X
    Categories: ಅಂಕಣ

ಹಾಗಲಕಾಯಿ ಕೃಷಿ

ತರಕಾರಿಗಳಲ್ಲಿ ಹಾಗಲಕಾಯಿಗೆ ತನ್ನದೇ ಆದ ಮಹತ್ತ್ವವಿದೆ. ಊಟಕ್ಕೆ ಹಾಗಲಕಾಯಿಯ ಪದಾರ್ಥವಿದ್ದರೆ ಊಟ ಸೇರುವುದು ಹೆಚ್ಚು. ಹಾಗಲಕಾಯಿ ಹತ್ತಾರು ಪದಾರ್ಥಗಳಿಗೆ ಬಳಕೆಯಾಗುತ್ತಿರುವುದು ಇದಕ್ಕೆ ಕಾರಣ. ಕೆಲವರಂತು ವರ್ಷಪೂರ್ತಿ ಹಾಗಲಕಾಯಿ ಅನ್ನದ ಬಟ್ಟಲಿಗೆ ಸಿಗುವ ರೀತಿಯಲ್ಲಿ ಕೃಷಿ ಮಾಡುತ್ತಲೇ ಇರುತ್ತಾರೆ. ಮಧುಮೇಹಿಗಳು ನೀರುಳ್ಳಿ ಸೇರಿಸಿ ಸಲಾಡ್ ಮಾಡಿ ಹಾಗಲಕಾಯಿಯನ್ನು ಹಸಿಯಾಗಿಯೇ ಸೇವಿಸುವುದು ಉತ್ತಮ. ಕೇರಳದಲ್ಲಿ ಹೆಸರುವಾಸಿಯಾದ ಎಲ್ಲ ತರಕಾರಿಗಳನ್ನು ಸೇರಿಸಿ ಮಾಡುವ ಅವಿಲು ಪದಾರ್ಥಕ್ಕೆ ಹಾಗಲಕಾಯಿಯ ನಾಲ್ಕು ತುಂಡುಗಳು ಸೇರದಿದ್ದರೆ ರುಚಿಯೇ ಬರಲಾರದು! ಹಾಗಲಕಾಯಿ ಕಹಿಯೆಂದು ದೂರವಿರಿಸುವವರು, ಬಹಳ ಉಷ್ಣ ಎಂದು ಮುಟ್ಟದವರಿದ್ದರೂ ಹಾಗಲಕಾಯಿಪ್ರಿಯರ ಸಂಖ್ಯೆ ಬಹಳ ದೊಡ್ಡದಿದೆ. ಪೋಡಿಯಿಂದ ಹಿಡಿದು ಸಂಡಿಗೆಯವರೆಗೆ ಹಾಗಲಕಾಯಿಯ ಖಾದ್ಯ ವೈವಿಧ್ಯದ ಪಟ್ಟಿ ತುಂಬ ಉದ್ದವಿದೆ.  ಹಾಗಲಕಾಯಿಯನ್ನು ವರ್ಷದ ಎಲ್ಲ ಋತುಗಳಲ್ಲಿಯೂ ಬೆಳೆಯಬಹುದು. ಒಂದು ಬಳ್ಳಿ ಬೆಳೆದರೆ ಅದು ಕೆಲವು ತಿಂಗಳುಗಳ ಕಾಲ ಹಾಗಲಕಾಯಿ ಕೊಡಬಲ್ಲುದು. ಇದರ ಕೃಷಿ ಉಳಿದ ತರಕಾರಿಗಳಿಗೆ ಹೋಲಿಸಿದರೆ ತುಂಬ ಸುಲಭವಲ್ಲ.

ವೈವಿಧ್ಯಗಳು

ಹತ್ತಾರು ವೈವಿಧ್ಯದ ಹಾಗಲ ತಳಿಗಳಿವೆ. ಕೆಲವು ಮೂರು ನಾಲ್ಕು ಇಂಚುಗಳಷ್ಟು ಉದ್ದ ಬೆಳೆದರೆ ಇನ್ನು ಕೆಲವು ಒಂದೂವರೆ ಎರಡು ಅಡಿಗಳಷ್ಟು ಉದ್ದನೆಯ ಹಾಗಲ ತಳಿಗಳಿವೆ. ಹೊರಮೈ ಮುಳ್ಳಿನ ರಚನೆಯವು, ಮುಳ್ಳಿಲ್ಲದೆ ದೊರಗು ರಚನೆಯವು, ಹಸಿರು ಮತ್ತು ಬಿಳಿ ಬಣ್ಣದವು, ಗಾಢ ಹಸಿರು ಮತ್ತು ನಸು ಹಸಿರು ಬಣ್ಣದವು ಹೀಗೆ ಹಾಗಲಕಾಯಿ ತಳಿಗಳು ಅನೇಕ. ಯಾವುದಿದ್ದರೂ ಹಾಗಲಕಾಯಿಯಂತು ಪೂರ್ತಿ ಕಹಿ ಎಂಬುದರಲ್ಲಿ ವ್ಯತ್ಯಾಸವೇ ಇಲ್ಲ.

