ಎಲ್ಲ ದಾನಕ್ಕಿಂತ ಶ್ರೇಷ್ಠ ದಾನ ನೇತ್ರ ದಾನ, ಮರಣಾ ನಂತರ ಕಣ್ಣನ್ನು ಮಣ್ಣು ಮಾಡದೆ ದಾನ ಮಾಡಿದರೆ, ಇಬ್ಬರು ಅಂಧರ ಬಾಳಿಗೆ ಬೆಳಕು ನೀಡಿದಂತಾಗುತ್ತದೆ ಎಂದು ಸಾರುತ್ತಿರುವವರು, ಎಷ್ಟೋ ಅಂಧರಿಗೆ ಬೆಳಕು ನೀಡಿರುವಂತಹ ನಮ್ಮ ಹೊಸ ಬೆಳಕು ಟ್ರಸ್ಟ್ ನ ರಾಮಕೃಷ್ಣ ಅವರು. ದಿನ ನಿತ್ಯದ ಚಟುವಟಿಕೆಗಳಿಗೆ ಅತೀ ಮುಖ್ಯ ಅಂಗವೆಂದರೆ ಕಣ್ಣುಗಳು. ಗ್ರಾಮೀಣ ಮಟ್ಟದ ಜನತೆಯು ಉತ್ತಮ
ಆರೋಗ್ಯ ಹೊಂದಲು, ಹೊಸ ಬೆಳಕು ಟ್ರಸ್ಟ್ ನಡೆಸಿರುವ ಉಚಿತ ನೇತ್ರ ಹಾಗೂ ರಕ್ತ ತಪಾಸಣಾ ಶಿಬಿರಗಳ ಸೇವೆ ಶ್ಲಾಘನೀಯ. ಹಣ, ಆಸ್ತಿ ದಾನ ಮಾಡಿದರೆ ಅದು ಕಳುವಾಗಬಹುದು, ಆದರೆ ನೇತ್ರದಾನ,
ರಕ್ತದಾನ ಎಂದಿಗೂ ಕಳೆದು ಹೋಗುವ ದಾನವಲ್ಲ. ವಿದ್ಯೆಗೆ ಪ್ರೋತ್ಸಾಹ ನೀಡಿ ಶಿಕ್ಷಣ ಪೂರ್ಣಗೊಳಿಸಲು ಸಹಕರಿಸುವುದು ಮಹಾದಾನವಾದರೂ, ಅನ್ನ ದಾನ ಮಾಡುವುದು ಮಹಾದಾನವಾದರು, ಅದಕ್ಕೂ
ಮಹಾ ಕಾರ್ಯವೆಂದರೆ ಸೂತಕದ ಮನೆಯಲ್ಲಿ ಕಣ್ಣು ದಾನ ಮಾಡುವಂತೆ ಮನವೊಲಿಸುವುದು. ಹತ್ತು ನಿಮಿಷಗಳ ಕಾಲ ಕರೆಂಟ್ ತೆಗೆದರೆ, ತಡಬಡಾಯಿಸುವ ನಾವು, ಬದುಕು ಪೂರ್ತಿ ಅಂಧಕಾರದಲ್ಲೇ ಕಳೆಯುವ ಜನರ ಪರಿಸ್ಥಿತಿ ಹೇಗಿರುತ್ತದೆ? ಇದನ್ನು ಎಲ್ಲರೂ ಯೋಚಿಸಬೇಕಿದೆ. ಸಾವಿನ ಮನೆಯಲ್ಲಿ ಕಣ್ಣು ತರುವುದು ಸುಲಭದ ಕೆಲಸವಲ್ಲ, ಜಿಗಣಿ ರಾಮಕೃಷ್ಣ ಅವರ ಶ್ರಮದಿಂದ, ಮೃತರ ಕುಟುಂಬದ ಸದಸ್ಯರಿಗೆ ಮನವೊಲಿಸಲಾಗುತ್ತಿದೆ.
