“ಕಾಣದ ದೇವರು ಊರಿಗೆ ನೂರು , ಕಾಣುವ ತಾಯೇ ಪರಮ  ಗುರು ” ಹೌದು ಗರ್ಭ ಕಟ್ಟಿದಂದಿನಿಂದ ತಾಯಿಯೊಂದಿಗಿನ ಅನೂಹ್ಯ ಸಂಬಂಧದ ಎಳೆಕವಲೊಡೆದು , ಬರಿ ಕಣ್ಣಿಗೆ ಕಾಣುವ , ಭಾವಿಸಿದಷ್ಟು ಮುಗಿಯದ, ಮರೆಯದಷ್ಟು ಸ್ಮೃತಿಗಳು, ಒಂಬತ್ತು ತಿಂಗಳ ಕಾಲ ಅಮ್ಮನುಂಡರೆ ನನಗೆ ತೃಪ್ತಿ, ಅಮ್ಮ ಉಸಿರಾಡಿದರೆ ನನಗೆ ಉಸಿರು, ಅದೇ ಇಂದು ನಾನುಂಡರೆ ಅಮ್ಮನಿಗೆ ತೃಪ್ತಿ , ಏನೋ ಪ್ರಾಕೃತಿಕ ಬಂಧನ ಜೀವ ಜೀವಗಳ ನಡುವೆ ಉಲ್ಲಾಸದ ಬತ್ತಿಯಂತೆ ಅಲ್ಲಾಡುತಿರುತ್ತದೆ.
ನನ್ನಮ್ಮ ನಸುಕಿನಲ್ಲೆದ್ದು ಸೂರ್ಯನನ್ನೇ ಎಬ್ಬಿಸಲು ಹೊರಡುವವಳು , ತುಳಸಿ ದೇವಿಗೆ ಸುತ್ತು ಬಂದು ಬಿಂದಿಗೆ ನೀರು ಸೇದಿ , ದಿನಚರಿಗೆ ಹಾಜರಿ … ಅಮ್ಮನ ಕಡೆಯುವ ಕಲ್ಲು ಗಡ – ಗಡವೆಂಬ ಸದ್ದು ಮತ್ತು  ಮಂಗಳೂರು  ಆಕಾಶವಾಣಿಯ ಸುಪ್ರಭಾತದ ಜುಗಲ್ ಬಂಧಿಯೊಂದಿಗೆ ನನ್ನನ್ನು ಎಬ್ಬಿಸುತ್ತಿತ್ತು. ಅರೆ ಬಿಸಿ ಮಾಡಿದ  ತಂಗಳನ್ನ ಮತ್ತು ಮೊಸರಲ್ಲಿ ನಮ್ಮನ್ನು ಉಣ್ಣಿಸಿ, ಅಪ್ಪನಿಗೆ ಪೋದಿಕೆ  ಕಟ್ಟಿ , ಆಗ ತಾನೇ ಸಿದ್ದವಾದ ಪದಾರ್ಥ ಮತ್ತೆ ಕುಚ್ಚಲಕ್ಕಿ ಅನ್ನ ವನ್ನು ನಮ್ಮ ಶಾಲೆಯ  ಚಿಣ್ಣ  ಚಿಣ್ಣ ಬುತ್ತಿಗಳಿಗೆ  ತುಂಬಿಸಿ ಪ್ಲಾಸ್ಟಿಕ್ ಲಕೋಟೆಯಲ್ಲಿ ಕಟ್ಟಿ ಹೊರಡಿಸುವುದರಲ್ಲಿ ಅಮ್ಮನ ಬೆಳಗಿನ ಸಂಭ್ರಮ ಕಳೆಯುತ್ತಿತ್ತು .
