ಪ್ರತಿಯೊಬ್ಬರ ಜೀವನವೂ ಹಾಗೆ ಅಲ್ಲಿ ಒಂದು ಅದ್ಭುತ ಎಂಬಂತ ಘಟನೆ ಹಾಗು ಇನ್ನೊಂದು ತೀರ ಅರಗಿಸಿಕೊಳ್ಳಲಾಗದ ಘಟನೆ ನಡೆದಿರುತ್ತದೆ. ಆದರೆ ಕೆಲವೇ ಕೆಲವರ ಬದುಕಿನಲ್ಲಿ ದುರಂತ ಎಂಬಂಥ ಘಟನೆ ನಡೆದು ಬಿಡುತ್ತದೆ. ಆ ದುರಂತ ಘಟನೆ ಬದುಕಿನ ದಿಕ್ಕನ್ನೇ ಬದಲಾಯಿಸಿಬಿಡುತ್ತದೆ. ನಿರಂತರವಾದ ಬದುಕಿನ ಜಂಜಾಟದಲ್ಲಿ ಏನಾದರೊಂದು ಸಾಧಿಸಬೇಕೆಂಬ ಹಂಬಲದಿಂದ ಬದುಕುತ್ತಿರುವವರ ಜೀವನದಲ್ಲಿ ದುರಂತಗಳು ನಡೆದುಬಿಟ್ಟರೆ ಆ ಮನುಷ್ಯ ಮಾನಸಿಕವಾಗಿ ಕುಸಿಯುವುದರಲ್ಲಿ ಅನುಮಾನವೇ ಇಲ್ಲ.ಹುಟ್ಟುತ್ತ ದೈಹಿಕವಾಗಿ ಸದೃಢನಾಗಿದ್ದು ಮತ್ತು ಬದುಕಿನಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬ ಹಂಬಲದ ಹುಡುಗನೊಬ್ಬನ ಬದುಕಿನಲ್ಲಿ ದುರಂತ ಸಂಭವಿಸಿ ಆತ ಅಂಗವೈಕಲ್ಯನಾಗಿಬಿಟ್ಟರೆ? ಭವಿಷ್ಯವೇ ಮುಗಿದುಹೋಯಿತು ಎಂದು ಆತ ಜರ್ಝರಿತನಾಗಿಬಿಡುವದರಲ್ಲಿ ಆಶ್ಚರ್ಯವಿಲ್ಲ.ಆದರೆ ಅದೇ ವ್ಯಕ್ತಿ ಸಮಾಜಕ್ಕೆ ಮಾದರಿಯಾಗಿ ನಿಂತುಬಿಟ್ಟರೆ ಅದಕ್ಕಿಂತ ದೊಡ್ಡ ಸಾಧನೆ ಇರಲು ಸಾದ್ಯವಿಲ್ಲ ಅಲ್ಲವೇ?
ನಮ್ಮ ಬಳಿ ಎಲ್ಲವೂ ಇದೆ.ಸದೃಢವಾದ ದೇಹ, ಒಳ್ಳೆಯ ಮನಸ್ಸು, ಪ್ರೀತಿಯ ಕುಟುಂಬ, ಸಮಾಜದಲ್ಲೊಂದು ಗೌರವ ಇನ್ನೂ ಏನೇನೋ, ಆದರೂ ನಾವು ಇನ್ಯಾವುದನ್ನೋ ಬಯಸುತ್ತ ಕೂತಿರುತ್ತೇವೆ. ದೇವರನ್ನ ಬಯ್ಯುತ್ತಿರುತ್ತೇವೆ.”ಇದೂ ಒಂದು ಜೀವನವೇ?” ಎಂದು ಪ್ರತೀ ಕ್ಷಣವೂ ನಮ್ಮನ್ನ ನಾವು ಪ್ರಶ್ನೆ ಕೇಳಿಕೊಳ್ಳುತ್ತಿರುತ್ತೇವೆ. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂಬ ಕವಿಯ ಸಾಲು ಅಕ್ಷರಶ: ನಿಜ. ಬೇಕೆಂಬಷ್ಟು ಹಣವಿಲ್ಲವೆಂಬ ಚಿಂತೆ, ಒಳ್ಳೆಯ ಹೆಂಡತಿ ಅಥವಾ ಗಂಡನಿಲ್ಲ ಎಂಬ ಚಿಂತೆ, ಇನ್ನೂ ಕೆಲವರಿಗೆ ಮದುವೆಯಾಗಲಿಲ್ಲ ಎಂಬ ಚಿಂತೆ, ನಂಗೊಂದು ಲವ್ವರ್ ಇಲ್ಲ ಎಂಬ ಚಿಂತೆ, ನಾನು ಸುಂದರವಾಗಿಲ್ಲ ಎಂಬ ಚಿಂತೆ ಹೀಗೆ ಇನ್ನೂ ಅನೇಕ ಚಿಂತೆಗಳ ಸಂತೆಯಲ್ಲಿ ನಿಂತಿದ್ದೇವೆ ನಾವು. ಆರೋಗ್ಯವಂತ ದೇಹವಿದೆ ಆದರೂ ನಮಗೆ ಚಿಂತಗಳ ಬಿಟ್ಟು ಹೊರಬರಲಾಗುತ್ತಿಲ್ಲ. ಜೀವನವೇ ಹೀಗೆ ಅಲ್ಲವೇ? ಆಸೆ, ಚಿಂತೆಗಳನ್ನ ಬಿಟ್ಟು ಬದುಕುವುದು ಅಸಾಧ್ಯವೇನಲ್ಲ. ಆದರೆ ಅಂಗವೈಕಲ್ಯದಿಂದ ಬಳಲುತ್ತಿರುವ ಅದೆಷ್ಟೋ ಜನರು ತಮ್ಮ ಜೀವನದ ಅತ್ಯಮೂಲ್ಯ ಕ್ಷಣಗಳನ್ನು ಅನುಭವಿಸುವುದರಿಂದ ವಂಚಿತರಾಗಿರುತ್ತಾರೆ. ಬೇಕೆಂದುಕೊಂಡಾಗ ಸ್ನೇಹಿತರ ಜೊತೆ ಸುತ್ತಲಾಗುವುದಿಲ್ಲ, ಮದುವೆ ಮತ್ತು ಮಕ್ಕಳು ಎಂಬುದು ಕನಸಾಗಿಯೇ ಇರುವ ಸಂಭವವೇ ಜಾಸ್ತಿ. ತಮ್ಮ ಅದೆಷ್ಟೋ ಆಸೆ, ಆಕಾಂಕ್ಷೆಗಳನ್ನ ಹುದುಗಿಸಿಟ್ಟುಕೊಂಡು ಬದುಕುವ ಅದೆಷ್ಟೋ ವಿಕಲಚೇತನಗಳು ನಮಗೆ ಮಾದರಿ ಆಗುತ್ತಾರೆ. ಜೀವಂತವಾಗಿ ಬದುಕುತ್ತ ಬದುಕಿನಲ್ಲಿ ದಿಢೀರ್ ಎಂದು ಬಂದ ದುರಂತವನ್ನೇ ಮೆಟ್ಟಿ ನಿಂತು ದೇಹ ಅಂಗವೈಕಲ್ಯದಿಂದ ಬಳಲುತ್ತಿದ್ದರು ಮನಸ್ಸು ಗಟ್ಟಿಯಾಗಿದೆ ನಾನೂ ಬದುಕಬಲ್ಲೆ ಜೊತೆಗೆ ಸಮಾಜಕ್ಕೂ ನನ್ನ ಕೈಲಾದ ಸೇವೆ ಮಾಡಬಲ್ಲೆ ಎಂಬುದನ್ನ ಸಾಧಿಸಿ ತೋರಿಸಿದ ವ್ಯಕ್ತಿಯೊಬ್ಬನ ಯಶೋಗಾಥೆಯನ್ನ ತೆರೆದಿಡುತ್ತಿದ್ದೇನೆ. ಈ ವ್ಯಕ್ತಿಯ ಬಗ್ಗೆ ತಿಳಿಯದೇ ಇರುವವರೇ ಜಾಸ್ತಿ. ರಾಷ್ಟ್ರಸೇವೆಯ ಮಾಡಬೇಕೆಂಬ ಹಂಬಲ ಮನದೊಳಗೆ ಮೂಡುತ್ತಿದ್ದಾಗಲೆ ವಿಧಿಯ ಆಟದೆದುರು ಅಂಗವೈಕಲ್ಯಕ್ಕೆ ತುತ್ತಾದ ವ್ಯಕ್ತಿ ಕೊನೆಗೂ ರಾಷ್ಟ್ರಸೇವೆಯ ಕನಸನ್ನ ನನಸಾಗಿಸಿಕೊಂಡರಲ್ಲ.ಅದು ನಿಜವಾಗಲೂ ಪ್ರಶಂಸನೀಯವಾದದ್ದು ಅಲ್ಲವೇ?.
