X

ಲ್ಯಾಂಡ್ ಮಾಫಿಯಾ, ಸ್ಯಾಂಡ್ ಮಾಫಿಯಾ ಎಂದೆಲ್ಲಾ ಬೊಬ್ಬಿರಿಯುವ ಚಾನೆಲ್ ಗಳೇ ಮೀಡಿಯಾ ಮಾಫಿಯಾ ಬಗ್ಗೆ ಏಕೆ ಮೌನವಾಗಿದ್ದೀರಿ?

ಘಟನೆ ೧:

 ಬಿಜೆಪಿಯ ಬೀದರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಾಬು ವಾಲಿ ಅವರು ಗೆಸ್ಟ್ ಹೌಸ್ ಒಂದರಲ್ಲಿ ಯುವತಿಯರನ್ನ ಸಂಪೂರ್ಣವಾಗಿ ಬೆತ್ತಲುಗೊಳಿಸಿ ನೃತ್ಯ ಮಾಡಿಸುತ್ತಿರುವ ದೃಶ್ಯ ನಮ್ಮ ನಾಡಿನ ಹೆಸರಾಂತ ನ್ಯೂಸ್ ಚಾನೆಲೊಂದರಲ್ಲಿ ಹರಿದಾಡುತ್ತಿತ್ತು. ನಂಗಾನಾಚ್ ಪ್ರಕರಣದಲ್ಲಿ ಬಿಜೆಪಿ ನಾಯಕರುಗಳು ಭಾಗಿ ಅಂತ ಬೆಳ್ಳಂಬೆಳಗ್ಗೆ ಬೊಬ್ಬೆ ಹೊಡೆಯಲು ಶುರುಮಾಡಿದ್ದರು ಆ ವಾಹಿನಿಯ ಆಂಕರ್ ಗಳು. ನಂತರ ನಡೆದ ನಾಟಕೀಯ ಬೆಳವಣಿಗೆಯೊಂದರಲ್ಲಿ ನಂಗಾನಾಚ್ ಪ್ರಕರಣದಲ್ಲಿ ಬಾಬು ವಾಲಿಯವರ ಪಾತ್ರವೇ ಇಲ್ಲ ಎಂದು ತಿಳಿದು ಬರುತ್ತದೆ. ಪಾಕಿಸ್ತಾನದಲ್ಲಿ ಚಿತ್ರೀಕರಿಸಿದ ವಿಡಿಯೋವನ್ನು ಹಿಂದೂ ಮುಂದೂ ನೋಡದೆ ಬಿತ್ತರಿಸಿತ್ತು ಸುದ್ದಿ ವಾಹಿನಿ. ಬಿಜೆಪಿಗರನ್ನು ಬೆತ್ತಲಾಗಿಸುವ ಭರದಲ್ಲಿ ವಾಹಿನಿಯ ಸಂಪಾದಕರು ತಾವೇ ಬೆತ್ತಲಾಗಿದ್ದರು. ಮಾಡಿದ ತಪ್ಪಿಗೆ ಸಂಪಾದಕರು ವಾಲಿಯವರ ಕ್ಷಮೆ ಕೇಳುತ್ತಾರೆ. ಹೀಗೆ ಮಾಧ್ಯಮಗಳು ಅನ್ಯಾಯವಾಗಿ ಬಾಬು ವಾಲಿ ಮತ್ತು ಬಿಜೆಪಿಯ ಮಾನಹರಣ ಮಾಡಿದ್ದವು!!!

ಘಟನೆ ೨:

