ಕಾದಂಬರಿ

ಆತ್ಮ ಸಂವೇದನಾ ಅಧ್ಯಾಯ 10

ಆತ್ಮ ತನ್ನ ಸೃಷ್ಟಿಯು ಗಾಜಿನ ಬೀಕರಿನಲ್ಲಿ ಘಟ್ಟಿಯಾಗುತ್ತಿರುವುದನ್ನು ನೋಡುತ್ತ ಐದು ತಾಸುಗಳಿಂದ ಅಲ್ಲಿಯೇ ಕುಳಿತಿದ್ದ. ಹಸಿವೆ, ನಿದ್ದೆಗಳ ಪರಿವೆಯಿರಲಿಲ್ಲ; ಪರಿವೆಯಿದ್ದರೂ ಅವನ ಹಿಡಿತದಲ್ಲಿಯೇ ಅಲ್ಲವೇ ಹಸಿವೆ ನಿದ್ದೆಗಳು? ಇನ್ನೊಂದು ಘಂಟೆಯಲ್ಲಿ ಅವನ ಸೃಷ್ಟಿ, ಅವನ ಸ್ವಂತಕ್ಕೊಂದು ಜೀವ, ಉಸಿರಾಡತೊಡಗಲು ಇನ್ನು ಕೆಲವೇ ನಿಮಿಷಗಳು ಬಾಕಿ
.
ಅವಳಿಗೆ ಏನೆಂದು ಹೆಸರಿಡಲಿ? ಅವಳು ನನ್ನನ್ನು ಇಷ್ಟ ಪಡುತ್ತಾಳಾ? ಜೀವನದ ಕೊನೆಯವರೆಗೂ ಜೊತೆಯಿರುವಳಾ? ತಲೆಯಲ್ಲಿ ನೂರು ಸಾವಿರ ಯೋಚನೆಗಳು. ಮನದಲ್ಲಿ ಅದಕ್ಕೂ ಮೀರಿ ಮಧುರ ಭಾವನೆಗಳು. ಬದುಕಿನೆತ್ತರದ ಬಯಕೆಗಳು. ಈಗೆರಡು ಗಂಟೆಗಳ ಹಿಂದೆ ಅರಿವಿಲ್ಲದೆ ನಿದ್ರೆಗೆ ಜಾರಿದ್ದಾದರೂ ಹೇಗೆ? ನನಗೆ ಕೇಳಿಸಿದ ಆ ಸುಂದರ ಧ್ವನಿ ಯಾರದು? ನಾನು ವಿಶ್ವಾತ್ಮನನ್ನು ನೋಡಲಾರೆನೆ? ಅವನೊಳಗೆ ಮಂಥನ ನಡೆಯುತ್ತಿತ್ತು. ನಾನು ವಿಶ್ವಾತ್ಮನನ್ನು ನೋಡಬೇಕು. ಬದಲಾಗುತ್ತಿರುವ ಚಿತ್ರಣದ ಬಗ್ಗೆ ಮಾತನಾಡಬೇಕು. ವರ್ಷಿಯ ಬೆನ್ನಿಗೆ ನಿಂತು ಸಹಕರಿಸುತ್ತಿರುವ ವಿಶ್ವಾತ್ಮನದು ಎಂತಹ ಸ್ವಾರ್ಥ?

ಮನುಷ್ಯ ಮಾಡುತ್ತಿರುವ ತಪ್ಪುಗಳಿಗೆ, ನಡೆಸುತ್ತಿರುವ ದೌರ್ಜನ್ಯಗಳಿಗೆ ಭೂಮಿಯನ್ನು ಕೊನೆಗಾಣಿಸುವುದೆ ಪರಿಹಾರವಲ್ಲ. ಬೇರೆ ಶಾಂತಿ ಮಾರ್ಗಗಳಿವೆಯೆಂದು ವಿಶ್ವಾತ್ಮನಿಗೆ ಒಲಿಸಬೇಕು ಎಂದುಕೊಂಡ.

