ಶಬ್ದ ಪಂಜರದಲ್ಲಿ
ಭಾವ ಹಕ್ಕಿಯ ಹಿಡಿದು
ಕಾವ್ಯ ಕನಸನು
ನಾನು ಹೆಣೆಯುತ್ತಿದ್ದೆ
ಕಲ್ಪನೆಯ ಮಧುರ ನೆನಪುಗಳನಿರಿಸಿ
ಸೃಜನ ಸುಖದಲಿ
ನಾ ನಿನ್ನ ಮರೆತಿದ್ದೆ
ಯಾವುದೋ ಘಳಿಗೆಯಲಿ
ಹಕ್ಕಿ ಗೂಡುಬಿಟ್ಟು ಹಾರಿತು
ನನ್ನ ಅರಿವಿಗೆ ಬಾರದೆ
ಅಸ್ಥಿಪಂಜರದಂತೆ ಗೂಡು ಉಳಿದಿತ್ತು
ಪದಗಳೇ ಕಳಚಿದವು ಹಾಡಿನಿಂದ
ಹಕ್ಕಿ ಹಾರಿಹೋದ ಚಿಂತೆ
ನನ್ನ ಮುತ್ತುತ್ತಿದ್ದಂತೆ
ಮೇಲೆ ಮುಗಿಲಲ್ಲಿ
ಹಕ್ಕಿ ಹಾರಾಡುತ್ತಿತ್ತು
ಇಲ್ಲಿ ಖಾಲಿಯ ಗೂಡು
ಅಲ್ಲಿ , ನೀಲಿ ಬಾನು
ನನ್ನ ದೃಷ್ಟಿ
ಅದರ ಬೆನ್ನು ಹಿಡಿದಿತ್ತು
ನನ್ನ ಕಣ್ಣನ್ನು
ನನಗೇ ನಂಬಲಾಗಲಿಲ್ಲ
ನೋಡು ನೋಡುತ್ತಲೇ
ಹಕ್ಕಿ ಮಾಯವಾಯ್ತು
ಹಕ್ಕಿ ಮರೆಯಾಗುತ್ತಲೆ
ಹಕ್ಕಿಗಳು ಮೂಡಿದವು
ಒಂದಲ್ಲ ,ಎರಡಲ್ಲ………..
ಎಣಿಕೆ ಮೀರಿದ್ದು
ಶಬ್ದ ಪಂಜರ ದಾಟಿ
ಮುಗಿಲಿಗೆ ಹಾರಿದ ಹಕ್ಕಿ
ಚುಕ್ಕಿಗಳ ರಾಶಿಯಲ್ಲಿ
ಒಂದು ಚುಕ್ಕಿಯಾಯ್ತು
ಮುಗಿಲು ಬರೆಯಿತು ಕವಿತೆ
ಚಂದ್ರ ಶೀರ್ಷಿಕೆಯಾದ
ಮಿನುಗುವ ಚುಕ್ಕೆಯ ಲೋಕ ಕಾವ್ಯವಾಯಿತು !
– Prabhakar Tamragouri
prabhakar_tamragouri@yahoo.co.in
Facebook ಕಾಮೆಂಟ್ಸ್