೨೦೧೨ ಡಿ. ೧೬ ರಂದು ದೆಹಲಿಯಲ್ಲಿ ನಿರ್ಭಯಾ ಎಂಬ ವೈದ್ಯ ವಿದ್ಯಾರ್ಥಿನಿಯ ಮೇಲೆ ಬೀದಿನಾಯಿಗಳಿಗಿಂತಲೂ ಕ್ರೂರವಾಗಿ ಎರಗಿ, ಚಲಿಸುತ್ತಿರುವ ಬಸ್ಸಿನಲ್ಲೇ ಆಕೆಯ ಮೇಲೆ ಕಾಡುಪ್ರಾಣಿಗಳಿಗಿಂತಲೂ ಭೀಕರ ರೀತಿಯಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ ದುರುಳರು ಆಕೆಯನ್ನು ನಡುರಸ್ತೆಯಲ್ಲಿ ಎಸೆದು ಹೋಗಿದ್ದರು. ಸಾವು ಬದುಕಿನ ಮಧ್ಯೆ ಹೋರಾಡಿದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗಿದೆ ಕೊನೆಯುಸಿರೆಳೆಯುತ್ತಾಳೆ. ಈ ಒಂದು ಪ್ರಕರಣದಿಂದ ದೆಹಲಿಯೇನು, ಇಡೀ ಭಾರತವೇ ದಿಗ್ಭ್ರಾಂತಕ್ಕೊಳಗಾಗುತ್ತದೆ. ವಿದೇಶಗಳಲ್ಲೂ ಈ ಸಾಮೂಹಿಕ ಅತ್ಯಾಚಾರ ಬಹಳ ಸುದ್ದಿಮಾಡುತ್ತದೆ. ಭಾರತದಾದ್ಯಂತ ಯುವಸಮೂಹ ರೊಚ್ಚಿಗೆದ್ದು ಪ್ರತಿಭಟನೆಯ ಮಹಾಪೂರವೇ ನಡೆಯುತ್ತದೆ.
ಈ ಪ್ರಕರಣಕ್ಕೆ ಎರಡು ವರ್ಷಗಳು ಸಂದಿದ್ದರೂ ಇದಕ್ಕೆ ಕಾರಣರಾದ ಪಾಪಿಗಳು ಜೈಲಿನಲ್ಲಿ ಆರಾಮವಾಗಿ ಮುದ್ದೆ ಮುರಿಯುತ್ತಿದ್ದಾರೆ. ಇತ್ತೀಚಿಗೆ BBC ಬಿಡುಗಡೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಚಿತ್ರದಲ್ಲಿ ತಾವು ಮಾಡಿರುವ ಹೀನ ಕೆಲಸದ ಬಗ್ಗೆ ಎಳ್ಳಷ್ಟೂ ಪಶ್ಚಾತ್ತಾಪ ಇಲ್ಲದಂತೆ ಮಾತಾಡಿದ್ದಾರೆ ಪಾಪಿಗಳು. ಆದರೆ ಇದನ್ನೂ ಮೀರಿಸುವಂತಹ ವಿಕೃತ ಮನೋಭಾವವನ್ನು ಪ್ರದರ್ಶಿಸಿದ್ದಾರೆ ಆರೋಪಿ ಮುಕೇಶ್ ಪರ ವಾದಿಸುತ್ತಿರುವ ಮತಿಗೆಟ್ಟ ವಕೀಲ ಎಂ.ಎಲ್.ಶರ್ಮಾ. ಅತ್ಯಾಚಾರ ನಡೆಯಲು ವಿದ್ಯಾರ್ಥಿನಿಯ ನಡವಳಿಕೆಯೇ ಕಾರಣ, ನಡು ರಸ್ತೆಯಲ್ಲಿ ವಜ್ರವನ್ನು ಇಟ್ಟರೆ ಬೀದಿನಾಯಿಗಳು ಕಚ್ಚಿಗೊಂಡು ಹೋಗುವುದು ನಿಶ್ಚಿತ. ಅವರು ನಮ್ಮ ಭಾರತೀಯ ಸಂಸ್ಕೃತಿಯನ್ನು ಬಿಟ್ಟು, ಚಲನಚಿತ್ರಗಳ ಸಂಸ್ಕೃತಿಯ ಕಲ್ಪನೆಯ ಅಡಿಯಲ್ಲಿ ಏನು ಬೇಕಾದರೂ ಮಾಡಬಹುದು ಎನ್ನುವ ಚಿಂತನೆಯಲ್ಲಿದ್ದರು ಎಂದು ಹೇಳುವ ಮೂಲಕ ವಿದ್ಯಾರ್ಥಿನಿ ಮತ್ತು ಆಕೆಯ ಗೆಳೆಯ ಹೊರಗೆ ಸುತ್ತಾಡಲು ಹೋಗಿದ್ದೇ ತಪ್ಪು, ಪ್ರಾಣಿಗಳಿಗಿಂತಲೂ ಕಡೆಯಾಗಿ ಆ ವಿದ್ಯಾರ್ಥಿನಿಯನ್ನು ಹುರಿದುಮುಕ್ಕಿದ ತನ್ನ ಕಕ್ಷಿದಾರರು ಮಾಡಿದ್ದೇ ಸರಿ ಎಂದು ನಿರ್ಲಜ್ಜರಾಗಿ ಹೇಳುತ್ತಿದ್ದಾರೆ.
