X

ಉಡುಪಿಯ ಕಂಡೀರಾ? ಉಡುಪಿಯ ಶ್ರೀ ಕೃಷ್ಣನ ಕಂಡೀರಾ?’

‘ಶ್ರೀ ಕೃಷ್ಣ’ – ಮಹಾಭಾರತದ ಸೂತ್ರಧಾರಿ. ಪೌರಾಣಿಕ ಹಿನ್ನೆಲೆಗಳ ಪ್ರಕಾರ ಈತನ ಜನನ, ಈತನ ಲೀಲೆಗಳು ಎಲ್ಲದಕ್ಕೂ ಸಾಕ್ಷಿಯಾದದ್ದು ಉತ್ತರ ಭಾರತವಾದರೂ ಉಡುಪಿಯಲ್ಲಿ ನೆಲೆನಿಂತ ಶ್ರೀಕೃಷ್ಣ ಈಗ ‘ಉಡುಪಿ ಕೃಷ್ಣ’ ಎಂದೇ ಕರೆಸಲ್ಪಡುವಷ್ಟು ಪ್ರಸಿದ್ಧ. ನಾನು ಕೂಡ ಉಡುಪಿಯಲ್ಲಿ ಹುಟ್ಟಿ ಬೆಳೆದವನಾಗಿರುವುದರಿಂದ ಆತನ ಲೀಲೆಗಳ ಮೇಲೆ ಆಸಕ್ತಿ. ‘ಕೃಷ್ಣ’ ಎಂಬ ನಾಮದೆಡೆ ಆಕರ್ಷಣೆ.ಅಂತೆಯೇ ‘ನಮ್ಮ ಉಡುಪಿ ಕೃಷ್ಣ’ ಎಂದು ಹೇಳಿಕೊಳ್ಳುವಷ್ಟು ಆತ್ಮೀಯತೆ.

“ಉಡುಪಿಯ ಕಂಡೀರಾ…? ಉಡುಪಿಯ ಕೃಷ್ಣನ ಕಂಡೀರಾ…?

 ಕೃಷ್ಣನ ಕಂಡೀರಾ…? ಕೃಷ್ಣನ ಉಡುಪಿಯ ಕಂಡೀರಾ…?!!!” ಎಂಬ ದಾಸರ ಪದದ ಸಾಲುಗಳು ಈ ಆತ್ಮೀಯತೆಯನ್ನು ಸುಂದರವಾಗಿ ಬಣ್ಣಿಸುತ್ತವೆ.

‘ಶ್ರೀ ಕೃಷ್ಣ’ ನನಗೆ ಕಂಡದ್ದು ಒಂದು ಪರಿಪೂರ್ಣ ವ್ಯಕ್ತಿತ್ವವಾಗಿ. “ಅಮ್ಮಾ ನಾನು ದೇವರಾಣೆ, ಬೆಣ್ಣೆ ಕದ್ದಿಲ್ಲಮ್ಮಾ…” ಎನ್ನುತ್ತಲೇ “ಮಣ್ಣುಂಡ ಬಾಯ ತೆರೆದು ಬ್ರಹ್ಮಾಂಡವನ್ನೇ  ತೋರಿದ”ಯುಗಪುರುಷ ಆತ. ಧರ್ಮದ ಉಳಿವಿಗಾಗಿ, ಜಗತ್ತಿನ ಉಳಿವಿಗಾಗಿ, ಸಂಧರ್ಭಾನುಸಾರವಾಗಿ ಆತ ಕೈಗೊಂಡ ನಿರ್ಧಾರಗಳು ಆತನ ವ್ಯಕ್ತಿತ್ವದ ಆಳವನ್ನು ಪ್ರಕಟಪಡಿಸುತ್ತವೆ. ನಿಜವಾಗಿಯೂ ಆತ ‘ಕಪಟನಾಟಕರಂಗ’. ಇಡೀ ಮಹಾಭಾರತದ ಕರ್ತೃ ಅವನೇ, ಆದರೂ ತಾನೊಂದು ನೆಪ ಮಾತ್ರ ಎಂಬಂತೆ ಬಿಂಬಿಸಿ ಧರ್ಮಕ್ಕೆ ಜಯ ತಂದಿತ್ತ ಮಹಾನುಭಾವ.