ಸಂಬಂಧಗಳಿಂದ ದೂರಾಗಿ ಪ್ರೀತಿ, ಪ್ರೇಮ, ಸ್ನೇಹ, ಬಾಂಧವ್ಯಗಳಿಗೆ ವಿರುದ್ಧವಾಗಿ ನಿಂತ ಛಿದ್ರ ಮನಸ್ಸುಗಳು, ವಿಚ್ಛಿನ್ನ ಯೋಚನೆಗಳನ್ನು ಹೊತ್ತ ಮನುಷ್ಯನ ಯೋಚನೆಗಳನ್ನು ತಿಳಿಗೊಳಿಸಲು ಸಾಧ್ಯವೇ? ಸಾಧ್ಯವಾದರೆ ಅದು ಹೇಗೆ ಎಂದು ಯೋಚಿಸತೊಡಗಿದ ಆತ್ಮ, ಮರೀಚಿಕೆಯೆಡಗೆ ಓಡಿದಂತೆ… ಮರುಭೂಮಿಯ ಓಯಸಿಸ್ ನ ಹಂಬಲದಂತೆ ಅವನ ಹುಡುಕಾಟ. ಅವನಿಗದು ಗೊತ್ತೇ ಆಗಲಿಲ್ಲ.

ಕೇಳಬೇಕು ವಿಶ್ವಾತ್ಮನಲ್ಲಿ, ಎಲ್ಲವನ್ನೂ ಕೇಳಬೇಕು. ಹೇಗೆ ಸಾಧ್ಯ? ಆತ್ಮ ಕನವರಿಸಿದ. ವಿಶ್ವಾತ್ಮನನ್ನು ಕಾಣಬೇಕೆಂದು ಗಾಢವಾಗಿ ಹಂಬಲಿಸಿದ. ಆತ್ಮ ವರ್ಷಿಯ ಸೃಷ್ಟಿಯೇ ಇರಬಹುದು. ಆದರೂ ಎರಡನೇ ಸೂರ್ಯನ ನೀತಿ ಆತ್ಮನಿಗೆ ಸರಿಕಂಡುಬರಲಿಲ್ಲ. ಅದರಿಂದಾಗುವ ಪರಿಣಾಮಾವನ್ನು ಆತ್ಮ ಬಲ್ಲ. ವರ್ಷಿಯೂ ಅದರ ದುಷ್ಪರಿಣಾಮವನ್ನು ಅರಿಯದೇ ಕುಳಿತಿಲ್ಲ. ಅದು ಅವನ ಗುರಿ.

ವಿಶ್ವಾತ್ಮನೇ ಅವನನ್ನು ಪ್ರೇರೇಪಿಸುತ್ತಿದ್ದ. ವಿಶ್ವಾತ್ಮ ವರ್ಷಿಯ ಸಹಾಯಕ್ಕೆ ನಿಂತ ಮೇಲೆ ನನಗೆ ಹೇಗೆ ಬೆಂಬಲ ನೀಡುತಾನೆ? ಹೇಗಾದರೂ ಸರಿ ವರ್ಷಿಯನ್ನು ತಡೆಯಬೇಕು. ನಾನು ವಿಶ್ವಾತ್ಮನ ಎದುರು ನಿಲ್ಲಬೇಕು, ಸವಾಲಿಕ್ಕಬೇಕು ಆತನಿಗೆ. ಈಭೂಮಿಯನ್ನು ಕೊನೆಯಾಗಿಸಲು ಅವಕಾಶ ನೀಡಬಾರದು. ಗೆದ್ದು ನಿಲ್ಲಬೇಕು ವಿಶ್ವಾತ್ಮನೆದುರು ಎಂದು ಮನದಲ್ಲಿಯೇ ನಿರ್ಧರಿಸಿಕೊಂಡ.

