X

ಎಲ್ಲಿ ಹೋದವು ಆ ಶಿಸ್ತಿನ ಅರ್ಥಪೂರ್ಣ ದಿನಗಳು??

ನನ್ನ ಸಹೋದ್ಯೋಗಿಯೊಬ್ಬರ ತಂದೆ ಅಂದಿನ ಕಾಲದಲ್ಲಿ ಚಾಮರಾಜನಗರದ ಶಾಸಕರಾಗಿದ್ದರು. ಎರಡು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಈಗ ವಿಶ್ರಾಂತಿ ಜೀವನ ನಡೆಸುವುದರೊಂದಿಗೆ ಅದೇ ಶಿಸ್ತು, ಓದುವ ಹವ್ಯಾಸ, ದಿನ ನಿತ್ಯದ ಬೆಳವಣಿಗೆಯ ಸಂಪೂರ್ಣ ಮಾಹಿತಿ ಅವರಿಗಿದೆ. ಶ್ರೀಯುತರಿಗೆ ಈಗ ವಯಸ್ಸು 90 + ವರ್ಷಗಳು ಅಷ್ಟೇ. ಅವರ ಮಾತಿಗೆ ಸುತ್ತಮುತ್ತಲು ಇಂದಿಗೂ ಅಷ್ಟೇ ಪ್ರಬಲವಾದ ಬೆಲೆ ಇದೆ. ಇದು ಅವರ ಕಿರು ಪರಿಚಯ.

 ಇನ್ನು ತಂದೆಯವರು ಶಾಸಕರಾಗಿದ್ದಾಗ ಹೇಳಿದ / ನೋಡಿದ ಅನುಭವಗಳಲ್ಲಿ  ಒಂದೆರಡನ್ನು ಮಾತ್ರ ನನ್ನ ಸ್ನೇಹಿತರು ಸಂಜೆ ಕಾಫಿ ಹೀರುವಾಗ ಹಂಚಿಕೊಂಡರು. ಇದೋ ಇಲ್ಲೇವೆ: ಒಮ್ಮೆ ವಿಧಾನ ಸಭೆಯಲ್ಲಿ ಯಾವುದೊ ಒಂದು ವಿಷಯದ ಬಗ್ಗೆ ಆಡಳಿತ ಹಾಗೂ ಪ್ರತಿಪಕ್ಷದ ನಡುವೆ ಬಿನ್ನಾಭಿಪ್ರಾಯ ಮೂಡುತ್ತದೆ ಅಷ್ಟೇ. ಎರಡು ಕಡೆ ಶಾಸಕರು ತಮ್ಮ ವಾದ ಮಂಡಿಸಲು ವಿಧಾನಸೌಧದ ಗ್ರಂಥಾಲಯದಲ್ಲಿ ಸತತ 2 ದಿನ ಸಂಪೂರ್ಣವಾಗಿ ಕಳೆದು ಸಿಕ್ಕ ಪುಸ್ತಕಗಳನ್ನು ಓದಿ, ಸಂಬಂಧಪಟ್ಟ ಕಡೆ ಗುರುತು ಹಾಕಿಕೊಂಡು ಸಭೆಯಲ್ಲಿ ಚರ್ಚೆಮಾಡಲು ಸಿದ್ದತೆ ನಡೆಸಿದ್ದರು. ನಂತರ ವಿಷಯಾಸ್ಪದ ಚರ್ಚೆ ಶುರುವಾಗಿ ಮಧ್ಯೆ ಹಾಸ್ಯ ಲೇಪನವೂ ಸೇರಿ ಗಂಟಗಟ್ಟಲೆ ನಡೆದು ಕೊನೆಗೆ ಆಡಳಿತ ಪಕ್ಷದವರು ವಿರೋಧ ಪಕ್ಷದ ವಾದಕ್ಕೆ ತಲೆದೂಗಿಸಿ, ಮಾಹಿತಿ ಸಮೇತ ಇದ್ದ ವಾದವನ್ನು ಒಪ್ಪಿಕೊಂಡು ತಮ್ಮ ನಿರ್ಣಯವನ್ನು ಬದಲಿಸಿಕೊಂಡರು. ಚರ್ಚೆ ಮಧ್ಯೆ ಎಲ್ಲೂ ವಯಕ್ತಿಕವಾಗಿ ಯಾರನ್ನು ಯಾರು ನಿಂದಿಸಲಿಲ್ಲ, ಟೀಕೆ ಮಾಡಲಿಲ್ಲ, ಲೇವಡಿ ಮಾಡಲಿಲ್ಲ, ಕತ್ತಿನ ಪಟ್ಟಿ ಹಿಡಿಯಲಿಲ್ಲ,ಧರಣಿ ಮಾಡಲಿಲ್ಲ, ವಿಧಾನ ಸಭೆ ಬಿಟ್ಟು ಗಾಂಧಿ ಪ್ರತಿಮೆಯನ್ನು ಆಶ್ರಯಿಸಲಿಲ್ಲ, ಮಾಧ್ಯಮದವರ ಮುಂದೆ ಹಿರಿದು ಹಿಪ್ಪೆಹಾಕಲಿಲ್ಲ ಹಾಗು ಅನ್ಯರಿಗೆ ಮನರಂಜನೆ ನೀಡಲಿಲ್ಲ. ಪರಸ್ಪರ ಗೌರವ,ವಿಶ್ವಾಸ, ಸ್ನೇಹ ಹಾಗು ಘನತೆಯನ್ನು ಕಾಪಾಡಿಕೊಂಡು ವಿಷಯ ಮಂಡಿಸಿದ್ದರು. ಆಡಳಿತ ಪಕ್ಷದಲ್ಲಿದ್ದವರು ಕಾಂಗ್ರೆಸ್ಸಿಗರು ಹಾಗು ವಿರೋಧ ಪಕ್ಷದಲ್ಲಿದ್ದವರು ಜನತಾ ಪರಿವಾರದವರು.

ಇಂದು ಅದೇ ಕಾಂಗ್ರೆಸ್ಸಿದೆ, ಅದೇ ಜನತಾ ಪರಿವಾರದ ಬೇರೆ ಬೇರೆ ಚೂರುಗಳಿವೆ ಆದರೆ ಆ ಆರೋಗ್ಯಭರಿತ, ಸ್ವಾರಸ್ಯಕರ, ವಿಷಯಾಸ್ಪದ ಚರ್ಚೆಗಳು ಮಾಯವಾಗಿವೆ. ಒಬ್ಬರಿಗೊಬ್ಬರು ನಿಂದಿಸಿ,ಟೀಕಿಸಿ, ತೋಳ್ಬಲ ಪ್ರದರ್ಶಿಸಿ, ಜಗಳ ಮಾಡಿ, ಸಭಾತ್ಯಾಗ ಮಾಡಿ, ಗಾಂಧಿ ಪ್ರತಿಮೆಯನ್ನು ಆಶ್ರಯಿಸಿ, ಮಾಧ್ಯಮದವರಿಗೆ ಬಿಟ್ಟಿ ಮನರಂಜನೆ ನೀಡುವವರಿಗೆ ವಿಧಾನಸೌಧದ ಗ್ರಂಥಾಲಯವಿರುವುದೇ ಮರೆತುಹೋಗಿದೆ.

ಸಮಾಜದಲ್ಲಿ ಒಂದು ಉತ್ತಮ ಕೆಲಸವನ್ನು ಮಾಡಿ, ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿದು, ಆದರ್ಶ ಹಾಗು  ಮೌಲ್ಯಯುಕ್ತ ಬದುಕನ್ನು ಸಾಗಿಸಿ ಚುನಾವಣೆಯಲ್ಲಿ ಗೆದ್ದು ತನ್ನ ಆದರ್ಶವನೆಲ್ಲ ಸಮಾಜದ ಉದ್ಧಾರಕ್ಕೆ ಧಾರೆಯೆರೆಯುತ್ತಿದ್ದ ನಾಯಕರು ಇಂದು ಇಲ್ಲವಾಗಿದ್ದಾರೆ. ಕೇವಲ ದುಡ್ಡು, ಹೆಂಡ, ಬಿರಿಯಾನಿಗಳನ್ನ ಹಂಚಿ ತಲೆಯಲ್ಲಿ ಹುಡುಕಿದರೂ ನಯಾ ಪೈಸೆ ಬುದ್ಧಿಯಿಲ್ಲದೆ, ಹಣ ಮಾಡಿ,ಸಮಾಜವನ್ನು ಒಡೆದು ತನ್ನ ಬೇಳೆಯನ್ನು ಬೇಯಸಿಕೊಳ್ಳುವ ವಿಕೃತ ಮನಸ್ಸಿನ ನಾಯಕರೇ ತುಂಬಿಹೋಗಿದ್ದಾರೆ. ಎಂಥಾ ವಿಪರ್ಯಾಸ ಅಲ್ವಾ?

