X
    Categories: ಅಂಕಣ

ಮನೆ ಪರಿಸರದಲ್ಲಿ ಬಸಳೆ

8ಸಾಮಾನ್ಯವಾಗಿ ಹಳ್ಳಿಗಳಲ್ಲಿ ಮನೆಯ ಪರಿಸರದಲ್ಲಿ ಬಸಳೆ ಚಪ್ಪರ ಇಲ್ಲದ ಮನೆಗಳು ಬಹಳ ಕಡಿಮೆ. ಸುಲಭದಲ್ಲಿ ಅಡುಗೆ ಮನೆಗೆ ಒದಗುವ ಸಪ್ಪು ತರಕಾರಿಗಳಲ್ಲಿ ಬಸಳೆಯದ್ದು ದೊಡ್ಡ ಹೆಸರು. ಹಿಂದೆಲ್ಲ ಮಣ ನ ಮಡಿಕೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಬಸಳೆ ಚಪ್ಪರದ ಅಡಿಯಲ್ಲಿಯೆ ಮುಸುರೆ ತೊಳೆಯುತ್ತಿದ್ದರು. ಈಗಲೂ ಕೆಲವು ಕಡೆ ಈ ದೃಶ್ಯ ಕಂಡುಬರಬಹುದು. ಮಡಿಕೆಯಡಿಗೆ ಅಂಟಿದ ಮಸಿಯನ್ನು ತೊಳೆಯಲು ಬೂದಿಯನ್ನು ಉಪಯೋಗಿಸುವುದು ಕ್ರಮ. ಹೀಗೆ ಮಾಡಿದಾಗ ಬಸಳೆಯ ಬುಡಕ್ಕೆ ಏಕಕಾಲಕ್ಕೆ ಬೂದಿ ಮತ್ತು ಮಸಿ ಲಭ್ಯ. ಇದರಿಂದಾಗಿ ಬಸಳೆ ಸದಾ ಚಿಗುರು ತುದಿಗಳಿಂದ ಕೂಡಿರುತ್ತದೆ. ಹಾಗಾಗಿ ಉಪಯೋಗಕ್ಕೆ ಸದಾ ಸಿಗುತ್ತದೆ. ಆದರೆ ಈಗ ಅಡುಗೆ ಮಾಡುವಲ್ಲಿ ಆಧುನಿಕತೆ ಬಂದು ಇವೆಲ್ಲ ಸಾಧ್ಯವಾಗದ ಮಾತು. ಆದರೂ ಹೇಗಾದರೂ ಮಾಡಿ ಬಸಳೆಯನ್ನು ಬೆಳೆಯುವ ಉತ್ಸಾಹಿಗಳ ಸಂಖ್ಯೆ ಹೆಚ್ಚು. ಯಾಕೆಂದರೆ ಅದರ ಉಪಯೋಗ ಅಡುಗೆ ಮನೆಯೊಳಗೆ ಅಗಾಧ.

ಬೇಸಿಗೆಯಲ್ಲಿ ಕೃಷಿ

ಬಸಳೆಗೆ ಸೂಕ್ತ ಕಾಲ ಬೇಸಿಗೆ. ಮಳೆಗಾಲದಲ್ಲಿ ಬೆಳೆಯುತ್ತದಾದರೂ ಸಪ್ಪುಗಳು ಚೆನ್ನಾಗಿರುವುದಿಲ್ಲ. ಬಸವನ ಹುಳಗಳಂತವು ಎಲೆಯಡಿಯಲ್ಲಿರುತ್ತವೆ. ಆದರೆ ಮಾರುಕಟ್ಟೆಗೆ ಪೂರೈಕೆ ಮಾಡುವ ಕೆಲವು ತರಕಾರಿ ಕೃಷಿಕರು ಬೆಳೆಯುತ್ತಾರೆ. ಹೆಚ್ಚಿನ ಮನೆಗಳಲ್ಲಿ ಬೇಸಿಗೆಯ ಬೆಳೆಯಾಗಿಯೆ ಬಸಳೆ ಗುರುತಿಸಿಕೊಂಡಿದೆ. ಇನ್ನೇನು ಮಳೆಗಾಲ ಮುಗಿಯುತ್ತ ಬಂದಾಗ ಬಸಳೆ ನಡುವ ಪ್ರಕ್ರೀಯೆಗೆ ಚಾಲನೆ.

