X

‘ಪರ್ವತದಲ್ಲಿ ಪವಾಡ’

‘ಪರ್ವತದಲ್ಲಿ ಪವಾಡ’: ಕನ್ನಡಕ್ಕೆ: ಸಂಯುಕ್ತಾ ಪುಲಿಗಲ್

(ಆಂಡಿಸ್ ಹಿಮಪರ್ವತಶ್ರೇಣಿಯಲ್ಲಿ ಕಳೆದ ೭೨ ದಿನಗಳ ರೋಚಕ ಅನುಭವ ಕಥನ)

ಮುದ್ರಣವರ್ಷ: ೨೦೧೭, ಪುಟಗಳು: ೨೮೦, ಬೆಲೆ: ರೂ.೧೯೦-೦೦

ಪ್ರಕಾಶನ: ಛಂದ ಪುಸ್ತಕ, ಐ-೦೦೪, ಮಂತ್ರಿ ಪ್ಯಾರಡೈಸ್, ಬನ್ನೇರುಘಟ್ಟರಸ್ತೆ, ಬೆಂಗಳೂರು-೪

 

ಇದು ನ್ಯಾಂಡೊ ಪರಾಡೊ ಬರೆದ ‘ಮಿರಾಕಲ್ ಇನ್ ದ ಆಂಡಿಸ್’ ಎನ್ನುವ ಅನುಭವಕಥನದ ಕನ್ನಡಾನುವಾದ. ಪರಭಾಷೆಗಳಿಂದ ಕನ್ನಡಕ್ಕೆ ಬಂದ ಅತ್ಯದ್ಭುತವಾದ ಪುಸ್ತಕಗಳಲ್ಲಿ ಇದು ಕೂಡ ಒಂದು. ೧೯೭೨ ಅಕ್ಟೋಬರ್ ೧೩. ಶುಕ್ರವಾರ. ಅಂದು ಉರುಗ್ವೆಯ ರಗ್ಬೀ ತಂಡವೊಂದು (‘ಓಲ್ಡ್ ಕ್ರಿಶ್ಚಿಯನ್’ ರಗ್ಬೀತಂಡ) ಚಿಲಿದೇಶದ ಪ್ರಖ್ಯಾತ ರಗ್ಬೀತಂಡದ ಜೊತೆಗೆ ಪಂದ್ಯವಾಡಲು ಮಾಂಟೆವಿಡಿಯೊದಿಂದ ಬಾಡಿಗೆ ವಿಮಾನದಲ್ಲಿ ಹೊರಡುತ್ತದೆ. ವಿಮಾನದಲ್ಲಿದ್ದವರು ನಲವತ್ತೈದು ಜನ. ಅವರಲ್ಲಿ ತಂಡದ ಆಟಗಾರರಲ್ಲದೆ ಅವರ ಸ್ನೇಹಿತರಿದ್ದರು, ಕುಟುಂಬದವರಿದ್ದರು, ವಿಮಾನದ ಸಿಬ್ಬಂದಿಗಳಾದ ಪೈಲಟ್, ಸಹ ಪೈಲಟ್, ಒಬ್ಬ ಮೆಕಾನಿಕ್ ಹಾಗೂ ಒಬ್ಬ ಹೆಲ್ಪರ್ ಇದ್ದರು. ನ್ಯಾಂಡೊ ಪರಾಡೊನ ತಾಯಿ ಯುಜಿನಿಯ ಮತ್ತು ಅವನ ತಂಗಿ ಸೂಜಿಯೂ ಇದ್ದರು. ಮೆಂಡೋಜಾದಿಂದ ದಕ್ಷಿಣದಿಕ್ಕಿಗೆ ಹೊರಟಿದ್ದ ಅವರಿಗೆ ಪಶ್ಚಿಮದಿಕ್ಕಿನಲ್ಲಿ ಅರ್ಜೆಂಟಿನಾದ ಅಗಾಧವಾದ ಆಂಡಿಸ್ ಪರ್ವತಶ್ರೇಣಿಗಳ ದರ್ಶನವಾಗಿ ಅವರು ರೋಮಾಂಚಿತರಾಗಿದ್ದರು. ನಾನು ಬಹಳ ಭಾವುಕನೂ ಅಲ್ಲ, ಕವಿಯೂ ಅಲ್ಲ; ಆದರೂ ನನಗೆ ಆ ಪರ್ವತಶ್ರೇಣಿಗಳು ಅದ್ಭುತವಾದ ಪುರಾತನ ಜೀವಿಗಳಂತೆ ಕಂಡವು ಎಂದು ನ್ಯಾಂಡೊ ನೆನಪಿಸಿಕೊಳ್ಳುತ್ತಾನೆ. ವಿಮಾನದಲ್ಲಿದ್ದ ಹೆಚ್ಚಿನವರೆಲ್ಲ ತರುಣರು; ಅವರಲ್ಲಿ ಉತ್ಸಾಹ ಪುಟಿಯುತ್ತಿತ್ತು; ಕೇಕೆ ಹಾಕುತ್ತ ಪ್ರಯಾಣದ ಹರ್ಷದಲ್ಲಿದ್ದರು. ಅವರಿಗೆ ಹವಾಮಾನವೈಪರೀತ್ಯದಿಂದ ವಿಮಾನ ಡೋಲಾಯಮಾನವಾಗುತ್ತಿದ್ದದ್ದು ಗಮನಕ್ಕೆ ಬಂದಿರುವುದಿಲ್ಲ. ವಿಮಾನ ನಿಯಂತ್ರಣ ತಪ್ಪಿ ಒಮ್ಮೆಲೆ ನೆಲಕ್ಕೆ ಬಿದ್ದು ಒಂದು ಬೃಹತ್ತಾದ ಹಿಮಬಂಡೆಗೆ ಬಡಿಯುತ್ತದೆ. ವಿಮಾನದ ಹಿಂಭಾಗ ತುಂಡಾಗಿ ದೂರದಲ್ಲೆಲ್ಲೊ ಬೀಳುತ್ತದೆ. ಪ್ರಯಾಣಿಕರಲ್ಲಿ ಅರ್ಧದಷ್ಟು ಜನ ಸತ್ತಿದ್ದರು. ನ್ಯಾಂಡೊನ ತಾಯಿ ಕೂಡ. ನ್ಯಾಂಡೊ ಎಚ್ಚರಗೊಂಡಾಗ ಮೂರು ದಿನ ಕಳೆದಿತ್ತು. ಸೂಜಿ ಅರೆಪ್ರಜ್ಞಾವಸ್ಥೆಯಲ್ಲಿದ್ದಳು. ನ್ಯಾಂಡೊ ತಲೆಗೆ ಪೆಟ್ಟಾಗಿತ್ತು. ಪೈಲಟ್ ಸತ್ತಿದ್ದ. ಸುತ್ತ ಹಿಮಾಚ್ಛಾದಿತ ಪರ್ವತಗಳು. ತಿನ್ನಲು ಕೆಲವೇ ಚಾಕೊಲೆಟ್‌ಗಳನ್ನು ಬಿಟ್ಟರೆ ಮತ್ತೇನೂ ಇರಲಿಲ್ಲ. ನೀರು ಕೂಡ. ಹಗಲು ಸೂರ್ಯನ ಬೆಳಕಿಗೆ ಹಿಮವನ್ನು ಹಿಡಿದು ಕರಗಿಸಿ ಕುಡಿಯುತ್ತಾರೆ. ತಂಡದಲ್ಲಿ ಇದ್ದ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಮಾಡಿದ ಚಿಕಿತ್ಸೆ ಫಲನೀಡದೆ ಒಬ್ಬೊಬ್ಬರಾಗಿ ಸಾಯತೊಡಗುತ್ತಾರೆ. ವಿಮಾನದ ಅರೆಜೀವವಾಗಿದ್ದ ರೇಡಿಯೋ ಮೂಲಕ ಹತ್ತನೆಯ ದಿನ ಅವರಿಗೆ ಅಪಘಾತದಲ್ಲಿ ಸಿಲುಕಿದವರ ರಕ್ಷಣೆಯ ಕಾರ್ಯ ಸ್ಥಗಿತಗೊಂಡ ಸುದ್ದಿ ತಿಳಿದು ಅವರ ಹತಾಶೆ ಮಿತಿಮೀರುತ್ತದೆ. ಹಸಿವು, ಬಾಯಾರಿಕೆ, ರಾತ್ರಿ ಮೈನಸ್ ಹತ್ತಕ್ಕೆ ಇಳಿಯುವ ಟೆಂಪರೇಚರ್, ಮನೆಯ ನೆನಪು, ಕುಟುಂಬದವರ ನೆನಪು, ಸಿಟ್ಟು, ಹತಾಶೆ, ಸಾವಿನ ದರ್ಶನ. ಆಗ ನ್ಯಾಂಡೊ ಎಲ್ಲರೆದುರಿಗೆ ಒಂದು ಸಲಹೆಯನ್ನಿಡುತ್ತಾನೆ; ನಾವೀಗ ಬದುಕುಳಿಯಬೇಕು, ಮಡಿದು ಬಿದ್ದಿರುವವರ ಮಾಂಸವನ್ನು ಕುಯ್ದು ತಿನ್ನಬೇಕು ಎನ್ನುತ್ತಾನೆ. ತಕ್ಷಣ ಎಲ್ಲರೂ ಇದನ್ನು ಖಂಡಿಸುತ್ತಾರೆ. ಆದರೆ ತಮ್ಮ ಸ್ಥಿತಿಯನ್ನು ಗ್ರಹಿಸಿ ಕೊನೆಗೆ ಮಾಂಸವನ್ನು ಕತ್ತರಿಸಿ ತಿಂದು ಜೀವಧಾರಣೆ ಮಾಡತೊಡಗುತ್ತಾರೆ. ಹಸಿಯಾದ ಲೋಳೆಮಾಂಸ ವಾಕರಿಕೆ ತರಿಸಿದರೂ ಜೀವಧಾರಣೆಗಾಗಿ ತಿನ್ನತೊಡಗುತ್ತಾರೆ. ಹೀಗೆ ಆಂಡಿಸ್ ಪರ್ವತಶ್ರೇಣಿಯಲ್ಲಿ ನ್ಯಾಂಡೊ ಮತ್ತು ಅವರ ಸಹಪ್ರಯಾಣಿಕರು ಎಪ್ಪತ್ತು ದಿನಗಳನ್ನು ಕಳೆಯುತ್ತಾರೆ.

