X

ಯುವಜನತೆಯ ಚಿತ್ತ-ಎತ್ತ?

ಒಂದು ದೇಶದ ಯುವಜನತೆ ಆ ದೇಶದ ಅಭಿವೃದ್ಧಿಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ.ದೇಶದಲ್ಲಿ ಯುವಜನತೆಯ ಪ್ರಮಾಣ ಹೆಚ್ಚಾದಂತೆ ದೇಶ ಬಲಿಷ್ಠವಾಗುತ್ತಾ ಹೋಗುತ್ತದೆ. ಅಂತೆಯೇ ಭಾರತವೂ ಕೂಡಾ ಒಂದು ಯುವರಾಷ್ಟ್ರ.ಅರ್ಥಾತ್ ನಮ್ಮ ದೇಶದ ಒಟ್ಟು ಜನಸಂಖ್ಯೆಯು ಶೇ ೬೦ ರಷ್ಟು ಯುವಜನತೆಯನ್ನು ಹೊಂದಿದೆ. ಯುವಜನತೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ ದೇಶ ಅತಿವೇಗವಾಗಿ ಅತ್ಯುನ್ನತ ಸ್ಥಾನಕ್ಕೆ ಹೋಗುವುದು ೧೦೦ ಕ್ಕೆ ೧೦೦ ಸತ್ಯ.ಹೀಗಿದ್ದೂ ಭಾರತ ಏಕೆ ಇನ್ನೂ ಆಮೆಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ?? ಯುವಶಕ್ತಿಯ ಪ್ರಮಾಣ ಹೆಚ್ಚಿದ್ದರೂ ಏಕೆ ಇಂತಹ ಸ್ಥಿತಿ? ಅವಲೋಕನ ಮಾಡಿದರೆ ಗೊತ್ತಾಗುವುದಿಷ್ಟೇ, ಯುವಶಕ್ತಿಯ ಉಪಯೋಗ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ.ಅರ್ಥಾತ್ ಯುವಜನತೆ ತಮ್ಮ ಜೀವನವನ್ನು ದೇಶಕ್ಕೋಸ್ಕರ ಸದ್ವಿನಿಯೋಗ ಮಾಡುತ್ತಿಲ್ಲ.ಹಾಗಾದರೆ ನಮ್ಮ ಯುವಶಕ್ತಿ ಹಾದಿ ತಪ್ಪುತ್ತಿರುವುದಾದರೂ ಹೇಗೆ?

ಮೊದಲೆನೆಯದಾಗಿ, ಇತ್ತೀಚೆಗೆ ಯುವಜನತೆ ಹೆಚ್ಚಾಗಿ ದಾರಿ ತಪ್ಪುತ್ತಿರುವುದು ಅಂತರ್ಜಾಲದಿಂದ…!!! ಹೌದು, ಇಂದಿನ ಪೀಳಿಗೆಯ ಯುವಕ-ಯುವತಿಯರು ತಮ್ಮ ಬಹುತೇಕ ಸಮಯವನ್ನು ಅಂತರ್ಜಾಲ ಯಾ ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಿದ್ದಾರೆ.ದಿನದ ಇಪ್ಪತ್ನಾಲ್ಕು ಗಂಟೆಯೂ ಫ಼ೇಸ್ಬುಕ್, ವಾಟ್ಸ್ಆಪ್, ವಿ ಚಾಟ್ ಮುಂತಾದ ಜಾಲತಾಣಗಳಲ್ಲಿ ಕಾಲಕಳೆಯುತ್ತಾರೆ.ಅದಕ್ಕೆ ಪೂರಕವಾಗಿರು ಮೊಬೈಲ್ ಕಂಪನಿಗಳು ಇವರಿಗೆ ಸ್ನೇಹಿಯಾಗಿ ಕೆಲಸ ಮಾಡುತ್ತಿವೆ.ಇವುಗಳನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಬಹುದಾದರೂ ನಮ್ಮ ಯುವಜನತೆ ಉಪಯೋಗಿಸಿಕೊಳ್ಳುತ್ತಿಲ್ಲ.ಗುರುತು ಪರಿಚಯ ಇಲ್ಲದವರೊಂದಿಗೆ ಸಮಯದ ಮಿತಿ ಇಲ್ಲದೇ ವ್ಯವಹರಿಸುವುದು ಒಂದು ಹವ್ಯಾಸವಾಗಿಬಿಟ್ಟಿದೆ.ಅಪಾಯಕಾರಿ ಅಂಶವೆಂದರೆ ಇಂತಹ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು ವ್ಯವಹರಿಸುವುದು, ಅಶ್ಲೀಶ ಸಂದೇಶ ರವಾನಿಸುವುದು, ಬೇರೆಯವರ ಬದುಕಿನಲ್ಲಿ ಮನಬಂದಂತೆ ವಿಕೃತವಾಗಿ ನಡೆದುಕೊಳ್ಳುತ್ತಾ ಕಾಲಹರಣ ಮಾಡುತ್ತಿರುವ ಸನ್ನಿವೇಶ ಸೃಷ್ಟಿಯಾಗಿದೆ. ಇದರಿಂದ ಸಮಾಜದಲ್ಲಿ ಎಂತಹ ಘೋರ ಅಪರಾಧ ಎಸಗಿದಂತಾಗುತ್ತದೆ ಎಂಬ ಅರಿವೂ ಇವರುಗಳಿಗೆ ಇಲ್ಲದಿರುವುದು ಹಾಗೂ ಇಂತಹ ಕೆಲಸ ಮಾಡುತ್ತಿರುವುದರಲ್ಲಿ ವಿದ್ಯಾವಂತರೇ ಹೆಚ್ಚಾಗಿರುವುದು ನಮ್ಮ ದುರ್ದೈವವೇ ಸರಿ…..

