X

ಕಡ್ದಾಯ ಮತದಾನಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಿ

ಇತ್ತೀಚೆಗಷ್ಟೇ ನಡೆದ ಗ್ರಾಮಪಂಚಾಯತಿ ಚುನಾವಣೆಗಳಲ್ಲೂ ಚುನಾವಣಾ ಆಯೋಗ ಮತ್ತು ಸರ್ಕಾರ ಅದನ್ನೇ ಹೇಳಿತ್ತು.”ಈ ಬಾರಿ ಮತದಾನ ಕಡ್ಡಾಯ,ಮತ ಹಾಕದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು”.ಸ್ವಲ್ಪ ದಿನಗಳ ನಂತರ “ಮತದಾನ ಕಡ್ಡಾಯ.ಆದರೆ ಮತಹಾಕದವರ ವಿರುದ್ಧ ಯಾವ ರೀತಿ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಇನ್ನೂ ನಿರ್ಧರಿಸಿಲ್ಲ”ಎಂದು ಸರ್ಕಾರ ಹೇಳಿದ್ದು ಮಾಧ್ಯಮಗಳಲ್ಲಿ ವರದಿಯಾಯಿತು.ಮತದಾನ ಮಾಡುವುದು ಈ ದೇಶದ ಪ್ರತಿಯೊಬ್ಬ ಪ್ರಜೆಯ ಪ್ರಮುಖ ಹಕ್ಕುಗಳಲ್ಲೊಂದು.ಮತದಾನ ಕಡ್ಡಾಯ,ಯಾರೂ ಮತದಾನದಿಂದ ತಪ್ಪಿಸಿಕೊಳ್ಳಬಾರದು ಎಂದು ಹೇಳುವುದೂ ಸರಿಯಾಗಿಯೇ ಇದೆ.ಆದರೆ ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಮತಗಟ್ಟೆಗೆ ಹೋಗಿ ಮತದಾನ ಮಾಡಲು ಸಾಧ್ಯವಾಗದಿದ್ದರೆ ಅದಕ್ಕೆ ಪರ್ಯಾಯವೇನು?

