ನಮ್ಮಲ್ಲಿ ಒಂದು ಗಾದೆ ಮಾತು ‘ನಡೆಯುವ ಕಾಲೇ ಎಡುವುದು’ ಎನ್ನುತ್ತದೆ. ಅಂದರೆ ಯಾರು ನಡೆಯುತ್ತಾರೆ ಅವರು ಎಡವುವ ಸಾಧ್ಯತೆ ಹೆಚ್ಚಾಗಿರುತ್ತದೆ. ಬಿದ್ದರೂ ಕೊನೆಗೆ ಗುರಿ ಮುಟ್ಟುವುದು ಮಾತ್ರ ನಡೆಯುವನೇ ಹೊರತು, ಕುಳಿತು ಬರಿ ಮಾತಲ್ಲಿ ಕಾಲ ಕಳೆಯುವನಲ್ಲ ಎನ್ನುವುದು ಅರ್ಥ. ನಡೆಯದೆ ಇರುವವನು ಬೀಳದೆ ಇರಬಹುದು, ಆದರೇನು ಗೆಲುವಿಗೂ ಅಥವಾ ಸೋಲಿಗೂ ಆತ ಅವಕಾಶವನ್ನೇ ನೀಡಲಿಲ್ಲವಲ್ಲ. ಸುಮ್ಮನೆ ಕುಳಿತು ಸಾಧ್ಯ ಅಸಾಧ್ಯತೆಗಳ ಮಾತನಾಡುತ್ತ ವೇಳೆ ಕಳೆಯುವುದಕ್ಕಿಂತ ಕೆಲಸ ಮಾಡುತ್ತಾ ಅದರಲ್ಲಿ ನೂರು ತಪ್ಪು ಮಾಡುತ್ತಾ ಸೋಲು ಕಾಣುವುದು ಒಳಿತು. ಕೊನೆಪಕ್ಷ ಅದರಿಂದ ಕಲಿಯುವ ಪಾಠ ಉಳಿದ ಜೀವನಕ್ಕೆ ದಾರಿದೀಪವಾಗುತ್ತದೆ.
ನಮ್ಮ ಹಿರಿಯರದು ಎಂತಹ ಉನ್ನತ ಚಿಂತನೆ. ಸುಮ್ಮನೆ ಕೂರಬೇಡ, ಕೆಲಸ ಮಾಡುತ್ತಾ ಹೋಗು. ಅಕಸ್ಮಾತ್ ಅದರಲ್ಲಿ ಸೋಲು ಅಥವಾ ತಪ್ಪುಗಳಾದರೆ, ಅದು ಅಕ್ಷಮ್ಯ ಅಪರಾಧವಲ್ಲ. ಆದರೆ ಸುಮ್ಮನೆ ಕೂರುವುದು ಮಾತ್ರ ಸಲ್ಲದು ಎನ್ನುವುದನ್ನು ಅತ್ಯಂತ ಕಡಿಮೆ ಪದಗಳ ಬಳಕೆಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಜಗತ್ತಿನ ಯಾವುದೇ ದೇಶವಾಗಿರಲಿ ಅವರ ಭಾಷೆ ಯಾವುದೇ ಇರಲಿ, ಅವರಲ್ಲಿರುವ ಮೂಲಭೂತ ಮನುಷ್ಯ ಗುಣಗಳು ಮಾತ್ರ ಒಂದೇ. ಮೇಲ್ನೋಟಕ್ಕೆ ನಾವೆಲ್ಲಾ ಬಹಳಷ್ಟು ಭಿನ್ನರೆನಿಸಿದರೂ ಮೂಲದಲ್ಲಿ ನಾವೆಲ್ಲಾ ಒಂದೇ. ಸ್ಪಾನಿಷ್ ಮಾತನಾಡುವ ಎಲ್ಲಾ ದೇಶಗಳಲ್ಲಿ, (ಗಮನಿಸಿ ಸ್ಪಾನಿಷ್ ಭಾಷೆ ಹತ್ತಿರತ್ತಿರ ೬೦೦ ಮಿಲಿಯನ್ ಜನರ ಭಾಷೆ, ೨೦ಕ್ಕೂ ಹೆಚ್ಚು ದೇಶಗಳಲ್ಲಿ ಅಧಿಕೃತ ಭಾಷೆಯಾಗಿದೆ.) ಈ ಗಾದೆ ಕೂಡ ಜನಜನಿತ. ಹೀಗೆ ಸ್ಪಾನಿಷ್ ಮಾತನಾಡುವ ದೇಶಗಳಲ್ಲಿ ‘Barco que no anda no llega a Puerto’ ಎನ್ನುತ್ತಾರೆ. (ಬಾರ್ಕೋ ಕೆ ನೋ ಅಂದಾ ನೋ ಯೇಗ ಆ ಪ್ಯೂರ್ತೊ ) ಅಂದರೆ ಯಾವ ಹಡಗು ಮುಂದೆ ಸಾಗದೆ ನಿಲ್ಲುತ್ತದೆಯೋ ಅದು ದಡ/ಗುರಿ ಸೇರುವುದಿಲ್ಲ ಎಂದರ್ಥ.
