ಪರಿಸರದ ನಾಡಿ ಬಾನಾಡಿ

ಎಲ್ಲ ಗಡಿಗಳ ಮೀರಿ ಹಕ್ಕಿಗಳು ತೋರಿ! – 1

ಸೆಪ್ಟ್ಂಬರ್ ತಿಂಗಳು ಮುಗಿದು ಅಕ್ಟೋಬರ್ ಪ್ರಾರಂಭವಾಯಿತೆಂದರೆ ಸಾಕು ಮನೆ ಸುತ್ತ ಮುತ್ತ ಹಕ್ಕಿ ಗಳ ಕಲರವ ಮೊದಲಿಗಿಂತ ತುಸು ಜಾಸ್ತಿ. ಅಕ್ಟೋಬರ್ ನವಂಬರದಲ್ಲಂತೂ ಇದು ದುಪ್ಪಟ್ಟು ! ಏಪ್ರಿಲಿನಿಂದ ಸೆಪ್ಟ್ಂಬರ್ ತಿಂಗಳವರೆಗೆ ಕೇಳದ ಅನೇಕ ಸ್ವರಗಳು ಕಿವಿಗಾಗ ಹೊಸ ಇಂಪು ಕೊಡುತ್ತವೆ! ಅದೇನು?

ಮನೆಯಿಂದ ತುಸು ಹೊರ ಹೋಗಿ, ಆಗ ಕಾಣುವುದು ಪ್ರಕೃತಿಯ ವಿಸ್ಮಯ, ಆಕಾಶದ ತುಂಬೆಲ್ಲಾ ಕವಲು ತೋಕೆಗಳು (swallow) ಆಕಾಶದಿಂದ ನೆಲಕ್ಕೆ ಜಿಗಿಯುವ ಜೇನ್ನೊಣ ಬಾಕಗಳು (Bee Eaters) ನೆಲದಿಂದ ಆಕಾಶಕ್ಕೆ ಚಿಮ್ಮುವ ಕಾಜಾಣಗಳು (Drongo) ಎಲಯ ಮರಯಲ್ಲಿ ಕುಳಿತು ಗುನುಗುವ ಉಲಿಹಕ್ಕಿಗಳು (Warbler) ಅಲ್ಲೇ ಇರುವ ಪೊದಯೊಳಗಿಂದ ಬರುವ ಇಂಪಾದ ಹಾಡು, ಇಣುಕಿ ನೋಡಿದರೆ ಕಾಣುವ ನೊಣಹಿಡುಕಗಳು (Flycatcher) ಹೀಗೆ ಒಂದೇ ಎರಡೇ ಅನೇಕ ವೈವಿಧ್ಯಗಳು.

ಬೇಸಿಗೆ ಮತ್ತು ಮಳೆಗಾಲದಲ್ಲಿ ಕಾಣದವುಗಳೆಲ್ಲ ಹಠಾತ್ತನೆ ಎಲ್ಲಿಂದ ಬಂದವು ?
ಸುಮಾರು 300 ವರ್ಷಗಳ ಹಿಂದಿನವರೆಗೂ ಹೀಗೊಂದು ನಂಬಿಕೆ ಇತ್ತು . ಕವಲುತೋಕೆ (Swallow), ಕಮರಿ ತೋಕೆ(Martin) ಯಂಥಾ ಹಕ್ಕಿಗಳು ಮಳೆಗಾಲದಲ್ಲಿ ಮಣ್ಣಿನ ಒಳಗೆ ಹೋಗಿ ಅವಿತು ಬಿಡುತ್ತವೆ. ಚಳಿಗಾಲ ಬಂದಾಕ್ಷಣ, ಕೀಟಗಳು ಹೆಚ್ಚಿದಾಕ್ಷಣ ಮಣ್ಣು ಬಗೆದು ಬಾನು ಸೇರುತ್ತವೆ ಎಂಬ ಕಲ್ಪನೆ ಇತ್ತು. (ಕಪ್ಪೆಗಳು ಮಳೆಗಾಲ ಮುಗಿದ ಕೂಡಲೆ ಮಣ್ಣೊಳಗೆ ಅವಿತು, ಇನ್ನೊಂದು ಮಳೆಗಾಲಕ್ಕೆ ಪುನಃ ಹೊರಬರುತ್ತವೆ. ವಟ ವಟ ಶಬ್ದವನ್ನು ನೆನಪಿಸಿಕೊಳ್ಳಿ.) ಯಾವ ಕಲ್ಪನೆಗೂ ಸ್ಪಷ್ಟತೆಯಿರಲಿಲ್ಲ. ವರ್ಷದಿಂದ ವರ್ಷಕ್ಕೆ ಪಕ್ಷಿವೀಕ್ಷಕರ ಸಂಖ್ಯೆ ಹೆಚ್ಚುತ್ತಾ ಹೋದಂತೆ ಹಕ್ಕಿಗಳ ಬಗೆಗಿನ ಕೌತುಕ ಸಂಗತಿಗಳು ಅನಾವರಣಗೊಳ್ಳುತ್ತಾ ಹೋದುವು.
ನಮ್ಮ ಪ್ರದೇಶದಲ್ಲಿ, ಚಳಿಗಾಲದಲ್ಲಿ ಹಕ್ಕಿಗಳ ಪ್ರಬೇಧ ಮತ್ತು ಸಂಖ್ಯೆ ಏರಲು “ರೆಕ್ಕೆಯ ಹಕ್ಕಿಗಳ ವಲಸ” ಕಾರಣ ಎಂಬ ಸಂಗತಿ ಬೆಳಕಿಗೆ ಬಂತು .

