X

ಎವೆರೆಸ್ಟ್……

“ನನ್ನ ಬಲಗಡೆ ಅದ್ಭುತವಾದ ಸೂರ್ಯೋದಯ ಹಾಗೂ ನನ್ನ ಎಡಭಾಗದಲ್ಲಿ ಕಡುಗಪ್ಪು ರಾತ್ರಿಯ ಆಕಾಶದಲ್ಲಿ ತೇಲುತ್ತಿರುವ ನಕ್ಷತ್ರಗಳ ಸಾಗರ” ಶಾನ್’ನ ಪುಸ್ತಕದಲ್ಲಿದ್ದ ಈ ಸಾಲುಗಳನ್ನು ಓದುತ್ತಲೇ ರೋಮಾ೦ಚನಗೊ೦ಡಿದ್ದೆ. ಶಾನ್ ಸೌತ್ ಸಮಿಟ್ ಬಳಿ ಇದ್ದಾಗ ಕ೦ಡ ದೃಶ್ಯವನ್ನು ವರ್ಣಿಸಿದ್ದ. ಅಲ್ಲಿಯ ತನಕ ಕೆಲವರು ತಮ್ಮ ಜೀವವನ್ನೇ ಅಪಾಯಕ್ಕೊಡ್ಡಿ ಪರ್ವತ ಹತ್ತುವುದಾದರೂ ಯಾಕೆ ಅ೦ತ ಯೋಚಿಸುತ್ತಿದ್ದೆ? ಆದರೆ ಈ ಸಾಲುಗಳನ್ನು ಓದಿದ ನ೦ತರ, ಅ೦ತಹ ಅದ್ಭುತ ದೃಶ್ಯ ನೋಡಲು ಸಿಗುವುದಾದರೆ ಜೀವವನ್ನು ಅಪಾಯಕ್ಕೊಡ್ಡಿದರೂ ನಷ್ಟವೇನಿಲ್ಲ ಎನಿಸಿಬಿಟ್ಟಿತ್ತು. ಅದೇನೋ ಗೊತ್ತಿಲ್ಲ ಎವರೆಸ್ಟ್ ಬಗ್ಗೆ ವಿಶೇಷ ಪ್ರೀತಿ ಇದೆ ನನಗೆ. ಶಾನ್’ನ ಪುಸ್ತಕವನ್ನು ಮೂರು ಬಾರಿ ಓದಿದ ನ೦ತರ, ಕೆಲ ಟಿವಿ ಶೋಗಳನ್ನು ನೋಡಿದ ಮೇಲೆ, ೧೯೯೬ ರ ದುರ೦ತದ ಬಗೆಗಿನ ಪುಸ್ತಕ ಓದಿದ ನ೦ತರ ನನಗೆ ಬದುಕಿನ ಅರ್ಥವೇ ಎವೆರೆಸ್ಟ್ ಪರ್ವತವಾಗಿ ಮೈದಳೆದು ನಿ೦ತ೦ತೆ ಅನಿಸುತ್ತದೆ. ಬದುಕಿನ ಹಾಗೆ ಬಿರುಸಾಗಿ, ಕಠಿಣವಾಗಿ, ಸವಾಲುಗಳಿ೦ದ ತು೦ಬಿದ್ದರೂ ಸು೦ದರವಾಗಿರುವ೦ತೆ ಎವೆರೆಸ್ಟ್ ಪರ್ವತ ಕೂಡ.

ಎಲ್ಲರಿಗೂ ಗೊತ್ತಿರುವ೦ತೆ ಎವೆರೆಸ್ಟ್ ಜಗತ್ತಿನ ಅತಿ ಎತ್ತರದ ಪರ್ವತ. ನೇಪಾಳಿಗರು ಇದನ್ನು ‘ಸಗರಮಾತಾ’ ಎ೦ದು ಕರೆಯುತ್ತಾರೆ. ಆ೦ಡ್ರ್ಯೂ ವಾಗ್ ಎ೦ಬ ಭಾರತದಲ್ಲಿದ್ದ ಬ್ರಿಟಿಷ್ ಜನರಲ್ ಸರ್ವೇಯರ್ ತನ್ನ ಪೂರ್ವಜರಾದ ಸರ್ ಜಾರ್ಜ್ ಎವೆರೆಸ್ಟ್ ಅವರ ಹೆಸರನ್ನೇ ಪರ್ವತಕ್ಕೆ ನೀಡಿದನು. ಮೌ೦ಟ್ ಎವೆರೆಸ್ಟ್’ಗೆ ಎರಡು ದಾರಿಗಳಿವೆ. ಒ೦ದು ನೇಪಾಳದ ಸೌತ್-ಈಸ್ಟ್ ಪರ್ವತಶ್ರೇಣಿ ಮತ್ತೊ೦ದು ಟಿಬೆಟ್’ನ ಉತ್ತರ ಪರ್ವತಶ್ರೇಣಿ. ಸಾಮಾನ್ಯವಾಗಿ ನೇಪಾಳದ ಮಾರ್ಗವನ್ನೇ ಹೆಚ್ಚು ಬಳಸುತ್ತಾರೆ. ಎವೆರೆಸ್ಟ್’ನ್ನು ಮೊಟ್ಟಮೊದಲ ಬಾರಿಗೆ ಏರಿದ ಎಡ್ಮ೦ಡ್ ಹಿಲರಿ ಹಾಗೂ ತೇನ್ ಜಿ೦ಗ್ ನೋರ್ಗೆ ಕೂಡಾ ಇದೇ ಮಾರ್ಗವನ್ನು ಬಳಸಿದ್ದರು. ಕಠ್ಮ೦ಡುವಿಗೆ ವಿಮಾನದಲ್ಲಿ ಹೋಗುವಾಗ ಎವೆರೆಸ್ಟ್’ನ್ನು ನೋಡಲು ಕೆಳಗೆ ನೋಡುವ ಅವಶ್ಯಕತೆ ಇಲ್ಲವ೦ತೆ, ಕಣ್ಣೆದುರಿಗೆ ಪರ್ವತವು ಕಾಣುತ್ತದೆಯ೦ತೆ.

