X

ಮಹಿಳೆ ಶೋಷಿತಳು ನಿಜ, ಪುರುಷ ಸುರಕ್ಷಿತನೇ..?

ಹೆಣ್ಣು ಸಂಸಾರದ ಕಣ್ಣು, ಹೆಣ್ಣೆಂದರೆ ದೇವತೆ, ಒಬ್ಬ ಯಶಸ್ವೀ ಪುರುಷನ ಹಿಂದೆ ಸ್ತ್ರೀಯೊಬ್ಬಳು ಇದ್ದೇ ಇರುತ್ತಾಳೆ, ಇಂತಹ ಬಹು ವಿಶೇಷಣಗಳಿಂದೆಲ್ಲಾ ಸ್ತ್ರೀಯನ್ನು ಕೊಂಡಾಡುತ್ತೇವೆ, ಗೌರವಿಸುತ್ತೇವೆ. ಮಾತೆಯಾಗಿ, ಭಗಿನಿಯಾಗಿ, ಮಡದಿಯಾಗಿ, ಪುತ್ರಿಯಾಗಿ ಹೆಣ್ಣೊಬ್ಬಳು ಸಂಸಾರದ ಏಳ್ಗೆಯಲ್ಲಿ ಬಹುಮುಖ್ಯ ಪಾತ್ರಧಾರಿಯಾಗಿದ್ದಾಳೆ ನಿಜ. ಆದರೆ ಇದರ ಇನ್ನೊಂದು ಮಗ್ಗುಲಲ್ಲಿ ಯೋಚಿಸುವುದಾದರೆ ಸಂಸಾರದ ಒಡಕಿನಲ್ಲಿಯೂ, ಅವನತಿಯಲ್ಲಿಯೂ ಹೆಣ್ಣಿನ ಪಾತ್ರವೇ ಕೆಲವೊಮ್ಮೆ ಹಿರಿದಾಗಿರುವುದು ಕೂಡ ಅಷ್ಟೇ ನಿಜ.! ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಕೂಡ ಎಲ್ಲರಂತೆ ಆರ್ಥಿಕ ಮಟ್ಟವನ್ನು ಉತ್ತಮಪಡಿಸಿಕೊಂಡು ಜೀವಿಸಬೇಕೆನ್ನುವುದೇನೋ ಸರಿ. ಆದರೆ ತನ್ನ ನೆರೆಹೊರೆಯವರಿಗಿಂತ ತಾನು ವೈಭವೋಪೇತ ಜೀವನ ನಡೆಸಬೇಕು, ಅವರ ಮುಂದೆ ತಾನು ಮಿಂಚಬೇಕೆಂಬ ಕನಸು ಕಾಣುವ ಮಡದಿಯೊಬ್ಬಳು ತನ್ನ ಪತಿಯ ಅಲ್ಪ ಆದಾಯದಿಂದ ತೃಪ್ತಳಾಗದೆ ಆತನಿಗೆ ಕೊಡುವ ಮಾನಸಿಕ ಹಿಂಸೆ ಮಾತ್ರ ಅಸಹನೀಯವಾದದ್ದು. ತನ್ನ ಮಡದಿಯ ಅನಿಯಮಿತ ಬೇಡಿಕೆಗಳ ಪಟ್ಟಿಯನ್ನು ಪೂರೈಸುವಲ್ಲಿ ವಿಫಲನಾದ ಪತಿಯೊಬ್ಬ ಹತಾಶನಾಗಿ, ಕೀಳರಿಮೆಯಿಂದ ಖಿನ್ನತೆಗೊಳಗಾಗಿ ಆತ್ಮಹತ್ಯೆಯ ಯೋಚನೆ ಮಾಡುವುದು ಕೂಡ ಸಹಜವೇ ಆಗಿದೆ.

