ಹಸಿರಾಗುವ ಮೋಹಕ ಬದುಕು.

ಮುಗ್ಧ ಕಂದನ ಕಂಗಳ ಕಾತುರ ಬದುಕು.”

ಕೊನೆಯ ಸಲವೆಂಬಂತೆ ಮೊದಲ ಸಲ ವರ್ಷಿ ಭಾವುಕನಾಗಿದ್ದ; ಆತ್ಮ ಯಾಂತ್ರಿಕವಾಗಿ ಯೋಚಿಸತೊಡಗಿದ್ದ ವರ್ಷಿ ಇನ್ನೊಂದು ಮುಖವಿರಬಹುದೇ ಇದು ಎಂದು. ವರ್ಷಿ ಹೀಗೇಕೆ ಮಾಡುತ್ತಿದ್ದಾನೆ? ಆತ್ಮ ಗೊಂದಲದಲ್ಲಿ ಸಿಲುಕಿಕೊಂಡ.

ನಿರರ್ಗಳ ವರ್ಷಿ, ಮಾತೆಂದರೆ ಶುದ್ಧ ಶಬ್ದ ಭಂಡಾರ. ” ವಿಜ್ಞಾನ, ವಿಜ್ಞಾನಿಗಳು ಏನನ್ನು ಮತ್ತು ಯಾವ ಕರ್ಮಕ್ಕೆ ಸೃಷ್ಟಿಸುತ್ತಿದ್ದಾರೆ ಎಂಬುದರ ಕಾರಣ ಮನುಷ್ಯ ತಿಳಿಯಲು ಹೋಗುವುದೇ ಇಲ್ಲ; ಹೊರಟರೆ ನಿಲ್ಲಲು ಸಮಯವಿಲ್ಲ. ವಿಜ್ಞಾನ ಹಾನಿ ಮಾಡಬಹುದೆಂದು ತಿಳಿದಿದ್ದರೂ ಅದನ್ನು ವಿರೋಧಿಸುವವರು ಒಬ್ಬರೂ ಇಲ್ಲ. ಒಳ್ಳೆಯ ಉದ್ಧೇಶಗಳಿಗೆ ಬಳಕೆಯಾಗಬೇಕಾಗಿದ್ದ ನ್ಯೂಕ್ಲಿಯರ್ ಸೂತ್ರಗಳು ಅಣುಬಾಂಬ್ ಗಳ ಉಗಮಕ್ಕೆ ಉಪಯೋಗವಾಗುತ್ತಿವೆ.

ಭೂಮಿಯ ಸೃಷ್ಟಿಯ ರಹಸ್ಯ ಅರಿಯಲು ಭೂಮಿಯ ಅಂತರಾಳವನ್ನೇ ಉಸಿರುಕಟ್ಟಿಸುತ್ತಿದೆ ವಿಜ್ಞಾನ. ಶಾಶ್ವತ ಬದುಕಿನ ಅಧ್ಯಾಯ ನಿರ್ಮಿಸಲು ಪ್ರಾಣಿಗಳ ಜೀವ ತೆಗೆಯುತ್ತಿದ್ದಾನೆ ವಿಜ್ಞಾನಿ. ಇವೆಲ್ಲವುಗಳ ಪರಿಣಾಮವೇನು? ಕೇಳುವವರಾರು? ಎಲ್ಲವೂ ಪ್ರಶ್ನೆಗಳೇ. ಉತ್ತರವೇ ಸಿಗದ, ಸಿಕ್ಕರೂ ಅರ್ಥವಾಗದ ಉತ್ತರಗಳೇ.

ಎಲ್ಲರಿಗೂ ಬದುಕು ಎಂದರೆ ‘ ನಾನು’.ಅರ್ಥ ನಾನು ಮಾತ್ರ. ನನ್ನು ನನ್ನದು ಎಂಬ ಭಾವನೆ ಗಾಢವಾದಾಗ ಎದುರಿನವ ಅಸಡ್ಡೆ. ಅಲ್ಲಿಗೆ? ನಾನು ಗೆಲ್ಲಬೇಕು, ಪ್ರಕೃತಿ ಸೋತು ನಿಲ್ಲಬೇಕು.”

ಒಮ್ಮೆ ಉಸಿರೆಳೆದು ಮಾತಿಗಾರಂಭಿಸಿದ ವರ್ಷಿ. ” ನನಗೆ ಗೊತ್ತು ನನ್ನ ಆವಿಷ್ಕಾರ ಒಳ್ಲೆಯದಕ್ಕಲ್ಲವೆಂದು. ಇದರ ಪರಿಣಾಮವೂ ಚೆನ್ನಾಗಿಯೇ ತಿಳಿದಿದೆ. ಆದರೂ ಹೀಗೇಕೆ ಮಾಡುತ್ತಿರುವೆ ಎಂದು ಪ್ರಶ್ನಿಸುವ ನಿನಗೆ ನನ್ನ ಉತ್ತರವಿಲ್ಲ ಎಂದು ನಕ್ಕ.

ಆತ್ಮನ ಅವೆಷ್ಟೋ ಉತ್ತರವಿರದ ಪ್ರಶ್ನೆಗಳಲ್ಲಿ ಒಂದಾದ ಪ್ರಶ್ನೆಗೆ ಪರಿಚಯವಾಗುವ ಸಮಯ ಎಂದು ಮನದಲ್ಲೇ ಹಿಗ್ಗಿದ.

” ವಿಶ್ವಾತ್ಮ ಇದನ್ನೇ ಬಯಸುತ್ತಿದ್ದಾನೆ ಆತ್ಮ, ಕೊಂಡಿ ತಪ್ಪಿ ಓಡುತ್ತಿರುವ ಈ ಭೂಮಿಯೆಂಬ ರೈಲಿನ ಹಳಿಯನ್ನೂ ಕೂಡಾ ತಪ್ಪಿಸಲು ಬಯಸುತ್ತಿದ್ದಾನೆ. ಮನುಷ್ಯ ಪ್ರಬಲನಾಗುತ್ತಿದ್ದಾನೆ. ಅನಿವಾರ್ಯ, ಪ್ರಬಲವಾಗಲಿ. ಅವನ ಪ್ರಬಲತೆ ಕೇವಲ ತನ್ನ ಉಳಿವಿಗೋಸ್ಕರ ಆಗಿರದೇ ಉಳಿದವರ ದಬ್ಬಾಳಿಕೆಗೆ ದುರ್ಬಳಕೆಯಾಗುತ್ತಿದೆ, ದೌರ್ಜನ್ಯಕ್ಕೆ ದಾರಿಯಾಗುತ್ತಿದೆ. ಆದ್ದ್ದರಿಂದಲೇ ವಿಶ್ವಾತ್ಮ ಮನುಷ್ಯ ಕುಲದ ಕೊನೆಯನ್ನು ಬಯಸುತ್ತಿದ್ದಾನೆ. ಇತಿಹಾಸದ ಪುಟಗಳಲ್ಲಿ ಸೇರಿಹೋಗುತ್ತಾನೆ ಮಾನವ. ಪುಟ ತಿರುವಿ ಹಾಕಲೂ ಯಾರೂ ಇರದಂತೆ ಅಂತ್ಯಕ್ಕೆ ಪ್ರಾರಂಭವಾಗಿದೆ.

ಇದಕ್ಕೆ…. ಇದಕ್ಕೇ ಎರಡನೇ ಸೂರ್ಯನ ಸೃಷ್ಟಿ. ಇಲ್ಲಿ ಸಾಯದೇ ಬದುಕುತ್ತಿರುವ ಎಲ್ಲರಿಗೂ ಮತ್ತೊಂದು ಆವಿಷ್ಕಾರ. ಬದುಕ ದಾರಿಗೆ ಬೆಳಕಿನ ಸಂಭ್ರಮದ ಭಾವ. ಇದೇ ಅವರ ಸಾವಿನ ಮೊದಲ ಹಂತ ಎಂದು ಯಾರಿಗೂ ತಿಳಿಯುವುದೇ ಇಲ್ಲ. ಎಲ್ಲ ಮುಗಿಯುತ್ತದೆ ಆತ್ಮ, ನಾವೆಲ್ಲರೂ ಸಾಯುತ್ತಿದ್ದೇವೆ. ಭೂಮಿಯ ಮೇಲೆ ಮನುಷ್ಯನ ಹಸ್ತಕ್ಷೇಪ ಇತಿಹಾಸವಷ್ಟೆ. “

ನಿಟ್ಟುಸಿರು ಬಿಟ್ಟ ವರ್ಷಿ.

ಆತ್ಮ ಕೇಳುತ್ತ ಕುಳಿತಲ್ಲೇ ಕಲ್ಲಂತಾಗಿದ್ದ.

ಮುಂದುವರಿಯುವುದು…

Facebook ಕಾಮೆಂಟ್ಸ್

Gautam Hegde: ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..
Related Post