X
    Categories: ಕಥೆ

ಕಥೆ: ’ಅಷ್ಟಾವಕ್ರ’

’ಅಷ್ಟಾವಕ್ರ’ – ಆತನಿಗೆ ಯಾರು ಆ ಹೆಸರಿಟ್ಟರೋ ಎನ್ನುವುದಕ್ಕಿಂತ, ಯಾರು ಇಡಲಿಲ್ಲವೋ ಎನ್ನುವುದೇ ಸರಿಯಾದೀತು.ಏಳನೇ ತರಗತಿಯಲ್ಲಿದ್ದಾಗ ಕನ್ನಡ ಮೇಷ್ಟ್ರು “ಅನ್ವರ್ಥನಾಮಕ್ಕೆ ಉದಾಹರಣೆ ಕೊಡಿ” ಎಂದಾಗ “ಮೋಹನನಿಗೆ ಮೋಹನ ಹೆಸರಿಗಿಂತ, ’ಅಷ್ಟಾವಕ್ರ’ ಹೆಸರು ಚೆನ್ನಾಗಿ ಅನ್ವಯಿಸುತ್ತದೆ.ಅದೇ ಅವನಿಗೆ ಅನ್ವರ್ಥನಾಮ” ಎಂದು ಹೇಳಿ ಮುಖಕ್ಕೆ ಉಗಿಸಿಕೊಂಡಿದ್ದೆ. ಕಂಡದ್ದು ಹೇಳಿದರೆ ಕೆಂಡದಂತಹ ಕೋಪ ಎಂಬ ಮಾತೇನೋ ಇರುವುದು ನಿಜ. ಆದರೆ, ಈ ಮೇಷ್ಟ್ರಿಗೇನಕ್ಕೆ ಕೋಪ ಬಂತು,ಅವರ ಬಗೆಗೇನೂ ಕಟಕಿಯಾಡಲಿಲ್ಲವಲ್ಲ ಎಂದು ತಲೆಕೆಡಿಸಿಕೊಳ್ಳುತ್ತಿರಬೇಕಾದರೆ ವಿಷಯ ತಿಳಿಯಿತು,ಮೋಹನ ಈ ಮೇಷ್ಟ್ರ ಮಗನೆಂದು! ಹೆತ್ತವರಿಗೆ ಹೆಗ್ಗಣ ಮುದ್ದು,ಸುಮ್ಮನಿರುವುದೇ ಅದಕ್ಕೆ ಮದ್ದು ಎಂದು ಸುಮ್ಮನಾದೆ. ಆದರೆ ನಾನು ಹೇಳಿದ್ದರಲ್ಲೂ ನಿಜವಿತ್ತು ಬಿಡಿ, ದೇಹದ ಯಾವ ಅಂಗವೂ ಸರಿಯಾದ ಜಾಗದಲ್ಲಿ,ಸರಿಯಾದ ರೀತಿಯಲ್ಲಿ ಇರದ ಅವನಿಗೆ “ಅಷ್ಟಾವಕ್ರ” ಎಂದೇ ನಾಮಕರಣ ಮಾಡಿದ್ದರೂ ಆಶ್ಚರ್ಯವಿರಲಿಲ್ಲ.