ನಾನಿಲ್ಲಿ ಹೇಳಹೊರಟಿರುವುದು ಉದ್ಯೋಗ ನಿಮಿತ್ತ,ವಿದ್ಯಾಭ್ಯಾಸ ನಿಮಿತ್ತ ಬೇರೆ ಬೇರೆ ಊರುಗಳಲ್ಲಿ ವಾಸವಾಗಿರುವ ಮತದಾರರ ಬಗ್ಗೆ.ಅವರ ಮತದಾನ ಅವರ ಮೂಲ ಊರಲ್ಲಿರುತ್ತದೆ.ಅಲ್ಲಿಗೆ ಮತಹಾಕಲೆಂದೇ ಅವರು ತಮ್ಮ ಕೆಲಸ ಕಾರ್ಯಗಳನ್ನೆಲ್ಲಾ ಬಿಟ್ಟು ಊರಿಗೆ ಬರಬೇಕಾಗುತ್ತದೆ.ಮತದಾನ ಕಡ್ಡಾಯ ಹೌದು.ಆದರೆ ಕೇವಲ ಒಂದು ಮತ ಚಲಾಯಿಸಲು ಒಂದು ದಿನದ ಮಟ್ಟಿಗೆ ಹಣ,ಶಕ್ತಿ ಎಲ್ಲಾವನ್ನು ವ್ಯಯಿಸಿ ಊರಿಗೆ ಬರುವುದು ಪ್ರಾಯೋಗಿಕವಾಗಿ ಕಷ್ಟ.ಮತದಾನದ ದಿನ ರಜೆ ಇರುತ್ತದೇನೋ ನಿಜ.ಆದರೆ ಬಹಳಷ್ಟು ಚುನಾವಣೆಗಳು ಕನಿಷ್ಟ ಎರಡು ಹಂತದಲ್ಲಿ ನಡೆಯುತ್ತದೆ.ಆಗ ಆಯಾಯ ಊರುಗಳಲ್ಲಿ ಯಾವಾಗ ಮತದಾನ ಇರುತ್ತದೆಯೋ ಅಂದು ಆ ಊರುಗಳಲ್ಲಿ ಮಾತ್ರ ರಜೆ ಇರುತ್ತದೆ.ಆಗ ಇನ್ನೊಂದು ಊರಿನಲ್ಲಿ ಮತದಾನ ಇಲ್ಲದಿರುವಾಗ ಅಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬ ರಜೆ ಹಾಕಿ ತನ್ನ ಊರಿಗೆ ಹೋಗಿ ವೋಟ್ ಹಾಕುವುದು ಕಷ್ಟದ ವಿಷಯ.ಉದಾಹರಣೆಗೆ ಮೊನ್ನೆ ನಡೆದ ಗ್ರಾಮಪಂಚಾಯತಿ ಚುನಾವಣೆಗಳು ಎರಡು ಹಂತಗಳಲ್ಲಿ ನಡೆದವು.ಮೈಸೂರು,ಮಂಗಳೂರು ಮುಂತಾದ ಸ್ಥಳಗಳಲ್ಲಿ ಮೇ 29ರಂದು ನಡೆದರೆ,ಶಿವಮೊಗ್ಗ ಮತ್ತು ಉತ್ತರಕನ್ನಡಗಳಲ್ಲಿ ಜೂನ್ 2 ರಂದು ನಡೆದವು.ಆಯಾಯ ಊರುಗಳಲ್ಲಿ ಯಾವಾಗ ಚುನಾವಣೆ ಇತ್ತೋ ಅಂದು ಮಾತ್ರ ಆ ಊರುಗಳಲ್ಲಿ ರಜೆ ಘೋಷಣೆಯಾಗಿತ್ತು.ಮೈಸೂರು,ಮಂಗಳೂರುಗಳಲ್ಲಿ ಉದ್ಯೋಗ,ವಿದ್ಯಾಭ್ಯಾಸ ನಿಮಿತ್ತ ವಾಸವಾಗಿರುವ ಶಿವಮೊಗ್ಗ,ಉತ್ತರಕನ್ನಡ ಜಿಲ್ಲೆಗಳ ನಾಗರಿಕರಿಗೆ ತಮ್ಮ ಊರಿಗೆ ವೊಟ್ ಮಾಡಲು ಹೋಗಲು ಸಾಧ್ಯವಾಗಲಿಲ್ಲ.ಹೀಗಿರುವಾಗ ಇದಕ್ಕೆ ಪರ್ಯಾಯ ವ್ಯವಸ್ಥೆ ಏನು?

ಪ್ರಸ್ತುತ ಚುನಾವಣಾ ಕರ್ತವ್ಯನಿರತ ಅಧಿಕಾರಿಗಳಿಗೆ ಮತ್ತು ಸೈನಿಕರಿಗೆ ಮಾತ್ರ ತಮ್ಮ ಮತವನ್ನು ಅಂಚೆ ಮೂಲಕ ಚಲಾಯಿಸುವ ಅವಕಾಶವಿದೆ.ಭಾರತದಂಥ ಪ್ರಪಂಚದ ಅತೀದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬ ನಾಗರಿಕನ ಮತವೂ ಬಹಳ ಮುಖ್ಯ.ಹಾಗಾಗಿ ಚುನಾವಣೆಯ ದಿವಸ ಕಾರಣಾಂತರಗಳಿಂದಾಗಿ ತಮ್ಮ ತಮ್ಮ ಊರುಗಳಿಗೆ ಹೋಗಿ ಮತಚಲಾಯಿಸಲಾಗದ ಸಾಮಾನ್ಯ ನಾಗರಿಕರಿಗೂ ಚುನಾವಣಾ ಆಯೋಗ ಪರ್ಯಾಯ ವ್ಯವಸ್ಥೆಯನ್ನು ಮಾಡುವುದು ಬಹುಮುಖ್ಯವಾಗುತ್ತದೆ.ಕೇವಲ ಹತ್ತೋ ನೂರೋ ಜನ ಕಾರಣಾಂತರಗಳಿಂದಾಗಿ ತಮ್ಮ ತಮ್ಮ ಊರುಗಳಲ್ಲಿ ಮತ ಹಾಕಲು ಹೋಗದಿದ್ದರೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯವಿರಲಿಲ್ಲ.ಆದರೆ ಇಂದು ಸಾವಿರಾರು ಜನ ತಮ್ಮ ಮೂಲ ಊರನ್ನು ಬಿಟ್ಟು ಬೇರೆ ಬೇರೆ ಊರುಗಳಲ್ಲಿ ವಾಸವಿದ್ದಾರೆ.ಹಾಗಾಗಿ ಅವರೆಲ್ಲರ ಸಾವಿರಾರು ಮತಗಳು ಬಹಳ ಮುಖ್ಯವಾಗುತ್ತದೆ.

