X

ಉತ್ತರದ ವೆನಿಸ್, ಸೇತುವೆಗಳ ನಗರ ಖ್ಯಾತಿಯ ಸ್ಟಾಕ್ಹೋಮ್  

ಸ್ವೀಡನ್ ಯೂರೋಪಿಯನ್ ಒಕ್ಕೂಟದಲ್ಲಿ ಇದೆ. ಆದರೆ ಯುರೋ ಕರೆನ್ಸಿಯನ್ನ ತನ್ನ ಹಣವನ್ನಾಗಿ ಸ್ವೀಕರಿಸಿಲ್ಲ. ಇಂದಿಗೂ ಇಲ್ಲಿ ಸ್ವೀಡಿಷ್ ಕ್ರೋನವನ್ನ ವಿನಿಮಯ ಮಾಧ್ಯಮವನ್ನಾಗಿ ಬಳಸಲಾಗುತ್ತದೆ. ಸ್ಟಾಕ್ಹೋಮ್  ಸ್ವೀಡನ್ ನ ರಾಜಧಾನಿ. ಹದಿನಾಲ್ಕು ಸಣ್ಣ ಸಣ್ಣ ದ್ವೀಪಗಳ ಮೇಲೆ ಸ್ಟಾಕ್ಹೋಮ್ ಅನ್ನು ನಿರ್ಮಿಸಲಾಗಿದೆ. ಐವತ್ತಕ್ಕೂ ಹೆಚ್ಚು ಬ್ರಿಡ್ಜ್ ಗಳು ಇವನ್ನು ಬೆಸೆಯುತ್ತವೆ. ಬಹುತೇಕ ಎಲ್ಲಾ ಯೂರೋಪಿನ ದೇಶಗಳಂತೆ ಸ್ಟೋಕ್ಹೋಮ್ ಕೂಡ ಮಧ್ಯಯುಗ (ಮೆಡೀವಲ್ ) ನೆನಪಿಗೆ ತರುವ ತನ್ನ ಹಳೆಯ ಕಟ್ಟಡಗಳನ್ನ ಜತನದಿಂದ ಕಾಪಾಡಿಕೊಂಡು ಬಂದಿದೆ. ಹೊಸತು ತರುವ ಭರದಲ್ಲಿ ಹಳೆಯದು ಮರೆಯಬಾರದು ಎನ್ನುವುದು ಬಹುತೇಕ ಯೂರೋಪಿನ ರಾಷ್ಟ್ರಗಳು ಪಾಲಿಸಿಕೊಂಡು ಬಂದಿರುವ ನೀತಿ. ಅದಕ್ಕೆ ಸ್ವೀಡನ್ ಕೂಡ ಹೊರತಾಗಿಲ್ಲ.

ಮುಖ್ಯವಾಗಿ ನೋಡಲೇನಿದೆ?

ಫೇರಿಟೇಲ್ ಕತೆಗಳ ನೆನಪಿಸುವ ವಿಶ್ವವಿಖ್ಯಾತ Drottningholm ಅರಮನೆ ಸ್ಟಾಕೋಮ್ ’ನಿಂದ ಕೇವಲ ೧೧ ಕಿಲೋಮೀಟರ್ ದೂರದಲ್ಲಿದೆ. ಸ್ವೀಡನ್’ನ ಬಹು ಪ್ರಸಿದ್ಧ ಮ್ಯೂಸಿಯಂ Vasa Museum ಇರುವುದು ಕೂಡ ರಾಜಧಾನಿ ಸ್ಟಾಕೋಮ್ನಲ್ಲಿ. ಎಲ್ಲಕ್ಕೂ ಮುಖ್ಯವಾಗಿ ಇಲ್ಲಿ ಬೋಟ್ ಪ್ರಯಾಣ ಬಹಳ ಮುದ ನೀಡುತ್ತದೆ. ಇಡೀ ಸ್ಟೋಕ್ಹೋಮ್ ದ್ವೀಪಗಳ ಮೇಲೆ ಕಟ್ಟಿದ ಊರಾಗಿದೆ. ಹೀಗಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಲು ಬೋಟ್ ಉಪಾಯಯೋಗಿಸಬಹುದಾಗಿದೆ. ನಗರ ಭಾಗದಲ್ಲಿ ಅಥವಾ ಅದಕ್ಕೂ ಮೀರಿ ಎಲ್ಲಿಗೆ ಹೋಗಬೇಕಾದರೂ ಬೋಟ್ ಬಳಸಬಹುದು. ಇದರಿಂದಾಗಿ ಸ್ಟೋಕ್ಹೋಮ್ ಅನ್ನು ಉತ್ತರದ ವೆನಿಸ್ ಎಂದು ಕೂಡ ಕರೆಯಲಾಗುತ್ತದೆ.

