ಪಾಕಿಸ್ತಾನದಲ್ಲಿ ನಡೆದ ರಕ್ತದೋಕುಳಿಯ ಕುರಿತು ಬರೆದ ಕವನ
ನೀರವತೆಯಲಿ ಪವಡಿಸಿದ್ದ ನೆಲವ
ತೋಯಿಸಿದೆ ಲೋಹಿತ ರಕ್ತತೈಲ;
ರವಿಯೂ ಹೇಸಿಗೆಯಿಂ ಮಂದನಾದ
ಭುಗಿಲೇಳಲು ಕ್ರೌರ್ಯದ ರಣಜ್ವಾಲ :
ಲವಲೇಶವೂ ಇರಲಿಲ್ಲ ಆ ದೀನಕಂಗಳಲಿ
ರುದಿರಕೋಡಿ ಕಾಣುವ ರಣಕಲ್ಪನೆ;
ಇನ್ನೂ ಅರಳದ ಕುಟ್ಮಲಗಳನು
ಬೂದಿಯಾಗಿಸಿತು ರಣೋಪಾಸನೆ. ..
ಅನುದಿನ ಲೋಹಿತ ಧುನಿಯದೇ ಚಿತ್ರಣ
ವಿರಮಿಸಿದ್ದವು ಕ್ಷಣ ಎಳೆ ರೆಪ್ಪೆಗಳು;
ಹೊಂಗನಸ ತೆರೆ ಸರಿಸಿ ಅನಂತನಿಶೆಯ
ದರ್ಶಿಸಿದವು ವಿಕೃತ ಅಧಮಾತ್ಮಗಳು. ..
ಶತಕಗಳಿಂದ ಗುಂಡೇಟಿಗುಂಡೇಟಿನದೇ ಸುಪ್ರಭಾತ
ತುಡಿತವಿದೋ ಕ್ಷಣ ಮೌನಕೆ;
ಆವರಿಸಿಹ ಲೋಹಿತ ನೆತ್ತರ ಕಲೆಗಳ
ಅಳಿಸುವ ಶಾಂತಿಯ ಸಿಂಚನಕೆ. ..
ಅಂತವೆಂದು ಈ ಕ್ರೂರ ವಿಪ್ಲವಕೆ
ಕಾದಿದೆ ವಿಶ್ವದ ಅಣು ಅಣುವೂ;
ಕ್ರೌರ್ಯದ ಕರಿಪತಾಕೆ ಕಿತ್ತೆಸೆದು
ಧವಲಧ್ವಜ ಕಾಣ್ವ ದೀನ ಹಂಬಲವು. …..
ತಾಪ
ಮನಉದ್ಯಾನದಾ ತಾಪ
ಧುನಿಯ ಹೊನಲಂತೆ ಏರಿ
ಮೃದುಲಪ್ರಲಾಪ
ಅಲಕ್ಷ್ಯಗೊಂಡಿದೆ ಕಣ್ಣ ಕೊಳದಲಿ ಜಾರಿ……
ಏರಿ, ಏರಿ ಬಹುವಾಗಿ ಏರಿ
ತಾಪ ದಹಿಸುವ ಜ್ವಾಲೆಯಾಗಿದೆ;
ಅಮಲ ದೇಹವ ಸುಡುವ ಬೆಂಕಿಯೇ
ಲೋಗರ ಮೈಯ ಕಾಯಿಸೋ ಅಗ್ನಿಯಾಗಿದೆ…
ಹೊಳೆಯಾಗಿ ಹರಿದ ಕಣ್ಣಧಾತುವ
ಕಪಾಲವೂ ಬರಮಾಡದೇ
ಗುರಿಯೇ ಇಲ್ಲದ ಹಾದಿ ಹಿಡಿದು
ನಿರುಪಯೋಗಿ ಭಾವೋದಕವಾಗಿದೆ….
ಮನಬನದ ಅನುಪಮ ಸುಮವೃಂದ
ಜ್ವಾಲೆಯ ಕಬಂಧ ಬಾಹುವಿಗೆ ಬಲಿಯಾಗಿದೆ;
ನಗುವ ನಯನಗಳು ಮುದುಡಿ ಹೋಗಿ
ಬರಿಯ ನೆನಪುಗಳ ಬೂದಿಯಾಗಿದೆ….
ಕಣ್ಣ ಪನಿಯೂ ಅನಾಥವಾಗಿ
ಮೊಗದ ಬದಲಿ ನಡೆದಿದೆ;
ಜ್ವಾಲೆ ಮಾತ್ರ ಬಿಡದೇ ಜ್ವಲಿಸುತಾ
ಸುಟ್ಟ ಬೂದಿಯನ್ನೇ ಸುಡುತಾ ಸಾಗಿದೆ. ..
Facebook ಕಾಮೆಂಟ್ಸ್