ಆದರೆ ಮನುಷ್ಯ ಬಯಸುವುವುದೊಂದು ವಿಧಿ ಬಯಸುವುದು ಇನ್ನೊಂದು.ರಾಮಕೃಷ್ಣನ್ ರ ವಿಚಾರದಲ್ಲೂ ಹಾಗೇ ಆಯಿತು,ಅವರ ಆಸೆ ಕನಸು ಮತ್ತು ಭವಿಷ್ಯಕ್ಕೊಂದು ಬಲವಾದ ಪೆಟ್ಟು ಬಿದ್ದಿತ್ತು. ಅಂದು ಅಕ್ಟೋಬರ್ ೧೦ ೧೯೭೫, ಆ ದಿನ ಕೊನೆಯ ವರ್ಷದ ಇಂಜಿನಿಯರಿಂಗ್ ಹಾಗೂ ಟ್ರೇನಿಂಗ್ ಕ್ಯಾಂಪ್ ಸೇರಿದ್ದ ಹಾಗೂ ಅಲ್ಲಿ ತರಬೇತಿಯಲ್ಲಿ ತೊಡಗಿದ್ದ ರಾಮಕೃಷ್ಣನ್ ಸುಮಾರು ೧೫ ಅಡಿ ಎತ್ತರದಿಂದ ಆಕಸ್ಮಿಕವಾಗಿ ಬಿದ್ದುಬಿಟ್ಟರು. ನೌಕಾದಳದ ಅಧಿಕಾರಿಯಾಗಬೇಕೆಂಬ ಕನಸು ಕಂಡ ಹುಡುಗನಿಗೆ ಬಲವಾದ ಪೆಟ್ಟು ಬಿದ್ದಿತ್ತು.ಕತ್ತಿನ ಕೆಳಭಾಗದ ಸಂಪೂರ್ಣ ದೇಹ ಕೆಲಸ ಮಾಡುವುದನ್ನೆ ನಿಲ್ಲಿಸಿತ್ತು ಅಂದರೆ ಆ ಭಾಗ ಸ್ಪರ್ಷಜ್ಞಾನವನ್ನ ಕಳೆದುಕೊಂಡು ಬಿಟ್ಟಿತ್ತು. Cervical Spine Injury ಪರಿಣಾಮ ಇದಾಗಿತ್ತು.ಅದೊಂದು ಆಕಸ್ಮಿಕ ಅಘಾತವಾಗಿತ್ತು.ಅಲ್ಲಿಂದ ಅವರನ್ನು ಬೆಂಗಳೂರಿನ Airforce Command Hospital ಗೆ ಸೇರಿಸಲಾಯಿತು. ಅಲ್ಲಿ ಅವರಿಗೆ ಸತತ ಮೂರು ತಿಂಗಳುಗಳ ಕಾಲ ಚಿಕಿತ್ಸೆ ನೀಡಲಾಯಿತು.ಆದರೆ ಅವರ ಆರೋಗ್ಯದಲ್ಲಿ ಸ್ವಲ್ಪವೂ ಚೇತರಿಕೆ ಕಾಣಲಿಲ್ಲ. ಚಂದದ ಭವಿಷ್ಯದ ಕನಸು ಕಂಡವನು ಆಸ್ಪತ್ರೆಯಲ್ಲಿ ಮಾತನಾಡಲಾರದ ಪರಿಸ್ಥಿತಿಯಲ್ಲಿ ನಿರ್ಜೀವ ವಸ್ತುವಿನಂತೆ ಮಲಗಿದ್ದನು. ನಂತರ ಅಲ್ಲಿಂದ ಅವರನ್ನು ಪುಣೆಯ ಕಡಕಿಯಲ್ಲಿನ ಮಿಲಿಟರಿ ಆಸ್ಪತ್ರೆಗೆ ಸೇರಿಸಲಾಯಿತು.
