X

ಆ ಇಂಜಿನಿಯರ್ ಮುಂದೆ ಈ ಇಂಜಿನಿಯರುಗಳೆಲ್ಲಾ ಯಾವ ಲೆಕ್ಕ?

ನೇಪಾಳ…! ನೇಪಾಳ ಎಂದೊಡನೆಯೇ ನೆನಪಿಗೆ ಬರುವುದು ಹಿಮಾಲಯ. ಅದು ಚಾರಣಿಗರ ಸ್ವರ್ಗ. ಘಟಾನುಘಟಿ  ಸಂನ್ಯಾಸಿಗಳಿಗೆ ಸ್ಪೂರ್ತಿ ನೀಡಿದ, ಜ್ಞಾನೋದಯಕ್ಕೆ ಕಾರಣವಾದ ಸ್ಥಳವದು. ನೇಪಾಳವೆಂದರೆ  ಆಸ್ತಿಕರ  ಭೂ ಕೈಲಾಸ. ಶಿವ ಭಕ್ತರಿಗೆ ಪರಮ ಪಾವನವಾದ ಪಶುಪತಿನಾಥನಿರುವುದು ಇದೇ ನೇಪಾಳದಲ್ಲಿ. ಅತಿ ಸುಂದರವಾದ ಮಾನಸ ಸರೋವರವಿರುವುದೂ ನೇಪಾಳದಲ್ಲಿ. ನಯನ ಮನೋಹರ ಪುರಾತನ ದೇವಾಲಯಗಳನ್ನು ಹೊಂದಿರುವ ಜಗತ್ತಿನ ಏಕೈಕ ಹಿಂದೂ ರಾಷ್ಟ್ರ ನೇಪಾಳ!

ಆದರೆ ಇವತ್ತು…?

ಶನಿವಾರ ಸೂರ್ಯ ನೆತ್ತಿಗೇರುತ್ತಿದ್ದಂತೆ ಆ ಆಘಾತಕಾರಿ ಸುದ್ದಿಯೂ ಕ್ಷಣ ಕ್ಷಣವೂ ಏರುತ್ತಿತ್ತು. ಸಾವಿನ ಸಂಖ್ಯೆ ಕೌಂಟ್ ಡೌನ್ ಟೈಮರ್ ನಂತೆ ಓಡುತ್ತಿತ್ತು. ಶತಮಾನ ಕಂಡು ಕೇಳರಿಯದ ಭೂಕಂಪನಕ್ಕೆ ನೇಪಾಳ ಮಾತ್ರವಲ್ಲ ಭಾರತ ಪಾಕಿಸ್ತಾನವೂ ಕಂಗಾಲಾಯಿತು. ಕೈಲಾ಼ಸದಲ್ಲೇ ಶಿವ ತಾಂಡವ ನೃತ್ಯ ಮಾಡಿದ್ದಾನೆ. ಭೂಮಿ ತಾಯಿ ಮರಣ ಮೃದಂಗ ಬಾರಿಸಿದ್ದಾಳೆ. ಪ್ರಕೃತಿ ಮಾತೆ  ಬಾಯ್ತೆರೆದು ತನ್ನ ಮಕ್ಕಳನ್ನೇ ನುಂಗಿ ನೀರು ಕುಡಿದಿದ್ದಾಳೆ.

