X

 ‘ಕಲಾನ್ವೇಷಣೆ’

 ‘ಕಲಾನ್ವೇಷಣೆ’ – (ಫೆಲೋಶಿಪ್ ಪ್ರಬಂಧಗಳು)

ಪ್ರಕಾಶಕರು: ರಜಿಸ್ಟ್ರಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ,

ಕನ್ನಡ ಭವನ, ಜೆ.ಸಿ.ರೋಡ್, ಬೆಂಗಳೂರು

ಪ್ರಕಟಣೆಯ ವರ್ಷ: ೨೦೧೮, ಪುಟಗಳು: ೪೧೬, ಬೆಲೆ: ರೂ.೨೫೦-೦೦

ಕರ್ನಾಟಕ ಸಂಗೀತಗಾರರಿಗೆ ಮತ್ತು ನೃತ್ಯಕಲಾವಿದರಿಗೆ ಆಕರಗ್ರಂಥವಾಗಿ ಉಪಯುಕ್ತವಾಗುವ ‘ಕಲಾನ್ವೇಷಣೆ’ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ದೂರದರ್ಶಿತ್ವದ ಫಲವಾಗಿ ಪ್ರಕಟಗೊಂಡಿದೆ. “ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ತನ್ನ ಪರಿಧಿಯಲ್ಲಿ ಬರುವ ಪ್ರದರ್ಶನಕಲೆಗಳ ಪ್ರೋತ್ಸಾಹಕ್ಕಾಗಿ ಅನೇಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನಡೆಸುತ್ತ ಬರುತ್ತಿದೆ….. ಇದರ ಅಡಿಯಲ್ಲಿ ಅಕಾಡೆಮಿಯು ಪ್ರತಿವರ್ಷ ಫೆಲೋಶಿಪ್ ನೀಡಿ, ಅನೇಕ ವಿದ್ವಾಂಸರನ್ನೂ ವಿದ್ವತ್‌ಪೂರ್ಣಕೃತಿಗಳನ್ನೂ ಬೆಳಕಿಗೆ ತರುವ ಕೆಲಸವನ್ನು” ಮಾಡುತ್ತ ಬಂದಿದೆ ಎಂದು ‘ಅಧ್ಯಕ್ಷರ ನುಡಿ’ ವಿವರಿಸುತ್ತದೆ.

‘ಕಲಾನ್ವೇಷಣೆ’ಯಲ್ಲಿ ನಾಲ್ಕು ದೀರ್ಘವಾದ ಆಧ್ಯಯನಪೂರ್ಣ ಪ್ರಬಂಧಗಳಿವೆ. ಇವುಗಳನ್ನು ನಾಲ್ವರು ವಿದ್ವಾಂಸರಿಗೆ ಫೆಲೋಶಿಪ್ ನೀಡಿ, ಸಿದ್ಧಪಡಿಸಿ, ಅಕಾಡೆಮಿಯು ಪ್ರಕಟಿಸಿದೆ. ಇವುಗಳಲ್ಲಿ ಮೊದಲನೆಯದು ‘ಗಮಕಕಲೆಯ ವಿಭಿನ್ನ ಶೈಲಿಗಳ ತೌಲನಿಕ ಅಧ್ಯಯನ’. ಡಾ. ಎನ್ ಕೆ ರಾಮಶೇಷನ್ ಬರೆದ ಈ ಪ್ರಬಂಧದಲ್ಲಿ ಆರು ಅಧ್ಯಾಯಗಳಿದ್ದು ಇವು ಗಮಕಕಲೆಯ ಉಗಮ ಮತ್ತು ವಿಕಾಸ, ಕವಿ-ಗಮಕಿ-ವಾದಿ- ಮತ್ತು ವಾಗ್ಮಿಗಳ ವಿಶ್ಲೇಷಣೆ, ಹಿರಿಯರ ದೃಷ್ಟಿಯಲ್ಲಿ ಗಮಕಕಲೆ, ಗಮಕಕಲೆಯ ವಿಭಿನ್ನ ಶೈಲಿಗಳು, ಹಿರಿಯ ಗಮಕಿಗಳ ಬದುಕು ಮತ್ತು ಕೃತಿಗಳ ಅವಲೋಕನ, ವಿವಿಧ ಶೈಲಿಗಳ ಪ್ರವರ್ತಕರು ಹಾಗೂ ಆ ಶೈಲಿಗಳ ಪ್ರಾತಿನಿಧಿಕ ಕಲಾವಿದರು, ಮುಂತಾದ ವಿಷಯ ನಿರೂಪಣೆಗಳನ್ನು ಒಳಗೊಂಡಿದೆ. ಈ ಪ್ರಬಂಧಕ್ಕೆ ಏಳು ಅನುಬಂಧಗಳನ್ನು ಲಗತ್ತಿಸಲಾಗಿದ್ದು ಇವುಗಳಲ್ಲಿ ಆಕರಗ್ರಂಥಗಳ ವಿವರಗಳಿವೆ. ಈ ಸಂಪ್ರಬಂಧವು ೧೩೪ಪುಟಗಳ ದೀರ್ಘ ಅಧ್ಯಯನ.

