ಪ್ರೀತಿಯ ಕುಂವೀ ಸರ್
ಒಂದು ಕಾಲ ಇತ್ತು. ಇಂಟರ್ನೆಟ್ಟು, ವಾಟ್ಸಪ್ಪುಗಳಿಲ್ಲದ ಕಾಲ ಅದು. ಪತ್ರಿಕೆಗಳ ಸಾದರ ಸ್ವೀಕಾರ ಅಂಕಣದಲ್ಲೋ ವಿಮರ್ಶಾ ಲೇಖನಗಳನ್ನು ಓದಿಯೋ ನಾವು ಸಾಹಿತ್ಯಾಸಕ್ತರು ಸಾಹಿತಿಗಳು ಬರೆದ ಹೊಸ ಪುಸ್ತಕಗಳ ವಿಚಾರ ತಿಳಿದುಕೊಳ್ಳುತ್ತಿದ್ದೆವು. ಕುವೆಂಪು, ಕಾರಂತ, ಭೈರಪ್ಪ, ತೇಜಸ್ವಿ, ಅನಂತಮೂರ್ತಿ ಮುಂತಾದವರ ಪುಸ್ತಕಗಳನ್ನು ಚಾತಕಪಕ್ಷಿಗಳಂತೆ ಕಾದು ಕೊಂಡು ಕಣ್ಣಿಗೊತ್ತಿಕೊಂಡು ಪ್ರೀತಿಯಿಂದ ಓದಿ ಅಲ್ಲಿನ ಒಂದೊಂದು ಸಾಲುಗಳನ್ನೂ ನಮ್ಮೊಳಗೆ ಇಳಿಸಿಕೊಳ್ಳುತ್ತಿದ್ದೆವು. ನಾನು ನಾಟಕಪ್ರಿಯನಾದ್ದರಿಂದ ಕಾರ್ನಾಡ ಮತ್ತು ಕಂಬಾರರ ಪುಸ್ತಕಗಳಿಗೆ ಹಾಗೆ ಬಕನಂತೆ ಕಾಯುತ್ತಿದ್ದೆ. ಸಾಹಿತಿಗಳೆಂದರೆ ದೈವಿಕ ಪುರುಷರು, ಸರಸ್ವತೀಪುತ್ರರು, ಬೇರಾರಿಗೂ ಇಲ್ಲದ ಅನನ್ಯ ಪ್ರತಿಭೆಯನ್ನು ಒಂದೋ ಹುಟ್ಟುತ್ತಲೆ ಪಡೆದವರು ಇಲ್ಲವೇ ಕಠಿಣ ಪರಿಶ್ರಮದಿಂದ ದಕ್ಕಿಸಿಕೊಂಡವರು ಎಂದು ನಂಬಿದ್ದೆವು. ಸಾಹಿತಿಗಳು ಮಾತಾಡಲು ವೇದಿಕೆ ಹತ್ತಿದರೆ ಮೈಯೆಲ್ಲ ಕಿವಿಯಾಗಿ ಕೂರುತ್ತಿದ್ದೆವು.
ಕಾಲ ಬದಲಾಯಿತು. ಮನೆಮನೆಗೂ ಇಂಟರ್ನೆಟ್ಟು ಬಂತು. ಲೋಕದ ವಿಚಾರಗಳೆಲ್ಲ ಬೆರಳ ತುದಿಯಲ್ಲೆ ಸಿಗುವಂತಾಯ್ತು. ಲೇಖಕರ ಪುಸ್ತಕಗಳು ಮಾತ್ರವಲ್ಲದೆ ಖಾಸಗಿ ಬದುಕಿನ ವಿವರಗಳೂ ಸಿಗತೊಡಗಿದವು. ಅವರ ಹೊಸ ಪುಸ್ತಕ ಬರುವ ಸಂಗತಿಯನ್ನು ಪತ್ರಿಕೆಗಿಂತ ಮೊದಲು ಜಾಲತಾಣಗಳು ಜಗಜ್ಜಾಹೀರು ಮಾಡತೊಡಗಿದವು. ಲೇಖಕ ಪುಸ್ತಕದ ಆಚೆಗೂ ನಮಗೆ ದಕ್ಕತೊಡಗಿದ. ಅವನ ಮಾತು ಕೇಳಲು ಸಿಕ್ಕಿತು. ಸಾಹಿತ್ಯ ಪುಟಕ್ಕಿಂತ ಗಾಸಿಪ್ ಪೇಜಿನಲ್ಲಿ ಸುದ್ದಿ ಮಾಡಬಹುದು ಎನ್ನುವುದು ಕೆಲವು ಲೇಖಕರಿಗೆ ಗೊತ್ತಾಯಿತು. ಮುಖ ಕಂಡಲ್ಲೆಲ್ಲ ಮೈಕ್ ಹಿಡಿವ ಚಾನೆಲ್ಲುಗಳು ಹೆಚ್ಚಾಗಿ ಲೇಖಕರು ಬೀದಿಬದಿಯ ಕಸದಿಂದ ಹಿಡಿದು ಪ್ರಧಾನಿಯ ಕೋಟಿನವರೆಗೆ ಎಲ್ಲದರ ಮೇಲೂ ಮಾತಾಡುವ, ಷರಾ ಬರೆಯುವ ಅಧಿಕಾರ ಪಡೆದರು. ಹಾಗೆ ಅಭಿಪ್ರಾಯ ದಾಖಲಿಸುವುದು ತಮ್ಮ ಹಕ್ಕು ಮತ್ತು ಕರ್ತವ್ಯ ಎಂದು ಬಗೆದರು. ಮಾತು ಹೆಚ್ಚಾಗುತ್ತ ಹೋದಂತೆ ಬಹುತೇಕ ಸಾಹಿತಿಗಳ ಬರಹಕ್ಕಿಂತ ಮಾತು ತೀರ ಸರಳವಾಗಿದೆಯಲ್ಲ; ವಾಚ್ಯವಾಗಿದೆಯಲ್ಲ ಎಂಬ ಅನುಮಾನ ಓದುಗರಿಗೆ ಬರತೊಡಗಿತು. ಕತೆ ಕಾದಂಬರಿ ಕವಿತೆಗಳಲ್ಲಿ ನಿಗೂಢವಾದದ್ದೇನೋ ಹೇಳುತ್ತಿದ್ದಾರೆ; ಹಲವು ಅರ್ಥಗಳನ್ನು ಕೆಲವೇ ಸಾಲುಗಳಲ್ಲಿ ಹಿಡಿದಿಟ್ಟಿದ್ದಾರೆ ಅನ್ನಿಸಿದ್ದರೆ ಮಾತಿನಲ್ಲಿ ಅವೆಲ್ಲ ಅಲಂಕಾರವಿಲ್ಲದ ಬೆತ್ತಲೆ ಮೂರ್ತಿಗಳಂತೆ ಕಾಣತೊಡಗಿದವು. ಅವರಲ್ಲಿ ಬಹುತೇಕ ಲೇಖಕರು ಚಿನ್ನದ ಲೇಪ ಬಳಿದ ಇಟ್ಟಿಗೆ ತುಂಡುಗಳೆಂದು ನಮಗೆ ತಿಳಿದದ್ದು ಇಂಥ ನೀರುನೀರಾದ ಹೇಳಿಕೆಗಳಿಂದಲೆ.
ಗಿರೀಶ ಕಾರ್ನಾಡರ ಹಯವದನ, ಯಯಾತಿ, ಅಗ್ನಿ ಮತ್ತು ಮಳೆ, ತಲೆದಂಡ ಮುಂತಾದ ನಾಟಕಗಳನ್ನು ಚಪ್ಪರಿಸಿ ಓದಿದವನು ನಾನು. ಆದರೆ ದತ್ತಪೀಠದ ವಿವಾದದ ಸಂದರ್ಭದಲ್ಲಿ ಅವರು ನಡೆದುಕೊಂಡ ಬಗೆ, ಕೊಟ್ಟ ಹೇಳಿಕೆಗಳು ನನ್ನಲ್ಲಿ ಅವರ ಬಗೆಗೊಂದು ಹೇವರಿಕೆಯನ್ನು ಹುಟ್ಟಿಸಿದವು. ದೇಶದಲ್ಲಿರುವ ನಾಟಕಕಾರರು ಇಬ್ಬರೇ, ಅವರಲ್ಲೊಬ್ಬ ತಾನು ಎಂಬ ಅವರ ಹೇಳಿಕೆ, ಟೌನ್ಹಾಲ್ ಮುಂದೆ ಗೋಮಾಂಸ ಭಕ್ಷಿಸಲು ಅವರು ಕೊಟ್ಟ ಬೆಂಬಲ – ಇವೆಲ್ಲ ನೋಡಿದ ಮೇಲೆ ಅವರನ್ನು ಮತ್ತೆ ಮೊದಲಿನಂತೆ ಆರಾಧಿಸಲಾರೆ. ಬೆಂದಕಾಳೂರು ನಾಟಕವನ್ನು ಮೊದಲಿನ ಪ್ರೀತಿಯಿಟ್ಟು ಓದಲು ಆಗಲೇ ಇಲ್ಲ. ಕಂಬಾರರ ಕಾವ್ಯ, ನಾಟಕ, ಕಾದಂಬರಿಗಳನ್ನು ಮನಮೆಚ್ಚಿ ಓದಿದ್ದೆನೊಮ್ಮೆ. ಆದರೆ ಚಿದಾನಂದ ಮೂರ್ತಿಯಂಥ ಹಿರಿಯಜ್ಜನನ್ನು ಬೀದಿಭಿಕ್ಷುಕನೆಂಬಷ್ಟು ಅಮಾನವೀಯವಾಗಿ ಎಳೆದೊಯ್ದಾಗ ಕಂಬಾರರು ಪ್ರಭುತ್ವದೊಂದಿಗೆ ವೇದಿಕೆ ಮೇಲೆ ನಿಂತು ಇಡೀ ನಾಟಕವನ್ನು ಮೂಕನಾಗಿ ನೋಡಿದರು. ಪ್ರಭುತ್ವವೊಂದು ಪಾಂಡಿತ್ಯದ ಮೇಲೆ ನಡೆಸುತ್ತಿದ್ದ ಆ ದಬ್ಬಾಳಿಕೆಯನ್ನು ಸಾತ್ವಿಕವಾಗಿ ಆದರೆ ಅತ್ಯಂತ ಶಕ್ತಿಯುತವಾಗಿ ಪ್ರತಿಭಟಿಸುವ ಸಾಧ್ಯತೆ ಅವರಿಗೆ ಅಲ್ಲಿ ಇತ್ತು. ಅವರ ಆ ನಡೆ ನೋಡಿದ ಮೇಲೆ ಯಾಕೋ ಶಿವನ ಡಂಗುರ ಆಪ್ಯಾಯಮಾನವಾಗುತ್ತಿಲ್ಲ. ಲಂಕೇಶರ ಕಲ್ಲು ಕರಗುವ ಸಮಯವನ್ನೂ ನಾಟಕಗಳನ್ನೂ ಮೆಚ್ಚಿ ಅಭಿಮಾನಿಯಾಗಿದ್ದೆ ನಾನು. ಸಂಕ್ರಾಂತಿಯಲ್ಲಿ ಮದುವೆಯ ಸನ್ನಿವೇಶದಲ್ಲಿ ನಡೆಯುವ ನಾಟಕೀಯ ಬದಲಾವಣೆಗಳನ್ನು ಓದುಓದುತ್ತ ರೋಮಾಂಚಿತನಾಗಿಬಿಟ್ಟಿದ್ದೆನೊಮ್ಮೆ. ಆದರೆ ಲಂಕೇಶ್ ಬ್ರಾಹ್ಮಣರನ್ನು ಅದೆಷ್ಟು ಉಗ್ರವಾಗಿ ದ್ವೇಷಿಸಿದರೆಂದು ಆಮೇಲೆ ಅವರ ಇತರ ಬರಹಗಳಿಂದ, ಸಭೆಗಳಲ್ಲಿ ಮಾಡಿದ ಭಾಷಣಗಳಿಂದ ತಿಳಿಯಿತು. ಆ ವಿಚಾರಗಳನ್ನು ಓದಿಕೊಂಡ ಮೇಲೆ, ಅವರ ನಾಟಕದಲ್ಲಿ ಎಂದೆಂದೂ ದಲಿತನಿಂದ ಬ್ರಾಹ್ಮಣನಿಗೆ ಮೋಸವಾಗುವ ಘಟನೆ ನಡೆಯದು ಎನ್ನುವುದು ಮನದಟ್ಟಾಯಿತು. ಸಂಕ್ರಾಂತಿ ಓದುವಾಗ ಅನುಭವಿಸಿದ್ದ ರೋಮಾಂಚನ ಜರ್ರನೆ ಇಳಿಯಿತು. ಎಲ್ಲವನ್ನೂ ಇವರು ಅಜೆಂಡಗಳನ್ನಿಟ್ಟುಕೊಂಡೇ ಬರೆಯುತ್ತಾರೆ ಅನ್ನಿಸಿದ ದಿನ ನಾನು ಕುಸಿದುಬಿಟ್ಟಿದ್ದೆ. ಯಾಕೋ ಕಾಣೆ, ತನ್ನ ಕೊನೆಗಾಲದ ಹುರುಳಿಲ್ಲದ ಹೇಳಿಕೆಗಳ ಹೊರತಾಗಿಯೂ ನನಗಿನ್ನೂ ಇಷ್ಟವಾಗುವ ಕತೆಗಾರನಾಗಿ ಉಳಿದಿರುವವರು, ಸದ್ಯಕ್ಕೆ, ಅನಂತಮೂರ್ತಿ ಒಬ್ಬರೇ.
ಕುಂವೀ ಸರ್, ಒಬ್ಬ ಲೇಖಕ ತನ್ನ ಬರಹಗಳಲ್ಲಿ ಮತ್ತು ವ್ಯವಹಾರದಲ್ಲಿ ಎರಡಾಗಿ ಒಡೆಯುವ ದ್ವಂದ್ವದ ಬಗ್ಗೆ ಬಹಳ ವಾಚ್ಯವಾಗಿ ಹೇಳುತ್ತಿದ್ದೇನೆ. ನಾನೇನು ಹೇಳಹೊರಟಿದ್ದೇನೆಂದು ಪ್ರಾಜ್ಞರಾದ ನಿಮಗೆ ತಿಳಿದುಹೋಗಿದೆಯೆಂಬ ನಂಬಿಕೆ ನನ್ನದು. ಬರಹದಲ್ಲಿ ಕೆನೆಗಟ್ಟಿದ ರಸಪಾಕದಂತೆ ಕಾಣುವ ನಮ್ಮ ಲೇಖಕರು ಮಾತು-ಕೃತಿಯಲ್ಲಿ ಮಾತ್ರ ಯಾಕೆ ಲೋಳೆಯಾಗುತ್ತಾರೆ ಎನ್ನುವ ಗೊಂದಲ ನನ್ನನ್ನು ಕಾಡುತ್ತಿದೆ. ನಾವೆಲ್ಲ ದೊಡ್ಡ ಸಾಹಿತಿಯೆಂದು ನಂಬಿದ ನೀವೂ ಕೂಡ ಕಳೆದ ಕೆಲ ವಾರಗಳಿಂದ ತೇಲುಹೇಳಿಕೆಗಳನ್ನು ಕೊಡುತ್ತ ನಮ್ಮ ಭರವಸೆ, ಪ್ರೀತಿಗಳನ್ನು ಆಗ್ರಹದಿಂದ ಕಳೆದುಕೊಳ್ಳುತ್ತಿರುವಂತೆ ತೋರುತ್ತಿದೆ. ತುರ್ತುಪರಿಸ್ಥಿತಿಯ ಕಾಲದ ಕರಾಳ ಆಡಳಿತವನ್ನು ಉಗ್ರವಾಗಿ ಪ್ರತಿಭಟಿಸಿದ ಕಾರಂತರ ಉದಾಹರಣೆ ನಿಮಗೆ ಗೊತ್ತಿಲ್ಲದ್ದೇನಲ್ಲ. ಅವರು ತನ್ನ ಪದ್ಮಭೂಷಣವನ್ನು ಮರಳಿಸಿದ್ದಕ್ಕೆ ಅರ್ಥವೂ ಔಚಿತ್ಯವೂ ಇತ್ತು. ಅದಾಗಿ ನಲವತ್ತು ವರ್ಷಗಳ ನಂತರ ನೀವೀಗ ಮತ್ತೆ ತುರ್ತುಪರಿಸ್ಥಿತಿಯ ಮಾತಾಡುತ್ತಿದ್ದೀರಿ. ನಿಜವಾಗಿಯೂ ನಿಮಗೆ ಅಂಥ ಅನುಭವವಾಗಿದೆಯೆ? ಅಥವಾ ನೀವು ದೇಶದ ಸಾಹಿತಿ-ಕಲಾವಿದರ ಕಣ್ಣಿಗೆ ಮಣ್ಣೆರಚಿ ದಿಕ್ಕು ತಪ್ಪಿಸುವ ವ್ಯವಸ್ಥಿತ ಸಂಚಿಗೆ ತಿಳಿಯದೆ ಬಲಿಯಾಗಿದ್ದೀರಾ? ಡಾ. ಕಲ್ಬುರ್ಗಿ ಕೊಲೆಯನ್ನು ಭೇದಿಸುವಲ್ಲಿ ವ್ಯವಸ್ಥೆ ವಿಫಲವಾಗಿದೆ ಎಂದು ಹೇಳುವ ನೀವು, ಕೆಲವೊಂದು ಜಟಿಲ ಕೇಸುಗಳನ್ನು ಒಂದು ತಿಂಗಳಲ್ಲಿ ಮುಗಿಸುವುದು ಸಾಧ್ಯವಿಲ್ಲ ಎಂದು ಗೊತ್ತಿಲ್ಲದವರೇನಲ್ಲ. ಬೆಂಗಳೂರಂಥ ನಗರದಲ್ಲಿ ಸೈಕಲ್ ಕಳುವಾದರೆ ಹುಡುಕಿ ತೆಗೆಯಲು ಪೋಲೀಸರಿಗೆ ಮೂರು ತಿಂಗಳು ಹಿಡಿಯುವುದುಂಟು. ಹಾಗಿರುವಾಗ ಅತ್ಯಂತ ಚಾಣಾಕ್ಷತನದಿಂದ ನಡೆಸಿರುವ ಕೊಲೆಯ ನಿಗೂಢ ಭೇದಿಸಲು ಇನ್ನೂ ಸ್ವಲ್ಪ ಸಮಯಾವಕಾಶ ಕೊಡುವುದು ಒಳ್ಳೆಯದಲ್ಲವೆ? ನೀವು ಪ್ರಶಸ್ತಿ ಹಿಂದಿರುಗಿಸಲು ಕೊಟ್ಟಿರುವ ಎರಡನೇ ಕಾರಣ – ದಾದ್ರಿ ಪ್ರಕರಣ. ನಿಮ್ಮ ಸ್ತರದ ಒಬ್ಬ ಲೇಖಕ ಈ ಕಾರಣವನ್ನು ಮುಂದಿಟ್ಟುಕೊಂಡು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ವಾಪಸು ಮಾಡುತ್ತಾರೆ ಎನ್ನುವುದನ್ನು ಬಹುಶಃ ಜಾಲತಾಣಗಳಿಲ್ಲದೆ ಹೋಗಿದ್ದರೆ ನಂಬುವುದೇ ಕಷ್ಟವಾಗುತ್ತಿತ್ತು. ಆದರೆ ಜಾಲತಾಣ, ಪತ್ರಿಕೆ, ಚಾನೆಲುಗಳ ಮೂಲಕ ನೀವು ಅಲ್ಲಿಲ್ಲಿ ಹೇಳಿದ ಮಾತುಗಳೆಲ್ಲವೂ ವಿಶ್ಲೇಷಣೆಗೊಳಪಡುತ್ತಿವೆ. ಕುಂವೀ ಎಂಬ ಒಂದು ಕಾಲದ ಅಚ್ಚರಿ ಈಗ ಸಾಹಿತ್ಯಾಸಕ್ತರೆದುರು ಮೇಣದ ಬತ್ತಿಯಂತೆ ಕರಗುತ್ತಿದೆ.