ವಿಶ್ವಾತ್ಮ ಮನಸ್ಸಿನಲ್ಲಿಯೇ ಲೆಕ್ಕ ಹಾಕಿಕೊಂಡ. ಆತ್ಮ ಪಕ್ಕದಲ್ಲೇ ಓಡಾಡಿ ಅಲೆದಾಡಿ ಅವನ ಯೋಚನೆಗಳನ್ನೇ ಗಮನಿಸುತ್ತಿದ್ದ ವಿಶ್ವಾತ್ಮ ಹಿಗ್ಗಿದ. ವರ್ಷಿಗೆ ವಿರುದ್ಧವಾಗಿ ನಿಲ್ಲುವ ವ್ಯಕ್ತಿ ಇವನೇ ಎಂದಾದರೆ ಕೆಲಸ ಸುಲಭವೇ ಎಂದು ನಲಿದ. ಹುಸಿನಗೆ ಮೂಡಿತು ಮುಖದಲ್ಲಿ, ಮುದ್ದು ಕಂದನ ಮುಖದ ಮುಗ್ಧ ನಗು.

ಎಷ್ಟೋ ಸಾವಿರ ವರ್ಷಗಳ ನಂತರವೂ ವಿಶ್ವಾತ್ಮನ ಮುಖದಲ್ಲಿ ಕಪಟವಿಲ್ಲದ ನಿಶ್ಕಲ್ಮಷ ನಗು.. ಮಗುವಿನ ಮುಗ್ಧತೆ.. ಮನುಷ್ಯ ಬೆಳದಂತೆ ಕಳೆದುಹೋಗುವುದು ಸಹಜ. ವಿಶ್ವಾತ್ಮ..?

ಮನುಷ್ಯನಲ್ಲಿ ಸ್ಥಿತಿಗಳೇ ಇಲ್ಲದ ಅಸ್ತಿತ್ವ ಅವನದು. ಮನುಷ್ಯ ಬೆಳೆದಂತೆ ಏಕೆ ಮುಗ್ಧತೆ ಕಳೆದುಕೊಳ್ಳುತ್ತಾನೆ? ಯಾಕೆ ಮನಸ್ಸು ಬಿಚ್ಚಿ ನಗಲಾರ ಅವನು? ಅಂತರಂಗಕ್ಕೂ, ಬಹಿರಂಗಕ್ಕೂ ಅಜಗಜಾಂತರ ವ್ಯತ್ಯಾಸ ಏಕೆ? ಬಹಿರಂಗ ಮಹಾಕಾಶವಾದರೆ ಅಂತರಂಗ ಘಟಾಕಾಶ. ಪ್ರಶ್ನೆಗಳ ಸರಣಿ… ನಿರಂತರ ಸರಪಳಿ.. ಎಲ್ಲದಕ್ಕೂ ಉತ್ತರ ಕೊಡುವವರಾರು? ಉತ್ತರ ಹುಡುಕಿ ಹೊರಟರೆ ಸಿಗುವ ನಂಬಿಕೆಯಿದೆಯೇ???

ಆತ್ಮನ ಎದುರಿನಲ್ಲಿದ್ದ ಗಾಜಿನ ಬೀಕರು ಬಿರುಕು ಬಿಟ್ಟು ದೊಡ್ಡದಾಗಿ ಸದ್ದು ಮಾಡುತ್ತಾ ಒಡೆದು ಹೋಯಿತು. ಯೋಚನೆಗಳಿಂದ ಬಿಡುಗಡೆಯಾದ ಆತ್ಮ. ಪ್ಲಾಸ್ಕ್ ನಲ್ಲಿದ್ದ ನೀಲಿ ಮಿಶ್ರಿತ ಬಿಳಿ ದ್ರಾವಣವನ್ನು ಅದಕ್ಕೆ ಸೇರಿಸಿದ.

ಮತ್ತೈದು ಕ್ಷಣಗಳು ಭಾರವಾಗಿಯೇ ಕಳೆದವು. ಆತ್ಮನ ಹೃದಯ ವೇಗವಾಗಿ ಹೊಡೆದುಕೊಳ್ಳುತ್ತಿತ್ತು. ಮುಂದೇನಾಗಬಹುದೆಂಬ ಕುತೂಹಲ. ಬಿಡಿ ಭಾಗಗಳಾಗಿದ್ದ ಬೀಕರಿನಿಂದ ಸುಂದರ ಆಕೃತಿಯೊಂದನ್ನು ಹೊರತೆಗೆದು ಅದರ ಮೇಲಿದ್ದ ದ್ರಾವಣಗಳನ್ನು ನೀರಿನಿಂದ ಶುಭ್ರಗೊಳಿಸಿ ಶ್ವೇತವರ್ಣದ ಹೊದಿಕೆಯ ಮೇಲೆ ಅವಳನ್ನು ಮಲಗಿಸಿದ ಆತ್ಮ.

