ಈಗ ಕೆಲ ದಿನಗಳಿಂದ ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಪಟ್ಟ ‘Cancer industry not looking for cure; they are too busy making money’ ಎನ್ನುವ ಲೇಖನವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕ್ಯಾನ್ಸರ್ ಚಿಕಿತ್ಸೆ ಎನ್ನುವುದು ಒಂದು ದೊಡ್ಡ ಬ್ಯುಸಿನೆಸ್ ಎನ್ನುವಂತಹ ಲೇಖನ. ಈ ರೀತಿಯ ಲೇಖನ ಇದೇನು ಮೊದಲ ಬಾರಿ ಬಂದಿದ್ದಲ್ಲ. ಸಾಕಷ್ಟು ವರ್ಷಗಳಿಂದ ಇಂತಹ ಲೇಖನಗಳು ಬರುತ್ತಲೇ ಇದೆ. ಕ್ಯಾನ್ಸರಿಗಿಂದ ಅದರ ಚಿಕಿತ್ಸೆ ಹೆಚ್ಚು ಮಾರಕವಾಗಿದೆ ಎನ್ನುವುದು ಸತ್ಯವೂ ಹೌದು. ಅದಕ್ಕೆ ಉದಾಹರಣೆಗಳೂ ಸಾಕಷ್ಟಿವೆ. ಅದೊಂದು ಬ್ಯುಸಿನೆಸ್ಸ್ ಎನ್ನುವುದೂ ಕೂಡ ಅಷ್ಟೇ ನಿಜ. ಇಷ್ಟೆಲ್ಲಾ ಗೊತ್ತಿದ್ದರೂ ಅದೇ ಚಿಕಿತ್ಸಾಕ್ರಮ ಇನ್ನೂ ನಡೆದುಕೊಂಡು ಬಂದಿದೆ. ಎಷ್ಟೋ ಬಾರಿ ನಾವು ಭಯಪಡುವುದು ಕ್ಯಾನ್ಸರ್ ಬಗ್ಗೆಯಾ ಅಥವಾ ಅದರ ಚಿಕಿತ್ಸೆ ಬಗ್ಗೆಯಾ ಎಂಬ ಪ್ರಶ್ನೆಯನ್ನೂ ಕೇಳಿಕೊಂಡಿದ್ದಿದೆ. ಕೀಮೋ ಈಸ್ ಕಿಲ್ಲಿಂಗ್ ಪೀಪಲ್, ನಾಟ್ ಕ್ಯಾನ್ಸರ್ ಎಂದು ಕೆಲ ಡಾಕ್ಟರ್’ಗಳೇ ಹೇಳಿಬಿಟ್ಟಿದ್ದಾರೆ. ನಾನು ಸ್ವತಃ ನೋಡಿದ ಸತ್ಯವಿದು.