ನೆಡುವ ಕ್ರಮ

 ಬಸಳೆಯನ್ನು ಚಪ್ಪರಕ್ಕೂ ಹಬ್ಬಿಸಬಹುದು, ತೆಂಗಿನ ಗರಿಗಳನ್ನು ನೆಲಕ್ಕೆ ಹಾಸಿ ಅಥವ ಎರಡು ಸಣ್ಣ ಕಂಬ ನಟ್ಟು ಅರುವತ್ತು ಡಿಗ್ರಿಯ ಇಳಿತ ಬರುವಂತಹ ಚಪ್ಪರ ಹಾಕಿಯೂ ಬೆಳೆಸಬಹುದು. ತಗ್ಗಿನ ಚಪ್ಪರ ಹಾಕುವುದು ಹೆಚ್ಚು ಅನುಕೂಲ. ಎರಡಡಿ ಆಳ, ಎರಡೂವರೆ ಅಡಿ ಅಗಲವಿರುವ ಹೊಂಡ ತೆಗೆದು ಅದಕ್ಕೆ ಒಂದು ಅಡಿಯಷ್ಟು ಯಾವುದೇ ಸಾವಯವ ಗೊಬ್ಬರ ಅಥವ ಗೊಬ್ಬರದ ಹುಡಿಯನ್ನು ಮಣ ನೊಂದಿಗೆ ಬೆರೆಸಿ ತುಂಬಿ ಬಸಳೆ ನಟ್ಟರೆ ಬಸಳೆ ಚಿಗುರಿದ ಕೂಡಲೆ ಹುಲುಸಾಗಿ ಬೆಳೆಯುತ್ತದೆ. ಹಳೆಯ ಚಪ್ಪರದಿಂದ ಒಂದೂವರೆ ಮೀಟರ್ ಉದ್ದದ ತುದಿಗಳನ್ನು ತುಂಡರಿಸಿ ಸಾಮಾನ್ಯವಾಗಿ ನದು ಭಾಗದಲ್ಲಿ ಬಳ್ಳಿ ಬರುವಂತೆ ನಡಬೇಕು. ಎರಡು ಗಂಟುಗಳು ಮಣ ನಲ್ಲಿ ನಿಲ್ಲುವಂತೆ ತುಂಡರಿಸಿದ ಭಾಗದ ಎರಡು ಗಂಟುಗಳು ಮಣ ನೊಳಗೆ ಮಲಗಿಸಿ ಅದರ ಮೇಲೆ ಮಣ್ಣು ಹಾಕಬೇಕು. ನೇರವಾಗಿ ನಟ್ಟರೆ ತುಂಬ ಆಳಕ್ಕೆ ಎರಡು ಗಂಟುಗಳನ್ನು ಹುಗಿಯಬೇಕಾಗುತ್ತದೆ. ಮೇಲೆ ಉಳಿಯುವ ತುದಿಯನ್ನು ಒಂದು ಆಧಾರ ಕೋಲು ಹುಗಿದು ಅದಕ್ಕೆ ಕಟ್ಟುವುದು. ಬುಡಕ್ಕೆ ಸಪ್ಪುಕೊಟ್ಟ ನಂತರ ನೀರಾವರಿಯ ಕೆಲಸಗಳು. ಬಳ್ಳಿಯ ತುದಿಗಳು ಮಣ ಗೆ ಬೇರನ್ನು ಇಳಿಸಿ ಚಿಗುರಲು ಆರಂಭಿಸಿದ ನಂತರವೆ ಅದಕ್ಕೆ ಹಟ್ಟಿಗೊಬ್ಬರ, ಬೂದಿ, ಹರಳಿಂಡಿ, ನೆಲಗಡಲೆ ಹಿಂಡಿ ಮುಂತಾದ ಸಾವಯವ ಗೊಬ್ಬರಗಳನ್ನು ಕೊಡುವುದು ಅಗತ್ಯ. ಹರಳಿಂಡಿ, ನೆಲಗಡಲೆ ಹಿಂಡಿಗಳನ್ನು ನೇರವಾಗಿ ಬಸಳೆಯ ಬುಡಕ್ಕೆ ಕೊಡುವುದಲ್ಲ. ಅದನ್ನು ಮೂರು, ನಾಲ್ಕು ದಿವಸ ಸ್ಲರಿಯಲ್ಲಿ ಅಥವ ಸೆಗಣಿಯನ್ನು ಕದಡಿ ಅದರಲ್ಲಿ ನೆನೆಹಾಕಿ ನಂತರ ಉಪಯೋಗಿಸಿದರೆ ಲಾಭ ಅಧಿಕ. ಇದು ಬಸಳೆಗೆ ಮಾತ್ರವಲ್ಲ. ಎಲ್ಲ ತರದ ತರಕಾರಿ ಕೃಷಿಯಲ್ಲೂ ಇದನ್ನು ಅಳವಡಿಸಬಹುದು.