ದೇಹಕ್ಕೆ ಎಲ್ಲಾ ಅಂಗಾಂಗಗಳು ಶೋಭೆ ಮತ್ತು ಅವಶ್ಯಕ. ಆ ಅಂಗಗಳಲ್ಲಿ ಕಣ್ಣು ಜಗತ್ತಿನ ಎಲ್ಲಾ ಆಗು-ಹೋಗುಗಳನ್ನು ನೋಡೋ ಚೈತನ್ಯ ಮತ್ತು ನೋಡಿದ ಚಿತ್ರಗಳನ್ನು ಸನ್ನಿವೇಶಗಳನ್ನು ಸೆರೆ ಹಿಡಿದು ಸಂಗ್ರಹಿಸೋ ಶಕ್ತಿ ಹೊಂದಿರುವಂತದ್ದು. ಕಣ್ಣುಗಳೇ ಇರದ ಜೀವನವನ್ನು ಒಮ್ಮೆ ಕಣ್ಣು ಮುಚ್ಚಿ ಅನುಭವಿಸಿದರು ಅದರ ಹೊರತಾದ ಜೀವನ ನಾವು ಖಂಡಿತ ಬಯಸೋದಿಲ್ಲ. ಇಡೀ ಜೀವನ ಕತ್ತಲಲ್ಲಿಯೇ ಕಳೆಯುತ್ತಿರುವ ಎಷ್ಟೋ ಜೀವಗಳ ಬಾಳುವೆ ಹೇಗೆ ಎಂಬುದು ಒಮ್ಮೆ ಯೋಚಿಸೋಣ.
“ಕಣ್ಣಿಲ್ಲದೇ ಬದುಕನ್ನು ಕಲ್ಪಿಸಲು ಅಸಾಧ್ಯ. ಮರಣದ ನಂತರ ಕಣ್ಣುಗಳನ್ನು ಸುಡಬೇಡಿ, ಮಣ್ಣು ಮಾಡಬೇಡಿ, ಬೇರೆಯವರಿಗೆ ದಾನ ಮಾಡಿ ಅಂಧತ್ವವನ್ನು ನಿವಾರಣೆ ಮಾಡಿ. ಅದೇ ರೀತಿ ದೇಹದ ಪ್ರತಿಯೊಂದೂ ಅಂಗವನ್ನೂ ಮಾನವೀಯತೆ ಮೇರೆಗೆ ಸಂದರ್ಭಕ್ಕೆ ತಕ್ಕಂತೆ ದಾನ ಮಾಡಿ. ರಕ್ತದಾನ- ಜೀವದಾನ, ನೇತ್ರದಾನ-ದೃಷ್ಟಿ ದಾನ, ದೇಹದಾನ – ಪ್ರಾಣ ದಾನ. ದೃಷ್ಟಿಯಿದ್ದರೇ ಸೃಷ್ಟಿ ಇರುವುದು. ಆದ್ದರಿಂದ ಸಾವಿನ ನಂತರ ಕಣ್ಣನ್ನು ದಾನ ಮಾಡಲು ಆದ್ಯತೆ ನೀಡಬೇಕು. ಕಣ್ಣಿನ ದಾನಕ್ಕೆ ಪ್ರೇರಣೆ ನೀಡಬೇಕು. ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು, ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ. ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ. ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ.” ಇವು ಜಿಗಣಿ ರಾಮಕೃಷ್ಣ ಅವರ ಮಾತುಗಳು.
