“ಚರಕ್..… ಬಳ್……” ಎಂದು ಆಯಿಯ ಕೈಯಿಂದ ಜಾರಿಸಿಕೊಂಡು ಕುದಿಯುತ್ತಿದ್ದ ತೆಂಗಿನೆಣ್ಣೆಯ ಬಂಡಿಯೊಳಗೆ ಬಿದ್ದ ಹಪ್ಪಳವೊಂದು “ಸುಸ್ಸ್…. ಸುಸ್ಸ್ ಸ್ಸ್ ಸ್ಸ್ ಸ್ಸ್……” ಎಂದು ಸದ್ದು ಮಾಡಿ, ತನ್ನಿನಿಯನನ್ನು ಸೇರಿದ ಹೆಣ್ಣು ಮುಸುಗಿನೊಳಗೆ ಮುದ್ದಿಸಿ, ಮುಲುಗಾಡಿ, ಮುರುಟಿ ಮಲಗಿದಂತೆ ಮೊದಲಿನ ಕೈಯಗಲದ ರೂಪ ಕಳೆದುಕೊಂಡು, ಎಪರಾತಪರಾ ಆಕೃತಿಯಹೊಂದಿ, ನಾನಿದುವರೆಗೂ ಲೆಕ್ಕಮಾಡಿಯೇ ಇರದಷ್ಟು ರಂಧ್ರಗಳಿರುವ ಸೌಟಿನಿಂದ ಮುಗುಚಿಹಾಕಲ್ಪಟ್ಟು, ತನ್ಮೂಲಕ ಬಿಸಿ ತೈಲದಿಂದ ಹೊರಬಿದ್ದು, ನಾಲ್ಕಾರು ಸಲ ಮೇಲಕ್ಕೂ ಕೆಳಕ್ಕೂ ಆಡಿಸಲ್ಪಟ್ಟು, ಮೈಗಂಟಿದ ಎಣ್ಣೆಯೆಲ್ಲಾ ಹನಿ ಹನಿಯಾಗಿ ಬಿದ್ದು ಅವುಗಳ ಸ್ವಸ್ಥಾನವನ್ನು ಸೇರಿದ ಮೇಲೆ, ತಾನು ಪಕ್ಕದ ಅಗಲ ಬಟ್ಟಲಿನಲ್ಲಿದ್ದ ತನ್ನ ಸಹಬಾಂಧವರನ್ನು ಸೇರಿಕೊಂಡಿತು. ಈ ಸಹಜ ಪ್ರಕ್ರಿಯೆ ನಡೆಯುತ್ತಿದ್ದ ಭೂತಕಾಲದಲ್ಲಿ, ಎಣ್ಣೆಬಂಡಿಯ ಮೇಲೆ ಹಾದು ಹೋಗುವ ನೇರಗೆರೆಯ ಇನ್ನೊಂದು ತುದಿಯಲ್ಲಿ ಸಂಧಿಸುತ್ತಿದ್ದ ಮಷೀಮಯವಾದ ಹೆಂಚನ್ನು ಹೊತ್ತು, ಅದರಷ್ಟೇ ಕರ್ರನೆ ಬಣ್ಣದಿಂದ ಮಿಂಚುತ್ತಿದ್ದ ಪಕಾಸಿನ ತುದಿಯಲ್ಲಿ, ಸಣ್ಣ ಮಳೆಹನಿಯೊಂದು ಮೇಲಿಂದ ನಿಧಾನಕ್ಕೆ ಮದಗಜದಂತಿಳಿದು ಬರುತ್ತಿದ್ದ ಇನ್ನೊಂದು ದೊಡ್ಡಹನಿಗೆ ಕಾಯುತ್ತಾ ಕುಳಿತಿತ್ತು. ಆ ದೊಡ್ಡ ಹನಿಗೆ ಕೂಡ, ತನ್ನ ಅನುಪಸ್ಥಿತಿಯಲ್ಲಿ ಗುರುತ್ವಾಕರ್ಷಣ ನಿಯಮವನ್ನು ಪಾಲಿಸಿ, ಮೇಲಿಂದ ಭುವಿಗೆ ಧೊಪ್ಪನೆ ಬೀಳುವುದು ಸಾಕಷ್ಟು ವಸ್ತುರಾಶಿಯನ್ನು ಹೊಂದಿಲ್ಲದ ತನ್ನ ತಮ್ಮನಿಗೆ ಸಾಧ್ಯವಿಲ್ಲವೆಂದು