“ಇನ್ನೊಂದು ಮೆಟ್ಟಿಲೂ ನನ್ ಕೈಲಿ ಹತ್ತಕ್ಕಾಗಲ್ಲಪ್ಪಾ!” ಉಮಾ ನಿಡುಸುಯ್ದಳು. ಅವಳಿಗಿಂತ ಇಪ್ಪತ್ತೈದು ವರ್ಷ ಹಿರಿಯಳಾದ ಶಾಂತಜ್ಜಿ ಮಾತ್ರ ತುಟಿಪಿಟಿಕ್ಕೆನ್ನದೆ ಆಸ್ಪತ್ರೆಯ ಮೆಟ್ಟಿಲುಗಳನ್ನೇರುತ್ತಲೇ ಇದ್ದಳು. ಶಾಂತಜ್ಜಿಗೀ ಲೋಕದ ಪರಿವೆಯೇ ಇದ್ದಂತಿರಲಿಲ್ಲ. ತನ್ನ ಮಾತಿಗೆ ಶಾಂತಜ್ಜಿ ಕಿವಿಗೊಡದಿರುವುದು ನೋಡಿ ಉಮಾಳ ಮುಖ ಗಂಟಿಕ್ಕಿಕೊಂಡಿತು. “ದರಿದ್ರ ಲಿಫ಼್ಟ್! ಇಷ್ಟು ದೊಡ್ಡ ಆಸ್ಪತ್ರೆ ಕಟ್ಟಿದವರಿಗೆ ಹಾಳಾದ ಲಿಫ಼್ಟ್ ಸರಿ ಮಾಡಿಸುವ ತಾಕತ್ತು ಇಲ್ವಾ?” ಎಂದು ತನಗಾದ ಆಯಾಸ ಅಸಮಾಧಾನವನ್ನು ಲಿಫ಼್ಟ್ ನ ಮೇಲೂ , ಅದನ್ನು ಹೊಂದಿದ ನಾರಾಯಣೀ ಕ್ಯಾನ್ಸರ್ ಆಸ್ಪತ್ರೆಯ ಮೇಲೂ ಕಕ್ಕಿದಳು ಉಮಾ.
ಶಾಂತಜ್ಜಿ ಉಮಾಳ ಅಮ್ಮ. ಎಪ್ಪತ್ತರ ಇಳಿ ವಯಸ್ಸಿನಲ್ಲೂ ಕುಂದದ ವರ್ಚಸ್ಸು .ಐವತ್ತು ವರ್ಷಗಳ ಹಿಂದಿನ ಇಪ್ಪತ್ತರ ಶಾಂತಾ ಊರಿಗೂರೇ ಅಸೂಯೆ ಪಡುವಷ್ಟು ಚೆಲುವಿಯಿದ್ದಳಂತೆ. ಊರ ಹುಡುಗರ ಕಣ್ಣು ತನ್ನ ಮಗಳ ಮೇಲಿರುವುದು ಕಂಡು ಅಶಾಂತಿಗೊಳಗಾದ ಶಾಂತಳ ಅಪ್ಪ ತನ್ನ ಗೆಳೆಯನ ಮಗ ವಿಕ್ರಮ ಸೇಠನಿಗೆ ಆತುರಾತುರವಾಗಿ ಮದುವೆ ಮಾಡಿಕೊಟ್ಟನಂತೆ. ವಿಕ್ರಮ ವಿಕ್ರಮಿಯೇ, ನಿಷ್ಣಾತ ಬೇಟೆಗಾರ. ಜೊತೆಗೆ ದೇಹ ಸ್ವಲ್ಪ ವಕ್ರವಾಗಿದ್ದುದೂ ಹೌದು. ಅವರಿಬ್ಬರ ಮದುವೆಗೆ ಬಂದವರೆಲ್ಲರೂ ’ಗುಬ್ಬಿಯನ್ನು ಗಿಡುಗನ ಕೈಗೆ ಕೊಟ್ಟಿಯಲ್ಲೋ’ ಎಂದು ಶಾಂತಳ ಅಪ್ಪನಿಗೆ ಶಪಿಸಿದ್ದರಂತೆ. ಅದೆಲ್ಲಾ ಹಿಂದಿನ ಮಾತು. ಕಾಲನ ಹೊಡೆತಕ್ಕೆ ಮುಖ ಸುಕ್ಕಾಗಿ, ಕೂದಲು ಬೆಳ್ಳಗಾಗಿರುವುದು ಬಿಟ್ಟರೆ ಶಾಂತಜ್ಜಿ ಈಗಲೂ ಚಂದವಾಗೇ ಇದ್ದಾಳೆ. ಉಮಾಳಿಗೆ ಅಪ್ಪನ ಸಹಜ. ಮೂವತ್ತು ವರ್ಷಗಳ ಹಿಂದೆ ಬೇಟೆಯಾಡುತ್ತಲೇ ಗತಿಸಿದ ಗಂಡನ ನೆನಪು ತರುವ ಬಿರುಗಾಳಿ ಅವಳು. ಶಾಂತಜ್ಜಿ ಶಾಂತವಾಗೇ ಒಂದೊಂದೇ ಮೆಟ್ಟಿಲು ಕ್ರಮಿಸುತ್ತಿದ್ದಾಳೆ. ಇನ್ನೊಂದು ಮಹಡಿ ಹತ್ತುವವರೆಗೂ ಅವಳು ನಿಲ್ಲಲಾರಳು. ಉಮಾಗೆ ಸುಸ್ತೋ ಸುಸ್ತು. ಅವಳಿಗೆ ತನ್ನಮ್ಮ ನೋಡ ಹೋಗುತ್ತಿರುವವರು ಆರೆಂದೂ ಗೊತ್ತಿಲ್ಲ. ಈ ಪರಿಯಲ್ಲಿ ತನ್ನಮ್ಮ ಯಾರನ್ನೋ ಕಾಣಬಯಸಿದ್ದರೆ ಯಾರೋ ಹತ್ತಿರದವರೇ ಇರಬೇಕೆಂದು ಭಾವಿಸಿದ್ದಳಷ್ಟೆ. ಶಾಂತಜ್ಜಿ ಯಾರೆಂದು ತಾನಾಗಿಯೇ ಹೇಳಿರಲಿಲ್ಲ, ಇವಳು ಕೇಳಲೂ ಹೋಗಿರಲಿಲ್ಲ.
ಅಂತೂ ಐದನೇ ಮಹಡಿ ಹತ್ತಿದಾಗ ಉಮಾ ನೆಮ್ಮದಿಯ ಉಸಿರು ಚೆಲ್ಲಿದಳು. ಅನತಿ ದೂರದ ಐವತ್ತಾರು ಬಿ ರೂಮಿಗೆ ಹೋದರೆ ಅವಳ ಕುತೂಹಲವೂ ಆಯಾಸವೂ ತಣಿಯುವುದೆಂದು ಅವಳಿಗೆ ಗೊತ್ತಿತ್ತು. ತುಸು ವೇಗವಾಗೇ ಅತ್ತ ಹೆಜ್ಜೆ ಹಾಕಿದಾಗ ಶಾಂತಜ್ಜಿ ತಡೆದಳು. ’ ಈ ಅಮ್ಮನಿಗೇನಾಯ್ತಪ್ಪಾ?’ ಅಂದುಕೊಳ್ಳುತ್ತಿರುವಂತೆಯೇ ಪಕ್ಕದ ಚೇರಿನಲ್ಲಿ ಉಮಾಳನ್ನು ಕುಳ್ಳಿರಿಸಿದಳು ಶಾಂತಜ್ಜಿ. ಉಮಾ ಬಿಟ್ಟ ಕಂಗಳಿಂದ ನೋಡುತ್ತಿರುವಂತೆಯೇ, “ಈ ಸೂರ್ಯ ನಾರಾಯಣ ರಾವ್ ಯಾರಂತ ಗೊತ್ತಾ?” ಎಂದು ಕೇಳಿದಳು. ಅವಳ ಪ್ರತಿಕ್ರಿಯೆಗೂ ಕಾಯದೆ ಮುಂದುವರೆಸುತ್ತಾ, “ಇದು ಮದುವೆಗೂ ಹಿಂದಿನ ಕತೆ” ಎಂದು ತನ್ನ ನೆನಪಿನ ಬುತ್ತಿ ಬಚ್ಚಿಟ್ಟಳು. ತನ್ನಣ್ಣನ ಗೆಳೆಯ ಸೂರ್ಯ ನಾರಾಯಣ ಒಂದೊಮ್ಮೆ ಮನೆಗೆ ಬಂದಿದ್ದಾಗ ಅಕಸ್ಮಾತಾಗಿ ತಾನು ಆತನ ಕಣ್ಣಿಗೆ ಬಿದ್ದು ಪ್ರೇಮಾಂಕುರವಾಗಿತ್ತಂತೆ. ಈ ಪ್ರೀತಿ ಹೆಮ್ಮರವಾಗಿ ಬೆಳೆಯಲು ಜಾಸ್ತಿ ಸಮಯ ಬೇಕಾಗಿರಲಿಲ್ಲ. ಆಗೀಗ್ಗೆ ಊರವರ ಕಣ್ಣು ತಪ್ಪಿಸಿ ಭೇಟಿಯಾಗುವುದೂ ನಡೆದಿತ್ತು. ಆದರೆ ಯಾವ ಘಳಿಗೆಯಲ್ಲಿ ವಿಕ್ರಮನೊಡನೆ ಮದುವೆ ನಿಶ್ಚಯವಾಯಿತೋ, ಆಗಿನಿಂದಲೇ ಇವರಿಬ್ಬರ ಭೇಟಿಗೆ ಕಡಿವಾಣ ಬಿತ್ತು. ಶಾಂತಜ್ಜಿಯ ಬಾಳ ಸೂರ್ಯ ಮರೆಯಾಗಿ ಹೋದ. ಶಾಂತಜ್ಜಿಯ ಮಾತಿನಲ್ಲೇ ಹೇಳುವುದಾದರೆ, “ಅಪ್ಪನನ್ನು ಎದುರುಹಾಕಿಕೊಳ್ಳುವ ಧೈರ್ಯವೂ, ಮನೆಯವರ ಪ್ರೀತಿಯನ್ನು ಕಳೆದುಕೊಳ್ಳುವ ಶಕ್ತಿಯೂ ಇರಲಿಲ್ಲ. ಈಗಿನ ಕಾಲದ ಹುಡುಗರಿಗಿರುವ ’ಆಯ್ಕೆ’ಗಳಿರಲಿಲ್ಲ. ಸೂರ್ಯನನ್ನು ಕಳೆದುಕೊಳ್ಳುವುದು ಅನಿವಾರ್ಯವಾಗಿತ್ತು.” ಉಮಾಳಿಗೆ ದುಃಖ ಉಮ್ಮಳಿಸಿ ಬಂತು. ಅಮ್ಮ ಈ ರೀತಿ ಭಾವೊದ್ವೇಗಕ್ಕೊಳಗಾಗಿದ್ದನ್ನು ನೋಡಿದ್ದು ಇದೇ ಮೊದಲು. ಶಾಂತಜ್ಜಿ ಸಾವರಿಸಿಕೊಂಡು ನುಡಿದಳು, “ನನಗೇನೂ ಪಶ್ಚಾತ್ತಾಪವಿಲ್ಲ. ಬದಲಿಗೆ ಅಮ್ಮನ ಎದೆಯೊಡೆಯದಿದ್ದುದಕ್ಕೆ ಹೆಮ್ಮೆಯಿದೆ. ಸೂರ್ಯನ ನೆನಪು ಕಾಡಿರಲಿಲ್ಲವೆಂದಲ್ಲ. ಕಾಡುತ್ತಿತ್ತು, ಕಾಡುತ್ತಲೇ ಇರುತ್ತದೆ. ಇಲ್ಲಿ ತನಕ ನನ್ನನ್ನೆಳೆದುಕೊಂಡು ಬಂದಿದ್ದೂ ಅದೇ. ಆದರೆ ಯಾವತ್ತೂ ಅದು ನನ್ನ ಜೀವನವನ್ನು ಹಾಳು ಮಾಡಲು ನಾನು ಬಿಡಲಿಲ್ಲ. ಅಯ್ಯೋ,ಹುಚ್ಚು ತಲೆ ನನ್ನದು! ಕೆಟ್ಟೇ ಹೋಗಿದೆ. ಇಲ್ಲಿಯವರೆಗೆ ಬರಲು ನಿಜವಾಗಲೂ ನನಗೆ ಹುಚ್ಚೇ. ವಾಪಸ್ಸು ಹೋಗೋಣ ಬಾ”. ಉಮಾ ಅಮ್ಮನ ಕೈ ಹಿಡಿದು ,”ಇಲ್ಲಮ್ಮಾ,ಅಂತಿಮ ಬಾರಿಗೆ ನೋಡಿಕೊಂಡು ಹೋಗೋಣ ಬಾ” ಎಂದಾಗ ಶಾಂತಜ್ಜಿ ನಸುನಕ್ಕು, “ನಾನು ನಿಮ್ಮಪ್ಪನನ್ನು ಪ್ರೀತಿಸುತ್ತೇನೆ ಮಗಳೇ” ಎಂದು ದರದರನೆ ಮೆಟ್ಟಿಲಿನತ್ತ ಎಳೆದುಕೊಂಡು ಹೋದಳು. ಪಕ್ಕದಲ್ಲಿ ಬರುತ್ತಿದ್ದ ಹುಡುಗಿಯ ಕೈಯ ಮೊಬೈಲಿನಲ್ಲಿ ದೀಪಿಕಾ “My Choice, My Choice ” ಎಂದು ಬಡಿದುಕೊಳ್ಳುತ್ತಿದ್ದಳು.
Facebook ಕಾಮೆಂಟ್ಸ್