ಹಕ್ಕಿಗಳಲ್ಲಿ ವಲಸೆ (Migration )
ನಾವು ಮನೆಯಲ್ಲಿರುವಾಗ ಸೆಖೆಯಾದರೆ ಫ್ಯಾನ್ ಹಾಕುತ್ತೇವೆ, ಹಣ ಜಾಸ್ತಿ ಇದ್ದರೆ ಎ.ಸಿ ಹಾಕುತ್ತೇವೆ, ಹಣಕಾಸು ಸ್ಥಿತಿ ಕ್ಷೀಣಿಸಿದವರು ಎದುರಿನ ಜಗುಲಿಗೆ ಹೋಗುವರು. ಅಂದರೆ ಮನೆಯಲ್ಲಿ ತುಸು ಮಾರ್ಪಾಡು ಮಾಡುವೆವು. ಸೆಖೆ ಇನ್ನೂ ಜಾಸ್ತಿಯಾದರೆ ನಮ್ಮ ಮನಸ್ಸು ಊಟಿ, ಮುನ್ನಾರ್, ಕಾಶ್ಮೀರದಂಥ ಪ್ರದೇಶಕ್ಕೆ ವಲಸೆ (migrate) ಹೋಗಿ ಬಿಡುತ್ತದೆ. ಹಣ ಮತ್ತು ಸಮಯವಿದ್ದಲ್ಲಿ ಅದು ಕಾರ್ಯಗತವಾಗಿಬಿಡುತ್ತದೆ. ತುಸು ಸಮಯ ಚಳಿ ಪ್ರದೇಶದಲ್ಲಿ ಹಾಯಾಗಿದ್ದು ಬರುತ್ತೇವೆ. ಹಿಂದಿನ ರಾಜರೂ ಬೇಸಿಗೆ ಅರಮನೆಗಳನ್ನು ಮಾಡಿಕೊಂಡಿದ್ದರು ಎಂಬುದನ್ನು ಗಮನಿಸಿ. ಅಂದರೆ ಈ ವಲಸೆ/ Migration ಎಂಬುದು ಒಂದು ಹುಟ್ಟರಿವು (instinct)

ನಾವಿರುವ ಪ್ರದೇಶದಲ್ಲಿ ಹದತಪ್ಪಿದಾಗ, ಅದು ವಾತಾವರಣದ ಅಥವಾ ಆಹಾರದಲ್ಲಿ ಅಭಾವವಾದಾಗ ಸಮೃದ್ಧಿಯನ್ನು ಅರಸುವುದು, ಅದನ್ನು ಅರಸುತ್ತ ವಲಸೆ ಹೋಗುವುದು ಯಾರಿಗಾದರೂ ಸ್ವಾಭಾವಿಕ ಮತ್ತು ಅನಿವಾರ್ಯ.