ಮಧ್ಯಾಹ್ನದ ಉರಿಬಿಸಿಲಿನಲ್ಲಿ,ನಡೆಯುತ್ತಾ ಪಂಚಾಯತಿ ಕಟ್ಟೆಯತ್ತ ಹೋಗುತ್ತಿದ್ದೆ. ದೇಹ ಬೆವರಿನಿಂದ ತೊಯ್ದು ತೊಪ್ಪೆಯಾಗಿತ್ತು.ಇನ್ನೊಂದು ಚೂರು ಹೊತ್ತಿನಲ್ಲಿ ಬಿದ್ದೇ ಹೋಗುತ್ತೇನೋ ಎಂಬ ಪರಿಸ್ಥಿತಿ. ಅದೆಲ್ಲಿದ್ದನೋ,ಧುತ್ತನೆ ಪ್ರತ್ಯಕ್ಷನಾದ ಮೋಹನ ಅರ್ಥಾತ್ ನಮ್ಮ ಅಷ್ಟಾವಕ್ರ. ಏಳನೇ ತರಗತಿಯಲ್ಲಿದ್ದಾಗ ಮಾಡಿದ ’ಗಾಂಚಾಳಿ’ ನೆನಪಾಯಿತು. ಅದು ಕಳೆದು ಅವೆಷ್ಟೋ ವರ್ಷಗಳಾಗಿರುವುದು ಹೌದು,ಆದರೆ ಅದವನಿಗೆ ತಿಳಿದು,ನೆನಪಿನಲ್ಲುಳಿದಿರಲೂ ಸಾಕು! “ಯಾಕೋ,ಇಷ್ಟೊಂದು ಸುಸ್ತಾಗಿದೀಯಾ? ಬಾ ಮನೆಗೆ ಹೋಗೋಣ.ಇಲ್ಲೇ ಹತ್ತಿರ ನಮ್ಮ ಮನೆ” ಎಂದ. ನನಗೋ,ಅತ್ತ ದರಿ,ಇತ್ತ ಪುಲಿ ಎಂಬ ಪರಿಸ್ಥಿತಿ. ಮೇಷ್ಟ್ರಿಗೆ ಹೇಗೆ ಮುಖ ತೋರಿಸುವುದು ಎಂಬ ಚಿಂತೆ ಒಂದೆಡೆಯಾದರೆ,ಈ ಉರಿಬಿಸಿಲಿನಲ್ಲಿ ಹೀಗೆ ನಡೆಯುತ್ತಾ ಹೋದರೆ ಊರ ಜನ ನನ್ನ ಹೆಣದ ಮುಖ ನೋಡಬೇಕಾದೀತು ಎಂಬ ಭಾವನೆ ಇನ್ನೊಂದೆಡೆ. ಆ ಘಟನೆ ಕಳೆದು ಅವೆಷ್ಟೋ ವರ್ಷಗಳು ಸಂದಿದವು,ಅದಲ್ಲದೆ ಆಗ ಚಿಕ್ಕವನಿದ್ದೆ, ಅರಿವಿಗೆ ಬರದೆ ಹೊರಬಂದ ಮಾತುಗಳವು ಎಂದು ನನ್ನನ್ನು ನಾನೇ ಸಮಾಧಾನಿಸಿಕೊಳ್ಳುತ್ತಾ, “ಸರಿ,ಹೋಗೋಣ ನಡಿಯೋ” ಎಂದೆ. ದಾರಿಯುದ್ದಕ್ಕೂ ಹರಟೆ ಹೊಡೆಯುತ್ತಾ ಸಾಗಿದೆವು. ಮಾತು-ಮಾತು-ಮಾತು! ಮೋಹನ ಮಾತಿನ ಮಲ್ಲ ಎಂದು ನನಗೆ ಗೊತ್ತೇ ಇರಲಿಲ್ಲ. ಅವನ ವಿಚಾರಧಾರೆ ಯಾರನ್ನಾದರೂ ದಂಗು ಬಡಿಸುವಂತಿತ್ತು. ಒಂದು ಕ್ಷಣ ಇಂಥ ಸುಂದರ ವ್ಯಕ್ತಿತ್ವವನ್ನು ಅಷ್ಟಾವಕ್ರ ಎಂದು ಜರೆದೆನಲ್ಲ ಎಂದು ನಾಚಿಕೆಯಾಯಿತು ನನಗೆ.

