ನಾಲ್ಕೈದು ವರ್ಷಗಳ ಹಿಂದೆ ಗುಟ್ಕಾ ನಿಷೇಧವಾಗುತ್ತದೆ ಎನ್ನುವಾಗ ಕರಾವಳಿ ಕರ್ನಾಟಕ, ಮಲೆನಾಡಿನ ಶಿವಮೊಗ್ಗದ ಅಡಕೆ ಬೆಳೆಗಾರರಿಗೆ ಬರ ಸಿಡಿಲು ಬಡಿದಿತ್ತು. ಮತ್ತೆ ನಿರಂತರ ಕಾನೂನು ಹೋರಾಟಗಳನ್ನು ಮಾಡುತ್ತಾ ಮಾಡುತ್ತಾ ಅಡಕೆಯನ್ನು ಜೀವಂತವಾಗಿರಿಸಿಕೊಂಡರು. ಗುಟ್ಕಾ ಇವತ್ತು ನಿಷೇಧ ಆಗುತ್ತದೆ, ನಾಳೆ ನಿಷೇಧ ಆಗುತ್ತದೆ ಎನ್ನುವ ಮಾತುಗಳು ಈಗಲೂ ಕೇಳಿ ಬರುತ್ತಿದೆ. ಕಾನೂನು ಹೋರಾಟ ಮುಂದುವರಿದಿದೆ. ಈ ನಡುವೆ ಕಳೆದ ವರ್ಷ ಕೇಂದ್ರ ಸರ್ಕಾರ ತೆಗೆದುಕೊಂಡಿದೆ ಎನ್ನಲಾದ ನಿರ್ಧಾರವೊಂದು ಎಲ್ಲಾ ಅಡಿಕೆ ಬೆಳೆಗಾರರನ್ನು ಬೆಚ್ಚಿ ಬೀಳಿಸಿತ್ತು. ಒಂದೊಮ್ಮೆ ಅಡಕೆಯಲ್ಲಿ ಹಾನಿಕರ ಅಂಶ ಇದೆ, ಅದನ್ನು ನಿಷೇಧಿಸುತ್ತೇವೆಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದೆಯೆಂದು, ಮತ್ತೊಮ್ಮೆ, ಇಲ್ಲ ಆ ಥರ ಏನು ಆಗಿಲ್ಲವೆಂದು ಹೇಳಿ, ಒಟ್ಟಿನಲ್ಲಿ ಅಡಕೆ ಬೆಳೆಗಾರರ ಭವಿಷ್ಯವೇ ಅಡಕತ್ತರಿಗೆ ಸಿಲುಕಿತ್ತು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದೂ ಸಹ ಅಡಕೆಗೆ ಉತ್ತಮ ಬೆಲೆ ಇರುವಾಗಲೇ.
ಹಾಗಾದರೆ ಏನು ಮಾಡುವುದು? ಉತ್ತರ ಕರ್ನಾಟಕದ ರೈತರ ಹಾಗೆ ನಾವುಗಳೂ ಆತ್ಮಹತ್ಯೆ ಮಾಡಿಕೊಳ್ಳಬೇಕಾ? ಮುಗಿದೇ ಹೋಯಿತಾ ಅಡಕೆಯ ಗತಿ ಎಂದು ಜನ ಯೋಚಿಸಿದರೇ ಹೊರತು ಅದಕ್ಕೊಂದು ಪರಿಹಾರ, ಗುಟ್ಕಾಕ್ಕೊಂದು ಪರ್ಯಾಯ ಹುಡುಕುವತ್ತ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. ಕಾಂಪ್ಕೊ ವತಿಯಿಂದ ಅಡಕೆ ಕೃಷಿಗೆ ಸಂಬಂಧಿತ ಯಂತ್ರಗಳ ಆವಿಷ್ಕಾರಕ್ಕೆ ಬೆಂಬಲ ದೊರೆಯಿತೇ ಹೊರತು ಅಡಕೆಯ ಉಪಯೋಗಕ್ಕೆ ಸಂಬಂಧಿಸಿ ಹೊಸ ಸಂಶೋಧನೆ ಸಾಧ್ಯವಾಗಲಿಲ್ಲ. ಆದರಿಲ್ಲೊಬ್ಬ ವಿದ್ಯಾವಂತ ರೈತ ಯುವಕನೊಬ್ಬ ಅಡಕೆ ಬೆಳೆಗಾರರ ಪಾಲಿಗೆ ಸಂಜೀವಿನಿಯಾಗಿ ಬಂದಿದ್ದಾರೆ. ಅಡಕೆಯಿಂದ ಉತ್ತಮವಾದ ಚಹಾ ಮಾಡಬಹುದು, ಆ ಮೂಲಕ ಗುಟ್ಕಾ ನಿಷೇಧಕ್ಕೆ ಯಾರೂ ಹೆದರಬೇಕಿಲ್ಲ ಎಂದು ತೋರಿಸಿ ಮಾದರಿಯಾಗಿದ್ದಾರೆ.