ಪುಣೆಯ ಮಿಲಿಟರಿ ಆಸ್ಪತ್ರೆ ಯಲ್ಲಿ ಜೀವಂತ ಶವವಾಗಿ ಮಲಗಿದ್ದರು ರಾಮಕೃಷ್ಣನ್.ದೇಶ ಸೇವೆಯನ್ನು ಮಾಡಬೇಕೆಂದು ಮಿಡಿಯುತ್ತಿದ್ದ ಮನ ಅಂದು ಒದ್ದಾಡುತ್ತಿತ್ತು. ಇಂದು ಅವರು ಹೇಳುತ್ತಾರೆ “ಅಂದು ಕನಸು ಕಮರಿಹೋಗಿತ್ತು,ಯಾಕಾದರೂ ಬದುಕಿದ್ದೇನೆ ಎಂಬಷ್ಟು ಕುಗ್ಗಿ ಹೋಗಿದ್ದೆ“. ಈ ಮಾತನ್ನು ಕೇಳಿದರೇ ಮನಸ್ಸು ಭಾರವಾಗುತ್ತದೆ. ಆ ಆಸ್ಪತ್ರೆಯಲ್ಲಿ ಸತತ ಹತ್ತು ತಿಂಗಳುಗಳ ಕಾಲ ಅವರನ್ನು ತೀವ್ರ ನಿಗಾ ಘಟಕದಲ್ಲಿರಸಲಾಯಿತು. ಒಂದು ಕಡೆ ಕಮರಿ ಹೋದ ಕನಸು, ಇನ್ನೊಂದು ಕಡೆ ಭೂಮಿಗೆ ಭಾರವಾಗಿ ಬಿಟ್ಟೆನಲ್ಲಾ ಎಂಬ ಯೋಚನೆ ಒಟ್ಟಿನಲ್ಲಿ ರಾಮಕೃಷ್ಣನ್ ಹಂತ ಹಂತವಾಗಿ ಕುಸಿಯುತ್ತಿದ್ದರು. ಆಗ ಒಬ್ಬ ವ್ಯಕ್ತಿಯ ಆಗಮನ ಅವರ ಜೀವನದಲ್ಲಾಯಿತು.ಜೀವನವೇ ಹಾಗೆ ಬಹುಷ: ಸೋತುಕೂತಾಗ ನಮ್ಮ ಮನಸ್ಸನ್ನು ಗಟ್ಟಿ ಮಾಡಲು ದೇವರೇ ಕೆಲವರನ್ನ ಕಳುಹಿಸುತ್ತಾನೆ ಅನ್ನಿಸುತ್ತೆ.ರಾಮಕೃಷ್ಣನ್ ರ ಜೀವನದಲ್ಲೂ ಹಾಗೇ ಆಯಿತು.ಅವರ ಪಾಲಿಗೆ ಆಶಾಕಿರಣವಾಗಿ ಬಂದವರು ಅದೇ ಮಿಲಿಟರಿ ಆಸ್ಪತ್ರೆಯ ಆರ್ಥೋಪಿಡಿಕ್ ಫಿಸಿಶಿಯನ್ ಏರ್ ಮಾರ್ಷಲ್ ಡಾ|| ಅಮರಜಿತ್ ಸಿಂಗ್ ಚಾಹಲ್. ಚಾಹಲ್ ರಾಮಕೃಷ್ಟನ್ ಅವರಿಗೆ ಭರವಸೆಯನ್ನ ತುಂಬಿದರು. “ನಿನ್ನ ಕತ್ತಿನ ಕೆಳಭಾಗ ಕೆಲಸ ಮಾಡದೇ ಇರಬಹುದು ಆದರೆ ನಿನ್ನ ಮೆದುಳು ಸಾಮಾನ್ಯರಂತೆ ಯೋಚಿಸುತ್ತದೆ, ಸಾಮಾನ್ಯರಿಗಿಂತಲೂ ವೇಗಾವಾಗಿ ಯೋಚಿಸಬಲ್ಲುದು ಹಾಗಾಗಿ ಕುಗ್ಗಿ ಕೂರಬೇಡ ಏನಾದರೂ ಸಾಧಿಸು, ಮಾದರಿಯಾಗು” ಇದು ಚಾಹಲ್ ರಾಮಕೃಷ್ಣನ್ ರಿಗೆ ಹೇಳಿದ ಮಾತು.