ತಿಳಿದಿದ್ದರೂ, ಸ್ವಯಂ ತಾನು ಪ್ರಕೃತಿಯ ಅದೇ ನಿಯಮಕ್ಕೊಳಗಾಗಿ ಬಂದು ಸೇರುವಲ್ಲಿ ಆರಿಹೋದ ಸೌದೆತುಂಡುಗಳನ್ನು ಮುಂದೂಡಲೆಂದು ಆಯಿಯ ಹಸ್ತವೊಂದು ನಿಧಾನಕ್ಕೆ ಮುಂದುವರೆಯಿತು. ಅದೇ ಸಮಯಕ್ಕೆ ಬಂಡಿಯಲ್ಲಿನ ಎಣ್ಣೆಯನ್ನು ಬಹುಕಾಲದಿಂದಗಲಿ, ಈಗ ಸರಸವಾಡಲು ಬರುತ್ತಿದೆಯೇನೋ ಎಂಬಂತೆ ಖುಷಿಯೊಂದೊಡಗೂಡಿ ಸೇರಿದ ಆ ಮಳೆಹನಿ, ’ಚಟ್ ಪಟ್ ಚಟ್’ ಸದ್ದನ್ನೊರಡಿಸಿ ಕುದಿಎಣ್ಣೆಯ ಅಣುವೊಂದನ್ನು ಆಯಿಯ ಕೈಮೇಲೆ ಹನಿಸಿತು. ’ಚುರ್ರ್ ಎಂದ ಕೈಯನ್ನು ಸರ್ರನೆ ಹಿಂದೆಗೆದ ಪರಿಣಾಮದಿಂದ ಬಂಡಿಯ ಕುಂಡೆಗೆ ಬಡಿದ ಕಟ್ಟಿಗೆಯ ತುಂಡಿನ ಹೊಡೆತದ ಪರಿಣಾಮವಾಗಿ, ಕುದ್ದ ಎಣ್ಣೆಯ ಪಾಲೊಂದಿಷ್ಟು ಅಗ್ನಿಗಾಹುತಿಯಾಗಿ ’ಭುಸ್ಸ್’ ಎ೦ಬ ಜ್ವಾಲೆ ಮೇಲೇರಿತು.
“ವಿಷ್ಣೋ ವಿಷ್ಣೊ ವಿಷ್ಣೋರಾಜ್ನೇಯಾ ಪ್ರವರ್ತಮಾನಸ್ಯ ಅಧ್ಯಬ್ರಾಹ್ಮಣ ದ್ವಿತೀಯಪರಾರ್ಧೇ……,” ಮಧ್ಯಾಹ್ನದ ದೇವಪೂಜೆಯಲ್ಲಿ ತೊಡಗಿದ್ದ ಅಪ್ಪಯ್ಯನಿಂದ ಹೊರಬಿದ್ದ ಮಂತ್ರಾಕ್ಷರಗಳು, ಮನೆಯೊಳಗಿನ ಸಕಲ ಚರಾಚರಗಳ ಕರ್ಣಪಟಲಗಳನ್ನು ಪವಿತ್ರಗೊಳಿಸುವ ಮೊದಲೇ ಸೀಳಿಬಂದಿತ್ತು ರಾಮಯ್ಯನ ಕಿರ್ಗಂಟಲ ಸ್ವರ, “ಅಯ್ಯಾ……, ಓ ಅಯ್ಯಾ……” ನಿಜಹೇಳಬೇಕೆಂದರೆ ಆತನಿನ್ನೂ ಮನೆಯ ಅಂಗಳವನ್ನೇ ತಲುಪಿರಲಿಲ್ಲ. ನಾಲ್ಕು ಮಾರು ದೂರವಿರುವಾಗಲೇ ಅರಚುತ್ತಾ ಬರುವ ಚಟ ರಾಮಯ್ಯನಿಗೆ ಅಂಟಿತ್ತು. ಆತನ ಅಗಲವಾದ, ಛಪ್ಪೈವತ್ತಾರು ತುಂಡಾದ ಪಾದದ್ವಯಗಳು ’ಧೊಫ಼್ ಧೊಫ಼್’ ಎಂದು ಭೂಮಿಗೆ ಅಪ್ಪಳಿಸಿ ಮಾರ್ದನಿಗೊಳಿಸುತ್ತಿದ್ದ ಶಬ್ಧತರಂಗಳೇ ಸಾಕಿದ್ದುವು ಬರುವಿಕೆಯ ಸೂಚನೆಯನ್ನೀಯಲು.
“ಕಲಿಯುಗೇ ಪ್ರಥಮಪರಾರ್ಧೇ ಜಂಬುದ್ವೀಪೇ ಭರತಖಂಡೇ ಭಾರತವರ್ಷೇ……”, ಅಪ್ಪಯ್ಯ ಯಾವುದೇ ’ಓ’ಗುಡುವಿಕೆಯ ಉತ್ತರವನ್ನೀಯದೇ ಪೂಜೆಯನ್ನು ಮುಂದುವರೆಸಿದ್ದ.
“ಅಯ್ಯೋ….., ಅಯ್ಯಾ ಅಂದೆ….., ಯಂಥಾ ಮಾಡ್ತಿದ್ರಿ?”, ಅಂತೂ ಇಂತೂ ಅಂಗಳ ತಲುಪಿ, ಕೆಳಜಗುಲಿಯ ಪಕ್ಕ ನಿಂತು, ಕಬ್ಬಿಣದ ಸರಳುಗಳಿರುವ ಕಿಟಕಿಯಿಂದ ಮೂಗುತೂರಿಸಿ ನೋಡಿದ. ಅಂಗುಷ್ಟ ಕಿತ್ತುಹೋಗಿ, ಹಿಮ್ಮಡಿಯಲ್ಲಿ ಸವೆದೂ ಸವೆದೂ ತೂತಾಗಿ ಪಾದ ನೆಲದಮೇಲೆಯೇ ಕೂತಿರುತ್ತಿದ್ದ ತನ್ನ ಬಾಟಾ ಚಪ್ಪಲಿಯನ್ನು ತೆಗೆಯದೇ ನಿಂತಿದ್ದಾಗಲೇ ನನಗೆ ಗೊತ್ತಾಗಿತ್ತು, ಇವ ಈ ಸಮಯದಲ್ಲಿ ಒಳಹೊಕ್ಕುವ ಆಸಾಮಿಯಲ್ಲವೆಂದು.
“ಎಂತ ಹಾಕ್ಕಂಡಿದ್ಯ ಕಿವಿಗೆ? ಮಂತ್ರ ಹೇಳ್ತಿರೂದ್ ಕೇಳೂದಿಲ್ಯ?” ಸಲುಗೆಯಿಂದ ಕೇಳಿದೆನೇ ಹೊರತು, ಮಾತಿನಲ್ಲಿ ಕಠೋರತೆಯಿರಲಿಲ್ಲ.
“ಓ…… ಮಾಣಿ!!! ಪುಸ್ತುಕು ಹಿಡ್ಕಂಡ್ ಕೂತ್ಬಿಟ್ಟಿರಿ?” ಕೆಂಬಣ್ಣ ಅಧಿಕವಾಗಿ ಕಪ್ಪಾಗಿ ಕಾಣುತ್ತಿದ್ದ, ಮುಂದಿನೆರಡು ಹಲ್ಲುಗಳನ್ನು ಕಳೆದುಕೊಂಡಿದ್ದ ತನ್ನ ದಂತಪಂಕ್ತಿಯನ್ನು ಪ್ರದರ್ಶಿಸಿದ.