ಏನಾದರೂ ಮಾಡಬೇಕು ಸರಿ, ಆದರೇನು ಮಾಡುವುದು ಏನಾದರೂ ದೊಡ್ಡ ಸಾಧನೆ ಮಾಡಬೇಕು, ನಾಲ್ಕು ಜನರಿಗೆ ಉಪಕಾರವಾಗುವಂತೆ ಏನಾದರೂ ಮಾಡಬೇಕೆಂದು ಎಲ್ಲರೂ ಅಂದುಕೊಂಡಿರುತ್ತಾರೆ. ಯಾರಿಗೂ ಅದರ ಬಗ್ಗೆ ಸಷ್ಟತೆ ಇರುವುದಿಲ್ಲ. ಇವರಿಗೆ ಮಾತ್ರ ಏನು ಮಾಡಬೇಕೆಂಬ ಸ್ಪಷ್ಟ ಗುರಿ ಇತ್ತು. ನಿವೇದನ್ ಕಣ್ಣಿಗೆ ಬಿದ್ದಿದ್ದು ಮನೆಯಂಗಳದಲ್ಲಿ ಒಣಗಲು ಹಾಕಿದ್ದ ಅಡಕೆ. ಫಾರ್ಮಸಿ ಕ್ಷೇತ್ರದವರಾದ ಕಾರಣ ಯಾವುದೇ ವಸ್ತುವಲ್ಲಿ ಏನೇನು ಆರೋಗ್ಯಕರ, ಅನಾರೋಗ್ಯಕರ ಅಂಶಗಳಿವೆ ಎಂಬುದನ್ನು ಸಂಶೋದನೆ ಮಾಡುವಲ್ಲಿ ಆಸಕ್ತಿಯಿದ್ದ ಇವರು ತಡಮಾಡದೆ ಅಡಕೆಯ ಅಧ್ಯಯನ ಮಾಡತೊಡಗಿದರು. ಅದರ ಕೆಮಿಕಲ್ ಕಾಂಪೊಸಿಷನ್ ಮತ್ತಿತರ ವಿಷಯಗಳನ್ನು ತಾಳ್ಮೆಯಿಂದ, ಸೂಕ್ಷವಾಗಿ ಅಭ್ಯಸಿಸಿ ಚಹಾ ತಯಾರಿಯನ್ನು ಖಾತರಿಪಡಿಸಿಕೊಂಡರು. ಕಚ್ಚಾ ವಸ್ತುಗಳನ್ನು ತರಿಸಿಕೊಂಡು ಹಲವಾರು ಪ್ರೊಸೆಸ್’ಗಳನ್ನು ಮಾಡಿದ ಬಳಿಕ ಚಹಾ ಪುಡಿಯನ್ನು ತಯಾರು ಮಾಡಿದರು.
