ಸುನಿಲ್ ಮತ್ತು ನಾನು ಇಬ್ರೂ ಫ್ರೆಂಡ್ಸ್, ಬೆಸ್ಟ್ ಅಲ್ಲ, ಜಸ್ಟ್ ಕ್ಲೋಸ್ ಫ್ರೆಂಡ್ಸ್. ಎಂಟನೇ ತರಗತಿಯಿಂದ ಒಟ್ಟಿಗೆ ಓದಿದ್ದು ನಾವು. ನಮ್ಮಿಬ್ಬರಲ್ಲಿ ಮುಚ್ಚಿಡುವಂತಾದ್ದು ಏನೂ ಇರಲಿಲ್ಲ. ಅವನ ಕಷ್ಟ ನನ್ನತ್ರ ಹೇಳ್ತಿದ್ದ, ನನ್ನ ಕಷ್ಟ ಅವನಲ್ಲಿ. ಅವನು ಅತ್ಯಂತ ಚುರುಕಾದ ಸ್ವಭಾವದವನು. ಕಲಿಕೆಯಲ್ಲಿ ಯಾವಾಗಲೂ ನಮಗಿಬ್ಬರಿಗೆಯೇ ಫೈಟ್ ಮತ್ತು ನಮಗೆ ಫೈಟ್ ಕೊಡೋರು ಬೇರೆ ಯಾರೂ ಇರಲಿಲ್ಲ. ಪ್ರಾಕ್ಟಿಕಲ್ ಆಗಿ ನೋಡಿದ್ರೆ ನನಗಿಂತ ಅವನೇ ಹುಷಾರು.
ಆದ್ರೆ ಈಗೀಗ ಅವನಲ್ಲಿ ಏನೋ ಬದಲಾವಣೆ. ಓದಿನ ಬಗ್ಗೆ ತಲೆಕೆಡಿಸಿಕೊಂಡಿರಬೇಕು ಅಂದುಕೊಂಡಿದ್ದೆ. ಎಲ್ಲಾನೂ ನನ್ನಲ್ಲೇ ಹೇಳ್ತಿದ್ದೋನು ಈಗ ಅಷ್ಟೇನೂ ಹೇಳ್ಕೋಳ್ತಾಯಿಲ್ಲ. ಯಾಕೆ ಏನಾಯ್ತೂ ಅಂತ ಗೊತ್ತಿಲ್ಲ. ಹ್ಯಾಪಿಯಾಗೇನೋ ಇರ್ತಿದ್ದ, ಆದ್ರೆ ನನ್ನತ್ರ ಅಲ್ಲ. ನನ್ನ ಅವಾಯ್ಡ್ ಮಾಡ್ತಿರ್ಲಿಲ್ಲ, ಆದ್ರೂ ಅಷ್ಟಕ್ಕಷ್ಟೆ. ಒಳಗೊಳಗೇ ನಗ್ತಿದ್ದ, ಏನೋ ಯೋಚನೆ ಮಾಡ್ತಿದ್ದ, ಮೊದ್ ಮೊದ್ಲು ನಾನು ಅಷ್ಟೇನು ವರಿ ಮಾಡ್ಲಿಲ್ಲ, ಆದ್ರೆ ದಿನ ಹೋದಾಗೆ ನಂಗೆ ಒಂಟಿತನ ಶುರುವಾಯ್ತು. ತಡ್ಕೊಳ್ಳೊಕೆ ಆಗ್ಲಿಲ್ಲ. ಯಾಕಂದ್ರೆ ನಾನೂ ಸಹ ಬೇರೆಯವರ ಆಷ್ಟೇನೂ ಮಿಂಗಲ್ ಆಗ್ತಿರ್ಲಿಲ್ಲ. ಕೇಳೇ ಬಿಟ್ಟೆ, ನನ್ನಿಂದ ಏನಾದ್ರೂ ಬೇಜಾರಾಯ್ತಾ, ತಪ್ಪು ಮಾಡಿದ್ನಾ ಅಂತ. ಅದಕ್ಕವ್ನು ಏನೂ ಇಲ್ಲ, ನಿಂದೇನೂ ತಪ್ಪಿಲ್ಲ ಅಂತ ಹೇಳಿದ. ಆದ್ರೂ ನಿಜ ವಿಷ್ಯ ಏನಂತ ಹೇಳಲೇ ಇಲ್ಲ. ಇನ್ನೊಬ್ರ ಪರ್ಸನಲ್ ಜಾಸ್ತಿ ಕೆದಕಬಾರದು ಅಂತ ಸುಮ್ಮನಾದೆ. ಆದ್ರೆ ದಿನ ಹೋದಂತೆ ನನ್ನಿಂದ ದೂರ ಹೋದ, ಇವ ಏನೋ ಮುಚ್ಚಿಡ್ತಿದ್ದಾನೆ ಎನ್ನೋದು ನಂಗೆ ಕನ್’ಫರ್ಮ್ ಆಗಿತ್ತು. ಏನು ಅಂದ್ರೆ ಏನೂ ಹೇಳುತ್ತಿರಲಿಲ್ಲ. ಇದ್ದಾಗಲೆಲ್ಲ, ಮೊಬೈಲಲ್ಲಿ ಮಾತಾಡ್ತಾ ಇದ್ದ. ನಂಗೆ ಸುತಾರಾಂ ತಡ್ಕೊಳ್ಳೋಕೆ ಆಗ್ತಾ ಇಲ್ಲ. ಒಂದೋ ವಿಷ್ಯ ಹೇಳು ಇಲ್ಲ ಅಂದ್ರೆ ನನ್ನ ಮರೆತು ಬಿಡು ಅಂತ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದೆ. ಆವಾಗ ಬಾಯಿ ಬಿಟ್ಟ “ ಅದೂ…ಅದೂ… ನಾನೊಬ್ಳನ್ನ ಪ್ರೀತಿಸ್ತಾಯಿದ್ದೀನಿ” ಅಂದ. ಈ ಮುಖಕ್ಕೂ ಲವ್ವಾ ಅಂತ ಅನ್ಕೊಂಡು ಅದ್ಕಾ ಈ ಥರಾ ಮಾಡ್ತಿರೋದು ಅಂತ ಕೇಳ್ದೆ. ಮತ್ತೆ ಎಲ್ಲಾ ಹೇಳುತ್ತಾ ಹೋದ.
ಅವಳು ಪ್ರಿಯ.. ಎಂಜಿನಿಯರಿಂಗ್ ಮೊದಲ ವರ್ಷದಲ್ಲಿದ್ದಾಳೆ. ಆಗಷ್ಟೆ ೧೯ ಆಗಿದೆ, ಹೊಸ ಊರು, ಹೊಸ ಕಾಲೇಜು.. ನಾನು ಈಗ ಪ್ರೀತಿಯಲ್ಲಿ ಬೀಳಬೇಕು, ನನಗೂ ಒಬ್ಬ ಗೆಳೆಯ ಬೇಕು ಎಂದು ಹಾಡುವಂತಹ ವಯಸ್ಸು ಅದು. ಈ ಪ್ರಿಯಾಳೂ ಅಷ್ಟೇ, ಕಲಿಕೆಯಲ್ಲಿ ಅವರೇಜ್ ಇದ್ದ ಅವಳ ಇಂಟರೆಸ್ಟ್ ಏನಿದ್ದರೂ ಇಂಟರ್ನೆಟ್ಟು ಫ್ಯಾಷನ್ ಮೇಲೆ. ಅವಳಿಗೂ ಆವಾಗ ಒಬ್ಬ ಗೆಳೆಯ ಬೇಕಿತ್ತು. ಆವಾಗ ಸಿಕ್ಕಿದ್ದೇ ಸುನಿಲ್.
ಸಿಕ್ಕಿದ್ದಾದರೂ ಹೇಗೆ ಅಂತೀರಾ ಫೇಸ್ಬುಕ್ಕಿನಲ್ಲಿ, ಫ್ರೆಂಡ್ ರಿಕ್ವೆಸ್ಟ್ ಅಸೆಪ್ಟ್ ಆದ ಮೇಲೆ ಮೊದಲು ಹಾಯ್ ಕಳುಹಿಸಿದ್ದು ಸುನಿಲ್ಲೇ, ಅವಳು ಸ್ವಲ್ಪ ಹಮ್ಮು ಬಿಮ್ಮು ತೋರಿಸಿ ರಿಪ್ಲೈ ಮಾಡಿರಲಿಲ್ಲ. ಸ್ವಲ್ಪ ದಿನದ ಬಳಿಕ ಮತ್ತೆ ಹಾಯ್ ಎಂದ, ಈ ಬಾರಿ ಆಕೆಯ ಪ್ರತ್ಯುತ್ತರವೂ ಬಂತು. ಸ್ವಲ್ಪ ದಿನಗಳ ಬಳಿಕ ಫೇಸ್’ಬುಕ್ಕಿನಲ್ಲೇ ವಿಷಯ ವಿನಿಮಯವೂ ನಡೆಯಿತು. ಈತ ನಂಬರ್ ಕೇಳಿದ ಆಕೆ ತಡಮಾಡದೇ ಕೊಟ್ಟುಬಿಟ್ಟಳು, ಆಮೇಲೆ ಗೊತ್ತಿದೆಯಲ್ಲಾ, ವಾಟ್ಸಾಪ್ ನಿತ್ಯ ನಿರಂತರ. ನಿಧಾನವಾಗಿ ಕಾಲ್’ಗಳಿಗೆ ತಮ್ಮನ್ನು ತೆರೆದುಕೊಂಡರು,. ಹಾ… ಅವರಿನ್ನೂ ಜಸ್ಟ್ ಫ್ರೆಂಡ್ಸ್ ತರಾನೇ ಇದ್ದರು.
ಆದ್ರೆ ನಿಧಾನವಾಗಿ ಇಬ್ಬರ ಮನದಲ್ಲೂ ಪ್ರೀತಿ ಚಿಗುರಿತ್ತು. ಆವತ್ತು ಸುಜನ್ ಪ್ರಪೋಸು ಮಾಡುವುದೆಂದು ತೀರ್ಮಾನಿಸಿಬಿಟ್ಟ. ಕಳ್ಳ, ಯಾರ ಬಳಿಯೂ ಹೇಳಿರಲಿಲ್ಲ. ಸ್ವಲ್ಪ ಭಯವೂ ಇತ್ತು. ಆಕೆ ಏನಂದುಕೊಳ್ಳುತ್ತಾಳೋ ಅಸೆಪ್ಟ್ ಮಾಡುತ್ತಾಳೋ ಇಲ್ಲವೋ ಎಂದೆಲ್ಲಾ ಥಿಂಕಿಸುತ್ತಿದ್ದ. ಆಕೆಗೂ ಅವನ ಮೇಲೆ ಪ್ರೀತಿ ಬಂದಿತ್ತೆಂಬ ಅನುಮಾನವೂ ಬಂದಿರಲಿಲ್ಲ. ನೇರವಾಗಿ ಹೇಳುವುದಕ್ಕಿಂತ ಐ ಲವ್ ಯೂ ಅಂತ ಮೆಸ್ಸೇಜು ಮಾಡುವುದೇ ಬೆಸ್ಟ್ ಅಂತ ಟೈಪಿಸಿ ಕಳುಹಿಸಿದ್ದ. ಆಕೆಗೂ ಅದೇ ಬೇಕಿತ್ತು. ಸ್ವಲ್ಪ ಜಂಭದ ಹುಡುಗಿಯಾಗಿದ್ದರಿಂದ ಅವನೇ ಪ್ರಪೋಸ್ ಮಾಡಲಿ ಎಂದು ಕಾಯುತ್ತಿದ್ದಳು. ತಕ್ಷಣ ಆಕೆ ಒಪ್ಪಿಕೊಂಡಳು. ಇಬ್ಬರಿಗೂ ಖುಷಿಯಾಯಿತು.
