ಗಾಂಧಿ ಪಟೇಲರನ್ನು ಬಿಟ್ಟು ನೆಹರೂರನ್ನು ಪ್ರಧಾನಿ ಮಾಡಿದ್ದೇಕೆ?

History is written by the victors” ಈ ಮಾತು ಅಕ್ಷರಶಃ ಸತ್ಯ. ಭಾರತದ ಇತಿಹಾಸವನ್ನು ಬರೆದಿದ್ದು ಸ್ವಾತಂತ್ರ್ಯ ಚಳುವಳಿಯಲ್ಲಿ ತಾನೇ ವಿಜಯಿ ಎಂದು ಬಿಂಬಿಸಿಕೊಂಡ ಕಾಂಗ್ರೆಸ್ ಪಕ್ಷ. ಸುಳ್ಳಿನ ಕಂತೆಗಳನ್ನು ಪೋಣಿಸಿ ಅದನ್ನೇ ನಿಜ ಇತಿಹಾಸವೆಂದು ನಮ್ಮನ್ನು ನಂಬಿಸಿದವರು ಕಾಂಗ್ರೆಸ್ ಮತ್ತು ಅದರ ಮುಂಚೂಣಿ ನಾಯಕರಾದ ಗಾಂಧಿ ಮತ್ತು ನೆಹರೂ.

ಅಧಿಕೃತ ಇತಿಹಾಸದ ಪ್ರಕಾರ, ಜವಾಹರಲಾಲ್ ನೆಹರೂ ಭಾರತದ ಪ್ರಥಮ ಪ್ರಧಾನಿಯಾಗಿ ಆಯ್ಕೆಗೊಂಡರು ಮತ್ತು ಸರ್ದಾರ್ ಪಟೇಲ್ ಉಪ ಪ್ರಧಾನಿಯಾದರು. ಅರ್ಹತೆಗೆ ಅನುಗುಣವಾಗಿ ಈ ಆಯ್ಕೆ ನಡೆಯಿತು ಎಂದು ನಮ್ಮ  ಇತಿಹಾಸ ತಿಳಿಸುತ್ತದೆ. ಆದರೆ ಈ ಇತಿಹಾಸ ಮಹಾನ್ ದೇಶ ಭಕ್ತ, ಭಾರತದ ‘ ಉಕ್ಕಿನ ಮನುಷ್ಯ ’ ಸರ್ದಾರ್ ಪಟೇಲ್ ಗೆ ದ್ರೋಹ ಬಗೆದಿದೆ. ನಮ್ಮ ಇತಿಹಾಸ ಸಾಕಷ್ಟು ಸತ್ಯಗಳನ್ನು ಮರೆಮಾಚಿದೆ.  ಸ್ವಾತಂತ್ರ್ಯ ಬಂದ ನಂತರ  ದೇಶದ ಮೊದಲ ಪ್ರಧಾನಿಯ ಆಯ್ಕೆಯ ಸಂದರ್ಭದಲ್ಲಿ ಇಡೀ ಕಾಂಗ್ರೆಸ್ ಪಟೇಲರನ್ನು ಬೆಂಬಲಿಸಿತ್ತು. ದಕ್ಷ ಆಡಳಿತಗಾರರಾಗಿದ್ದ ಪಟೇಲರು ಪ್ರಧಾನಿಯಾಗಲು ಸೂಕ್ತ ವ್ಯಕ್ತಿಯಾಗಿದ್ದರು. ಆದರೂ ಪಟೇಲರು ಯಾಕೆ ಪ್ರಧಾನಿಯಾಗಲಿಲ್ಲ? ಗಾಂಧಿ ಪಟೇಲರನ್ನು ಬಿಟ್ಟು ನೆಹರೂರನ್ನು ಪ್ರಧಾನಿ ಮಾಡಿದ್ದೇಕೆ? ನಮ್ಮ ಇತಿಹಾಸ ತಿಳಿಸದ ಘೋರ ಸತ್ಯಗಳನ್ನು ನಾವು ಅರಿಯಬೇಕಿದೆ.