ಕೆಲವರು ಬಸಳೆಯನ್ನು ಹೆಚ್ಚು ಇಷ್ಟಪಡುತ್ತಾರೆ. ಅವರಿಗೆ ತುಂಬ ಸಣ್ಣ ಚಪ್ಪರದಲ್ಲಿ ಬೆಳೆದ ಬಸಳೆ ಸಾಕಾಗುವುದಿಲ್ಲ. ಅಂತವರು ಎರಡು ಚಪ್ಪರ ಮಾಡುವುದರ ಬದಲು ಒಂದೇ ಚಪ್ಪರವನ್ನು ಸ್ವಲ್ಪ ದೊಡ್ಡದಾಗಿ ಹಾಕಿಕೊಂಡರಾಯಿತು. ಕೆಲವು ಕಡೆ ದರೆ ಇದ್ದಲ್ಲಿ ಎರಡು ಕಂಬ ನಟ್ಟು ಧರೆಗೆ ಎರಡು ತೂತು ಕೊರೆದು ಚಪ್ಪರ ಹಾಕಿ ಬಸಳೆ ಬೆಳೆಯುತ್ತಾರೆ. ಎರಡು ಕಂಬ ಉಳಿತಾಯವಾಗುವುದು ಬಿಟ್ಟರೆ ಉಳಿದಂತೆ ಲಾಭ ಇಲ್ಲ. ಈ ರೀತಿ ಚಪ್ಪರ ಹಾಕಿದರೆ ಮಳೆ ಬರುವಾಗ ಧರೆಗೆ ಬಿದ್ದ ನೀರು ಬಸಳೆಯ ಎಲೆಯ ಮೇಲೆ ಮಣ್ಣು ಸಿಂಚನವಾಗಲು ಕಾರಣವಾಗುತ್ತದೆ. ಧರೆಯಿಂದ ಒಂದು ಮೀಟರ್ ಆದರೂ ದೂರ ಚಪ್ಪರ ಬರುವಂತೆ ನೋಡಿಕೊಳ್ಳಬೇಕು.

