X

ಇಷ್ಟು ದಿನ ಮಫ್ತಿಯಲ್ಲಿತ್ತೇ ಮುಫ್ತಿಯ ಸಹಾನುಭೂತಿ?

“ಕಾಶ್ಮೀರದಲ್ಲಿ ಇಷ್ಟು ಶಾಂತಿಯುತ ಮತ್ತು ಯಶಸ್ವೀ ಚುನಾವಣೆಗೆ ಪಾಕಿಸ್ತಾನದ ಮತ್ತು ಪ್ರತ್ಯೇಕತಾವಾದಿಗಳ ಬೆಂಬಲವೇ ಕಾರಣ, ಇದಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ.”

ಆಹಾ…!ಕಾಶ್ಮೀರದ ನೂತನ ಮುಖ್ಯಮಂತ್ರಿಗೆ ಅದೇನು ಉಪಕಾರ ಸ್ಮರಣೆ?! ಇದೂ ಸಾಲದೆಂಬಂತೆ ಪ್ರತ್ಯೇಕತಾವಾದಿ ಚಳುವಳಿಗಾರ, ನೂರಾರು ಜನರನ್ನು ಕೊಂದ ಕೊಲೆಗಾರ ದೇಶದ್ರೋಹಿ ಇಸರತ್ ಆಲಂನನ್ನು ಬಿಡುಗಡೆ ಮಾಡಲಾಗಿದೆ ಮತ್ತು ಇನ್ನೂ ಕೆಲವರನ್ನು ಬಿಡುಗಡೆ ಮಾಡುವ ಸಂಚು ರೂಪಿಸಲಾಗಿದೆ!

ಸಾರ್ಥಕವಾಯ್ತು. ನಮ್ಮ ಭದ್ರತಾಪಡೆಗಳು ಹಗಲಿರುಳು ದೇಶ ಕಾಯುವುದಕ್ಕೂ, ಜನ ನಿಮ್ಮನ್ನು ಆರಿಸಿರುವುದಕ್ಕೂಸಾರ್ಥಕವಾಯ್ತು! ಚುನಾವಣಾ ಸಮಯ ಬಿಡಿ, ನಿತ್ಯದ ದಿನಗಳಲ್ಲೂ ನಮ್ಮ ಭದ್ರತಾ ಪಡೆಗಳು ಸದಾ ಗುಂಡಿನ ದಾಳಿಯನ್ನು ಎದುರಿಸಲು ಸನ್ನಧ್ಧವಾಗಿರುತ್ತದೆ. ಮನೆ-ಮಠಬಿಟ್ಟು, ಬಿಸಿಲು ಮಳೆಯೆನ್ನದೆ, ಮೈ ಕೊರೆಯುವ ಚಳಿಯಲ್ಲೂ, ಹಸಿವೆಗೆ ಕ್ಯಾರೇ ಎನ್ನದೆ ಕೆಲಸ ಮಾಡುತ್ತವೆ ನಮ್ಮ ಭದ್ರತಾ ಪಡೆ. ಅಂತಹಾ ಭದ್ರತಾ ಪಡೆಗಳಿಗೆ ¸ಸಯ್ಯದ್ ಕೃತಜ್ಞರಾಗಿರುತ್ತಿದ್ದರೆ ಅದಕ್ಕೊಂದು ತೂಕ ಬರುತ್ತಿತ್ತು. ಕಾಶ್ಮೀರದ ಜನರೇನು ಇಡೀ ದೇಶದ ಜನರೇ ಹೆಮ್ಮೆ ಪಡುತ್ತಿದ್ದರು. ಅದು ಬಿಟ್ಟು ಪಾಕಿಸ್ತಾನ ಮತ್ತು ಪ್ರತ್ಯೇಕತಾವಾದಿಗಳನ್ನು ಹೊಗಳಿರುವುದೇಕೆ? ರಾಷ್ಟ್ರೀಯ ಹಿತಾಸಕ್ತಿಗಳ ವಿಚಾರದಲ್ಲಿ ಸಯೀದ್ ಎಷ್ಟು ಬಧ್ಧರಾಗಿದ್ದಾರೋ ಗೊತ್ತಿಲ್ಲ ಆದರೆ ತಮ್ಮ ಹೇಳಿಕೆಗಂತೂ ಇನ್ನೂ ಬಧ್ಧರಾಗಿಯೇ ಇದ್ದಾರೆ!