1946ರ ಹೊತ್ತಿಗೆ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವುದು ಖಾತ್ರಿಯಾಗಿತ್ತು. ಎರಡನೇ ಮಹಾಯುದ್ದ ಮುಗಿದಿತ್ತು ಬ್ರಿಟಿಷರು ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡಲು ನಿರ್ಧರಿಸಿದ್ದರು. ದೇಶದ ದೊಡ್ಡ ಪಕ್ಷ, ಸ್ವಾತಂತ್ರ್ಯ ಆಂದೋಲನದ ನೇತೃತ್ವ ವಹಿಸಿದ್ದ, 1946ರ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನಗಳಿಸಿದ್ದ ಕಾಂಗ್ರೆಸ್ ಮಧ್ಯಂತರ ಸರ್ಕಾರವನ್ನು ರಚಿಸಬೇಕಿತ್ತು. ಕಾಂಗ್ರೆಸ್ ಅಧ್ಯಕ್ಷರೇ ಮುಂದಿನ ಪ್ರಧಾನಿಯಾಗಬೇಕಿತ್ತು ಆದುದರಿಂದ ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೆ ಹೆಚ್ಚಿನ ಮಹತ್ವ ದೊರೆಯಿತು. ಮೌಲಾನ ಅಬ್ದುಲ್ ಕಲಾಂ ಅಜಾದ್ ಅಂದಿನ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. 6 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯೇ ನಡೆದಿರಲಿಲ್ಲ. ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಹೆಚ್ಚಿನ ಕಾಂಗ್ರೆಸ್ ನಾಯಕರು ಜೈಲು ಸೇರಿದ್ದರು ಹಾಗಾಗಿ ಚುನಾವಣೆ ನಡೆದಿರಲಿಲ್ಲ. ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಲು ಅಜಾದ್ ಉಸ್ತುಕರಾಗಿದ್ದರು. ಪ್ರಧಾನಿಯಾಗಬೇಕೆಂಬ ಆಸೆ ಅವರಿಗಿತ್ತು. ಆದರೆ ಅಜಾದ್ ಮತ್ತೊಮ್ಮೆ ಅಧ್ಯಕ್ಷರಾಗುವುದು ಗಾಂಧಿಗೆ ಇಷ್ಟವಿರಲಿಲ್ಲ. ಹಾಲಿ ಅಧ್ಯಕ್ಷರು ಪುನಃ ಅಧ್ಯಕ್ಷರಾಗುವುದು ಸರಿಯಲ್ಲ ಆದ್ದರಿಂದ ಅಜಾದ್ ಸ್ಪರ್ಧಿಸಬಾರದೆಂದು ಗಾಂಧಿ ಆದೇಶಿಸಿದ್ದರು.  ಗಾಂಧಿಯ ಮಾತನ್ನು ಮೀರುವ ಶಕ್ತಿ ಅಜಾದರಿಗೆ ಇರಲಿಲ್ಲ ಅವರು ತೆಪ್ಪಗಾದರು. ನೆಹರೂ ಬಿಟ್ಟು ಬೇರಾರೂ ಅಧ್ಯಕ್ಷರಾಗಬಾರದು ಎಂದು ಗಾಂಧಿ ತೀರ್ಮಾನಿಸಿದ್ದರು.

