ಪ್ಲಸ್ ಮತ್ತು ಪ್ಲಸ್ ಪ್ಲಸ್ ಆಗುವುದು ಸಹಜ. ಮೈನಸ್ ಮತ್ತು ಮೈನಸ್ ಪ್ಲಸ್ ಆಗುವುದರಲ್ಲಿ ಅಷ್ಟೊಂದು ವಿಶೇಷವಿಲ್ಲ. ಒಂದು ಪ್ಲಸ್ ಮತ್ತು ಒಂದು ಮೈನಸ್ ಆಗುವುದೇ ವಿಶೇಷ. + x – = – ಎನ್ನುತ್ತಾರೆ ದ್ಯಾವ್ರೇ ಒಂದು ಕಿಂಡಿ ಕೊಡು ಎಂದಿದ್ದ ಗಡ್ಡವಿಜಿ. ನೂನ್ಯತೆಗಳು ಬದುಕಿಗೆ ಪ್ಲಸ್ ಆಗಬಲ್ಲದು ಎಂದು ಸಾರುತ್ತದೆ ಗಡ್ಡವಿಜಿಯವರ ನೂತನ ಚಿತ್ರ ‘ ಪ್ಲಸ್ ‘.
ಒಬ್ಬ ಆಗರ್ಭ ಶ್ರೀಮಂತ ಉದ್ಯಮಿ. ಆತನ ಹೆಂಡತಿ ಪ್ರಸಿದ್ಧ ಡಾಕ್ಟರ್ ಆಕೆ ಮಾನಸಿಕ ದೌರ್ಬಲ್ಯವನ್ನು ಈ ಜಗತ್ತಿನಿಂದ ದೂರಮಾಡಲು ಒಂದು ಲಸಿಕೆಯನ್ನು ಕಂಡುಹಿಡಿಯುತ್ತಾಳೆ. ಇದನ್ನು ಸಹಿಸದವರು ಆಕೆಯನ್ನು ಕೊಲೆ ಮಾಡುತ್ತಾರೆ. ಉದ್ಯಮಿ ಈ ಹಿತಶತ್ರುಗಳನ್ನು ಸಂಹರಿಸಲು ಮೂರು ಮನೋದೌರ್ಬಲ್ಯವಿರುವ ಮೂರು ಯಂಗ್ ಮೈಂಡ್ ಗಳನ್ನು ಬಳಸುಕೊಳ್ಳುತ್ತಾನೆ. ಕಥೆ ಸರಳ. ಆದರೆ ನಿರೂಪಣೆ ವಿಭಿನ್ನ ಸ್ವಲ್ಪ ಗೊಂದಲ. ಸಾಮಾನ್ಯ ಪ್ರೇಕ್ಷಕ ಜೀರ್ಣಿಸಿಕೊಳ್ಳುವುದು ತುಸು ಕಷ್ಟವೇ. ಪ್ರತಿಭಾವಂತ ನಿರ್ದೇಶಕ ಗಡ್ಡ ವಿಜಿ ಒಂದು ಒಳ್ಳೆ ಸಬ್ಜೆಕ್ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಚಿತ್ರಕತೆ ಹಲವು ತಿರುವುಗಳನ್ನು ಪಡೆದುಕೊಳ್ಳುತ್ತದೆ. ಟ್ವಿಸ್ಟ್ ಅಂಡ್ ಟರ್ನ್ ಗಳ ನಡುವೆ ಸರಳವಾಗಿ ಈ ಚಿತ್ರಕತೆ ಹೇಳಲು ಗಡ್ಡವಿಜಿ ಸೋತಿದ್ದಾರೆ ಎನ್ನಬಹುದು.
ಎವರ್ ಗ್ರೀನ್ ಸ್ಟಾರ್ ಅನಂತ್ ನಾಗ್ ಈ ಚಿತ್ರದ ಹೀರೋ. ವಿಭಿನ್ನ ಗೆಟಪ್ ಗಳಲ್ಲಿ ಅನಂತ್ ನಾಗ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಧಾರಾಣಿಯವರ ನಟನೆಯೂ ಚೆಂದ. ಯುವ ಪ್ರತಿಭೆಗಳಾದ ರಿತೇಶ್, ಚೇತನ್ ಚಂದ್ರ ಪೈಪೋಟಿಗೆ ಬಿದ್ದವರಂತೆ ನಟಿಸಿದ್ದಾರೆ. ನಾಯಕಿಯಾಗಿ ನಟಿಸಿರುವ ಶಾಲಿನಿ ನಟನೆ ಓಕೆ. ತಮ್ಮ ಪಾತ್ರಗಳಿಗೆ ನಟರಾದ ಬಿ. ಸುರೇಶ, ಕರಿಸುಬ್ಬು, ಅಚ್ಯುತ್ ಕುಮಾರ್ ಮುಂತಾದವರು ನ್ಯಾಯ ಒದಗಿಸಿದ್ದಾರೆ. ಇನ್ನೂ ನಟ ರವಿಶಂಕರ್ ನಟನೆ ಎಂದಿನಂತೆ ಸೂಪರ್. ಶ್ವೇತಾ ಪಂಡಿತ್ ಮತ್ತು ಐಶಾನಿ ಶೆಟ್ಟಿಗೆ ಇಲ್ಲಿ ಅಷ್ಟೇನೂ ಕೆಲಸವಿಲ್ಲ. ಚಿತ್ರದ ಯಾವ ಹಾಡುಗಳು ನೆನಪಿನಲ್ಲಿ ಉಳಿಯುವುದಿಲ್ಲ. ಗುರುಪ್ರಶಾಂತ್ ರೈ ಕ್ಯಾಮರಾ ವರ್ಕ್ ಚೆನ್ನಾಗಿದೆ.
ಅತಿಯಾದ ನಿರೀಕ್ಷೆ ಇಟ್ಟಕೊಳ್ಳದೆ ಪ್ಲಸ್ ಚಿತ್ರವನ್ನು ಒಮ್ಮೆ ನೋಡಬಹುದು. ನಿರೀಕ್ಷೆ ಇಟ್ಟುಕೊಂಡು ನೋಡಿದರೆ ನಿರಾಸೆ ಖಂಡಿತ. ನಿರೀಕ್ಷೆ ಬಿಟ್ಟು ನೋಡಿದರೆ ಮನರಂಜನೆ ಖಚಿತ.
ರೇಟಿಂಗ್ : ***/5
Facebook ಕಾಮೆಂಟ್ಸ್