ಎರಡನೆಯ ಪ್ರಬಂಧ ‘ಹಿಂದುಸ್ತಾನಿ ಸಂಗೀತದಲ್ಲಿ ಘರಾನೆಗಳು ಹಾಗೂ ಕರ್ನಾಟಕದಲ್ಲಿ ಅದರ ಅಸ್ತಿತ್ವ’. ಶಿರಸಿಯ ಎಂ ಇ ಎಸ್ ಕಾಲೇಜಿನ ಸಂಗೀತವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ವಿದುಷಿ ಡಾ.ಶೈಲಜಾ ಮಂಗಳೂರಕರ ಇದನ್ನು ಬರೆದಿದ್ದಾರೆ. ಸಾಕಷ್ಟು ಕ್ಷೇತ್ರಕಾರ್ಯ, ಸಂದರ್ಶನ, ಅಧ್ಯಯನ ಹಾಗೂ ಚಿಂತನೆಯ ಫಲವಾಗಿ ಸಿದ್ಧವಾದ ಈ ಸಂಪ್ರಬಂಧ ೧೨೬ ಪುಟಗಳಷ್ಟು ದೀರ್ಘವಾಗಿದ್ದು ಹಿಂದುಸ್ತಾನಿಸಂಗೀತದ ಘರಾನೆಗಳ ಪರಿಚಯ ಮಾಡಿಕೊಳ್ಳಬಯಸುವವರಿಗೆ ಒಳ್ಳೆಯ ಕೈಪಿಡಿ. ಭಾರತೀಯ ಸಂಗೀತ ಹಾಗೂ ಅದರ ಹಲವು ಕವಲುಗಳು, ಹಿಂದುಸ್ತಾನಿ ಸಂಗೀತ, ಕರ್ನಾಟಕ ಸಂಗೀತ, ಪ್ರಾಚೀನ ಭಾರತದ ಘರಾನೆಗಳು, ಘರಾನೆಗಳ ಉಗಮ ಹಾಗೂ ಪ್ರಚಲಿತವಿರುವ ಪ್ರಮುಖ ಘರಾನೆಗಳು, ಕರ್ನಾಟಕದಲ್ಲಿ ಹಿಂದುಸ್ತಾನಿ ಘರಾನೆಗಳ ಚರಿತ್ರೆ, ಘರಾನೆಯ ಗಾಯಕರ ವಂಶವೃಕ್ಷ, ಹಿಂದುಸ್ತಾನಿ ಸಂಗೀತದ ಗಾಯನಶೈಲಿಗಳ(‘ಗಾಯಕಿ’ಗಳ) ತೌಲನಿಕ ಸಮೀಕ್ಷೆ, ವಿವಿಧ ಘರಾನೆಗಳ ನಡುವಿನ ಪರಸ್ಪರ ಕೊಡುಕೊಳ್ಳುವಿಕೆ, ವೈವಿಧ್ಯಮಯ ಗಾಯನಶೈಲಿಗಳಿಂದ ಸಮೃದ್ಧವಾದ ಹಿಂದುಸ್ತಾನಿಸಂಗೀತದ ತಾತ್ವಿಕ ಸ್ವರೂಪ-ಇದು ಈ ಸಂಪ್ರಬಂಧ ಒಳಗೊಂಡಿರುವ ವಿಷಯಗಳ ಸ್ಥೂಲ ಪರಿಚಯ. ಪ್ರಬಂಧದ ಕೊನೆಯಲ್ಲಿ ಕೊಡಲಾದ ಆಕರಗ್ರಂಥಗಳ ಪಟ್ಟಿ ಈ ಕ್ಷೇತ್ರದಲ್ಲಿ ಕುತೂಹಲವುಳ್ಳವರಿಗೆ ಬಹಳ ಉಪಯುಕ್ತವಾದ ಮಾಹಿತಿಯಾಗಿದೆ.