ಆಮೇಲೆ ಕೇಳಬೇಕೆ,.. ದಿನಾಲೂ ಫೋನಿನಲ್ಲಿ ಮಾತಿನ ಸುರಿಮಳೆ. ನೂರಾರು ಬಾರಿ ಐ ಲವ್ ಯೂ ಎನ್ನುವುದು, ಮದುವೆಯ ನಂತರ ಹಾಗಿರೋಣ, ಹೀಗಿರೋಣ ಎಂದು ಕನಸು ಕಟ್ಟಿಕೊಳ್ಳುವುದು, ನಮಗೆ ಅಷ್ಟು ಮಕ್ಕಳಾಗಬೇಕು, ಹೆಣ್ಣೂ ಮಗುವೇ ಆಗಬೇಕು, ಫ್ಯಾಮಿಲಿ ಪ್ಲಾನಿಂಗ್ ಮಾಡಿಕೊಳ್ಳುವುದು ಎಲ್ಲಾ ಮಾಮೂಲಿಯಾಗತೊಡಗಿತು. ‘ಹನಿ, ಡಾರ್ಲಿಂಗ್ ಸ್ವೀಟಿ ಎಲ್ಲಾ ಕ್ಯೂಟ್ ಕ್ಯೂಟ್ ಮಾತನಾಡಿಕೊಳ್ಳುವುದು. ಫ್ಯಾಷನ್ ಪ್ರಿಯಳಾದ ಪ್ರ್ರಿಯಾ ಹಾಕುತ್ತಿದ್ದ ಫೋಟೋಕ್ಕೆ ಲೈಕು ಒತ್ತಿ ಕಮೆಂಟಿಸುವುದು ಸುನಿಲ್’ಗೆ ಪ್ರಿಯವಾಗಿತ್ತು. ಪ್ರಾಯ ಸಹಜವಾಗಿ ಮೈ ಬಿಸಿ ತಣಿಸಿಕೊಳ್ಳಲು ಮೆಸೇಜಿನಲ್ಲಿ, ಫೋನಿನಲ್ಲಿ ಲಿಪ್ಪಿಗೆ ಲಿಪ್ಪು ಉಜ್ಜಿಕೊಳ್ಳುವುದು ಜೋರಾಗಿತ್ತು, ಒಟ್ಟಿನಲ್ಲಿ ಒಂದು ಬಾರಿಯೂ ಪರಸ್ಪರ ನೋಡದಿದ್ದರೂ ಪ್ರಣಯ ಪಕ್ಷಿಗಳ ರೀತಿ ಜೀವಿಸುತ್ತಿದ್ದರು ಅವರಿಬ್ಬರು. ಹೀಗೆ ಸಾಗಿತ್ತು ಆರೇಳು ತಿಂಗಳು.
ಆದರೆ ಅಲ್ಲೊಂದು ವಿಷಯವಿತ್ತು. ಸುನಿಲ್ ಯಾವತ್ತೂ ತನ್ನ ಫೋಟೋವನ್ನು ಡಿಪಿ ಮಾಡಿಕೊಂಡವನಲ್ಲ. ಮೊದಲೇ ಫ್ಯಾಶನ್ ಹುಚ್ಚು ಹತ್ತಿಸಿಕೊಂಡಿದ್ದ ದಿನಕ್ಕೊಂದು ಡಿಪಿ ಹಾಕುತ್ತಿದ್ದರೆ ಈ ಬೆಪ್ಪ ಪ್ರಿಯಾ ಅದೆಷ್ಟು ಬಾರಿ ವಿನಂತಿಸಿದರೂ ಡಿಪಿ ಹಾಕಲು. ಬೇರೆ ಬೇರೆ ಊರಿನಲ್ಲಿದ್ದ ಕಾರಣ ಅಷ್ಟು ಸುಲಭದಲ್ಲಿ ಮೀಟ್ ಆಗೋ ಹಾಗೂ ಇರಲಿಲ್ಲ. ಕಡೆಗೆ ಅಟ್ಲೀಸ್ಟ್ ಫೋಟೋಕ್ಕೆ ಒಪ್ಪಿ ಸುನಿಲ್ ಫೋಟೋಗಳನ್ನು ಕಳುಹಿಸಿದ.
ಅವತ್ತೇ ಲಾಸ್ಟ್, ಪ್ರಿಯಾಗೆ ಶಾಕ್ ಆಗಿತ್ತು. ಗೆಳೆಯ ಬೇಕು ಎನ್ನುವ ಭರದಲ್ಲಿ ಹುಡುಗನ ಮುಖವೂ ನೋಡದೆ ಮನಸ್ಸು ಕೊಟ್ಟಿದ್ದಳು ಪ್ರಿಯಾ.. ಫ್ಯಾಶನ್ ಪ್ರಿಯಳಾಗಿದ್ದ ಈಕೆಗೆ ಹುಡುಗ ಸಲ್ಮಾನ್ ಖಾನ್ ಥರ ಹ್ಯಾಂಡ್ಸಮ್ ಇರಬೇಕೆಂಬ ಬಯಕೆ ಇತ್ತು. ಸುನಿಲ್ ನೋಡಲು ಅವರೇಜ್. ಆವನ ಲುಕ್ಕು ಒಂಥರಾ… ಆತನಿಗೆ ವಂಶವಾಹಿಯಾಗಿ ಬಂದ ಸಣ್ಣ ಮಟ್ಟಿನ ಮಾನಸಿಕ ರೋಗವೂ ಇತ್ತು. ಅವ ಚುರುಕು ಬುದ್ಧಿಯವನಾಗಿದ್ದರೂ, ಟೊಳ್ಳು ಜೋಕುಗಳನ್ನು ಮಾಡುವುದು, ಅದಕ್ಕವನೇ ನಗಾಡುವುದು, ಆತನ ಸ್ವಭಾವವಾಗಿತ್ತು. ಪೆದ್ದು ಪೆದ್ದು ಥರ ಇದ್ದ ಅವನ ಮುಖದಲ್ಲಿ ಇದೆಲ್ಲವೂ ಕಾಣಿಸುತ್ತಿತ್ತು. ಇವನ್ ಮೆಂಟಲ್ ಮಂಜ ಥರಾ ಇದ್ದಾನೆ, ಲೂಸ್ ಮಾದ ಥರ ಇದ್ದಾನೆ ಎನ್ನುವ ಗೆಳತಿಯರ ಮಾತು ಬೆಂಕಿಗೆ ತುಪ್ಪ ಸುರಿದಂತಾಯ್ತು. ಆಕೆ ಬೇರೆ ಯೋಚಿಸದೇ ಬ್ರೇಕ್ ಅಪ್’ಗೆ ನಿರ್ಧರಿಸಿದಳು.