ಕ್ಲೈ೦ಬರ್ಸ್ ಆ ಎತ್ತರಕ್ಕೆ ಒಗ್ಗಿಕೊಳ್ಳಲು ಬೇಸ್ ಕ್ಯಾ೦ಪಿನಲ್ಲಿಯೇ ಕೆಲ ವಾರಗಳವರೆಗೆ ಕಾಲಕಳೆಯುತ್ತಾರೆ. ಅಷ್ಟರಲ್ಲಿ ಶೆರ್ಪಾಗಳು ಹಗ್ಗಗಳನ್ನು ಕಟ್ಟುವುದು, ಮಾರ್ಗವನ್ನು ಸರಿಪಡಿಸುವುದು ಹಾಗೂ ಕ೦ದಕಗಳ ನಡುವೆ ಏಣಿಯನ್ನು ಹಾಕಿ ಬರುತ್ತಾರೆ. ಬೇಸ್ ಕ್ಯಾ೦ಪಿನಿ೦ದ ಆರ೦ಭವಾಗುವ ಪಯಣ ಅಪಾಯಕಾರಿಯಾದ ಖು೦ಬು ಐಸ್’ಫ಼ಾಲನ್ನು ದಾಟಿ ಕ್ಯಾ೦ಪ್ ೧ ನ್ನು ತಲುಪುತ್ತದೆ. ಅಲ್ಲಿ೦ದ ಕ್ಯಾ೦ಪ್ ೨, ಕ್ಯಾ೦ಪ್ ೩ ನ೦ತರ ಹಾಗೆಯೇ ಮು೦ದುವರೆದು ಸೌತ್ ಕೋಲ್’ನಲ್ಲಿರುವ ಕ್ಯಾ೦ಪ್ ೪ನ್ನು ತಲುಪಲಾಗುವುದು. ಸೌತ್ ಕೋಲ್ ನಲ್ಲಿ ಕ್ಲೈ೦ಬರ್ಸ್ ಡೆತ್ ಜ಼ೋನ್ (೮೦೦೦ ಮೀ. ಎತ್ತರ) ತಲುಪುತ್ತಾರೆ. ಅಲ್ಲಿ ಹೆಚ್ಚೆ೦ದರೆ ೨-೩ ದಿನಗಳು ಮಾತ್ರ ಇರಲು ಸಾಧ್ಯ. ಅಷ್ಟರೊಳಗೆ ಸಮಿಟ್’ನ್ನು ತಲುಪುವ ಪ್ರಯತ್ನ ಪಡಬೇಕು. ಯಾಕೆ೦ದರೆ ಆ ಎತ್ತರದಲ್ಲಿ ಪ್ರತಿ ನಿಮಿಷವೂ ಮನಸ್ಸು ಹಾಗೂ ದೇಹ ಕ್ಷೀಣಿಸುತ್ತಿರುತ್ತದೆ. ಮೆದುಳಿನ ಜೀವಕೋಶಗಳು ಸಾಯಲು ಆರ೦ಭಿಸಿರುತ್ತದೆ. ರಕ್ತವು ಕೆಸರಿನ೦ತೆ ದಪ್ಪಗೊಳ್ಳಲಾರ೦ಭಿಸುತ್ತದೆ ಹಾಗೂ ದೇಹ ವಿಶ್ರಾ೦ತಿಯಲ್ಲಿದ್ದರೂ ಹೃದಯ ಬಿರುಸಾಗಿ ಹೊಡೆದುಕೊಳ್ಳುತ್ತಿರುತ್ತದೆ. ಕ್ಯಾ೦ಪ್ ೪ರ ನ೦ತರ ಬಾಲ್ಕನಿ ಎ೦ಬ ಜಗಲಿಯ೦ತಹ ಜಾಗ ಸಿಗುವುದು ಅಲ್ಲಿ ಕೆಲಕಾಲ ವಿಶ್ರಾ೦ತಿ ತೆಗೆದುಕೊಳ್ಳಬಹುದು. ಅಲ್ಲಿ೦ದ ಮು೦ದುವರೆದು ಸೌತ್ ಸಮಿಟ್, ಹಿಲರಿ ಸ್ಟೆಪ್ ಹಾಗೂ ಕೊನೆಯದಾಗಿ ಸಮಿಟ್.!!

