X
    Categories: ಅಂಕಣ

ಗೋಮಾಂಸ ಭಕ್ಷಣೆ ಮತ್ತು ನಮ್ಮ ರಾಜಕೀಯ

FILE - In this Oct. 16, 2012 file photo, a pair of Jersey cows lean on each other at the Goodrich farm in Danville, Vt. Officials are optimistic about the outlook for the state's dairy industry in 2014, with relatively strong milk prices, growth in the number of in state processors and increasing exports of U.S. dairy products. (AP Photo/Toby Talbot, File)

ಅವರು ಹೇಳುತ್ತಿದ್ದಂತೆ ನನ್ನ ಕಣ್ಣುಗಳೇ ತೇವಗೊಂಡಿದ್ದವು! ಒಂದು ರೀತಿಯ ಸೂತಕದ ಭಾವ ಅವರಲ್ಲಡಗಿತ್ತು. ಅದೇಗೆ ಸಾಂತ್ವಾನ ಹೇಳುವುದೆಂದೇ ನನಗೆ ಗೊತ್ತಾಗಲಿಲ್ಲ.  ಅಂದು ಮಾತನಾಡುತ್ತಾ ಮಾತನಾಡುತ್ತ ಅತ್ತೇ ಬಿಟ್ಟಿದ್ದರವರು. ನೀವೇ ಹೇಳಿ ಕಳೆದ ಹನ್ನೊಂದು ವರುಷಗಳಿಂದ ಮನೆಮಗನಂತೆ ಸಾಕಿದ್ದ ಮುದ್ದಿನ ಗೋವು ರಾತ್ರೋ ರಾತ್ರಿ ಇಲ್ಲವಾಗುತ್ತೆ ಎಂದಾದರೆ, ಕಟುಕನ ಕತ್ತಿಗೆ ಬಲಿಯಾಗಿದೆ ಎಂದು ಗೊತ್ತಾದರೆ ಹೇಗಾಗಿರಬೇಡ ಅವರಿಗೆ!? ಸಾಕಿದ ಕೋಳಿಯನ್ನು ನರಿಯೋ ನಾಯಿಯೋ ಹಿಡಿದರೇನೇ ಕರುಳು ಚುರ್ರು ಎನ್ನುತ್ತೆ ಸಾಕಿದವರಿಗೆ. ಅಂತಹುದರಲ್ಲಿ ಹೆಸರಿಡಿದು ಕರೆಯುವಾಗ ‘ಅಂಬಾ’ ಎಂದು ಊಂಗುಡುವ ಗೋವನ್ನು ಕಡಿದು ಮಾಂಸ ಮಾಡಿದರೆ ಪರಿಸ್ಥಿತಿ ಹೇಗಾಗಬೇಡ? ಹೌದು, ನಾನಿಲ್ಲಿ ಹೇಳುತ್ತಿರುವುದು ಕತೆಯನ್ನಲ್ಲ. ಮಂಗಳೂರಿನ ಪಟ್ಟಣ ಪ್ರದೇಶದಲ್ಲೇ ಹತ್ತಿಪ್ಪತ್ತು ಗೋವುಗಳನ್ನು ಸಾಕಿಕೊಂಡು ಋಷಿ ಜೀವನ ಸಾಗಿಸುತ್ತಿರುವ ನನ್ನ ಆಪ್ತರೊಬ್ಬರು ಹರಿಸಿದ ಕಣ್ಣೀರ ವ್ಯಥೆಯನ್ನು. ಹಾಂ ಅಂದ ಹಾಗೆ ಅವರ ಹಟ್ಟಿಯಿಂದ ಗೋವು ಕಳ್ಳತನ ಆಗುತ್ತಿರುವುದು ಇದು ಮೊದಲೇನಲ್ಲ. ಕಳೆದ ಎರಡು ವರ್ಷದ ಅವಧಿಯಲ್ಲಿ ಇದು ನಾಲ್ಕನೆಯ ಬಾರಿಯಂತೆ! ಅರೆ, ಕಂಪ್ಲೇಂಟ್‍ ಕೊಟ್ಟಿಲ್ಲವೇ ನೀವು ಎಂದರೆ, ಅಯ್ಯೋ ಈ ಮೊದಲ ಪ್ರಕರಣಗಳಲ್ಲಿ ಕೊಟ್ಟಿದ್ದೆ ಆದರೆ ಪ್ರಯೋಜನ ಮಾತ್ರ ಶೂನ್ಯ. ಎಂದು ನಿರಾಶರಾಗುತ್ತಾರವರು!