ಈ ವಿಷಯ ಫೇಸ್’ಬುಕ್, ವಾಟ್ಸಾಪ್’ಗಳಲ್ಲಿ ವ್ಯಾಪಕವಾಗಿ ಹಬ್ಬಿತು. ನಾಡಿನ ಹಲವು ದಿನಪತ್ರಿಕೆಗಳು, ನ್ಯೂಸ್ ಚಾನೆಲ್’ಗಳು ನಿವೇದನ್ ಮನೆ ಬಾಗಿಲು ತಟ್ಟಿದವು. ಅವರ ಆವಿಷ್ಕಾರವನ್ನು ಕಂಡು ಬೆನ್ನು ತಟ್ಟಿದರು. ನಿವೇದನ್’ರಿಗೆ ಮತ್ತೊಂದು ಅದೃಷ್ಟವಿತ್ತು. ಇವರ ಅರೆಕಾ ಟೀ ವಿಷಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಬ್ಬುತಿತ್ತು. ಹೀಗೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಮೇಕ್ ಇನ್ ಇಂಡಿಯಾದಲ್ಲಿ ಕೆಲಸ ಮಾಡುವ ಅಧಿಕಾರಿಯೊಬ್ಬರ ಕಣ್ಣಿಗೆ ಬಿತ್ತು, ಅದರ ಬಗ್ಗೆ ಮಾಹಿತಿ ಸಂಗ್ರಹಿಸಿಕೊಂಡು ಹೇಗೋ ಎಲ್ಲಾ ಒದ್ದಾಡಿ ನಿವೇದನ್ ಅವರ ಫೋನ್ ನಂಬರ್ ಸಂಗ್ರಹಿಸಿದರು. ನಂತರ ನಿವೇದನ್’ಗೆ ಕರೆ ಮಾಡಿ ‘ನಿಮ್ಮ ಆವಿಷ್ಕಾರದ ಬಗ್ಗೆ ನಾವು ಕೇಳಿದ್ದೇವೆ, ನಿಮ್ಮ ಪ್ರೊಡಕ್ಟ್ ಮಾಹಿತಿಯೊಂದಿಗೆ ದೆಹಲಿಗೆ ಬರುವಂತೆ ಹೇಳಿದರು. ನಿವೇದನ್ ಈ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡರು.. ಮೇಕ್ ಇನ್ ಇಂಡಿಯಾ ಅಧಿಕಾರಿಗಳ ಮುಂದೆ ಅರೆಕಾ ಟೀಯನ್ನು ಪ್ರೆಸೆಂಟ್ ಮಾಡಿದ ನಿವೇದನ್’ಗೆ ‘ಇನ್ನೋವೇಟಿವ್ ಪ್ರಾಡಕ್ಟ್ ಆಫ್ ದ ಇಯರ್ 2015’ ಅವಾರ್ಡ್ ಕೂಡಾ ಬಂತೆಂದರೆ ನೀವು ನಂಬಲೇಬೇಕು. . ಅಷ್ಟು ಮಾತ್ರವಲ್ಲ, ಯಾವ ಕೇಂದ್ರ ಸರಕಾರ ಅಡಕೆಯಲ್ಲಿ ಹಾನಿಕರ ಅಂಶಗಳಿವೆ ಎಂದು ಅಫಿದವಿತ್ ನೀಡಿತ್ತು ಎಂದು ಹೇಳಲಾಗುತ್ತಿತ್ತೋ ಅದೇ ಕೇಂದ್ರ ಸರಕಾರದ ತಲೆಯ ಮೇಲೆ ಹೊಡೆದಂತೆ ಅಡಕೆಯಿಂದ ಮಾಡಿದ, ಯಾವುದೇ ಕೆಮಿಕಲ್ ಫ್ಲೇವರುಗಳಿಲ್ಲದ ಚಹಾದಲ್ಲಿ ಇಪ್ಪತ್ತೊಂದು ಬಗೆಯ ಆರೋಗ್ಯಕರ ಅಂಶಗಳಿವೆ ಅಂತ ದಾಖಲೆ ಸಮೇತ ತೋರಿಸಿದರು.
ಈ ಬಗ್ಗೆ ತಿಳಿದುಕೊಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ನಿವೇದನ್’ರನ್ನು ಕರೆಸಿ ಮಾಹಿತಿ ಪಡೆದುಕೊಂಡು ಬೆಳ್ಳಿಯ ನಾಣ್ಯ ನೀಡಿ ಅವರನ್ನು ಪ್ರೋತ್ಸಾಹಿಸಿದರು. ನಿವೇದನ್’ರ ಸಾಧನೆಗೆ ಹಲವಾರು ಸಂಘ ಸಂಸ್ಥೆಗಳು ಸನ್ಮಾನಿಸಿದವು, ಬೆಂಬಲ ಸೂಚಿಸಿದವು.
ಇಷ್ಟಕ್ಕೇ ಎಲ್ಲವೂ ಮುಗಿದು ಹೋಯಿತು ಎಂದಲ್ಲ. ನಿವೇದನ್ ಕನಸು ನನಸಾಗಿಯೇ ಬಿಡ್ತು ಎಂದಲ್ಲ. ಅರೆಕಾ ಟೀಯನ್ನು ಒಂದು ಹಂತಕ್ಕೆ ಕೊಂಡೊಯ್ಯಬೇಕಾದರೆ ಕಡಿಮೆ ಎಂದರೆ ಐವತ್ತು ಲಕ್ಷ ಬೇಕು. ನಿವೇದನ್’ರವರು ಈಗಾಗಲೇ ಸ್ವಂತವಾಗಿ ೩೫-೪೦ ಲಕ್ಷವನ್ನು ಹಾಕಿದ್ದಾರೆ. ಅರೆಕಾ ಟೀಯನ್ನು ಒಂದು ಬ್ರಾಂಡ್ ಆಗಿಸುವಲ್ಲಿ ಮಹತ್ತರ ಚಾಲೆಂಜ್ ಇದೆ. ಇದರ ಜೊತೆಗೆ ಅರೆಕಾ ಟೀ ಪೂರ್ಣ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದರೆ ಗುಟ್ಕಾಕ್ಕೆ ಮಣೆ ಹಾಕುವ ಅಡಿಕೆ ಬೆಳೆಗಾರರ ಸಂಖ್ಯೆ ಕಡಿಮೆಯಾಗುವುದು ನಿಶ್ಚಿತ ಮತ್ತು ಆ ಕಡೆ ಸಾಮಾನ್ಯ ಚಹಾಕ್ಕೂ ಹೊಡೆತ ಬೀಳುತ್ತದೆ ಆದ್ದರಿಂದ ಈ ಎರಡು ಉತ್ಪನ್ನಗಳ ಮಾಫಿಯಾವನ್ನೂ ಎದುರಿಸಬೇಕಾಗಿ ಬರಬಹುದು.