ದ್ರೌಪದಿಯ ವಸ್ತ್ರಾಪಹರಣ ಪ್ರಕರಣವನ್ನು ಪರಿಗಣಿಸಿದರೆ, ಅಲ್ಲಿ ಜಗತ್ತಿನ ಮಹಾಶೂರರು, ಪರಾಕ್ರಮಿಗಳು ಎಂದು ಪರಿಗಣಿಸಲ್ಪಡುತ್ತಿದ್ದ ದ್ರೌಪದಿಯ ಐದು ಪತಿಯಂದಿರು ಕೈಲಾಗದವರಂತೆತಲೆತಗ್ಗಿಸಿ ನಿಂತಿದ್ದಾಗ ದ್ರೌಪದಿಗೆ ಅಕ್ಷಯ ವಸನವನ್ನಿತ್ತು ಆಕೆಯ ಮಾನ ಕಾಪಾಡಿದ ಕೃಷ್ಣ, ಧರ್ಮ ಅಕ್ಷಯವಾದದ್ದು; ಅಧರ್ಮದಿಂದ ಧರ್ಮದ ಕೊನೆ ಅಸಾಧ್ಯ ಎಂಬುದನ್ನು ಸೂಚ್ಯವಾಗಿ ತಿಳಿಸುತ್ತಾನೆ.ಅಂತೆಯೇ, ಜಗತ್ತಿನ ಎಂತಹ ಬಲಶಾಲಿ ಶಕ್ತಿಯೇ ಅಸಹಾಯಕವಾದರೂ, ಧರ್ಮದ ರಕ್ಷಣೆಗೆ ‘ಕೃಷ್ಣ’ನಿದ್ದಾನೆ ಎಂಬ ಘನ ನಿಲುವನ್ನು ಆತನ ಈ ಲೀಲೆಯಿಂದ ಅರ್ಥೈಸಿಕೊಳ್ಳಬಹುದು.

ಇನ್ನು ‘ಕರ್ಣವಧೆ’ಯ ಸಂದರ್ಭ. ನಿರಾಯುಧನಾಗಿ, ಹೂತಿದ್ದ ರಥದ ಚಕ್ರವನ್ನು ಎತ್ತುತ್ತಿದ್ದ ಕರ್ಣನ ಮೇಲೆ ಬಾಣ ಪ್ರಯೋಗಿಸಿ ಅವನನ್ನು ವಧಿಸುವಂತೆ ಪಾರ್ಥಸಾರತಿಯು  ಅರ್ಜುನನಿಗೆ ಆದೇಶಿಸುತ್ತಾನೆ. ಕರ್ಣ ಮಹಾಪರಾಕ್ರಮಿ. ಆತನ ಜೀವನ ವೃತ್ತಾಂತವನ್ನು ಅವಲೋಕಿಸಿದಾಗ ಅವನು ನಮಗೆ ಕಾಣುವುದು ಒಬ್ಬ ದುರಂತನಾಯಕನಾಗಿ.  ಆದರೆ ಆ ದುರಂತಕ್ಕೆ ಕಾರಣ ಹುಡುಕಹೋದಾಗ ಎಲ್ಲೋ ಒಂದು ಕಡೆ ಎಲ್ಲದಕ್ಕೂ ಅವನೇ ಹೊಣೆಯಾಗಿ ನಿಲ್ಲುತ್ತಾನೆ. ಸೂತಪುತ್ರನಾಗಿದ್ದೂ ಅರ್ಜುನನೊಡನೆ ಸಮಬಲದಿಂದ ಹೋರಾಡಬೇಕೆಂಬ ಛಲದಲ್ಲಿ, ಆತ ತಾನು ತುಳಿಯುತ್ತಿರುವದಾರಿಯ ಕುರಿತು ಎಂದೂ ಆಲೋಚಿಸುವುದೇ ಇಲ್ಲ. ದುರ್ಯೋಧನನಿಗೆ ಪಾಂಡವರ ಮೇಲಿನ ವಿನಾಕಾರಣ ದ್ವೇಷ ಒಂದು ಕಡೆಯಾದರೆ, ಅರ್ಜುನನ ಜೊತೆ ಸಮಬಲವಾಗಿ ನಿಲ್ಲುವ ಒಂದು ಆಸೆಯೋ,ಹಂಬಲವೋ, ಹಠವೋ ಕರ್ಣನನ್ನು ಧರ್ಮಾಂಧನನ್ನಾಗಿ ಮಾಡುತ್ತದೆ. ಇವುಗಳನ್ನೆಲ್ಲ ಪರಿಶೀಲಿಸಿದಾಗ ಮತ್ತೆ ಕೃಷ್ಣನ ನಿರ್ಧಾರದ ಆಳ ಎಷ್ಟೆಂದು ನಮಗೆ ಅರಿವಾಗುತ್ತದೆ. ಒಬ್ಬ ವ್ಯಕ್ತಿ ಎಷ್ಟೇಪರಾಕ್ರಮಿಯಾಗಲಿ, ಬುದ್ಡಿವಂತನಾಗಲಿ ಆತನ ಪರಾಕ್ರಮ ಅಥವಾ ಬುದ್ದಿವಂತಿಕೆ ಧರ್ಮದ ಅಳಿವಿಗೆ ಕಾರಣವಾಗುವುದಾದರೆ ಅದು ತೃಣಕ್ಕೆ ಸಮಾನ ಎಂಬುದನ್ನು ಜಗತ್ತಿಗೆ ತನ್ನದೇ ಅದ ರೀತಿಯಲ್ಲಿಸೂಚ್ಯವಾಗಿ ತಿಳಿಸಿದ ಪರಿಯಲ್ಲಿ ‘ಕೃಷ್ಣ’ ಎಂಬ ವ್ಯಕ್ತಿತ್ವದ ಪರಿಚಯ ನಮಗಾಗುತ್ತದೆ.