ಬಿತ್ತನೆ

 ಹಾಗಲ ಬೆಳೆಯಲು ಅದಕ್ಕೆ ಚಪ್ಪರವೇ ಬೇಕೆಂದೇನಿಲ್ಲ. ಆಧಾರ ಕೋಲು ನಟ್ತು ಅದಕ್ಕೆ ಹಬ್ಬಿಸಿಯೂ ಹಾಗಲಬೆಳೆಯಬಹುದು. ಧರೆಗಳಿಗೆ ಬಳ್ಳಿ ಹಬ್ಬಿಸಿಯೂ ಬೆಳೆಯಬಹುದು. ಕಂಪೌಂಡಿಗೆ ಹಬ್ಬಿಸಿ ಪೇಟೆಗಳಲ್ಲಿ ಬೆಳೆಯಬಹುದು. ಚಟ್ತಿಗಳಲ್ಲಿ ಗಿಡಮಾಡಿದರೆ ನಗರಗಳಲ್ಲಿ ಕಂಪೌಂಡಿಗೆ ಚೆನ್ನಾಗಿ ಹಬ್ಬಿಸಬಹುದು. ಒಂದು ಕುಟುಂಬದ ಅಡುಗೆ ಮನೆಗೆ ಎರಡರಿಂದ ಮೂರು ಬಳ್ಳಿಗಳಿದ್ದರೆ ಧಾರಾಳ ಸಾಕು. ಒಂದು ಸಣ್ಣ ಚಪ್ಪರ ಮಾಡುವುದಿದ್ದರೆ ಒಂದೆರಡು ಬಳ್ಳಿ ಬೆಳೆಯಲೇ ಬೇಕು. ಮಳೆಗಾಲದಲ್ಲಿ ಬಿತ್ತನೆ ಮಾಡುವುದಾದರೆ ಹೊಂಡ ಮಾಡುವ ಅಗತ್ಯ ಇಲ್ಲ. ಆದರೆ ಬೇಸಿಗೆಯಲ್ಲಿ ಒಂದು ಅಡಿಯಷ್ಟಾದರೂ ಹೊಂಡ ಮಾಡಿಯೇ ಬಿತ್ತನೆ ಮಾಡಬೇಕು. ಮಳೆಗಾಲದಲ್ಲಿ ಹಾಗಲಬೆಳೆಯುವಾಗ ತುಂಬ ನೀರು ನೆಲೆನಿಲ್ಲದ ಜಾಗಗಳನ್ನು ಆಯ್ಕೆ ಮಾಡುವುದೊಳಿತು. ಬಿತ್ತನೆಯ ಆರರಿಂದ ಏಳು ದಿವಸಗಳಲ್ಲಿ ಹಾಗಲ ಬೀಜಗಳು ಮೊಳಕೆಯೊಡೆಯುತ್ತವೆ. ಈ ಹಂತದಲ್ಲಿ ಅದರ ಲಾಲನೆ ಪೋಷಣೆಗೆ ಒತ್ತುಕೊಡಬೇಕಾಗುತ್ತದೆ.