ಗಾಢನಿದ್ರೆಯಲ್ಲಿ ಮಲಗಿದ್ದವಳು ಗಂಧರ್ವ ಬಾಲಿಕೆಯಂತೆ ಕಂಡುಬಂದಳು. ಬಿಳುಪು ಮೈ ಬಣ್ಣ, ಮುಗ್ಧ ಮುಖ, ಚಂದದ ತುಟಿಗಳು….
ಶ್ವೇತ ವರ್ಣದ ಮುಖ ಮುದ್ರೆ. .
ತುಂಬು ನಗುವಿನ ವಿಶಾಲ ಮಂದಸ್ಮಿತದ ಸುಖ ನಿದ್ರೆ. .
ನಿನ್ನ ಮೈ ಕಾಂತಿಯ ಹೊಳಪು. .
ನೇಸರದ ಸೂರ್ಯನ ಬಿಳುಪು. .
ನಿನ್ನ ಮೌನವೂ ವೈಯ್ಯಾರದ ಸೊಗಸು. .
ಕಡಲ ರಾಜನ ಬಿಂಕದ ಅಲೆಗಳ ಪಿಸುಮಾತು. .
ಓ ನಲ್ಲೆ.. ಸೋತೆನಲ್ಲೇ….

ಆತ್ಮ ಭಾವನಾತ್ಮ. ಮನದಲ್ಲೇ ಹಿತವಾಗಿ ಗುನುಗುತ್ತ ಅವಳಿಗೆ ಸರಿಹೊಂದುವ ಬಟ್ಟೆ ತೊಡಿಸಿದ. ಅವನ ಮುಖವೇ ನಾಚಿಕೆಯಿಂದ ಕೆಂಪು ಕೆಂಪಾಗಿತ್ತು. ಆತ್ಮ ಸುಂದರ ಯುವಕ, ಅವನಿಗೆ ತಕ್ಕ ಜೋಡಿಯಂತಿದ್ದಳು ಅವಳು. ಆತ್ಮ ಕಾಯುತ್ತ ಕುಳಿತ ಕ್ಷಣಗಳು ಯುಗಗಳಂತಾಗಿದ್ದವು. ಕುಳಿತಲ್ಲೇ ಅವಳೊಂದಿಗಿನ ತನ್ನ ಮುಂದಿನ ಜೀವನ ಕಲ್ಪಿಸಿಕೊಳ್ಳತೊಡಗಿದ. ವಿಶ್ವಾತ್ಮ ಮನುಷ್ಯನಿಗೆ ನೀಡಿದ ಮತ್ತೊಂದು ಕೊಡುಗೆ ಕಲ್ಪನಾ ಶಕ್ತಿ.

ಅವೆಷ್ಟೋ ಸಂದರ್ಭಗಳಲ್ಲಿ ನಮ್ಮ ಕಲ್ಪನೆಗಳೇ ಸುಂದರ. ವಾಸ್ತವ ಎಂದಿಗೂ ಕಹಿಸತ್ಯವೇ, ವಾಸ್ತವ ಕಲ್ಪನೆಯನ್ನು ಮೀರಿದ ಕಲ್ಪನಾಲೋಕ. ಇರುವುದೆಲ್ಲವ ಬಿಟ್ಟು ಇರದುದನ್ನೇ ಯೋಚಿಸಿ ಅದರಲ್ಲೇ ಕಾಲ ಕಳೆಯುವ ಕಾಯಕ.