ತಲೆಯ ಮೇಲೆ ಪಂಖ ಗಿರಗಿಟಲೆಯಂತೆ ತಿರುಗುತ್ತಿತ್ತು. ಒಳಗಿನಿಂದ ತಂಪು ಪಾನೀಯ ತಂದುಕೊಟ್ಟ ಮೋಹನ. ಅದನ್ನು ಕುಡಿದಮೇಲೂ ತಂಪಾಗಲಿಲ್ಲ ನನ್ನ ಮನಸ್ಸು. ಮೇಷ್ಟ್ರು ಕಾಲವಶವಾಗಿ ನಾಲ್ಕು ವರ್ಷಗಳು ಕಳೆದವಂತೆ. ಸದಾಕಾಲ ಊರಿನಿಂದ ಹೊರಗೇ ಇರುತ್ತಿದ್ದ ನನಗೆ ಈ ಸುದ್ದಿ ತಿಳಿದೇ ಇರಲಿಲ್ಲ. ಮೋಹನ ಒಬ್ಬಂಟಿ. ಇವನಿಗೆ ಹೆಣ್ಣಾದರೂ ಯಾರು ಕೊಡಬೇಕು? ಎಲ್ಲರೂ ಬಾಹ್ಯ ಸೌಂದರ್ಯವನ್ನು ಮಾತ್ರ ಕಾಣುವವರು. ನನ್ನಂತೆ ಅಂತರಂಗದ ಸೌಂದರ್ಯಕ್ಕೆ ಕುರುಡಾಗಿ ಹೋಗಿರುವರು ಈ ಲೋಕದ ಜನ. ನಾನೀಗ ಮೋಹನನ ಬಗೆಗೆ ಒಳ್ಳೆಯ ಮಾತನ್ನಾಡಿದರೆ ಯಾರಾದರೂ,”ಆ ಪೆಡಂಭೂತದ ಬಗೆಗೆ ನಿನಗೇನು ಸಹಾನುಭೂತಿ ?” ಎಂದಾರಷ್ಟೆ. ನನಗೇ ಗೊತ್ತಿಲ್ಲದಂತೆ ನನ್ನ ಕಣ್ಣು ತೆರೆದಿದ್ದ ಮೋಹನ. ಪ್ರಪಂಚವನ್ನರಿಯಲು ಹೊರಗಣ್ಣು ಮಾತ್ರವಲ್ಲ,ಒಳಗಣ್ಣೂ ಬೇಕು. ನಾವು ನೋಡುವುದು ನಮ್ಮ ದೃಷ್ಟಿಕೋನದ ಮೇಲೆ ಅವಲಂಬಿತ. ಕಪ್ಪು ಕುರುಡ ಕಂಡ ಬಣ್ಣವಾದರೆ ,ಗೋಪಿಲೋಲ ಶ್ರೀಕೃಷ್ಣನ ಬಣ್ಣವೂ ಹೌದು.ಸೌಂದರ್ಯ ಹೃದಯದಲ್ಲಿ,ಚರ್ಮದಲ್ಲಿ ಅಲ್ಲ ಎಂದು ತೋರಿಸಿಕೊಟ್ಟಿದ್ದ ಅವನು.

ತಳಮಳ,ತೊಳಲಾಟ ನನ್ನೆದೆಯಲ್ಲಿ, ಇವನ ಬಗೆಗೆ ಏನೇನೋ ಹಾಸ್ಯ ಮಾಡಿದುದು ಕಣ್ಣ ಮುಂದೆ ಹಾದು ಹೋಯಿತು. ನನ್ನ ಗೌರವರ್ಣದ ಬಗೆಗೆ ಮಿತ್ರರು ಮೆಚ್ಚಿಗೆಯ ಮಾತುಗಳನ್ನಾಡುತ್ತಿದ್ದರೆ ಉಬ್ಬಿ ಹೋಗುತ್ತಿದ್ದೆ.ಕಪ್ಪು-ಬಿಳುಪು ಎರಡು ಬಣ್ಣವಷ್ಟೇ,ಒಳಗಿರುವಾತ್ಮಕ್ಕೂ ಅದಕ್ಕೂ ಸಂಬಂಧವಿಲ್ಲ. ನನ್ನ ಕಣ್ಣ ಪಟ್ಟಿ ಸರಿದಿತ್ತು. ಮನ ಹಗುರಾಗಲು ಬಯಸಿತ್ತು. ದಾರಿಯೊಂದೆ-ಮೋಹನನಲ್ಲಿ ಕ್ಷಮೆ ಕೇಳುವುದು. ಮುಕ್ತಮನದಿಂದ ಕ್ಷಮೆಯಾಚಿಸಿದೆ ಅವನಲ್ಲಿ. ಅವನದು ಈ ಭೂಮಿತಾಯಿಯ ಮನಸ್ಸು,ಈ ಧರಿತ್ರಿಯ ಕ್ಷಮಾಗುಣ. ಅಪ್ಪಿ ಹಿಡಿದ ನನ್ನನ್ನು. ಅಪ್ಪಿದ ಬಿಸಿಗೆ ಮನ ಕರಗಿ ಕಣ್ಣೀರಾಯಿತು. ಮುಂದವನು ಮಾತಾದ, ನಾನು ಮೂಕನಾದೆ.