ಸ್ವೀಡನ್ ಹೋದವರು ಬೋಟ್ ಪ್ರಯಾಣ ತಪ್ಪಿಸುವ ಹಾಗೆ ಇಲ್ಲ. ಅದು ತಪ್ಪುವುದೂ ಇಲ್ಲ; ಹಾಪ್ ಆನ್ ಹಾಪ್ ಆಫ್ ಬೋಟ್ ಗಳು ನಗರದ ಮಧ್ಯೆ ಮತ್ತು ಸುತ್ತಮುತ್ತ ತುಂಬಾ ಸಾಮಾನ್ಯವಾಗಿ ಕಣ್ಣಿಗೆ ಬೀಳುತ್ತವೆ. ಜಗದ್ವಿಖ್ಯಾತ ನೊಬೆಲ್ ಪ್ರಶಸ್ತಿಯ ಕೊಡುವುದು ಇದೆ ದೇಶ. ಆವಿಷ್ಕಾರಗಳಿಂದ ಪ್ರಸಿದ್ಧಿ ಹೊಂದಿದ ಆಲ್ಫ್ರೆಡ್ ನೊಬೆಲ್ ಎನ್ನುವ ವ್ಯಕ್ತಿ ೧೮೯೫ ರಿಂದ ಮಾನವತೆಗೆ ವಿಶೇಷ ಕೊಡುಗೆ ನೀಡಿದ ವ್ಯಕ್ತಿಗಳನ್ನ ಗೌರವಿಸುವ ಸಲುವಾಗಿ ಈ ಒಂದು ಪ್ರಶಸ್ತಿ ಕೊಡಲು ಶುರುಮಾಡಿದ.

ಭಾರತೀಯರಿಗೆ ವೀಸಾ ಬೇಕಾಗುತ್ತದೆ. ಇಲ್ಲಿಯವರೆಗೆ ಷನ್ಗೆನ್ ವೀಸಾ ಇದ್ದರೆ ಸ್ವೀಡನ್ ಕೂಡ ಹೋಗಬಹುದಿತ್ತು. ಆದರೆ  ೨೦೧೭ರಿಂದ ಸ್ವೀಡನ್’ಗೆ ಪ್ರತ್ಯೇಕ ವೀಸಾ ಬೇಕಾಗಿದೆ.

ಖರ್ಚಿನ ಲೆಕ್ಕಾಚಾರ ಹಾಕಿ ಬಿಡೋಣ, ಅದು ನಮ್ಮ ಜೇಬಿಗೆ ಹೊಂದುವಂತಿದ್ದರೆ ಪೆಟ್ಟಿಗೆ ರೆಡಿ ಮಾಡಿ ಹೊರಡಲು ಹೆಚ್ಚಿನ ಸಮಯದ ಅವಶ್ಯಕತೆ ಇಲ್ಲ ಅಲ್ವಾ ?

ಏರ್ ಟಿಕೆಟ್: ಐವತ್ತು ಸಾವಿರ ರೂಪಾಯಿ ವ್ಯಯಿಸಿದರೆ ಹೋಗಿ ಬರುವ ಏರ್ ಟಿಕೆಟ್ ನಿಮ್ಮದಾಗುತ್ತೆ. ಈ ಬೆಲೆ ಸೀಸನ್ ಮೇಲೆ ಕೂಡ ಅವಲಂಬಿತ. ಜೊತೆಗೆ ಮುಂಗಡ ಕಾಯ್ದಿರಿಸಿದರೆ ಒಂದಷ್ಟು ಉಳಿತಾಯ ಕೂಡ ಆಗುತ್ತದೆ. ಪ್ರಯಾಣಕ್ಕೆ ಒಂದು ವಾರ ಅಥವಾ ಹತ್ತು ದಿನದ ಮುಂಚೆ ಬೆಲೆಗಳು ಗಗನ ಚುಂಬಿಸುತ್ತವೆ ನೆನಪಿರಲಿ.

ವೀಸಾಗೆ ಎಷ್ಟು ಖರ್ಚಾಗುತ್ತದೆ?  ೫೧೦೦ ಭಾರತೀಯ ರೂಪಾಯಿಗಳು. ಇದು ಬದಲಾಗಬಹದು. ವೀಸಾ ಬೆಲೆ ೬೦ ಯುರೋ ಎಂದು ನಿಗದಿ ಪಡಿಸಲಾಗಿದೆ. ಮಕ್ಕಳಿಗೆ ಅಂದರೆ ೧೬ ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ೩೫ ಯುರೋ.

ಹೋಗಿ ಬರಲು ಯಾವ ಸಮಯ ಬೆಸ್ಟ್? ಜೂನ್ ನಿಂದ ಆಗಸ್ಟ್ ಹೆಚ್ಚೆಂದರೆ ಸೆಪ್ಟೆಂಬರ್ ವರೆಗೆ ಪ್ರಯಾಣಿಸಲು ಅತಿ ಸೂಕ್ತ ಸಮಯ.

ವಿದೇಶಿ ವಿನಿಮಯ ಎಷ್ಟು? ನಮ್ಮ ಎಂಟು ರೂಪಾಯಿ ಕೊಟ್ಟರೆ ಸ್ವೀಡನ್ ನ ೧ ಕ್ರೋನ ಸಿಗುತ್ತದೆ. ಇದು ನೇರ ಲೆಕ್ಕ. ಆದರೆ ಬಯಿಂಗ್ ಪವರ್ ಲೆಕ್ಕಾಚಾರದ್ದು ಬೇರೆ ಕಥೆ. ನೂರು ರೂಪಾಯಿಲ್ಲಿ ನೀವು ಭಾರತದಲ್ಲಿ ತಿನ್ನಬಹುದುದಾದ ಊಟ ಇಲ್ಲಿ ೨೫೦೦ ರಿಂದ ೩೦೦೦ ರೂಪಾಯಿ ತೆರಬೇಕು. ಇದೆ ಲೆಕ್ಕಾಚಾರ ಬೇರೆಯದಕ್ಕೂ ಅಳವಡಿಸಿ.

ಉಳಿದುಕೊಳ್ಳುವ ವ್ಯವಸ್ಥೆಯ ಕಥೆ ಏನು? ಇಲ್ಲಿ ಎಲ್ಲವೂ ದುಬಾರಿ. ನೀವು ಸಸ್ಯಾಹಾರಿಯಾಗಿದ್ದರೆ ಇಲ್ಲಿನ ಹೋಟೆಲ್ ನಲ್ಲಿ ನಿಮಗೇನೂ ಸಿಗುವುದಿಲ್ಲ. ಆದ್ದರಿಂದ ಹೋಲ್ ಬುಕ್ ಮಾಡುವುದಕ್ಕಿಂತ ಸುಸಜ್ಜಿತ ಅಪಾರ್ಟ್ಮೆಂಟ್ ಅನ್ನು ಕಾಯ್ದಿರಿಸುವುದು ಒಳಿತು. ಇಂದಿನ ದಿನಗಳಲ್ಲಿ ಸೂಪರ್ ಮಾರ್ಕೆಟ್ ನಲ್ಲಿ ಅಕ್ಕಿ , ಬೇಳೆ ಮತ್ತು ಕಾಳುಗಳು, ಹಣ್ಣು ತರಕಾರಿ, ಹಾಲು ಎಲ್ಲವೂ ಲಭ್ಯವಿದೆ. ರಾತ್ರಿ ಒಂದೊತ್ತು ಬೇಕಾದ್ದ ಮಾಡಿಕೊಂಡು ತಿಂದು, ಬೆಳಿಗ್ಗೆ ತಿಂಡಿಗೆ ಬ್ರೆಡ್ಡು-ಹಣ್ಣು, ಮಧ್ಯಾಹ್ನಕ್ಕೆ ಹಣ್ಣು, ನೀರು; ಬೇಕಾದರೆ ಚೀಸ್ ಸ್ಯಾಂಡ್ವಿಚ್ ನಲ್ಲಿ ಮುಗಿಸಬಹುದು.

ಪ್ರವಾಸದ ಸಮಯದಲ್ಲಿ ಎಷ್ಟು ಹಗುರಾಗಿದ್ದರೆ ಅಷ್ಟು ಒಳಿತು. ಹೊಟ್ಟೆ ತುಂಬಾ ತಿನ್ನುವುದು ಮತ್ತು ಅವಶ್ಯಕತೆ ಇಲ್ಲದೆ ಕುಡಿಯುವುದು ಅದು ನೀರೇ  ಇರಲಿ ಮಾಡಬಾರದು. ಏಕೆಂದರೆ ನಂತರ ನಿಸರ್ಗದ ಕೂಗನ್ನ ನಿರಾಕರಿಸುವಂತಿಲ್ಲ ಅಲ್ಲವೇ? ಇವೆಲ್ಲಾ ವೇಳೆಯನ್ನ ವೇಸ್ಟ್ ಮಾಡಿಸುತ್ತವೆ.

ವೇಳೆ ವ್ಯತ್ಯಯ ಇದೆಯೇ? ಇದೆ, ಚಳಿಗಾಲದಲ್ಲಿ ಭಾರತಕ್ಕಿಂತ ೪:೩೦ ನಿಮಿಷ ಹಿಂದಿದೆ. ಬೇಸಿಗೆಯಲ್ಲಿ ೩:೩೦ ನಿಮಿಷ ಹಿಂದಿರುತ್ತದೆ. ಆಗಸ್ಟ್, ಸೆಪ್ಟೆಂಬರ್ ನಲ್ಲಿ ಇಲ್ಲಿ ಬಿಸಿಲು ಇರುವುದರಿಂದ ವಿಶೇಷ ಬಟ್ಟೆಗಳ ಅವಶ್ಯಕತೆ ಇರುವುದಿಲ್ಲ. ವಾರದ ಓಡಾಟಕ್ಕೆ ಒಬ್ಬ ವ್ಯಕ್ತಿಗೆ ಕನಿಷ್ಠ ಒಂದೂವರೆ ಲಕ್ಷ ಬೇಕು. ಮ್ಯೂಸಿಯಂ ಮತ್ತು ಇತರ ಮಾನ್ಯೂಮೆಂಟ್ಗಳ ಭೇಟಿ ಈ ಖರ್ಚನ್ನ ಇನ್ನಷ್ಟು ಹೆಚ್ಚಿಸಬಹುದು.