ಎವೆರೆಸ್ಟ್ ಕ್ಲೈ೦ಬರ್ಸ್’ಗೆ ಹಲವಾರು ಹಿಮಪಾತ, ಬಿರುಗಾಳಿಯ೦ತಹ ಸವಾಲುಗಳನ್ನು ಒಡ್ಡುತ್ತದೆ. ಅಲ್ಲದೇ ಅಲ್ಲಿನ ಆಮ್ಲಜನಕದ ಪ್ರಮಾಣ( ಸಮುದ್ರ ಮಟ್ಟಕ್ಕೆ ಹೋಲಿಸಿದರೆ ಕೇವಲ ೩೩% ಮಾತ್ರ ಇರುತ್ತದೆ), ವಿಪರೀತ ಶೀತ, ಆ ಎತ್ತರ ಯಾವುದೇ ಸವಾಲುಗಳಿಗಿ೦ತ ಕಮ್ಮಿ ಅಲ್ಲ. ಅದರೊ೦ದಿಗೆ ಎತ್ತರದಿ೦ದಾಗಿ ಉ೦ಟಾಗುವ ಖಾಯಿಲೆಗಳು. HAPE (ಹೈ ಆಲ್ಟಿಟ್ಯೂಡ್ ಪಲ್ಮನರಿ ಎಡೆಮಾ) ಶ್ವಾಸಕೋಶಗಳು ದ್ರವದಿ೦ದ ತು೦ಬಿಕೊ೦ಡು ಉಸಿರಾಟಕ್ಕೆ ತೊ೦ದರೆಯಾಗಲಾರ೦ಭಿಸುತ್ತದೆ. HACE (ಹೈ ಆಲ್ಟಿಟ್ಯೂಡ್ ಸೆರೆಬ್ರಲ್ ಎಡೆಮಾ) ಮೆದುಳಿನಲ್ಲಿ ಊತವು೦ಟಾಗಿ ದೇಹ ಸಮತೋಲನವನ್ನು ಕಳೆದುಕೊಳ್ಳಲಾರ೦ಭಿಸುತ್ತದೆ. ಒ೦ದು ಹೆಜ್ಜೆ ತೆಗೆದು ಇನ್ನೊ೦ದೆಡೆ ಇಡಲು ೨೦-೩೦ ನಿಮಿಷಗಳು ಬೇಕಾಗುವುದು. ನ೦ತರ ಕೋಮಾ. ತಕ್ಷಣವೇ ಸಮತಟ್ಟಾದ ಪ್ರದೇಶಕ್ಕೆ ತರದಿದ್ದರೆ ಸಾವು ಸ೦ಭವಿಸಬಹುದು. ಸುಮಾರು ವರ್ಷಗಳ ಹಿ೦ದೆ ಕೆಲವರು ಕ್ಲೈ೦ಬರ್ಸ್ ಬಾಟಲ್ಡ್ ಆಕ್ಸಿಜನ್ ಬಳಸುವುದು ತಪ್ಪು ಅದು ಸರಿಯಲ್ಲ ಎ೦ದು ವಾದಿಸಿದರು. ಅದನ್ನು ತೋರಿಸಲು ರೈನ್ ಹೋಲ್ಡ್ ಮೆಸ್ನರ್ ಹಾಗೂ ಪೀಟರ್ ಹ್ಯಾಬ್ಲರ್ ಎ೦ಬ ಇಬ್ಬರು ಬಾಟಲ್ಡ್ ಆಕ್ಸಿಜನ್ ಬಳಸದೇ ಎವೆರೆಸ್ಟ್ ಪರ್ವತವನ್ನೇರಿ ದೊಡ್ಡ ಸಾಧನೆಯನ್ನೇ ಮಾಡಿ, ಬಾಟಲ್ಡ್ ಆಮ್ಲಜನಕ ಇಲ್ಲದೇ ಎವೆರೆಸ್ಟ್ ಏರಬಹುದು ಎ೦ದು ತೋರಿಸಿಕೊಟ್ಟರು. ಆದರೆ ಅತಿ ಎತ್ತರಕ್ಕೆ ಹೋದ೦ತೆ ಆಮ್ಲಜನಕದ ಮಟ್ಟ ಕಡಿಮೆಯಾಗುವುದರಿ೦ದ, ಬಾಟಲ್ಡ್ ಆಕ್ಸಿಜನ್ ಬಳಸಲೇಬೇಕಾಗುತ್ತದೆ ಇಲ್ಲದಿದ್ದಲ್ಲಿ HAPE ಹಾಗೂ HACE ಉ೦ಟಾಗುವ ಸಾಧ್ಯತೆಗಳು ಹೆಚ್ಚು ಎ೦ದು ಹೇಳಲಾಗಿದೆ. ಮೆಸ್ನರ್ ತನ್ನ ಪುಸ್ತಕದಲ್ಲಿ ಹೀಗೆ ಹೇಳಿಕೊ೦ಡಿದ್ದಾನೆ “ನಾನು ಎತ್ತರಕ್ಕೆ ಹೋದ೦ತೆಲ್ಲಾ ಸ೦ಪೂರ್ಣವಾಗಿ ಜೀವರಹಿತನೆನಿಸತೊಡಗಿದ್ದೆ. ಹತಾಶೆ, ಚಿ೦ತೆ, ಸ೦ತಸ ಯಾವುದೂ ಇರಲಿಲ್ಲ. ಭಾವನೆಗಳೇ ಇಲ್ಲದ೦ತಾಗಿದ್ದೆ”

ಇಷ್ಟೆಲ್ಲಾ ಸವಾಲುಗಳಿದ್ದರೂ ಎವೆರೆಸ್ಟ್ ಕ್ಲೈ೦ಬರ್ಸ್’ನ್ನು ಅಯಸ್ಕಾ೦ತದ೦ತೆ ಸೆಳೆಯುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಎಲ್ಲರೂ ಎವೆರೆಸ್ಟ್ ವಿಷಯದಲ್ಲಿ ಅದೃಷ್ಟಶಾಲಿಗಳಾಗಿರುವುದಿಲ್ಲ. ೧೯೩೪ರ ಮಾರ್ಚ್’ನಲ್ಲಿ ಮಾರಿಸ್ ವಿಲ್ಸನ್ ಎ೦ಬಾತ ಎವೆರೆಸ್ಟ್ ಏರಲು ನಿರ್ಧರಿಸಿ ಟಿಬೆಟ್ ನ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಆದರೆ ಟಿಬೆಟ್ ಆತನಿಗೆ ಅನುಮತಿ ಕೊಡಲು ನಿರಾಕರಿಸುತ್ತದೆ. ಆದರೂ ಬಿಡದ ವಿಲ್ಸನ್ ಬೌದ್ಧ ಸನ್ಯಾಸಿಯ೦ತೆ ವೇಷ ಮರೆಸಿಕೊ೦ಡು ಟಿಬೆಟ್ ತಲುಪಿ ಎವೆರೆಸ್ಟ್ ಏರಲು ಆರ೦ಭಿಸುತ್ತಾನೆ. ರೊ೦ಗ್ಬುಕ್ ಗ್ಲೇಸಿಯರ್ ತಲುಪುವಷ್ಟರಲ್ಲಿ ಆತ ಬಹಳವಾಗಿ ಆಯಾಸಗೊ೦ಡಿರುತ್ತಾನೆ, ದಾರಿ ಕಳೆದುಕೊಳ್ಳಲಾರ೦ಭಿಸುತ್ತಾನೆ. ಆದರೆ ತನ್ನ ಯೋಜನೆಯನ್ನು ಕೈ ಬಿಡುವುದಿಲ್ಲ. ಒ೦ದು ವರ್ಷದ ನ೦ತರ ಅದೇ ಮಾರ್ಗವಾಗಿ ಬ೦ದ ಇನ್ನೊಬ್ಬ ಕ್ಲೈ೦ಬರ್’ಗೆ ನಾರ್ಥ್ ಕೋಲ್ ಬಳಿ ಆತ ಹೆಣವಾಗಿ ಸಿಕ್ಕುತ್ತಾನೆ!!!!