ಅದು ಕೊನೆ, ನೀನು ಸರಿಯಿಲ್ಲ, ನನ್ನನ್ನು ಮರೆತು ಬಿಡು ಎಂದು ಒಂದೇ ಒಂದು ಮೆಸೇಜು ಹಾಕಿ ಇವನನ್ನು ಬ್ಲಾಕ್ ಮಾಡಿದಳು. ಇಬ್ಬರೂ ಸೇರಿ ಕಟ್ಟಿಕೊಂಡಿದ್ದ ಕನಸನ್ನೂ ನುಚ್ಚು ನೂರು ಮಾಡಿದಳು. ಮನಸಾರೆ ಪ್ರೀತಿಸಿದ್ದ ಹುಡುಗಿಯ ವರ್ತನೆ ನೋಡಿ ಸುನಿಲ್’ಗೆ ಶಾಕ್ ಹೊಡೆದಿತ್ತು. ಕುಗ್ಗಿ ಹೋದ ಸುಜನ್,. ಕಲಿಕೆಯಲ್ಲೂ ಹಿಂದೆ ಬಿದ್ದ. ಒಂದೆರಡು ತಿಂಗಳು ಹೇಗೋ ರಿಕವರ್ ಆಗಕ್ಕೆ ಪ್ರಯತ್ನಿಸಿದ. ಇಂಜಿನಿಯರಿಂಗ್ ಫ಼ೈನಲ್ ಇಯರ್ ಬೇರೆ, ಆವಾಗ ಬಂದ ಕ್ಯಾಂಪಸ್ ಇಂಟರ್ವ್ಯೂಗಳಲ್ಲೆಲ್ಲಾ ವಿಫಲನಾದ. ಕಲಿಕೆಯಲ್ಲಿ ಮುಂದಿದ್ದ ಸುನಿಲ್ ಕುರಿತು ಎಲ್ಲಾ ಕಡೆಯಿಂದ ಮಾತುಗಳು ಬರಲಾರಂಭಿಸಿತು. ನೋವು ತಾಳಲಾರದೆ ನೇಣು ಬಿಗಿದುಕೊಂಡ.
ಇದನ್ನೆಲ್ಲ ನಾನು ಕಣ್ಣಾರೆ ಕಂಡವನು. ಪ್ರಿತಿಯೆನ್ನುವುದು ಸಕಾರಾತ್ಮಕವಾಗಿ ಜೀವನ ಮಾಡುವುದಕ್ಕೆ ಇರಬೇಕೇ ಹೊರತು ಈಥರಾ ದೈಹಿಕ ಆಕರ್ಷಣೆಗೆ ಸೀಮಿತವಾಗಿರಬಾರದು. ಹೊಂದಾಣಿಕೆಯಿಲ್ಲ ಎಂದು ಬ್ರೇಕ್ ಅಪ್ ಆದರೆ ಸರಿ, ಆದ್ರೆ ನೋಡಲು ಚೆನ್ನಾಗಿಲ್ಲ ಅಂತ ಬ್ರೇಕ್ ಅಪ್ ಮಾಡಿಕೊಂಡಳಲ್ಲಾ, ನೀವೇ ಹೇಳಿ ಪ್ರೀತಿಗೆ ಕಣ್ಣಿಲ್ಲಾ ಅಂತಾರೆ… ನಿಜಾನಾ??
.Anashku
Facebook ಕಾಮೆಂಟ್ಸ್