ಖರ್ಚು ಆಯಾ ವ್ಯಕ್ತಿಯ ಮೇಲೆ ಅವಲಂಬಿಸಿದೆ. ಇಲ್ಲಿ ಹೇಳಿರುವುದು ಐಷಾರಾಮಿ ಇಲ್ಲದ ಸಾಮಾನ್ಯ ಪ್ರಯಾಣ ವೆಚ್ಚ.

ರಾಜಕೀಯ ವ್ಯಕ್ತಿಗಳಿಗೆ ವಿಶೇಷ ಸವಲತ್ತು ಇಲ್ಲದ  ದೇಶ:

ಯೂರೋಪು ನನಗೆ ಇಷ್ಟ ಆಗುವುದು ಪ್ರಕೃತಿ ಸೌಂದರ್ಯ, ಸುಖ ಶಾಂತಿಗಿಂತ ಹೆಚ್ಚಾಗಿ ಅಲ್ಲಿನ ಸರಕಾರ ತನ್ನ ಪ್ರಜೆಗಳನ್ನ ನೋಡಿಕೊಳ್ಳುವ ರೀತಿಗೆ.  ತನ್ನ ದುಡಿತಕ್ಕೆ ಸಿಕ್ಕ ಹಣದಲ್ಲಿ ಒಂದಷ್ಟು ಪಾಲು ತೆರಿಗೆ ಕೊಡುವ ಪ್ರಜೆಗಳಿಂದಲೇ ಸರಕಾರ ನಡೆಯುವುದು ಎನ್ನುವ ಪರಿಜ್ಞಾನ ಅಲ್ಲಿನ ಸರಕಾರ ನಡೆಸುವ ಜನರಿಗೆ ಇದೆ. ಹೀಗಾಗಿ ತನ್ನ ಪ್ರಜೆಗಳಿಗೆ ಸ್ವಲ್ಪವೂ ಅಡಚಣೆ ಉಂಟಾಗದ ಹಾಗೆ ನೋಡಿಕೊಳ್ಳಲು ಸರಕಾರ ಶ್ರಮಿಸುತ್ತದೆ. ಅಂತೆಯೇ ಪ್ರಜೆಗಳು ಕೂಡ ತಮ್ಮ ಪಾಲಿನ ಜವಾಬ್ದಾರಿಯಿಂದ ನುಣುಚಿಕೊಳ್ಳದೆ ಕರ್ತವ್ಯ ಪ್ರಜ್ಞೆ ಮೆರೆಯುತ್ತಾರೆ.