ಹೊಸತಾಗಿ ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರಿಸಬೇಕಾದವರು ಅಂದರೆ ಭಾರತ ಚುನಾವಣಾ ಆಯೋಗದ ಅಧಿಕೃತ ಮತದಾರರ ಚೀಟಿಯನ್ನು ಪಡೆಯಲು ಆನ್ ಲೈನ್ ಮೂಲಕ ಅರ್ಜಿ ಹಾಕುವಂಥ ಸೌಲಭ್ಯವನ್ನು ಭಾರತ ಚುನಾವಣಾ ಆಯೋಗ ಈಗೊಂದು ನಾಲ್ಕೈದು ವರ್ಷಗಳ ಹಿಂದೆ ಜಾರಿಗೆ ತಂದಿತು.ಈ ಪ್ರಕ್ರ‍ಿಯೆ ಬಹಳ ಕ್ಷಿಪ್ರವಾಗಿ ನಡೆಯಿತು ಮತ್ತು ಅನೇಕ ಜನರು ಇದರಿಂದ ಬಹು ಸುಲಭವಾಗಿ ಮತದಾರರ ಗುರುತಿನ ಚೀಟಿಯನ್ನು ಪಡೆದರು.ಅರ್ಜಿಯನ್ನು ಆನ್ ಲೈನ್ ನಲ್ಲಿ ಹಾಕಿ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದಾದರೆ ಚುನಾವಣೆಯ ದಿನವೂ ಕೂಡ ತಮ್ಮ ತಮ್ಮ ಊರುಗಳಿಗೆ ಹೋಗಿ ಮತ ಚಲಾಯಿಸಲಾಗದ ಮತದಾರರಿಗೆ ಆನ್ ಲೈನ್ ಮೂಲಕವೇ ವೋಟಿಂಗ್ ಮಾಡುವ ಸೌಲಭ್ಯವನ್ನು ಚುನಾವಣಾ ಆಯೋಗ ಕಲ್ಪಿಸಬಾರದೇಕೆ?

ಹೇಗಿದ್ದರೂ ಚುನಾವಣಾ ಆಯೋಗದ ವೈಬ್ ಸೈಟ್ ಇದೆ.ಅದನ್ನು ಚುನಾವಾಣೆಯ ಸಂದರ್ಭದಲ್ಲಿ ಅಪ್ ಡೇಟ್ ಮಾಡಿ ಚುನಾವಣೆಯ ದಿನ ನಿರ್ದಿಷ್ಟ ಸಮಯದವರೆಗೆ ಅಂದರೆ ಮತದಾನ ನಡೆಯುವ ಸಮಯವಾದ ಬೆಳಿಗ್ಗೆ ಏಳರಿಂದ ಸಂಜೆ ಐದರ ವರೆಗೆ ಆನ್ ಲೈನ್ ವೋಟಿಂಗ್ ಸೌಲಭ್ಯವನ್ನು ಕಲ್ಪಿಸಬಹುದಲ್ಲ.ತಮ್ಮ ಮತಗಟ್ಟೆಯ ಪಿನ್ ಕೋಡ್ ಟೈಪ್ ಮಾಡುವ ಮೂಲಕ ತಮ್ಮ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಆನ್ ಲೈನ್ ಮತದಾರರು ಪಡೆಯುವಂತಿರಬೇಕು.ತಮಗೆ ಬೇಕಾದ ಅಭ್ಯರ್ಥಿಗಳಿಗೆ ವೋಟ್ ಮಾಡುವ ಸೌಲಭ್ಯವೂ ಇರಬೇಕು.ಆಗ ಎಲ್ಲರೂ ಮತದಾನ ಮಾಡಿದಂತೆಯೂ ಆಗುತ್ತದೆ ಮತ್ತು ಕೇವಲ ಒಂದು ಮತ ಹಾಕಲು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಮತದಾರರು ತಮ್ಮ ಊರುಗಳಿಗೆ ಹೋಗುವುದೂ ತಪ್ಪುತ್ತದೆ.

ನಗರ ಪ್ರದೇಶದಲ್ಲೇನೋ ಈ ಆನ್ ಲೈನ್ ವೋಟಿಂಗ್ ಸರಿ.ಆದರೆ ಅಂತರ್ಜಾಲ ಸೌಲಭ್ಯವಿಲ್ಲದ ಹಳ್ಳಿಗಳಲ್ಲಿ ಈ ವ್ಯವಸ್ಥೆ ಕಲ್ಪಿಸುವುದು ಹೇಗೆ ಎಂದು ಕೆಲವರು ಕೇಳಬಹುದು.ಆದರೆ ಪ್ರತೀ ಬಾರಿ ಚುನಾವಣೆ ನಡೆದಾಗಲೂ ಗ್ರಾಮೀಣ ಪ್ರದೇಶಗಳಲ್ಲಿ ಮತದಾನ ಚೆನ್ನಾಗಿಯೇ ನಡೆಯುತ್ತದೆ.ಕಡಿಮೆ ಮತದಾನ ನಡೆಯುವುದು ನಗರಪ್ರದೇಶಗಳಲ್ಲಿಯೇ.ಮತ್ತು ಇಂದಿನ ದಿನಗಳಲ್ಲಿ ಅನೇಕರು ಉದ್ಯೋಗ,ವಿದ್ಯಾಭ್ಯಾಸ ನಿಮಿತ್ತ ಹಳ್ಳಿಗಳಿಂದ ಪಟ್ಟಣಕ್ಕೆ ಹೋಗುತ್ತಾರೆಯೇ ಹೊರತು,ನಗರಗಳಿಂದ ಹಳ್ಳಿಗಳಿಗೆ ತೆರಳುವುದಿಲ್ಲ.ಹೀಗಿರುವಾಗ ಆನ್ ಲೈನ್ ವೋಟಿಂಗ್ ಸೌಲಭ್ಯ ಬೇಕಾಗಿರುವುದು ಹಳ್ಳಿಗಳಿಂದ ಬಂದು ನಗರಗಳಲ್ಲಿ ವಾಸವಾಗಿರುವವರಿಗೇ ಹೊರತು ಹಳ್ಳಿಯವರಿಗಲ್ಲ.ಈ ಆನ್ ಲೈನ್ ವೋಟಿಂಗ್ ಕುರಿತು ಚುನಾವಣಾ ಆಯೋಗದ ಬಳಿ ಕೆಲವರು ಪ್ರಸ್ತಾಪಿಸಿದಾಗ ಈ ವ್ಯವಸ್ಥೆ ದುರುಪಯೋಗವಾಗುವ ಸಾಧ್ಯತೆಗಳು ಬಹಳವಾಗಿವೆ ಎಂದಿತು.ಅಂದರೆ ಒಬ್ಬರ ಹೆಸರಲ್ಲಿ ಇನ್ಯಾರೋ ಬಂದು ವೋಟ್ ಮಾಡಬಹುದು,ಇದನ್ನು ತಪ್ಪಿಸುವುದು ಕಷ್ಟ ಎಂದು ಆಯೋಗ ಹೇಳಿತು.ಆದರೆ ತಮ್ಮ ವೋಟರ್ ಐಡಿಯ ನಂಬರ್ ಟೈಪ್ ಮಾಡಿದರೆ ಮಾತ್ರ ಆ ವೋಟಿಂಗ್ ಪ್ಯಾನೆಲ್ ತೆರೆದುಕೊಳ್ಳುವ ಮತ್ತು ಮತದಾರರ ಮುಖವನ್ನು ಕಂಪ್ಯೂಟರ್ ಕ್ಯಾಮರಾದ ಮುಂದೆ ಸ್ಕ್ಯಾನ್ ಮಾಡುವಂಥ ವ್ಯವಸ್ಥೆಗಳನ್ನು ಮಾಡುವುದರ ಮೂಲಕ ಅದು ದುರುಪಯೋಗವಾಗುವುದನ್ನು ತಪ್ಪಿಸಬಹುದು.ಇದಕ್ಕಾಗಿ ತಜ್ಞರ ಸಮಿತಿಯೊಂದನ್ನು ನೇಮಿಸಿ ಚರ್ಚಿಸಿದರೆ ಅತ್ಯುತ್ತಮವಾದ ಆನ್ ಲೈನ್ ವೋಟಿಂಗ್ ಅನ್ನು ಜಾರಿಗೆ ತರಬಹುದು.