ಇನ್ನು ಅತ್ಯಾಚಾರಿಗಳ ಪರವಾದ ಮತ್ತೊಬ್ಬ ವಕೀಲ ಎ.ಪಿ.ಸಿಂಗ್ ಅವರೂ ಇದೇ ಧಾಟಿಯಲ್ಲಿ ಮಾತಾಡಿದ್ದಾರೆ. ಹೆಣ್ಣು(ನಿರ್ಭಯಾ ) ತನ್ನ ಗೆಳೆಯನೊಂದಿಗೆ ಹೊರಗಡೆ ಹೋಗಬಾರದಿತ್ತು. ಒಂದು ವೇಳೆ ಹೊರಗೆ ಹೋಗುವುದಿದ್ದರೂ ತನ್ನ ಕುಟುಂಬದವರೊಡನೆ ಹೊಗಬೇಕಿತ್ತು ಎಂದು ಅತ್ಯಾಚಾರಿಗಳ ಪರವಾಗಿ ಬ್ಯಾಟ್ ಬೀಸಿದ್ದಾರೆ. ಹಾಗಾದರೆ ನಿರ್ಭಯಾ ತನ್ನ ಪೋಷಕರೊಡನೆ ಆ ಬಸ್ ಹತ್ತಿದ್ದರೆ ಕಾಮದಾಹಿಗಳು ಆಕೆಯನ್ನು ಹಾಗೆಯೇ ಬಿಟ್ಟು ಬಿಡುತ್ತಿದ್ದರೇ Mr.Singh??
ಒಬ್ಬ ಕ್ರಿಮಿನಲ್ ವಕೀಲನ ಕೆಲಸ ಅಪರಾಧಿಗಳ ಪರ ವಾದ ಮಾಡುವುದೇ ಆಗಿರುತ್ತದೆ. ಆದರೆ ವೃತ್ತಿ ಧರ್ಮಕ್ಕೇ ಅಪಚಾರವೆಸಗಿ ಸಮಾಜದ ಸ್ವಾಸ್ಥ್ಯ ಕೆಡಿಸುವ “ಕ್ರಿಮಿ”ಗಳ ತರಹ ಈ ಇಬ್ಬರು ವಕೀಲರು ವರ್ತಿಸುತ್ತಿರುವುದು ವಿಪರ್ಯಾಸವೇ [pullquote-left]ಅಪರಾಧಿಗಳ ಪರ ವಾದಮಾಡುವುದು ತಪ್ಪೇನಲ್ಲ. ಆದರೆ ಮಾನವೀಯತೆ ಮರೆತವರಂತೆ, ಕಾಮಾಂಧರ ಅಟ್ಟಹಾಸಕ್ಕೆ ಬಲಿಯಾದ ಹೆಣ್ಣು ಮಗಳೊಬ್ಬಳ ಬಗ್ಗೆ ಈ ರೀತಿ ಓತಪ್ರೋತವಾದ, ಕೀಳುಮಟ್ಟದ ಹೇಳಿಕೆ ಕೊಡುತ್ತಿದ್ದೀರಲ್ಲ, ನಿಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿಲ್ಲವೇ??[/pullquote-left] ಸರಿ. ಇವರು ನಿಜವಾಗಿಯೂ ಕಾನೂನು ಪರ ಕೆಲಸಮಾಡುವವರೇ?? ಸತ್ಯ,ಧರ್ಮವನ್ನು ಎತ್ತಿ ಹಿಡಿಯುತ್ತೇನೆ ಎಂದು ವಕೀಲಿ ವೃತ್ತಿಗೆ ಬಂದಿರುವ ನಿಮಗೆ ಕನಿಷ್ಟ ಪ್ರಜ್ನೆಯಾದರೂ ಬೇಡವೇ?? ಅಪರಾಧಿಗಳ ಪರ ವಾದಮಾಡುವುದು ತಪ್ಪೇನಲ್ಲ. ಆದರೆ ಮಾನವೀಯತೆ ಮರೆತವರಂತೆ, ಕಾಮಾಂಧರ ಅಟ್ಟಹಾಸಕ್ಕೆ ಬಲಿಯಾದ ಹೆಣ್ಣು ಮಗಳೊಬ್ಬಳ ಬಗ್ಗೆ ಈ ರೀತಿ ಓತಪ್ರೋತವಾದ, ಕೀಳುಮಟ್ಟದ ಹೇಳಿಕೆ ಕೊಡುತ್ತಿದ್ದೀರಲ್ಲ, ನಿಮ್ಮ ಮನೆಯಲ್ಲೂ ಹೆಣ್ಣು ಮಕ್ಕಳಿಲ್ಲವೇ?? ಯುವಕನೊಂದಿಗೆ ತಿರುಗಾಡಲು ಬಿಟ್ಟಿದ್ದೇ ನಿರ್ಭಯಾ ಪೋಷಕರ ತಪ್ಪು ಎನ್ನುತ್ತೀರಲ್ಲ?? ನೀವು ಒಬ್ಬ ಪೋಷಕರಾಗಿ ಅತ್ಯಾಚಾರಿಗಳ ಪರವಾಗಿ ನಿಂತು ನಿರ್ಭಯಾ ಮತ್ತು ಆಕೆಯ ಕುಟುಂಬದವರ ನಡವಳಿಕೆಯನ್ನೇ ಪ್ರಶ್ನಿಸುತ್ತೀರಲ್ಲ?? ಹೋಗಲಿ, ನಿರ್ಭಯಾ ರಾತ್ರಿ ಸುತ್ತಾಡಲು ಹೊರಗೆ ಹೋಗಿದ್ದು ತಪ್ಪು ಎಂದಿಟ್ಟುಕೊಳ್ಳೋಣ. ಆದರೆ ಆಕೆಯನ್ನು ಅತ್ಯಾಚಾರ ಮಾಡಿ ಕೊಂದಿದ್ದು ಸರಿಯೇ??? ನಿಮ್ಮ ಹೆಂಡತಿ ಅಥವಾ ಮಕ್ಕಳು ರಾತ್ರಿ ಹೊತ್ತಲ್ಲಿ ಹೊರಗೆ ಹೋಗಬೇಕಾದ ಪರಿಸ್ಥಿತಿ ಬಂದರೆ ಇದೇ ನಿಲುವನ್ನು ಪ್ರಕಟಿಸುತ್ತೀರಾ ವಕೀಲ ಮಹಾಶಯರೇ??
ಹೆಣ್ಣೊಬ್ಬಳು ರಾತ್ರಿ ಹೊತ್ತಿನಲ್ಲಿ ಯಾವಾಗ ನಿರ್ಭೀತಿಯಿಂದ ಓಡಾಡುತ್ತಾಳೋ ಅವಾಗಲೇ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕ ಹಾಗೆ ಎಂದು ಬಾಪು ಹೇಳಿದ್ದರು. ಆದರೆ ಹೆಣ್ಣೊಬ್ಬಳನ್ನು ಇಳಿ ಸಂಜೆ ಹೊತ್ತಿನಲ್ಲಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ ಕಾಮಪಿಶಾಚಿಗಳ ಪರವಾಗಿ ವಾದಿಸಲು ಒಪ್ಪಿಗೊಂಡಿದ್ದೇ ದೊಡ್ಡ ತಪ್ಪು. ಅದರ ಮೇಲೂ ಈ ರೀತಿಯ ಹೇಳಿಕೆಗಳನ್ನು ಕೊಟ್ಟು ಸಂವಿಧಾನಕ್ಕೆ ಅಪಚಾರವೆಸಗುತ್ತಿರುವ ನಿಮ್ಮಂತಹ ವಕೀಲರಿಗೆ ನಮ್ಮ ಧಿಕ್ಕಾರ.ಇಂತಹ ಅನ್ಯಾಯ ಯಾವ ಹೆಣ್ಣು ಮಗಳಿಗೂ ಆಗದಿರಲಿ ಎಂಬುದೇ ನಮ್ಮ ಆಶಯ.
Facebook ಕಾಮೆಂಟ್ಸ್