ಕಹಿಯಾದರೂ ಕೀಟಗಳು

 ಚಿಕ್ಕ ಗಿಡವಾಗಿರುವಾಗಲೆ ಸಾಕಷ್ಟು ಹುಳ ಹುಪ್ಪಟೆಗಳ ಉಪಟಳ ಹಾಗಲ ಗಿಡಗಳಿಗಿರುತ್ತವೆ. ಗೋಮೂತ್ರ ಅಥವ ಬೆಳ್ಳುಳ್ಳಿ ಎಸಳುಗಳನ್ನು ಜಜ್ಜಿದ ರಸ ಸಿಂಪಡಿಸಿ ಇದನ್ನು ಹತೋಟಿ ಮಾಡಬಹುದು. ಗಿಡಗಳಿಗೆ ನಾಲ್ಕರಿಂದ ಆರು ಎಲೆಗಳು ಬಂದಾಗ ಸಪ್ಪು, ಹಟ್ಟಿಗೊಬ್ಬರ ಕೊಡಬಹುದು. ಎಳೆಯ ಗಿಡಗಳಿಗೆ ಸಪ್ಪು ಗೊಬ್ಬರಗಳು ತಾಗದಂತೆ ಬಹಳ ಜಾಗ್ರತೆ ಅಗತ್ಯ. ಗಿಡಗಳು ಬಳ್ಳಿಯಾಗಿ ಬೆಳೆಯಲು ಆರಂಭಿಸಿದೊಡನೆ ಅದಕ್ಕೆ ಆಧಾರ ಕೋಲು, ಬಳ್ಳಿ ಕೊಟ್ಟು ಆಧರಿಸಬೇಕು. ಚಪ್ಪರ ಹಾಕುವುದಿದ್ದರೆ ಈ ಸಮಯವೇ ಸೂಕ್ತ. ಈಗಂತು ನೈಲಾನ್ ಬಳ್ಳಿಗಳನ್ನು ಹೆಣೆದು ಸುಲಭವಾಗಿ ಚಪ್ಪರಗಳನ್ನು ನಿರ್ಮಿಸಿಕೊಳ್ಳುವುದು ಹೆಚ್ಚುತ್ತಿದೆ. ಹಾಗಲ ಮಿಡಿಗಳು ದೊಡ್ಡದಾಗಿ ಹೂವರಳಿ ಬೆಳೆಯುವ ಹಂತದಲ್ಲಿ ಹಣ್ಣುನೊಣಗಳ ಹಾವಳಿ ಹಾಗಲಕ್ಕೆ ವಿಪರೀತ.

ಪ್ಲಾಸ್ಟಿಕ್ ಬಳಕೆ

 ಹಾಗಲ ಮಿಡಿಗಳನ್ನು ಹಣ್ಣುನೊಣಗಳಿಂದ ರಕ್ಷಿಸಲು ಹಲವರು ಕೀಟನಾಶಕಗಳನ್ನು ಉಪಯೋಗ ಮಾಡುತ್ತಾರೆ. ಕೆಲವೆಡೆ ಮಾರಕ ವಿಷಯುಕ್ತ ಕೀಟನಾಶಕಗಳನ್ನು ಪಾಟೆಗೆ ಸುರಿದು ಚಪ್ಪರದಲ್ಲಿ ನೇತಾಡುವ ಹಾಗಲಕಾಯಿಯನ್ನು ಮುಳುಗಿಸಿ ತೆಗೆಯುವ ಕೃಷಿಕರಿರುತ್ತಾರೆ. ಮಾರಾಟದ ಉದ್ದೇಶದಿಂದ ಬೆಳೆಯುವವರು ಇಂತಹ ಮಾರಕ ಕೀಟನಾಶಕಗಳನ್ನು ಯಾವುದೇ ಲಂಗುಲಗಾಮುಗಳಿಲ್ಲದೆ ತರಕಾರಿ ಪ್ರಿಯರ ಉದರಕ್ಕೆ ಸೇರಿಸುತ್ತಿರುವುದು ದುರಂತ.  ಸಾವಯವ ಕೃಷಿಯ ಮಹತ್ವ ಇತ್ತೀಚೆಗೆ ಹೆಚ್ಚಿನ ತರಕಾರಿ ಕೃಷಿಕರಿಗೆ ಅರಿವಾಗುತ್ತಿರುವುದು ಸಮುದಾಯದ ಆರೋಗ್ಯದ ದೃಷ್ಟಿಯಲ್ಲಿ ಅತ್ಯಂತ ಮಹತ್ವದ್ದು. ಇದರ ಪರಿಣಾಮವಾಗಿ ಅನೇಕ ಕೃಷಿಕರು ರಾಸಾಯನಿಕ ಮುಕ್ತ ತರಕಾರಿ ಬೆಳೆಯುವತ್ತ ಮನಸ್ಸು ಮಾಡುತ್ತಿದ್ದಾರೆ.

 ಹಾಗಲಕಾಯಿಯನ್ನು ಹಣ್ಣು ನೊಣಗಳಿಂದ ರಕ್ಷಿಸಲು ಎರಡು ಉಪಾಯಗಳಿವೆ. ಮೊದಲನೆಯದ್ದು ಪ್ಲಾಸ್ಟಿಕ್ ಲಕೋಟೆಗಳ ಬಳಕೆ. ಸಾಮಾನ್ಯವಾಗಿ ಮನೆಗಳಿಗೆ ಜಿನಸು ತಂದ ಲಕೋಟೆಗಳಿರುತ್ತವೆ. ಅವುಗಳನ್ನು ಜೋಪಾನವಾಗಿ ತೆಗೆದಿರಿಸಿ ಹಾಗಲಕಾಯಿ ಬೆಳೆದಾಗ ಬಳಕೆ ಮಾಡಿದರಾಯಿತು. ಮಿಡಿ ಹೂವರಳಿ ಸಾಮಾನ್ಯವಾಗಿ ಮಧ್ಯಾಹ್ನದ ಒಳಗೆ ಪರಾಗಸ್ಪರ್ಶವಾಗಿ ಬಿಡುತ್ತದೆ. ಸಂಜೆಯ ಹೊತ್ತಿಗೆ ಹಾಗಲಮಿಡಿಯಿಂದ ಒಂದೆರಡು ಇಂಚು ಉದ್ದದ ಲಕೋಟೆಯನ್ನು ಆರಿಸಿಕೊಂಡು ಮಿಡಿಹಾಗಲಕಾಯಿಯನ್ನು ಲಕೋಟೆಯೊಳಗೆ ಹಾಕಿ ಮೆಲ್ಲಗೆ ನೂಲಿನಿಂದ ಕಟ್ಟಬೇಕು. ಕಟ್ಟುವಾಗ ನೂಲು ತೊಟ್ಟಿನ ಭಾಗಕ್ಕೆ ಬರುವಂತೆ ನೋಡಿಕೊಳ್ಳಬೇಕು. ಮಿಡಿ ಹಾಗಲಕ್ಕೆ ದೊಡ್ಡ ಲಕೋಟೆ ಬಳಕೆ ಬೇಡ. ಯಾಕೆಂದರೆ ಹಾಗಲಮಿಡಿಗೆ ಕಟ್ಟಿದ ಲಕೋಟೆ ಗಾಳಿ ಬರುವಾಗ ತಿರುಗುತ್ತಾ ಇರುತ್ತದೆ. ಮಿಡಿ ಹಾಗಲಕ್ಕೆ ದೊಡ್ಡ ಲಕೋಟೆ ಕಟ್ಟಿದರೆ ಭಾರ ಹೆಚ್ಚಾಗಿ ತೊಟ್ಟು ಕಳಚಿ ಬಿದ್ದುಬಿಡುತ್ತದೆ. ಹಾಗಲ ಮಿಡಿ ಬೆಳೆದಂತೆ ಲಕೋಟೆಗಳನ್ನು ಬದಲಿಸಿಕೊಂದರೆ ಸಾಕು. ಲಕೋಟೆ ಕಟ್ಟುವಾಗ ಅದರ ಅಡಿ ಭಾಗವನ್ನು ಒಂದಿಂಚು ಅಗಲಕ್ಕೆ ಕತ್ತರಿಸಿದ ನಂತರವೆ ಕಟ್ಟಬೇಕು. ಗಾಳಿಯಾಡಲು ಮತ್ತು ಒಳಗಿನ ತೇವಾಂಶ ಇಳಿದು ಹೋಗಲು ಇದು ಅನುಕೂಲ. ಯಾವುದೆ ರಾಸಾಯನಿಕ ಸಿಂಪಡಣೆ ಮಾಡದೆ ತಾಜಾ ಹಾಗಲಕಾಯಿ ಈ ರೀತಿ ಪ್ಲಾಸ್ಟಿಕ್ ಕಟ್ಟುವುದರಿಂದ ಲಭ್ಯವಾಗುತ್ತದೆ.