ಇದಕ್ಕೆ ವಿಶ್ವವೂ ಹೊರತಾಗಿಲ್ಲ. ಸೂರ್ಯ ಮೂಡುವಾಗ, ಪಡುವಣದಲ್ಲಿ ಮುಳುಗುವಾಗ ಬಾನು ಕೆಂಪಾಗುತ್ತದೆ. ನಿಜವಾಗಿಯೂ ಬಣ್ಣ ಬದಲಾಗುವುದಾ? ಆಗಸಕ್ಕೆ ಬಣ್ಣವೇ ಇಲ್ಲ. ವಿಶ್ವವು ಕಲ್ಪನೆಯನ್ನು ಮೂಡಿಸುತ್ತದೆ. ಬೆಳಕಿನ ಸಂಯೋಗ ಕಿರಣದಿಂದ ಕೆಂಪು ಬಣ್ಣ ಬಂದಂತೆ ಕಾಣುತ್ತದೆಯಷ್ಟೆ. ಹಾಗೆಯೇ ಅನಂತ ಆಕಾಶವು ನೀಲಿಯೂ ಅಲ್ಲ. ಇದಿಷ್ಟನ್ನೂ ಮೀರಿದ ಮೂಲ ಕಲ್ಪನೆಯಂದರೆ ಸೂರ್ಯ ಚಲಿಸುವುದೇ ಇಲ್ಲ. ಭೂಮಿ ತಿರುಗುತ್ತಿರುವುದು…!! ವಿಶ್ವವೇ ಮನುಷ್ಯನಿಗೆ ಕಲ್ಪಿಸಿಕೊಳ್ಳುವುದನ್ನು ಕಲಿಸಿತು. ಮನುಷ್ಯ ಏನೇ ಕಲ್ಪಿಸಿಕೊಂಡರೂ ಈ ವಿಶ್ವದ ಪರಿಧಿಯನ್ನು ಮೀರಲು ಸಾಧ್ಯವೇ ಇಲ್ಲ. ಪರಿಧಿಯಾಚೆ ಏನಿರಬಹುದು? ಈ ವಿಶ್ವದ ಗುರುತ್ವವನ್ನೇ ಮೀರಿದರೆ ಹೇಗೆ? ಕಲ್ಪಿಸಲು ಪ್ರಯತ್ನಿಸಿದ ಆತ್ಮ.

ಇಂಥದೊಂದು ಯೋಚನೆ ಬಂದ ಆತ್ಮನ ಕಂಡು ಹಿಗ್ಗಿದ ವಿಶ್ವಾತ್ಮ.

ವಿಶ್ವದ ಹೊರಗೆ ಏನಿದೆ? ಗುರುತ್ವದಾಚೆ ಶಾಶ್ವತ ಜಗತ್ತಿದೆಯೇ? ಲೌಕಿಕ ಬದುಕುಗಳಿವೆಯೆ? ಶೂನ್ಯ ಚಿತ್ತನಾದ ವಿಶ್ವಾತ್ಮ. ಕೋಟಿ ಕೋಟಿ ನಕ್ಷತ್ರಗಳು, ಗ್ರಹಗಳು, ಅವುಗಳ ಕಪ್ಪು ರಂದ್ರಗಳು, ಅವುಗಳಿಗೂ ಒಂದು ಗುರುತ್ವ ಕೇಂದ್ರಗಳು, ಕತ್ತಲೆಯ ಮಹಾ ಪ್ರಪಂಚ, ನಕ್ಷತ್ರಗಳ ಬೆಳಕಿನ ಮಹಾಶ್ವೇತ, ಎಲ್ಲವನ್ನೂ ಮೀರಿದ ಮೇಲೆ, ವಿಶ್ವದ ಪರಿಧಿಯ ಆಚೆ ಸೀಮೆಯನ್ನು ದಾಟಿದ ಮೇಲೆ ಏನಿರಬಹುದು? ಅವೆಷ್ಟು ದೂರ? ಎಷ್ಟು ಜ್ಯೋತಿರ್ವರ್ಷಗಳ ದೂರ? ವಿಶ್ವವನ್ನು ದಾಟಿ ಹೋಗಬಹುದಾದರೆ ಅದು ಹೇಗೆ? ಬೆಳಕಿಗಿಂತಲೂ ವೇಗವಾಗಿ ಹೋಗುವುದು ಮನಸ್ಸು ಮಾತ್ರ. ಮನಸ್ಸು ಒಂದು ಕಡೆ ನಿಂತಿದ್ದೇ ಇಲ್ಲ. ಮನಸ್ಸು ವಿಶ್ವ ಗುರುತ್ವವನ್ನು ದಾಟಬಲ್ಲದು. ಮನಸ್ಸು ಎಲ್ಲ ಎಲ್ಲೆಗಳನ್ನು ಮೀರಬಲ್ಲದು. ಎಂದುಕೊಂಡ ವಿಶ್ವಾತ್ಮ.