ಗೋವು ಕಳ್ಳತನ ಹಾಗೂ ಗೋ ಮಾಂಸದ ಬಗ್ಗೆ ಚರ್ಚೆ ತುಸು ಜಾಸ್ತಿಯಾಯಿತೇನೋ ಅಂದುಕೊಂಡಿದ್ದ ನನಗೆ ಮೇಲಿನ ಘಟನೆಯನ್ನು ನೋಡಿದಾಗ ಸಂಪೂರ್ಣ ಸೋತ ಅನುಭವವಾಯಿತು! ಎಲ್ಲೋ ದೂರದ ಉತ್ತರಪ್ರದೇಶದಲ್ಲಿ ಅದ್ಯಾರೋ ಒಬ್ಬ ಗೋ ಮಾಂಸ ಶೇಖರಿಸಿದ್ದ ಎಂದು ತಿಳಿದು ಜನ ಮುಗಿಬಿದ್ದು ಆತನನ್ನು ಹೊಸಕಿ ಹಾಕಿದರು ಎಂದಾದಾಗ ನಾವೆಲ್ಲ ಅಯ್ಯೋ ಪಾಪ ಎಂದು ಕಣ್ಣೀರು ಹಾಕಿದೆವು. ಗೋವು ಮಾಂಸ ನಮ್ಮ ಆಹಾರದ ಹಕ್ಕು,  ತಿಂದೇ  ತಿನ್ನುವೆವು ಎಂದು ಚೀರಾಟ ಬೇರೆ ನಡೆಸಿದೆವು! ಆದರೆ ಈ ರೀತಿಯ ಹತ್ಯೆ ಮಾಡಬೇಕಾದರೆ ಗೋಕಳ್ಳ ಸಾಗಾಣೆ, ಗೋಹತ್ಯೆಯ ವಿಚಾರದಲ್ಲಿ ಆ ಮನಸುಗಳು ಅದೆಷ್ಟು ಕದಡಿಬರಬಹುದು, ನೊಂದಿರಬಹುದು ಎಂಬುದನ್ನು ನಾವ್ಯಾರೂ ಊಹಿಸುವ ಗೋಜಿಗೆ ಹೋಗಿಲ್ಲ! ಅಸಲಿಗೆ ಆ ಕೊಲೆಯಾದವನ ಪಕ್ಕದ ಮನೆಯ ಮುದ್ದಿನ ಹಸುವೊಂದು ಒಂದೆರಡು ದಿನಗಳ ಹಿಂಧೆ ಕಾಣೆಯಾಗಿತ್ತು ಎಂಬ ಸತ್ಯ ರಾಷ್ಟ್ರವ್ಯಾಪಿ ಸುದ್ದಿಯಾಗಲೇ ಇಲ್ಲ! ಅಜಂ ಖಾನನಂತಹ ಮಂತ್ರಿಯ ಮನೆಯ ಗೋವುಗಳೇ ಅಲ್ಲಿ ಕಾಣೆಯಾಗುತ್ತವೆ ಎಂದಾದರೆ ಅಲ್ಲಿನ ಪರಿಸ್ಥಿತಿ ಅದೆಷ್ಟು ವಿಷಮ ಇರಬಹುದು ಎಂಬುದನ್ನು ನಾವೆಲ್ಲ ಯೋಚಿಸಬೇಕಿದೆ! ಇದು ಒಂದೆರಡು ಕಡೆಯ ವಿಚಾರವಲ್ಲ. ಬಹುತೇಕ ಕಡೆ ಇಂದು ಇಂತಹುದೇ ಪರಿಸ್ಥಿತಿಯಿದೆ. ಗೋಮಾಂಸ ಹಾಗೂ ಚರ್ಮಕ್ಕಿರುವ ಬೇಡಿಕೆಯು ಇಂದು ಗೋವನ್ನು ನಿರ್ಭಯವಾಗಿ ಕತ್ತರಿಸುವಂತೆ ಮಾಡಿದೆ. ಯಾವ ಕಾನೂನು, ಯಾವ ಪ್ರಾಣಿ ದಯಾ ಸಂಘಗಳು ಕೂಡ ಇದರ ನೆರವಿಗೆ ಬಂದಂತೆ ಕಾಣುತ್ತಿಲ್ಲ!