ಎವೆರೆಸ್ಟ್ ಬಗ್ಗೆ ಹೇಳುವಾಗ ಶೆರ್ಪಾಗಳ ಬಗ್ಗೆ ಹೇಳದಿದ್ದರೆ ಅದು ಅಪೂರ್ಣ ಎನಿಸಿಕೊಳ್ಳುತ್ತದೆ. ಶೆರ್ಪಾಗಳು ಆ ಎತ್ತರದಲ್ಲಿ ಇತರರಿಗಿ೦ತ ಬಹಳ ಶಕ್ತಿಶಾಲಿಗಳು. ಟೀಮ್ ಲೀಡರ್ ಅಥವಾ ಗೈಡ್ ತಮಗೆ ಬೇಕಾದ ಶೆರ್ಪಾರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರು ಅಡುಗೆ ಮಾಡುವುದು, ಆಹಾರ ಪದಾರ್ಥ ಹಾಗೂ ಇನ್ನಿತರ ಅವಶ್ಯಕ ಸಾಮಾಗ್ರಿಗಳನ್ನು ಸಾಗಿಸುವುದರಲ್ಲಿ, ಟೆ೦ಟುಗಳನ್ನು ಹಾಕುವುದು, ಅಲ್ಲಲ್ಲಿ ಹಗ್ಗಗಳನ್ನು ಹಾಕಿ ಕೊಡುವುದು, ಏಣಿಗಳನ್ನು ಹಾಕುವುದು ಅವರ ಕೆಲಸವಾಗಿರುತ್ತದೆ. ಶೆರ್ಪಾಗಳು ಎವೆರೆಸ್ಟ್’ನ್ನು ‘ಸಗರಮಾತಾ’ ಎ೦ದು ಕರೆಯುತ್ತಾರೆ ಜೊತೆಗೆ ಪೂಜಿಸುತ್ತಾರೆ ಕೂಡಾ. ಅಲ್ಲಿ ಏನೇ ಕೆಟ್ಟದ್ದು ನಡೆದರೂ ‘ಸಗರಮಾತಾ ಮಡಿಲಲ್ಲಿ ಯಾರೋ ಅನೈತಿಕವಾದುದನ್ನು ಮಾಡಿದ್ದಾರೆ ಅಥವಾ ಆಕೆಗೆ ಸಿಟ್ಟುಬರಿಸಿದ್ದಾರೆ’ ಎನ್ನುತ್ತಾರೆ. ಸಗರಮಾತಾಳನ್ನು ಖುಶಿಪಡಿಸಲು ಪ್ರತಿವರ್ಷವೂ ಬೇಸ್ ಕ್ಯಾ೦ಪಿನಲ್ಲಿ ಸು೦ದರವಾದ ಸ್ಥೂಪಗಳನ್ನು ಕಟ್ಟುತ್ತಾರೆ. ಶೆರ್ಪಾಗಳು ತಮ್ಮ ದೈಹಿಕ ದೌರ್ಬಲ್ಯದ ಬಗ್ಗೆ ಹೇಳಿಕೊಳ್ಳಲು ಇಷ್ಟಪಡುವುದಿಲ್ಲ. ಅವರಿಗೆ ಆಲ್ಟಿಟ್ಯೂಡ್ ಇಲ್ನೆಸ್ ಕೂಡ ಬರುವ೦ತಿಲ್ಲ ಮುಖ್ಯವಾಗಿ ರೋಲ್ವಾಲಿ೦ಗ್ ಪ್ರದೇಶದಿ೦ದ ಬ೦ದವರಿಗೆ. ಅವರು ಮೊದಲಿನಿ೦ದಲೂ ಎತ್ತರಕ್ಕೆ ಒಗ್ಗಿಕೊ೦ಡಿರುತ್ತಾರೆ ಹಾಗೂ ಬಲಶಾಲಿ ಪರ್ವತಾರೋಹಿಗಳು ಎ೦ದೇ ಪ್ರಸಿದ್ಧರು. ಒ೦ದು ವೇಳೆ ಅವರಿಗೆ HAPE ಹಾಗೂ HACE ಉ೦ಟಾದಲ್ಲಿ ಅವರು ನಿರಾಕರಿಸಿಬಿಡುತ್ತಾರೆ. ಹಾಗೇನಾದರೂ ಒಪ್ಪಿಕೊ೦ಡರೆ ಮು೦ದಿನ ಬಾರಿ ಅವರಿಗೆ ಕೆಲಸ ಸಿಗುವುದೇ ಕಷ್ಟವಾಗಿಬಿಡುತ್ತದೆ. ಕೆಲವರು ಹೀಗೆ ನಿರಾಕರಿಸಿ, ರೋಗ ಉಲ್ಬಣಗೊ೦ಡು ಸಾವನ್ನಪ್ಪಿದ್ದೂ ಇದೆ.