 ‘ಕಲಾನ್ವೇಷಣೆ’ಯ ಮೂರನೆಯ ಸಂಪ್ರಬಂಧ ‘ಕರ್ನಾಟಕ ನೃತ್ಯಪ್ರಕಾರದ ವಿಶಿಷ್ಟ ಹಾಗೂ ಅಪರೂಪದ ನೃತ್ಯಬಂಧಗಳು’. ಇದರ ಲೇಖಕಿ ಡಾ. ಮಾಲಾ ಶಶಿಕಾಂತ್. ಇವರು ನಾಟ್ಯಾಚಾರ್ಯ ಸುಬ್ರಹ್ಮಣ್ಯ ಕೌಶಿಕರ ಪ್ರಧಾನ ಶಿಷ್ಯೆಯರಲ್ಲಿ ಒಬ್ಬರು. ಕರ್ನಾಟಕದ ನೃತ್ಯಪ್ರಕಾರಗಳನ್ನು ಪರಿಚಯಿಸುತ್ತ ಲೇಖಕಿ ಡಾ. ಮಾಲಾ ಅವರು ಚಾಲುಕ್ಯಸಾಮ್ರಾಜ್ಯದಲ್ಲಿ ಪ್ರಚಲಿತವಾಗಿದ್ದ ಶಾಸ್ತ್ರೀಯ ನೃತ್ಯದಿಂದ ಕರ್ನಾಟಕನೃತ್ಯ ಪ್ರಕಾರಕ್ಕೆ ಬೀಜಾಂಕುರವಾಯಿತು ಎನ್ನುತ್ತಾರೆ. ನೃತ್ಯವು ಅಭಿನಯಪ್ರಧಾನವಾದ ಪ್ರದರ್ಶನಕಲೆಯಾದ್ದರಿಂದ ಸಂಗೀತದ ಘರಾನೆಗಳ ಹಾಗೆ ಇಲ್ಲಿ ಕೂಡ ವಿವಿಧ ಸಂಪ್ರದಾಯ ಹಾಗೂ ಪರಂಪರೆಗಳಿಗೆ ಚಾರಿತ್ರಿಕವಾದ ಮಹತ್ವವಿದೆ. ಸಂಗೀತ ಮತ್ತು ನೃತ್ಯಗಳ ನಡುವಿನ ಸಂಬಂಧ ಅವಿನಾಭಾವದ್ದು. ಆದ್ದರಿಂದ ಇಲ್ಲಿ ಕರ್ನಾಟಕ ಸಂಗೀತ ಕವಲೊಡೆದಾಗಲೆಲ್ಲ  ಕರ್ನಾಟಕದ ನೃತ್ಯಪ್ರಕಾರಗಳು ಕೂಡ ಕವಲಾಗಿ ಹುಲುಸಾಗಿ ಬೆಳೆಯುತ್ತ ಬಂದಿವೆ. ಸಂಗೀತಶಾಸ್ತ್ರದಲ್ಲಿ ಹಲವು ಬೆಳವಣಿಗೆಗಳು ಕಾಣಿಸಿಕೊಂಡದ್ದು