ಬಸಳೆಯ ಚಪ್ಪರ ಎತ್ತರಕ್ಕೆ ಬೇಡ. ಬಳ್ಳಿಯ ತುದಿಯನ್ನು ನೆಲದಲ್ಲಿ ನಿಂತು ಚಪ್ಪರದ ನಡು ಭಾಗದಿಂದಲೂ ತುಂಡರಿಸುವಷ್ಟು ತಗ್ಗಿನಲ್ಲಿರಬೇಕು. ಚಪ್ಪರ ಹಾಕುವಾಗ ಅತಿ ಗಿಡ್ಡವಾಗಿ ಕೇವಲ ಎರಡಡಿ ಉದ್ದದ ಕಂಬಗಳನ್ನು ನಟ್ಟು ಅದಕ್ಕೆ ಚಪ್ಪರ ಹಾಕುವ ಕ್ರಮ. ಹೀಗೆ ಚಪ್ಪರ ಹಾಕುವಾಗ ಹೊಂಡವನ್ನು ತಪ್ಪಿಸಿ ಹಾಕುವುದು. ಕೇವಲ ಮೂರಡಿ ಉದ್ದದ ಆಧಾರ ಕೋಲಿಗೆ ಬಳ್ಳಿಯನ್ನು ಹತ್ತಿಸಿ ಅಲ್ಲಿಂದ ತಗ್ಗಿನ ಚಪ್ಪರಕ್ಕೆ ಹಬ್ಬಿಸುವುದು. ಎರಡಡಿ ಎತ್ತರ ಇರುವ ಕಾರಣ ಮಳೆ ಬಂದರೂ ನೆಲದಿಂದ ಮಣ್ಣು ಬಸಳೆ ಎಲೆಗಳಿಗೆ ಸೇಚನವಾಗದು. ಬಸಳೆ ಬಳ್ಳಿಯ ತುದಿಯನ್ನು ಪದಾರ್ಥಕ್ಕೆ ತುಂಡರಿಸಲು ತಗ್ಗಿನ ಚಪ್ಪರ ಬಹಳ ಹಿತಕಾರಿ. ಇನ್ನೂ ಕೆಲವು ಕಡೆ ಕೇವಲ ತೆಂಗಿನ ಗರಿಗಳನ್ನು ಹಾಕಿ ಅದಕ್ಕೆ ಬಸಳೆ ಬಳ್ಳಿಗಳನ್ನು ಹಬ್ಬಿಸುತ್ತಾರೆ. ಗದ್ದೆಗಳಲ್ಲಿ ಬಸಳೆ ಬೆಳೆಯುವವರು ಈ ಕ್ರಮ ಅನುಸರಿಸುವುದು ಹೆಚ್ಚು.

ಗೊಬ್ಬರ

ಬಸಳೆಗೆ ನೆಟ್ಟ ಕೂಡಲೆ ಎಕ್ಕೆ ಸೊಪ್ಪು ಕೊಡುವುದು ಹಳ್ಳಿಗಳಲ್ಲಿ ಸಾಮಾನ್ಯ. ಈ ಸೊಪ್ಪು ಕೊಳೆತಾಗ ಬಸಳೆಗೆ ಉತ್ತಮ ಗೊಬ್ಬರವಾಗುತ್ತದೆ. ಇನ್ನು ಹಟ್ಟಿಗೊಬ್ಬರ, ಹರಳಿಂಡಿ, ನೆಲಗಡಲೆ ಹಿಂಡಿ, ಬೂದಿ ಧಾರಾಳ ಸಾಕು. ಒಂದು ಸಲ ಪದಾರ್ಥಕ್ಕೆ ಬಸಳೆ ಬಳ್ಳಿಗಳನ್ನು ಕೊಯ್ದ ನಂತರ ಯಾವುದಾದರೊಂದು ಗೊಬ್ಬರ ಕೊಡಬಹುದು. ಇದರಿಂದಾಗಿ ಮತ್ತೆ ಬೇಗನೆ ಬಳ್ಳಿ ಚಿಗುರಿ ಪದಾರ್ಥಕ್ಕೆ ಸಿಗುತ್ತನೇ ಇರುತ್ತದೆ. ಬಯೋಗ್ಯಾಸಿನ ತ್ಯಾಜ್ಯವಾದ ಸ್ಲರಿ, ಹಟ್ಟಿ ತೊಳೆದ ನೀರು ಬಸಳೆಗೂ ಒಂದಷ್ಟು ಕೊಡುತ್ತಿದ್ದರೆ ಬಸಳೆ ನಿರಂತರ ಚಿಗುರು ಬಳ್ಳಿಗಳನ್ನು ಹೊಂದುವಂತಾಗುತ್ತದೆ. ಸಾಧ್ಯವಾದರೆ ಅಡುಗೆ ಮನೆಯ ಮುಸುರೆ ತೊಳೆದ ನೀರನ್ನು ಬಸಳೆಯ ಬುಡಕ್ಕೆ ಹೋಗುವಂತೆ ಮಾಡಬಹುದು. ಇದರಿಂದಾಗಿ ನಿತ್ಯ ನೀರಾವರಿ ಸಮಸ್ಯೆಯೂ ತಪ್ಪುತ್ತದೆ.  