“ಎಂಥ ಭಾರೀ ಅರ್ಜೆಂಟಲ್ ಇದ್ಯೇನಾ? ಒಳ್ಗ್ ಬರೂದಿಲ್ವ?” ಅಡಿಗೆಮನೆಯೊಳಗಿಂದ ಬಂಡಿಯನ್ನಿಳಿಸಿ, ಸೀರೆಸೆರಗನ್ನು ಹಿಂಬದಿಯಿಂದೆಳೆದು ಸೊಂಟಕ್ಕೆ ಸಿಕ್ಕಿಸಿಕೊಳ್ಳುತ್ತಾ ಬಂದ ಆಯಿಯ ಪ್ರಶ್ನೆ.
“ಇಲ್ಯೆ ಅಮ್ಮಾ….., ಇವತ್ ಸಂಜೀಮುಂದ್ಕೆ ನಿಮ್ಮನೀಲಿ ಮೀಟಿಂಗ್ ಅದ್ಯಲಾ. ಅದ್ಕೇ ನೆಂಪ್ ಮಾಡ್ ಕೊಡ್ವ ಅಂತ್ ಬಂದೆ.”
“ನಮ್ಮನೇಲ್ ಇರೂದ್ನ್ ನೀ ನೆನಪ್ ಮಾಡ್ ಕೊಡ್ಬೇಕಾ?” ಆಯಿ ನಗುತ್ತಿದ್ದಳು.
“ಹಂಗಲ್ಲ ಅಮ್ಮಾ……, ಸುಮ್ನೆ ಹೇಳ್ದೆ ಅಷ್ಟೆ.”
“ಒಳಗ್ ಬಾರ, ಊಟಕ್ಕಾಗದೆ. ಸಂದೀಪಾ….., ಅಲ್ ಹಿತ್ಲಕಡಂಗ್ ಬಾಳೆ ಇದ್ದು ತಕಂಬಾ. ರಾಮಯ್ಯಂಗ್ ಹಾಕು. ಅಪ್ಪಯ್ಯಂದೂ ಪೂಜೆ ಮುಗೀತೇ ಬಂತು, ಬಡ್ಸೂದೇಯ ಈಗ” ಆಯಿ ಹೇಳಿದ ಬಾಳೆಲೆಯನ್ನು ತರಲು ಎದ್ದಿದ್ದೇ ತಡ, ರಾಮಯ್ಯ ಗಾಬರಿಯಲ್ಲೆಂದ.
“ಹ್ವಾಯ್, ಬ್ಯಾಡ ಅಮ್ಮಾ. ನಾ ತಿಮ್ಮಪ್ಪನ್ ಮನೀಗ್ ಹೋಯ್ತೆ. ಇವತ್ ಹಂದಿ ಹೊಡ್ದರೆ ಅಲ್ಲಿ.”
“ಅದ್ಕೇ ಅರ್ಜೆಂಟಾಗಿರೂದು ನಿಂಗೆ, ಹೋಗ್ ಮಾರಾಯ.” ಎಂದಳು ಆಯಿ. ಬಿಡುಗಡೆ ದೊರಕಿತೆಂಬಂತೆ ತಿರುಗಿ ಧೊಫಧೊಫನೆ ಕಾಲಿಡುತ್ತಾ ಹೊರಟ ರಾಮಯ್ಯ. ಅಂಗಳದಲ್ಲಿ ಮಳೆಗಾಲದ ನೀರುನಿಂತು ಬೆಳೆದ ಹಾವಸದ ಮೇಲೆ ನಡೆದು ಬೀಳಬಾರದೆಂದು, ಅಡಿಕೆ ಮರವನ್ನು ಸಣ್ಣಗೆ ಸೀಳಿ ಹಾಸಿದ್ದ ದಬ್ಬೆಸಂಕದ ಮೇಲೆ ರಭಸದಿಂದ ಕಾಲಿಟ್ಟ ಪರಿಣಾಮವಾಗಿ ಎರಚಲು ಹೊಡೆದು ಈಚೆಪಕ್ಕದ ತುಳಸೀಕಟ್ಟೆಯ ಮೇಲೂ, ಆಚೆಪಕ್ಕದ ಹೊಸದಾಗಿ ನೆಟ್ಟ ಗುಲಾಬಿಗಿಡದ ಮೇಲೂ ಕೆಸರಿನಭಿಷೇಕವಾಯಿತು.