ಈ ವಲಸೆ ಎಲ್ಲಾ ಜೀವಿಗಳಲ್ಲೂ ಇವೆ. ಆಫ್ರಿಕಾದ ಮಾಸೈ ಮಾರಾದಲ್ಲಿ ಲಕ್ಷಗಟ್ಟಲೆ ಪ್ರಾಣಿಗಳು ಮಾರಾ ನದಿಯನ್ನು ಮಳೆಗಾಲಕ್ಕೆ ಮುಂಚೆ ದಾಟುವುವು. ಇದನ್ನು The Great Migration ಎನ್ನುವರು. ಇದು ಪ್ರತೀ ವರ್ಷ ಪುನರಾವರ್ತಿಸುವುದು. ಈ migration ನೋಡಲೆಂದೇ ಲಕ್ಷಗಟ್ಟಲೆ ಛಾಯಾಗ್ರಾಹಕರು ಮಾಸೈ ಮಾರಾಕ್ಕೆ ಪ್ರಪಂಚದ ಮೂಲೆ ಮೂಲೆಯಿಂದ migrate ಆಗುತ್ತಾರೆ !
ಇನ್ನು ನಮ್ಮ ಹಕ್ಕಿಗಳ ವಿಚಾರಕ್ಕೆ ಬರೋಣ, ಭಾರತಕ್ಕೆ ವಲಸೆ ಬರುವ ಪಕ್ಷಿಗಳೆಲ್ಲಾ ಬಹುತೇಕ ಯುರೋಪ್ ಮೂಲದ್ದು. ಸೆಪ್ಟ್ಂಬರ್, ಅಕ್ಟೋಬರ್ ಬಂತೆಂದರೆ ಯೂರೋಪ್ನಲ್ಲಿ ಭಯಂಕರ ಚಳಿ! ಎಲ್ಲೆಲ್ಲೂ ಹಿಮ/ಮಂಜು. ಈ ಸ್ಥಿತಿಯಲ್ಲಿ ಅಲ್ಲಿ ಎಲ್ಲವೂ ಸ್ಥಬ್ಧ ! ಗಿಡಗಳಲ್ಲಿ ಹಣ್ಣಿಲ್ಲ, ಹಣ್ಣಿಗೆ ಬಾಧಿಸುವ ಕೀಟಗಳಿಲ್ಲ, ಗಿಡದ ಬೆಳವಣಿಗೆಗೆ ಮುಖ್ಯವಾಗಿ ಬೇಕಾದ ಸೂರ್ಯ ಪ್ರಭೆಯಿಲ್ಲ . ಇಂಥಾ ಸ್ಥಿತಿಯಲ್ಲಿ ಹಕ್ಕಿಗಳು ಅಲ್ಲಿಂದ ವಲಸೆ ಬಯಸುತ್ತವೆ. ಎಲ್ಲಿ ಚಳಿ ಕಡಿಮೆಯೂ ಎಲ್ಲಿ ಯಥೇಚ್ಛ ಆಹಾರ ಲಭ್ಯವೋ ಅಲ್ಲಿಗೆ ವಲಸೆ ಬರುತ್ತವೆ . ಅಂಥಾ ಪ್ರದೇಶ ನಮ್ಮ ಏಷಿಯಾಖಂಡ. ಅದರಲ್ಲೂ ನಮ್ಮ ಭಾರತ! ಭಾರತದಲ್ಲಿ ಈ ಹೊತ್ತಿಗೆ ಅಕ್ಕಿ, ಗೋದಿ, ರಾಗಿ ಎಲ್ಲಾ ಕಠಾವಿಗೆ ಸಿದ್ಧವಿರುತ್ತವೆ, ಆಹಾರ ಧಾನ್ಯಗಳಿಗೆ ಬಾಧಿಸುವ ಕೀಟಗಳೂ ಹೇರಳ. ಇಂಥಾ ಪುಷ್ಕಳ ವಾತಾವರಣವಿರುವುದರಿಂದ ನಮ್ಮಲ್ಲಿಗೆ ಕೋಟಿಗಟ್ಟಲೆ ಬಾನಾಡಿಗಳು ವಲಸೆ ಬರುತ್ತವೆ.

01 Sanderling

Sanderling

ಅವುಗಳಿಗೆ ಆಹಾರದ ಅನಿವಾರ್ಯತೆ
ನಮಗೆ ಬೆಳೆ ರಕ್ಷಣೆಯ ಅಗತ್ಯತೆ
ನೋಡಿ ಪ್ರಕೃತಿಯಲ್ಲಿ ಅದೆಂಥಾ ಸಮನ್ವಯತೆ!