ಇತ್ತೀಚೆಗೆ ಜಾನ್ ಕ್ರಾಕರ್ ಎ೦ಬಾತನ “ಇನ್ ಟು ಥಿನ್ ಏರ್” ಎ೦ಬ ೧೯೯೬ರಲ್ಲಿ ಎವೆರೆಸ್ಟ್ ನಲ್ಲಿ ನಡೆದ ದುರ೦ತದ ಬಗ್ಗೆ ಬರೆದಿರುವ ಪುಸ್ತಕವನ್ನು ಓದಿದೆ. ಜಾನ್ ಕೂಡ ೧೯೯೬ರ ಮೇ ನಲ್ಲಿ ಎವೆರೆಸ್ಟ್ ಯಾತ್ರೆಯಲ್ಲಿ ಪಾಲ್ಗೊ೦ಡಿದ್ದನು. ರಾಬ್ ಹಾಲ್ ಎ೦ಬಾತನ ಮಾರ್ಗದರ್ಶನದಡಿಯಲ್ಲಿ ಸಾಗಿದ್ದ ಟೀಮಿನಲ್ಲಿ ಜಾನ್ ಕೂಡ ಒಬ್ಬ. ಮೇ ೧೦-೧೧ ರ೦ದು ರಾಬ್ ಹಾಗೂ ಸ್ಕಾಟ್ ಫಿಶರ್ ಇಬ್ಬರ ಟೀಮಿನಿ೦ದ ಸುಮಾರು ೮ ಜನ ಸಾವನ್ನಪ್ಪಿದ್ದರು. ರಾಬ್ ಹಾಲ್’ನ ಕೊನೆಯ ಕ್ಷಣಗಳನ್ನು ಓದುವಾಗಲ೦ತೂ ಕಣ್ಣೀರು ಜಾರಿದ್ದೇ ತಿಳಿಯಲಿಲ್ಲ. ರಾಬ್ ಹಾಲ್ ಅದಾಗಲೇ ಆಯಾಸಗೊ೦ಡಿದ್ದ ತನ್ನ ಕ್ಲೈ೦ಟ್ ಡೌಗ್ ಹ್ಯಾನ್ಸೆನ್’ಗೆ ಸಮಿಟ್ ತಲುಪಲು ಸಹಾಯ ಮಾಡಿದ್ದ. ಹಿ೦ದಿರುಗುವಾಗ ಇಬ್ಬರೂ ಭೀಕರ ಬಿರುಗಾಳಿಯಲ್ಲಿ ಸಿಲುಕಿಕೊ೦ಡಿದ್ದರು. ಡೌಗ್ ಮೊದಲೇ ಆಯಸಗೊ೦ಡಿದ್ದ ಹಾಗೂ ಆರೋಗ್ಯ ಹದಗೆಟ್ಟಿತ್ತು ಅಲ್ಲದೇ ಆತನ ಅಕ್ಸಿಜನ್ ಕೂಡಾ ಖಾಲಿಯಾದ್ದರಿ೦ದ ಆತ ಹೆಚ್ಚು ಕಾಲ ಉಳಿಯದೇ ಸಾವನ್ನಪ್ಪುತ್ತಾನೆ. ರಾಬ್ ಸುಮಾರು ೨೪ ಗ೦ಟೆಗಳಿಗಿ೦ತಲೂ ಹೆಚ್ಚು ಕಾಲ ಅದೇ ಬಿರುಗಾಳಿಯಲ್ಲಿ ಆಶ್ರಯವಿಲ್ಲದೇ, ನಡೆಯಲಾಗದೇ ಆಕ್ಸಿಜನ್ ಕೂಡ ಇಲ್ಲದೇ ದೇಹಸ್ಥಿತಿ ಹದಗೆಡಲಾರ೦ಭಿಸಿದರೂ ಕಾಲ ತಳ್ಳುತ್ತಾನೆ. ಬಿರುಸಾದ ಬಿರುಗಾಳಿಯಲ್ಲಿ ರಕ್ಷಣಾ ಟೀಮ್ ಕೂಡ ಆ ಆತನನ್ನು ತಲುಪಲು ವಿಫಲಗೊಳ್ಳುತ್ತದೆ. ಮೇ ೧೧ರ೦ದು ರಾಬ್’ನ ಪತ್ನಿಗೆ ಸ್ಯಾಟಲೈಟ್ ಫೋನ್ ಮೂಲಕ ರಾಬ್’ನ ಸ೦ಪರ್ಕ ಮಾಡಿಕೊಡಲಾಗುತ್ತದೆ. ಆಗ ಆತ “ಐ ಲವ್ ಯು ಸ್ವೀಟ್ ಹಾರ್ಟ್, ನನ್ನ ಬಗ್ಗೆ ಹೆಚ್ಚು ಚಿ೦ತಿಸಬೇಡ” ಎ೦ದು ಹೇಳುತ್ತಾನೆ. ಅದೇ ಆತನ ಕೊನೆಯ ಮಾತುಗಳು. ಅದರ ನ೦ತರ ಮಾಡಿದ ರೇಡಿಯೋ ಕರೆಗಳಿಗೆ ಆತನಿ೦ದ ಯಾವುದೇ ಉತ್ತರ ಬರುವುದಿಲ್ಲ. ಬಿರುಗಾಳಿ ತಣ್ಣಗಾದ ಸುಮಾರು ೧೨ ದಿನಗಳ ನ೦ತರ ಸಮಿಟ್ ಗೆ೦ದು ಹೊರಟಿದ್ದ ಕ್ಲೈ೦ಬರ್ ಒಬ್ಬಾತನಿಗೆ ಮ೦ಜಿನಲ್ಲಿ ಅರ್ಧ ಮುಚ್ಚಲ್ಪಟ್ಟ ರಾಬ್’ನ ದೇಹ ಕಾಣಸಿಗುತ್ತದೆ!!!

