X

ಅಸ್ಸಾಂನ ಲೇಡಿ ಸಿಂಗಂ-ಸಂಜುಕ್ತಾ ಪರಾಷರ್

ಕಳೆದ ವಾರ ದೇಶದಲ್ಲಿ ಬಹುವಾಗಿ ಸುದ್ದಿ ಮಾಡಿದ್ದು ಎರಡು ವಿಷಯಗಳು. ಒಂದು ಮೊದಲ ಅಂತಾರಾಷ್ಟ್ರೀಯ  ಯೋಗದಿನದಲ್ಲಿ ಸೂರ್ಯ ನಮಸ್ಕಾರವಿರಬೇಕು, ಇರಬಾರದು ಎಂಬಿತ್ಯಾದಿ ರಗಳೆಗಳು. ಮತ್ತೊಂದು ನಮ್ಮ ಯೋಧರು ಮ್ಯಾನ್ಮಾರಿನ ಗಡಿಯೊಳಗೆ ನುಗ್ಗಿ ಉಗ್ರರನ್ನು ಸದೆಬಡಿದಿದ್ದು. ಎರಡನೇಯದ್ದು ಬಹಳ ಗಂಭೀರ ವಿಷಯವಾಗಿದ್ದರಿಂದ ಸಹಜವಾಗಿಯೇ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಯ್ತು. ಪತ್ರಿಕೆಗಳು, ಜಾಲತಾಣಗಳಿಗೆ ಇದುವೇ ಆಹಾರವಾಯಿತು. ಈ ಎರಡು ಬಹುಚರ್ಚಿತ ವಿಷಯಗಳ ನಡುವೆಯೇ ಮತ್ತೊಂದು ಸಾಹಸಗಾಥೆಯ ವಿಷಯವೂ ಬೆಳಕಿಗೆ ಬಂತು. ಕ್ಷಣಮಾತ್ರದಲ್ಲಿ ಅದು ಅಂತರ್ಜಾಲದಲ್ಲಿ ವೈರಲ್ ಆಗಿ ಬಿಡ್ತು.

ನಿಮಗೆ ನೆನಪಿರಬಹುದು. ಈಚೆಗೆ ಆರು ತಿಂಗಳುಗಳ ಹಿಂದೆ ಐಪಿಎಸ್ ತರಭೇತಿ ಪಡೆಯುತ್ತಿದ್ದ ಕೇರಳದ ಮೆರಿನ್ ಜೋಸೆಫ್ ಎಂಬ ಯುವತಿಯ ಕುರಿತು ಜಾಲತಾಣಗಳಲ್ಲಿ ಚರ್ಚೆಯಾಗಿತ್ತು. ‘ಸಮಾಜಘಾತುಕರಿಗೆ ಸಿಂಹಸ್ವಪ್ನವಾಗಿರುವ ಲೇಡಿ ಐಪಿಎಸ್ ಅಧಿಕಾರಿ’ ಎಂಬ ಪುಂಖಾನುಪುಂಖ ವರದಿಗಳು ಫೇಸ್ ಬುಕ್ಕಿನಲ್ಲಿ, ಟ್ವಿಟ್ಟರಿನಲ್ಲಿ ಹರಿದಾಡಿತ್ತು. ನೋಡಲು ಅಂದವಾಗಿದ್ದ ಈ ಯುವತಿಗೆ ಹಲವರು ಚಂದದಲ್ಲಿ ಲೈಕು ಕೊಟ್ಟು  ವೈರಲ್ ಮಾಡಿಬಿಟ್ಟಿದ್ದರು. ಕಡೆಗೆ ಆಕೆಯೇ ‘ನಾನಿನ್ನೂ ತರಭೇತಿ ಪಡೆಯುತ್ತಿದ್ದೇನಷ್ಟೆ. ನನ್ನ ಬಗ್ಗೆ ಹರಡಿರುವುದೆಲ್ಲವೂ ಗಾಳಿಸುದ್ದಿಯಷ್ಟೇ’ ಎಂದು ಸ್ಪಷ್ಟನೆ ಕೊಡಬೇಕಾಯ್ತು. ಇಲ್ಲಿ ಆಕೆ ನೋಡಲು ಸುಂದರವಾಗಿದ್ದಾಳೆ ಎನ್ನುವ ಕಾರಣಕ್ಕಾಗಿ ವಿಷಯ ಚರ್ಚೆಗೆ ಬಂತೇ ವಿನಹಃ ಅಲ್ಲಿ ಎನೂ ಸಾಹಸಗಾಥೆಯಿರಲಿಲ್ಲ. ಆದರೆ ಸದ್ಯ ವೈರಲ್ ಆಗಿರುವ ವಿಷಯದಲ್ಲಿ ನಿಜವಾದ ಸಾಹಸಗಾಥೆಯಿದೆ. ಎಲ್ಲರೂ  ಮಾದರಿಯಾಗಿ ತೆಗೆದುಕೊಳ್ಳಬಹುದಾದ ಸಾಧನೆಯಿದೆ.

ಸಂಜುಕ್ತಾ ಪರಾಷರ್! ಅಸ್ಸಾಂನ ಸೊನಿಟ್ಪುರ ಜಿಲ್ಲೆಯ ಸೂಪರಿಡೆಂಟ್ ಓಫ್ ಪೋಲೀಸ್.. ಆ ಭಾಗದಲ್ಲಿ ಇವರ ಹೆಸರು ಕೇಳಿದರೆ ಉಗ್ರರ ತೊಡೆ ಥರ ಥರ ಅಂತ ನಡುಗುತ್ತದೆ. ಬಂಡುಕೋರರ ಎದೆ ಝಲ್ಲೆನ್ನುತ್ತದೆ. ಸಮಾಜಘಾತುಕರ ಪ್ಯಾಂಟ್ ಒದ್ದೆಯಾಗುತ್ತದೆ. ಅಸ್ಸಾಂನಲ್ಲಿ ಉಗ್ರರು ಭಯಂಕರವಾಗಿ ಹೆದರುವುದು ಇದೇ ಪೋಲೀಸ್ ಅಧಿಕಾರಿಣಿಗೆ. ಎಂತೆಂತಹಾ ರಕ್ತಾಪಿಪಾಸು ಉಗ್ರರ ಗುಂಡಿಗೆ ಹೆದರದೆ ಅವರೆದುರಿಗೆ ದೈರ್ಯವಾಗಿ ಎದೆ ತಟ್ಟಿ ನಿಂತಂತಹ ಗುಂಡಿಗೆ ಇವರದು.