1. ಸೂರ್ಯನ ಲಭ್ಯತೆ ಕಡಿಮೆಯಿರುವುದು
2. ಅತಿಯಾದ ಚಳಿ/ಹಿಮ
3. ಆಹಾರದ ಕೊರತೆ
ವಲಸೆಗೆ ಕಾರಣವೆಂದು ಮೇಲ್ಕಂಡ ಈ ಮೂರು ವಿಷಯಗಳನ್ನು ಸುಲಭವಾಗಿ ಗ್ರಹಿಸಬಹುದಾದರೂ ಆ ಚಳಿಗೂ ಅಲ್ಲಿ ಕೆಲವೊಂದು ಜೀವಿಗಳು ಬದುಕುವುದಿಲ್ಲವೇ? ಎಂಬ ವಾದ ಬರಬಹುದು. ಹೌದು ಅಲ್ಲಿ ಅನೇಕ ಜೀವಿಗಳು ಬದುಕುತ್ತವೆ. ಹೆಚ್ಚಿನವು hibernate ಆಗುತ್ತವೆ. ಅಂದರೆ ಚಳಿಗಾಲದಲ್ಲಿ ನಿಶ್ಚೇಷ್ಟ (ಚೇಷ್ಟೆ ಇಲ್ಲದ) ಸ್ಥಿತಿಯಲ್ಲಿರುತ್ತವೆ. ತಮ್ಮ ದೇಹದ ಚಟುವಟಿಕೆಯನ್ನು ಸ್ಥಬ್ಧಗೊಳಿಸಿ ಹೃದಯ ಮಾತ್ರ ಬಡಿದುಕೊಂಡಿರುತ್ತದೆ. ಹಕ್ಕಿಗಳು ಈ ವಿಧಾನವನ್ನು ಅನುಸರಿಸಿ ತಾನಿರುವಲ್ಲೇ ಬದುಕಬಹುದಿತ್ತು. ಆದರೆ ಪ್ರಕೃತಿಯು ಸಾವಿರಾರು ಕಿಲೋಮೀಟರ್ ವಲಸೆ ಹೋಗುವ ವಿನ್ಯಾಸ ರೂಪಿಸಿ ಬಿಟ್ಟಿತು. ಆ ಹಕ್ಕಿಗೆ ಹಾರುವ ರೆಕ್ಕೆ ಕೊಟ್ಟದ್ದನ್ನು ಸಾರ್ಥಕಗೊಳಿಸಿತು. ಇಲ್ಲೊಂದು ಜೀವನಧರ್ಮ ಸೂಕ್ಷ್ಮವನ್ನಡಗಿಸಿ ಬಿಟ್ಟಿತು .

ಅದೇನೆಂದರೆ ಬೀಜ ಪ್ರಸಾರ! ಎಲ್ಲೋ ಇದ್ದ ಹಕ್ಕಿ ಇನ್ನೊಂದು ಕಡೆಗೆ ಬರುವ ದಾರಿಯಲ್ಲಿ ಅನೇಕ ಬೆಟ್ಟ ಗುಡ್ಡಗಳ ಮೇಲೆ ಹಾದು ಹೋಗಬೇಕು, ವಾಯುಮಾರ್ಗದಲ್ಲಿ ಹಿಕ್ಕೆ ಹಾಕುವಾಗ ಅನೇಕ ಬೀಜಗಳು ಬಲು ಸುಲಭವಾಗಿ ಪ್ರಸಾರಗೊಳ್ಳುತ್ತದೆ. ಹೇಗಿದೆ ನೋಡಿ ಪ್ರಕೃತಿಯ ಚಮತ್ಕಾರ.