ಕೃಷ್ಣನ ಲೀಲೆಯ ಇನ್ನೊಂದು ಸುಂದರ ಸಂದರ್ಭ ಎಂದರೆ ‘ಕೃಷ್ಣ ಸಂಧಾನ’. ಧರ್ಮಜನ ಇಚ್ಛೆಯ ಮೇರೆಗೆ ಕೃಷ್ಣನಿಂದ ರಚಿಸಲ್ಪಟ್ಟ ಒಂದು ಚತುರ ಸಂದರ್ಭ. ಜಗನ್ನಿಯಾಮಕ ಕೃಷ್ಣನನ್ನೇತನ್ನ ಸಭೆಯ ರಚನೆಯಿಂದ ನಿಂದಿಸಿ, ಅವಮಾನಿಸುತ್ತೇನೆ ಎಂಬ ಹುಂಬತನದಿಂದ ಸಿಂಹಾಸನದಲ್ಲಿ ಆಸೀನನಾಗಿದ್ದ ದುರ್ಯೋಧನನನ್ನು ಸಿಂಹಾಸನ ಸಮೇತ ನೆಲಕ್ಕುರುಳಿಸಿ, ಈ ಸಂಧಾನದನಿರ್ಮಾಪಕ, ನಿರ್ದೇಶಕ ಎಲ್ಲವೂ ತಾನು; ಇದು ‘ಕೃಷ್ಣ  ಸಂಧಾನ’, ‘ಕೌರವ ಸಂಧಾನ’ ಅಲ್ಲ ಎಂಬುದನ್ನು ಸುಯೋಧನ ಹಾಗೂ ಅವನ ಬಳಗಕ್ಕೆ ಮನಮುಟ್ಟುವಂತೆ ಬಿಂಬಿಸುವ ಕೃಷ್ಣ, ಅವರ ದುರಂತಅಂತ್ಯದ “trailer” ಅನ್ನಬಹುದೇನೋ; ಅಂತಹ “trailer”ನ ದರ್ಶನ ಮಾಡಿಸುತ್ತಾನೆ.

ಕೃಷ್ಣ ಮನಸ್ಸು ಮಾಡಿದ್ದರೆ ಕೌರವರ ಸಂಹಾರ ಅವನೇ ಮಾಡಬಹುದಿತ್ತು, ಪಾಂಡವರು ಎಂಬ ಆಯುಧಗಳ ಅವಶ್ಯಕತೆ ಅವನಿಗೆ ಇರಲಿಲ್ಲ. ಆದರೆ ಆತ ಹಾಗೆ ಮಾಡುವುದಿಲ್ಲ.ಕುರುಕ್ಷೇತ್ರ ಯುದ್ದದಲ್ಲಿ ಸಾರಥಿಯ ಹೊರತಾಗಿ ಉಳಿದ ಎಲ್ಲಾ ಕಾರ್ಯಗಳಲ್ಲೂ ಕೃಷ್ಣನ ಪರೋಕ್ಷ ಪಾಲ್ಗೊಳುವಿಕೆಯನ್ನು ಕಾಣಬಹುದೇ ಹೊರತು ಆತ ನೇರವಾಗಿ ಪಾಲ್ಗೊಳ್ಳುವುದಿಲ್ಲ. ಕಾರಣವೇನು?ಎಂದು ಆಲೋಚಿಸಿದಾಗ ನನ್ನ ಯೋಚನಾಶಕ್ತಿಗೆ ನಿಲುಕಿದ್ದು ಇಷ್ಟು;