ಒಂದಂತೂ ಖರೆ, ಈಗಲ್ಲದಿದ್ದರೂ ಇನೈದು ವರ್ಷಗಳಲ್ಲಾದರೂ ಗುಟ್ಕಾ ನಿಷೇಧವಾಗಿಯೇ ಆಗುತ್ತದೆ. ಆವಾಗ ಅಡಕೆ ಬೆಳೆಗಾರರ ಕುಟುಂಬಗಳ ಭವಿಷ್ಯ ಮತ್ತೆ ಅಡಕತ್ತರಿಗೆ ಸಿಲುಕಲಿದೆ. ನಮ್ಮ ರಾಜ್ಯದಲ್ಲಿ ಏನಿಲ್ಲವೆಂದರೆ ಐದು ಲಕ್ಷ ಅಡಿಕೆ ಬೆಳೆಗಾರರ ಕುಟುಂಬಗಳಿವೆ. ಈ ಎಲ್ಲಾ ಕುಟುಂಬಗಳು ಅಡಕೆಯನ್ನೇ ನೆಚ್ಚಿಕೊಂಡಿರುವುದಾದರೆ ಮುಂದೆ ತೊಂದರೆಗೆ ಸಿಲುಕುವುದು ಖಂಡಿತಾ. ಅದೂ ಅಲ್ಲದೆ, ಒಂದು ವರ್ಷ ಮಳೆ ಬರದೇ ಇದ್ದರೆ ಅಡಕೆಗೆ ನೀರಿಲ್ಲ, ಬಂದರೆ ಅತಿಯಾಗಿ ಮಳೆ ಬರುವುದರಿಂದ ಕೊಳೆ ಇತ್ಯಾದಿ ರೋಗಗಳು.. ಸಾಲದೆಂಬಂತೆ ಕೆಲಸಗಾರರ ಕೊರತೆ.. ತೊಂದರೆಗಳು ಒಂದೇ ಎರಡೇ? ಅಂತಹಾ ತೊಂದರೆಗಳನ್ನೆಲ್ಲಾ ಈಗಲೇ ಊಹಿಸಿಕೊಂಡು ಅದಕ್ಕೆ ಪರ್ಯಾಯವೋ, ಪರಿಹಾರವೋ ಹುಡುಕುವುದರಲ್ಲಿ ಜಾಣ್ಮೆಯಿದೆ. ಸೀದಾ ಹೇಳುವುದಾದರೆ ಈಗಾಗಲೇ ನಿವೇದನ್’ರವರು ಸಂಶೋಧನೆ ಮಾಡಿರುವ ಈ ಅರೆಕಾ ಟೀಯಲ್ಲಿ ನಾಡಿನ ಎಲ್ಲಾ ಅಡಿಕೆ ಬೆಳೆಗಾರರ ಭವಿಷ್ಯ ಅಡಗಿದೆ. ಆದ್ದರಿಂದ ಅಡಕೆ ಬೆಳೆಗಾರರು, ಸಂಶೋಧನಾ ಮಂಡಳಿ ಮತ್ತು ಕೃಷಿ ಇಲಾಖೆ ನಿವೇದನ್’ರ ಸಂಶೋಧನೆಗೆ ಆರ್ಥಿಕವಾಗಿ ಬೆಂಬಲಿಸಬೇಕಾದ ಅಗತ್ಯವಿದೆ. ಬದಲಾವಣೆ ಜಗದ ನಿಯಮ ಎಂಬುದನ್ನು ಅರಿತುಕೊಳ್ಳದೇ ಹಳೇ ಗುಟ್ಕಾಕ್ಕೆ ಜೋತು ಬಿದ್ದುಕೊಂಡರೆ ತಿಂದುಗಿದ ಗುಟ್ಕಾದಂತಾಗುವುದು ಅಡಕೆ ಬೆಳೆಗಾರರ ಪರಿಸ್ಥಿತಿ.
ಈ ಲೇಖನ ಓದುತ್ತಿರುವ ನಿಮ್ಮಲ್ಲಿ ನನ್ನದು ಒಂದೇ ಒಂದು ಮನವಿ. ನಮ್ಮಲ್ಲೇ ಸ್ಥಳೀಯವಾಗಿ ಪ್ರತಿಭೆಯೊಂದು ಹೊರಬರುತ್ತಿರುವಾಗ ಅದಕ್ಕೆ ಬೆಳಕಾಗಿ ಮುನ್ನಡೆಸಬೇಕಾದುದು ನಮ್ಮೆಲ್ಲರ ಹೊಣೆ. ಬೆಳಕಾಗುವುದು ಎಂದರೆ ಹಣದ ಮೂಲಕವೇ ಆಗಬೇಕೆಂದಿಲ್ಲ. ಇಂತಹಾ ಒಂದು ಐಟಂನ ಆವಿಷ್ಕಾರವಾಗಿದೆ ಎಂದು ಬಾಯಿಂದ ಬಾಯಿಗೆ ಹರಡಿಸಿದರೂ ಸಾಕು. ಆವಾಗ ನಿವೇದನ್’ರ ಆವಿಷ್ಕಾರಕ್ಕೆ ಸಾರ್ಥಕತೆ ಸಿಗುತ್ತದೆ. ಅವರ ಶ್ರಮಕ್ಕೂ ಒಂದು ಬೆಲೆ ಬರುತ್ತದೆ. ರೈತರ ಸಾವಿಗೆ ಸರ್ಕಾರವನ್ನೋ ಮತ್ಯಾರನ್ನೋ ಹೊಣೆ ಮಾಡಿಕೊಂಡೇ ಬದುಕುವುದಕ್ಕಿಂತ ಇಂತಹಾ ಆವಿಷ್ಕಾರಗಳಿಗೆ ಬೆಂಬಲ ನೀಡಿದರೆ ನಿಮ್ಮ ಬಾಳೂ ಹಸನಾಗುವುದು, ಮತ್ತೊಬ್ಬರೂ ತಮ್ಮ ಬದುಕು ಕಟ್ಟಿಕೊಳ್ಳಲು ನೆರವಾಗುವುದು. ಇದು ರೈತರಿಗೆ ಉಪಯೋಗವಾಗಬೇಕೆಂಬ ನೆಲೆಯಲ್ಲಿ ನಡೆದಿರುವ ಆವಿಷ್ಕಾರ. ಅಷ್ಟಕ್ಕೂ ಹಣ ಮಾಡುವುದೇ ನಿವೇದನ್’ರ ಉದ್ದೇಶವಾಗಿದಿದ್ದರೆ ಆಸ್ಟ್ರೇಲಿಯಾದಲ್ಲೇ ನೆಲೆಸಿ ಬಿಡುತ್ತಿದ್ದರು. ಇಲ್ಲಿ ಬಂದು ಇಂತಹಾ ರಿಸ್ಕ್ ತೆಗೆದುಕೊಳ್ಳುತ್ತಿರಲಿಲ್ಲ..
ನನ್ನ ಮಾತನ್ನು ನೀವು ಒಪ್ಪುವುದಾದರೆ ತಡಮಾಡದೆ 7760056777 ನಂಬರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ, ನಿವೇದನ್’ರಿಗೆ ಪೂರ್ಣ ಮನಸ್ಸಿನ ಬೆಂಬಲ ನೀಡಿ. ಏನಿಲ್ಲವೆಂದರೂ ರೈತರಿಗೆ ಸಹಾಯ ಮಾಡಬೇಕೆಂಬ ಉದ್ದೇಶ ಇಟ್ಟುಕೊಂಡು ಏನೋ ದುಸ್ಸಾಹಸ ಮಾಡ ಹೊರಟ ಅವರಿಗೆ ಆನೆ ಬಲ ಬರುತ್ತದೆ. ನಿವೇದನ್’ರ ಭಗೀರಥ ಪ್ರಯತ್ನ ಮುಂದುವರಿಯಲು ಸಹಕಾರಿಯಾಗುತ್ತದೆ.
Facebook ಕಾಮೆಂಟ್ಸ್