ಜನ ಮರುಳೋ! ಜಾತ್ರೆ ಮರುಳೋ! ಅನ್ನುವಂತೆ, ನಾವು ಈ ಜನ್ಮದಲ್ಲಿ ಕಣ್ಣುಗಳು ದಾನ ಮಾಡಿದ್ದಲ್ಲಿ ಬರುವ ಜನ್ಮದಲ್ಲಿ ಕಣ್ಣಿಲ್ಲದೆ ಹುಟ್ಟುತ್ತೇವೆ ಎಂಬ ಮೂಢ ನಂಬಿಕೆ ನಮ್ಮ ಜನರದ್ದು. ನಮ್ಮ ಜೀವನ ನಮ್ಮ ಕೈಗಳಲ್ಲಿ ಇಲ್ಲ. ಯಾರು ಯಾವಾಗ ಬೇಕಾದರೂ ಸಾಯಬೋದು. ನಮ್ಮ ಜೀವನಕ್ಕೆ ನಮಗೆ ಗ್ಯಾರಂಟೀ ಇಲ್ಲದೆ ಇರುವಾಗ, ಈ ಜನ್ಮದಲ್ಲಿಯೇ ಮುಂದಿನ ಜನ್ಮದ ಬಗ್ಗೆ ಯಾಕೆ ಯೋಚನೆ? ಪ್ರಪಂಚದಲ್ಲಿ ಅತ್ಯಂತ ಸುರಕ್ಷಾ ರಾಷ್ಟ್ರಗಳಲ್ಲಿ ನೇಪಾಳ ಸಹ ಒಂದು ಎಂದು ನಂಬಲಾಗಿತ್ತು. ಅಂತಹ ನೇಪಾಳದಲ್ಲಿ ಸಹ ಭೂಕಂಪ ಸಂಭವಿಸಿತು. ಎಷ್ಟೋ ಸಮಯದಲ್ಲಿ ನಾವು ಊಹಿಸದೇ ಇರುವ ಘಟನೆಗಳು ನಡೆದು ಹೋಗುತ್ತವೆ. ಹೀಗಿರುವಾಗ, ಮುಂದಿನ ಜನ್ಮದಲ್ಲಿ ಕುರುಡರಾಗಿ ಹುಟ್ಟುತ್ತೇವೆ ಎಂಬ ನಂಬಿಕೆ ಎಷ್ಟರ ಮಟ್ಟಿಗೆ ನಿಜ ಎಂಬುದು ಎಲ್ಲರು ಯೋಚಿಸಬೇಕಾದ ವಿಷಯ. ಹಾಗೆಯೇ ಇದನ್ನು ನಂಬುವ ಜನರಿಗೆ ಅರಿವು ಮೂಡಿಸತಕ್ಕದ್ದು. ‘ಶ್ರದ್ಧಾ ಇವ ಶ್ರಾದ್ಧಃ’ ಶ್ರದ್ಧೆಯೇ ಶ್ರಾದ್ಧ, ಶ್ರದ್ಧೆಯೇ ಇಲ್ಲದವ ಶ್ರಾದ್ಧ ಮಾಡಿ ಪ್ರಯೋಜನವೇನು? ಪುರೋಹಿತರನ್ನ ಕರೆದು ಕೈಯಲ್ಲಿ ಕಾಸಿಲ್ಲದಿದ್ದರು ಮೈ ತುಂಬಾ ಸಾಲ ಮಾಡಿ, ಪುರೋಹಿತರು ಹೇಳಿದ ಕಡೆಯಲ್ಲ ದಕ್ಷಿಣೆ ಇಟ್ಟು, ಪಂಚೆ, ತಂಬಿಗೆ, ಅಕ್ಕಿ ದಾನ ಮಾಡಿ, ಶ್ರಾದ್ಧ ಮುಗಿಸಿ ಕೊನೆಗೆ ಸಾಲ ತೀರಿಸಲು ಅಲೆದಾಡುವವರನ್ನು ನಾನು ನೋಡುತ್ತಲೇ ಇದೀನಿ. ಸತ್ತಮೇಲೆ ನಮ್ಮ ದೇಹ ನಿರ್ಜೀವ. ನಿರ್ಜೀವ ದೇಹಕ್ಕೆ ಇಷ್ಟೆಲ್ಲಾ ಮಾಡುವ ನಾವು, ಬದುಕಿದ್ದು ಕಣ್ಣ ದೃಷ್ಟಿ ಕಳೆದುಕೊಂಡವರ ಬಗ್ಗೆ, ಕಣ್ಣು ಇಲ್ಲದವರ ಜೀವನದ ಬಗ್ಗೆ ಯಾಕೆ ಯೋಚನೆ ಮಾಡುವುದಿಲ್ಲ? ಬೆಂಗಳೂರಿನ ಕೆಲವು ಸರ್ಕಾರಿ ಆಸ್ಪತ್ರೆಗಳ ಮುಂದೆ ಈಗಲೂ ಸಹ ಎಷ್ಟೋ ಶವಗಳು ಅನಾಥವಾಗಿ ಬಿದ್ದಿರುವುದು ನಾವು ನೋಡುತ್ತಲೇ ಇದೀವಿ. ಇಬ್ಬರ ಅಂಧರಿಗೆ ಕಣ್ಣುಗಳು ಬರುವುದಾದರೆ, ನಾವು ಕಣ್ಣುಗಳನ್ನು ದಾನ ಮಾಡಲು ಸಿದ್ದರಾಗೋಣ. ಅಮೂಲ್ಯವಾದ ಈ ಎರಡು ಕಣ್ಣುಗಳನ್ನು ಮಣ್ಣುಪಾಲಗುವುದಕ್ಕಿಂತ, ಇಬ್ಬರು ಅಂಧರಿಗೆ ದಾರಿ ದೀಪವಾಗಲಿ. ಬನ್ನಿ, ನೇತ್ರದಾನ ಮಾಡಿ ಹಾಗು ನೇತ್ರದಾನ ಮಾಡಿಸಿ.