ಅಷ್ಟರಲ್ಲಿ ಸೂಜಿ ಸಹಿಸಲಸಾಧ್ಯವಾದ ಚಳಿ ಮತ್ತು ಅನಾರೋಗ್ಯದಿಂದ ಸಾಯುತ್ತಾಳೆ. ಸಾವಿನ ಸಾನ್ನಿಧ್ಯದಲ್ಲಿ ಮನುಷ್ಯ ಶ್ರೇಷ್ಠವಾದ ಎಲ್ಲವನ್ನೂ ಕಲಿಯುತ್ತಾನೆ, ಬೆಲೆಕಟ್ಟತೊಡಗುತ್ತಾನೆ ಎನ್ನಲು ಆಂಡಿಸ್ ಪರ್ವತದ ನಡುವೆ ಘಟಿಸಿದ ಈ ವಿಮಾನಾಪಘಾತ ಒಂದು ದೃಷ್ಟಾಂತ. ಅವರು ಒಬ್ಬರನ್ನೊಬ್ಬರು ಬಯ್ದುಕೊಳ್ಳುತ್ತಾರೆ. ಆದರೆ ಅದನ್ನೂ ಮೀರಿದ ಪ್ರೀತಿ ಅವರ ನಡುವೆ ನೆಲೆಸುತ್ತದೆ. ರಾತ್ರಿಯ ಚಳಿಯಿಂದ ರಕ್ಷಿಸಿಕೊಳ್ಳಲು ತೆಕ್ಕೆಯಾಗಿ ಮಲಗುತ್ತಾರೆ, ಯಾರದಾದರೂ ದೇಹದ ಉಷ್ಣತೆ ಇಳಿಯುತ್ತಿದ್ದರೆ ಆತನ ಅಂಗಾಲನ್ನು ಉಜ್ಜುತ್ತ ಬೆಚ್ಚಗಿಡುತ್ತಾರೆ. ಲೋಳೆಮಾಂಸವನ್ನು ಸೂರ್ಯನಿಗೆ ಒಡ್ಡಿ ಹಿಡಿದು ಲೋಳೆಯನ್ನು ಆರಿಸಿಕೊಡುತ್ತಾರೆ. ಹತಾಶನಾಗಿ ಬಿದ್ದ ಒಬ್ಬನಿಗೆ ನ್ಯಾಂಡೊ ಒಮ್ಮೆ ಒದ್ದು ಎಬ್ಬಿಸಿ ಹುರಿದುಂಬಿಸುತ್ತಾನೆ. ಅವರಲ್ಲಿ ಪ್ರತಿಯೊಬ್ಬನಿಗೂ ತಾವಿನ್ನು ತಮ್ಮ ತಾಯ್ನಾಡಿಗೆ, ತಮ್ಮ ತಂದೆ-ತಾಯಂದಿರ ಬಳಿಗೆ ಮರಳಾರೆವು ಎನ್ನುವುದು ಮನದಟ್ಟಾಗಿದೆ. ಆದರೂ ಅವರಲ್ಲೊಬ್ಬ “ನಾವು ಕ್ರಿಸ್‌ಮಸ್ ಒಳಗೆ ಮನೆಗೆ ತಲುಪಿರುತ್ತೇವೆ ”ಎನ್ನತೊಡಗಿದಾಗ ಈ ಕನಸು ಅವರ ದುಃಖವನ್ನು ಹೆಚ್ಚಿಸುತ್ತದೆ; ಅದನ್ನು ಓದುತ್ತಿರುವ ನಮ್ಮ ದುಃಖವನ್ನು ಕೂಡ.