ಇಲ್ಲಿ ಎರಡು ವಿಷಯಗಳನ್ನು ಹೇಳಬೇಕು. ಒಂದು – ನೀವು ಜಾಲತಾಣಗಳಲ್ಲಿ ನಡೆವ ಚರ್ಚೆಗಳ ಬಗ್ಗೆ ಕಿಡಿ ಕಾರಿದ್ದೀರಿ. ಇದು ನೀವೊಬ್ಬರೇ ಅಲ್ಲ; ಬಹುತೇಕ ಎಲ್ಲ ಪಟ್ಟಭದ್ರ ಸಾಹಿತಿಗಳ ಸಮಸ್ಯೆಯೂ ಆಗಿದೆ. ಒಂದು ಕಾಲದಲ್ಲಿ ಪುಸ್ತಕ ಬರೆದು, ಪತ್ರಿಕೆಗಳಿಂದ ಬೇಕುಬೇಕಾದ ಪ್ರಚಾರ ಪಡೆದುಕೊಂಡು, ಸರಕಾರದ ಜೊತೆ ಕೈಜೋಡಿಸಿ ಸವಲತ್ತು-ಸೌಕರ್ಯ ಗಿಟ್ಟಿಸಿ ಒಂದು ನೆಲೆಗೆ ಬಂದಿರುವ ಸಾಹಿತಿಗಳಿಗೆ ಈಗ ಜಾಲತಾಣಗಳ ಸವಾಲುಗಳು ಕಿರಿಕಿರಿ ಮಾಡುತ್ತಿವೆ. ಆದರೆ ಜಾಲತಾಣಗಳಲ್ಲಿ ನಿಮ್ಮನ್ನು ಪ್ರಶ್ನಿಸುತ್ತಿರುವವರು ಯಾವುದೋ ಅನ್ಯಗ್ರಹ ಜೀವಿಗಳಲ್ಲ; ನಿಮ್ಮನ್ನು ಇದುವರೆಗೆ ಓದಿ ಮೆಚ್ಚಿ ಆರಾಧಿಸಿದ ಓದುಗರೇ ಎನ್ನುವುದು ನಿಮಗೆ ಗೊತ್ತಿರಬೇಕು. ಇಷ್ಟಕ್ಕೂ ಸಾಹಿತಿ, ತಾನು ಬರೆದದ್ದನ್ನು ಎಲ್ಲಾ ಜನ ಮೆಚ್ಚಬೇಕು; ತಕರಾರಿಲ್ಲದೆ ಒಪ್ಪಿಕೊಳ್ಳಬೇಕೆಂದು ಯಾಕೆ ಬಯಸಬೇಕು? ಪ್ರಜಾಪ್ರಭುತ್ವದಲ್ಲಿ ಪಕ್ಷ-ಪ್ರತಿಪಕ್ಷ ವ್ಯವಸ್ಥೆ ಇಲ್ಲವೆ? ಸಾಹಿತ್ಯಜಗತ್ತಿನಲ್ಲಿ ನಿಮ್ಮನ್ನು ಪ್ರಶ್ನಿಸುತ್ತಿರುವವರು ಕೂಡ ನಿಮ್ಮನ್ನು ಓದಿಕೊಂಡವರೇ ಆಗಿದ್ದಾರೆ ಎನ್ನುವುದನ್ನು ಮರೆಯಬೇಡಿ. ಒಂದು ಕೃತಿಯನ್ನು ಬರೆದ ಮೇಲೆ ಅದು ಸಾರ್ವಜನಿಕ ಸೊತ್ತು. ಅದನ್ನು ಓದುವ, ನಿರಾಕರಿಸುವ, ಪ್ರತಿಭಟಿಸುವ ಎಲ್ಲ ಹಕ್ಕುಗಳೂ ಓದುಗರಿಗಿವೆ. ಪ್ರಜಾಪ್ರಭುತ್ವದ ಬಗ್ಗೆ ಉದ್ದುದ್ದ ಪ್ರಬಂಧಗಳನ್ನು ಬರೆಯುವ ಸಾಹಿತಿಗಳು ಕೂಡ ತಮ್ಮ ಪುಸ್ತಕಗಳಿಗೆ ಬರುವ ಟೀಕೆಗಳನ್ನು ಸಹಿಸುವುದಿಲ್ಲ ಎನ್ನುವುದು ವಿಪರ್ಯಾಸ. ಸಾಹಿತಿ ನಾಲ್ಕು ಪುಸ್ತಕಗಳನ್ನು ಬರೆದಿಟ್ಟ ಎಂದ ಮಾತ್ರಕ್ಕೆ ಸಂವಿಧಾನಕ್ಕೆ ಅತೀತನಾಗುವುದಿಲ್ಲ. ಉಳಿದೆಲ್ಲ ಸಂದರ್ಭದಲ್ಲೂ ಅವನು ಒಬ್ಬ ಸಾಮಾನ್ಯ ಪ್ರಜೆಯೇ ಅಲ್ಲವೆ? ಹಾಗಾಗಿ ತನ್ನನ್ನು ಜನ ಪ್ರಶ್ನಿಸಿದ ಮಾತ್ರಕ್ಕೆ ಅವನೇಕೆ ಅಧೀರನಾಗಬೇಕು? ಬರೆದಂತೆ ಬದುಕದ ಮತ್ತು ಬದುಕಿನಲ್ಲಿ ಅನಾಚಾರ ಮಾಡಿ ಸಭ್ಯತೆಯ ಸೋಗು ಹಾಕಿಕೊಂಡು ಬರೆವ ಇಮ್ಮಂಡೆ ವ್ಯಕ್ತಿತ್ವಗಳಿಗಷ್ಟೇ ಆ ಭಯ ಇರಬೇಕು. ಹಾಗಾಗಿ ಜಾಲತಾಣದಲ್ಲಿ ಜನ ಮಾತಾಡುತ್ತಾರೆ; ಸಾಹಿತಿಯನ್ನು ಪ್ರಶ್ನಿಸುತ್ತಾರೆ ಎಂಬ ನಿಮ್ಮ ಭಯ ಅಕಾರಣ. ನೆನಪಿಟ್ಟುಕೊಳ್ಳಿ – ನಿಮ್ಮ ಒಂದು ಹೇಳಿಕೆಗೆ ಹತ್ತಾರು ಪತ್ರಿಕೆಗಳಲ್ಲಿ ಸುದ್ದಿಯಾಗಿ ಲಕ್ಷಾಂತರ ಜನರನ್ನು ತಲುಪುವ ಶಕ್ತಿ ಇದೆ. ಆದರೆ ಜಾಲತಾಣಗಳ ಮಾತುಗಳು ಒಂದೆರಡು ಸಾವಿರ ಜನರನ್ನು ತಲುಪಿದರೇ ಹೆಚ್ಚು. ಹಾಗಾಗಿ, ಜನ ನಿಮ್ಮ ಮಾತುಗಳಿಗೆ ಹೆಚ್ಚು ಬೆಲೆ ಕೊಡಬೇಕು ಮತ್ತು ಭಯ ಪಡಬೇಕೇ ಹೊರತು ನೀವು ಜಾಲತಾಣಗಳ ಚರ್ಚೆಗಳಿಗೆ ಹೆದರುವ ಅಗತ್ಯ ಬರಬಾರದು. ಹಾಗೇನಾದರೂ ಆದರೆ ಬಹುಶಃ ನಿಮ್ಮ ವ್ಯಕ್ತಿತ್ವ ಅಷ್ಟು ಕೆಳಗೆ ಕುಸಿದಿದೆ ಎಂದರ್ಥ.