ಹದಿನಾರನೆಯ ಶತಮಾನದಲ್ಲಿ. ಆಗ ನೃತ್ಯದಲ್ಲಿ ಕೂಡ ‘ಗೀತ’, ‘ಪ್ರಬಂಧ’, ‘ಠಾಯ’ ಮುಂತಾದ ಹೊಸ ಸಂಯೋಜನೆಗಳು ಕಾಣಿಸಿಕೊಂಡವು. ಅವುಗಳನ್ನು ಇಂದಿಗೂ ಜೀವಂತವಾಗಿ ಉಳಿಸಿಕೊಂಡು ಬಂದಿರುವ ಮೂಗೂರು ಪರಂಪರೆ, ನಟುವಾಂಗ ಮೈಸೂರು ದಾಸಪ್ಪನವರ ನೇತೃತ್ವದ ನಂಜನಗೂಡು ಪರಂಪರೆ, ಜಟ್ಟಿ ತಾಯಮ್ಮನವರ ಮೈಸೂರು ಪರಂಪರೆ ಮತ್ತು, ಕೋಲಾರ್ ಪರಂಪರೆ ಈ ನಾಲ್ಕು ಪರಂಪರೆಗಳನ್ನು ಲೇಖಕಿ ವಿಶೇಷವಾಗಿ ಪರಿಚಯಿಸುತ್ತಾರೆ. ಸಂಗೀತದ ಎರಡು ಮೂಲಾಧಾರಗಳಾದ ಗೀತ ಮತ್ತು ಪ್ರಬಂಧಗಳನ್ನು ವಿಶದವಾಗಿ ಹೇಳಲು ಈ ಅಧ್ಯಾಯ ಮೀಸಲಾಗಿದೆ. ನೃತ್ಯಸಂಯೋಜನೆ ನಾಟ್ಯದ ಜೀವಾಳ. ಇದನ್ನು ಸುಮಾರು ಅರವತ್ತು ರೇಖಾಚಿತ್ರಗಳ ಮೂಲಕ ಲೇಖಕಿ ‘ಸಾಹಿತ್ಯ’, ‘ಅಭಿನಯ’, ‘ಹಸ್ತ’, ‘ಪಾದ’ ವಿನ್ಯಾಸಗಳ ವಿವರಗಳೊಡನೆ ವಿವರಿಸಿದ್ದಾರೆ. ಕೋಲಾರ್ ಪರಂಪರೆಯ ‘ಚಿತ್ರನಾಟ್ಯ’ಪ್ರಕಾರವನ್ನು ಕೂಡ ಲೇಖಕಿ ಇದೇ ಕ್ರಮದಲ್ಲಿ ನಿರೂಪಿಸಿದ್ದಾರೆ. ಹೆಚ್ಚಿನ ಆಸಕ್ತಿಯುಳ್ಳವರಿಗಾಗಿ ಆಕರಗ್ರಂಥಗಳ ಪಟ್ಟಿ ಲೇಖನದ ಕೊನೆಯಲ್ಲಿದೆ.