ಪ್ರಸ್ತುತದಲ್ಲಿ ರಾಜಕಾರಣಿಗಳು ಯುವಶಕ್ತಿಯನ್ನು ಹಾಳುಮಾಡುವುದರಲ್ಲಿ ಒಬ್ಬರಿಗೆ ಮತ್ತೊಬ್ಬರಿಗೆ ಪೈಪೋಟಿ ನೀಡಬಲ್ಲವರಾಗಿದ್ದಾರೆ.ಏಕೆಂದರೆ ತಮ್ಮ ಎಲ್ಲಾ ರೀತಿಯ ನೈತಿಕ ಹಾಗೂ ಅನೈತಿಕ ಕೆಲಸಗಳಿಗೆ ಯುವಜನತೆಯನ್ನು ಬೇಕಾಬಿಟ್ಟಿಯಾಗಿ ನದಿನೀರಿನಂತೆ ಉಪಯೋಗಿಸುತ್ತಿದ್ದಾರೆ. ಚುನಾವಣೆ ಘೋಷಣೆಯಾದಾಗ ತಮ್ಮ ಪರ ಪ್ರಚಾರ ಮಾಡುವುದರಿಂದ ಹಿಡಿದು ಜನರನ್ನು ಮತಗಟ್ಟೆಗೆ ಕರೆದುಕೊಂಡು ಬರುವವರೆಗೆ ಯುವಶಕ್ತಿಯನ್ನು ಅವಲಂಬಿಸಿರುತ್ತಾರೆ. ಅವರಿಗೆ ವಿವಿಧ ರೀತಿಯ ಆಮಿಷಗಳನ್ನೊಡ್ಡಿ ತಮ್ಮತ್ತ ಸೆಳೆದು ಅವರನ್ನು ಮೈಗಳ್ಳರನ್ನಾಗಿ ಮಾಡುವುದು ಒಂದು ವಿಧವಾದರೆ, ತಮ್ಮ ವಿರುದ್ಧ ದನಿ ಎತ್ತಿದವರ ಹುಟ್ಟಡಗಿಸಲು , ಹೋರಾಟ ನಡೆಸುವವರನ್ನು ಹತ್ತಿಕ್ಕಲು ತಮ್ಮದೇ ಆದ ಸಣ್ಣ ಸೇನೆಯನ್ನು ಅರ್ಥಾತ್ ರೌಡಿಗಳ ಗುಂಪನ್ನು ತಯಾರು ಮಾಡುತ್ತಾರೆ. ಹೀಗೆ ಬೆಳೆದ ಪೊರ್ಕಿಗಳು ತಮಗೆ ಶ್ರೀರಕ್ಷೆಯಾಗಿ ಈ ರಾಜಕಾರಣಿಗಳು ಇರುತ್ತಾರೆ ಎಂಬ ನಂಬಿಕೆಯಲ್ಲಿ ಗಲ್ಲಿ ಗಲ್ಲಿಗಳಲ್ಲಿ ತಮಗಿಷ್ಟ ಬಂದ ರೀತಿಯಲ್ಲಿ ಗಲಾಟೆ ದೊಂಬಿಗಳನ್ನು ನಡೆಸುತ್ತಾರೆ. ಇಂತವರ ಮೇಲೆ ಪೋಲಿಸ್ ಕೇಸ್ ಸಹ ಆಗುವುದಿಲ್ಲ ಇನ್ನು ಸಾರ್ವಜನಿಕರು ಏನು ತಾನೆ ಮಾಡಿಯಾರು? ನಮ್ಮ ದೇಶದ ತರುಣ ಸಂಪನ್ಮೂಲ ಇಷ್ಟೊಂದು ಕೆಟ್ಟ ರೀತಿಯಲ್ಲಿ ವಿನಾಶ ಹೊಂದುತ್ತಿರುವುದು ಖಂಡಿತವಾಗಿಯೂ ಅಪಾಯಕಾರಿ ಸಂಗತಿಯಾಗಿದೆ ಅಲ್ಲವೇ?