ಬಸಳೆಗೆ ಮುಖ್ಯವಾಗಿ ಬರುವ ಸಮಸ್ಯೆ ದಂಟು ಹುಳ. ಬುಡದಿಂದ ತೊಡಗಿ ಚಪ್ಪರದವರೆಗೆ ಅಲ್ಲಲ್ಲಿ ಕಪ್ಪುಚುಕ್ಕೆಗಳಂತೆ ಕಂಡುಬರುವುದು. ಈ ಭಾಗವನ್ನು ಬಗೆದು ನೋಡಿದಾಗ ಅದರ ಒಳಗೆ ಹುಳಗಳಿರುತ್ತವೆ. ಇದಕ್ಕೆ ಪರಿಹಾರ ಸುಲಭವಲ್ಲ. ಈ ಸಮಸ್ಯೆ ಜೋರದಾಗ ಬಳ್ಳಿ ಸೊರಗುತ್ತದೆ, ಸಾಯುತ್ತದೆ.  ಸಿಂಪಡಣೆ ಮಾಡುವುದಾದರೆ ಆ ತೂತಿರುವ ಜಾಗಕ್ಕೆ ಬೆಳ್ಳುಳ್ಳಿ ರಸ ಮಾಡಬಹುದು. ದಂಟು ಸಪ್ಪು ಪದಾರ್ಥಕ್ಕೆ ಬಳಕೆ ಮಾಡುವುದರಿಂದಾಗಿ ವಿಷಯುಕ್ತ ಕೀಟನಾಶಕ ಸಿಂಪಡಣೆ ಒಳ್ಳೆಯದಲ್ಲ.

Facebook ಕಾಮೆಂಟ್ಸ್

ಶಂ.ನಾ. ಖಂಡಿಗೆ: ಕನ್ನಡದಲ್ಲಿ ಎಂ.ಎ ಬಳಿಕ ಹೊಸದಿಗಂತ ಪತ್ರಿಕೆಯ ಸಾಪ್ತಾಹಿಕ ಪುರವಣಿಯ ಸಂಪಾದಕರಾಗಿ ಐದು ವರ್ಷ ಕಾರ್ಯನಿರ್ವಹಿಸಿದ ಬಳಿಕ ಮರಳಿ ಮಣ್ಣಿಗೆ ಎನ್ನುವಂತೆ ಪೂರ್ಣ ಪ್ರಮಾಣದಲ್ಲಿ ಕೃಷಿಯತ್ತ ಒಲವು. ಜೊತೆಗೇ ಹೊಸದಿಗಂತ ಪತ್ರಿಕೆಯಲ್ಲಿ ಹತ್ತು ವರ್ಷಗಳಿಂದ “ಕೃಷಿಯೊಸಗೆ” ಎಂಬ ಅಂಕಣವನ್ನು ಬರೆಯುತ್ತಿದ್ದಾರೆ. ಮಕ್ಕಳ ಕಥೆ ಕವನ – ಪುಸ್ತಕ ವಿಮರ್ಶೆ – ವ್ಯಕ್ತಿತ್ವ ವಿಕಸನ ಬರಹ ಹೀಗೆ ಬರಹದ ಒಲವು. ಪ್ರಸ್ತುತ, ಪ್ರತಿಷ್ಟಿತ ಕ್ಯಾಂಪ್ಕೋದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Related Post