ಸ್ವೀಡನ್ ಅಂತಹ ಪ್ರಜೆಗಳನ್ನ ಹೊಂದಿದೆ ಅಲ್ಲಿನ ಸರಕಾರ ಜಗತ್ತಿಗೆ ಮಾದರಿ. ಇಲ್ಲಿ ರಾಜಮನೆತನ ಹೆಸರಿಗೆ ಮಾತ್ರ ಇದೆ. ಆದರೆ  ರಾಜನಿಗೆ ಯಾವುದೇ ರೀತಿಯ ಅಧಿಕಾರ ಇಲ್ಲ. ಇಲ್ಲಿ ರಾಜಕೀಯಕ್ಕೆ ಬರುವವರು ಹತ್ತು ಬಾರಿ ಯೋಚಿಸಿ ಬರಬೇಕು. ಏಕೆಂದರೆ ಇಲ್ಲಿ ರಾಜಕೀಯ ವ್ಯಕ್ತಿಗಳಿಗೆ ಯಾವುದೇ ರೀತಿಯ ವಿಶೇಷ ರೀತಿಯ ಸೌಲಭ್ಯಗಳು ಇಲ್ಲ. ಪಾರ್ಲಿಮೆಂಟಿನ ಸದಸ್ಯನಾಗುವುದು ಇತರ ಯಾವುದೇ ಕಂಪನಿಯಲ್ಲಿ ಕೆಲಸ ಮಾಡಿಯೇ ಹಾಗೆ ಒಬ್ಬ ಕೆಲಸಗಾರನಿದ್ದಂತೆ. ಸಣ್ಣ ಸಣ್ಣ ಅಪಾರ್ಮೆಂಟ್ಗಳಲ್ಲಿ ಅವರ ವಾಸ, ಎಲ್ಲಾ ಪಾರ್ಲಿಮೆಂಟ್ ಸದಸ್ಯರಿಗೆ ಸೇರಿ ಒಂದು ಸೆಂಟ್ರಲೈಜ್ಡ್ ಅಡುಗೆಮನೆ ಇರುತ್ತದೆ. ಹಾಗೆಯೇ ತಮ್ಮ ಬಟ್ಟೆ ತಾವೇ ವಾಷಿಂಗ್ ಮಷೀನ್ಗೆ ಹಾಕಬೇಕು, ತಾವೇ ಒಣಗಹಾಕಬೇಕು. ಅಷ್ಟೇ ಅಲ್ಲ ಇಸ್ತ್ರಿ ಕೂಡ ತಾವೇ ಮಾಡಿಕೊಳ್ಳಬೇಕು. ಸಣ್ಣಪುಟ್ಟ ವಿಷಯಗಳಿಗೆ ಸೆಕ್ರೆಟರಿಯನ್ನ ಅವಲಂಬಿಸುವಂತಿಲ್ಲ. ಏಕೆಂದರೆ ಇಲ್ಲಿನ ಯಾವುದೇ ರಾಜಕೀಯ ವ್ಯಕ್ತಿಗೆ ಸರಕಾರ ಸೆಕ್ರೆಟರಿ ನೀಡುವುದಿಲ್ಲ. ತಮ್ಮ ಕೆಲಸ ತಾವೇ ಮಾಡಿಕೊಳ್ಳಬೇಕು. ಪ್ರಜೆಗಳ ತೆರಿಗೆ ಹಣ ರಾಜಕೀಯವ್ಯಕ್ತಿಯ ಸುಖಕ್ಕೆ ಬಳಸಬಾರದು ಎನ್ನುವುದು ಅಲ್ಲಿನ ಸರಕಾರದ ನಿಲುವು.

ಪ್ರಜೆಗಳಿಗೆ ವಿಶೇಷ ಸವಲತ್ತು:

ಸ್ವೀಡನ್ ಹೈರಾರ್ಕಿ (hierarchy) ಇಲ್ಲದ,  ಸಮಾನತೆಯ ಪ್ರಧಾನ ಎಂದು ನಂಬಿದ ಸಮಾಜ. ಪೋಷಕರು ೧೩ ತಿಂಗಳ ವರೆಗೆ ವೇತನ ಸಹಿತ ರಜೆ ಪಡೆಯಬಹುದು. ಇದರಲ್ಲಿ ಅಪ್ಪನಿಗೆ ಒಂದು ತಿಂಗಳು ಉಳಿದ ೧೨ ತಿಂಗಳು ಅಮ್ಮನಿಗೆ. ಈ ರಜವನ್ನ ಒಟ್ಟಿಗೆ ತೆಗೆದುಕೊಳ್ಳಬೇಕು ಎನ್ನುವ ಕಾನೂನು ಇಲ್ಲ. ಮಗುವಿಗೆ ಐದು ವರ್ಷ ಆಗುವವರೆಗೆ ಯಾವಾಗಬೇಕಾದರೂ ಅವಶ್ಯಕತೆಗೆ ಅನುಗುಣವಾಗಿ ರಜಾ ತೆಗೆದುಕೊಳ್ಳಬಹುದು..

ಕೆಲಸದಲ್ಲಿನ ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡುವ ಇಲ್ಲಿ, ಜಗತ್ತಿನಲ್ಲೇ ಅತಿ ಕಡಿಮೆ ಗಂಟೆ ಕೆಲಸ ಮಾಡುತ್ತಾರೆ. ಆದರೆ ಉತ್ಪಾದನೆಯಲ್ಲಿ ಹಿಂದೆ ಬಿದ್ದಿಲ್ಲ . ಜಗತ್ವಿಖ್ಯಾತ ‘ವೋಲ್ವೋ’   ‘ಇಕೆಯಾ’ ಕಂಪನಿಗಳ ತವರು ಇದು. ಸರಕಾರದ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಪ್ರತಿವರ್ಷ ತನ್ನ ಪ್ರಜೆಗಳಿಗೆ ತಾನೇ ಲೆಕ್ಕಹಾಕಿ ಇಷ್ಟು ಹಣ ಕಟ್ಟಬೇಕು ಎನ್ನುವ ಸಂದೇಶ ರವಾನೆ ಮಾಡುತ್ತೆ, ಅದು ಸರಿ ಇದ್ದರೆ ಒಂದು ಸಣ್ಣ ಮೆಸೇಜ್ ಮೊಬೈಲ್ ಮೂಲಕ ಕಳಿಸಿ ತೆರಿಗೆ ಕಟ್ಟಬಹುದು.