ಅಷ್ಟಕ್ಕೂ ಪ್ರತ್ಯೇಕತಾವಾದಿ ಉಗ್ರರಿಗೆ ಮತ್ತು ಪಾಕಿಸ್ತಾನಿಗಳಿಗೆ ಧನ್ಯವಾದ ಹೇಳುವ ಅಗತ್ಯವಾದರೂ ಏನಿತ್ತು? ಕಾಶ್ಮೀರವೇನಾದರೂ ಪಾಕಿಸ್ತಾನದ ಹಂಗಿನಲ್ಲಿದೆಯೇ? ಅಥವಾ ಮುಫ್ತಿ ಧನ್ಯವಾದ ಹೇಳಿಲ್ಲವೆಂದು ಪಾಕಿಸ್ತಾನದ ಪ್ರಧಾನಿ ಉಪವಾಸ ಧರಣಿ ಕುಳಿತಿದ್ದಾರೆಯೇ? ಇಲ್ಲಾ ಪ್ರತ್ಯೇಕತಾವಾದಿಗಳು ದೇಶ ತೊರೆಯುತ್ತೇವೆಂದು ಬೆದರಿಕೆ ಹಾಕಿದ್ದಾರೆಯೆ?(ತೊರೆದರೆ ಒಳ್ಳೆಯದೇ ಬಿಡಿ). ಐದು ವರ್ಷದ ಬಳಿಕ ಜನ ತನಗೆ ಮತ ಹಾಕಿದ್ದಾರೆಂದು ಅವರಿಗೆ ಕೃತಜ್ಞರಾಗುವುದು ಬಿಟ್ಟು, ಸರ್ಕಾರ ರಚಿಸಲು ನೆರವಾದ ಬಿಜೆಪಿಯನ್ನು ಅಭಿವೃಧ್ಧಿಯ ವಿಚಾರವಾಗಿ ಹೊಂದಾಣಿಸಿಕೊಂಡು ಹೋಗುವುದುಬಿಟ್ಟು, ಈ ನಾಟಕವೆಲ್ಲಾ ಯಾತಕ್ಕೆ? ಅಧಿಕಾರ ಬಂದೊಡನೆಯೇ ಭಾರತದ ಸಾರ್ವಭೌಮತ್ವಕ್ಕೆ ಕೊಡಲಿಯೇಟು ನೀಡುತ್ತೀರಿ ಎಂದಾದರೆ ನಿಮ್ಮನಿಷ್ಟೆ ಯಾರ ಪರವಾಗಿ? ಭಾರತಕ್ಕೋ ಪಾಕಿಸ್ತಾನಕ್ಕೋ?

ಗಾಯದ ಮೇಲೆ ಬರೆ ಎಳೆದಂತೆ 122 ಜನರನ್ನು ಕೊಂದ, ದೇಶದ್ರೋಹಿ ಇಸರತ್ ಆಲಂನನ್ನು ಬಿಡುಗಡೆ ಮಾಡಲಾಗಿದೆ. ಇನ್ನೂ ಕೆಲವರನ್ನು ಲಿಸ್ಟ್ ಮಾಡಲಾಗಿದೆ. ನಮ್ಮ ಪೋಲೀಸರು ಹಗಲು ರಾತ್ರಿ ಕಷ್ಟಪಟ್ಟು ಬಂಧಿಸಿದ ದುಷ್ಟರನ್ನು ಒಂದೇ ಒಂದು ಕ್ಯಾಬಿನೇಟ್ ಮೀಟಿಂಗ್ ನಲ್ಲಿ  ಬಿಡುಗಡೆ ಮಾಡಿ ಬಿಡಿ. ಒಳ್ಳೆಯ ಕೆಲಸವೇ, ಯಾಕೆಂದರೆ ನಿಮ್ಮ ಇಂತಹಾ ನಿರ್ಧಾರಗಳಿಂದ ನಮ್ಮ ಪೋಲೀಸರಿಗೆ ಇನ್ನೂ ಹೆಚ್ಚು ಹೆಚ್ಚು ಕಳ್ಳರನ್ನು ಕೊಲೆಗಡುಕರನ್ನು ಮತ್ತು ಭಯೋತ್ಪಾದಕರನ್ನು ಹಿಡಿಯಲು ಉತ್ತೇಜನ ಸಿಗುತ್ತದೆ! ಮತ್ತು ಅಂತಹಾ ಅಪರಾಧಿಗಳಿಗೆ ಇನ್ನೂ ಅಂತಹಾ ಕೆಲಸಗಳನ್ನು ಮಾಡಲು ಸ್ಪೂರ್ತಿ ಸಿಗುತ್ತದೆ.! ಸಯೀದ್ ಈ ವಿಷಯದಲ್ಲಿ ಅಖಿಲೇಶ್ ಸಿಂಗ್ ಯಾದವ್ರರಿ೦ದ ಸ್ಪೂರ್ತಿ ಪಡೆದಂತೆ ಕಾಣುತ್ತಿದೆ.

ಅಲ್ಲಾ ಬಿಡುಗಡೆಯಾದ ಬಳಿಕ ಆಲಂನಂತವರು ಸುಮ್ಮನೆ ಕೂರುತ್ತಾರಾ? ದೇವರಾಣೆಗೂ ಇಲ್ಲ. ಮತ್ತೆ ಕಾಶ್ಮೀರ ಪಾಕಿಸ್ತಾನದ ಪಾಲಾಗಬೇಕೆಂದು ಕೂಗೆಬ್ಬಿಸುತ್ತಾರೆ. ಪ್ರತ್ಯೇಕತೆಯ ಹೆಸರಿನಲ್ಲಿ ಅಮಾಯಕರ ಜೀವ ತೆಗೆಯುತ್ತಾರೆ. ವಿರೋಧಿಸಿದ ದೇಶಪ್ರೇಮಿಗಳ ಮೇಲೆ ಜಿಹಾದಿ ನಡೆಸುತ್ತಾರೆ. ಉಗ್ರವಾದ, ವಿಧ್ವಂಸಕ ಕೃತ್ಯಗಳ ಮೂಲಕ ದೇಶದೆಲ್ಲೆಡೆ ಅಶಾಂತಿ ಸೃಷ್ಟಿಸುತ್ತಾರೆ. ಬಹುಶಃ ¸ಸಯ್ಯದ್ ಬೇಕಾಗಿರುವುದೂ ಇದೇ ಇರಬೇಕು. ಮೊದಲೆ ಅಶಾಂತಿಯ ಕರಿ ನೆರಳಿನಲ್ಲಿ ಬದುಕುತ್ತಿರುವ ಕಾಶ್ಮೀರದ ಬಡ ಜೀವಗಳಿಗೆ ಶಾಂತಿಯನ್ನು ಮರೀಚಿಕೆಗೊಳಿಸುವುದಕ್ಕಾಗಿಯೆ ಸಯೀದ್ ಬಂದಿರಬೇಕು. ಇಲ್ಲದಿದ್ದರೆ ಹಲವಾರು ಕೇಸುಗಳ ಸರದಾರನಾದ, ದೇಶದ ಸಾರ್ವಭೌಮತ್ವಕ್ಕೆ ಸವಾಲೆಸೆಯುವಂತಹ ಕುನ್ನಿನಾಯಿ ಆಲಂನನ್ನು ಬಿಡುಗಡೆಮಾಡುತ್ತಿದ್ದರೇ? ಪ್ರತ್ಯೇಕತೆಯ ಪರವಾಗಿ ವಾದಿಸುತ್ತಿರುವವನಿಗೆ ಸಯೀದ್ ಬೆಂಬಲಿಸುತ್ತಾರಾದರೆ, ಪ್ರತ್ಯೇಕತೆಯ ವಿಚಾರವಾಗಿ ¸ಸಯ್ಯದ್ ಸ್ಪಷ್ಟ ನಿಲುವೇನು? ಭಾರತದ ಸಾರ್ವಭೌಮತ್ವಕ್ಕೆ ಒಳಪಟ್ಟ ರಾಜ್ಯವೊಂದರ ಮುಖ್ಯಮಂತ್ರಿಯಾಗಿ ಶತ್ರು ದೇಶವನ್ನು ಹೊಗಳುತ್ತೀರಿ ಅಂದ ಮಾತ್ರಕ್ಕೆ ಕಾಶ್ಮಿರದಲ್ಲಿ ಶಾಂತಿ ನೆಲೆಸುವುದಿಲ್ಲ. ನಿಮ್ಮಂತ third rated ರಾಜಕಾರಣಿಗಳು ಅವಮಾನಿಸುತ್ತೀರಿ ಎಂದ ಮಾತ್ರಕ್ಕೆ ನಮ್ಮ ಸೈನಿಕರು ದೇಶ ಸೇವೆ ಮಾಡುವುದನ್ನು ನಿಲ್ಲಿಸುವುದಿಲ್ಲ. ಆದರೆ ಚುನಾವಣೆಗೆ ಮುನ್ನವೇ ಏಕೆ ಈ ಎಲ್ಲಾ ವಿಷಯಗಳನ್ನು ಜನರ ಮುಂದಿಡಲಿಲ್ಲಾ? ಇಷ್ಟು ದಿನ ಮಫ್ತಿಯಲ್ಲಿತ್ತೇ ಮುಫ್ತಿಯ ಸಹಾನುಭೂತಿ?!