ಈ ಹತಾಶೆಯ ನಡುವೆಯೂ ಅವರು ತಮ್ಮ ಪ್ರೀತಿಯ ಕುರಿತು, ತಾಯಿಯ ಕುರಿತು, ತಂದೆಯ ಕುರಿತು, ಗೆಳೆಯರ ಕುರಿತು ಮಾತನಾಡುತ್ತಾರೆ.  ದೇವರು ಇಲ್ಲ ಎನ್ನುವ ಚರ್ಚೆಯೂ ಬರುತ್ತದೆ. ಆದರೂ ಜೀಸಸ್ ತಮ್ಮನ್ನು ನೋಡದೆ ಇರಲಾರ, ತಮ್ಮ ದೈವ ಕುರುಡಲ್ಲ ಎನ್ನುವ ವಿಶ್ವಾಸ ಮತ್ತೆ ಚಿಗುರುತ್ತದೆ. ಅವರಲ್ಲಿ ಹಗಲೂ ರಾತ್ರಿ ತಮ್ಮ ರಕ್ಷಣೆಯ ಉಪಾಯವನ್ನು ತಾವೇ ಕಂಡುಕೊಳ್ಳಬೇಕೆಂದು ಯೋಚಿಸುವವನು ನ್ಯಾಂಡೊ ಮಾತ್ರ. ಐವತ್ತೈದನೆಯ ದಿನ ಆತ ಚಿಲಿದೇಶದ ದಿಕ್ಕನ್ನು ಹಿಡಿದು ಚಾರಣ ಹೊರಡುವ ಯೋಚನೆ ಮಾಡಿದಾಗ ಅದಕ್ಕೆ ಸಹಮತ ಮೊದಲು ದೊರಕದಿದ್ದರೂ ರಾಬರ್ಟ್ ಹಾಗೂ ಮತ್ತೊಬ್ಬ ಜೊತೆಗೆ ಹೊರಡಲು ಒಪ್ಪಿಗೆ ನೀಡುತ್ತಾರೆ. ಚಿಂದಿಯಾದ ಬಟ್ಟೆಯಲ್ಲಿ, ಮೆಟ್ಟಲು ಚಪ್ಪಲಿಯೂ ಇಲ್ಲದೆ, ಒಂದಷ್ಟು ಮಾಂಸದ ತುಂಡುಗಳನ್ನು ಮಾತ್ರ ಕಟ್ಟಿಕೊಂಡು ಅರವತ್ತನೆಯ ದಿನ ಅವರು ಚಾರಣ ಹೊರಟಾಗ ಅವರಲ್ಲಿ ಯಾರಿಗೂ ಯಶಸ್ವಿಯಾಗುವದಿರಲಿ ಬದುಕಿ ಮರಳಿ ಬರುವ ಭರವಸೆಯೂ ಇರಲಿಲ್ಲ. ದುರ್ಗಮವಾದ ಹಿಮಬಂಡೆಗಳನ್ನು ಏರುತ್ತ, ಜಾರಿ ಬೀಳುತ್ತ, ಬರಿಗಾಲಿನಲ್ಲಿ ಕೊನೆಗೊಮ್ಮೆ ಎಪ್ಪತ್ತು ಮೈಲು ದೂರದ ಚಿಲಿಯ ಗಡಿ ಭಾಗದ ಹೊಲವನ್ನು ತಲುಪುತ್ತಾರೆ. ಅಂದಿಗೆ ವಿಮಾನಾಪಘಾತವಾಗಿ ಎಪ್ಪತ್ತೊಂದನೆಯ ದಿನ. ಅನಂತರ ಚಿಲಿಯ ರಕ್ಷಣಾತಂಡದ ಹೆಲಿಕಾಪ್ಟರ್‌ಗಳಲ್ಲಿ ಅವರನ್ನೆಲ್ಲ ರಕ್ಷಿಸಿ ತರಲಾಗುತ್ತದೆ.