ಜಿಗಣಿ ರಾಮಕೃಷ್ಣ ಅವರು ಇಲ್ಲಿಯವರೆಗೂ 60 ಕ್ಕೂ ಹೆಚ್ಚು ಜೋಡಿ ಕಣ್ಣುಗಳನ್ನೂ ದಾನ ಮಾಡಿಸಿ, 120 ಕ್ಕೂ ಹೆಚ್ಚು ಜನಕ್ಕೆ ದಾರಿ ದೀಪವಾಗಿದ್ದಾರೆ. ರಾಮಕೃಷ್ಣರ ತಾಯಿಯವರಾದ ಸೊಣ್ಣಮ್ಮ ಅವರ
ಕಣ್ಣುಗಳನ್ನು ಸಹ ದಾನ ಮಾಡಿಸಿ, ಎಂದೆಂದಿಗು ಎಲ್ಲರಿಗೂ ಮಾರ್ಗದರ್ಶಕರಾಗಿ ನಿಂತಿದ್ದಾರೆ. ಇಷ್ಟೇ ಅಲ್ಲದೇ ಅದೆಷ್ಟೋ ಜನರಿಗೆ ತುರ್ತಾಗಿ ರಕ್ತ ಬೇಕು ಎಂದಾಗ ರಕ್ತವನ್ನು ಒದಗಿಸಿದ್ದಾರೆ. ಅದೆಷ್ಟೋ ರಕ್ತ ಶಿಬಿರಗಳನ್ನು ಹಾಗು ಉಚಿತ ನೇತ್ರ ತಪಾಸಣಾ ಶಿಬಿರಗಳನ್ನೂ ನಡೆಸಿಕೊಟ್ಟಿದ್ದಾರೆ. ನಮ್ಮ ಸಮಾಜದ ಏಳಿಗೆಗೆ ಇವರ ಸೇವೆ ಅನಿಯಮಿತ ಹಾಗು ಅವಿಸ್ಮರಣೀಯ. ಇವರ ಈ ಸೇವೆಗೆ, ಭಗವಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ, ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಹಾಗು ಇನ್ನೂ ಹಲವು ಪ್ರಶಸ್ತಿಗಳನ್ನು ದಕ್ಕಿಸಿಕೊಂಡಿದ್ದಾರೆ. ಇವರ ಈ ಮಹಾನ್ ಸೇವೆಗೆ ನಾವೆಲ್ಲರೂ ಸಹ ಕೈ ಜೋಡಿಸೋಣ. ದೃಷ್ಟಿಯ ಮಹತ್ವ ಸಾರೋ ನಿಟ್ಟಿನಲ್ಲಿ ಜಾಗೃತರಾಗೋಣ. ದೇಹ ದಾನ, ನೇತ್ರದಾನ, ರಕ್ತದಾನ ಎಷ್ಟು ಅಮೂಲ್ಯವಾದುದು ಎಂಬುದರ ಅರಿವು ಮೂಡಿಸೋಣ. ನೀವೂ ನೇತ್ರದಾನ ಮಾಡಿ ಹಾಗೂ ನಿಮ್ಮ ಕುಟುಂಬದ ಸದಸ್ಯರನ್ನೂ ನೇತ್ರದಾನ ಮಾಡುವಂತೆ ಪ್ರೋತ್ಸಾಹಿಸಿ. ನಮ್ಮ ಕಣ್ಣು, ಜಗತ್ತೇ ನೋಡದ ಮನುಜರಿಗೆ ಬೆಳಕಿನ ಕಿರಣವಾಗಲಿ.
Facebook ಕಾಮೆಂಟ್ಸ್