ಸುಮಾರು ಒಂದೂವರೆ- ಎರಡು ವರ್ಷಗಳ ಹಿಂದೆ ನಡೆದ ಘಟನೆ. ೧೮-೧೯ ವರ್ಷದ ಹುಡುಗಿಯೊಬ್ಬಳು ಮೆಸೇಜ್ ಮಾಡಿದ್ದಳು. ಆಕೆಗೆ ಆಸ್ಟಿಯೋ ಸರ್ಕೋಮ ಆಗಿ ಅದಾಗ ತಾನೆ ಗುಣಮುಖಳಾಗುತ್ತಿದ್ದು, ತನ್ನ ಬಗ್ಗೆ ಹೇಳಿಕೊಂಡು, ಮುಂದೆ ಹೇಗಿರಬೇಕು? ಪೂರ್ತಿ ಸರಿಯಾಗುವುದಕ್ಕೆ ಎಷ್ಟು ದಿನ ಬೇಕು? ಎಲ್ಲ ಮೊದಲಿನ ಹಾಗೆ ನಾರ್ಮಲ್ ಆಗತ್ತಾ ಎಂದೆಲ್ಲ ಕೇಳಿದ್ದಳು. ನಿಧಾನವಾಗಿ ಹೊಸ ಬದುಕಿಗೆ ಹೊಂದಿಕೊಳ್ಳಲಾರಂಭಿಸಿದ್ದಳು ಕೂಡ. ಆದರೆ ಇದಾಗಿ ಕೆಲ ತಿಂಗಳುಗಳ ನಂತರ ಮತ್ತೆ ಮೆಸೇಜ್ ಮಾಡಿದ್ದಳು, “ನಿಮಗೆ ಕೀಮೋನಿಂದಾಗಿ ಏನಾದರೂ ಸೈಡ್ ಎಫೆಕ್ಟ್ ಆಗಿತ್ತಾ?” ಎಂದು. ಯಾವ ರೀತಿಯ ಸೈಡ್ ಎಫೆಕ್ಟ್ ಎಂದು ಕೇಳಿದಾಗ ಹೇಳಿದ್ದಳು, ಆಕೆಗೆ ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳಲಾರಂಭಿಸಿತ್ತು. ಸರಿಯಾಗಿ ಏನೂ ತಿನ್ನಲೂ ಆಗುತ್ತಿರಲಿಲ್ಲ. ಡಾಕ್ಟರ್ ಬಳಿ ಕೇಳಿದಾಗ ಕೀಮೊನಿಂದಾಗಿ ಕೆಲವೊಮ್ಮೆ ಈ ರೀತಿ ಆಗುತ್ತದೆ ಎಂದರಂತೆ. ಅದಕ್ಕೆ ಒಂದಿಷ್ಟು ಮೆಡಿಸಿನ್ ತೆಗೆದುಕೊಳ್ಳುತ್ತಿದ್ದಳು. ಇದಾಗಿ ಸುಮಾರು ಮೂರ್ನಾಲ್ಕು ತಿಂಗಳಲ್ಲಿ ಆಕೆ ಸಾವನ್ನಪ್ಪಿದಳು ಎನ್ನುವ ಸುದ್ದಿ ಬಂತು. ಆಕೆಯ ಸಾವಿಗೆ ಕಾರಣ ಕ್ಯಾನ್ಸರ್ ಆಗಿರಲಿಲ್ಲ, ಕೀಮೋ ಆಗಿತ್ತು. ಸ್ಟೆಫ್ಯಾನಿ ಜಿಮ್ಮರ್ಮನ್ ಎಂಬಾಕೆ ಚಿಕ್ಕವಯಸ್ಸಿನಲ್ಲೇ ಕ್ಯಾನ್ಸರ್’ಗೆ ಒಳಗಾಗಿ ಕೀಮೋ, ರೇಡಿಯೇಷನ್ ಪಡೆದುಕೊಂಡಿದ್ದಳು. ಅದರ ಪರಿಣಾಮ ಗೊತ್ತಾಗಿದ್ದು ಮಾತ್ರ ಸುಮಾರು ೧೫ ವರ್ಷಗಳ ನಂತರ, ಹೃದಯಕ್ಕೆ ತೊಂದರೆಯಾಗಿ ಹಾರ್ಟ್ ಟ್ರಾನ್ಸ್’ಪ್ಲಾಂಟ್ ಮಾಡಿಸಿಕೊಳ್ಳುವಂತಾಯ್ತು. ಕಾರಣ ರೇಡಿಯೇಷನ್ ಎಂದರು ಡಾಕ್ಟರ್’ಗಳು. ಇಂತಹ ಸಾಕಷ್ಟು ಉದಾಹರಣೆಗಳು ಸಿಗುತ್ತದೆ ಕ್ಯಾನ್ಸರ್ ಚಿಕಿತ್ಸೆಯ ಅವಾಂತರಗಳ ಬಗ್ಗೆ. ಇದರ ಮಧ್ಯೆ ಕ್ಯಾನ್ಸರ್ ಚಿಕಿತ್ಸೆಯೇ ಕಾರ್ಸಿನೋಜೆನಿಕ್ ಆಗಿದೆ ಎನ್ನುತ್ತಾರೆ. ಅಂದರೆ ಮತ್ತೆ ಕ್ಯಾನ್ಸರ್’ನ್ನು ಉಂಟುಮಾಡುವಂತದ್ದು ಎಂದು. ಅಲ್ಲಿಗೆ ನಾವು ಕ್ಯಾನ್ಸರ್’ಗೆ ಚಿಕಿತ್ಸೆ ಪಡೆಯುತ್ತಿದ್ದೇವಾ ಅಥವಾ ಅದನ್ನ ಉಲ್ಬಣಗೊಳ್ಳುವಂತೆ ಮಾಡಿಕೊಳ್ಳುತ್ತಿದ್ದೇವಾ ಎನ್ನುವ ಪ್ರಶ್ನೆಯೂ ಕಾಡುತ್ತದೆ. ಅಥವಾ ಅದಕ್ಕೂ ಮಿಗಿಲಾಗಿ ಯಾರದ್ದೋ ಬ್ಯುಸಿನೆಸ್ ಹೆಚ್ಚಿಸುತ್ತಿದ್ದೇವಾ ಅನ್ನುವುದು ಕೂಡ ಪ್ರಶ್ನೆಯೇ!
ಕ್ಯಾನ್ಸರ್’ಗೆ ಈಗೇನು ಸ್ಟ್ಯಾಂಡರ್ಡ್ ಚಿಕಿತ್ಸೆ ಇದೆ, ಅದು ಸರ್ಜರಿ, ಕೀಮೋ ಮತ್ತು ರೇಡಿಯೇಷನ್. ಪ್ರಪಂಚದ ಯಾವುದೇ ಮೂಲೆಗೆ ಹೋದರೂ ಇದೇ ಚಿಕಿತ್ಸೆಯನ್ನೇ ಹೇಳುವುದು. ಈ ಚಿಕಿತ್ಸಾ ಕ್ರಮ ಆರಂಭಗೊಂಡು ದಶಕಗಳೇ ಕಳೆದುಹೋಗಿದೆ. ‘ಕ್ಯಾನ್ಸರ್ ವಿರುದ್ಧ ಯುದ್ಧ’ ಎಂದೆಲ್ಲಾ ಸಾರಿ ಬಿಲಿಯನ್’ಗಟ್ಟಲೇ ಹಣ ಸುರಿದಿದ್ದಾರೆ. ಆದರೂ ಅದು ನಿಯಂತ್ರಣಕ್ಕೆ ಸಿಕ್ಕಿಲ್ಲ, ಬದಲಾಗಿ ಇನ್ನಷ್ಟು ಹೆಚ್ಚಾಗುತ್ತಲೇ ಇದೆ. ಕ್ಯಾನ್ಸರ್’ಗೆ ಈಗಿರುವ ಚಿಕಿತ್ಸೆ ವಿಫಲಗೊಂಡಿದೆ ಎಂದು ಕೆಲವರು ಅಂದರೆ, ಒಂದು ಹಂತಕ್ಕಷ್ಟೇ ಕೆಲಸ ಮಾಡಿದೆ ಎನ್ನುತ್ತಾರೆ. ‘ಕ್ಯಾನ್ಸರ್ ಎಂದರೆ ಇಷ್ಟು ಭಯ ಯಾಕೆ? ಯಾಕೆಂದರೆ ಈ ಚಿಕಿತ್ಸೆ ಕೆಲಸ ಮಾಡುವುದಿಲ್ಲ ಎಂದು ಎಲ್ಲರಿಗೂ ಗೊತ್ತು’ ಎಂದವರಿದ್ದಾರೆ. ಹಾಗಂತ ಕ್ಯಾನ್ಸರ್ ಬಗ್ಗೆ ಸಂಶೋಧನೆಗಳಾಗುತ್ತಿಲ್ಲವಾ ಅಂದರೆ ಬೇಕಾದಷ್ಟು ಆಗುತ್ತಿದೆ. ಆದರೂ ಯಾವುದೂ ಕೂಡ ಈಗಿರುವ ಚಿಕಿತ್ಸೆಯನ್ನು ಸಂಪೂರ್ಣವಾಗಿ ಬದಿಗೊತ್ತುವಷ್ಟು ಸಫಲವಾಗಿಲ್ಲ ಅಥವಾ ಸಫಲವಾಗಲು ಬಿಡುತ್ತಿಲ್ಲ ಅಂತಲೂ ಹೇಳಬಹುದೇನೋ?
‘ಕಟ್ ಪಾಯ್ಸನ್ ಬರ್ನ್’ (ಸರ್ಜರಿ, ಕೀಮೋ, ರೇಡಿಯೇಷನ್’ನ್ನು ಸೂಚಿಸುತ್ತದೆ) ಎನ್ನುವ ಡಾಕ್ಯುಮೆಂಟರಿಯಿದೆ. ಕ್ಯಾನ್ಸರ್ ಚಿಕಿತ್ಸೆಯ ಹೆಸರಿನಲ್ಲಿ ಎಂತಹ ದೊಡ್ಡ ಬ್ಯುಸಿನೆಸ್ಸ್ ನಡೆಯುತ್ತಿದೆ ಎನ್ನುವುದನ್ನ ಹೇಳುತ್ತದೆ. ಅದರಲ್ಲೊಂದು ಪ್ರಶ್ನೆ ಕೇಳುತ್ತಾರೆ, ಅಮೆರಿಕನ್ ಕ್ಯಾನ್ಸರ್ ಸೊಸೈಟಿ ಇರುವುದು ಜನರಿಗಾಗಿಯೋ ಅಥವಾ ಕಾರ್ಪೊರೇಟ್ ಅಮೆರಿಕಾಗಾಗಿಯೋ ಎಂದು. ಅಮೆರಿಕನ್ ಕ್ಯಾನ್ಸರ್ ಸೊಸೈಟಿ ಒಂದು ನಾನ್-ಪ್ರಾಫಿಟ್ ಆರ್ಗನೈಸೇಷನ್. ಸರಿಯಾಗಿ ಹೇಳಬೇಕೆಂದರೆ ಅತ್ಯಂತ ಶ್ರೀಮಂತ ನಾನ್-ಪ್ರಾಫಿಟ್ ಆರ್ಗನೈಸೇಷನ್’ಗಳಲ್ಲಿ ಒಂದು. ಇನ್ನು ಈ ಕ್ಯಾನ್ಸರ್ ಸೊಸೈಟಿ ನಿಜವಾಗಿಯೂ ಯಾರನ್ನ ಪ್ರತಿನಿಧಿಸುತ್ತದೆ ಎನ್ನುವ ಪ್ರಶ್ನೆಗೆ ಉತ್ತರ ಅಲ್ಲಿಗೆ ಫಂಡಿಂಗ್ ಎಲ್ಲಿಂದ ಬರುತ್ತಿದೆ ಎನ್ನುವಲ್ಲಿದೆ. ಈ ಕ್ಯಾನ್ಸರ್ ಸೊಸೈಟಿ ಇರುವುದೇನೋ ಕ್ಯಾನ್ಸರ್ ರೋಗಿಗಳಿಗಾಗಿ ಹಾಗೂ ಕ್ಯಾನ್ಸರ್ ನಿರ್ಮೂಲನೆಗೆಂದು. ಅದಕ್ಕೆ ಫಂಡಿಂಗ್ ದೊಡ್ಡ ದೊಡ್ಡ ಕಾರ್ಪೊರೇಷನ್’ಗಳಿಂದ ಬರುತ್ತದೆ ಅದರಲ್ಲಿ ‘ಬಿಗ್ ಟೊಬ್ಯಾಕೋ’ ಎಂಬ ಹೆಸರೂ ಇದೆ. ಹೌದು, ಟೊಬ್ಯಾಕೊ ಇಂಡಸ್ಟ್ರಿಗಳು ಕ್ಯಾನ್ಸರ್ ಸೊಸೈಟಿಗೆ ಫಂಡಿಂಗ್ ಮಾಡುತ್ತಿವೆ. ಅಂದಹಾಗೇ ಇದೇ ಅಮೆರಿಕನ್ ಕ್ಯಾನ್ಸರ್ ಸೊಸೈಟಿ ಈ-ಸಿಗರೇಟ್’ನ್ನು ಸಮರ್ಥಿಸಿಕೊಂಡಿದೆ!! ಬಿಗ್ ಟೊಬ್ಯಾಕೋ ಹಾಗೂ ಕ್ಯಾನ್ಸರ್ ಸೊಸೈಟಿಯ ಸಂಬಂಧ ಈಗಿನದಲ್ಲ, ಇದು ಆರಂಭವಾದ ಕಾಲದಿಂದಲೂ ಇದೆ ಎನ್ನುವವರೂ ಇದ್ದಾರೆ. ಇದನ್ನೇ ತಾನೆ ಮೇಲೆ ಉಲ್ಲೇಖಿಸಿದ ಲೇಖನ ಹೇಳ ಹೊರಟಿದ್ದು. ಅವರುಗಳಿಗೆ ಕ್ಯಾನ್ಸರ್’ಗೆ ಪರಿಹಾರ ಬೇಕಾಗಿಲ್ಲ, ಹಣ ಸಿಕ್ಕರೆ ಸಾಕು.
ಇವೆಲ್ಲದರ ಮಧ್ಯೆ ಕ್ಯಾನ್ಸರ್ ರೋಗಿಯ ಗೋಳು ಕೇಳುವವರಾರು? ಇವರ ಮುಖವಾಡ ಕಳಚುವ ಲೇಖನಗಳು, ಡಾಕ್ಯುಮೆಂಟರಿಗಳು ಒಳ್ಳೆಯ ಕೆಲಸವನ್ನೇ ಮಾಡುತ್ತಿದೆ, ಇದರ ಅವಶ್ಯಕತೆಯೂ ಇದೆ. ಇಂತಹದ್ದೊಂದು ಮೋಸ ನಡೆಯುತ್ತಿದೆ ಎಂದು ಅರಿವು ಮೂಡಿಸುವ ಅಗತ್ಯವಿದೆ. ಆದರೆ ಇದರಿಂದ ಕ್ಯಾನ್ಸರ್ ರೋಗಿಯ ಸ್ಥಿತಿ ಬದಲಾಗಿಲ್ಲ ಎನ್ನುವುದೂ ಕೂಡ ಸತ್ಯವೇ! ಕೀಮೋ ವಿಷ ಎನ್ನುವುದರಲ್ಲಿ ಯಾರಿಗೂ ಸಂಶಯವೇ ಇಲ್ಲ. ಆದರೂ ಆ ವಿಷವನ್ನೇ ಸಾವಿರಗಟ್ಟಲೇ ಹಣ ನೀಡಿ ಪಡೆಯುತ್ತಿದ್ದೇವೆ. ಹಾಗಂತ ಕ್ಯಾನ್ಸರ್’ಗೆ ಪರ್ಯಾಯ ಚಿಕಿತ್ಸೆ ಇಲ್ಲವಾ ಅಂದರೆ, ಹಾಗೇನಿಲ್ಲ. ಇದೆ. ಆಯುರ್ವೇದ, ಹಳ್ಳಿ ಔಷಧಿ ಅಂತೆಲ್ಲ ಒಂದಿಷ್ಟಿದೆ. ಆದರೆ ಪೂರ್ತಿಯಾಗಿ ಅದನ್ನೇ ನಂಬಿಕೊಂಡು