ಇಂದಿನ ಕಾರ್ಪೋರೆಟ್ ಜಗತ್ತಿನಲ್ಲಿ ದುಡ್ಡು ಎಲ್ಲವನ್ನು ನುಂಗಿಹಾಕಿದೆ. ದುಡ್ಡಿನ ಮುಂದೆ ನಮ್ಮತನ, ಆದರ್ಶ, ಮೌಲ್ಯಗಳೆಲ್ಲವೂ ಕಳೆದುಹೋಗಿವೆ. ಸಮಾಜ ಬದಲಾಗಿದೆ, ಸನ್ನಿವೇಶ ಬದಲಾಗಿದೆ,ರಾಜಕೀಯ ಬದಲಾಗಿದೆ, ದೇಶ ಬದಲಾಗಿದೆ, ಮಾಡುವ ಕೆಲಸಗಳು ಬದಲಾಗಿದೆ, ಜನರ ಮನಸ್ಥಿತಿ ಬದಲಾಗಿದೆ ಆದರೆ ಮನುಷ್ಯನನ್ನು ಮನುಷ್ಯನಾಗಿ ನೋಡುವ ಪ್ರೀತಿಸುವ ಸೌಜನ್ಯ ಕಾಣೆಯಾಗಿದೆ. ಅದನ್ನು ಒತ್ತಿಹೇಳಿದ ನಿಜ ಸಮಾಜವಾದ ಕೂಡ ಇಂದು ಮಾಯವಾಗಿದೆ, ಈ ಮತ್ಲಬಿ ದುನಿಯಾದಲ್ಲಿ ಆದರ್ಶ ಹಾಗು ಮೌಲ್ಯ ತಮ್ಮ ಅಸ್ತಿತ್ವ ಕಳೆದುಕೊಂಡಿದೆ. ಸಮಾಜವಾದ ಅಡಿಯಲ್ಲಿ ಹುಟ್ಟಿ   ಬಂದ ಅದೆಷ್ಟೋ ನಾಯಕರು ಇಂದು ಚುನಾವಣೆ ಎದುರಿಸಲಾರದೆ ಸೋತು ಮನೆಯನ್ನು ಹೊಕ್ಕಿದ್ದಾರೆ ಏಕೆಂದರೆ ಬಂಡವಾಳಶಾಹಿ ವಾತಾವರಣದಲ್ಲಿ ದುಡ್ಡು ಎಲ್ಲವನ್ನು ನುಂಗಿ ಹಾಕುತ್ತಿದೆ.

ಸಮಾಜವಾದದ ಧುರೀಣ ಮಾನ್ಯ ಜಯಪ್ರಕಾಶ್ ನಾರಾಯಣ್ ರವರು ಹುಟ್ಟಿದ ದಿನ ಮೊನ್ನೆಯಷ್ಟೇ ಕಳೆಯಿತು, ಆವಾಗ ಇವೆಲ್ಲಾ ನೆನಪಾಯಿತು, ಮತ್ತೆ ಮನಸಿನ ನೋವನ್ನು ಹೊರಹಾಕಬೇಕೆಂದು ಅನಿಸಿ ಬರೆದಿದ್ದೇನೆ. ಈ ಅಧಃಪತನಕ್ಕೆ ರಾಜಕೀಯ ನಾಯಕರು ಮಾತ್ರ ಕಾರಣವಲ್ಲದೆ ನಾನು ಸೇರಿ ಇಡೀ ಸಮಾಜ ಹೊಣೆಗಾರಿಕೆಯನ್ನು ಹೊರಬೇಕಾಗುತ್ತದೆ.  ಸರಿಪಡಿಸೋಣವೆಂದರೆ ಎಲ್ಲಿಂದ ಶುರು ಮಾಡಬೇಕೆಂದು ತಿಳಿಯುತ್ತಿಲ್ಲ, ಅಗೆದಷ್ಟು ಕೊಳಕು ಸಿಗುತ್ತಿದೆ. ಛೆ ಛೆ!

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post