ಕಾಠ್ಮಂಡು ನಗರದ ತುಂಬೆಲ್ಲಾ ಈಗ ಬರೀ ಹೆಣಗಳ ರಾಶಿ. ಅವುಗಳನ್ನು ನೋಡುವಾಗ ಬೀದಿ ಬದಿ ಮಾರಾಟಕ್ಕಿಟ್ಟಿರುವ ತರಕಾರಿ ರಾಶಿಯಂತೆ ಭಾಸವಾಗುತ್ತಿದೆ. ಜೊತೆಗೆಯೇ ಮೃತ್ಯುಂಜಯನ ನಾಡಿನಲ್ಲಿ ಮೃತ್ಯುವನ್ನು ಜಯಿಸಲು ‘ಹರ’ಸಾಹಸ ಪಡುತ್ತಿರುವ ಗಾಯಾಳುಗಳು. ಸತ್ತವರ, ಗಾಯಾಳುಗಳ ಸಂಬಂಧಿಕರ ಮುಗಿಲುಮುಟ್ಟಿರುವ ರೋಧನ. ಶಿವಭಕ್ತರಿಗೆ ಶಿವನ ನಾಡಲ್ಲೇ ಇಂಥಾ ಸ್ಥಿತಿಯಾ ಎಂದು ಶಪಿಸುವ ಹಾಗಿಲ್ಲ, ಏಕೆಂದರೆ ಶಿವ ತನ್ನ ಭಕ್ತರನ್ನು ಮಾತ್ರವಲ್ಲ ಸ್ವತಃ ತನ್ನ ಆಲಯವನ್ನೂ ಬಿಟ್ಟಿಲ್ಲ, ತನ್ನ ನಿತ್ಯ ಪರಿಚಾರಕರನ್ನೂ ಬಿಟ್ಟಿಲ್ಲ. ಅಲ್ಲಿ ಕರೆಂಟಿಲ್ಲ, ಮೊಬೈಲೂ ಇಲ್ಲ. ಸಾಲದ್ದಕ್ಕೆ, ಜೀವಕ್ಕೇ ಭೂಕಂಪವೆಂಬ ಬರಸಿಡಿಲು ಬಡಿದಿರುವಾಗ ಸಿಡಿಲು-ಮಿಂಚು, ಮಳೆಯ ಆರ್ಭಟ. ದೇವರೇ ಮುನಿಸಿಕೊಂಡಿದ್ದರೂ ಅದೇ ದೇವರ ಮೇಲೆ ಭಾರ ಹಾಕಿ ನಿಂತಿದ್ದ ಜನರಲ್ಲಿ ನಂಬಿಕೆ ಮಾತ್ರ ಉಳಿದಿತ್ತು. ಅಲ್ಲಿ ಕೇಳಿ ಬರುತ್ತಿದ್ದುದು ಕಟ್ಟಡಗಳು ಧರೆಗುರುಳುತ್ತಿರುವ ಭೀಕರ ಸದ್ದು, ಜನರ ಆಕ್ರಂದನ ಮತ್ತು ಬದುಕುಳಿದವರ ಹರಹರ ಮಹಾದೇವ್ ಎಂಬ ಘೋಷಣೆ ಮಾತ್ರ.

ಭೂಮಿಯ ಈ  ಅರ್ಭಟಕ್ಕೆ ಆ ಪುಟ್ಟ ರಾಷ್ಟ ನಲುಗಿ ಹೋಗಿದೆ. ಅದರ ಅವಸ್ಥೆ ನೋಡಿ ಜಗತ್ತೇ ನಡುಗಿದೆ. ನೇಪಾಳದಲ್ಲೀಗ ಪಶುಪತಿನಾಥನನ್ನು ಬಿಟ್ಟರೆ ಬೇರೇನೂ ಉಳಿದಿಲ್ಲ. ಆ ಭೀಭತ್ಸ ಭೂಕಂಪನಕ್ಕೆ ಮೊದಲೇ ಕರಗುತ್ತಿರುವ ಹಿಮಾಲಯವೂ ತತ್ತರಿಸಿದೆಯಂತೆ.  ಕಾಠ್ಮಂಡುವಿನ ಕಾಷ್ಟ ಮಂಟಪ, ಪಂಚವಟಿ ದೇವಾಲಯ, ಬಸಂತಪುರ ದರ್ಬಾರ್, ಕೃಷ್ಣ ಮಂದಿರ ದಶಾವತಾರ ದೇವಾಲಯಗಳೆಲ್ಲವೂ ಧರೆಗುರುಳಿರುವುದನ್ನು ನೋಡುವಾಗ ಅಯ್ಯೋ ಅನಿಸುತ್ತದೆ.

೧. ಬಸಂತಪುರ್ ಪ್ಯಾಲೇಸ್

೨. ವಿಷ್ಣು ದೇವಾಲಯ

೩. ಧರಾಹರ ಟವರ್

೪. ಕಾಷ್ಟಮಂಡತ ದೇವಾಲಯ

೫. ದರ್ಬಾರ್ ಸ್ಪೇಸ್

ಧರಾಹರ ಟವರ್

ಎಂಥೆಂಥಾ ಬಿಲ್ಡಿಂಗ್ ಗಳು, ದೇವಾಲಯಗಳು ಧರೆಗುರುಳಿದೆಯೆಂಬುದಕ್ಕೆ ಮೇಲಿನ ಚಿತ್ರಗಳೇ ಸಾಕ್ಷಿ. ಮಾನವರು ತನ್ನ ಜೀವ ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ, ದೇವಾಲಯಗಳೂ,ಸ್ಮಾರಕಗಳು ತನ್ನ ಐತಿಹಾಸಿಕತೆ ಉಳಿಸಿಕೊಳ್ಳಲು ಹರಸಾಹಸ ಪಟ್ಟಿರಬಹುದು. ಅಷ್ಟರ ಮಟ್ಟಿಗೆ ನೇಪಾಳ ನೆಲಕಚ್ಚಿದೆ. ಈ ದುರಂತದಲ್ಲಿ ಮಡಿದ ನೇಪಾಳಿಗರಷ್ಟೋ, ಪ್ರವಾಸಿಗರೆಷ್ಟೋ, ಅವಶೇಷಗಳಡಿಯಲ್ಲಿ ಸಿಲುಕಿ ನರಳಿ ನರಳಿ ಸತ್ತವರೆಷ್ಟೊ, ಗಾಯಗೊಂಡವರೆಷ್ಟೋ, ತಂದೆ ತಾಯಿ ಕುಟುಂಬಿಕರನ್ನು ಕಳೆದುಕೊಂಡು ಅನಾಥರಾದವರೆಷ್ಟೋ?? ಅಯ್ಯಯ್ಯೊ!!