ಧರ್ಮ-ಅಧರ್ಮಗಳ ನಡುವಿನ ಸಮರ ಯಾವುದೇ ಕಾಲದಲ್ಲಿ, ಯಾವುದೇ ರೀತಿಯಲ್ಲಿ, ಎಲ್ಲಿಯೇ ನಡೆಯುತ್ತಿದ್ದರೂ ತಾನು ಧರ್ಮದ ಜೊತೆಗಿದ್ದು ಜಯವನ್ನು ತಂದುಕೊಡುತ್ತೇನೆ ಎಂಬುದನ್ನು ಜಗತ್ತಿಗೆಸಾರಲು ಕೃಷ್ಣ ಆರಿಸಿಕೊಂಡ ದಾರಿ ಇದಾಗಿರಬಹುದು. ಅಂತೆಯೇ ಅಧರ್ಮದ ಅಳಿವಿಗೆ ಕೃಷ್ಣನ ಭೌತಿಕ ಪಾಲ್ಗೊಳ್ಳುವಿಕೆಯ ಅಗತ್ಯವಿಲ್ಲ ಎಂಬುದನ್ನು ಸೂಚಿಸಲು ಕೃಷ್ಣ ಹೀಗೆ ಮಾಡಿರಬಹುದುಎಂಬುದೊಂದು ಊಹೆ. ಇವೆಲ್ಲವುಗಳ ಹೊರತಾಗಿಯೂ ಸಾರಥಿಯಾಗಿ ನಿಂತ ಕೃಷ್ಣ ಈ ಎಲ್ಲ ನಾಟಕದ ಸಾರಥಿ ತಾನು ಎಂಬುದನ್ನು ಸಹ ಸಮಯೋಚಿತವಾಗಿ ತಿಳಿಸುತ್ತಾನೆ.

ಹೀಗೆ ತನ್ನ ಪ್ರತಿ ಲೀಲೆಯಲ್ಲೂ ಜಗತ್ತಿಗೆ ಒಂದೊಂದು ಸಂದೇಶವನ್ನು ನೀಡಿ, ‘ಭಗವದ್ಗೀತೆ’ ಎಂಬ ಮಹಾನ್ ಗ್ರಂಥವನ್ನು ಬೋಧಿಸಿದ ‘ಗೀತಾಚಾರ್ಯ’ನಾತ. ಅಂತಹ ಮಾನವ ಸ್ವರೂಪಿದೇವನಿಗೆ, ಆ ಮಹಾನ್ ವ್ಯಕ್ತಿತ್ವಕ್ಕೆ, ತನ್ನ ಬಾಲಲೀಲೆಗಳಿಂದ ನಮ್ಮ ಬಾಲ್ಯವನ್ನು ಸುಂದರ ಕಥೆಗಳಿಂದ ರೂಪಿಸಿದ ನಮ್ಮ ಉಡುಪಿಯ ‘ಕಡಗೋಲು  ಕೃಷ್ಣ’ನಿಗೆ  ಅಷ್ಠಮಿಯ ಸುಸಂದರ್ಭದಲ್ಲಿ ನುಡಿನಮನ.

“ಪರಿತ್ರಾಣಾಯ ಸಾಧೂನಾಂ, ವಿನಾಶಾಯಚ ದುಷ್ಕ್ರತಾಂ;

ಧರ್ಮ ಸಂಸ್ಥಾಪನಾರ್ಥಾಯ, ಸಂಭವಾಮಿ ಯುಗೇ ಯುಗೇ…!!!”

Facebook ಕಾಮೆಂಟ್ಸ್

Anoop Gunaga: ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ. ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ
Related Post