 ಹರ್ಯಾಣದ ರೋಹ್ಟಕ್ ನಲ್ಲಿ ಪೂಜಾ ಮತ್ತು ಆರತಿ ಎಂಬ ಸಹೋದರಿಯರಿಬ್ಬರು ಬಸ್ ನಲ್ಲಿ ತಮ್ಮನ್ನ ಚುಡಾಯಿಸಿದ ಕಾಮಾಂಧರಿಗೆ ಥಳಿಸಿ ಹಣ್ಣುಗಾಯಿ ನೀರುಗಾಯಿ ಮಾಡಿದ್ದ ಸುದ್ದಿಯನ್ನು ದೇಶದ ಎಲ್ಲಾ ನ್ಯೂಸ್ ಚಾನೆಲ್ಗಳು ತಾಮುಂದು ನಾಮುಂದು ಎಂದು ಬಿತ್ತರಿಸಿದ್ದವು. ಹರ್ಯಾಣದ ಸಿಎಂ ಮನೋಹರ್ ಲಾಲ್  ಕಟ್ಟರ್ ಅವರು ಈ ಸಹೋದರಿಯರ ಗುಣಗಾನ ಮಾಡಿ ಗಣರಾಜ್ಯೋತ್ಸವದ ದಿನ ಸನ್ಮಾನವನ್ನು ಮಾಡಲಾಗುವುದು ಎಂದು ಘೋಷಿಸಿದರು. ಆದರೆ ನಂತರ ನಡೆದ ಹಟಾತ್ತ್  ಬೆಳವಣಿಗೆಯಲ್ಲಿ ಘಟನೆಯಲ್ಲಿ ಆ ಹುಡುಗರ ಪಾತ್ರ ಇಲ್ಲ ಎಂಬುದು ತಿಳಿಯುತ್ತದೆ. ಸುದ್ದಿ ಮಾಧ್ಯಮಗಳು ಹಿಂದೂ ಮುಂದೆ ನೋಡದೆ ಪ್ರಸಾರ ಮಾಡಿದ ಒಂದೇ ಒಂದು ನ್ಯೂಸ್ ನಿಂದ ದೇಶವಿಡೀ ಆ ಅಮಾಯಕರನ್ನು ಆರೋಪಿಗಳನ್ನಾಗಿ ಮಾಡಿತ್ತು. ಒದೆ ತಿಂದ ಹುಡುಗರ ಮಾನವನ್ನು ಮಾಧ್ಯಮಗಳು ಮೂರು ಕಾಸಿಗೆ ಹರಾಜಾಗಿತ್ತು!!!

 ಮೇಲಿನ ಎರಡು ಘಟನೆಗಳು ನಮ್ಮ ದೇಶದ ಹಾಗೂ ರಾಜ್ಯದ ನ್ಯೂಸ್ ಚಾನೆಲ್ ಗಳು ಟಿಆರ್ಪಿಗಾಗಿ ಯಾವ ಮಟ್ಟಕ್ಕೂ ಇಳಿಯಲೂ ಸಿದ್ಧ ಎಂಬುದನ್ನು ತೋರಿಸುತ್ತದೆ. ಜನರಿಗೆ ಏನು ಇಷ್ಟ, ಅವರು ಏನನ್ನು ಬಯಸುತ್ತಾರೆ ಅನ್ನೋದನ್ನ ಲೆಕ್ಕಿಸದೇ ಒಂದೇ ಸುದ್ದಿಯನ್ನು ಚುಯಿಂಗ್ ಗಮ್ ತರಹ ಎಳೆದು ಜನರು ನ್ಯೂಸ್ ಎಂದರೆ ವಾಂತಿ ಮಾಡುವ ಮಟ್ಟಿಗೆ ಸುದ್ದಿಯ ರಸದೌತಣವನ್ನ ಉಣಬಡಿಸುತ್ತಿವೆ. ಮಾಧ್ಯಮದವರು ನಿಷ್ಪಕ್ಷಪಾತವಾಗಿ ಸುದ್ದಿಗಳನ್ನು ಬಿತ್ತರಿಸಬೇಕೆಂಬುದು ಜನರ ಆಶಯ. ಆದರೆ ಕೆಲವು ಪೂರ್ವಾಗ್ರಹ ಪೀಡಿತ ಸುದ್ದಿ ಸಂಪಾದಕರು ತಮ್ಮ ವಿರೋಧಿಗಳನ್ನು ಸೈದ್ಧಾಂತಿಕವಾಗಿ ಹಣಿಯಲೆಂದೇ ಕಾರ್ಯಕ್ರಮಗಳನ್ನು ಸಿದ್ಧಮಾಡಿ ಪ್ರಸಾರಮಾಡುತ್ತಾರೆ. ಆ ಕಾರ್ಯಕ್ರಮಗಳನ್ನು ಕೆಲವೇ ಕೆಲವು ಕ್ಷಣ ವೀಕ್ಷಿಸಿದರೆ ಸಾಕು, ಅರ್ಥವಾಗುತ್ತದೆ ಇದು ಯಾರ ಪರವಾದ ಹಾಗೂ ಯಾರ ವಿರೋಧವಾದ ಕಾರ್ಯಕ್ರಮ ಅಂತ.!!