ಪ್ರತಿ ಪ್ರಜೆಯೂ ವರ್ಷದಲ್ಲಿ ೫ ವಾರ ಭತ್ಯೆ ಸಹಿತ ರಜಾ ಪಡೆಯಲು ಅರ್ಹನಾಗಿದ್ದಾನೆ. ಇದು ಬಹುತೇಕ ಎಲ್ಲಾ ಯೂರೋಪಿನ ದೇಶಗಳಲ್ಲೂ ವಾಡಿಕೆ ಇದೆ. ಆದರೆ ಸ್ವೀಡೆನ್ ನ ವಿಶೇಷವೇನೆಂದರೆ ಆಕಸ್ಮಾತ್ ನಿಮ್ಮ ರಜಾ ಸಮಯದಲ್ಲಿ ನೀವು ಖಾಯಿಲೆ ತುತ್ತಾದರೆ ಅದನ್ನ ರಜಾ ಎಂದು ಪರಿಗಣಿಸುವುದಿಲ್ಲ, ಬದಲಾಗಿ ಕೆಲಸಮಾಡುವ ದಿನದಲ್ಲಿ ‘ಸಿಕ್ ಲೀವ್ ‘ ಎಂದು ಪರಿಗಣಿಸುತ್ತದೆ. ಎಲ್ಲಕ್ಕೂ ಹೆಚ್ಚು ಹುಬ್ಬೇರಿಸುವಂತೆ ಮಾಡುವುದು ಈ ವಾರ್ಷಿಕ ರಜಾ ದಿನಗಳಲ್ಲಿ ನೂರಕ್ಕೆ ಇಪ್ಪತ್ತಕ್ಕೂ ಹೆಚ್ಚು ಪೊಲೀಸ್ ಠಾಣೆಗಳು ಕೂಡ ಮುಚ್ಚುವುದು.

ಜಗತ್ತಿನ ಅತ್ಯಂತ ಉತ್ತಮ ಶಿಕ್ಷಣ ಪದ್ಧತಿ:

ಸ್ವೀಡನ್ ನಲ್ಲಿ ಶಿಕ್ಷಕರಾಗಲು ಉನ್ನತ ಶಿಕ್ಷಣ ಹೊಂದಿರಬೇಕು. ಡಾಕ್ಟ್ರೇಟ್ ಪದವಿ ಹಲವು ವಿಷಯಗಳ ಬೋಧಿಸಲು ಹೊಂದಿರುವು ಕಡ್ಡಾಯ. ಶಿಕ್ಷಕ ಹುದ್ದೆ ಪಡೆಯಲು ಹಲವು ಹಂತದ ಪರೀಕ್ಷೆಗಳು ಇರುತ್ತವೆ. ಅವೆಲ್ಲಾ ತೇರ್ಗಡೆ ಹೊಂದಿದ ನಂತರ ಒಂದು ಕಮಿಟಿ ಕೊನೆಯ ಹಂತದ ಪರೀಕ್ಷೆಗೆ ಒಡ್ಡುತ್ತದೆ. ಈ ಕೊನೆಯ ಹಂತದ ಪರೀಕ್ಷೆ ಮುಖ್ಯ ಉದ್ದೇಶ ಶಿಕ್ಷಕನಾಗಲು ಬಂದಿರುವನಿಗೆ ನಿಜವಾಗಿಯೂ ಬೋಧನೆಯಲ್ಲಿ ಆಸಕ್ತಿ, ಪ್ರೀತಿ ಇದೆಯಾ? ಎಂದು ತಿಳಿಯುವುದು. ಕಮಿಟಿಯಲ್ಲಿ ಇರುವರಿಗೆ ಅಭ್ಯರ್ಥಿಯ ಮೇಲೆ  ಎಳ್ಳುಕಾಳಿನಷ್ಟು ಸಂದೇಹ ಬಂದರೂ ಆತ ಎಲ್ಲಾ ಹಂತದಲ್ಲಿ ತೇರ್ಗಡೆ ಹೊಂದಿದ್ದರೂ, ಆತನಿಗೆ ಶಿಕ್ಷಕ ವೃತ್ತಿ ನೀಡದೆ ಹೋಗಬಹುದು. ದೇಶದ ಆವರೇಜ್ ಸ್ಯಾಲರಿಗಿಂತ ಶಿಕ್ಷಕರು ಹೆಚ್ಚು ಭತ್ಯೆ ಪಡೆಯುತ್ತಾರೆ. ಇಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಗೌರವಾನ್ವಿತ ಹುದ್ದೆ.