sardarsardar

ಏಪ್ರಿಲ್ 29 1946ರಂದು ಅಧ್ಯಕ್ಷರನ್ನು ಆರಿಸಲು ಕೊನೆಯ ದಿನಾಂಕವಾಗಿತ್ತು. 15 ಕಾಂಗ್ರೆಸ್ ಸಮಿತಿಗಳಲ್ಲಿ  12 ಕಾಂಗ್ರೆಸ್ ಸಮಿತಿಗಳು ಗಾಂಧಿಯ ಆಸೆಯ ವಿರುದ್ದವಾಗಿ ಅಂದರೆ ಸರ್ದಾರ್  ಪಟೇಲರ ಹೆಸರನ್ನು  ಸೂಚಿಸಿದರು. ಇನ್ನು 3 ಸಮಿತಿಗಳು ಯಾರ ಹೆಸರನ್ನು ಸೂಚಿಸಲಿಲ್ಲ. ಇದರಿಂದ ತೀವ್ರ ಬೇಸತ್ತ ಗಾಂಧಿ ಆಚಾರ್ಯ ಕೃಪಲಾನಿಗೆ ಸದಸ್ಯರ ಮನವೊಲಿಸಬೇಕೆಂದು ಆದೇಶಿಸಿದರು. ಆಗ ಕೆಲವು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು ನೆಹರು ಹೆಸರನ್ನು ಸೂಚಿಸಿದರು. ಆದರೆ ಅಧ್ಯಕ್ಷರನ್ನು ಆರಿಸುವ ಅವಕಾಶ ಕೇವಲ ಪ್ರಾದೇಶಿಕ ಕಾಂಗ್ರೆಸ್ ಸಮಿತಿಯ ಸದಸ್ಯರಿಗಿತ್ತು. ಆದರೆ ಯಾವೊಬ್ಬ ಪ್ರಾದೇಶಿಕ ಸಮಿತಿಯ ಸದಸ್ಯರು ನೆಹರೂ ಹೆಸರನ್ನು ಸೂಚಿಸಲಿಲ್ಲ. ಗಾಂಧಿ ತೀವ್ರವಾಗಿ ಅಸಮಾಧಾನಗೊಂಡರು. ಪರಿಸ್ಥಿತಿಯನ್ನು ತಿಳಿಸಿ ನೆಹರೂರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ನೆಹರೂ ನಾನು ಮತ್ತೊಬ್ಬರ ಕೈ ಕೆಳಗೆ ಕೆಲಸ ಮಾಡಲಾರೆ ಎಂದು ತಿಳಿಸಿದರು. ತಮ್ಮ ಪ್ರಿಯ ಶಿಷ್ಯ ನೆಹರೂರನ್ನು ಪ್ರಧಾನಿ ಪಟ್ಟದಲ್ಲಿ ಕೂರಿಸಲೇ ಬೇಕೆಂದು ನಿಶ್ಚಯಿಸಿದ್ದ ಗಾಂಧಿ ಸರ್ದಾರ್ ಪಟೇಲರಿಗೆ ಸ್ಪರ್ಧೆಯಿಂದ ದೂರವಿರಬೇಕೆಂದು ಸೂಚಿಸಿದರು. ಗಾಂಧಿಯವರ ಬಗ್ಗೆ ಆಪಾರ ಅಭಿಮಾನ ಮತ್ತು ಗೌರವ ಹೊಂದಿದ್ದ ಪಟೇಲರು ಒಂದು ಕ್ಷಣವೂ ಯೋಚಿಸದೆ ಚುನಾವಣೆಯಿಂದ ಹಿಂದೆ ಸರಿದರು.  ಗಾಂಧಿಯ ಇಚ್ಚೆಯಂತೆ ನೆಹರೂರ ಪಟ್ಟಾಭಿಷೇಕಯಾಯಿತು.

ಇಲ್ಲಿ ಕಾಡುವ ಪ್ರಶ್ನೆಯೆಂದರೆ, ಸರ್ದಾರ್ ಪಟೇಲರು ಆಪಾರ ಬೆಂಬಲ ಹೊಂದಿದ್ದರೂ ಗಾಂಧಿ ಏಕೆ ಅವರವನ್ನು ಪ್ರಧಾನಿ ಮಾಡಲಿಲ್ಲ? ನೆಹರೂರನ್ನೇ ಆರಿಸಲು ಬಲವಾದ ಕಾರಣವಿತ್ತೆ? ಸರ್ದಾರ್ ಪಟೇಲರ ಸ್ಪರ್ಧೆಯಿಂದ ಹಿಂದೆ ಸರಿದಾಗ ರಾಜೇಂದ್ರ ಪ್ರಸಾದ್ ಅವರು ಅಸಮಾಧಾನಗೊಂಡು ಗಾಂಧಿ ‘ಗ್ಲಾಮರಸ್ ನೆಹರೂ’ ಗಾಗಿ ವಿಶ್ವಾಸಾರ್ಹ ಆಡಳಿತಗಾರನನ್ನು ತ್ಯಾಗಮಾಡಿದರು ಎಂದು ಹೇಳಿಕೆ ನೀಡಿದರು.