ಇದೇನು ಮೊದಲಲ್ಲ. ¸ಸಯ್ಯದ್ ಅಂತಹ ಒಲೈಕೆಯ ರಾಜಕಾರಣಿಗಳನ್ನು ದೇಶ ನಿತ್ಯವೂ ಕಾಣುತ್ತಿದೆ. ಉಳಿದವರು ಜಾತ್ಯಾತೀತೆಯ ಮುಖವಾಡ ಧರಿಸಿಕೊಂಡು ಮಾಡುತ್ತಿದ್ದರೆ, ಸಯೀದ್ ನೇರವಾಗಿಯೇ ಮಾಡುತ್ತಿದ್ದಾರೆ. ಒಂದೇ ಒಂದು ಸಂತೋಷದ ವಿಷಯವೇನೆಂದರೆ ಪಿಡಿಪಿ ಈ ಭಾರಿ ಬಿಜೆಪಿ ಜತೆಗೂಡಿ ಸರ್ಕಾರ ರಚಿಸಿದೆ. ಮೊದಲ ಭಾರಿ ಕಾಶ್ಮೀರದಲ್ಲಿ ಬಿಜೆಪಿ ಸರ್ಕಾರದ ಭಾಗವಾಗಿರುವುದರಿಂದ ಬೆಟ್ಟದಷ್ಟು ನಿರೀಕ್ಷೆಗಳು ಸಯೀದ್ ಸರ್ಕಾರದ ಮೇಲಿದೆ. ಪ್ರಧಾನ ಮಂತ್ರಿಗಳ ‘ಕಾಶ್ಮೀರಿ ಪಂಡಿತರ ಪುನರ್ವಸತಿ ಯೋಜನೆ’, ಉಗ್ರವಾದದ ಮೂಲೋತ್ಪಾಟನೆಯಂತಹ ಮಹತ್ವದ ಕೆಲಸಗಳು ಬೇಕಾದಷ್ಟಿವೆ. ಅದರ ಬಗ್ಗೆ ಗಮನಹರಿಸಿ ಸ್ವಾಮಿ ಮೊದಲು. ಮುಖ್ಯಮಂತ್ರಿಯಾಗಿ ಕಾಶ್ಮೀರದ ಅಭಿವೃದ್ದಿಯ ಕುರಿತಾಗಿ ನಿಮ್ಮ ಯೊಜನೆಗಳನ್ನು ಜನರಿಗೆ ತಿಳಿಯಪಡಿಸಿ ಅದಕ್ಕೆ ಬಧ್ಧರಾಗಿ ಕೆಲಸ ಮಾಡಿ, ಜನ ನಿಮ್ಮನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಇಲ್ಲದಿದ್ದರೆ ಒಂದು ವೇಳೆ ನಿಮ್ಮ ಸರ್ಕಾರ ಐದು ವರ್ಷ ಪೂರೈಸಿದರೂ ಮುಂದಿನ ಚುನಾವಣೆಯಲ್ಲಿ ಜನ ಪಾಠ ಕಲಿಸುತ್ತಾರೆ ಅಷ್ಟೆ!

Facebook ಕಾಮೆಂಟ್ಸ್

Shivaprasad Bhat: Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.
Related Post