ಹಾಗೆ ನೋಡಿದರೆ ನಮ್ಮೂರಿಗೆ ಬರುವ ವಲಸೆ ಹಕ್ಕಿಗಳಿಗೆ ಇಲ್ಲಿ ಉಣ್ಣುವುದು ಮಲಗುವುದು ಬಿಟ್ಟರೆ ಇನ್ನೇನು ಕೆಲಸವಿಲ್ಲ. ಸಂತಾನೋತ್ಪತ್ತಿ ತವರಲ್ಲಿ ಮಾತ್ರ. ಹೀಗೆ ನೋಡಿದರೆ ಯಾರಿಗಾದರೂ ಇನ್ನೇನು ಕೆಲಸ? ಇನ್ನೊಬ್ಬರಿಗೆ ಖುಷಿ ಕೊಡುವುದು ಸಾಧ್ಯವಾದರೆ, ಅದುವೇ ಆ ಜೀವಿಯ ಜೀವನದಲ್ಲಿ ಸಾರ್ಥಕ ಕೆಲಸ. ಸೆಪ್ಟೆಂಬರದಿಂದ ಏಪ್ರಿಲ್’ವರೆಗೆ ನಮ್ಮ ಕಾಡು, ಕೆರೆಗಳಲ್ಲಿ ಈ ನೆಂಟರದ್ದೇ ಕಾರುಬಾರು. ನೋಡುವ ಕಣ್ಣಿದ್ದರೆ ಕೆರೆಗಳ ತುಂಬ ಬಾತುಕೋಳಿಗಳನ್ನು ನೋಡುವುದೇ ಒಂದು ಆನಂದ. ಮನಸ್ಸಿಗೆ ಖುಷಿಯಾಗುತ್ತದೆ.

ಪಕ್ಷಿಗಳ ವಲಸೆ ಸಾಧಾರಣವಾಗಿ ಉತ್ತರದಿಂದ ದಕ್ಷಿಣಕ್ಕೆ ಇರುವುದಾದರೂ, ಪೂರ್ವ- ಪಶ್ಚಿಮ ದಿಕ್ಕಿನಲ್ಲಿ ಕೂಡಾ ಕೆಲವು ಹಕ್ಕಿಗಳು ವಲಸೆ ಹೋಗುತ್ತವೆ. ನಮ್ಮಲ್ಲಿ ಕಾಣುವ ಅನೇಕ ವಲಸೆ ಪಕ್ಷಿಗಳು ಉತ್ತರದಿಂದ ದಕ್ಷಿಣಕ್ಕೆ ಬಂದವು.

ಉತ್ತರದ ಯುರೋಪ್ ನಿಂದ ಅನೇಕ ಕಡಲ ಹಕ್ಕಿಗಳು ಹಿಂಡು ಹಿಂಡಾಗಿ ಬರುತ್ತವೆ.
ಉದಾಹರಣೆಗೆ: ಕಡಲ ಹಕ್ಕಿಗಳು(gulls), ರೀವಿಗಳು (terns), ಪೀಪಿಗಳು (sandpipers) ಗುಲಾಬಿ ಮೈನಾ (rosy starling),
ಹಳದಿ ಮತ್ತು ಬೂದು ಕುಂಡೆಕುಸುಕದಂಥ (yellow & grey wagtail) ಅನೇಕ ಪಕ್ಷಿಗಳು ನಮ್ಮ ನಾಡಿಗೆ ಯುರೋಪ್ ಪ್ರಾಂತ್ಯದಿಂದ ಬರುತ್ತವೆ.

02 Gulls and Tern Group

Gulls & terns group

03 sand piper

sand piper

ಇನ್ನು ನಮ್ಮದೇ ಹಿಮಾಲಯದಿಂದ ಅನೇಕ ಪಕ್ಷಿಗಳು ಚಳಿಗಾಲದಲ್ಲಿ ದಕ್ಷಿಣ ಭಾರತಕ್ಕೆ ಬರುತ್ತವೆ.
ಉದಾ: ನೀಲಿ ನೊಣ ಹಿಡುಕ (verditer flycatcher), ಕಂದು ನೊಣ ಹಿಡುಕ (Asian brown flycatcher)