ಗ್ಲಾಮರಸ್ ಮತ್ತು ಆಧುನಿಕ ವ್ಯಕ್ತಿತ್ವ ಹೊಂದಿದ್ದರು ಎಂಬ ಕಾರಣಕ್ಕೆ ಗಾಂಧಿ ನೆಹರೂರನ್ನು ಪ್ರಧಾನಿ ಮಾಡಿದರು ಮತ್ತು ‘ನೆಹರೂ ಕುರುಡು ಪ್ರೇಮ’ ಎಂಬ ಕಾಯಿಲೆ ಗಾಂಧಿಗೆ ಬಂದಿತ್ತು. ಈ ಕುರುಡು ಪ್ರೇಮ ಶ್ರೇಷ್ಠ ದೇಶ ಭಕ್ತ ಆಡಳಿತಗಾರ ಪಟೇಲರಿಗೆ ಅನ್ಯಾಯ ಮಾಡಿತು. 1929 ಮತ್ತು 1937 ರ ಚುನಾವಣೆಯ ಸಂದರ್ಭದಲ್ಲಿಯೂ ಸಹ ಗಾಂಧಿ ನೆಹರೂರನ್ನೇ ಬೆಂಬಲಿಸಿ ಸರ್ದಾರ್ ಪಟೇಲರಿಗೆ ದ್ರೋಹ ಬಗೆದಿದ್ದರು. ಸರ್ದಾರ್ ಪಟೇಲರನ್ನು ಸಮಾಧಾನಗೊಳಿಸುವುದು ಸುಲಭ ಆದರೆ ಅಧಿಕಾರದಾಹಿ ನೆಹರೂರನ್ನು ಮನವೊಲಿಸುವುದು ಕಷ್ಟಕರ ಎಂಬ ಸಂಗತಿ ಗಾಂಧಿಗೆ ತಿಳಿದಿತ್ತು.  ಸದಾ ಸೂಟು ಬೂಟು ಧರಿಸಿಕೊಂಡು ಕಂಗೊಳಿಸುತ್ತಿದ್ದ, ಇಂಗ್ಲಿಷ್ ಮಾತಾನಾಡುತ್ತಿದ್ದ  ನೆಹರೂ ಪ್ರಧಾನಿಯಾದರೆ ಒಳ್ಳೆಯದು ಎಂಬ ಭ್ರಮೆ ಗಾಂಧಿಗಿತ್ತು. ಅಪ್ಪಟ ದೇಶೀ ಉಡುಗೆ ಧರಿಸುತ್ತಿದ್ದ ಮತ್ತು ದಕ್ಷ ಆಡಳಿತಗಾರರಾದ ಸರ್ದಾರ್ ಪಟೇಲರು ಗಾಂಧಿಗೆ ಬೇಡವಾಗಿತ್ತು.

ಆದರೆ ಅಂದು ಗಾಂಧಿ ತೆಗೆದುಕೊಂಡ ನಿರ್ಧಾರದಿಂದ ದೇಶ ದುಬಾರಿ ಬೆಲೆಯನ್ನು ತೆತ್ತ ಬೇಕಾಯಿತು. ಎರಡು ದಶಕಗಳಿಗೂ ಹೆಚ್ಚು ಕಾಲ ಆಡಳಿತ ನಡೆಸಿದ ನೆಹರೂ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯದೆ ಸಾಲದ ಕೂಪಕ್ಕೆ ತಳ್ಳಿದರು. ಪ್ರಧಾನಿ ಆಯ್ಕೆ ಸಂದರ್ಭದಲ್ಲಿ ಗಾಂಧಿ ಉಪಯೋಗಿಸಿದ ವೀಟೋ ಪವರ್ ನಿಂದ ಭಾರತ ಸಾಕಷ್ಟು ತೊಂದರೆಯನ್ನು ಅನುಭವಿಸಬೇಕಾಯಿತು. ನೆಹರೂ ಬದಲು ಪಟೇಲರೇ ಪ್ರಧಾನಿಯಾಗಿದ್ದರೆ ದೇಶದ ಸ್ಥಿತಿ ಉತ್ತಮವಾಗಿರುತ್ತಿತ್ತು. ಸೂಟು ಬೂಟು ಧರಿಸಿದ ನೆಹರೂ ಸಾದಿಸಿದ್ದು ಏನೂ ಇಲ್ಲ. ಸ್ವದೇಶೀ ಚಿಂತನೆ, ಸತ್ಯಾಗ್ರಹವನ್ನೇ ನಂಬಿದ್ದ ಗಾಂಧಿಗೆ  ಪ್ರಧಾನಿ ಆಯ್ಕೆಯ ಸಂದರ್ಭದಲ್ಲಿ ಈ ತತ್ವ, ಆದರ್ಶಗಳು ನೆನಪಿಗೆ ಬಾರದೇ ಹೋದದ್ದು ಎಂತಹ ವಿಪರ್ಯಾಸವಲ್ಲವೇ?

ಸರ್ದಾರ್ ಪಟೇಲರ ಕಟು ವಿರೋಧಿಗಳಾದ  ಸಿ. ರಾಜಗೋಪಾಲಾಚಾರಿ ಮತ್ತು ಮೌಲಾನ ಅಬ್ದುಲ್ ಕಲಾಂ ಅಜಾದ್ ಗಾಂಧಿ ತೆಗೆದುಕೊಂಡ  ನಿರ್ಧಾರ ತಪ್ಪು ಎಂದು ಪ್ರತಿಪಾದಿಸಿದ್ದಾರೆ.