ಪ್ರೊ. ಶ್ರೀಕಾಂತಂ ನಾಗೇಂದ್ರಶಾಸ್ತ್ರಿಗಳ ‘ಜಾವಳಿಗಳ ಅನನ್ಯತೆ’ ಈ ಕೃತಿಯ ನಾಲ್ಕನೆಯ ಪ್ರಬಂಧ. ಈ ಪ್ರಬಂಧ ಕೆಲವು ಅಪ್ರಕಟಿತವಾದ ಹಾಗೂ ಅಪೂರ್ವವಾದ ಜಾವಳಿಗಳನ್ನು ಸಂಗ್ರಹಿಸಿ ಒದಗಿಸುತ್ತದೆ. ‘ಜಾವಳಿ’ ಸಂಗೀತದ ಒಂದು ಅನನ್ಯ ಪ್ರಕಾರ. ಪ್ರಾರಂಭದಲ್ಲಿ ರಸಿಕವರ್ಗಕ್ಕಾಗಿ ಮಾತ್ರ ಜಾವಳಿಗಳನ್ನು ಸಾಭಿನಯವಾಗಿ ಹಾಡಲಾಗುತ್ತಿತ್ತು. ರತಿಭಾವದ ಉದ್ದೀಪನದಲ್ಲಿ ಪರ್ಯವಸಾನಗೊಳ್ಳುತ್ತಿದ್ದ ಈ ಸಂಗೀತಪ್ರಕಾರಕ್ಕೆ ಅಂದು ಇದ್ದ ಸಾಮಾಜಿಕ ಸ್ಥಾನ-ಮಾನಗಳ ಕುರಿತು ಲೇಖನದಲ್ಲಿ ಯಾವ ಪ್ರಸ್ತಾಪವೂ ಇಲ್ಲ. ‘ಜಾವಳಿ’ ಶಬ್ದದ ನಿಷ್ಪತ್ತಿಯ ಕುರಿತು ಕೂಡ ಈ ತನಕ ವಿದ್ವಾಂಸರಲ್ಲಿ ಒಮ್ಮತವಿದ್ದಂತೆ ಕಾಣುವುದಿಲ್ಲ. ಆದರೆ ಆರಂಭದಲ್ಲಿದ್ದ ಶೃಂಗಾರಪ್ರಧಾನವಾದ ಜಾವಳಿಪ್ರಕಾರವನ್ನು ಕ್ರಮೇಣ ವಿಸ್ತರಿಸಿ ಹನ್ನೆರಡು ಉಪಪ್ರಕಾರಗಳಲ್ಲಿ ವಿಸ್ತರಿಸಿದಂತಿದೆ. ಇವುಗಳಲ್ಲಿ ನನಗೆ ವೈಯಕ್ತಿಕವಾಗಿ ‘ರಾಘವೇಂದ್ರ ಜಾವಳಿ’ ಕುತೂಹಲಕಾರಿಯೆನಿಸುತ್ತದೆ. ಎರಡನೆಯ ಅಧ್ಯಾಯದಲ್ಲಿ ಸುಮಾರು ಎಪ್ಪತ್ತೈದು ಅಪ್ರಕಟಿತ ಜಾವಳಿಗಳನ್ನು ಅವುಗಳ ರಾಗ ಮತ್ತು ತಾಳಗಳ ಸೂಚಿಯೊಡನೆ ಸಂಗ್ರಹಿಸಿ ಕೊಡಲಾಗಿದೆ. ಎರಡು ಅಧ್ಯಾಯಗಳಷ್ಟೆ ಇರುವ ಈ ಪ್ರಬಂಧದ ಕೊನೆಗೆ ಸುಮಾರು ಮೂವತ್ತು ಜಾವಳಿಕಾರರ ಪಟ್ಟಿಯಿದ್ದು ಅವರ ಅಂಕಿತವನ್ನು ಕೂಡ ನೀಡಲಾಗಿದೆ. ಈ ಪ್ರಬಂಧಕ್ಕೆ ಆಕರಗ್ರಂಥಗಳ ಅನುಬಂಧವಿಲ್ಲ ಎನ್ನುವುದು ಒಂದು ಕೊರತೆಯೇ ಸರಿ. ಜಾವಳಿಕಾರರ ಪಟ್ಟಿಯಲ್ಲಿ ಮುಮ್ಮಡಿ ಕೃಷ್ಣರಾ ಒಡೆಯರ್, ವಿದ್ಯಾಪ್ರಸನ್ನ ತೀರ್ಥರು ಹಾಗೂ ಆನಂದ ದಾಸರಂತಹ ಖ್ಯಾತರ ಹೆಸರುಗಳೂ ಇರುವುದರಿಂದ ಜಾವಳಿ ಸಾಹಿತ್ಯವನ್ನು ಇನ್ನೂ ಹೆಚ್ಚು ಕೂಲಂಕಷವಾಗಿ ಅಧ್ಯಯನ ಮಾಡುವುದು ಅಗತ್ಯ.