ಅಂತರ್ಜಾಲ, ಭೂಗತಲೋಕ,ರಾಜಕಾರಣ ಒಂದೆಡೆಯಾದರೆ ನಿರುದ್ಯೋಗ ಇನ್ನೊಂದು ಕಡೆ ನಿಲ್ಲುತ್ತದೆ. ಪದವಿ ಮುಗಿಸಿದ ಕೋಟ್ಯಂತರ ವಿದ್ಯಾರ್ಥಿಗಳು ಕೆಲಸವಿಲ್ಲದೆ ಸುಮ್ಮನೆ ಕೂರುವಂತ ಪರಿಸ್ಥಿತಿ ಬಂದಿದೆ.ಕೆಲಸವಿಲ್ಲದೇ ಅಲೆಯುವವರ ಸಮಸ್ಯೆ ಒಂದೆಡೆಯಾದರೆ ಕೆಲಸಕ್ಕಾಗಿ ಅಲ್ಲಿ ಇಲ್ಲಿ ಅಲೆಯುವವರ ಸಮಸ್ಯೆ ಇನ್ನೊಂದೆಡೆ. ಉತ್ತಮ ರೀತಿಯಲ್ಲಿ ಶೈಕ್ಷಣಿಕ ಅರ್ಹತೆ ಹೊಂದಿದ್ದರೂ ಸರ್ಕಾರಿ ಕೆಲಸ ಸಿಗುವುದು ಕಬ್ಬಿಣದ ಕಡಲೆಯಂತಾಗಿದೆ. ಒಂದು ವೇಳೆ ಕೆಲಸಗಳಿಗೆ ಅರ್ಜಿ ಆಹ್ವಾನಿಸಿದರೂ, ಕೆಲಸಗಾರರ ಅಗತ್ಯ ಇರುವ ಇಲಾಖೆಗೆ ಸರಿಯಾದ ರೀತಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುವುದಿಲ್ಲ ಮತ್ತು ಅಗತ್ಯವಿರುವಷ್ಟು ಕೆಲಸಗಾರರನ್ನು ನಿಯೋಜನೆ ಮಾಡಿಕೊಳ್ಳುವುದಿಲ್ಲ. ಕಾರಣ ಧರ್ಮ-ಜಾತಿ ಆಧಾರಿತ ಮೀಸಲಾತಿ. ಇದಕ್ಕೆಲ್ಲಾ ನಮ್ಮನ್ನಾಳುವ ಸರ್ಕಾರವೇ ನೇರ ಹೊಣೆ ಹೊರಬೇಕು. ಒಟ್ಟಾರೆಯಾಗಿ ಸರ್ಕಾರದ ನಿರ್ಲಕ್ಷ್ಯದಿಂದ ಯುವಶಕ್ತಿ ಪೋಲಾಗುತ್ತಿದೆ.

