X

ತಡೆಯಬೇಡ, ಮಳೆಯೆಂದರೆ…

ನೋಡುವೆ ಬೊಗಸೆಯಲ್ಲಿ ಕೂಡಿಟ್ಟು ಹನಿಯನ್ನ
ಮೈಮರೆತು ಕುಣಿಯುವೆ ಬಿಚ್ಚಿ ರೆಕ್ಕೆಯನ್ನ
ನೆನೆದಷ್ಟು ನೆನೆ ಅನ್ನುವ ಹೊತ್ತು
ತಡೆಯಬೇಡ,ಮಳೆಯಲ್ಲಿ ಸೌಂದರ್ಯವಿದೆ

ಆಗಸದಿ ಹನಿಯಾಗಿ ಮೋಡದಿ ಕೂಡಿದೆ
ನನಸಾಗಿ ಮಳೆಯಾಗಿ ಭುವಿಯ ತಬ್ಬಿದೆ
ಮೀಯುವೆನದರಲ್ಲಿ ನಿಂತು
ತಡೆಯಬೇಡ,ಮಳೆಯಲ್ಲಿ ಪ್ರೀತಿಯಿದೆ

ಗುಡುಗಿನ ಸದ್ದಿಗೆ ಮೋಡದ ನಂಟಿದೆ
ಬೀಸುವ ತಂಗಾಳಿಗೆ ಮಳೆಯು ಅಂಟಿದೆ
ವಿಲೀನವಾಗುವೆನದರಲ್ಲಿ ಬೆರೆತು
ತಡೆಯಬೇಡ,ಮಳೆಯಲ್ಲಿ ತಂಪಿದೆ

ವಿವಿಧ ರೂಪಕವಾಗಿ ತೋರಿದೆ ಮಿಂಚು
ವೈವಿಧ್ಯತೆಯಲ್ಲಿ ಬೆಳಗಿದೆ ಸೃಷ್ಟಿಯಂಚು
ಬೆಳಕಿನಾಟವ ನೋಡುವೆ ಮೈಮರೆತು
ತಡೆಯಬೇಡ,ಮಳೆಯಲ್ಲಿ ಚೈತನ್ಯವಿದೆ

ವಸುಂಧರೆಯ ಘಮ ವರ್ಷಾಭಿಷೇಕದಲ್ಲಿ
ಹಸಿರ ಹುಟ್ಟು ತಾಯ ಗರ್ಭದಲ್ಲಿ
ಮೂಡಿಸುವೆನಲ್ಲಿ ಮಣ್ಣಲ್ಲಿ ಹೆಜ್ಜೆಗುರುತು
ತಡೆಯಬೇಡ,ಮಳೆಯಲ್ಲಿ ಕನಸಿದೆ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post