 ರಾಜಕಾರಣಿಗಳ ಪಕ್ಷಾಂತರದ ಬಗ್ಗೆ ಬ್ರೇಕಿಂಗ್ ನ್ಯೂಸ್ ಮೇಲೆ ಬ್ರೇಕಿಂಗ್ ನ್ಯೂಸ್ ಕೊಡುವ ಮಾಧ್ಯಮ ಮಿತ್ರರು ಬೇರೆ ಚಾನೆಲ್ ಸ್ವಲ್ಪ ಜಾಸ್ತಿ ಸಂಬಳ ಕೊಡುತ್ತೇನೆ ಎಂದ ಕೂಡಲೇ ಸೂಟು-ಬೂಟು ಧರಿಸಿ ಇನ್ನೊಂದು ಚಾನೆಲ್ ಸ್ಟುಡಿಯೋದಲ್ಲಿ ರಾತ್ರಿ ಕಳೆದು ಬೆಳಕಾಗೋದರಲ್ಲಿ ಹಾಜರಿರುತ್ತಾರೆ. ಇನ್ನು ಸುದ್ದಿಗಳನ್ನು ಪ್ರಸಾರ ಮಾಡುವುದರಲ್ಲಿಯೂ ತಾರತಮ್ಯ ವಹಿಸುತ್ತವೆ ಮಾಧ್ಯಮಗಳು. ಜನ ಸಾಮಾನ್ಯರ ದಾಂಪತ್ಯ ಕಲಹಕ್ಕೆ ರಂಗು ರಂಗಾದ ಶೀರ್ಷಿಕೆಯನ್ನಿಟ್ಟು ಬೆಳಗ್ಗೆಯಿಂದ ರಾತ್ರಿ ತನಕ ಬಾಯಿ ಹರಿಯುವ ಇವರು ತಮ್ಮದೇ ಸಹದ್ಯೋಗಿ ಮಿತ್ರರು ಯಾವುದಾದರೂ ಪ್ರಕರಣಗಳಲ್ಲಿ ಸಿಕ್ಕಿಹಾಕಿಕೊಂಡರೆ ಸುದ್ದೀನೇ ಮಾಡೋದಿಲ್ಲ. ಬೇರೆಯವರ ಪ್ರಕರಣಗಳನ್ನು ಬಣ್ಣ ಬಣ್ಣದ ಮಾತುಗಳಿಂದ ರಾಜ್ಯದ ಮುಂದಿಡುತ್ತಿದ್ದ, ಇತ್ತೀಚಿಗೆ ವಂಚನೆ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡಿದ್ದ ಮಹಾನ್ ವಾಗ್ಮಿ, ಚಾನೆಲ್ ಒಂದರ ಮುಖ್ಯಸ್ಥನ ಸುದ್ದಿಯನ್ನು ಯಾವ ವಾಹಿನಿಗಳೂ ಬಿತ್ತರಿಸದೇ ತಾವು ನೇರ,ದಿಟ್ಟ,ನಿರಂತರ ಎಂಬುದನ್ನು ಜಗಜ್ಜಾಹೀರು ಮಾಡಿದ್ದವು.