ಇದಲ್ಲದೇ ಇನ್ನು ಕಾಲೇಜು ವಿದ್ಯಾರ್ಥಿಗಳ ವಿಷಯದ ಬಗ್ಗೆ ಗಮನಿಸುವುದಾದರೆ ಅವರದ್ದೂ ಕೂಡ ಭಿನ್ನವಾಗಿಲ್ಲ. ಉಜ್ವಲ ಸಮಾಜವನ್ನು ನಿರ್ಮಾಣ ಮಾಡಬೇಕಾದಂತಹ ವಿದ್ಯಾರ್ಥಿಗಳು ಬೀದಿ-ಬೀದಿಗಳಲ್ಲಿ ಪೊರ್ಕಿಗಳಂತೆ ಅಡ್ಡಾಡುತ್ತಾರೆ. ಸಮಾಜದಲ್ಲಿ ಭಯ ಹುಟ್ಟಿಸುವಂತಹ ಕೆಲಸ ಮಾಡುತ್ತಿದ್ದಾರೆ.ಬೀಡಿ, ಸಿಗರೇಟ್, ಮದ್ಯಪಾನ ಮುಂತಾದ ಮಾದಕ ವ್ಯಸನಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸ ಅಲ್ಲವೇ? ದೇಶಕ್ಕಾಗಿ ಯಾ ಸಮಾಜಕ್ಕಾಗಿ ಅಲ್ಲದಿದ್ದರೂ ತಮ್ಮ ಏಳಿಗೆಗೋಸ್ಕರ ಹಗಲು ರಾತ್ರಿ ಶ್ರಮಿಸುವ ತಮ್ಮ ತಂದೆ-ತಾಯಿಯರ ಆಸೆಯ ಸಲುವಾಗಿಯಾದರೂ ಇಂತಹ ವಿದ್ಯಾರ್ಥಿಗಳು ಬದಲಾಗಬಹುದಲ್ಲವೇ????

ಸ್ವಾಮಿ ವಿವೇಕಾನಂದರು “ನನಗೆ ನೂರು ಜನ ಸದೃಢ ಯುವಕರನ್ನು ನೀಡಿ, ನಾನು ಬಲಾಢ್ಯ ಜಗದ್ಗುರು ಭಾರತವನ್ನು ಕಟ್ಟುತ್ತೇನೆ, ಭಾರತದ ಯುವಶಕ್ತಿಗೆ ಸರಿಸಾಟಿಯಾಗಿ ನಿಲ್ಲುವಂತದ್ದು ಯಾವುದೂ ಇಲ್ಲ ” ಎಂದು ಜಗತ್ತಿಗೇ ಸಾರುತ್ತರೆ. ಎಂತಹ ಛಾತಿ ಇದೆ ಅವರ ಆ ಮಾತಿನಲ್ಲಿ. ಅಂದು ಅವರಾಡಿದ ಮಾತಿಗೆ ಇಂದು ಬೆಲೆಯೇ ಇಲ್ಲದಂತಾಗಿದೆ. ಅವರು ಕೇಳಿದ್ದು ಕೇವಲ ನೂರೇ ನೂರು ಸದೃಢ ಯುವಕರನ್ನು. ನೋಡಿ ಕೇವಲ ನೂರು ಜನ ಸದೃಢ ಯುವಕರೊಂದಿಗೆ ವಿಶ್ವಗುರು ಭಾರತ ಕಟ್ಟುತ್ತೇನೆ ಎನ್ನುವ ಸ್ವಾಮೀಜಿ, ಇನ್ನೇನಾದರೂ ದೇಶದ ಸಂಪೂರ್ಣ ಯುವಶಕ್ತಿ ಸರಿಯಾದ ರೀತಿಯಲ್ಲಿ ವಿನಿಯೋಗವಾದರೆ ಎಂತಹ ಮಟ್ಟದ ಭಾರತ ನಿರ್ಮಾಣವಾಗಬಹುದು ನೀವೇ ಅಂದಾಜಿಸಿ. ಸಂಶಯವೇ ಇಲ್ಲ ಯುವಶಕ್ತಿ ಜಲಪಾತದಂತೆ ಭೋರ್ಗರೆದು , ದೇಶಸೇವೆಗೆ ನಾ ಮುಂದು ತಾ ಮುಂದು ಎಂದು ಧುಮ್ಮಿಕ್ಕಿದರೆ ನಾವು ನೀವು ಬಿಡಿ ಪ್ರಪಂಚದ ಯಾವ ನಾಯಕರೂ ಊಹಿಸದಂತಹ ಬಲಿಷ್ಠ ಭಾರತ ನಿರ್ಮಾಣ ಖಂಡಿತಾ ಸಾಧ್ಯ.