ಇಲ್ಲಿನ ಮಕ್ಕಳು ಜಗತ್ತಿನ ಎಲ್ಲಾ ಮಕ್ಕಳಿಗಿಂತ ಅತಿ ಕಡಿಮೆ ಸಮಯವನ್ನ ಶಾಲೆಯಲ್ಲಿ ಕಳೆಯುತ್ತಾರೆ. ಇಲ್ಲಿನ ಶಿಕ್ಷಣ ಪದ್ಧತಿ ಹೇಗೆಂದರೆ ಮಗು ಶಾಲೆಗೆ ಸೇರಿದಾಗ ಯಾವ ಮಟ್ಟದಲ್ಲಿ ಇತ್ತು ವರ್ಷಾಂತ್ಯದಲ್ಲಿ ಯಾವ ಮಟ್ಟದಲ್ಲಿದೆ ಎನ್ನುವುದರ ಮೇಲೆ ಕಲಿಕೆಯ ಮಟ್ಟ ಗುರುತಿಸುತ್ತಾರೆ. ಅಪ್ಪಿ ತಪ್ಪಿಯೂ ಒಂದು ಮಗುವಿನೊಂದಿಗೆ ಇನ್ನೊಂದು ಮಗುವಿನ ಕಲಿಕೆಯ ಹೋಲಿಕೆ ಮಾಡುವುದಿಲ್ಲ.

ಸ್ವೀಡೆನ್ ಸುತ್ತುವಾಗ ಅಬ್ಬಾ ಹೀಗೂ ಉಂಟಾ ಎನ್ನಿಸುವಂತ ಒಂದಷ್ಟು ವಿಷಯಗಳು

ಬೇಸಿಗೆಯಲ್ಲಿ ಬೆಳಗಿನ ೩:೩೦ ಕ್ಕೆ ಸೂರ್ಯ ಉದಯವಾಗುತ್ತಾನೆ. ಚಳಿಗಾಲದಲ್ಲಿ ಮಧ್ಯಾಹ್ನ ೩:೩೦ ಕ್ಕೆ. ರಾತ್ರಿಯೇನೂ ಎನ್ನುವ ಮಟ್ಟಕೆ ಸೂರ್ಯ ಕಾಣೆಯಾಗುತ್ತಾನೆ. ಕಸ ಬಳಸಿ ವಿದ್ಯುತ್ ಉತ್ಪಾದನೆ ಮಾಡುತ್ತಾರೆ. ಈ ದೇಶ ಎಷ್ಟು ಸ್ವಚ್ಛವಾಗಿದೆ ಎಂದರೆ… ಕಸವನ್ನ ಪಕ್ಕದ ನಾರ್ವೆಯಿಂದ ಹಣ ಕೊಟ್ಟು ತರಿಸಿಕೊಳ್ಳುತ್ತಾರೆ. ಸ್ವೀಡನ್ ನಲ್ಲಿ ಸ್ವೀಡಿಷ್ ಭಾಷೆ ಅಧಿಕೃತ ಭಾಷೆಯಾಗಿ ಒಪ್ಪಿಕೊಂಡಿದ್ದು ೨೦೦೯ ರಲ್ಲಿ. ಇಲ್ಲಿ ಸ್ವೀಡಿಷ್ ಕಲಿಯುವುದು ಇಂದಿಗೂ ಕಿರಿಕಿರಿ. ಏಕೆಂದರೆ ಇಲ್ಲಿನ ಬಹುತೇಕ ಎಲ್ಲರಿಗೂ ಇಂಗ್ಲಿಷ್ ಭಾಷೆಯ ಜ್ಞಾನವಿದೆ. ಇಲ್ಲಿ ಯಾವುದೇ ಪದಾರ್ಥ ಕೊಂಡರೂ ಒಂದು ವರ್ಷ ಗ್ಯಾರಂಟಿ ಇರುತ್ತದೆ. ಗುಣಮಟ್ಟದಲ್ಲಿ ವ್ಯತ್ಯಾಸವಾದರೆ ಅದನ್ನ ತಿರುಗಿಸಿ ನೀಡಬಹುದು.

ಫಿನ್ಲ್ಯಾಂಡ್ ಮತ್ತು ಸ್ವೀಡನ್ ಬಾರ್ಡರ್ ನಲ್ಲಿ ಒಂದು ಗಾಲ್ಫ್ ಕ್ಲಬ್ ಇದೆ. ಅರ್ಧ ಫಿನ್ಲ್ಯಾಂಡ್ಗೆ ಸೇರಿದರೆ ಉಳಿದರ್ಧ ಸ್ವೀಡೆನ್ಗೆ ಸೇರಿದೆ! ೧೮೦೯ ರ ವರೆಗೆ ಫಿನ್ಲ್ಯಾಂಡ್ ಸ್ವೀಡನ್ ಗೆ ಸೇರಿತ್ತು.  ಸ್ವೀಡಿಷ್ ಪಾಸ್ಪೋರ್ಟ್ ಜಗತ್ತಿನ ಹೆಚ್ಚು ಬಲಶಾಲಿ ಪಾಸ್ಪೋರ್ಟ್ ಎನ್ನುವ ಹೆಗ್ಗಳಿಕೆ ಪಡೆದಿದೆ.