“ಸಂವೇದನಾ ” ಆತ್ಮ ಅವಳಿಗಿಟ್ಟ ಹೆಸರು. ಚಲನೆಯಿಲ್ಲದೆ ಮಲಗಿದ್ದ ಅವಳಲ್ಲಿ ಚೈತನ್ಯ ಮೂಡಿತು. ಭಾವನೆಗಳಿಲ್ಲದ ಮುಖದಲ್ಲಿ ಸಂವೇದನೆ ಗೋಚರಿಸಿತು. ಭೂಮಿಯ ಮೇಲೆ ಹೊಸದೊಂದು ಉಸಿರು, ಹೊಸದೊಂದು ಬದುಕು. ಬದುಕುವ ನೀತಿಗೆ ವಿರುದ್ಧವಾಗಿ, ವಿಶ್ವಾತ್ಮನ ರೀತಿಗೆ ವಿರುದ್ಧವಾಗಿ ಬದಿಕುವ ಮತ್ತೊಂದು ಜೀವ ಸೃಷ್ಟಿಯಾಯಿತು. ಜೀವ ಪ್ರಕೃತಿಯ ಮಧ್ಯೆ ಮತ್ತೊಂದು ಹೋರಾಟ.

ಸಂವೇದನಾ ನಿಧಾನವಾಗಿ ಕಣ್ಣು ತೆರೆದಳು. ಸ್ವಚ್ಛ ಶೂನ್ಯ, ಪೂರ್ತಿ ಕತ್ತಲು. ಆತ್ಮ ಪಕ್ಕದಲ್ಲಿಯೇ ಕುಳಿತು ಆಕೆಯ ತಲೆಗೂದಲಿನಲ್ಲಿ ಬೆರಳಾಡಿಸುತ್ತಿದ್ದ. ಹಣೆಯಂಗಳವ ಮುಗ್ಧವಾಗಿ ನೇವರಿಸುತ್ತಿದ್ದ. ಸಂವೇದನಾಳ ಪ್ರತಿಕ್ರಿಯೆಗಳು ಹೇಗಿರಬೇಕು, ಅವಳ ಮನಸ್ಥಿತಿ, ಬುದ್ಧಿಮತ್ತತೆ ಎಲ್ಲವನ್ನೂ ಮೊದಲೇ ನಿರ್ಧರಿಸಿ ಸೃಷ್ಟಿಸಿದ್ದರಿಂದ ಆತ್ಮ ಸಮಾಧಾನದಿಂದ ಪಕ್ಕದಲ್ಲಿಯೇ ಕುಳಿತಿದ್ದ. ನಿಧಾನವಾಗಿ ಅವಳಿಗೆಲ್ಲವೂ ಕಾಣಿಸತೊಡಗಿತು.. ಅಸ್ಪಷ್ಟವಾಗಿ…

ಅಗೋಚರತೆಯಿಂದ ಅಸ್ಪಷ್ಟತೆಯೆಡೆಗೆ… ತಲೆಯೊಳಗಡೆ ಸಾವಿರ ಕುದುರೆಗಳ ಖುರಪುಟದ ಸದ್ದು. ಮನಸಿನಾಳದಲ್ಲಿ ಅದಕ್ಕೂ ಮಿಗಿಲಾದ ಅರ್ಥವಾಗದ ಗದ್ದಲ. ಮುಖದಲ್ಲೂ ಅವೇ ಭಾವಗಳು ಮೂಡತೊಡಗಿದವು. ಆತ್ಮ ಅವಳ ಹಣೆ ನೇವರಿಸುತ್ತ ಅವಳ ಕಿವಿಯ ಬಳಿ ” ಸಂವೇದನಾ” ಎಂದ ಮಧುರವಾಗಿ. ಪ್ರತಿಕ್ರಿಯಸಲಿಲ್ಲ ಅವಳು.