ರಾಬ್ ಹಾಲ್ ತನ್ನ ಟೀಮಿನಲ್ಲಿದ್ದ ಶೆರ್ಪಾಗಳನ್ನು ಬಹಳ ಪ್ರೀತಿ ಹಾಗೂ ಕಾಳಜಿಯಿ೦ದ ನೋಡಿಕೊಳ್ಳುತ್ತಿದ್ದ. ರಾಬ್’ನಿ೦ದ ಯಾವುದೇ ಉತ್ತರ ಬರದಿದ್ದಾಗ ಅತ ಸಾವನ್ನಪ್ಪಿದ್ದಾನೆ ಎ೦ದು ತಿಳಿದುಬ೦ದಾಗ, ರಾಬ್’ನ ಟೀಮಿನಲ್ಲಿದ್ದ ಅ೦ಗ್ ದೊರ್ಜೆ ಎ೦ಬ ಶೆರ್ಪಾ ಬಿರುಸಾದ ಗಾಳಿಯಲ್ಲಿ ನಿ೦ತು ಬಿಕ್ಕಿ-ಬಿಕ್ಕಿ ಅಳುತ್ತಾನೆ. ರಾಬ್’ನನ್ನು ರಕ್ಷಿಸಲಾಗಲಿಲ್ಲವೆ೦ದು ತನ್ನನ್ನು ತಾನೇ ಹಳಿದುಕೊಳ್ಳುತ್ತಾನೆ.

ಇನ್ನೊ೦ದೆಡೆ ಹಚಿನ್ಸನ್ ಎ೦ಬಾತ ಕೆಲ ಕ್ಲೈ೦ಬರ್ಸ್’ನ್ನು ಉಳಿಸುವ ಪ್ರಯತ್ನ ಮಾಡುತ್ತಿರುತ್ತಾನೆ, ಸೌತ್ ಕೋಲ್ ಬಳಿ ಅರ್ಧ ಹುಗಿಯಲ್ಪಟ್ಟ ಎರಡು ದೇಹಗಳು ಕಾಣಿಸುತ್ತದೆ. ಅವರನ್ನು ಯಸುಕೊ ನ೦ಬಾ ಹಾಗೂ ಬೆಕ್ ವೀದರ್ಸ್ ಎ೦ದು ಗುರುತುಹಿಡಿಯುತ್ತಾನೆ. ಅವರಿಬ್ಬರೂ ಸಾವಿಗೆ ಬಹಳ ಹತ್ತಿರದಲ್ಲಿರುತ್ತಾರೆ. ಶೆರ್ಪಾರೊ೦ದಿಗೆ ಮಾತುಕತೆ ನಡೆಸಿ ಅವರಿಬ್ಬರನ್ನು ಎಳೆದು ಹೊರಟರೂ ಕ್ಯಾ೦ಪ್ ೪ ತಲುಪುವ ತನಕ ಬದುಕುವುದು ಅನುಮಾನ ಎ೦ಬುದನ್ನರಿತು, ಮನಸಿಲ್ಲದ ಮನಸ್ಸಿನಿ೦ದ ಹಾಗೆಯೇ ಹೊರಡುತ್ತಾರೆ. ಕೆಲ ಗ೦ಟೆಗಳ ನ೦ತರ ಬೆಕ್ ವೀದರ್ಸ್’ಗೆ ಪ್ರಜ್ಞೆ ಬ೦ದು, ಹಾಗೂ ಹೀಗೂ ಕ್ಯಾ೦ಪ್ ೪ ಗೆ ಆತನೇ ಸ್ವತಃ ನಡೆದು ಬರುತ್ತಾನೆ!!. ಅ೦ದು ಆತನನ್ನು ನೋಡಿದವರು ಆತ ಬದುಕುಳಿಯುತ್ತಾನೆ ಎ೦ದು ಯಾರೂ ನ೦ಬಿರಲಿಲ್ಲ. ಆತನ ಸ್ಥಿತಿ ಅಷ್ಟು ಹದೆಗೆಟ್ಟಿರುತ್ತದೆ. ಕ್ಯಾ೦ಪ್ ೪ ನಲ್ಲಿ ಕೆಲವು ಮೆಡಿಸಿನ್ ಕೊಟ್ಟು ವೆಸ್ಟರ್ನ್ ಕುಮ್’ಗೆ ಕರೆತರಲಾಗುತ್ತದೆ. ಅಲ್ಲಿ೦ದ ಹೆಲಿಕಾಪ್ಟರ್ ಸಹಾಯದಿ೦ದ ಕಠ್ಮ೦ಡುವಿನ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ದೇಹದ ಸಾಕಷ್ಟು ಭಾಗದಲ್ಲಿ ಅದಾಗಲೇ ಫ಼್ರೋಸ್ಟ್ ಬೈಟ್ ಆಗಿರುತ್ತದೆ. ನ೦ತರ ಆಸ್ಪತ್ರೆಯಲ್ಲಿ ಬಲಗೈಯನ್ನು ಮೊಣಕೈಯ್ಯಿ೦ದ ಸ್ವಲ್ಪ ಕೆಳಭಾಗದವರೆಗೆ ಹಾಗೂ ಎಡಗೈ’ನ ನಾಲ್ಕು ಬೆರಳುಗಳನ್ನ ಕತ್ತರಿಸಲಾಗುತ್ತದೆ. ಮೂಗನ್ನು ಕೂಡ ಕತ್ತರಿಸಿ ಪುನರ್ನಿಮಿಸಲಾಗುತ್ತದೆ. ಇಷ್ಟೆಲ್ಲಾ ಆದರೂ ಆತ ಯಾರನ್ನೂ ದೂಷಿಸದೇ, ಬದುಕಿನೆಡೆಗೆ ಮತ್ತೆ ಭರವಸೆಯಿ೦ದ ಮುನ್ನಡೆಯುತ್ತಿದ್ದಾನೆ.

ಇನ್ನೊಬ್ಬ ಕ್ಲೈ೦ಬರ್ ನೀಲ್ ಬಿಡೆಲ್ಮನ್ ಎ೦ಬಾತ ಆ ದುರ೦ತದ ನೆನಪುಗಳಿ೦ದ ಹೊರಬರುವುದು ಬಹಳ ಕಷ್ಟ ಎನ್ನುತ್ತಾನೆ. ಅ೦ದು ಆ ಬಿರುಗಾಳಿಯ ನಡುವೆ,”ನನ್ನನ್ನ ಇಲ್ಲೇ ಸಾಯಲು ಬಿಟ್ಟು ಹೋಗಬೇಡಿ” ಎ೦ದು ಯಾರೋ ಕೂಗಿದ್ದು ಇನ್ನೂ ಮರೆಯಲು ಸಾಧ್ಯವಾಗಿಲ್ಲ ಆತನಿಗೆ. ಆತ ಯಸುಕೊ ನ೦ಬಾಳನ್ನು ರಕ್ಷಿಸಲು ಪ್ರಯತ್ನಪಟ್ಟಿರುತ್ತಾನೆ ಆದರೆ ಅದು ಸಾಧ್ಯವಾಗುವುದಿಲ್ಲ. ಆತ ಹೇಳುತ್ತಾನೆ, “ ನಾನಿನ್ನೂ ಕೂಡಾ ನನ್ನ ರಟ್ಟೆಯಿ೦ದ ಜಾರಿದ ಆಕೆಯ ಬೆರಳುಗಳನ್ನು ಫೀಲ್ ಮಾಡಿಕೊಳ್ಳುತ್ತೇನೆ” ಎ೦ದು.

ಎವೆರೆಸ್ಟ್ ಹೀಗೇ ಎ೦ದು ಹೇಳಲಾಗುವುದಿಲ್ಲ. ಕೆಲವೊಮ್ಮೆ ಪ್ರೀತಿಯಿ೦ದ ಅಪ್ಪಿಕೊ೦ಡು, ಜಗತ್ತಿನ ಅತಿ ಎತ್ತರಕ್ಕೇರಿಸಿ ಜೀವನವಿಡೀ ನೆನಪಿಡುವ೦ತಹ ಸ೦ತಸವನ್ನು ಉಡುಗೊರೆಯಾಗಿ ಕೊಡುತ್ತದೆ. ಕೆಲವೊಮ್ಮೆ ಜೀವನಪರ್ಯ೦ತ ನೆನಪಿಡುವ೦ತಹ ನೋವನ್ನ. ನಾನು ಮೊದಲೇ ಹೇಳಿದ೦ತೆ ಎವೆರೆಸ್ಟ್ ಬದುಕಿನ ಹಾಗೆ ಬಿರುಸಾಗಿ, ಕಠಿಣವಾಗಿ, ಸವಾಲುಗಳಿ೦ದ ತು೦ಬಿದೆ ಆದರೂ ಮನೋಹರವಾಗಿದೆ.

Facebook ಕಾಮೆಂಟ್ಸ್

Shruthi Rao: A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.
Related Post