ಗಮನಿಸಿ, ಇಲ್ಲಿ ಉಪಮೆಯಾಗಿ ಹಡಗನ್ನು ಮತ್ತು ದಡ ಅಥವಾ ಬಂದರನ್ನು ಉಪಯೋಗಿಸಿದ್ದಾರೆ. ಆದರೆ ಅರ್ಥ ಮಾತ್ರ ಸೇಮ್. ಹಡಗು ಚಲಿಸದೆ ನಿಂತಲ್ಲೇ ನಿಂತರೆ ಅದು ಅದರ ನಿರ್ದಿಷ್ಟ ಗುರಿಯನ್ನು ಹೇಗೆ ತಾನೇ ತಲುಪೀತು? ಪ್ರಯಾಣ ಹೊರಟ ಹಡಗಿಗೆ ಮಾರ್ಗಮಧ್ಯದಲ್ಲಿ ಒಂದಲ್ಲ ಹಲವು ಅಡಚಣೆಗಳು ಎದುರಾಗಬಹುದು. ಆದರೂ ಅದು ಗುರಿ ಮುಟ್ಟುವ ಸಾಧ್ಯತೆಯಂತೂ ಇದ್ದೆ ಇರುತ್ತದೆ. ಅದೇ ಪ್ರಯಾಣ ಶುರುವೇ ಮಾಡದ ಹಡಗು ಖಂಡಿತಾ ತನ್ನ ಗುರಿಯನ್ನು ತಲುಪುವುದಿಲ್ಲ. ಪ್ರಯತ್ನವೇ ಪರಮಾತ್ಮ, ಅಲ್ಲಿ ಗೆಲುವಿನ ಸಾಧ್ಯತೆ ಇರುತ್ತದೆ.
ಇದಕ್ಕೆ ಹತ್ತಿರದ ಇಂಗ್ಲಿಷ್ ಗಾದೆ ‘Journey of a thousand miles begins with one step’ ಎನ್ನುತ್ತದೆ. ಪ್ರಯಾಣದ ದೂರ ನೋಡಿ ಹೆದರಿದರೆ ನಾವು ಗುರಿ ಮುಟ್ಟಲು ಸಾಧ್ಯವಿಲ್ಲ. ದೂರ ಎಷ್ಟಾದರೂ ಇರಲಿ ಪ್ರಾರಂಭಿಸಿದರೆ ಹೇಗೋ ಅದು ಮುಗಿಯುತ್ತದೆ ಎನ್ನವುದು ಇಲ್ಲಿನ ನಂಬಿಕೆ.
ನಾವು ಬಳಸುವ ಭಾಷೆ, ಉಪಮೆ, ಉದಾಹರಣೆಗಳು ಆಯಾ ಪ್ರದೇಶಕ್ಕೆ ತಕ್ಕಂತೆ ಬದಲಾಗಿವೆ; ಮೂಲೋದ್ದೇಶ ಮಾತ್ರ ಎಂದೆಂದಿಗೂ ಒಂದೇ.
ಸ್ಪ್ಯಾನಿಷ್ ಪದಗಳ ಅರ್ಥ ಮತ್ತು ಉಚ್ಚಾರಣೆ :
Barco: ಹಡಗು, ಶಿಪ್ ಎನ್ನುವ ಅರ್ಥ. ಬಾರ್ಕೋ ಎನ್ನುವುದು ಉಚ್ಚಾರಣೆ.
que no anda: ನಡೆಯುವುದಿಲ್ಲ ಎನ್ನುವುದು ಯಥಾರ್ಥ. ಚಲಿಸದಿರುವುದು, ಚಲನೆಯಿಲ್ಲದಿರುವುದು ಎನ್ನುವುದು ಸಾಂಧರ್ಬಿಕ ಅರ್ಥ. ಕೆ ನೋ ಅಂದಾ ಎನ್ನುವುದು ಉಚ್ಚಾರಣೆ.
no llega: ಸೇರುವುದಿಲ್ಲ, ತಲುಪುವುದಿಲ್ಲ ಎನ್ನುವ ಅರ್ಥ. ನೋ ಯೇಗ ಎನ್ನುವುದು ಉಚ್ಚಾರಣೆ.
a puerto: ಬಂದರು, ದಡ ಎನ್ನುವ ಅರ್ಥ. ಸಾಂದರ್ಭಿಕವಾಗಿ ಸೇರಬೇಕಾದ ಜಾಗ ಎನ್ನುವ ಅರ್ಥ ಕೂಡ ನೀಡುತ್ತದೆ. ಆ ಪ್ಯೂರ್ತೊ ಎನ್ನುವುದು ಉಚ್ಚಾರಣೆ.
Facebook ಕಾಮೆಂಟ್ಸ್