ಉದ್ಯೋಗವಿಲ್ಲ ಎನ್ನುವ ಬದಲು ಉದ್ಯೋಗವನ್ನು ಸೃಷ್ಟಿಸಬೇಕು. ಇತರರಿಗೆ ನಾವೇ ಉದ್ಯೋಗ ನೀಡುವಂತಾಗಬೇಕು. ಸಾಧ್ಯವಾದರೆ ಸೈನ್ಯಕ್ಕೆ ಸೇರಬೇಕು. ಪೋಲಿಸ್ ಇಲಾಖೆಗೆ ಸೇರಿ ನ್ಯಾಯಯುತವಾಗಿ ಸೇವೆ ಸಲ್ಲಿಸಬೇಕು. ತಮ್ಮಂತ ಯುವಕರ ಸಂಘ ಸಂಸ್ಥೆಗಳನ್ನು ಹುಟ್ಟುಹಾಕಿ ನಿಸ್ವಾರ್ಥದಿಂದ ಸಮಾಜ ಸೇವೆ ಮಾಡಬೇಕು.ಮುಂದುವರೆದ ವಿದ್ಯುನ್ಮಾನ ಯುಗದಲ್ಲಿ ತಮ್ಮ ಪೂರ್ತಿ ಜೀವನವನ್ನು ದೇಶ ಸೇವೆಗೆ ಮೀಸಲಿರಿಸುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ.ಆದರೆ ದಿನದ ಕೆಲ ಗಂಟೆಗಳು ಅಥವಾ ವಾರದಲ್ಲಿ ಒಂದೋ ಎರಡೋ ದಿನ ಸಮಾಜಕ್ಕಾಗಿ ಮೀಸಲಿಟ್ಟರೆ ಸಾಕು ಅಬ್ದುಲ್ ಕಲಾಂ ರ 2020ರ ಭಾರತದ ಕನಸು ಖಂಡಿತವಾಗಿಯೂ ನನಸಾಗುತ್ತದೆ. ಇದೆಲ್ಲದಕ್ಕೂ ಮೊದಲು ನಮ್ಮಲ್ಲಿ ದೇಶಭಕ್ತಿ ಜಾಗೃತವಾಗಬೇಕು. ನನ್ನ ದೇಶ, ನನ್ನ ಜನ,ನನ್ನ ಸಮಾಜ ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು. ಹಿಂದೂ ಮುಸ್ಲಿಂ ಕ್ರಿಸ್ಚಿಯನ್ ಜೈನ ಬೌದ್ಧ ಎಂಬ ಧರ್ಮ ಸಂಕೋಲೆಗಳಿಂದ ಹೊರ ಬಂದು ನಾವೆಲ್ಲರೂ ಭಾರತೀಯರು ಎಂಬ ಒಂದೇ ಧರ್ಮದಡಿ ಸೇರಬೇಕು. ಸ್ವದೇಶಿ ಉತ್ಪನ್ನಗಳ ಖರೀದಿ-ಮಾರಾಟದ ಬಗ್ಗೆ ಆಸಕ್ತಿವಹಿಸಬೇಕು. ಆಗ ಮಾತ್ರ ಈ ದೇಶದಲ್ಲಿ ಬದುಕಿದ್ದೂ ಸಾರ್ಥಕವಾಗುತ್ತದೆ. ಆದ್ದರಿಂದ ವಿವೆಕಾನಂದರ ವಾಕ್ಯದಂತೆ ಏಳಿ ಎದ್ದೇಳಿ ಯುವಕ-ಯುವತಿಯರೇ, ಗುರಿ ಮುಟ್ಟುವವರೆಗೂ ನಿಲ್ಲದಿರಿ, ವಿಶ್ರಮಿಸದಿರಿ. ತಾಯಿ ಭಾರತಾಂಬೆಯ ಪಾದಕ್ಕೆನಮ್ಮನ್ನು ಅರ್ಪಿಸಿಕೊಂದು ಅವಳ ಸೇವೆಗೆ ಕಂಕಣ ಬದ್ಧರಾಗೋಣ. ಇಡೀ ಪ್ರಪಂಚವೇ ಸಹಾಯಕ್ಕಾಗಿ ನಮ್ಮತ್ತ ಕೈ ಚಾಚುವಂತಹ ಜಗದ್ಗುರು ಭಾರತವನ್ನು ನಿರ್ಮಾಣ ಮಾಡಿ ನಮ್ಮ ಸನಾತರಿಗೆ ಗೌರವ ಸಲ್ಲಿಸೋಣ…….

||ಜೈ ಹಿಂದ್|| ||ವಂದೇ ಮಾತರಂ||

  • Nagaraj Bhat

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post