ಆನ್ ಲೈನ್ ವೋಟಿಂಗ್ ಬೇಡದಿದ್ದರೆ ಹೋಗಲಿ.ಮತ್ತು ಅನೇಕರಿಗೆ ಅಂತರ್ಜಾಲ ಬಳಸಲು ಬರುವುದಿಲ್ಲ ಎಂಬುದನ್ನೂ ಗಮನದಲ್ಲಿಟ್ಟುಕೊಳ್ಳೋಣ.ಎಲ್ಲಾ ಊರುಗಳಲ್ಲಿ ಆಯಾಯ ಮತಗಟ್ಟೆಗಳಲ್ಲಿ ಬೇರೆ ಊರಿನ ಮತದಾರರೂ ವೋಟ್ ಮಾಡುವಂಥ ಸೌಲಭ್ಯ ಕಲ್ಪಿಸಬಹುದು.ಅದಕ್ಕಾಗಿ ಬೇರೆ ಮತಯಂತ್ರವನ್ನೇನೂ ತಯಾರು ಮಾಡಬೇಕಿಲ್ಲ.ಅಷ್ಟೂ ಮತಗಟ್ಟೆಗಳಲ್ಲಿಯೂ ಎಲ್ಲಾ ಊರಿನ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿಗಳ ಹತ್ತು-ಹದಿನೈದು ಬ್ಯಾಲೆಟ್ ಪೇಪರ್ ಇಟ್ಟುಕೊಂಡರಾಯಿತು.ಈ ಬ್ಯಾಲೆಟ್ ಪೇಪರ್ ವೋಟಿಂಗ್ ಸೌಲಭ್ಯ ತಮ್ಮ ಊರಿಗೆ ತೆರಳಿ ಮತಚಲಾಯಿಸಲಾಗದ ಮತದಾರರಿಗೆ ಮಾತ್ರ.ಇದಕ್ಕಾಗಿಯೇ ಪ್ರತಿ ಮತಗಟ್ಟೆಯಲ್ಲಿಯೂ ಒಬ್ಬ ಪ್ರತ್ಯೇಕ ಅಧಿಕಾರಿಯನ್ನು ನೇಮಿಸಬೇಕು.ಆ ಅಧಿಕಾರಿ ಯಾರಾದರೂ ಬೇರೆ ಊರಿನ ಅಭ್ಯರ್ಥಿಗಳಿಗೆ ಮತಹಾಕುವವರು ಬಂದರೆ ಅವರ ಗುರುತಿನ ಚೀಟಿಯನ್ನು ಪರಿಶೀಲಿಸಿ,ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ ಎಂದು ತಕ್ಷಣವೇ ಆಯೋಗದ ವೆಬ್ ಸೈಟ್ ನಲ್ಲಿ ನೋಡಿ ಅವರು ಮತಚಲಾಯಿಸಬೇಕಾದ ಕ್ಷೇತ್ರದ ಬ್ಯಾಲೆಟ್ ಪೇಪರ್ ನೀಡಬೇಕು.ನಂತರ ಈ ಬ್ಯಾಲೆಟ್ ಪೇಪರ್ ಗಳನ್ನು ಗೌಪ್ಯವಾಗಿ,ಸುರಕ್ಷಿತವಾಗಿ ಮತ ಎಣಿಕೆ ನಡೆಯುವ ಸ್ಥಳಕ್ಕೆ ತಲುಪಿಸಬಹುದು.ಇದಕ್ಕಾಗಿ ಬೇಕಾಗುವುದು ಒಬ್ಬ ಹೆಚ್ಚುವರಿ ಚುನಾವಣಾ ಕಾರ್ಯಕರ್ತ ಅಷ್ಟೇ.ಆಗ ಆನ್ ಲೈನ್ ವೋಟಿಂಗ್ ದುರುಪಯೋಗವಾಗುವುದನ್ನೂ ತಪ್ಪಿಸಬಹುದು ಮತ್ತು ಮತದಾರರು ತಮಗೆ ಯೋಗ್ಯವಾದ ಸಮಯದಲ್ಲಿ ತಾವಿರುವ ಸ್ಥಳದಲ್ಲೇ ಮತಗಟ್ಟೆಗೆ ತೆರಳಿ ತಮ್ಮ ಕ್ಷೇತ್ರದ ಅಭ್ಯರ್ಥಿಗಳಿಗೆ ಮತಚಲಾಯಿಸಬಹುದು.ಆದರೆ ಹೊರರಾಜ್ಯದಲ್ಲಿರುವವರಿಗೆ ಈ ವ್ಯವಸ್ಥೆ ಕಲ್ಪಿಸುವುದು ಕಷ್ಟವಾಗಬಹುದು.