 ಈ ಮಾಧ್ಯಮಗಳಿಗೆ ಮಳೆ ಬಂದಾಗ ಮಾತ್ರ ಮೋರಿ,ಚರಂಡಿಗಳ ನೆನಪಾಗುತ್ತದೆ. ಸ್ಥಳದಿಂದಲೇ ನೇರ ವರದಿ ಅಂತ ವರದಿಗಾರನ ಮೇಲೆ ಸ್ವಲ್ಪ ಚರಂಡಿ ಕೆಸರನ್ನು ಮೆತ್ತಿ ಗಂಟೆಗಟ್ಟಲೆ ಸರ್ಕಾರದ ವಿರುದ್ಧ ಹರಿಹಾಯ್ತಾವೆ. ಸರ್ಕಾರಕ್ಕೆ, ಪಾಲಿಕೆಗೆ ಜನರ ಬಗ್ಗೆ ಕಾಳಜಿ ಇಲ್ಲ ಅಂತ ಸ್ಟುಡಿಯೋದಲ್ಲಿ ಕುಳಿತು ಪ್ಯಾನೆಲ್ ಡಿಸ್ಕಷನ್ ಹೆಸರಿನಲ್ಲಿ ಪುಂಖಾನುಪುಂಖವಾಗಿ ಮಾತನಾಡಿ ತಮ್ಮ ಟಿಆರ್ಪಿ ಜಾಸ್ತಿ ಮಾಡಿಕೊಳ್ಳುತ್ತವೆ. ಕೊಳವೆ ಬಾವಿಯಲ್ಲಿ ಪುಟ್ಟ ಮಕ್ಕಳು ಬಿದ್ದಾಗ ಮಾತ್ರ ಇವರ ಗಮನ ಇನ್ನಿತರ ತೆರೆದ ಕೊಳವೆ ಬಾವಿಗಳ ಕಡೆಗೆ ಹರಿಯುತ್ತಿದೆ. ಇನ್ನುಳಿದ ದಿನಗಳಲ್ಲಿ ಯಾವ ಚಿತ್ರ ನಟ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ, ರಾಜಕಾರಣಿಗಳು ಯಾವ ಕಡೆಗೆ ಮುಖಮಾಡಿ ತಮ್ಮ ಕಛೇರಿಯಲ್ಲಿ ಕುಳಿತುಕೊಂಡರು, ಹಾಗೆ ಕುಳಿತು ಕೊಳ್ಳಲು ಕಾರಣ ಏನು ಎಂದು ಜಗದ್ವಿ(ಕು)ಖ್ಯಾತ ಜ್ಯೋತಿಷಿ ಮತ್ತು ಸ್ವಾಮೀಜಿಗಳ ಜೊತೆ ಸಂದರ್ಶನ, ಬೇರೆ ಭಾಷೆಯ ಚಲನಚಿತ್ರಗಳ ವಿಮರ್ಶೆ ಹಾಗೂ ಪ್ರಚಾರ ಇದರಲ್ಲೇ ಮುಳುಗಿ ಹೋಗಿರುತ್ತವೆ ನಮ್ಮ ಸುದ್ದಿ ವಾಹಿನಿಗಳು. ಮುಖ್ಯಮಂತ್ರಿಗಳು ಸಭೆಯಲ್ಲಿ ನಿದ್ದೆಮಾಡಿದ್ರೆ ಯಾಕೆ ಹೀಗೆ ನಿದ್ದೆ ಮಾಡುತ್ತಾರೆ ಎಂದು ಚರ್ಚೆ. ನಿದ್ದೆ ಮಾಡದಿದ್ದರೆ ಯಾವ ರೀತಿ ಯೋಗಾಭ್ಯಾಸ ಮಾಡಿ ನಿದ್ದೆಯನ್ನು ಗೆದ್ದರು ಎಂಬುದರ ಬಗ್ಗೆ ಚರ್ಚೆ!! ಪ್ರಖ್ಯಾತ ಲೇಖಕರೊಬ್ಬರು ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಾಗ ಅಥವಾ ಕಿಡಿಗೇಡಿ ಲೇಖಕನೊಬ್ಬ ಧರ್ಮಗ್ರಂಥದ ಬಗ್ಗೆ ಅವಹೇಳನ ಮಾಡಿದಾಗ ಇಡೀ ದಿನ ಬೊಬ್ಬೆ ಹೊಡೆಯುತ್ತಾರೆ.

 ಮಾಜಿ ಸಚಿವ ರಾಮದಾಸ್ ಪ್ರೇಮ ಪ್ರಕರಣ, ಸದನದಲ್ಲಿ ಬ್ಲೂ ಫಿಲಂ ನೋಡಿದ ಸಚಿವ ಮಹಾಶಯರ ಪುರಾಣ,ನಿತ್ಯಾನಂದ, ದೇವೀಶ್ರೀ ಗುರೂಜಿಯವರ ಕಾಮಪುರಾಣ, ಕಾ(ಕೋ)ಳಿ ಸ್ವಾಮಿ ಡೀಲ್ ಕೇಸ್, ಹಾಲಪ್ಪ ರೇಪ್ ಕೇಸ್, ರೇಣುಕಾಚಾರ್ಯ ಚುಂಬನ ಪ್ರಕರಣ ಹೀಗೆ ಒಂದೇ ಎರಡೇ?? ಈ ಎಲ್ಲಾ ಪ್ರಕರಣಗಳಲ್ಲಿ ಮಾಧ್ಯಮಗಳು ತಮ್ಮ ಟಿಆರ್ಪಿಗಾಗಿ ಏನೆಲ್ಲಾ ಗಿಮಿಕ್ ಮಾಡಿದ್ದವು ಎಂದು ನೆನಪಿಸಿದರೇ ಅಸಹ್ಯವಾಗುತ್ತದೆ. ಎಲ್ಲೋ ಬೀದಿಯಲ್ಲಿ ಹೋಗುತ್ತಿದ್ದವರನ್ನೆಲ್ಲಾ ಜೋತಿಷ್ಯ ಹೇಳಲು ತಮ್ಮ ಸ್ಟುಡಿಯೋನಲ್ಲಿ ಕುಳ್ಳಿರಿಸಿ ಜನರನ್ನು ದಿಕ್ಕುತಪ್ಪಿಸುವ ಕಾರ್ಯವನ್ನು ನಮ್ಮ ಮಾಧ್ಯಮಗಳು ಮಾಡುತ್ತಾ ಬಂದಿವೆ. ಜ್ಯೋತಿಷ್ಯರತ್ನರೂ ಕೂಡಾ ಚಾನೆಲ್ ಬದಲಾದಂಗೆ ತಮ್ಮ ಜ್ಯೋತಿಷ್ಯದ ಶೈಲಿಯನ್ನೇ ಬದಲಿಸಿ ಜನರಿಗೆ ಸರಿಯಾಗಿ ಮಕ್ಮಲ್ ಟೋಪಿ ಹಾಕುತ್ತಿದ್ದಾರೆ.