ಸೋತು ಕೂತ ರಾಮಕೃಷ್ಣನ್ ರಲ್ಲಿ ಒಂದು ಭರವಸೆಯ ಸಂಚಲನವಾಗಿತ್ತು, ನಾನೇನಾದರೂ ಮಾಡಬೇಕೆಂಬಷ್ಟು ಗಟ್ಟಿಯಾಗಿತ್ತು ಮನಸ್ಸು.ಅಷ್ಟರಲ್ಲಿ ಸಾಕಷ್ಟು ಚೇತರಿಸಿಕೊಂಡಿದ್ದ ರಾಮಕೃಷ್ಣನ್ ಓಡಾಡುತ್ತಿದ್ದುದು wheel chair ಮೇಲೆ. ಮೊದಮೊದಲು ಸೇವೆ ಮಾಡಬೆಕೆಂದುಕೊಂಡ ನನ್ನ ಬದುಕು wheel chair ನಲ್ಲೇ ಮುಗಿತು ಹೋಗುತ್ತಾ ಎಂಬ ಪ್ರಶ್ನಾರ್ಥಕ ಮನೋಭಾವ ಡಾ|| ಚಾಹಲ್ ರ ಆಗಮನದಿಂದ ಬದಲಾಗಿತ್ತು. ನನ್ನಂತಹ ಅದೆಷ್ಟೋ ಅಂಗವಿಕಲರು ಈ ಭೂಮಿಯ ಮೇಲಿದ್ದಾರೆ ಅವರಿಗೆಲ್ಲ ನಾನು ಧೈರ್ಯ ತುಂಬಬೇಕೆಂಬ ಪಣ ತೊಟ್ಟರು.ಕೈಲಾದಷ್ಟು ಸಮಾಜಕ್ಕೇನನ್ನಾದರೂ ನಿಡಬೇಕೆಂಬ ಹಂಬಲ ಮನದಲ್ಲಿ ಜೀವ ಪಡೆದುಕೊಂಡಿತ್ತು.
ಅದರ ಫಲವೇ ೧೯೮೧ರಲ್ಲಿ ಆರಂಭವಾದ “ಅಮರ ವಿದ್ಯಾ ಸಂಘಮ್“. ತನ್ನಂತ ಪರಿಸ್ಥಿತಿಯನ್ನ ಬಾಲ್ಯದಲ್ಲೇ ಪಡೆದುಕೊಂಡ ಮಕ್ಕಳು ಜೀವನ ಎದುರಿಸುವಂತಾಗಬೇಕೆಂಬ ಮಹದಾಸೆಯೊಂದಿಗೆ “ಅಮರ ಸೇವಾ ಸಂಘಮ್“ಎಂಬ ಶಾಲೆಯನ್ನು ಆರಂಭಿಸಿದರು ರಾಮಕೃಷ್ಣನ್.ತಮ್ಮದೇ ಸ್ವಂತ ಚಿಕ್ಕ ಶೆಡ್ ಒಂದರಲ್ಲಿ ಕೇವಲ ಐದು ಮಕ್ಕಳಿಗೆ ಉಚಿತವಾಗಿ ಪಾಠ ಮಾಡಲು ಶುರು ಮಾಡಿಯೇಬಿಟ್ಟರು .ಪೋಲಿಯೋ ಲಸಿಕೆಗಳನ್ನು ಮತ್ತು ಆರೋಗ್ಯ ಸಂಬಂಧಿ ತರಬೇತಿಗಳನ್ನ ಗ್ರಾಮೀಣ ಭಾಗದ ಜನರಿಗೆ ನೀಡುವ ಕೆಲಸವನ್ನ ‘ಅಮರ ಸೇವಾ ಸಂಘ‘ ಮಾಡುತ್ತಿತ್ತು. ತಮ್ಮ ಬದುಕಿನಲ್ಲಿ ಭರವಸೆಯ ಕಿರಣ ಮೂಡಿಸಿದ ಡಾ||ಅಮರಜಿತ್ ಸಿಂಗ್ ಚಾಹಲ್ ರ ಹೆಸರನ್ನೇ ತಮ್ಮ ಕನಸಿಗೆ ಇಟ್ಟು ನನಸಾಗಿಸಲು ಹೊರಟಿದ್ದರು ರಾಮಕೃಷ್ಣನ್.