ಮತ್ತೆರಡು ಕ್ಷಣ ಹಾಗೆಯೇ ಕುಳಿತ ಆತ್ಮ. ಕುಳಿತಿದ್ದನೋ, ನಿಂತಿದ್ದನೋ ಅವನಿಗೇ ಅರಿವಿಲ್ಲದಂತೆ ಕಳೆದು ಹೋಗಿದ್ದ. ಅವಳ ದೇಹದ ಎಲ್ಲ ಭಾಗಗಳಲ್ಲೂ ಸ್ಪಷ್ಟವಾಗಿಯೇ ಚಲನೆಗಳು ಕಂಡುಬಂದವು. ದೀರ್ಘವಾಗಿ ಉಸಿರಾಡತೊಡಗಿದಳು.

ಮತ್ತೊಮ್ಮೆ ಮೆಲುವಾಗಿ ಕರೆದ” ಸನಾ”

ಅಚಾತುರ್ಯವೆಂಬಂತೆ ಸಂವೇದನಾಲ ದೇಹ ಒಮ್ಮೆ ಮೇಲೆ ಹಾರಿ ಮತ್ತೆ ಹಾಸಿಗೆಯ ಮೇಲೆ ಬಿದ್ದಳು. ಗುರುತ್ವದ ಮೊದಲ ಸೆಳೆತ ಸಂವೇದನಾಳ ಮೇಲೆ. ಅಗಾಧ ನೋವಿನಿಂದ ಒಮ್ಮೆ ಚೀರಿಕೊಂಡಳು. ಬಹುಶಃ ಅಮ್ಮಾ ಎಂದಿರಬೇಕು. ಸೃಷ್ಟಿ ಕೃತಕವಾದರು ಜೀವ ನೈಸರ್ಗಿಕವೇ ತಾನೇ. ಒಮ್ಮೆಲೇ ಅವಳ ದೇಹ ನಿಸ್ತೇಜವಾಯಿತು.

ಆತ್ಮನಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ತನ್ನ ಮೊದಲ ಪ್ರಯತ್ನ ಸುಳಿವೂ ಕೊಡದಂತೆ ವ್ಯರ್ಥವಾದದ್ದು ಕಂಡು ಆತ್ಮ ಕುಸಿದುಹೋದ. ಮನಸ್ಸೇಕೋ ಬಹಳವೇ ವ್ಯಾಕುಲಗೊಂಡಿತು. ಆದರೂ ಅವನಿಂದ ಸಾಧ್ಯವಾಗುವಂಥದ್ದು ಏನೂ ಇರಲಿಲ್ಲ. ಅಲ್ಲಿಗೆ…?? ಅವನೇನು ಮಾಡುವಂತೆಯೂ ಇರಲಿಲ್ಲ. ಸಂವೇದನಾಳ ಸುಂದರ ಕಾಯ ಸಂವೇದನೆಯಿಲ್ಲದೆ ಮಲಗಿತ್ತು. ಆತ್ಮದ, ಆತ್ಮನ ಕೊರತೆಯಿದೆ ಅದಕ್ಕೆ ಎಂದುಕೊಂಡ.
” ಆತ್ಮಸಂವೇದನಾ…..??”
ಸಮ್ಮೋಹನಗೊಳಿಸಿತು ಹೆಸರು. ಚಂದದ ಪದ ಜೋಡಣೆಯೆಂದುಕೊಂಡ ಮನಸ್ಸಿನಲ್ಲಿಯೇ. ” ಪ್ರತಿ ದೇಹಕ್ಕೂ, ಪ್ರತಿ ಮನಸ್ಸಿಗೂ ಸಂವೇದನೆ ನೀಡುವುದು ಆತ್ಮವೇ. ಆತ್ಮಕ್ಕೆ ಉಸಿರುಕೊಟ್ಟು ಮನಸ ಹಸಿರಾಗಿಸಿದ್ದು ಸಂವೇದನಗಳೇ..”