ಸಂಜುಕ್ತಾ ನಮ್ಮೆಲ್ಲರನ್ನು ಇನ್ನಿಲ್ಲದಂತೆ ಕಾಡಲೂ ಕಾರಣಗಳಿವೆ. ಮೊದಲನೇಯದ್ದು ಆಕೆ ಹೆಣ್ಣು. ಅರೆ.. ಒಬ್ಬ ಹೆಣ್ಣಿನಿಂದ ಇದೆಲ್ಲಾ ಸಾಧ್ಯಾನಾ ಅಂತ ತುಚ್ಚವಾಗಿ ಕಾಣುತ್ತಿಲ್ಲ ನಾನು. ಮಹಿಷಾಸುರನಂತಹಾ ಮಹಿಷಾಸುರನನ್ನು  ಶ್ರೀದೇವಿ ಕೊಲ್ಲುವ ಘಟನೆ ನಮ್ಮ ಪುರಾಣದಲ್ಲಿದೆ.   ಝಾನ್ಸೀ ರಾಣಿ, ಕಿತ್ತೂರು ರಾಣಿ ಚೆನ್ನಮ್ಮ, ಅಬ್ಬಕ್ಕ ಮುಂತಾದ ವೀರಾಧಿವೀರ ಮಹಿಳೆಯರ ಇತಿಹಾಸವೇ ನಮ್ಮ ಬೆನ್ನಿಗಿದೆ. ಆದರೂ ಆಧುನಿಕ ಯುಗದಲ್ಲಿ ಪುರುಷರಿಗೆ ಸ್ಪರ್ಧೆಯೊಡ್ಡಿ ನಿಲ್ಲುವಂತಹಾ ಸಾಹಸ ಮಾಡಿರುವವರು ಕೆಲವರಷ್ಟೇ. ಆ ಕೆಲವರಲ್ಲಿ ಎಲ್ಲರೂ ಯಶಸ್ವಿಯಾದವರಿಲ್ಲ. ಆಡಳಿತ ವ್ಯವಸ್ಥೆಯ ಉನ್ನತ ಸ್ಥಾನದಲ್ಲಿರುವ ಹಲವು ಮಹಿಳೆಯರು ಏನನ್ನೋ ಸಾಧಿಸ ಹೋಗಿ ಪುರುಷರ ಅಥವಾ ರಾಜಕಾರಣಿಗಳ ದಾಳಕ್ಕೆ    ಬಲಿಯಾದವರೇ. ಇದಕ್ಕೆ ಲೇಟೆಸ್ಟ್ ಉದಾಹರಣೆ ರಶ್ಮಿ ಮಹೇಶ್ ಮತ್ತು ಹೆಫ್ಸಿಬಾರಾಣಿ ಕೋರ್ಲಪತಿ. ಈ ಎಲ್ಲಾ ಬೆಳವಣಿಗೆಗಳನ್ನು ನೋಡುವಾಗ  ಸಂಜುಕ್ತಾ  ಬಗೆಗೆ ನಾವೆಲ್ಲರೂ ಹುಬ್ಬೇರಿಸಬೇಕಾಗುತ್ತದೆ. ಅವರ ಒಂದೊಂದು ನಡೆಯೂ ಇಂಟರೆಸ್ಟಿಂಗ್ ಆಗಿ ಕಾಣುತ್ತದೆ.

ಹೇಳಿ ಕೇಳಿ ಅದು ಅಸ್ಸಾಂ.. ದಿನಬೆಳಗಾದರೆ ಕೋಮುಗಲಭೆಗಳು, ಅತ್ಯಾಚಾರಗಳು. ಎಂದೆಂದೂ ತಪ್ಪದ ಬೋಡೋ ಉಗ್ರರ ಕಾದಾಟ, ಅದು ತಪ್ಪಿದರೆ ಅಕ್ರಮ ಬಾಂಗ್ಲಾ ವಲಸಿಗರ ಕಾಟ. ಒಟ್ಟಿನಲ್ಲಿ  ಈಶಾನ್ಯ ಭಾರದತದ ಈ ಸುಂದರ ರಾಜ್ಯ ಅಭಿವೃಧ್ಧಿಯ ವಿಚಾರದಲ್ಲಿ ತೀರಾ ಹಿಂದುಳಿದಿದೆ ಎಂದರೆ ಅದು ವಾಸ್ತವಕ್ಕೆ ವಿರುಧ್ಧವಾದ ವಿಚಾರವೇನಲ್ಲ. ಅಲ್ಲಿನ ಜನ ನೆಮ್ಮದಿಯ ಜೀವನಕ್ಕಾಗಿ ಉದ್ಯೋಗ ಅರಸಿ, ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಇತರ ರಾಜ್ಯಗಳಿಗೆ ವಲಸೆ ಬರುತ್ತಾರೆ. ಅಲ್ಲಿ ಮಹಿಳೆಯರು ಹೆಚ್ಚು ಕಲಿಯುವುದು ಬಿಡಿ ಒಂದರ್ಥದಲ್ಲಿ ಮನೆಯಿಂದ ಹೊರಬರುವುದೇ ದೊಡ್ಡ ವಿಷಯ.ಅಂತಾದ್ದರಲ್ಲಿ ಸಂಜುಕ್ತಾ  ಮೇಲಿನ ಎಲ್ಲಾ ಚೌಕಟ್ಟುಗಳನ್ನು ಮೀರಿ ಬೋಡೋ ಉಗ್ರರ ವಿರುಧ್ಧ ಸೆಟೆದು ನಿಂತಿರುವುದು ಸಣ್ಣ ವಿಷಯವೇನಲ್ಲ.