ಅವನು ಅವನಮ್ಮನ ಗರ್ಭದಲ್ಲಿ ಇದ್ದಾಗ ಉದಿಸಿದ ತೊಂದರೆಗಳಿಂದಾಗಿ ಈ ರೂಪ ಹೊಂದಿದನಂತೆ. ಆರನೇ ತಿಂಗಳ ಗರ್ಭದಲ್ಲಿ ಇರಬೇಕಾದರೆ ಜ್ವರ ಕುದಿದು,ನಾಟಿ ವೈದ್ಯರ ಬಳಿ ಚಿಕಿತ್ಸೆ ಮಾಡಿಸಿದರಂತೆ.ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟಂತೆ ಗರ್ಭಸ್ಥ ಶಿಶು ಹಾಗೂ ತಾಯಿಯ ಎರಡೂ ಅತ್ಯಮೂಲ್ಯ ಜೀವಗಳನ್ನು ಯಾವುದೋ ಅಳಲೆಕಾಯಿ ಪಂಡಿತರ ಕೈಯಲ್ಲಿ ಇಟ್ಟರಲ್ಲ! ಖೇದವಾಯಿತು ನನಗೆ. ಮುಂದೆ ತಾಯಿಯ ದೇಹಾರೋಗ್ಯದಲ್ಲಿ ಏರುಪೇರುಗಳಾಗಿ ಏಳನೇ ತಿಂಗಳಿಗೇ ಪ್ರಸವವೂ ಆಗಿ, ಆಕೆ ಚಿರಶಾಂತಿ ಐದಿದಳಂತೆ. ಆಕೆಯ ಮಡಿಲಲ್ಲಿದ್ದ ಮಗುವೋ, ಕೆಂಡದಂತೆ ಕಪ್ಪು,ಭಗವಂತ ತಿದ್ದಿ ತೀಡಲು ಮರೆತುಹೋದನೇನೋ ಎಂಬಂಥ ರೂಪ.ತಾಯಿ ಇಲ್ಲದ ಶಿಶುವನ್ನು ಬಹು ಅಕ್ಕರೆಯಿಂದ ಬೆಳೆಸಿದರಂತೆ ನಮ್ಮ ಮೇಷ್ಟ್ರು. ಮೇಷ್ಟ್ರ ಬಗೆಗೆ ಹೆಮ್ಮೆಯಿನಿಸಿತು ನನಗೆ. ನಾಕು ದಿನದಲ್ಲಿ ಮಸುಕಿ ಹಾಳಾಗಿ ಹೋಗುವ ರೂಪಕ್ಕಿಂತ,ಸದಾ ಬಡಿಯುವ ,ಮಿಡಿಯುವ ಹೃದಯ ಶ್ರೇಷ್ಠವಾದದ್ದೆಂದು ಕಂಡ ಮೇಷ್ಟ್ರಿಗೆ ಸಲಾಮ್!

ಬಂದ ಪಂಚಾಯ್ತಿ ಕೆಲಸ ಮರೆತೇ ಹೋಗಿತ್ತು. ಮನೆಯಿಂದ ಹೊರಗೆ ಕಾಲಿಡುವಾಗ ಮನಸು ಹಗುರ ಹಗುರ. ನನ್ನ ಸುತ್ತ ಬದಲಾವಣೆಯ ಗಾಳಿ ಬೀಸುತಲಿತ್ತು. ಮತ್ತೊಮ್ಮೆ ಅವನನ್ನಪ್ಪಿ ಹೊರನಡೆದೆ. ಅಂಗಳದ ತುದಿಯಿಂದ ತಿರುಗಿ ನೋಡಿದೆ. ಮೋಹನ ನಗುತ್ತಾ ಕೈಬೀಸಿದ.ಅವನೀಗ ಸುರಸುಂದರನಾಗಿ ಕಾಣುತ್ತಿದ್ದ.

Facebook ಕಾಮೆಂಟ್ಸ್

Deepthi Delampady: Currently studying Information Science and Engineering (6th semester) at SJCE, Mysore.
Related Post