ಗೋಕಳ್ಳತನ, ಗೋಮಾಂಸ ಭಕ್ಷಣೆಯ ವಿಚಾರ ಇದೀಗ ರಾಷ್ಟ್ರವ್ಯಾಪಿದ್ದು! ಒಂದೆಡೆ ತಿನ್ನಬಾರದು ಎಂಬ ಕೂಗಾದರೆ ಇನ್ನೊಂದೆಡೆ ತಿಂದೇ ತಿನ್ನುವೆವು ಎಂಬ ಹೋರಾಟ. ಇವೆರಡರ ಮಧ್ಯೆ ಕಳ್ಳತನದಿಂದ ಸಾಗಾಣೆಯಾಗುತ್ತಿರುವ ಲೆಕ್ಕವಿಲ್ಲದಷ್ಟು ಗೋವುಗಳು! ಕರ್ನಾಟಕದಲ್ಲಂತೂ ಸದ್ಯ ಎರಡು ವರ್ಷ‍ಗಳಿಂದ ಗೋಕಳ್ಳಸಾಗಾಣೆ ನಿರ್ಭಯವಾಗಿ ನಡೆಯುತ್ತಿದೆ. ಗೋವನ್ನು ರಕ್ಷಿಸುವ ಬದಲು ಅಕ್ರಮ ಸಾಗಾಣೆಗಾರರನ್ನೇ ರಕ್ಷಿಸುವ ಕಾಯಕಕ್ಕೆ ನಮ್ಮ ಸರಕಾರ ಇಳಿದಂತಿದೆ! ತುಂಬಲಾರದ ವಾಹನಗಳಲ್ಲಿ ಅಮಾನುಷವಾಗಿ ತುಂಬಿಸಿಕೊಂಡು, ಬಾಲಕತ್ತರಿಸಿ ಖಾರಪುಡಿಗಳನ್ನು ಹಾಕಿಕೊಂಡು ಹಿಂಸಾತ್ಮಕವಾಗಿ ಗೋವುಗಳನ್ನು ಹೊರರಾಜ್ಯಗಳಿಗೆ ಸಾಗಾಟ ನಡೆಸುತ್ತಿರುವುದು ಇಂದು  ಎಲ್ಲರಿಗೂ ತಿಳಿದಿರುವಂತಹುದು. ಆದರೆ ಅವುಗಳ್ಯಾವುವೂ ನಮ್ಮ ಕಾನೂನಿನ ಶಿಕ್ಷೆಯ ಪರಿಧಿಗೆ ಬಂದೇ ಇಲ್ಲ! ಬದಲಾಗಿ ಇಂತಹುಗಳನ್ನು ತಡೆದು ಪೋಲೀಸರಿಗೆ ಒಪ್ಪಿಸುತ್ತಿರುವ ಯುವಕರನ್ನು ಮಾತ್ರ ನೈತಿಕ ಪೋಲೀಸಗಿರಿ ಎಂದು ಜರೆದು ಜೈಲು ಸೇರಿಸುವ ಕೆಲಸ ನಡೆಯುತ್ತಿದೆ! ಅವರ ಕೊಲೆಯೂ ನಡೆಯುತ್ತದೆ!! ಹಸು ಕಳೆದುಕೊಂಡವನನ್ನು, ಈ ವಿಚಾರದಲ್ಲಿ ಪ್ರಾಣ ಕಳೆದುಕೊಂಡವರನ್ನೆಲ್ಲಾ ಇಲ್ಲಿ ಅದ್ಯಾರೂ ಲೆಕ್ಕಕ್ಕಿಟ್ಟಿಲ್ಲ!!