“ನೀ ನಾಕ್ ಸಲ ಆಚೆಗಿಂದ್ ಈಚೆಗ್ ಹೋದ್ರೆ ಸಾಕು, ಸಂಕ ಪೂರ್ತಿ ಪುಡಿ ಹತ್ತಿಸ್ತೆ.” ಕೂಗಿದೆ ನಾನು. ಅದು ಕೇಳಿತೆಂಬುದಕ್ಕೆ ಸಾಕ್ಷಿಯಾಗಿ ನಿಧಾನಕ್ಕೆ ನಡೆದು ಹೋದ.
ಒಂಟಿಯಾಗಿ ಯಾವ ಕೆಲಸವಿಲ್ಲದೇ, ಯಾವುದೋ ತಿಂಗಳ, ವಾರಗೊತ್ತಿಲ್ಲದ ವಾರಪತ್ರಿಕೆಯೊಂದರಲ್ಲಿ ಕಥೆಯನ್ನು ಹುಡುಕುತ್ತಿದ್ದ ನನ್ನ ದೇಹದಲ್ಲಿದ್ದ ಖಾಲಿಮನಸ್ಸು, ಇಂದು ಮಧ್ಯಾಹ್ನ ನಡೆಯಲಿದ್ದ ಮೀಟಿಂಗಿನ ಕಾರಣರೂಪಿ ಮೂಲವಸ್ತುವನ್ನು ಕುರಿತು ಧೇನಿಸಿತು.
***************
ರಾಮಯ್ಯಗೊಂಡನ ಏಕೈಕಪುತ್ರಿ, ಕುಸುಮ. ಆತನಿಗೆ ಬೇರೆ ಗಂಡು ಹುಡುಗರೂ ಇಲ್ಲದ ಕಾರಣ ಆಕೆ ಮಗನಂತೆಯೂ ಬೆಳೆದಳು. ಹಳ್ಳಿಯ ವಾತಾವರಣದಲ್ಲಿ ಬೆಳೆಯುವ ಎಲ್ಲಾ ಹುಡುಗ ಅಥವಾ ಹುಡುಗಿಯರಂತೆ ದಿನಪೂರ್ತಿ ಗದ್ದೆ, ಹಕ್ಕಲು, ಕಾಡನ್ನೆಲ್ಲಾ ಸುತ್ತಿದ್ದರಿಂದಲೋ, ಹಸುಗಳನ್ನು ಮೇಯಿಸುತ್ತಾ ಅರ್ಧಂಬರ್ಧ ಬಟ್ಟೆಯನ್ನುಟ್ಟು ಬಿಸಿಲಲ್ಲಿದ್ದುದರಿಂದಲೋ, ಸೌಂದರ್ಯವರ್ಧಕ ಪ್ರಸಾಧನ ಸಾಮಗ್ರಿಗಳ ಬಳಕೆ ತಿಳಿದಿಲ್ಲವಾದ್ದರಿಂದಲೋ, ಅಥವಾ ಆ ನಿಟ್ಟಿನಲ್ಲಿ ಯೋಚಿಸುವ ಧ್ಯಾಸವೇ ಕುಸುಮಳ ತಾಯಿಯಾದವಳಿಗಿಲ್ಲದುದರಿಂದಲೋ ಏನೋ, ಪಿಯುಸಿಗೆ ಬರುವ ವಯಸ್ಸಿಗೆಲ್ಲಾ ಆಕೆ ಕರ್ರನೆಯ ಬಣ್ಣದಿಂದ ಮಿಂಚುತ್ತಿದ್ದಳು. ‘ಬಿರಾಂಬ್ರ ಕೂಸು’ಗಳಿಗೆ ಹೋಲಿಸಿದಾಗ ಕಪ್ಪನೆಯ ಬಣ್ಣದ್ದಾಗಿಯೂ, ‘ಸ್ವಜಾತಿ ಮಗು’ಗಳಿಗೆ ಹೋಲಿಸಿದಾಗ ಬೆಳ್ಳಗಾಗಿಯೂ ಬದಲಾಯಿಸುತ್ತಿತ್ತವಳ ಮುಖಾರವಿಂದ. ಹಕ್ಕಲಿನ ಗೇರುಹಣ್ಣು, ಹುಣಿಸೆಹಣ್ಣು, ಹುಳಿಕಾಯಿಹಣ್ಣು, ಮುಳ್ಳಣ್ಣು, ಹಲಸಿನಹಣ್ಣು ಮುಂತಾದವುಗಳ ಪರಿಣಾಮವೋ ಅಥವಾ ಗದ್ದೆಯಲ್ಲಿ ಬೆಳೆದು, ಕುಂಟವಾಣಿ ಊರಿನ ಮಿಲ್ಲಿನಲ್ಲಿ ಸಂಸ್ಕರಣೆಗೊಂಡು ಮನೆಯ ಹಂಡೆಗಳಲ್ಲಿ ತುಂಬಿಟ್ಟಿರುತ್ತಿದ್ದ ಕೊಚ್ಚಕ್ಕಿಯ ಪರಿಣಾಮವೋ ಏನೋ, ಕುಸುಮ ಹೂವಿನಂತಿರದೇ ಬಲಿತ ಕಾಯಿಯಂತೆ ಬೆಳೆದಿದ್ದಳು.
ಇಂತಿಪ್ಪ ಕುಸುಮಳಿಂದೇನಪ್ಪಾ ತೊಂದರೆ ಶುರುವಾಗಿದೆಯೆಂದೆಣಿಸುವಿರೋ? ಸಮಸ್ತ ಜನಸಮೂಹದ ಕುತೂಹಲ ಸಹಜವಾದುದೇ. ಹಿರಿಯರೆನಿಸಿಕೊಂಡಿದ್ದವರೆಲ್ಲಾ ‘ಬರಾ’ ಕಲಿತಿದ್ದು ಸಾಕು ಎಂದರೂ ಕೇಳದೇ ರಾಮಯ್ಯ, ತಾನು ಕಲಿತಿರದ ‘ಬರಾ’ ವನ್ನು ಮಗಳಿಗೆ ಕಲಿಸಿಯೇ ತೀರುತ್ತೇನೆಂದು ಯೋಚಿಸಿಯೋ ಅಥವಾ ಹೆಚ್ಚೆಚ್ಚು ‘ಬರಾ’ ಕಲಿತರೆ ಎಲ್ಲೋ ಒಂದೆಡೆ ನೌಕರಿ ಸಿಗಬಹುದೆಂಬ ಕಾತುರದಿಂದಲೋ ಏನೋ ಅಂತೂ ಮಗಳನ್ನು ಭಟ್ಕಳ ಪೇಟೆಯ ಕಾಲೇಜಿಗೆ ಸೇರಿಸಿಯೇಬಿಟ್ಟಿದ್ದ. ಈ ಸುಮನಸ್ಸಿನ ಕುಸುಮಳು ಕಾಲೇಜನ್ನು ಮುಗಿಸಿ, ಒಂದೆರಡು ಗಲ್ಲಿಗಳನ್ನು ಹಾಯ್ದು, ರಸ್ತೆದಾಟಿ, ಬಸ್ ನಿಲ್ದಾಣ ಸೇರಿ, ಒಂದ್ಹತ್ತು ನಿಮಿಷ ಬಸ್ಸಿಗೆ ಕಾದು, ಹತ್ತಿ, ಊರಲ್ಲಿಳಿದು ಬರುವ ಸಂಧರ್ಭದಲ್ಲಿ ಯುವಕರೀರ್ವರು ಕುಚೋದ್ಯಕ್ಕೋ, ಆಸೆಯಿಂದಲೋ, ಪ್ರೀತಿಹೆಚ್ಚಾಗಿಯೋ ಅಥವಾ ಕಾಮದಹುಚ್ಚಿನಿಂದಲೋ ಏನೋ ಬೈಕೊಂದರಲ್ಲಿ ಬೆನ್ನತ್ತತ್ತೊಡಗಿದರು. ಈ ಬೆನ್ನತ್ತುವಿಕೆ, ಹಳ್ಳಿಗಾಡಿನ ಕಗ್ಗಾಡಿನ ‘ಗವ್’ ಎನ್ನುವ ರಸ್ತೆಯಲ್ಲಿಯೂ ಮುಂದರಿದು ಆಕೆಯ ಮನೆಯನ್ನು ಸಹ ಗುರುತಿಟ್ಟಿದ್ದರು. ಒಂದೆರಡುದಿನ ಇದೇ ವೃತ್ತ ಪುನರಾವರ್ತಿಸಲು, ಕುಸುಮ ಭಯಾವಿಹ್ವಲದಿಂದ ತಂದೆಯಲ್ಲಿ ದೂರಿತ್ತಿದ್ದಳು. ಮಾರನೇದಿನ ಬಸ್ಸುಬರುವ ಹೊತ್ತಿಗೆ ಅವಳಿಳಿಯುವ ಜಾಗಕ್ಕೇ ಹೋಗಿ ಕರೆತಂದ ರಾಮಯ್ಯನೂ, ಬೈಕ್ನಲ್ಲಿ ಹಿಂಬಾಲಿಸುತ್ತಿದ್ದವರನ್ನು ನೋಡಿದ್ದ. ಒಮ್ಮೆ ಹೊಂಚುಹಾಕಿ ಅಡ್ಡಗಟ್ಟಿ ಕೇಳಿದಾಗ, ಹೆದರಿ ಓಡಿದವರು ಮತ್ತೆ ಹಿಂಬಾಲಿಸತೊಡಗಿದ್ದರು. ಇಂಥ ಆಗು-ಹೋಗುಗಳ ನಡುವೆ ನಿನ್ನೆ ನಡೆದ ಘಟನೆ ಕೊಂಚ ಆತಂಕಕಾರಿಯಾಗಿತ್ತು. ಕಾಡಿನರಸ್ತೆಯಲ್ಲಿ ನಡೆದು ಬರುತ್ತಿದ್ದವಳ ಮಾತನಾಡಿಸಲೆತ್ನಿಸಿ ಸೋತ ಹುಡುಗನೊಬ್ಬ ಬೈಕಿನಿಂದಿಳಿದು ಕೈಹಿಡಿದಿದ್ದ. ಇನ್ನೊಬ್ಬ ಚೂಡಿದಾರದ ವೇಲಿಗೆ ಕೈಹಾಕಿ ಎಳೆದಿದ್ದ. ಕೂಡಲೇ ಮಡಚಿ ಹಿಡಿದಿದ್ದ ಕೊಡೆಯ ಗಟ್ಟಿಹಿಡಿಯಿಂದ ರಪ್ಪನೆ ಮುಖಕ್ಕೆ ಬಾರಿಸಿದವಳು ಕಾಡು-ಮೇಡು ಬಿದ್ದು, ಬೇಲಿ ಹಾಯ್ದು, ಬಟ್ಟೆ ಹರಿದುಕೊಂಡು, ನಮ್ಮನೆ ಅಂಗಳ ಸೇರಿದ್ದಳು. ಅವಳ ಮನೆಗೆ ಸೇರಿಸಿದ್ದ ಅಪ್ಪಯ್ಯ, ಮಾರನೇದಿನ ಸಣ್ಣ ಮಾತುಕತೆಯೊಂದನ್ನು ಕರೆದಿದ್ದ………
– Sandeep Hedge
hegdesandeep10@gmail.com
Facebook ಕಾಮೆಂಟ್ಸ್