 ಇತ್ತೀಚಿಗೆ ಕೇಂದ್ರ ಸಚಿವ ಜನರಲ್ ವಿ.ಕೆ.ಸಿಂಗ್ ಯೆಮೆನ್ ನಲ್ಲಿ ಭಾರತೀಯರ ರಕ್ಷಣೆಗೆ ಟೊಂಕಕಟ್ಟಿ ನಿಂತಿದ್ದನ್ನು ನಮ್ಮ ದೇಶದ ಯಾವುದೇ ಚಾನೆಲ್ ಗಳು ಜಾಸ್ತಿ ಪ್ರಚಾರ ಮಾಡಲಿಲ್ಲ. ಆದರೆ ವಿ.ಕೆ.ಸಿಂಗ್ ಅವರ ಯೆಮೆನ್ ನಲ್ಲಿನ ಭಾರತೀಯರ ರಕ್ಷಣಾ ಕಾರ್ಯಾಚರಣೆಗಿಂತಲೂ ಮಿಗಿಲಾದ ಮಜಾ ಪಾಕ್ ಹೈಕಮಿಶನ್ ಗೆ ಭೇಟಿ ಕೊಟ್ಟಿದ್ದಾಗ ಸಿಕ್ಕಿತ್ತು ಎಂಬ ಹೇಳಿಕೆಯನ್ನು ಮಾಧ್ಯಮಗಳು ಬೇರೆಯೇ ಅರ್ಥಕೊಟ್ಟು ಸಿಕ್ಕಾಪಟ್ಟೆ ಪ್ರಚಾರಕೊಟ್ಟಿದ್ದವು. ಇದರಿಂದ ಕುಪಿತರಾದ ಸಿಂಗ್ ತಮ್ಮ ಟ್ವಿಟರ್ ಖಾತೆಯಲ್ಲಿ “ಪ್ರೆಸ್ಟಿಟ್ಯೂಟ್ಸ್” ಗಳಿಂದ ಇನ್ನೇನನ್ನು ನಿರೀಕ್ಷಿಸಬಹುದು ಎಂದು ಖಾರವಾಗಿಯೇ ಉಲ್ಲೇಖಿಸಿದ್ದರು.!!!

 ನ್ಯೂಸ್ ಚಾನೆಲ್ ಗಳ ಕಥೆ ಹೀಗಾದರೆ ಕನ್ನಡದ ಮನರಂಜನಾ ವಾಹಿನಿಗಳ ಕಥೆ ಇನ್ನೊಂದು ರೀತಿ. ಹಿಂದಿ ಭಾಷೆಯ ಧಾರಾವಾಹಿ,ರಿಯಾಲಿಟಿ ಶೋ, ಗೇಮ್ ಶೋಗಳನ್ನ ದಿಟ್ಟೂ ಬಟ್ಟಿ ಇಳಿಸಿ, ಹೊಸತನವನ್ನೇ ನೀಡದೆ ಜನರಿಗೆ ನೋಡಿ ಸ್ವಾಮಿ ನಾವಿರೋದೇ ಹೀಗೆ ಅಂತ ಟಿಆರ್ಪಿ ಸಮರದಲ್ಲಿ ತೊಡಗಿಕೊಂಡಿವೆ.  ಗೇಮ್ ಶೋಗಳಲ್ಲೂ ಟಿಆರ್ಪಿಗಾಗಿ