ನೇಪಾಳದ ಭೂಕಂಪನವನ್ನು ನೋಡೀ ನನ್ನಲ್ಲಿ ಮೂಡಿದ ಜಿಜ್ಞಾಸೆಯೇನೆಂದರೆ, ಈ ಭೂಕಂಪದಲ್ಲಿ ದೇವಾಲಯಗಳ ಸಹಿತ ಹಲವು ದೊಡ್ಡ ದೊಡ್ಡ ದೊಡ್ಡ ಕಟ್ಟಡಗಳು ಮಕ್ಕಳು ಕಟ್ಟಿದ ಆಟದ ಮನೆಯಂತೆ ಕೆಳಗೆ ಬಿದ್ದಿವೆ. ಕೆಲವು ಬಹು ಮಹಡಿ ಕಟ್ಟಡಗಳು ಮತ್ತೊಂದು ಕಟ್ಟಡದ ಮೇಲೆರಗಿ ನಿಂತಿವೆ. ಹಲವಾರು ಗಗನಚುಂಬಿ ಕಟ್ಟಡಗಳಲ್ಲಿ ಅಡಿಯಿಂದ ಬುಡದವರೆಗೂ ಬಿರುಕು ಬಿಟ್ಟಿವೆ. ಯಾವ ಮಹಾ ಧೈರ್ಯದ ಮೇಲೂ ಅಲ್ಲಿ ಇನ್ನು ಜೀವಿಸುವಂತಿಲ್ಲ. ಅಂತಹ ಕಟ್ಟಡಗಳಿಗೆ ಹಲವಾರು ಅಡಿಗಳಷ್ಟು ಭೂಮಿಯನ್ನು ಅಗೆದು ಬಗೆದು  ಫೌಂಡೇಶನ್ ಹಾಕಿರುತ್ತಾರೆ. 32,40mm ನ ಬಲಿಷ್ಟ  ರಾಡ್ ಗಳನ್ನು ಬಳಸಿ ಅತ್ಯಾಧುನಿಕ ಟೆಕ್ನಾಲಜಿ ಬಳಸಿ ಕಾಂಕ್ರೀಟ್ ಹಾಕಿರುತ್ತಾರೆ. ಆದರೂ ಪ್ರಕೃತಿ ಮುನಿದರೆ ಅವೆಲ್ಲ ಕ್ಷಣ ಮಾತ್ರದಲ್ಲಿ ನಾಮಾವಶೇಷವಾಗುತ್ತದೆ. ಮಾನವರಾದ ನಾವು ಗಂಟೆಗೆ ಆರುನೂರು ಕಿಲೋಮೀಟರ್ ಓಡುವ ರೈಲನ್ನು ಕಂಡು ಹಿಡಿದಿದ್ದೇವೆ. ಚಂದ್ರನಲ್ಲಿಗೆ ಮಾನವನನ್ನು ಕಳುಹಿಸಿದ್ದೆವೆ. ನಾವು ಎಂತೆಂತದೋ ತಂತ್ರಜ್ಞಾನವನ್ನು ಕಂಡು ಹಿಡಿದಿದ್ದೇವೆ, ಸಾಧ್ಯವೇ ಇಲ್ಲ ಎನ್ನುವಂತಹ ಹಲವು ಸಂಗತಿಗಳನ್ನು ಸಾಧ್ಯವಾಗಿಸಿದ್ದೇವೆ.  ಆದರೂ  ಭೂಕಂಪನಕ್ಕೊಂದು ಸ್ಪಷ್ಟ ಪರಿಹಾರ ಇನ್ನೂ ಸಾಧ್ಯವಾಗಿಲ್ಲ. ಚಂಡಮಾರುತಕ್ಕೆ ತಡೆಯೊಡ್ಡಲು ಸಾಧ್ಯವಾಗಿಲ್ಲ್ಲ. ಅಷ್ಟಕ್ಕೂ ಸೃಷ್ಟಿಕರ್ತನೆಂಬ ಆ ಇಂಜಿನಿಯರ್ ಮುಂದೆ, ಈ ಇಂಜಿನಿಯರ್ ಗಳೆಲ್ಲ  ಯಾವ ಲೆಕ್ಕ ಹೇಳಿ?

ಲೆಟ್ಸ್ ಪ್ರೆ ಫ಼ಾರ್ ನೇಪಾಳ್,  ಹರ ಹರ ಮಹಾದೇವ್!

Facebook ಕಾಮೆಂಟ್ಸ್

Shivaprasad Bhat: Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.
Related Post