ಅಜಾದ್ ನಾನು ಪಟೇಲರನ್ನು ಬೆಂಬಲಿಸದೇ ತಪ್ಪು ಮಾಡಿದೆ, ನಾನು ಮಾಡಿದ ತಪ್ಪು ಕ್ಷಮೆಗೆ ಅರ್ಹವಲ್ಲ ಎಂದು ತಮ್ಮ ಆತ್ಮಕತೆಯಲ್ಲಿ ಬರೆದುಕೊಂಡಿದ್ದಾರೆ.  ರಾಜಗೋಪಾಲಾಚಾರಿ ನೆಹರೂ ಬದಲು ಪಟೇಲ್ ಪ್ರಧಾನಿಯಾಗಿ ನೆಹರೂ ವಿದೇಶಾಂಗ ಮಂತ್ರಿಯಾಗಬಹುದಿತ್ತೆಂದು ತಿಳಿಸಿದ್ದಾರೆ, ಪಟೇಲರಿಗಿಂತ ನೆಹರೂನೆ ಸೂಕ್ತ ಎಂದು ಭಾವಿಸಿದ್ದು ನನ್ನ ತಪ್ಪು ಎಂದು ಬರೆದಿದ್ದಾರೆ.

ಸರ್ದಾರ್ ಪಟೇಲರ ನಿರ್ಧಾರದ ಕುರಿತು ಸಹ ಪ್ರಶ್ನೆಗಳು ಏಳುತ್ತವೆ. ಒಬ್ಬ ಮನುಷ್ಯ  ವ್ಯಕ್ತಿಗೆ  ನಿಷ್ಠೆಯಾಗಿರಬೇಕೋ? , ಒಂದು ಸಂಸ್ಥೆಗೋ?  ಅಥವಾ ದೇಶಕ್ಕೋ? ಈ ಪ್ರಶ್ನೆಗಳಿಗೆ ಉತ್ತರ ಹುಡುಕ ಹೊರಟರೆ ಸರ್ದಾರ್ ಪಟೇಲರು ಗಾಂಧಿಗೆ ಮಣಿಯಬಾರದಿತ್ತು ಎನಿಸುತ್ತದೆ. ಅವರು ಗಾಂಧಿಗಿಂತ ದೇಶಕ್ಕೆ ನಿಷ್ಠರಾಗಿದ್ದಿದ್ದರೆ ಎಷ್ಟೋ ಆನಾಹುತಗಳನ್ನು ತಪ್ಪಿಸಬಹುದಿತ್ತು. 1962ರಲ್ಲಿ ಭಾರತ ಹೀನಾಯವಾಗಿ ಚೀನಾಕ್ಕೆ ಶರಣಾಗುತ್ತಿರಲಿಲ್ಲ ಅಲ್ಲವೇ?

ಈ ಎಲ್ಲ ನಗ್ನ ಸತ್ಯಗಳನ್ನು ನಮ್ಮ ಇತಿಹಾಸ ನಮಗೆ ತಿಳಿಸುವುದೇ ಇಲ್ಲ. ಕಾಂಗ್ರೆಸ್ಸಿಗರು ಬರೆದ ಸುಳ್ಳು ಇತಿಹಾಸವನ್ನೇ ನಾವು ಓದುತ್ತಿದ್ದೇವೆ. ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎಂದು ನಾವು ಬೀಗುತ್ತೇವೆ ಆದರೆ ನಮ್ಮ ದೇಶದ ಮೊದಲ ಪ್ರಧಾನಿಯ ಆಯ್ಕೆ ಪ್ರಜಾಪ್ರಭುತ್ವಕ್ಕೆ ವ್ಯತಿರಿಕ್ತವಾಗಿರುವುದು ದುರಂತವಲ್ಲದೇ ಮತ್ತೇನು?

ರವಿತೇಜ ಶಾಸ್ತ್ರೀ

Facebook ಕಾಮೆಂಟ್ಸ್

Raviteja Shastri: ಗೌರಿಬಿದನೂರು ಸ್ವಂತ ಊರು. ಈಗ ಬೆಂಗಳೂರಿನಲ್ಲಿ ವಾಸ. ಅಕೌಂಟೆಂಟ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ. ಓದು ಬರವಣಗೆ, ದೇಶಸೇವೆ, ಸಮಾಜ ಸೇವೆ ನನ್ನ ಹವ್ಯಾಸಗಳು. ಉತ್ತಿಷ್ಠ ಭಾರತ ಎಂಬ ಸಂಘಟನೆಯ ಸಕ್ರಿಯ ಕಾರ್ಯಕರ್ತ.
Related Post
whatsapp
line