ಒಂದೆಡೆಯಲ್ಲಿ ಬಡವ, ರೈತ ಎಂದೆನ್ನುತ್ತಾ ಕಾಲಕಳೆಯುತ್ತಿರುವ ನಮ್ಮ ಸರಕಾರಕ್ಕೆ ಇದೇ ರೈತನ ಬೆನ್ನೆಲುಬಿನಂತಿರುವ ಗೋವುಗಳನ್ನು ರಕ್ಷಿಸಬೇಕೆಂದು ಅದ್ಯಾಕೆ ತಲೆಗೆ ಹೋಗುತ್ತಿಲ್ಲ!? ಅಲ್ಪಸಂಖ್ಯಾತ ಮತಗಳ ಮೇಲಣ ಮಮತೆಯೇ!? ಇರಲಿ ಅದನ್ನೇ ಒಪ್ಪೋಣ ಆದರೆ ಕನಿಷ್ಟ ಅಕ್ರಮ ಕಸಾಯಿಖಾನೆಗಳ ಬಗ್ಗೆ, ಗೋಕಳ್ಳ ಸಾಗಾಣೆಯ ಬಗ್ಗೆಯಾದರೂ ಒಂದು ಸ್ಪಷ್ಟ ನಿಲುವನ್ನು ಹೊಂದಬಹುದಲ್ಲವೇ!? ಸರಕಾರ ಕೊನೆಪಕ್ಷ ಈ ನಿಟ್ಟಿನಲ್ಲಿ ಕಾರ್ಯೋನ್ಮಖವಾಗುತ್ತಿದ್ದರೂ ಪರಿಸ್ಥಿತಿ ಈ ಮಟ್ಟದಲ್ಲಿ ಬಿಗಡಾಯಿತುಸುತ್ತಿರಲಿಲ್ಲ.

ಕಾನೂನುಗಳು ಏನನ್ನುತ್ತವೆ?

ಈ ಮೊದಲು The Karnataka Prevention of Cow Slaughter and Cattle Preservation Act, 1964  ಎಂಬ ಕಾಯ್ದೆ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿತ್ತು. ಇದರ ಪ್ರಕಾರ ಇಲ್ಲಿ.  ಹಸು, ಕರು, ಎಮ್ಮೆ ಹಾಗೂ ಎಮ್ಮೆ ಕರುಗಳ ಹತ್ಯೆ ಸಂಪೂರ್ಣ ನಿಷೇಧ ನೀಡಲಾಗಿತ್ತು. ಎತ್ತು ಹೋರಿ ಕೋಣಗಳನ್ನು ವಧೆ ಮಾಡಬಹುದಾದರೂ ಅವುಗಳು 12ವರ್ಷಕ್ಕಿಂತ ಮೇಲ್ಪಟ್ಟಿರಬೇಕು ಹಾಗು ಪಶು ಸಂಗೋಪನಾ ಅಧಿಕಾರಿಯಿಂದ “fit for slaughter” ಎಂಬ ಸರ್ಟಿಫಿಕೇಟ್‍ ಹೊಂದಿರಬೇಕು. ಆದರೆ ಯಾವುದೇ ಕಾರಣಕ್ಕೂ ಹಸು ಕರುಗಳಗಳನ್ನು ಮಾಂಸಕ್ಕಾಗಿ ವಿಕ್ರಯಗೊಳಿಸುವುದಾಗಲಿ ಹೊರರಾಜ್ಯಗಳಿಗೆ ಸಾಗಿಸುವುದಾಗಲಿ ಈ ಕಾನೂನಿನ ಅಡಿಯಲ್ಲಿ ಸಂಪೂರ್ಣ ನಿಷೇಧಿಸಿಲಾಗಿದೆ. ಮುಂದೆ 2010ರಲ್ಲಿ (ಮುಖ್ಯಮಂತ್ರಿ ಯಡಿಯೂರಪ್ಪರ ಕಾಲದಲ್ಲಿ) ಈ ಕಾನೂನಿಗೆ ಮತ್ತಷ್ಟು ತಿದ್ದುಪಡಿಗಳನ್ನು ತಂದು ಜಾನುವಾರುಗಳ ಮಾರಾಟ, ಮಾಂಸ ಮಾರಾಟ, ಮಾಂಸ ಶೇಖರಣೆ ಹೀಗೆ ಎಲ್ಲದರ ಮೇಲೂ ನಿಷೇಧ ವಿಧಿಸಿ ಗೋವು ಸಂರಕ್ಷಣೆಗೆ ಮತ್ತಷ್ಟು ಆದ್ಯತೆ ನೀಡಿತ್ತು. ಹಾಗೇನೆ ಈ ಕಾನೂನು ಮುರಿದವರಿಗೆ ದಂಡದ ಜೊತೆಗೆ 7ವರ್ಷಗಳ ಜೈಲು ಶಿಕ್ಷೆಯೂ ಇತ್ತು.  ಆದರೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್‍ ಸರಕಾರ ಆಡಳಿತಕ್ಕೆ ಬಂದ ಹೊಸದರಲ್ಲೇ ಈ ಕಾನೂನನ್ನು ಹಿಂಪಡೆದುಕೊಂಡು ಋಣ ಸಂದಾಯ ಮಾಡಿತು! ಈ ಅವಸರದ ತೀರ್ಮಾನದ ಹಿಂದಿನ ವಾಸ್ತವ ಏನೆಂಬುದನ್ನು ನಾವೆಲ್ಲ ತಿಳಿಯಬೇಕಿದೆ.

ಇಂದು ಗೋವುಗಳ ರಕ್ಷಣೆಯ ವಿಚಾರದಲ್ಲಿ ನಡೆಯುತ್ತಿರುವುದು ಅಕ್ಷರಷಃ ಕೀಳು ಮಟ್ಟದ ರಾಜಕೀಯವೇ! ಇಲ್ಲವೆಂದಾದರೆ ಗೋ ಸಂರಕ್ಷಣೆಯ ಬಗ್ಗೆ ಸಂವಿಧಾನದಲ್ಲೇ ಪ್ರಸ್ತಾಪವಿದ್ದರೂ, ರಾಷ್ಟ್ರಪಿತನೆನಿಸಿದ್ದ ಮಹಾತ್ಮಗಾಂಧಿ ಕೂಡ ಗೋಹತ್ಯೆಗೆ ಬಲವಾಗಿ ವಿರೋಧ ವ್ಯಕ್ತಪಡಿಸಿದ್ದರೂ ಗೋಹತ್ಯೆ ನಿಷೇಧವೇಕೆ ಇಲ್ಲಿ ಸಾಧ್ಯವಾಗುತ್ತಿಲ್ಲ!? ಈ ನೆಲದಲ್ಲಿ ಉಪಯೋಗಕ್ಕೆ ಬಾರದ ಹುಲಿಯನ್ನು ಕೊಂದರೂ ಜೈಲೂಟವಿದೆ! ಹುಲಿ ಸಂತತಿಯ ರಕ್ಷಣೆಗೆ ದೊಡ್ಡ ಮಟ್ಟದ ಧ್ವನಿಯಿದೆ. ಮದವಿಡಿದ ಆನೆ ಮಾವುತನನ್ನು ಸಾರ್ವಜನಿಕವಾಗೇ ತುಳಿಯುತ್ತಿದ್ದರೂ ನಿಂತು ನೋಡಬೇಕಾದ ಪರಿಸ್ಥಿತಿಯಿದೆ! ಜಿಂಕೆ, ಚಿರತೆ, ಕಾಡು ಹಂದಿ, ಮುಳ್ಳು ಹಂದಿ ಅಂತ ಯಾವ ಪ್ರಾಣಿಯನ್ನು ಕೊಂದರೂ ಪ್ರಾಣಿ ಬೇಟೆ ಎಂದು ಕೇಸು ಜಡಿದು ಕಂಬಿ ಎನಿಸಲಾಗುತ್ತದೆ ಇಲ್ಲಿ!! ಅಷ್ಟೇ ಏಕೆ, ಬೀದಿಯಲ್ಲಿ ಅಡ್ಡಾಡುವ ನಾಯಿಗಳನ್ನು ಕೊಂದರೂ ಗಟ್ಟಿಯಾಗಿ ಊಳಿಡುವ ವಿವಿಧ ಪ್ರಾಣಿ ದಯಾ ಸಂಘಗಳು