ಇವರ ಬಗೆಗೆ ಹಲವು ಇಂಟರೆಸ್ಟಿಂಗ್ ವಿಷಯಗಳಿವೆ. ಶಾಲಾ ಶಿಕ್ಷಣದ ಬಳಿಕ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆಯುವ ಸಂಜುಕ್ತಾ ಬಳಿಕ ಅಂತಾರಾಷ್ಟ್ರೀಯ ಸಂಬಂಧಗಳ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯುತ್ತಾರೆ. ಕಲಿಯುವ ಹಸಿವು ಅಲ್ಲಿಗೇ ನೀಗದೆ ಇಂಡೋನೇಷಿಯಾ ವಿವಿಯಿಂದ ಎಮ್ಫಿಲ್ ಮತ್ತು ಪಿಎಚ್ಡಿ ಪದವಿಯನ್ನೂ ಪಡೆಯುತ್ತಾರೆ. ನಂತರ ಯುಪಿಎಸ್ಸಿ ಪರೀಕ್ಷೆಯಲ್ಲಿ ದೇಶಕ್ಕೇ ಎಂಬತ್ತೈದನೇ ರಾಂಕ್ ಪಡೆಯುತ್ತಾರೆ. ಇಷ್ಟೆಲ್ಲಾ ಪದವಿಗಳನ್ನು ಪಡೆದ ಸಂಜುಕ್ತಾ ಮನಸ್ಸು ಮಾಡಿದ್ದರೆ ಆರಾಮದ ನೌಕರಿಗೆ ಸೇರಿಕೊಂಡು ವಿಲಾಸೀ ಜೀವನ ನಡೆಸಬಹುದಿತ್ತು. ಆದರೆ ಅವರು ಆಯ್ದುಕೊಂಡಿದ್ದು ಮಾತ್ರ ದುರ್ಗಮ ಹಾದಿ. ಅದು ಇಂಡಿಯನ್ ಪೋಲೀಸ್ ಸರ್ವೀಸ್!

ಕೆಲಸಕ್ಕೆ ಸೇರುತ್ತಲೇ ಅವರಿಗೆ ಸಿಕ್ಕಿದ್ದು ಬೋಡೋ ಉಗ್ರರು ಮತ್ತು ಬಾಂಗ್ಲಾ ವಲಸಿಗರ ಗಲಭೆ ಹತ್ತಿಕ್ಕುವ ಕೆಲಸ. ಅಲ್ಲಿಂದ ಮತ್ತೆ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಬೋಡೋ ಉಗ್ರರ ನಿರ್ಮೂಲನಕ್ಕೆ ಪಣತೊಟ್ಟ ಸಂಜುಕ್ತಾ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುತ್ತಾರೆ. CRPF ಜವಾನರ ತಂಡ ಕಟ್ಟಿಕೊಂಡು ಕಾದಾಟಕ್ಕಿಳಿಯುತ್ತಾರೆ. ಹಗಲಿರುಳೆನ್ನದೆ, ಕ್ಷಣ ಕ್ಷಣಕ್ಕೂ ಬದಲಾಗುವ ವಾತಾವರಣಕ್ಕೆ ಒಗ್ಗಿಕೊಂಡು, ಭಯಭೀಕರ ಪ್ರಪಾತ, ಕಣಿವೆಗಳನ್ನು ಲೆಕ್ಕಿಸದೆ ದಟ್ಟಡವಿಯೊಳಗೆ ನುಗ್ಗಿ ಬೋಡೋ ಉಗ್ರರ ಹುಟ್ಟಡಗಿಸುತ್ತಾರೆ. ಇವರ ಈ ಸಾಹಸಕ್ಕೆ ಇದುವರೆಗೆ ಹದಿನಾರು ಉಗ್ರರು ಸಾವನ್ನಪ್ಪಿದ್ದಾರೆ. ಅರುವತ್ನಾಲ್ಕು ಜನ ಅರೆಸ್ಟಾಗಿದ್ದಾರೆ. ಅಸ್ಸಾಂನ ಬೋಡೋ ಉಗ್ರರ ಪಾಲಿಗೆ ಲೇಡಿ ಸಿಂಗಂ ಆಗಿ ಪರಿಣಮಿಸಿರುವ ಸಂಜುಕ್ತಾ ಬುಡಕಟ್ಟು ಪ್ರದೇಶಗಳ ಜನರು ತಕ್ಕ ಮಟ್ಟಿಗೆ ನೆಮ್ಮದಿಯ ಜೀವನ ನಡೆಸುವಂತಹಾ ಪರಿಸ್ಥಿತಿ ಸೃಷ್ಟಿಸಿದ್ದಾರೆ. ಬೋಡೋ ಉಗ್ರರು   ಪೋಲೀಸರೆಂದರೆ ಇನ್ನಿಲ್ಲದಂತೆ ಭಯ ಬೀಳುವಂತಹ ವಾತಾವರಣ ನಿರ್ಮಾಣ ಮಾಡಿದ್ದಾರೆ.