ಆತ್ಮ ಸಂವೇದನಾ ಆತ್ಮನಿಗೆ ಸಂವೇದನೆ ನೀಡುತ್ತಾಳೆ ಎಂದುಕೊಂಡ. ಸಂವೇದನಾ ನಿಶ್ಚಲವಾಗಿ ಮಲಗಿದ್ದಳು.. ನಿರ್ಲಿಪ್ತವಾಗಿ.. ನಿಸ್ತೇಜವಾಗಿ…
” ಸಂವೇದನಾ” ಎಂದ ಆತ್ಮ.

ಅರಿವಿಲ್ಲದೆ ಅವನ ದನಿ ಗದ್ಗವಾಗಿತ್ತು. ಆತ್ಮನ ಕಂಗಳಿಂದ ಎರಡು ಕಣ್ ಹನಿಗಳು ಸಂವೇದನಾಳ ಮುಖದ ಮೇಲೆ ಬಿದ್ದವು. ಇನ್ನು ಇಲ್ಲಿ ನಿಂತು ಮಾಡುವುದೇನು ಇಲ್ಲ ಎಂಬಂತೆ ಹೆಜ್ಜೆ ಎತ್ತಿಟ್ಟ ಆತ್ಮ. ವರ್ಷಿಯ ಎರಡನೇ ಸೂರ್ಯನ ಆವಿಷ್ಕಾರವನ್ನಾದರೂ ತಡೆಯಲೇಬೇಕೆಂಬಂತೆ ಕದಲಿದ, ಕನಲಿದ ಆತ್ಮ.

ಆತ್ಮವಿಲ್ಲದ ಸಂವೇದನಾ ಸಂವೇದನಾ ರಹಿತವಾಗಿ ಮಲಗಿದ್ದಳು.

ಆತ್ಮ ಅಲ್ಲಿಂದ ಸರಿಯುತ್ತಲೇ ಅವಳ ಮುಖದಲ್ಲಿ ಮಂದಹಾಸ ಮೂಡಿತು. ಭಾವಜೀವಿ ಎನ್ನುತ್ತಾ ಹಾಸಿಗೆಯಿಂದೆದ್ದು ನಿಂತಳು ಸಂವೇದನಾ.

Facebook ಕಾಮೆಂಟ್ಸ್

ಲೇಖಕರ ಕುರಿತು

Gautam Hegde

ನಾಲ್ಕು ವರ್ಷದಿಂದ ಮಾಹಿತಿ ತಂತ್ರಜ್ಞಾನದಲ್ಲಿ ವೃತ್ತಿ, ಈಗ ಸ್ವಂತ ಕಂಪನಿಯೊಂದನ್ನು ನಡೆಸಬೇಕೆಂಬ ಹಂಬಲದಿಂದ ಸ್ಟಾರ್ಟ್ ಅಪ್ ನಡೆಸುತ್ತಿರುವ ನನಗೆ ಅತೀವ ಆಸಕ್ತಿ - ಸಾಹಿತ್ಯ - ಓದು - ಬರಹ. ಅದರ ಪ್ರತಿಬಿಂಬವೇ ಈ "ಆತ್ಮ ಸಂವೇದನಾ". ಕಾದಂಬರಿಗಳ ಲೋಕದಲ್ಲಿ ಮೊದಲ ಪ್ರಯತ್ನವಿದು. ನಿಮ್ಮೆಲ್ಲರ ಮನಸ್ಸು ಮುಟ್ಟಲಿ ಎಂದು ಪ್ರಯತ್ನದಲ್ಲಿ..

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!