ನಮ್ಮಲ್ಲಿ ಅಸ್ಥಿತ್ವದಲ್ಲಿದೆ! ಅವೆಲ್ಲವುಗಳಿಗೆ ನಮ್ಮ ಕಾನೂನಿನ ರಕ್ಷಾ ಬಲವೂ ಇದೆ. ಅದ್ಯಾವುದೋ ಕೆಟ್ಟ ಗಳಿಗೆಯಲ್ಲಿ ಕೃಷ್ಣಾ ಮೃಗವನ್ನು ಬೇಟೆಯಾಡಿದ  ಸಲ್ಮಾನ್‍ ಖಾನ್‍ನನ್ನು ಇಂದು ಕೂಡ ವಿಚಾರಿಸುತ್ತಿರುವುದು ಇದೇ ನಮ್ಮ ಕಾನೂನು! ಆದರೆ ಎಂಥಾ ವಿಪರ್ಯಾಸ ನೋಡಿ, ಎಲ್ಲಾ ರೀತಿಯಲ್ಲೂ ಉಪಯೋಗಕ್ಕೆ ಬರುವ, ಹಾಲು ಬೆಣ್ಣೆ ತುಪ್ಪ ಅಂತ ನಮ್ಮ ಮನೆಮಕ್ಕಳನ್ನು ಸಾಕುತ್ತಿರುವ, ನಾಡಿನ ಕೃಷಿಕನ ಬೆನ್ನೆಲುಬಿನಂತಿರುವ, ಸ್ವತಃ ದೇವತಾ ಸ್ವರೂಪಿ ಎಂದು ಬಹುಸಂಖ್ಯಾತರಿಂದ ಆರಾಧಿಸಲ್ಪಡುವ ಗೋವನ್ನು ಕೊಲ್ಲುವಾಗ ಮಾತ್ರ ಇಲ್ಲಿ ಅದ್ಯಾವ ಕಾನೂನುಗಳೂ ಅಡ್ಡಬರುವುದಿಲ್ಲ! ಯಾವ ಪ್ರಾಣಿ ದಯಾ ಸಂಘಗಗಳು ಕೂಡ ಹೋರಾಟ ಚೀರಾಟ ನಡೆಸುವುದಿಲ್ಲ!! ಅಸಲಿಗೆ ಗೋವನ್ನು ಕೊಲ್ಲುತ್ತೇವೆ, ಮಾಂಸ ಮಾಡಿ ತಿನ್ನುತ್ತೇವೆ ಎನ್ನುವುದೇ ಇಲ್ಲಿ ವಿಚಾರವಾದ! ಪ್ರಖರ ಜಾತ್ಯಾತೀತವಾದ! ಗೋ ಸಂರಕ್ಷಣೆಗೆ ಇಳಿಯುವವನೇ ಇಲ್ಲಿ ದೊಡ್ಡ ಕೋಮುವಾದಿ!!