ಒಟ್ಟಿನಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಈ ಪ್ರಕಟಣೆ ಒಂದು ಉಪಯುಕ್ತವಾದ ಶಾಸ್ತ್ರಗ್ರಂಥ.

Facebook ಕಾಮೆಂಟ್ಸ್

R D Hegade Aalmane: ರಘುಪತಿ ದೇವರು ಹೆಗಡೆ ( ಆರ್ ಡಿ ಹೆಗಡೆ ) ಹಿರಿಯ ಲೇಖಕರು ಹಾಗೂ ವಿಮರ್ಶಕರು. ವಯಸ್ಸು 68. ಸದ್ಯ ಶಿರಸಿ ತಾಲೂಕಿನ ಆಲ್ಮನೆಯಲ್ಲಿ ವಾಸ. ಸಂಸ್ಕೃತ ಹಾಗೂ ಆಂಗ್ಲ ಭಾಷಾ ಸಾಹಿತ್ಯ ದಲ್ಲಿ ಸ್ನಾತಕೋತ್ತರ ಪದವಿಯನ್ನು ಹಾಗೂ ಶಾಸನ ಶಾಸ್ತ್ರದಲ್ಲಿ ಡಿಪ್ಲೊಮಾವನ್ನೂ ಪಡೆದಿದ್ದಾರೆ. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ನಿವೃತ್ತಿ ಹೊಂದಿರುವ ಇವರು ಈಗ ಕೃಷಿಯಲ್ಲಿ ನಿರತರಾಗಿದ್ದಾರೆ. ಇವರ ಸಾಹಿತ್ಯ ಕೃಷಿಯ ವ್ಯಾಪ್ತಿ ದೊಡ್ಡದು.ಭಾರತೀಯ ತತ್ವಶಾಸ್ತ್ರದ ಮೇಲೆ ಹಲವು ಕೃತಿಗಳನ್ನು ಹೊರತಂದಿದ್ದಾರೆ. ವೈಚಾರಿಕ ಲೇಖನಗಳ ಸಂಕಲನ, ಕಥಾಸಂಕಲನಗಳು, ಕಿರುಕಾದಂಬರಿ ಕೂಡ ಪ್ರಕಟವಾಗಿದೆ. ಉಪನಿಷತ್ತುಗಳ ಅರ್ಥಲೋಕ, ವ್ಯಕ್ತಿ ಚಿತ್ರಣ ಕುರಿತಾದ ಎರಡು ಕೃತಿಗಳು,ಅಂಕಣ ಬರಹಗಳ ಎರಡು ಕೃತಿಗಳು,ವಿಮರ್ಶೆಯ ಕುರಿತಾದ ಒಂದು ಕೃತಿ, ಭಗವದ್ಗೀತೆ ಇವರ ಕೆಲವು ಕೃತಿಗಳು. ಆಂಗ್ಲಭಾಷೆಯಲ್ಲಿಯೂ ಕೂಡ ಭಾರತೀಯ ತತ್ವಶಾಸ್ತ್ರದ ಕುರಿತಾದ ಕೃತಿಯನ್ನು ರಚಿಸಿದ್ದಾರೆ. ಇವರ ಲೇಖನಗಳು ನಾಡಿನ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಸ್ತೂರಿ ಮಾಸಪತ್ರಿಕೆಯು ತನ್ನಲ್ಲಿ ಪ್ರಕಟಿಸಿದ ಸಾರ್ವಕಾಲಿಕ 20 ಶ್ರೇಷ್ಠ ಲೇಖನಗಳನ್ನು ಮರುಪ್ರಕಟಿಸಿದಾಗ ಇವರ ಲೇಖನವೂ ಇದ್ದದ್ದು ಇವರ ಹೆಗ್ಗಳಿಕೆ. ನೂರಾರು ಲೇಖಕರ ಪುಸ್ತಕಗಳಿಗೆ ಮುನ್ನುಡಿಯನ್ನೂ, ವಿಮರ್ಶೆಯನ್ನೂ ಬರೆದಿರುತ್ತಾರೆ. ಸದ್ಯ ಶಿರಸಿಯ ದಿನಪತ್ರಿಕೆ “ಲೋಕಧ್ವನಿ” ಯಲ್ಲಿ ಪ್ರತಿವಾರ “ಈ ಹೊತ್ತಿಗೆ” ಅಂಕಣವನ್ನು ಬರೆಯುತ್ತಿದ್ದು ಸಾಕಷ್ಟು ಜನಪ್ರಿಯವಾಗಿದೆ. ಇವರ ಇತ್ತೀಚಿನ ಕೃತಿ “ಜೆನ್ ಮಹಾಯಾನ” ನವಕರ್ನಾಟಕ ಪ್ರಕಾಶನದಿಂದ ಪ್ರಕಟವಾಗಿದ್ದು ಈಗಾಗಲೇ 2 ಮರುಮುದ್ರಣಗಳನ್ನು ಕಂಡಿದೆ.
Related Post