ಖಂಡಿತವಾಗಿಯೂ ಈಗ ಹೆಣ್ಣು ಮೊದಲಿನಂತಿಲ್ಲ. ಶೈಕ್ಷಣಿಕ, ಕ್ರೀಡೆ, ವ್ಯಾವಹಾರಿಕ, ರಾಜಕೀಯ ಕ್ಷೇತ್ರದಲ್ಲಿ ಯಾವ ಪುರುಷನಿಗೂ ಕಡಿಮೆಯಿಲ್ಲದ ಸಾಧನೆಯನ್ನು ಮಹಿಳೆಯರು ಮಾಡಿದ್ದಾರೆ. ಪುರುಷರ ದೌರ್ಜನ್ಯವನ್ನು ಸಹಿಸಿಕೊಂಡು, ಕೆಲಸ ಕೊಟ್ಟ ಧಣಿಯವರ ಕಾಮದಾಹಕ್ಕೆ ಆಹಾರವಾಗಿಕೊಂಡು, ನಾಲ್ಕುಗೋಡೆಗಳ ಮಧ್ಯೆಯೇ ನರಳುವಂತಹ ಕಾಲ ಯಾವತ್ತೋ ಭೂತಕ್ಕೆ ಸರಿದಿದೆ. ಅಂತಹಾ ಸ್ತೀಕುಲಕ್ಕೆ ಸಂಜುಕ್ತಾ ಮಾದರಿಯಾಗಿ ನಿಲ್ಲುತ್ತಾರೆ. ಸ್ಪೂರ್ತಿಯ ಸೆಲೆಯಾಗುತ್ತಾರೆ. ಎಲ್ಲರೂ ಸಂಜುಕ್ತಾರಂತೆ ಪೋಲೀಸ್ ಅಧಿಕಾರಿಯಾಗಬೇಕೆಂದಿಲ್ಲ. ಗನ್ ಹಿಡಿದು ಹೋರಾಡಬೇಕೆಂದಿಲ್ಲ. ಆದರೆ ಎಂತದೇ ಪರಿಸ್ಥಿತಿಯನ್ನೂ ಎದುರಿಸುವ ಧೈರ್ಯ ಪ್ರತಿಯೊಬ್ಬ ಸ್ತ್ರೀಗೂ ಬಂದರೆ ಅಷ್ಟೇ ಸಾಕು!

Facebook ಕಾಮೆಂಟ್ಸ್

Shivaprasad Bhat: Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.
Related Post