ಹಾಗೆ ನೋಡಿದರೆ ಅಮ್ಮನೇ , ಅಪ್ಪನಿಗಿಂತ ಬಲು ಜೋರು , ಮದೆರ್ ಬೆತ್ತ , ಗಾಳಿಯ ಅಡರ್ ಗಳಲ್ಲಿ ಪೆಟ್ಟು ಕೊಡುವುದರಲ್ಲಿ ಇರಬಹುದು, ಬೈಯುವುದರಲ್ಲಿ ಇರಬಹುದು , ಜೀವನ ಸೂಕ್ಷ್ಮಗಳನ್ನೂ ಹೇಳಿಕೊಡುವುದರಲ್ಲಿ ಇರಬಹುದು , ಅಜ್ಜಿ ಕತೆ ಹೇಳುವುದರಲ್ಲಿ ಇರಬಹುದು , ಬಯ್ಯತಾ ಚಾಯಕ್ಕೆ ಕುರು ಕುರು ತಿಂಡಿ ಮಾಡಿ ಕೊಡುವುದರಲ್ಲಿ ಇರಬಹುದು ಹೀಗೆ ಎಲ್ಲದರಲ್ಲೂ ಮುಂದೇನೆ … ಎಲ್ಲರ ಅಮ್ಮನಂತೆ ನನ್ನಮ್ಮನು ಪೂಜೆಗೋ , ಮದುವೆಗೋ ಹೋಗಿ ಬರುವಾಗ  ಅಲ್ಲಿ ಊಟಕ್ಕೆ ಬಡಿಸಿದ  ಹೋಳಿಗೆಯನ್ನು ಎಡಕೈ ಯಲ್ಲಿ ತೆಗೆದುಕೊಂಡು ಕರವಸ್ತ್ರ ದಲ್ಲಿ ಕಟ್ಟಿ ತಿನ್ನಿಸಿದ್ದು , ಗಮ್ಮತ್ತಿನ ದಿನ ಎಲ್ಲವನ್ನೂ  ಬಡಿಸಿ ಕಡೆಗೆ ತಿಳಿಸಾರಿನಲ್ಲೇ ಊಟ ಮಾಡಿ ಕೈ ತೊಳೆದದ್ದು.. ಕಷ್ಟದ ದಿನಗಳಲ್ಲಿ ಇದ್ದುದನ್ನೆಲ್ಲ  ಬೇಯಿಸಿ ನಾನಾಗಲೇ ತಿಂದೆ ಹಸಿವಿಲ್ಲವೆಂದು ಏನೇನೊ ಸಬೂಬು ಹೇಳಿ ಖಾಲಿ ಹೊಟ್ಟೆಯಲ್ಲಿ ಮಲಗಿದ್ದು ಎಲ್ಲ ಅಮ್ಮ ಎಲ್ಲವನ್ನು ಒಡಲಲ್ಲಿ ಬಚ್ಚಿಟ್ಟು ಸಾಕಿದ ಸಾಕ್ಷಿಗಳು.
ಇಂದು  ನನ್ನ ನೋವಿಗೆ ತೇವಗೊಳ್ಳುತಿದ್ದ ಅಮ್ಮನ ಕಣ್ಣು ಸ್ವಲ್ಪ ಗುಂಡಿಯಲ್ಲಿವೆ  , ಮೊಗದಲ್ಲಿ ಭಾವನೆಯ ಗೆರೆಗಳು ದಣಿದ ನೆರಿಗೆಗಳಿವೆ, ಮಾತಿನ ಧ್ವನಿ ತೊದಳುತಿವೆ , ಮಗ ನನ್ನಿಂದ ಎತ್ತರ ಬೆಳೆದಿದ್ದನೆಂದೋ , ಶಾಲೆಗೆ ಹೋಗಿದನೆಂದೋ,  ಮಾತನ್ನು ಕೇಳುವುದಿಲ್ಲವೆಂದೋ , ಸ್ವಲ್ಪ ಹಿತ ನುಡಿಯು ಕಡಿಮೆಯಾಗಿದೆ ಅಷ್ಟೇ … ಸೇರುಗಟ್ಟಲೆ ಪ್ರೀತಿ , ಬೊಗಸೆ ತುಂಬಾ ಮಮತೆ ಕೊಟ್ಟು ಭೌತಿಕ ಜೀವ ನೀಡಿ ,ಅಪ್ಪನಾಗಿ ಬುದ್ದಿ ಹೇಳುವ , ಅಜ್ಜಿಯಾಗಿ ಕಥೆ ಹೇಳುವ ನನ್ನಮ್ಮನಿಗೆ ಈ ಹಾಡು
ಅಮ್ಮ ನೀನು ನಮಗಾಗಿ 
ಸಾವಿರ ವರುಷ ಸುಖವಾಗಿ 
ಬಾಳಲೇ ಬೇಕು ಈ 
ಮನೆ ಬೆಳಕಾಗಿ ….