04 Verditer Flycatcher

verditer flycatcher

ಪೂರ್ವದಿಂದ ಪಶ್ಚಿಮಕ್ಕೆ ವಲಸೆ ಹೋಗುವ ಹಕ್ಕಿಗಳಲ್ಲಿ ಒಂದು ಸೋಜಿಗದ ಸಂಗತಿಯನ್ನು ಕಾಣಬಹುದು. ಇಲ್ಲಿ ಕೆಲವು ಪಕ್ಷಿಗಳು ತಾವಿರುವ ತಾಣದಿಂದ ಅದೇ ರೀತಿ ಹವಾಮಾನವಿರುವ ಇನ್ನೊಂದು ಪ್ರದೇಶಕ್ಕೆ ಅಥವಾ ಕೆಲವು ಕೀ.ಮೀ ದೂರದಲ್ಲಿರುವ ಪ್ರದೇಶಕ್ಕೆ ವಲಸೆ ಹೋಗುತ್ತವೆ. ಇಂಥ ವಲಸೆಯನ್ನು ಮನುಷ್ಯರು ಖುಷಿಗಾಗಿ ತೀರ್ಥಯಾತ್ರೆಯೊಂದಿಗೆ ಸಮೀಕರಿಸಬಹುದು. ಹಾಗಲ್ಲದೆ ಬೀಜಪ್ರಸಾರದ ಉದ್ದೇಶವಂತೂ ಪ್ರಕೃತಿಗೆ ಇದ್ದೇ ಇರುವುದು. ಇದನ್ನು ಸ್ಥಳೀಯ ವಲಸೆ (local Migration) ಎನ್ನುವರು.

ಉದಾ: ರಾಜಹಕ್ಕಿ (Indian paradise flycatcher), ನವರಂಗ (Indian pitta)

ಇನ್ನು ಕೆಲವು ಪಕ್ಷಿಗಳು ಭಾರತದ ಮೂಲಕ ಇತರೆ ದೇಶಕ್ಕೆ ಪ್ರಯಾಣ ಬೆಳೆಸುತ್ತವೆ. ಮಾರ್ಗ ಮಧ್ಯೆ ನಮ್ಮ ದೇಶದಲ್ಲಿ ಕೆಲ ದಿನ ಅಲ್ಲಲ್ಲಿ ವಿಶ್ರ್ರಾಂತಿಯಲ್ಲಿರುವುದನ್ನು ಕಾಣಬಹುದು. ಇವನ್ನು ಮಧ್ಯಂತರ ವಲಸಿಗಳು (passage migrant) ಎನ್ನುವರು.
ಉದಾ: ನೀಲಿ ನೀಲಕಂಠ(European roller), ಯುರೋಪ್ ಕೋಗಿಲೆ (European cuckoo)
ಇನ್ನು ಕೆಲವು ಹಿಮಾಲಯದ ಹಕ್ಕಿಗಳು ಹಿಮದ ದಟ್ಟಣೆಯ ಅನುಸಾರ ಬೆಟ್ಟದ ತುದಿಯಿಂದ ಬುಡಕ್ಕೆ, ಬುಡದಿಂದ ತುದಿಗೆ ವಲಸೆ ಹೋಗುತ್ತವೆ.

05 Eurasian Curlew

Eurasian Curlew

ಇಲ್ಲಿಗೇ ಮುಗಿದಿಲ್ಲ, ವಲಸೆ ಹೋಗೋದು ಅಂದ್ರೆ ಸುಮ್ಮನೇ ಆಗತ್ತಾ? ನಾವು ಒಂದೆರಡು ದಿನದ ಟ್ರಿಪ್ ಹೋಗ್ಬೇಕು ಅಂದ್ರೆ ಎಷ್ಟೆಲ್ಲಾ ತಯಾರಿ ಮಾಡ್ಕೊಳ್ತೇವೆ, ಅದಕ್ಕಿಂತ ಮಾಸ್ಟರ್ ಪ್ಲಾನ್ ಮಾಡಿಕೊಳ್ಳುತ್ತವೆ ಹಕ್ಕಿಗಳ ಪ್ರಪಂಚ. ಅದೇನೆಂದು ಮುಂದಿನ ವಾರ ನೋಡಿ.
ಪರಿಸರದ ನಾಡಿ ಬಾನಾಡಿಯ ಉಳಿವೆಮ್ಮ ಜವಾಬ್ದಾರಿ
ಅರಿವೆ ಗುರು ,ಅರಿಯದೊಡೆ ಅಲ್ಲಿಹನೆಮ್ಮ ಅರಿ

ಚಿತ್ರ ಕೃಪೆ: ವಿಜಯಲಕ್ಷ್ಮಿ ರಾವ್

Facebook ಕಾಮೆಂಟ್ಸ್

ಲೇಖಕರ ಕುರಿತು

Dr. Abhijith A P C

ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!