ಸಂಸಾರ ನಿರ್ವಹಣೆಗೆಂದು ಪತಿ ಪತ್ನಿ ಇಬ್ಬರೂ ಹೊರಗಡೆ ದುಡಿಯುವುದು ಒಪ್ಪತಕ್ಕ ವಿಚಾರವೇ ಸರಿ, ಆದರೆ ಪತಿಗಿಂತ ಹೆಚ್ಚಿನ ಆದಾಯ, ಅಧಿಕಾರ, ಅಂತಸ್ತನ್ನು ಪತ್ನಿ ಹೊಂದಿರುವಂತಹ ಕೆಲವೊಂದು ಕುಟುಂಬಗಳಲ್ಲಿ ‘ಅಮ್ಮಾವ್ರ ಗಂಡ’ ನಾಗಿ ಬದಲಾದ ಪತಿಯನ್ನು ನಿಷ್ಪ್ರಯೋಜಕನಂತೆ, ಕೇವಲ ಗುಲಾಮನಂತೆ ಕಾಣಲಾಗುತ್ತಿರುವುದು ಕೂಡ ವಾಸ್ತವಿಕ ಸತ್ಯ.! ಇನ್ನು ಕೆಲವು ಪ್ರಕರಣಗಳಲ್ಲಿ ತನ್ನ ಪತ್ನಿಯ ಅನೈತಿಕ ನಡವಳಿಕೆಯಿಂದ ಜಿಗುಪ್ಸೆಗೊಂಡ ಪತಿ ಕುಡಿತದ ಚಟಕ್ಕೋ, ಆತ್ಮಹತ್ಯೆಗೋ ಶರಣಾಗುವುದನ್ನು ಅಲ್ಲಗಳೆಯುವಂತಿಲ್ಲ. ಕೆಲವೊಂದು ಕಾಮಪಿಶಾಚಿಗಳು ನಡೆಸುವ ಅತ್ಯಾಚಾರ, ಲೈಂಗಿಕ ಕಿರುಕುಳಗಳಂತಹ ಅಮಾನವೀಯ ಕೃತ್ಯಗಳಿಂದಾಗಿ ಇಡೀ ಪುರುಷ ಸಮಾಜವನ್ನೇ ಅನುಮಾನದ ದೃಷ್ಟಿಯಲ್ಲಿ ನೋಡುವಂತಹ ಸ್ಥಿತಿ ಕೂಡ ಹೇಯವಾದದ್ದು.

ಒಂದೆಡೆ ಅತ್ಯಾಚಾರದಂತಹ ಪ್ರಕರಣಗಳು ನಡೆಯುತ್ತಿರುವುದು ಹೌದಾದರೂ, ಇನ್ನೊಂದೆಡೆ ಯಾವುದೋ ಪೂರ್ವದ್ವೇಷದಿಂದ ಇದನ್ನೇ ಅಸ್ತ್ರವನ್ನಾಗಿಸಿಕೊಂಡು ಅಮಾಯಕ ಯುವಕರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳಂತಹ ವೃಥಾ ಆರೋಪ ಹೊರಿಸಿ ತಮ್ಮ ಕಾರ್ಯ ಸಾಧಿಸಿಕೊಳ್ಳುವ ಮಹಿಳಾಮಣಿಗಳೂ ಇದ್ದಾರೆ! ತನ್ನ ಮನೆಯ ತನಕ ಕಾರಿನಲ್ಲಿ ಡ್ರಾಪ್ ಕೊಡಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಯುವಕರಿಬ್ಬರ ಮೇಲೆ ಅತ್ಯಾಚಾರದ ಪ್ರಕರಣ ದಾಖಲಿಸಿ ಜೈಲುಪಾಲಾಗಿಸಿದ ಯುವತಿ, ಕೊಟ್ಟ ಹಣವನ್ನು ಮರಳಿ ಕೊಡಲಿಲ್ಲವೆಂಬ ಕಾರಣಕ್ಕೆ ಮಾನಭಂಗದ ಮೊಕದ್ದಮೆಯ ಮೂಲಕ ಮಾನ ಹರಾಜಾಗಿಸಿ ಆತನ ಭವಿಷ್ಯಕ್ಕೇ ಕತ್ತರಿಯಿಡುವ ಯುವತಿಯರು, ಪ್ರೀತಿಸಿದ ಯುವಕನ ಜೊತೆ ಸಂಬಂಧ ಮುರಿದು ಮದುವೆಗೆ ಮನಸ್ಸು ಒಪ್ಪದಿದ್ದಾಗ ಆತನ ಮೇಲೆಯೇ ಅತ್ಯಾಚಾರದ ಪ್ರಕರಣ ದಾಖಲಿಸಿ ತಾವು ಸಭ್ಯರಂತೆ ಬಚಾವಾಗುವ ವಿಕೃತ ಮನಸ್ಥಿತಿಯ ಯುವತಿಯರು.! ಇಂತಹ ವರದಿಗಳು ಆಗೊಮ್ಮೆ ಈಗೊಮ್ಮೆ ವರದಿಯಾಗುತ್ತಲೇ ಇರುತ್ತವೆ. ಕೆಲವೊಂದು ಪ್ರಕರಣಗಳು ಬೆಳಕಿಗೆ ಬರುವುದು ಕೂಡ ಇಲ್ಲ. ಮಹಿಳೆಯರ ಮೇಲಿನ ದೌರ್ಜನ್ಯಗಳು ಸುದ್ಧಿಯಾದಂತೆ ಪುರುಷರ ಮೇಲೆ ಮಹಿಳೆಯರು ನಡೆಸುವ ದೌರ್ಜನ್ಯಗಳು ಸುದ್ದಿಯಾಗುವುದೇ ಇಲ್ಲ.! ಹಾಗೆ ದೌರ್ಜನ್ಯಕ್ಕೊಳಗಾದ ಯಾವ ಪುರುಷರು ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವುದಿಲ್ಲ. ಕಾರಣ, ಸಮಾಜ ಅವನನ್ನು ಷಂಡನೆಂದೋ, ಹೇಡಿಯೆಂದೋ ಮೂದಲಿಸುವ ಭಯ ಆತನನ್ನು ಮೂಕನನ್ನಾಗಿಸುತ್ತದೆ! ಮಹಿಳೆಗೆ ಪುರುಷನಷ್ಟೇ ಸ್ವಾತಂತ್ರ್ಯ ಬೇಕು, ಆದರೆ ಅದು ಪುರುಷ ಸಮಾಜದ ಮೇಲೆ ವಿನಾ ಕಾರಣ ಸವಾರಿ ಮಾಡುವಂತಿರಬಾರದು! ಮಹಿಳೆ ತಾನು ಅದೆಷ್ಟೇ ಯಶಸ್ಸಿನ ತುತ್ತತುದಿಗೇರಿದರೂ ಕೂಡ ತಾನು ಪತಿಗೆ ಸಹಧರ್ಮಿಣಿಯಾಗಿ ನಡೆಯುವಂತಹ ಅಪ್ಪಟ ಭಾರತೀಯ ನಾರಿ ಅನ್ನುವ ಚಿಂತನೆ ತುಂಬಿಕೊಂಡಲ್ಲಿ ಅದು ಆರೋಗ್ಯಕರ ಕೌಟುಂಬಿಕ ವ್ಯವಸ್ಥೆಯ ಉಳಿವಿಗೆ ಕಾರಣವಾಗಬಹುದು. ಅದಿಲ್ಲದೆ ಹೋದಲ್ಲಿ ದೇವತೆಯಂತಹ ಹೆಣ್ಣು ರಕ್ಕಸಿಯಂತೆ ಕಂಡುಬಂದಾಳು.! ನಾನು ಮಹಿಳಾವಿರೋಧಿ ಖಂಡಿತಾ ಅಲ್ಲ, ಪುರುಷರಂತೆ ಮಹಿಳೆಯರೂ ದೌರ್ಜನ್ಯ ನಡೆಸುತ್ತಾರೆನ್ನುವ ಸತ್ಯದ ಮನವರಿಕೆ ಮಾಡುವ ಪ್ರಯತ್ನವಿದು..! ಕ್ಷಮೆಯಿರಲಿ ತಾಯಂದಿರೇ.