ಒಂದು ಕೃಷಿ ಆಧಾರಿತ ದೇಶದಲ್ಲಿ ಆಡು ಕುರಿ ಕೋಳಿ ‘ಜೀವಕ್ಕೆ’ ಇರುವ ಬೆಲೆ ಒಂದು ಹಸುವಿಗೆ ಇಲ್ಲವಾದದ್ದು ವಿಪರ್ಯಾಸವಲ್ಲವೇ!? ಅಸಲಿಗೆ ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದೆ. ಆದರೆ ಅದ್ಯಾವುದರಿಂದಲೂ ಗೋವು ನಿರ್ಭೀತವಾಗಿಲ್ಲ. ಕೋಳಿ, ಕುರಿ ಮುಂತಾದ ಪ್ರಾಣಿಗಳನ್ನು ಸಾಕುವುದು ಮಾಂಸಕ್ಕೆಂದಷ್ಟೇ.. ಆದರೆ ಗೋವನ್ನು ಅದ್ಯಾರೂ ಮಾಂಸಕ್ಕಾಗಿ ಇಲ್ಲಿ ಸಾಕುವುದಿಲ್ಲ. ಆದರೂ ಅದೇಗೆ ಗೋಮಾಂಸ ಆಹಾರದ ಹಕ್ಕಾಯಿತು ಇಲ್ಲಿ!? ಮೇಯಲು ಬಿಟ್ಟಿರುವ, ಹಟ್ಟಿಗಳಲ್ಲಿ ಕಟ್ಟಿರುವ ಗೋವುಗಳನ್ನು ಕೂಡ ಇಂದಿನ ನಮ್ಮ ಸರಕಾರ ರಕ್ಷಿಸಲು ಹಿಂದೇಟು ಹಾಕುತ್ತದೆಯೆಂದಾದರೆ ಅದು ಯಾರನ್ನು ಓಲೈಸುವ ಸಲುವಾಗಿ!? ಎಲ್ಲಕಿಂತ ಹೆಚ್ಚಾಗಿ ಗೋ ಮಾಂಸ ಅಲ್ಪಸಂಖ್ಯಾತರ ಹಾಗೂ ದಲಿತರೆಲ್ಲರ ಹಕ್ಕು ಎಂದು ನಮ್ಮ ‘ಚಿಂತಕರು’ ಹೇಳುವುದು ಅದ್ಯಾವ ನೆಲೆಗಟ್ಟಿನ ಆಧಾರದ ಮೇಲೆ!? ಪ್ರಜಾಪ್ರಭುತ್ವದಲ್ಲಿ ಬಹುಮತಕ್ಕೆ ಬೆಲೆ ಇರಬೇಕು ಎಂದೆನ್ನುತ್ತೇವೆ ಆದರೆ ಇಂತಹ ಸೂಕ್ಷ್ಮ ವಿಚಾರಗಳು ಬಂದಾಗ ಮಾತ್ರ ಬಹುಮತದ ವಿಚಾರಗಳು ನಗಣ್ಯ! ಅವೆಲ್ಲಾ ಕೋಮುವಾದ! ದೇಶ ಇಂದು ಅಭದ್ರವಾಗಿರುವುದು, ಹಿಂಸಾತ್ಮಕವಾಗಿರುವುದು ಇದೇ ಕಾರಣಕ್ಕೆ.

ಕೊನೆ ಮಾತು: ನಾಯಿಯ ರಕ್ಷಣೆಯ ಬಗ್ಗೆ ಮಾತನಾಡಿದರೆ ಆತ ಪ್ರಾಣಿ ರಕ್ಷಕ, ಹುಲಿಯ ರಕ್ಷಣೆಯ ಬಗ್ಗೆ ಮಾತನಾಡಿದರೆ ಅವನೋರ್ವ ಸಮಾಜ ಸೇವಕ, ಆದರೆ ಗೋವಿನ ಬಗ್ಗೆ ಮಾತನಾಡಿದರೆ ಆತ ಹಿಂದೂ ಕೋಮುವಾದಿ!! ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದ ಈ ಬರಹ ನಿಜವಾಗಿಯೂ ಇಂದಿನ ವೈಚಾರಿಕತೆಗೆ ಹಿಡಿದ ದರ್ಪಣವಲ್ಲವೇ!?

ಪ್ರಸಾದ್ಕುಮಾರ್

ಮಾರ್ನಬೈಲ್

Facebook ಕಾಮೆಂಟ್ಸ್

Prasad Kumar Marnabail: Banker
Related Post