ಜನಸಾಮಾನ್ಯರನ್ನು ಬಿಟ್ಟು ಸೆಲೆಬ್ರಿಟಿಗಳನ್ನೇ ಕರೆಯುತ್ತಾರೆ(ಕನ್ನಡದ ಕೋಟ್ಯಾಧಿಪತಿ ಹೊರತುಪಡಿಸಿ). ಬಿಗ್ ಬಾಸ್ ನಂತಹ ಎಡಬಿಡಂಗಿ ಕಾರ್ಯಕ್ರಮದ ೨ ಸೀಸನ್ ಮುಗಿಸಿದ್ದಾವೆ ನಮ್ಮ ಕನ್ನಡದ ಚಾನೆಲ್ಗಳು ಅಂದ್ರೆ ಅರ್ಥ ಆಗುತ್ತೆ ಇವರಿಗೆ ಸಮಾಜದ ಮೇಲೆ ಎಷ್ಟು ಕಾಳಜಿ ಇದೆ, ಸಮಾಜದ ಸುಧಾರಣೆಗೆ ಇವರ ಕೊಡುಗೆಗಳೇನು ಎಂಬುದು.!!

 ಒಟ್ಟಾರೆ ಮಾಧ್ಯಮ ಸ್ವಾತಂತ್ರ್ಯದ ಹೆಸರಿನಲ್ಲಿ ನೀವು(ಟಿ.ವಿ. ಮಾಧ್ಯಮ)ಗಳು ಸುದ್ದಿಯನ್ನು ವಿಮರ್ಶಿಸದೇ, ಸತ್ಯಾಸತ್ಯತೆಯನ್ನು ತಿಳಿಯದೇ ಪ್ರದರ್ಶಿಸುತ್ತೀರಿ. ಅಮಾಯಕರ ಮಾನ ತೆಗೆಯುವ ಪ್ರಯತ್ನ ಮಾಡುತ್ತೀರಿ. ನಿಮ್ಮ ಹೊಟ್ಟೆ ಹೊರೆಯುವುದಕ್ಕೋಸ್ಕರ ಸಾವಿನ ಮನೆಯಲ್ಲೂ ಬೇಳೆ ಬೇಯಿಸುತ್ತೀರಿ. ಬೇರೆ ಚಾನೆಲ್ ಗಳಿಗಿಂತ ಮೊದಲು ತಾವೇ ಪ್ರಕಟಿಸಬೇಕೆಂಬ ಜಿದ್ದಿನಲ್ಲಿ ಕೆಲವೊಮ್ಮೆ ಏನೆಲ್ಲಾ ಅಚಾತುರ್ಯಗಳಿಗೆ ಕಾರಣರಾಗುತ್ತೀರಿ. ಶ್ರೀ ಸಾಮಾನ್ಯನ ಪ್ರಶ್ನೆ ಇಷ್ಟೇ. ಲ್ಯಾಂಡ್ ಮಾಫಿಯಾ, ಸ್ಯಾಂಡ್ ಮಾಫಿಯಾ ಎಂದೆಲ್ಲಾ ದೊಡ್ಡ ದೊಡ್ಡ ಪದ ಪುಂಜಗಳಿಂದ ಬೊಬ್ಬಿರಿಯುವ ನೀವು ನಿಮ್ಮದೇ ಮಾಫಿಯಾದ ಬಗ್ಗೆ ಏಕೆ ಮೌನವಾಗಿದ್ದೀರಿ???

ಪಂಚ್ ಲೈನ್: “ಪಬ್ಲಿಕ್” ಏನನ್ನು ಬಯಸುತ್ತೆ ಅಂತ ಸರಿಯಾದ “ಸಮಯ”ದಲ್ಲಿ ಅರ್ಥಮಾಡಿಕೊಂಡು “ಸುವರ್ಣ”ವಾದ “ಕಸ್ತೂರಿ” ಕನ್ನಡ ಭಾಷೆಯಲ್ಲಿ ವಿವರಿಸಲಿ ನಮ್ಮ “ಟಿ.ವಿ(೯)” ಚಾನೆಲ್ ಗಳು ಎಂಬುದು “ಜನ(ಶ್ರೀ)”ರ ಆಶಯ.

Facebook ಕಾಮೆಂಟ್ಸ್

Sudeep Bannur: Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.
Related Post