ಕೂರುವಷ್ಟು ಧೈರ್ಯವಿದೆಯಾ? ಇಲ್ಲ. ಕೀಮೋ ವಿಷ, ಇದೆಲ್ಲ ಬ್ಯುಸಿನೆಸ್ ಅಂತ ಲೇಖನಗಳನ್ನ ಓದಿಕೊಂಡ ನಾವು, ಕ್ಯಾನ್ಸರ್ ರೋಗಿಯ ಬಳಿ ಇದನ್ನು ತೆಗೆದುಕೊಳ್ಳಲೇಬೇಡಿ ಎಂದು ಹೇಳುವ ಅಧಿಕಾರ ಅಥವಾ ಧೈರ್ಯ ನಮಗಿದೆಯ? ಅದೂ ಇಲ್ಲ. ಕ್ಯಾನ್ಸರ್ ಎಂದು ತಿಳಿದ ತಕ್ಷಣ ಆ ವ್ಯಕ್ತಿಯ ತಲೆಯಲ್ಲಿ ನೂರು ಪ್ರಶ್ನೆಗಳಿರುತ್ತವೆ. ಬದುಕುಳಿಯಲು ಏನೇನು ಮಾಡಬಹುದೋ ಅದೆಲ್ಲವನ್ನೂ ಮಾಡುವ ಹಂಬಲವೂ ಇರುತ್ತದೆ. ಹಾಗಾಗಿ ಪರ್ಯಾಯ ಚಿಕಿತ್ಸೆಯ ಬಗ್ಗೆಯೂ ಆತ ಖಂಡಿತ ಯೋಚಿಸುತ್ತಾನೆ. ಆದರೆ ಅದರ ಜೊತೆ ‘ಇದು ಖಂಡಿತವಾಗಿ ಗುಣಪಡಿಸಬಹುದಾ?’ ಎನ್ನುವ ಪ್ರಶ್ನೆಯೂ ಇರುತ್ತದೆ. ಹಾಗಂತ ಕೀಮೋ ವಿಷಯದಲ್ಲಿ ಅಂತಹ ಗ್ಯಾರಂಟಿ ಇರುತ್ತದಾ ಅಂದರೆ ಅದೇನು ಇರುವುದಿಲ್ಲ. ಆದರೆ ಅದು ಜಗತ್ತಿನವರೆಲ್ಲ ಒಪ್ಪಿಕೊಂಡ ಸ್ಟ್ಯಾಂಡರ್ಡ್ ಥೆರಪಿ. ಜೊತೆಗೆ ಪರ್ಯಾಯ ಚಿಕಿತ್ಸೆಗಳು ಕೆಲವೊಮ್ಮೆ ದೇಹದ ಮೇಲೆ ನಿಧಾನಗತಿಯಲ್ಲಿ ಪರಿಣಾಮ ಬೀರುತ್ತದೆ, ಆ ನಡುವೆ ಕ್ಯಾನ್ಸರ್ ಉಲ್ಬಣಿಸಿದರೆ ಅಥವಾ ಬೇರೆ ಕಡೆ ಹರಡಿದರೆ ಎನ್ನುವ ಚಿಂತೆ ಬೇರೆ. ಇದೆಲ್ಲ ಯೋಚಿಸಿದ ಮೇಲೆ ಆತ ಮತ್ತೆ ಕೀಮೋ, ಸರ್ಜರಿ, ರೇಡಿಯೇಷನ್ ಎಂದು ಅದಕ್ಕೆ ಅನಿವಾರ್ಯವಾಗಿ ತಲೆಬಾಗಲೇಬೇಕಾಗುತ್ತದೆ. ಹೇಗೂ ಇದರಿಂದ ಗುಣಮುಖರಾದವರು ಸಾಕಷ್ಟು ಜನ ಇದ್ದಾರಲ್ಲ, ಹಾಗಾಗಿ ಇದನ್ನು ಮೊದಲು ಮಾಡಿ, ನಂತರ ಪರ್ಯಾಯ ಚಿಕಿತ್ಸೆ ಮಾಡಿಕೊಂಡರಾಯಿತು ಎಂದು. ಹಾಗೆ ಯೋಚಿಸುವುದು ತಪ್ಪೂ ಅಲ್ಲ. ಎಷ್ಟೇ ವಿಷವಾಗಿರಲಿ, ಎಂತಹ ಅಡ್ಡ ಪರಿಣಾಮಗಳಿರಲಿ, ಬದುಕುಳಿದರೆ ಸಾಕು ಎನ್ನುವ ಭಾವವೊಂದಿರುತ್ತಲ್ಲ! ‘ಕಟ್ ಪಾಯ್ಸನ್ ಬರ್ನ್’ ಡಾಕ್ಯುಮೆಂಟರಿಯಲ್ಲಿ ಒಬ್ಬಾಕೆ ಹೇಳಿದ್ದಾಳೆ, ‘ಕ್ಯಾನ್ಸರ್ ಬಗ್ಗೆ ಎಷ್ಟು ಭಯವನ್ನು ಹುಟ್ಟುಹಾಕಲಾಗಿದೆಯೆಂದರೆ, ಅದಕ್ಕಾಗಿ ಏನೂ ಮಾಡಲೂ ಸಿದ್ಧ ಎನ್ನುವ ಮಟ್ಟಿಗೆ ಜನರನ್ನ ತರಲಾಗಿದೆ’ ಎಂದು. ನಿಜ! ಆದರೆ ಇಷ್ಟೆಲ್ಲಾ ಗೊತ್ತಾದಮೇಲೂ ನಮ್ಮ ಬಳಿ ಇದಕ್ಕೆ ಉತ್ತರವಿಲ್ಲ. ಒಂದಿಷ್ಟು ಶಪಿಸೋಣ ಅಂದರೆ ಯಾರನ್ನ? ಇಂತಹ ಅನಿವಾರ್ಯತೆ ಹುಟ್ಟುಹಾಕಿದ ಕ್ಯಾನ್ಸರ್ ಎಂಬ ಖಾಯಿಲೆಯನ್ನ? ಅಥವಾ ನಮ್ಮ ಅನಿವಾರ್ಯತೆಯನ್ನ ಬಂಡವಾಳ ಮಾಡಿಕೊಂಡು ಹಣ ಮಾಡಿಕೊಳ್ಳುತ್ತಿರುವವರನ್ನಾ? ಅಥವಾ ಇಷ್ಟೆಲ್ಲಾ ಗೊತ್ತಿದ್ದು, ಭಯದಿಂದ ಹೊರಬರಲಾಗದೇ ಇರುವ ನಮ್ಮ ಪರಿಸ್ಥಿತಿಯನ್ನ? ಕೊನೆಗೆ ಇದಕ್ಕೂ ನಮ್ಮ ಬಳಿ ಉತ್ತರವಿಲ್ಲ. ನಮ್ಮ ನೋವು, ಅಸಹಾಯಕತೆ ಯಾರದ್ದೋ ಬ್ಯುಸಿನೆಸ್’ನ ಲಾಭಗಳಿಕೆಯ ಮಾಧ್ಯಮವಷ್ಟೇ ಆಗಿದೆ ಎಂದರೆ ನಮ್ಮ ಸಮಾಜ ಯಾವ ಕಡೆ ಸಾಗಿದೆ ಅಂತ ವಿಚಾರ ಮಾಡಬೇಕಿದೆ, ಇದಕ್ಕೊಂದು ಶಾಶ್ವತ ಪರಿಹಾರ ಸಿಗದಿದ್ದರೆ, ಮುಂದೆ ಇವರುಗಳೇ ನಮ್ಮನ್ನ ಆಳುವುದಕ್ಕೆ ಶುರುಮಾಡುತ್ತಾರೆ. ಆದರೆ ಆ ಶಾಶ್ವತ ಪರಿಹಾರ ಹೇಗೆ? ಯಾರಿಂದ ಎಂದರೆ ಅದಕ್ಕೂ ಸದ್ಯ ಮೌನವೇ ಉತ್ತರ!
Facebook ಕಾಮೆಂಟ್ಸ್