ಎರಡನೆಯದಾಗಿ, ನೀವು ದೇಶದಲ್ಲಿ ಶೇಕಡಾ 2ರಷ್ಟಿರುವವರು ಉಳಿದ ಶೇಕಡಾ 98 ಜನರನ್ನು ಆಡಿಸುತ್ತಿದ್ದಾರೆ; ತಮ್ಮ ಆಹಾರ ಪದ್ಧತಿ, ಸಂಸ್ಕೃತಿಗಳನ್ನು ಹೇರುತ್ತಿದ್ದಾರೆ ಎಂಬ ಮಾತುಗಳನ್ನು ಆಡಿದಿರಿ. ಬಹುಶಃ ಒಬ್ಬ ಸೂಕ್ಷ್ಮ ಮನಸ್ಸಿನ ಓದುಗನಿಗೆ ನಿಮ್ಮ ಮೇಲಿನ ಅಭಿಮಾನ ಇಳಿದುಹೋಗಲು ಈ ಒಂದು ಹೇಳಿಕೆ ಸಾಕು. ಕುಂವೀ ಸಾರ್, ಹಲವು ಕಾದಂಬರಿಗಳನ್ನು ಬರೆದ ಸಾಹಿತಿಗಳಾಗಿರುವ ನೀವು ಸಮಾಜವನ್ನು ತೆರೆದ ಕಣ್ಣು – ಮನಸ್ಸುಗಳಿಂದ ನೋಡುವವರು ಎಂದು ಭಾವಿಸಿದ್ದೆ. ಸಮಾಜದಲ್ಲಿ ಉಳಿದೆಲ್ಲರ ಕಣ್ಣುಗಳಿಗಿಂತಲೂ ಸಾಹಿತಿಯ ಕಣ್ಣು ಚುರುಕಾಗಿರಬೇಕು. ಉಳಿದವರಿಗೆ ಕಾಣದ್ದು ಅವನಿಗೆ ಕಾಣಬೇಕು. ಅದಕ್ಕೇ ಅಲ್ಲವೆ ಸಮಾಜ ಅವನನ್ನು ಮೇಲ್ಸ್ತರದಲ್ಲಿ ಇಟ್ಟಿರುವುದು? ಬ್ರಾಹ್ಮಣರು ಸಮಾಜದ ಉಳಿದವರನ್ನು ಶೋಷಿಸಿದರು ಎಂಬ ಕಾಂಗ್ರೆಸ್ ಪ್ರಣೀತ ಕತೆ ಹಳತಾಗಿ ಅದೆಷ್ಟೋ ಕಾಲವಾಯಿತು. ಜಗತ್ತು ಬದಲಾಗಿದೆ. ಗಣಿತದ ತರ್ಕ ಬಳಸಿ ನೋಡಿದರೂ, ಶೇಕಡಾ 2 ಜನ ಉಳಿದವರನ್ನು ತಮ್ಮ ಅಂಕೆಯಲ್ಲಿಟ್ಟುಕೊಳ್ಳುವುದು ಎಷ್ಟು ಮಾತ್ರಕ್ಕೂ ಸಾಧ್ಯವಿಲ್ಲ. ಹಾಗೇನಾದರೂ ಆದರೆ ಆ ಉಳಿದ ಶೇಕಡಾ 98 ಜನಕ್ಕೆ ಇಂದಿಗೂ ಬುದ್ಧಿ ಬೆಳೆದಿಲ್ಲ; ದೇಶದಲ್ಲಿ ಎಪ್ಪತ್ತು ವರ್ಷ ಮೀಸಲಾತಿ ಮತ್ತಿತರ ಸವಲತ್ತು ಕೊಟ್ಟು ಅವರನ್ನು ಮೇಲೆತ್ತಿದ್ದು ವ್ಯರ್ಥ ಎನ್ನಬೇಕಾಗುತ್ತದೆ. ಇನ್ನು ಬ್ರಾಹ್ಮಣರು ತಮ್ಮ ಆಹಾರ ಸಂಸ್ಕೃತಿಯನ್ನು ಉಳಿದವರ ಮೇಲೆ ಹೇರಿದರು ಎನ್ನುವುದು ಬಹಳ ಎಳಸು ಮತ್ತು ಹಾಸ್ಯಾಸ್ಪದ ಹೇಳಿಕೆ. ಬ್ರಾಹ್ಮಣರ ಓಲೈಕೆ ಮತ್ತು ಮಸಲತ್ತುಗಳಿಗೆ ಮಣಿದು “ಪುಳಿಚಾರು” ನೆಚ್ಚಿಕೊಂಡ ಯಾವನಾದರೂ ಇದ್ದರೆ ಅವನಿಗೆ ನಾನು ಸಾಷ್ಟಾಂಗ ಎರಗುತ್ತೇನೆ! ಬ್ರಾಹ್ಮಣರ ಸಂಸ್ಕೃತಿ ಅಂದರೆ ಏನು? ಪ್ರತಿದಿನ ಸ್ನಾನ ಮಾಡು; ಆರೋಗ್ಯಕರ ಆಹಾರ ಸೇವಿಸು, ಜ್ಞಾನಮಾರ್ಗಕ್ಕೆ ಗೌರವ ಕೊಡು, ಭಾಷಾಶುದ್ಧಿಗೆ ಗಮನ ಕೊಡು – ಇವೇ ಮುಂತಾದವು ತಾನೆ? ಇವುಗಳಲ್ಲಿ ಯಾವುದು ತಮಗೆ ಇಷ್ಟವೋ ಅವನ್ನು ಉಳಿದವರು ಅಳವಡಿಸಿಕೊಂಡರೆ ಏನು ನಷ್ಟ? ದಲಿತರ ಮೇಲೆ ಅತ್ಯಾಚಾರ ಮಾಡಿದ್ದನ್ನು, ಗೋಮಾಂಸ ಸೇವನೆಗೆ ವಿರೋಧ ವ್ಯಕ್ತಪಡಿಸಿದ್ದನ್ನು ಬ್ರಾಹ್ಮಣರ ಪಿತೂರಿ ಎಂದು ಎತ್ತಿಕಟ್ಟುವ ನೀವು ತೆರೆದ ಮನಸ್ಸಿನಿಂದ ಜಗತ್ತನ್ನು ನೋಡಬೇಕಾಗಿದೆ ಅನ್ನಿಸುತ್ತದೆ. ಬೇರೆಯವರ ವಿಷಯ ಬಿಡಿ, ಈ ರಾಜ್ಯದ ಬ್ರಾಹ್ಮಣರಂತೂ ಯಾವ ಸಾಹಿತಿಯನ್ನೂ ತಮ್ಮ ಓದಿನ ವಲಯದಿಂದ ಹೊರಗಿಟ್ಟ ನಿದರ್ಶನಗಳಿಲ್ಲ. ಬ್ರಾಹ್ಮಣ್ಯವನ್ನು ಧಿಕ್ಕರಿಸಿ ಬರೆದ ಅಥವಾ ಮಾತಾಡಿದ ಕುವೆಂಪು, ಅನಂತಮೂರ್ತಿ, ದೇವನೂರು, ಲಂಕೇಶ್ ಮುಂತಾದ ಲೇಖಕರಿಗೂ ಬಹಳ ದೊಡ್ಡ ಬ್ರಾಹ್ಮಣ ಓದುಗ ಬಳಗ ಇತ್ತು ಮತ್ತು ಇದೆ ಎನ್ನುವುದನ್ನು ನೀವು ಮರೆತಂತಿದೆ. ಲೇಖಕ ತನ್ನ ಓದುಗರಿಗೆ ತಲೆಬಾಗಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ ಕೊನೇಪಕ್ಷ ಓದುಗರ ನಿಷ್ಠೆಯನ್ನು ಸಂಶಯಿಸಬಾರದು. ಬ್ರಾಹ್ಮಣ ವರ್ಗ ಉಳಿದೆಲ್ಲರನ್ನೂ ಅಂಕೆಯಲ್ಲಿಟ್ಟುಕೊಂಡಿದೆ ಎನ್ನುವ ನಿಮ್ಮ ವಾದಕ್ಕಿಂತ ಏನನ್ನೂ ಬರೆಯದ ಓದುಗರು ಪ್ರಬುದ್ಧರಿದ್ದಾರೆ; ನೀವು ಜರೆಯುವ ಜಾಲತಾಣಗಳಲ್ಲಿ ಎಷ್ಟೆಷ್ಟೋ ಸಾಹಿತಿಗಳ ಬರಹಗಳಿಗಿಂತ ಹೆಚ್ಚಿನ ಮೌಲಿಕ ಚರ್ಚೆ-ಸಂವಾದಗಳು ನಡೆಯುತ್ತವೆ ಎನ್ನುವುದನ್ನು ತಾವು ತಿಳಿಯಬೇಕಾಗಿದೆ.
ಕುಂವೀ ಸಾರ್, ಅನಂತಮೂರ್ತಿಗಳನ್ನು ನೆನೆಸಿಕೊಳ್ಳಿ. ಜೀವನದ ಬಹುಭಾಗವನ್ನು ಮೇರುಲೇಖಕನಂತೆ ಕಳೆದ ಮೂರ್ತಿಯವರು ಕೊನೆಯ ಎರಡು ವರ್ಷಗಳು ಮಾತ್ರ ಕಾಂಗ್ರೆಸ್ ಏಜಂಟನಂತೆ ನಡೆದುಕೊಂಡರು. ಮೋದಿ ಪ್ರಧಾನಿಯಾದರೆ ದೇಶ ಬಿಡುತ್ತೇನೆಂಬ ಹೇಳಿಕೆ ಕೊಟ್ಟು ಓದುಗರ ಕಣ್ಣಲ್ಲಿ ಹಗುರವಾದರು. ಈ ದೇಶಕ್ಕೆ ಅದ್ಯಾವುದೋ ಗಂಡಾಂತರ ಕಾದಿದೆ ಎಂಬಂತೆ ವರ್ತಿಸಿದರು. ದೇಶದ ಇತಿಹಾಸವನ್ನು ಓದಿರುವ ಯಾವನಿಗಾದರೂ ಇದು ಅತ್ಯಂತ ಕ್ಷುಲ್ಲಕ ಮತ್ತು ಹಾಸ್ಯಾಸ್ಪದ ಭಯ ಎನ್ನುವುದು ತಿಳಿಯುತ್ತಿತ್ತು. ಪ್ರಜಾಪ್ರಭುತ್ವ ಹಿಂದೆಂದಿಗಿಂತ ಇಂದು ಗಟ್ಟಿಯಾಗಿದೆ. ನೂರಿಪ್ಪತ್ತು ಕೋಟಿ ಜನರಿಗೆ ಮಂಕುಬೂದಿ ಎರಚಿ ನಾಯಕನಾಗುವುದು ಯಾರಿಗೂ ಸಾಧ್ಯವಿಲ್ಲ. ಜನ ಪ್ರಶ್ನಿಸುವ ಮನೋವೃತ್ತಿ ಬೆಳೆಸಿಕೊಂಡಿದ್ದಾರೆ. ನಾವು ಇದುವರೆಗೆ ಭೀಮಾಕಾರದ ಪ್ರಭೃತಿಗಳೆಂದು ಊಹಿಸಿದ್ದ ವ್ಯಕ್ತಿತ್ವಗಳು ಎಷ್ಟು ಟೊಳ್ಳು, ಪೊಳ್ಳು ಎನ್ನುವುದು ದಿನನಿತ್ಯ ಬಟಾಬಯಲಾಗುತ್ತಿದೆ. ಸಾಹಿತಿಗಳೆಂಬ ಮೇರುಪರ್ವತಗಳು ಅಂದುಕೊಂಡಷ್ಟು ಎತ್ತರದವುಗಳಲ್ಲ ಎನ್ನುವುದು ನಮಗೆ ಗೊತ್ತಾಗಿದೆ. ಬರೆದ ಪುಸ್ತಕಕ್ಕೂ ಮಾಡುವ ಕಾರ್ಯಕ್ಕೂ ಸಂಸ್ಕೃತದಲ್ಲಿ “ಕೃತಿ” ಎಂದೇ ಹೆಸರು. ಎಷ್ಟು ಅರ್ಥಪೂರ್ಣ ಶಬ್ದ ಅದು! ಅದರೆ ನಮ್ಮಲ್ಲಿ ಬಹುತೇಕ ಲೇಖಕರ ಬರಹವೇ ಬೇರೆ, ಬಾಳ್ವೆಯೇ ಬೇರೆ ಅಲ್ಲವೆ? ಇಂಥ ಒಡಕಲು ವ್ಯಕ್ತಿತ್ವಗಳನ್ನು ನಾವು ಇನ್ನೂಇನ್ನೂ ಯಾವ ಪುರುಷಾರ್ಥಕ್ಕಾಗಿ ಆರಾಧಿಸಬೇಕು? ಸಾಹಿತಿ – ಒಂದಷ್ಟು ಪುಸ್ತಕಗಳನ್ನು ಬರೆದಿದ್ದಾನೆ ಎನ್ನುವುದನ್ನು ಬಿಟ್ಟರೆ ಯಾವ ಕಾರಣಕ್ಕೆ ಉಳಿದವರಿಗಿಂತ ಹೆಚ್ಚಿನವನು? ಜನರ ನೋವುನಲಿವುಗಳನ್ನೇ ಕತೆಗಳಲ್ಲಿ ತಂದ ಮತ್ತು ಆ ಕಾರಣಕ್ಕಾಗಿ ಇದುವರೆಗೆ ನಮ್ಮವರಾಗಿದ್ದ ನೀವು, ಈಗ ನಿಮ್ಮ ಬರಹ ಮತ್ತು ಬದುಕುಗಳೂ ಬೇರೆಬೇರೆ ಎಂದು ತೋರಿಸುವ ಮೂಲಕ ನಮ್ಮ ಮನಸ್ಸುಗಳಿಂದ ದೂರಾಗುತ್ತಿದ್ದೀರಿ. ಬ್ರಾಹ್ಮಣರನ್ನು ಗೇಲಿ ಮಾಡಿಕೊಂಡು ನಗುವ; ಓರಗೆಯ ಲೇಖಕರನ್ನು “ಅನುಕೂಲಕ್ಕೆ ತಕ್ಕಂತೆ ಸೆರಗು ಹಾಸುವ ದೇವದಾಸಿಯರು” ಎಂದು ಮೂದಲಿಸುವ ಮತ್ತು ದೂರದ ದಾದ್ರಿಯಲ್ಲಿ ನಡೆದ ಒಂದು ಕೊಲೆಗಾಗಿ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಹಿಂದಿರುಗಿಸುತ್ತೇನೆನ್ನುವ ಕುಂವೀ ಸಾರ್, ತನ್ನ ಸಂಗಡಿಗ ಲೇಖಕರನ್ನೇ ಮರ್ಯಾದೆಯಿಂದ ಕಾಣದವನು ತನ್ನ ಓದುಗರ ಮೇಲೆ ಅದೆಷ್ಟು ಪ್ರೀತಿ, ಅಭಿಮಾನ ಇರಿಸಿರಬಹುದು ನೀವೇ ಹೇಳಿ.
ತೀರಿಹೋದರೂ ಹಲವು ವರ್ಷಗಳ ಕಾಲ ಉಳಿಯುವ ಸಾಹಿತ್ಯದಿಂದಾಗಿ ಲೇಖಕ ದೊಡ್ಡವನಾಗಬೇಕು. ತನ್ನ ಕೊಳಕು ಮನಸ್ಥಿತಿಯನ್ನು ಮಾತಿನಲ್ಲಿ ಹೊರಹಾಕಿ ಬದುಕಿರುವಾಗಲೇ ಅಪ್ರಸ್ತುತನಾಗಬಾರದು. ಭಗವಾನ್ ಜೊತೆ ದಯವಿಟ್ಟು ನಿಮಗೆ ಸ್ಪರ್ಧೆ ಬೇಡ.
ಇಂತಿ ನಿಮ್ಮ ಓದುಗ.
Facebook ಕಾಮೆಂಟ್ಸ್