ನ್ಯಾಂಡೊ ಈ ಅನುಭವವನ್ನು ಪುಸ್ತಕರೂಪದಲ್ಲಿ ದಾಖಲಿಸಿದ್ದು ಮೂವತ್ತು ವರ್ಷಗಳ ನಂತರ. ನ್ಯಾಂಡೊ ಉರುಗ್ವೆಯಲ್ಲಿ ಈಗ ಯಶಸ್ವಿ ಉದ್ಯಮಿ. ಸಾವಿನೊಡನೆ ಸೆಣಸಾಡಿದ ಅವನ ಕೆಲವು ಸ್ನೇಹಿತರು ಕೂಡ ಇನ್ನೂ ಬದುಕಿದ್ದಾರೆ. ಜೀವತೆತ್ತ ತಮ್ಮ ಸಂಗಡಿಗರನ್ನು ಅವರೆಲ್ಲ ನಿತ್ಯ ನೆನೆಯುತ್ತಾರೆ; ಪ್ರತಿವರ್ಷ ಡಿಸೆಂಬರ್ ಇಪ್ಪತ್ತೆರಡರಂದು ಒಂದೆಡೆ ಸೇರಿ ಆ ದಿನವನ್ನು ಆಚರಿಸುತ್ತಾರೆ. ಜಗತ್ತಿನಲ್ಲಿ ಸಾವಿನೊಡನೆ ಗುದ್ದಾಡಿದವರು ಅಸಂಖ್ಯ. ಆದರೆ ಆಂಡಿಸ್ ಪರ್ವತದಲ್ಲಿ ಎಪ್ಪತ್ತೊಂದು ದಿನಗಳವರೆಗೆ ಸಾವಿನೊಡನೆ ನಡೆದ ಈ ಮುಖಾಮುಖಿಗೆ ಸರಿಗಟ್ಟುವ ಮತ್ತೊಂದು ಅನುಭವವಿರಲಿಕ್ಕಿಲ್ಲ. ನ್ಯಾಂಡೊ ಮತ್ತವರ ಸಂಗಡಿಗರಿಗೆ ಜಗತ್ತಿನಾದ್ಯಂತ ವೀರೋಚಿತ ಸ್ವಾಗತ ಸಿಕ್ಕಿದೆ. ಇಂದು ಆತ ಉರುಗ್ವೆಯಲ್ಲಿ ದೊಡ್ಡ ವಾಣಿಜ್ಯೋದ್ಯಮಿ. ಸಂಯುಕ್ತಾ ಪುಲಿಗಲ್ ಕನ್ನಡದಲ್ಲಿ ತಂದ ಈ ಅನುವಾದಕ್ಕೆ ಸ್ವತಃ ನ್ಯಾಂಡೊ ಶುಭಸಂದೇಶ ಕಳುಹಿಸಿದ್ದಾನೆ. ಹೃದಯವಂತ ನ್ಯಾಂಡೊ ಪ್ರತಿಯೊಂದು ಹೋರಾಟವನ್ನೂ ಗೌರವಿಸುತ್ತಾನೆ.