 ಇನ್ನೊಂದು ವಿಧಾನದಲ್ಲಿ ಹಣ್ಣುನೊಣಗಳನ್ನು ಸಾಯಿಸುವ ವ್ಯವಸ್ಥೆ. ಹಾಗಲ ಚಪ್ಪರ ಅಥವ ಬಳ್ಳಿಬೆಳೆದಲ್ಲಿ ಗೆರಟೆಗಳಲ್ಲಿ ತುಳಸಿ ಎಲೆಯನ್ನು ಜಜ್ಜಿ ರಸ ಹಿಂಡಿ ಇಡಬೇಕು. ಅದಕ್ಕೆ ಹತ್ತು ಹತ್ತು ಫ್ಯುರಡಾನ್ ಹರಳುಗಲನ್ನು ಉದುರಿಸಿ ಬಿಡಬೇಕು. ಹಣ್ಣುನೊಣಗಳು ಹಾಗಲಮಿಡಿಗಳ ಮೇಲೆ ಧಾಳಿಮಾಡಲು ಬಂದಾಗ ಅದಕ್ಕೆ ಇಷ್ಟವಾದ ತುಳಸಿ ರಸದ ಇರವು ತಿಳಿಯುತ್ತದೆ. ಗೆರತೆಯಲ್ಲಿರುವ ತುಳಸಿ ರಸ ಹೀರಲು ಸುರುಮಾಡಿದ ತಕ್ಷಣ ಹೊರಳಿ ಸಾಯುತ್ತದೆ. ಇಲ್ಲಿಯೂ ನೇರವಾಗಿ ತರಕಾರಿಗೆ ವಿಷಪ್ರಯೋಗ ಮಾಡದೆ ಜಾಗ್ರತೆವಹಿಸಲಾಗುತ್ತದೆ.

ಗೊಬ್ಬರ

ಜೈವಿಕ ಗೊಬ್ಬರಗಳಿಂದಲೇ ಹಾಗಲಕಾಯಿ ಕೃಷಿಯಲ್ಲಿ ಉತ್ತಮ ಫಸಲು ಪಡೆಯಬಹುದು. ಹಟ್ಟಿಗೊಬ್ಬರ, ಹರಳಿಂಡಿ, ನೆಲಗಡಲೆ ಹಿಂಡಿ, ಬೂದಿ, ಸುಡುಮಣ್ಣು, ಬಯೋಗ್ಯಾಸಿನ ಸ್ಲರಿ, ಹಟ್ಟಿತೊಳೆದ ನೀರು ಹೀಗೆ ಜೈವಿಕವಾಗಿ ಹಾಗಲಕಾಯಿಗೆ ಗೊಬ್ಬರಗಳು ಸಿಗುತ್ತವೆ. ಸಾಮಾನ್ಯವಾಗಿ ವಾರ ವಾರ ಗೊಬ್ಬರ ಕೊಡುತ್ತಿದ್ದರೆ ನಿರಂತರ ಫಸಲು ಕೈಸೇರುತ್ತದೆ.

Facebook ಕಾಮೆಂಟ್ಸ್

ಶಂ.ನಾ. ಖಂಡಿಗೆ: ಕನ್ನಡದಲ್ಲಿ ಎಂ.ಎ ಬಳಿಕ ಹೊಸದಿಗಂತ ಪತ್ರಿಕೆಯ ಸಾಪ್ತಾಹಿಕ ಪುರವಣಿಯ ಸಂಪಾದಕರಾಗಿ ಐದು ವರ್ಷ ಕಾರ್ಯನಿರ್ವಹಿಸಿದ ಬಳಿಕ ಮರಳಿ ಮಣ್ಣಿಗೆ ಎನ್ನುವಂತೆ ಪೂರ್ಣ ಪ್ರಮಾಣದಲ್ಲಿ ಕೃಷಿಯತ್ತ ಒಲವು. ಜೊತೆಗೇ ಹೊಸದಿಗಂತ ಪತ್ರಿಕೆಯಲ್ಲಿ ಹತ್ತು ವರ್ಷಗಳಿಂದ “ಕೃಷಿಯೊಸಗೆ” ಎಂಬ ಅಂಕಣವನ್ನು ಬರೆಯುತ್ತಿದ್ದಾರೆ. ಮಕ್ಕಳ ಕಥೆ ಕವನ – ಪುಸ್ತಕ ವಿಮರ್ಶೆ – ವ್ಯಕ್ತಿತ್ವ ವಿಕಸನ ಬರಹ ಹೀಗೆ ಬರಹದ ಒಲವು. ಪ್ರಸ್ತುತ, ಪ್ರತಿಷ್ಟಿತ ಕ್ಯಾಂಪ್ಕೋದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Related Post