Facebook ಕಾಮೆಂಟ್ಸ್

Udayabhaskar Sullia: ಮಡಿಕೇರಿ ತಾಲೂಕಿನ ಪೆರಾಜೆಯಲ್ಲಿ ಜನಿಸಿದ್ದು ಪ್ರಸ್ತುತ ಸುಳ್ಯದಲ್ಲಿ ವಾಸ್ತವ್ಯ. ಜೀವನ ನಿರ್ವಹಣೆಗಾಗಿ ಸ್ವ ಉದ್ಯೋಗ ಹೊಂದಿರುತ್ತೇನೆ. ದೇಶಭಕ್ತಿಯ ಭಾಷಣ, ಅಧ್ಯಾತ್ಮಿಕ ಪ್ರವಚನಗಳನ್ನು ಕೇಳುವುದು, ಹಳೆಯ ಸಿನೆಮಾ ಹಾಡು, ಭಾವಗೀತೆ, ಭಕ್ತಿಗೀತೆಗಳನ್ನು ಆಲಿಸುವುದು, ಸಮಾಜಸೇವೆ, ಸದ್ವಿಚಾರ ಪ್ರಸಾರ... ಇವು ನನ್ನ ಆಸಕ್ತಿಯ ಕ್ಷೇತ್ರಗಳು. ಭಜನೆ ಹಾಡುವುದು, ಕವನ ರಚನೆ, ಸಾಮಾಜಿಕ-ದೇಶಭಕ್ತಿ- ಸಂಸ್ಕೃತಿಗಳ ಕುರಿತಾದ ಚಿಕ್ಕಪುಟ್ಟ ಲೇಖನಗಳನ್ನು ಬರೆಯುವುದು ಹಾಗೂ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವ ಸದ್ಗ್ರಂಥಗಳ ಅಧ್ಯಯನ.. ಇವು ನನ್ನ ಹವ್ಯಾಸ.
Related Post