Facebook ಕಾಮೆಂಟ್ಸ್

R D Hegade Aalmane: ರಘುಪತಿ ದೇವರು ಹೆಗಡೆ ( ಆರ್ ಡಿ ಹೆಗಡೆ ) ಹಿರಿಯ ಲೇಖಕರು ಹಾಗೂ ವಿಮರ್ಶಕರು. ವಯಸ್ಸು 68. ಸದ್ಯ ಶಿರಸಿ ತಾಲೂಕಿನ ಆಲ್ಮನೆಯಲ್ಲಿ ವಾಸ. ಸಂಸ್ಕೃತ ಹಾಗೂ ಆಂಗ್ಲ ಭಾಷಾ ಸಾಹಿತ್ಯ ದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾವನ್ನೂ ಪಡೆದಿದ್ದಾರೆ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿರುವ ಇವರು ಈಗ ಕೃಷಿಯಲ್ಲಿ ನಿರತರಾಗಿದ್ದಾರೆ. ಇವರ ಸಾಹಿತ್ಯ ಕೃಷಿಯ ವ್ಯಾಪ್ತಿ ದೊಡ್ಡದು.ಭಾರತೀಯ ತತ್ವಶಾಸ್ತ್ರದ ಮೇಲೆ ಹಲವು ಕೃತಿಗಳನ್ನು ಹೊರತಂದಿದ್ದಾರೆ. ವೈಚಾರಿಕ ಲೇಖನಗಳ ಸಂಕಲನ, ಕಥಾಸಂಕಲನಗಳು, ಕಿರುಕಾದಂಬರಿ ಕೂಡ ಪ್ರಕಟವಾಗಿದೆ. ಉಪನಿಷತ್ತುಗಳ ಅರ್ಥಲೋಕ, ವ್ಯಕ್ತಿ ಚಿತ್ರಣ ಕುರಿತಾದ ಎರಡು ಕೃತಿಗಳು,ಅಂಕಣ ಬರಹಗಳ ಎರಡು ಕೃತಿಗಳು,ವಿಮರ್ಶೆಯ ಕುರಿತಾದ ಒಂದು ಕೃತಿ, ಭಗವದ್ಗೀತೆ ಇವರ ಕೆಲವು ಕೃತಿಗಳು. ಆಂಗ್ಲಭಾಷೆಯಲ್ಲಿಯೂ ಕೂಡ ಭಾರತೀಯ ತತ್ವಶಾಸ್ತ್ರದ ಕುರಿತಾದ ಕೃತಿಯನ್ನು ರಚಿಸಿದ್ದಾರೆ. ಇವರ ಲೇಖನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಸ್ತೂರಿ ಮಾಸಪತ್ರಿಕೆಯು ತನ್ನಲ್ಲಿ ಪ್ರಕಟಿಸಿದ ಸಾರ್ವಕಾಲಿಕ 20 ಶ್ರೇಷ್ಠ ಲೇಖನಗಳನ್ನು ಮರುಪ್ರಕಟಿಸಿದಾಗ ಇವರ ಲೇಖನವೂ ಇದ್ದದ್ದು ಇವರ ಹೆಗ್ಗಳಿಕೆ. ನೂರಾರು ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನೂ, ವಿಮರ್ಶೆಯನ್ನೂ ಬರೆದಿರುತ್ತಾರೆ. ಸದ್ಯ ಶಿರಸಿಯ ದಿನಪತ್ರಿಕೆ “ಲೋಕಧ್ವನಿ” ಯಲ್ಲಿ ಪ್ರತಿವಾರ “ಈ ಹೊತ್ತಿಗೆ” ಅಂಕಣವನ್ನು ಬರೆಯುತ್ತಿದ್ದು ಸಾಕಷ್ಟು ಜನಪ್ರಿಯವಾಗಿದೆ. ಇವರ ಇತ್ತೀಚಿನ ಕೃತಿ “ಜೆನ್ ಮಹಾಯಾನ” ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದ್ದು ಈಗಾಗಲೇ 2 ಮರುಮುದ್ರಣಗಳನ್ನು ಕಂಡಿದೆ.
Related Post