ಸ್ವೀಡನ್ ದೇಶದ  ಆಫೀಶಿಯಲ್ ಟ್ವಿಟ್ಟರ್ ಅಕೌಂಟ್ ಅನ್ನು ಪ್ರತಿವಾರ ಒಬ್ಬ ಪ್ರಜೆಗೆ ನಿಭಾಯಿಸಲು ನೀಡಲಾಗುತ್ತದೆ. ವೋಲ್ವೋ ಕಂಪನಿ ಸೀಟ್ ಬೆಲ್ಟ್ ಪೇಟೆಂಟ್ ಪಡೆದಿದ್ದರೂ ಇತರ ಕಾರು ಉತ್ಪಾದಕ ಕಂಪನಿಗಳು ಅದನ್ನ ಪುಕ್ಕಟೆ ಉಪಯೋಗಿಸಲು ಅನುಮತಿ ನೀಡಿದೆ. ಹೀಗಾಗಿ ಪ್ರತಿ ಆರು ನಿಮಿಷಕ್ಕೆ ಒಂದು ಜೀವ ಉಳಿಸಿದ ಕೀರ್ತಿ ಅದಕ್ಕೆ ತಲುಪುತ್ತದೆ. ಇಲ್ಲಿನ ಯೂನಿವರ್ಸಿಟಿಯಲ್ಲಿ ಅಧ್ಯಯನ ಪೂರ್ಣ ಉಚಿತ.

ಟೂರಿಸ್ಟ್ ಕೂಡ ಕಲಿತು ಬರುವ ಪದ ಫೀಕಾ (fika ) ಉಲ್ಟಾ ಮಾಡಿ ಕಾಫೀ ಆಯ್ತು ಅಲ್ವಾ? ಹೌದು ಕಾಫಿ ಬ್ರೇಕ್ ಗೆ ಇಲ್ಲಿ ಫೀಕಾ ಎನ್ನುತ್ತಾರೆ. ಹಾಗೆಯೇ ಲಗಾಮ್ (lagom ) ಅಂದರೆ ಚೆನ್ನಾಗಿದೆ ಎಂದು ಅರ್ಥ.

ಪ್ರತಿ ದೇಶವೂ ಕಲಿಸುವ ಪಾಠ, ಒದಗಿಸುವ ಹೊಸ ನೋಟ ಬದುಕನ್ನ ನೋಡುವ ರೀತಿಯನ್ನೇ ಬದಲಾಯಿಸುತ್ತವೆ. ಯೂರೋಪು ಮೈಯಲ್ಲಿ ಕಸುವಿದ್ದಾಗ ಸುತ್ತಬೇಕು. ಏಕೆಂದರೆ ಇಲ್ಲಿ ನಡೆದು ನೋಡುವ ಜಾಗಗಳು ಹೆಚ್ಚು.

ತಡವಿನ್ನೇಕೆ? ಹೆಗಲಿಗೆ ಬ್ಯಾಗ್ ಏರಿಸಿ ಪ್ರಯಾಣ ಶುರು ಮಾಡಿ.

Facebook ಕಾಮೆಂಟ್ಸ್

Rangaswamy mookanahalli: ಎರಡು ಸಾವಿರದ ಇಸವಿಯಲ್ಲಿ ಸ್ಪೇನ್’ನ ಒಂದು ರಾಜ್ಯ ಕತಲೂನ್ಯದ ರಾಜಧಾನಿ ಬಾರ್ಸಿಲೋನಾದಲ್ಲಿ ಇಳಿದಾಗ ಸ್ಪಾನೀಷ್ ಭಾಷೆಯ ಗಂಧಗಾಳಿ ಇಲ್ಲದ, ಜೀವನ ಕರೆದತ್ತ ಮುಖಮಾಡಿ ಹೊರಟ ಲೇಖಕರು ಇಂದು ಸ್ಪಾನಿಷ್ ಭಾಷೆಯನ್ನ ಕನ್ನಡದಷ್ಟೇ ಸುಲಲಿತವಾಗಿ ಮಾತಾಡಬಲ್ಲರು . ಒಂದೂವರೆ ದಶಕಕ್ಕೂ ಹೆಚ್ಚಿನ ಅಲ್ಲಿನ ನೆಲದ ನಂಟು ಅಲ್ಲಿನ ಜನರೊಂದಿನ ಒಡನಾಟ ಅಲ್ಲಿನ ಗಾದೆಗಳನ್ನ ಕಲಿಸುತ್ತದೆ . ಅಲ್ಲಿನ ಗಾದೆಗಳು ನಮ್ಮ ಗಾದೆಗಳಂತೆಯೆ ಇದೆಯಲ್ಲ ಎನ್ನುವ ಸಹಜ ಕುತೂಹಲ ಕನ್ನಡಿಗರಿಗೆ ಸ್ಪಾನಿಷ್ ಗಾದೆಗಳು ಬರೆಯಲು ಪ್ರೇರಣೆ .
Related Post