೧೯೮೪ರ ಸುಮಾರಿಗೆ ಕೆಲವು ಪತ್ರಕರ್ತರು ‘ಅಮರ ಸೇವಾ ಸಂಘ‘ದ ಕೆಲಸಗಳ ಬಗ್ಗೆ ಬರೆದರು. ಹಂತ ಹಂತವಾಗಿ ರಾಮಕೃಷ್ಣನ್ ರ ಕನಸು ನನಸಾಗತೊಡಗಿತು. ಮುಂದೆ ಇದೆ ಸಂಘಟನೆಗಾಗಿ ಸ್ವಲ್ಪ ಜಾಗವನ್ನೂ ರಾಮಕೃಷ್ಣನ್ ಖರೀದಿಸಿದರು. ಆದರೆ ಅವರ ಈ ಕೆಲಸಕ್ಕೆ ಬಲ ಬಂದಿದ್ದು ಚೆನೈನ ಪ್ರಸಿದ್ದ ಲೆಕ್ಕಪರಿಶೋಧಕರಾದ ಶಂಕರ್ ರಾಮನ್ ಅಮರ ಸೇವಾ ಸಂಘಮ್ ಅನ್ನು ಸೇರಿದಾಗ. ೧೯೯೨ರಿಂದ ಅವರು ಸಂಘದ ಭಾಗವಾದರು.ಅ ವರು ಕೂಡ ಅಂಗವೈಕಲ್ಯದಿಂದ ಬಳಲುತ್ತಿದ್ದರು Muscular Destrophy ಯಿಂದ ಬಳಲುತ್ತಿದ್ದ ಅವರು ರಾಮಕೃಷ್ಣನ್ ರ ಸಂಘಟನೆಯ ಬೆನ್ನೆಲುಬಾಗಿ ನಿಂತರು ಪ್ರಸ್ತುತ ಅವರು ‘ಅಮರ ಸೇವಾ ಸಂಘಮ್‘ನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಐದು ಜನ ವಿದ್ಯಾರ್ಥಿಗಳಿಂದ ಶುರುವಾದ ಶಾಲೆ ಈಗ ೧೦೦೦ ಕ್ಕೂ ಅಧಿಕ ವಿಕಲಚೇತನ ಮಕ್ಕಳಿಗೆ ಬದುಕಿನ ಪಾಠ ಹೇಳುತ್ತಿದೆ. ೩೦ ಎಕರೆ ಪ್ರದೇಶದಲ್ಲಿ ವಿಶಾಲವಾದ ಶಾಲೆಯನ್ನು ಹೊಂದಿದೆ. “ಅಮರ ಸೇವಾ ಸಂಘಮ್” ನ ಸೇವೆಗಳು ಅನೇಕ ಅದರಲ್ಲಿ ಕೆಲವು ಅಂದರೆ ಸೆರೆಬ್ರಲ್ ಪಾಲ್ಸಿ ಮತ್ತು ಮಂದಬುದ್ಧಿ ಮಕ್ಕಳಿಗಾಗಿ ಡೇಕೇರ್ ಸೆಂಟರ್, ಶಿವ ಸರಸ್ವತಿ ರಾಮಕೃಷ್ಣನ್ ಪುನರ್ವಸತಿ ಕೇಂದ್ರ ಸ್ಥಾಪನೆ, ದೈಹಿಕ ವೈಕಲ್ಯ ಹೊಂದಿರಯವವರಿಗಾಗಿ ವೃತ್ತಿಪರ ತರಬೇತಿ ಕೇಂದ್ರ ಹಾಗೂ ವಿಶೇಷ ಅಧ್ಯಯನ ಕೇಂದ್ರ, 0-5 ವರ್ಷಗಳ ಮಕ್ಕಳಿಗೆ ವೈದ್ಯಕೀಯ ಪರೀಕ್ಷೆ ಘಟಕ ಹೀಗೆ ಸೇವೆಗಳ ಪಟ್ಟಿ ಬೆಳೆಯುತ್ತಲೇ ಸಾಗುತ್ತದೆ. ರಾಮಕೃಷ್ಣನ್ ರ ಈ ಕೆಲಸ ಗುರುತಿಸಿ ಅವರಿಗೆ ೨೦೦೭ ರಲ್ಲಿ IBN7 Super Idol life time achievement ಪ್ರಶಸ್ತಿಯನ್ನು ನೀಡಿದೆ. ಹಾಗೆ ೨೦೧೨ ರಲ್ಲಿ ಪ್ರತಿಷ್ಟಿತ Dr.Mary Vergees ಪ್ರಶಸ್ತಿಯನ್ನೂ ನೀಡಲಾಯಿತು. ಸಮಾಜಸೇವೆಯ ನೊಗ ಇಳಿಸದೆ ಮುಂದುವರಿಯುತ್ತಿರುವ ರಾಮಕೃಷ್ಣನ್ ರಿಗೊಂದು ಅಭಿನಂದನೆ ಸಲ್ಲಿಸಲೇ ಬೇಕಲ್ಲವೇ?.
ನಿಮಗೆ ಈ ವ್ಯಕ್ತಿಯ ಬದುಕನ್ನ ಓದಿದ ನಂತರ ಏನನ್ನಿಸಿತು? ವಿಧಿಯ ಆಟವನ್ನ ಎದುರಿಸಲು ಭಗಂವಂತನೆದುರು ನಶ್ವರವಾದ ಮನುಷ್ಯ ಯಾವತ್ತೂ ಸಿದ್ಧನಾಗಿರಬೇಕು. ಅದು ಅಷ್ಟು ಸುಲಭವಲ್ಲ. ಮುಂದೊಂದು ದಿನ ನಾನು ವಿಶ್ವದ ಅತ್ಯಂತ ವೇಗದ ಓಟಗಾರನಾಗಬೇಕೆಂದು ಹಠದಿಂದ ಅಭ್ಯಾಸ ಮಾಡುತ್ತಿದ್ದವನೊಬ್ಬ ಆಕಸ್ಮಿಕವಾಗಿ ಕಾಲು ಕಳೆದುಕೊಂಡರೆ? ಮನಸ್ಸು ಸಹಿಸಿಕೊಳ್ಳುವುದಿಲ್ಲ. ಹಾಗೆಯೇ ಬದುಕನ್ನು ಬಂದ ಹಾಗೆ ಎದುರಿಸುವುದನ್ನ ಕಲಿಯಲೇಬೇಕು. Steve Jobs, Richard Bronson, Warren Buffet ಇನ್ನೂ ಅನೇಕರು ಬದುಕನ್ನ ಬಂದ ಹಾಗೆ ಅಪ್ಪಿಕೊಂಡವರು. ಎಲ್ಲಕ್ಕಿಂತಲೂ ನಿಮಗೆ ಅರುಣಿಮಾ ಸಿನ್ಹಾಳ ಜೀವನ ಕಥೆ ನೆನಪಿರಬಹುದು. ಹಾಗೆಯೇ ಈ ಎಸ್ ರಾಮಕೃಷ್ಣನ್ ರ ಜೀವನ ಕೂಡ. ಚಂದದ ಪೃಥ್ವಿಯಲ್ಲಿ ದೇವಸೃಷ್ಟಿಯಾಗಿ ಜನಿಸಿದ್ದೇ ನಮ್ಮ ಪುಣ್ಯ ಹಾಗಾಗಿ ಇಲ್ಲಿರುವವರೆಗೂ ಪ್ರತಿ ಕ್ಷಣವನ್ನೂ ಅನುಭವಿಸಿ ಬದುಕೋಣ..
Facebook ಕಾಮೆಂಟ್ಸ್