ಕಡ್ದಾಯ ಮತದಾನಕ್ಕೆ ಪೂರಕ ವ್ಯವಸ್ಥೆ ಕಲ್ಪಿಸುವುದು ಕೇವಲ ಚುನಾವಣಾ ಆಯೋಗದಿಂದ ಮಾತ್ರ ಆಗುವ ಕೆಲಸವಲ್ಲ.ಮತದಾರರೂ ಇದರಲ್ಲಿ ಸರಿಯಾಗಿ ಭಾಗಿಗಳಾಗಿ ಚುನಾವಣೆ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು.ಒಂದು ವೇಳೆ ಆನ್ ಲೈನ್ ವೋಟಿಂಗ್ ಸೌಲಭ್ಯ ಬಂದರೆ ಅದು ದುರುಪಯೋಗವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಮತದಾರರದ್ದೇ ಆಗಿರುತ್ತದೆ.ತಮ್ಮ ಉಪಯೋಗಕ್ಕಾಗಿಯೇ ಆಯೋಗ ಇದನ್ನು ಜಾರಿಗೆ ತಂದಿದೆ.ಇದನ್ನು ನಾವು ಸದುಪಯೋಗಪಡಿಸಿಕೊಂಡು ಮತದಾನದಂಥ ಪವಿತ್ರ ಕಾರ್ಯದಲ್ಲಿ ಸರಿಯಾಗಿ ಭಾಗಿಗಳಾಗಿ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕಾದ್ದು ನಮ್ಮ ಕರ್ತವ್ಯ ಎಂಬುದನ್ನು ಮತದಾರರು ಅರ್ಥ ಮಾಡಿಕೊಳ್ಳಬೇಕು.ಅದು ಬಿಟ್ಟು ಚುನಾವಣೆಯ ದಿನ ರಜೆ ಇದೆಯೆಂದು ಪ್ರವಾಸ ತೆರಳುವ ಅಥವಾ ಮತದಾನ ಮಾಡಲೂ ಹೋಗದೇ ಸುಮ್ಮನೇ ಮನೆಯಲ್ಲಿ ಕುಳಿತುಕೊಳ್ಳುವವರಿಗೆ ಯಾವ ಕ್ಷಮೆಯೂ ಇಲ್ಲ.

ಲಕ್ಷ್ಮೀಶ ಜೆ.ಹೆಗಡೆ

Facebook ಕಾಮೆಂಟ್ಸ್

Lakshmisha J Hegade: ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದಿರುವ ವೈದ್ಯ.ಹೆಮ್ಮೆಯ ಕನ್ನಡಿಗ.ದೇಶದ ಶ್ರೀಸಾಮಾನ್ಯ ಪ್ರಜೆಗಳಲ್ಲೊಬ್ಬ.ಕನ್ನಡ ಬ್ಲಾಗರ್.ಇವಿಷ್ಟೇ ನನ್ನ ಪ್ರವರ.ಹೆಚ್ಚು ತಿಳಿಸುವ ಅಗತ್ಯವಿಲ್ಲ.ನನ್ನ ನಿಲುವು,ಸಿದ್ಧಾಂತ,ಮನಸ್ಥಿತಿಯನ್ನು ತಿಳಿಯಲು ಇಲ್ಲಿ ಪ್ರಕಟವಾಗಿರುವ ನನ್ನ ಬರಹಗಳನ್ನು ಓದಿ.ಏನಾದರೂ ಗೊತ್ತಾಗಬಹುದು.
Related Post